ಲೇಖಕರು : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ.
ಸ್ವಾನುಭಾವದ ನೆಲೆಯ ನಾನೇನು ಬಲ್ಲೆನೈ
ನೀನೇ ಒಳವೊಕ್ಕು ಏನ ನುಡಿಸಿದೊಡನೆ
ನಾ ನುಡಿವೆ ಗುರುವೇ ಕೃಪೆಯಾಗು.||
ಶಿಲೆಯ ತೆಪ್ಪವ ನೇರಿ ಜಲವ ದಾಟುವೆನೆಂಬ
ಬಲು ಮೂಡತನವ ತೊಳಗಿಸುತ ನೀಎನ್ನ
ಸಲಹು ಶ್ರೀ ಗುರುವೇ ಕೃಪೆಯಾಗು.||
ಕನ್ನಡ ನಾಡಿಗೆ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಟ್ಟು ತಮ್ಮ ಸಾಹಿತ್ಯದಿಂದ ಶ್ರೀಮಂತಗೊಳಿಸಿದ್ದು 12 ನೇಯ ಶತಮಾನದ ಶರಣರು, ಮಾನವ ಕುಲವು ಸರಿಸಮಾನವಾಗಿ ಮೇಲು-ಕೀಳು, ಜಾತಿ, ಕುಲ, ವರ್ಣದಿಂದ ಬೇರ್ಪಡಿಸಿ ಬದುಕಲು ಪ್ರಯತ್ನವನ್ನು ಪಟ್ಟವರು, ಅವರಿಗೆ ಮುಂದಿನವರು ತಮ್ಮ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಶರಣನಾಗಿ ಮಹಾದೇವನೊಂದಿಗೆ ಇರಬೇಕು ಸರ್ವರು ಬಂದುತ್ವದಿಂದ ಇರಬೇಕೆಂಬ ಮಹಾದಾಸೆ, ಅದುವೇ ಶರಣ ಜೀವನ. ಶಿವಾನುಭವಿಗಳ ಜೀವನ ಹೇಗಿರಬೇಕೆಂದು ಬದುಕಿ ತೋರಿಸಿ ಕೊಟ್ಟವರಾಗಿದ್ದಾರೆ, ಅವರ ನೆರಳಿನಲ್ಲಿಯೇ 15 ನೇಯ ಶತಮಾನದಲ್ಲಿ ತೋಂಟದ ಶ್ರೀ ಸಿದ್ಧಲಿಂಗ ಶಿವಯೋಗಿಗಳು “ಷಟಸ್ಥಲ ಜ್ಞಾನಸಾರಾಮೃತ”ವನ್ನು ರಚಿಸಿ ತಮ್ಮ ಶಿಷ್ಯ ಸಂಪತ್ತನ್ನು ಸಂಪಾದಿಸಿ ದೇಶ ಸಂಚಾರ ಮಾಡಿ ಹಲವು ಕಡೆಗಳಲ್ಲಿ ಹಲವು ಜನರನ್ನು ಶಿವಾನುಭವಿಗಳನ್ನು ಹುಟ್ಟು ಹಾಕಿದರು, ನಂತರದಲ್ಲಿ ಶ್ರೀ ನಿಜಗುಣ ಶಿವಯೋಗಿಗಳು, ಶ್ರೀ ಸರ್ಪಭೂಷಣ ಶಿವಯೋಗಿಗಳು, ಶ್ರೀ ಮುಪ್ಪಿನ ಷಡಕ್ಷರಿಗಳು, ಶ್ರೀ ಬಾಲಲೀಲ ಮಹಾಂತ ಶಿವಯೋಗಿಗಳು, ಶ್ರೀ ಘನಮಠದಾರ್ಯರು ಕೇವಲ ಭಕ್ತಿಯ ಭಾವದಿಂದ ಹಾಡುಗಬ್ಬ ಪದಗಳನ್ನು ರಚಿಸಲಿಲ್ಲಾ, ಏನೋ ಬರೆಯಬೇಕು ಎಂದು ಬರೆದವುಗಲ್ಲಾ, ತತ್ವ, ಶಾಸ್ತ್ರ, ಆಚಾರ, ಸಿದ್ದಾಂತವನ್ನು ತಾವು ಸಂಪೂರ್ಣವಾಗಿ ಅಳವಡಿಸಿಕೊಂಡು ಇನ್ನಿತರರಿಗೆ ಅಧಿಕಾರ ವಾಣಿಯಿಂದ ಪ್ರತಿಪಾದಿಸಿದ್ದಾರೆ, ಅದೇ ಸಾಲಿನಲ್ಲಿ ಮೈಲಾರ ಬಸವಲಿಂಗ ಶರಣರು ಬರುವರು.
ಶಿವ ಭಕ್ತರಾದ ಬಸವಪ್ಪ ಒಬ್ಬ ವ್ಯಾಪಾರಿ ಶರಣನಾದ ಶ್ರೀ ಬಸವಲಿಂಗ ಶರಣರು ತಾವು ನಿಜಜೀವನದಲ್ಲಿ ನಡೆಸಿದ ಆಚರಣೆ, ಗುರುಗಳ ಮುಖಾಂತರ ತಿಳಿದುಕೊಂಡಿದ್ದಾ ವೀರಶೈವ ಸಿದ್ಧಾಂತ ತತ್ವವನ್ನು,
1) ಷಟಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ.
2) ಗುರು ಕರುಣ ತ್ರವಿಧಿ.
3) ಶಿವಾನುಭವ ದರ್ಪಣ.
4) ಲಿಂಗ ಪೂಜಾ ವಿಧಾನ ಎಂಬ ಗ್ರಂಥಗಳನ್ನು ಸ್ವತಃ ರಚನೆಯಾಗಿದ್ದು ಗುರುವಿನ ಕರುಣೆಯಿಂದ.
ಜನಸಾಮಾನ್ಯರ ನಡೆನುಡಿಯಲ್ಲಿ ವೀರಶೈವ ಸಿದ್ಧಾಂತ ತತ್ವವನ್ನು ಮೂಡಿಸಿಕೊಳ್ಳುವ ದಿವ್ಯ ದರ್ಶನ ನೀಡಿದವರು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳು. ಅಷ್ಟಾವರಣ, ಪಂಚಾಚಾರ, ಷಟಸ್ಥಲ, ಶಿವಾನುಭವ ಸಾರಾಮೃತವನ್ನು ಸ್ವತಃ ನಡೆಸುವುದರ ಮೂಲಕ ಉಪದೇಶವನ್ನು ನೀಡಿದವರಾಗಿದ್ದಾರೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ. ನೋಡುಗರ ಕಣ್ಣು ಸೆಳೆಯುವ ಸ್ಥಾನ, ತುಂಗಭದ್ರೆಯು ತುಂಬಿ ಹರಿಯುವ ಮೂಲಕ ಅಲ್ಲಿನ ಪ್ರಕೃತಿಯನ್ನು ಸುಮಧುರವಾಗಿಸಿ ತನ್ನಲ್ಲಿಯೇ ಗುರುಗಳನ್ನು ಕರೆಯಿಸಿಕೊಂಡಿದ್ದಾಳೆ, ಇಲ್ಲಿ ತಪೋನಿಷ್ಟರು ನಡೆದಾಡಿದ ಸ್ಥಾನ, ಶ್ರೀ ಚೆನ್ನವೀರ ಶಿವಯೋಗಿಗಳು ಶಿವಾನುಭವ ಕೇಂದ್ರವನ್ನು ಸ್ಥಾಪಿಸಿ ಹಲವು ಸಾಧಕರಿಗೆ ಮಾರ್ಗದರ್ಶನ ಉಪದೇಶವನ್ನು ಮಾಡಿದವರು, ಹೊಳಲಿನ ಲಿಂಗಪ್ಪ ಶರಣರು, ಬನ್ನಿಮಟ್ಟಿಯ ಚೆನ್ನಪ್ಪ ಶರಣರು, ಮೈಸೂರು ಪ್ರಾಂತ್ಯದ ಶಿವಬಸವ ಸ್ವಾಮಿಗಳು, ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು, ಇನ್ನೂ ಹಲವು ಸಾಧಕರು ಇಲ್ಲಿಯೇ ತಮ್ಮ ತಪವನ್ನು ಆಚರಿಸಿ ವಿದ್ಯೆಗೈದಿದ್ದಾರೆ. ಆ ದಿವ್ಯ ಜ್ಯೋತಿ ಪ್ರಕಾಶದಲ್ಲಿ ಬೆಳಗಿದವರು ಅಗ್ರಗಣ್ಯರಲ್ಲಿ ಒಬ್ಬರಾದವರು ಮೈಲಾರದ ಬಸವಲಿಂಗ ಶರಣರು.
ಬಸವಲಿಂಗ ಶರಣರ ಜೊತೆ ಮುಳಗುಂದದ ಬಾಲಲೀಲ ಮಹಾಂತ ಶಿವಯೋಗಿಗಳು ಕ್ರಿ. ಶ. 1810-1830 ಇದ್ದು ಸಹಪಾಠಿ ಆಗಿ ಅವರಿಂದಲೇ ಶಾಸ್ರ್ತಾಭ್ಯಾಸವನ್ನು ಮಾಡಿದ್ದರಿಂದ ಚಿಂತಕರು ಹೇಳುವ ಪ್ರಕಾರ ಅವರದ್ದು 18 ನೇಯ ಶತಮಾನದ ಕಡೆಯ ಭಾಗದಲ್ಲಿ ಕ್ರಿ. ಶ. 1780-1800 ಇದ್ದವರು ಎಂದು ತಿಳಿಯಬಹುದಾಗಿದೆ.
ಇವರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಡಿನ ಹೆಸರಾಂತ ಮೈಲಾರ ಗ್ರಾಮದವರು, ಮೈಲಾರ ಎಂದೊಡನೆ ನಮ್ಮ ನೆನಪಿಗೆ ಬರುವುದು ಮೈಲಾರಲಿಂಗೇಶ್ವರ, ಈ ದೇವಸ್ಥಾನಕ್ಕೆ ಹೋಗುವ ಎಡಗಡೆ, ದೇವಸ್ಥಾನದ ಹತ್ತಿರವೇ ಬಸವಪ್ಪನ (ಬಸವಲಿಂಗ ಶರಣರು) ಮನೆ ಇದೆ, ಇವರು ವ್ಯಾಪಾರ ಕಾಯಕವನ್ನು ಮಾಡುತ್ತಿದ್ದ ಮನೆತನದಲ್ಲಿ ಜನಿಸಿದವರು, ಇವರ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಕಂಡು ಬಂದಿಲ್ಲಾ, ತಾತ್ವಿಕವಾಗಿ ಅಧ್ಯಾತ್ಮದ ಹಾದಿಯಲ್ಲಿ ಬರುವ ಸಾಧಕನು ಗುರುಕರಣೆಯನ್ನು ಪಡೆದು ಮಾಂಸಮಯ ಶರೀರವನ್ನು ಮಂತ್ರಮಯ ಶರೀರವನ್ನು ಮಾಡಿಕೊಂಡು ಗುರುಸಂಬಂಧವನ್ನು ಇಟ್ಟುಕೊಳ್ಳುವುದರಿಂದ ತಂದೆ ತಾಯಿಯ ಹೆಸರನ್ನು ಮುನ್ನೆಲೆಗೆ ತೋಚದೇ ಗುರುವಿನ ಹೆಸರನ್ನು ತೋರುವುದೇ ರೂಡಿಯಲ್ಲಿದೆ, ಅದೇ ಮಾರ್ಗದಲ್ಲಿ ಬಸವಪ್ಪನು ತನ್ನ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಹೇಳದೇ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಅನುಗ್ರಹವನ್ನು ಪಡೆದು ಅವರ ಅಂಕಿತದಲ್ಲಿಯೇ ತನ್ನ ಕೃತಿಯನ್ನು ರಚಿಸಿದ್ದಾರೆ.
ಬಸವಪ್ಪನು ಯಾರಲ್ಲಿ ವಿದ್ಯೆಯನ್ನು ಕಲಿತಿದ್ದಾರೆ ಎಂಬುದು ತಿಳಿಯುವುದಿಲ್ಲ, ಅವರು ಕನ್ನಡದಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಹೊಂದಿದ್ದರು, ಅವರ ಹತ್ತಿರಕ್ಕೆ ಬರುವ ವ್ಯಾಪಾರಿಗೆ ಬೇಕಾದ ವಸ್ತುಗಳನ್ನು ಯೋಗ್ಯವಾದ ಬೆಲೆಗೆ ಮಾರಾಟಮಾಡುವವರಾಗಿದ್ದರು, ಅವರು ಸಮಯವನ್ನು ಕೊಟ್ಟರೇ ಅವರ ಕಷ್ಟ ಸುಖವನ್ನು ವಿಚಾರಿಸಿ ತಕ್ಕ ನೀತಿ ಧರ್ಮವನ್ನು ಹೇಳಿ ಧೈರ್ಯವನ್ನು ಹೇಳಿಕೊಡುವ ಜನಾನುರಾಗಿಯಾಗಿದ್ದರು, ಇವರು ಚಿಕ್ಕ ಅಂಗಡಿಯನ್ನು ಇಟ್ಟುಕೊಂಡಿದ್ದರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಕ್ಕಿಂತ ಅವರು ಮಾತಿನಲ್ಲಿ ಬರುವ ತತ್ವ, ನೀತಿ, ಧರ್ಮದ ತತ್ವವನ್ನು, ಧರ್ಮದ ಸಿದ್ದಾಂತವನ್ನು ಕೊಂಡುಕೊಂಡು ಹೋಗಲು ಬಂದವರೇ ಹೆಚ್ಚು.
ಬಸವಪ್ಪನವರು ಯಾರಿಗೂ ವ್ಯಾಪಾರದಲ್ಲಿ ಮೋಸ ವಂಚನೆಯನ್ನು ಮಾಡಿದವರಲ್ಲಾ, ಯಾವುದೇ ಆಸೆ ಆಕಾಂಕ್ಷೆಗಳು ಸಾಸಿವೆಯಷ್ಟು ಇದ್ದಿಲ್ಲಾ, ಅವರು ಎಲ್ಲವನ್ನೂ ಹೊಂದಿದ್ದರು ಗುರು ಲಿಂಗ ಜಂಗಮರ ದಾಸೋಹಿಯಾಗಿದ್ದಾಕೊಂಡು ಬಸವಪ್ಪನು ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಚಿನ್ಮಯ ದೀಕ್ಷೆಯನ್ನು ಪಡೆದು ಬಸವಲಿಂಗ ಶರಣರು ಎಂದಾಗುವರು, ಮನೆಯಿಂದ ಕಿಲೋಮೀಟರ್ ದೂರದಲ್ಲಿದ್ದರೂ ಮನಕ್ಕೆ ಹತ್ತಿರದಲ್ಲಿದ್ದ ಲಿಂಗನಾಯಕನಹಳ್ಳಿಗೆ ಬಂದು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಸಾಮೀಪ್ಯದಲ್ಲಿಯೇ ಹೆಚ್ಚು ಕಾಲ ಇರತೊಡಗಿದರು, ಅವರ ಸಾನಿಧ್ಯದಲ್ಲಿ ಹಲವಾರು ಸಾಧಕರು ಮೊದಲೇ ಇದ್ದವರು ಅವರ ಜೊತೆ ಶಾಸ್ತ್ರ ಚಿಂತನವನ್ನು ಮಾಡುತ್ತಿದ್ದರು, ಖಾವಿದಾರರಿಗೆ “ನೀವು ಖಾವಿ ಲಾಂಛನದಾರಿಗಳು ನೀವು ಎಷ್ಟು ವೀರಶೈವ ಶಾಸ್ರ್ತಾಭ್ಯಾಸವನ್ನು ಮಾಡಿದ್ದೀರಿ? ನೀವು ಎಷ್ಟು ವೇದಾಂತವನ್ನು ತಿಳಿದಿದ್ದೀರಿ? ಶಿವಾನುಭವವನ್ನು ಎಷ್ಟು ಓದಿದ್ದೀರಿ?” ಎಂದು ಕೇಳಿದಾಗ ಅವರುಗಳು ಉತ್ತಮವಾದ ಉತ್ತರವನ್ನು ಕೊಟ್ಟರೆ ಸರಿ ಇಲ್ಲ ಅಂದರೆ “ಏಕೆ ನೀವು ಜನರನ್ನು ಮೋಸಗೊಳಿಸುವಿರಿ? ಭಕ್ತರ ವಿತ್ತಾಪಹರಣವನ್ನು ಏಕೆ ಮಾಡುವಿರಿ? ಭಕ್ತರೇನೊ ಗುರುಗಳು ಎಂದು ಭಕ್ತಿಯಿಂದ ಬರುವರು ಅವರಿಗೆ ಏಕೆ ಮೋಸವನ್ನು ಮಾಡುವಿರಿ?” ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿ ಅವರು ಹಾದಿಯಲ್ಲಿ ತಪ್ಪಿದಾಗ ತಿದ್ದಿ ಅವರನ್ನು ಚೆನ್ನವೀರೇಶನ ಸೇವೆಯಲ್ಲಿರಿಸಿ ಅವರಿಗೆ ವೀರಶೈವ ಸಿದ್ದಾಂತವನ್ನು, ಶಿವಾನುಭವ, ಷಟಸ್ಥಲ ಸಿದ್ಧಾಂತವನ್ನು ತಿಳಿಸಿ ಇವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವಷ್ಟು ಪ್ರಬುದ್ಧರಾದಾಗ ಅವರುಗಳಿಗೆ ನಮಸ್ಕರಿಸುವರು, ಹೀಗೆ ಬಸವಲಿಂಗರು ಅಗ್ರಗಣ್ಯರಾಗಿ ಹೆಸರುವಾಸಿ ಆಗುವರು.
ಆದರಿಂದ ಆ ಪ್ರದೇಶವು ವೀರಶೈವರ ಪ್ರಮುಖ ಸ್ಥಾನದಲ್ಲಿ ಒಂದಾಗಿ ಅನೇಕ ಗ್ರಾಮಗಳಲ್ಲಿ ವೀರಶೈವತತ್ವವು ಅಚ್ಚಳಿಯದೆ ಉಳಿದಿದೆ.
ಒಮ್ಮೆ ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ತಮ್ಮ ಮಠಕ್ಕೆ ಯೋಗ್ಯ ಮರಿಯನ್ನು ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಶ್ರೀ ಮೈಲಾರದ ಬಸವಲಿಂಗ ಶರಣರು ಒಬ್ಬ ದೇವರಿಗೆ ವಿರೋಧ ಮಾಡುವರು ಈ ಮರಿದೇವರು ಮುಕ್ಕಾಗಿದ್ದಾರೆ ಇವರಿಗೆ ಸ್ವಾಮಿಯಾಗಲು ಅರ್ಹರಲ್ಲ ಎಂದು ಕ್ಯಾತೆಮಾಡುವರು, (ಒಮ್ಮೆ ಗುರುಗಳು ಹಾಗೂ ಶಿಷ್ಯರು ದೇಶ ಸಂಚಾರಕ್ಕೆ ಕೈಗೊಂಡಿದ್ದರು ಎಲ್ಲಿಯೋ ಇದ್ದ ನರಿಯು ಬಂದು ಒಬ್ಬ ಮರಿದೇವರ ಕಾಲಿಗೆ ಬಾಯಿ ಹಾಕಿರುತ್ತೆ ಆ ನೋವಿನಿಂದ ಆ ದೇವರು ಚೀರುವರು ಆಗ ಅಲ್ಲಿಯೇ ಇದ್ದ ಗುರುಗಳು “ಅದು ನಮ್ಮ ವಸ್ತು ಬಿಡು”ಎಂದ ಕೂಡಲೇ ಆ ನರಿ ಬಿಟ್ಟು ಹೋಗುತ್ತೆ ಅವರನ್ನೇ ಶ್ರೀ ಚೆನ್ನವೀರ ಶಿವಯೋಗಿಗಳು ಮಠಕ್ಕೆ ಉತ್ತರಾಧಿಕಾರಗಳಾಗಿ ನೇಮಿಸುತ್ತಿದ್ದರು). ಆಗ ಗುರುಗಳು ‘ಏನಪ್ಪಾ ಬಸಪ್ಪ ನೀನು ನಿಜವಾದ ತತ್ವವನ್ನು ಬಲ್ಲಿಲ್ಲವೇ ಶರಣರು ಹೇಳಿರುವ ಮಾತು ನೆನಪಿಲ್ಲವೇ‘ ಎಂದು –
ಶ್ರೀಗುರು ಕರುಣಿಸಿ, ಅಂಗದ ಮೇಲೆ ಲಿಂಗವ ಧರಿಸಿದ ಕಾರಣ, ಸರ್ವಾಂಗವು ಲಿಂಗವಾಯಿತ್ತು. ಅದೆಂತೆಂದಡೆ: ಅಗ್ನಿಯಿಂದ ತಪ್ತವಾದ ಲೋಹದ ಪುತ್ಥಳಿಯಂತೆ, ಒಳಗೂ ಹೊರಗೂ ಏಕವಾಗಿ ಲಿಂಗವೆ ಬೆಳಗುತಿರ್ದ ಕಾರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣ ಸರ್ವಾಂಗಲಿಂಗಿಯಾದನು.
ಸರ್ವಾಂಗ ಲಿಂಗಿಯಾದ ಇವರು ಅರ್ಹರಲ್ಲಾ ಎನ್ನುವೆ ಎಷ್ಟು ಸರಿ ಎಂದು ಕೋಪದಿಂದ “ನೀನು ಬಸಪ್ಪ ಅಲ್ಲಾ ಮುಶಪ್ಪ ಎಂದು ಬೈಯುತ್ತಾರೆ. ‘ಹರ ಮುನಿದರೆ ಗುರು ಕಾಯುವನು‘ ಎಂಬ ಉಕ್ತಿಯಂತೆ. ಇಲ್ಲಿ ಗುರುಗಳು ಕೋಪದಿಂದ ಬೈದರು ಕೂಡ ಅವರು ಗುರುತಾಯಿಯಾಗಿ ನಮ್ಮೆಲ್ಲರನ್ನೂ ಸಲಹುವರು, ಮಗನು ತಪ್ಪು ಮಾಡಿದಾಗ ತಾಯಿ ಅವನನ್ನು ಏನೆಲ್ಲಾ ಬೈದರು ಅದೇ ಮಗನು ಹೊರಗೆ ಹೋಗುವಾಗ ಅವನು ಎಡವಿ ಬಿದ್ದು ಅವನ ರಕ್ತ ಕಂಡರೆ ಸಾಕು ಎಂಥಹ ಕಠೋರ ತಾಯಿಯಾದರು ಅವನನ್ನು ಮುದ್ದು ಮಾಡಿ ಅವನ ನೋವು ತನ್ನ ನೋವು ಎಂದು ಪ್ರೀತಿಯನ್ನು ಹಂಚಿಕೊಳ್ಳುವಳು ಅದೇ ರೀತಿ ಇಲ್ಲಿ ಶಿಷ್ಯನನ್ನು ಬೈದರು ಅವನ ತಪ್ಪುಗಳನ್ನು ಮನ್ನಿಸುವವರು ಒಬ್ಬ ಗುರುಗಳು. ಶಿಷ್ಯನಿಂದ ಸಮಾಜದಲ್ಲಿನ ಭವಿಷ್ಯದಲ್ಲಿ ನಡೆಯುವ ಘಟನೆಗಳನ್ನು (ಲಾಭ-ನಷ್ಪ, ನೋವು-ನಲಿವು, ) ವಿಕ್ಷಿಸಿ ತಾನು ಅದರಲ್ಲಿ ಬಾಗಿಯಾಗುವವರು ನಿಜವಾದ ಗುರುಗಳು.
ಪುರಾಣ, ಇತಿಹಾಸದಲ್ಲಿ ಶಿಷ್ಯರುಗಳ ಉದ್ದಾರಕ್ಕೆ ಏನೆಲ್ಲಾ ತ್ಯಾಗವನ್ನು ಗುರುವಾದವನು ಮಾಡಿದ್ದಾನೆ ಎಂಬ ಉದಾಹರಣೆಗಳು ಬಹಳ, ಒಬ್ಬ ಬೇಟೆಯಾಡುವ ಹುಡುಗ ಎಂದು ಭೇಟಿಯಾಗದೇ ಇರುವ ಗುರುವನ್ನು ದೂರದಿಂದಲೇ ಅವನು ತನ್ನ ಶಿಷ್ಯರಿಗೆ ವಿದ್ಯೆಯನ್ನು ಕಲಿಸುವುದನ್ನು ನೋಡಿ ನಾನು ಇದೇ ರೀತಿ ಬಿಲ್ವಿದ್ಯೆಯನ್ನು ಇನ್ನಷ್ಟು ಕಲಿಯಬೇಕೆಂದುಕೊಂಡಿದ್ದನು ಏಕಲವ್ಯ, ಅವನು ದ್ರೋಣಾಚಾರ್ಯರನ್ನೇ ಗುರುಗಳನ್ನಾಗಿ ಸ್ವೀಕಾರ ಮಾಡಿ ಅವರ ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ ತಾನು ಗುರುವಿನ ಮುಂದೆ ವಿದ್ಯೆಯನ್ನು ಕಲಿಯಬೇಕು ಎಂದು ಅದರ ಮೂಲಕವೇ ತಾನು ಬಿಲ್ವಿದ್ಯೆಯನ್ನು, ಶಬ್ದವೇಧಿ ವಿದ್ಯೆಯನ್ನು ಕಲಿತವನು ಏಕಲವ್ಯ, ಅವನು ಬಿಟ್ಟ ಬಿಲ್ಲು ನೀರು ಕುಡಿಯುವ ಶ್ವಾನಕ್ಕೆ ಬೀಳುತ್ತೆ ಅದನ್ನು ನೋಡಿದ ದ್ರೋಣಾಚಾರ್ಯರ ಶಿಷ್ಯರು (ರಾಜಕುಮಾರರು) ಗುರುಗಳ ಬಳಿ ಬಂದು ನಡೆದ ಘಟನೆ ತಿಳಿಸಿ ಬಿಲ್ಲನ್ನು ಬಿಟ್ಟವನು ಯಾರು ಎಂದು ಕಂಡುಹಿಡಿದು, ಅವರೆಲ್ಲರೂ ‘ಯಾರು ನೀನು? ನೀನು ಈ ವಿದ್ಯೆಯನ್ನು ಯಾರಿಂದ ಕಲಿತೇ? ನಿನ್ನ ವಿದ್ಯಾ ಗುರುಗಳು ಯಾರು? ‘ ಎಂದು ಕೇಳಿದಾಗ, ಏಕಲವ್ಯನು ತಾನು ದ್ರೋಣಾಚಾರ್ಯರಿಂದ ಈ ವಿದ್ಯೆಯನ್ನು ಕಲಿತೆ, ದ್ರೋಣಾಚಾರ್ಯರೇ ನನ್ನ ಗುರುಗಳು ಎಂದು ವಾದಮಾಡುವನು, ತಾನು ಯಾವ ವಿದ್ಯೆಯನ್ನು ಇವನಿಗೆ ಹೇಳಿಲ್ಲಾ,ಇವನಾರೂ ಎಂಬುದೇ ಗೊತ್ತಿರಲಿಲ್ಲ, ಆದರೂ ನನ್ನ ಹೆಸರನ್ನು ಹೇಳುತ್ತಿದ್ದಾನೆ, ಎಂದು ವಿಚಾರಿಸಿ, ಭವಿಷ್ಯದ ದೃಷ್ಟಿಯಿಂದ ಧರ್ಮದ ಉಳಿವಿಗಾಗಿ, ದ್ರೋಣಾಚಾರ್ಯರು ತನ್ನ ಉತ್ತಮ ಶಿಷ್ಯನಾದ ಅರ್ಜುನನಿಗೆ ಏಕಲವ್ಯನಿಂದ ಭವಿಷ್ಯದಲ್ಲಿ ಕಾಣುವ ತೊಂದರೆ ಆಗಬಾರದು ಎಂದು. ಅವನಿಂದ ಗುರುಕಾಣಿಕೆಯನ್ನು ಅವನ ಬಲಗೈಯ ಹೆಬ್ಬೆರಳು ಕೇಳುವರು, ಇಲ್ಲಿ ದ್ರೋಣಾಚಾರ್ಯರು ಏಕಲವ್ಯನಿಗೆ ಕೇಳಿದ ಕಾಣಿಕೆ ಭೇಧ ಭಾವದ,ಸ್ವಾರ್ಥ ಉದ್ದೇಶಗಳ ಸಂಕೇತವಾದರೆ, ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ಬಸವಲಿಂಗರ ಮೇಲಿನ ಸಿಟ್ಟು ಗುರುತಾಯಿಯಂತೆ, ಅವನಿಂದ ಧರ್ಮಕ್ಕೆ ಲಾಭದಿಂದಲೇ ಶಿಕ್ಷಕೊಟ್ಟಿದ್ದು ಅದರಿಂದಲೇ ಬಸವಲಿಂಗ ಶರಣರು ಗುರುಕರುಣ ತ್ರಿವಿಧಿಯನ್ನು ರಚಿಸಿದ್ದು, ನಮ್ಮಿಂದ ಏನಾದರೂ ಕೆಲಸವಾಗಬೇಕಾದರೆ ಅದಕ್ಕೆ ಕಾರ್ಯ,ಕಾರಣ, ಸದ್ಭಾವ ಇದ್ದೆ ಇರುತ್ತದೆ, ಬಸವಲಿಂಗರ ಕೃತಿಗಳು ಸದ್ಭಾವದಿಂದಲೇ ರಚನೆಯಾದದ್ದು.
ಗುರುಗಳ ಆಜ್ಞೆಯಂತೆ ದಿನಗಳೆದಂತೆ ದಿನಗಳೆದಂತೆ ಬಸವಲಿಂಗ ಮುಖವು ಮುಶ್ಯದ ಹಾಗೆ (ಆ ಭಾಗದಲ್ಲಿ ಕಪ್ಪು ಬಣ್ಣದ ಮುಂಭಾಗಕ್ಕೆ ಮುಶ್ಯ ಎಂದು ಕರೆಯುವರು) ಕಪ್ಪು ಮುಖದ ಮಂಗನ ಹಾಗೆ ಬದಲಾಗುತ್ತೆ ಹೋಗುತ್ತೆ ಅದರ ತಪ್ಪಿಗಾಗಿ ವೀರಶೈವ ಧರ್ಮದ ಸಂಪೂರ್ಣ ತತ್ವವನ್ನು ಹೇಳುತ್ತಾ ಶಿಕ್ಷೆಯ ನಿವಾರಣೆಗೆ, ಗುರುವಿನ ಕರುಣೆಯನ್ನು ಪಡೆಯುವ ಸಲುವಾಗಿ ರಚಿಸಿದ್ದೆ – ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ). ಬಸವಲಿಂಗ ಶರಣರು ತಮ್ಮ ಅಮೋಘವಾದ ಜ್ಞಾನಬಂಡಾರದಿಂದ, ವಿದ್ವತ್ತು, ತೌಲನಿಕ, ಅನುಭವ ಸಂಪತ್ತಿನಿಂದ ಜ್ಞಾನದ ಹನಿಯನ್ನು ಉದಯಿಸಿ, ಏಕ ಕಾಲಕ್ಕೆ 333 ತ್ರಿಪದಿಯನ್ನು ರಚಿಸಿದರು. ಇದರಲ್ಲಿ ಸಮಗ್ರ ವೀರಶೈವ ಲಿಂಗಾಯತ ದಾರ್ಶನಿಕ ಸಿದ್ಧಾಂತವು ಒಳಗೊಂಡಿದೆ, ಅಷ್ಟಾವರಣ ಪಂಚಾಚಾರ ಷಟಸ್ಥಲ ಪ್ರಾಮುಖ್ಯತೆ ಇದರಲ್ಲಿ ಅಡಕವಾಗಿದೆ, ಒಂದಕ್ಕೊಂದು ಆಚರಣೆಗೆ ಹೇಗೆ ಸಮನ್ವಯಗೊಳ್ಳುತ್ತವೆ ಎಂಬುದನ್ನು ಈ ಎರಡು ಸಾಲಿನಲ್ಲಿಯೇ ಬಿತ್ತಿದ್ದಾರೆ, ಈ ತ್ರಿಪದಿಯಲ್ಲಿ ಪ್ರಯೋಗಿಸಲ್ಪಟ್ಟಾ ಯಾವ ಶಬ್ದವೂ ಅನಾವಶ್ಯಕವಾಗಿ ಪ್ರಯೋಗಿಸಿಲ್ಲಾ ಎಲ್ಲವೂ ಅರ್ಥಪೂರ್ಣವಾಗಿ ತನ್ನ ಸಿದ್ಧಾಂತವನ್ನು ತಿಳಿಸುತ್ತವೆ. ಆಲದ ಮರದ ಬೀಜ ಬಹು ಚಿಕ್ಕದಾಗಿದ್ದರೂ ಅದರಿಂದಲೇ ಹೆಮ್ಮರವಾಗಿ ಬೆಳೆಯುವ ಹಾಗೆ ಈ ಚಿಕ್ಕ ತ್ರಿವಿಧಿಯನ್ನು ಅಖಂಡ ಸಿದ್ಧಾಂತವೇ ಅಡಕವಾಗಿದೆ.
ಗುರು ಕರುಣ ತ್ರಿವಿಧಿಯಲ್ಲಿ ಮೂರು ಮೂರು ಸಾಲಿನ 333 ತ್ರಿಪದಿಯ ಕೊನೆಯಲ್ಲಿ ‘ಶ್ರೀ ಗುರುವೇ ಕೃಪೆಯಾಗು‘, ಎಂದು ಮುಕ್ತಾಯಗೊಳ್ಳುವುದರಿಂದ ಇದು ಕೇವಲ ಶ್ರೀಗುರು ಪ್ರಾರ್ಥನಾ ತ್ರಿಪಧಿಯಂದು ತಿಳಿಯುವರು ಅದರಲ್ಲಿ ವೀರಶೈವ ತತ್ವಸಿದ್ದಾಂತವನ್ನೊಳಗೊಂಡಿದೆ, ಮೇಲು ನೋಟಕ್ಕೆ ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ) ಅಷ್ಟಾವರಣ ಪ್ರತಿಪಾದಿಸುವ ಕೃತಿ ಎಂದು ಕಂಡರು ಒಳಹೊಕ್ಕು ನೋಡಿದಾಗ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ಆಚರಣೆಗೆ ಪೂರಕವಾಗಿ ಸಮನ್ವಯಗೊಂಡಿರುವ ಮಾರ್ಗ, ಅಂಗ, ಪ್ರಾಣ, ಆತ್ಮಗಳಾದ ಅಷ್ಟಾವರಣ ಪಂಚಾಚಾರ ಷಟಸ್ಥಲಗಳು ಬಿಟ್ಟಿರಲಾರದಷ್ಟು ಜೀವರಸ ಒಂದೇ ಅದೇ ಲಿಂಗಾಂಗ ಸಾಮರಸ್ಯ, ವೀರಶೈವರ ಕೊನೆಯಗುರಿಯೇ ಲಿಂಗಾಂಗ ಸಾಮರಸ್ಯವನ್ನು ಪಡೆಯುವುದು, ಅಂಗನು ಲಿಂಗದಲ್ಲಿ ಬೆರೆತು ಲಿಂಗಾಂಗ ಸಾಮರಸ್ಯ ಪಡೆಯುವನು, ಇದೆ ಕೊನೆಯ ಅನುಭವ ಅಥವಾ ಈ ಅನುಭವವೇ ಕೊನೆಯದು, ಒಮ್ಮೆ ಉಂಟಾದ ಪರಶಿವನ ಅನುಭವವು ಕೊನೆಯ ತನಕ ಇಟ್ಟುಕೊಂಡು ಜೀವಿಸುವವನೇ ಶಿವಾನುಭವಿ ಎನ್ನಲಾಗುತ್ತದೆ, ವೀರಶೈವನ ಚರಮಗುರಿಯಾದ ಶಿವಾನುಭಾವ ಹಾಗೂ ಲಿಂಗಾಂಗ ಸಾಮರಸ್ಯವನ್ನು ಪಡೆಯಲು ಅಷ್ಟಾವರಣ ಪಂಚಾಚಾರದೊಂದಿಗೆ ಷಟಸ್ಥಲಾಚರಣೆಯೇ ಸರಿಯಾದ ಮಾರ್ಗವೆಂದು ಬಸವಲಿಂಗರ (ವೀರಶೈವರ) ನಂಬಿಗೆ ಇದನ್ನೇ ಬಸವಲಿಂಗ ಶರಣರು ತಮ್ಮ ಕೃತಿಗಳಲ್ಲಿ ಬಹಳ ವಿವರಗಳನ್ನು ಕೊಟ್ಟು ವಿಸ್ತಾರವಾಗಿ ವಿಧವಿಧವಾಗಿ ಪ್ರತಿಪಾಸಿದ್ದಾರೆ. ಇದನ್ನೇ ತ್ರಿವಿಧಿಗಳು ಒಳಗೊಂಡಿರಬೇಕು ಒಂದನ್ನು ಬಿಟ್ಟು ಇನ್ನೊಂದು ಇದ್ದರೆ ಅದು ಚರಮಗುರಿಗೆ ಹೊರಗಾಗುತ್ತೇ, ಮೂರು ಕೂಡಿಯೇ ನಡೆಯಬೇಕು, ಯಾವಾಗಲೂ ಕೂಡಿಯೇ ಇರಬೇಕು ಅದರಲ್ಲಿ ದ್ವೈತದೃಷ್ಟಿಇರಬಾರದು ಶಿವಾದ್ವೈತದೃಷ್ಟಿರಬೇಕು, ಖಂಡದೃಷ್ಟಿಅಲ್ಲಾ ಅಖಂಡ ದೃಷ್ಟಿ, ಪರಿಪೂರ್ಣ ದೃಷ್ಟಿ. ಈ ಶಿವಾದ್ವೈತ ದೃಷ್ಟಿಗಳು ವೀರಶೈವ ಸಿದ್ಧಾಂತ ಸಂಸ್ಕೃತಿಯ ಪ್ರಧಾನಲಕ್ಷಣವೆಂದು ಅರಿತು ಶ್ರೀ ಮೈಲಾರ ಬಸವಲಿಂಗ ಶರಣರು ಅಷ್ಟಾವರಣಗಳಲ್ಲಿ ಪ್ರಥಮದಲ್ಲಿ ಬರುವ ಗುರುವನ್ನು ‘ಶ್ರೀ ಗುರುವೇ ಕೃಪೆಯಾಗು‘ , ‘ಶ್ರೀ ಗುರುವೇ ಕೃಪೆಯಾಗು‘ ಎಂದು ಪ್ರಾರ್ಥಿಸುತ್ತಾ, ಷಡಚಕ್ರಗಳ ವಿವರಣೆ, ಎಲ್ಲಾ ಯೋಗಗಳಲ್ಲಿ ಶಿವಯೋಗವೇ ಮಿಗಿಲು, ಅಷ್ಟಾವರಣಗಳಾದ ಗುರು, ಲಿಂಗ, ಜಂಗಮರ ಲಕ್ಷಣವನ್ನು, ಮಹಿಮೆಯನ್ನು, ವಿಭೂತಿ ರುದ್ರಾಕ್ಷಿಗಳನ್ನು ಯಾವ ರೀತಿ ಧರಿಸಬೇಕು, ಎಲ್ಲೆಲ್ಲಿ ಧರಿಸಬೇಕು, ಮಂತ್ರದ ವಿಶೇಷತೆ ಅದರಲ್ಲಿ ಯಾವ ಮಂತ್ರ ವೀರಶೈವರು ಜಪಿಸಬೇಕು, ಹೇಗೆ ಇರಬೇಕು ಎಂಬುದನ್ನು, ಪಾದೋದಕ, ಪ್ರಸಾದಗಳಲ್ಲಿನ ವಿಧಗಳು, ಅದರ ಮಹತ್ವವನ್ನು, ಅಣಿಮಾಧಿಸಿದ್ದಿಗಳ ವಿಶೇಷವಾಗಿ ವಿವರಣೆಯನ್ನು ನೀಡುತ್ತಾ ವೀರಶೈವ ಸಿದ್ದಾಂತವನ್ನೆ ಅತೀ ಕಡಿಮೆ ಅಕ್ಷರಗಳನ್ನು ವಿವರಿಸಿದ್ದಾರೆ,
ನಿರಾಭಾರಿ ಗುರುವನ್ನು ಸ್ತುತಿಗೈದು ಸಾಬಾರಿ ಗುರುವಿನ ಸ್ವರೂಪ, ಮಹತ್ವ, ಅವನ ಅವಶ್ಯಕತೆ ಏನಿದೆ ಎಂದು ತಿಳಿಸಿದ್ದಾರೆ, ಗುರು ಕೃಪೆಯು ಆಗಬೇಕಾದರೆ ಗುರು ದೀಕ್ಷೆ ಪಡೆದು ಲೌಕಿಕ ತಂದೆ ತಾಯಿಯವರಾದ, ಬಂದು ಬಳಗವನ್ನು ತ್ಯಜಿಸಿ ಎಲ್ಲವನು ಗುರುವಿನಲ್ಲಿಯೇ ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ, ಸದ್ಗುರುವೇ ಸರ್ವಸ್ವ ಎಂದು ಅವನನ್ನೇ ಆರಾದಿಸಿದಾಗ ಅವನು ಕೃಪೆಯು ಆಗುತ್ತದೆ ಎಂದು ತಿಳಿಸಿದ್ದಾರೆ. ಶಿಷ್ಯನ ಲಕ್ಷಣ ಹೇಗೆ ಗುರುವಿನಲ್ಲಿ ವರ್ತಿಸಬೇಕು, ಗುರುವಾದವನ ಲಕ್ಷಣ ಅವನ ಸ್ವರೂಪ ಗುರು ಶಿಷ್ಯರ ಸಂಬಂಧವನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ, ಈ ಮಾನವ ಜೀವಿಯೂ ಹುಟ್ಟಿ ಎಡರು ಕಂಟಕಗಳಿಂದ ಸುಖಾಸುಮ್ಮನೆ ವ್ಯರ್ಥವಾಗಿ ಹೋಗುವುದನ್ನು, ಆಸೆಯಿಂದ ಮಾಯೆ ಬಂದು ಮಾಯೆಯ ಉಪಟಳಕ್ಕೆ ಈ ಶರೀರ ಹೋಗುವುದನ್ನು, ಪಂಚಭೂತಗಳ ಭಯವನ್ನು ಪಂಚಿಕರಣದಿಂದಲೇ ಶರೀರ ಆದದ್ದು, ಪಂಚಭೂತಮಯವಾದ ಶರೀರದ ಇಂದ್ರಿಯಗಳನ್ನು, ದೇಹವಿಕಾರದ ಅರಿವನ್ನು ಮಾರ್ಮಿಕವಾಗಿ ನುಡಿದಿದ್ದಾರೆ, ಅಷ್ಟಮಧಗಳಿಂದ ಸಪ್ತವ್ಯಸನಗಳನ್ನು ಅನುಭವಿಸುವುದು ಗಾಳಿಗೆ ಇಕ್ಕಿದ ಸೋಡರು, ಜ್ಞಾನೇಂದ್ರಿಯಗಳ ಪರಿಚಯವನ್ನು ಮಾಡುವಾಗ ಕೆಲವೊಂದು ತೀರ್ಥಕ್ಷೇತ್ರ ದರ್ಶನವನ್ನು ಮಾಡಿಸುವುದರ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು, ಅಂತಃಕರಣ ಚತುಷ್ಟಯ, ಗುಣತ್ರಯವನ್ನು ನೀಡಿದ್ದಾರೆ, ಸಂಸಾರ ಬಂಧನದಿಂದ ಮುಕ್ತನಾಗಲು ಗುರುವಿನಲ್ಲಿ ಪ್ರಾರ್ಥಿಸಿದ್ದಾರೆ, ಸಂಸಾರಹೇಯ ಸ್ಥಲದ ತ್ರಿಪದಿಯನ್ನು, ವೀರಶೈವ ಸಿದ್ಧಾಂತ ತಿಳಿಸುವ ತ್ರಿಪದಿಗಳನ್ನು ಅದೆಷ್ಟೋ ಒಳಹೊಕ್ಕು ನೋಡಿದರು ಸಮುದ್ರದ ಆಳದಂತೆ ಕಾಣುತ್ತದೆ,
ಶ್ರೀ ಗುರುವೇ ಸತ್ಕ್ರಿಯೆಯಾಗರವೇ ಸುಜ್ಞಾನ
ಸಾಗರವೇ ಎನ್ನ ಮತಿಗೆ ಮಂಗಳವನಿತ್ತು
ರಾಗದಿಂ ಬೇಗ ಕೃಪೆಯಾಗು,
ಎಂದು ಗುರುಕೃಪೆಯನ್ನು ಬೇಡುತ್ತಾ .
ನೀನೊಲಿದಡೆ ಕೊರಡು ಕೊನರುವುದಯ್ಯಾ, ನೀನೊಲಿದಡೆ ಬರಡು ಹಯನಹುದಯ್ಯಾ, ನೀನೊಲಿದಡೆ ವಿಷವೆಲ್ಲ ಅಮತವಹುದಯ್ಯಾ, ನೀನೊಲಿದಡೆ ಸಕಲ ಪಡಿಪದಾರ್ಥ ಇದಿರಲ್ಲಿರ್ಪುವು ಕೂಡಲಸಂಗಮದೇವಾ.
ದೇವನೊಲಿದರೆ ಕಣ್ಣು ಇರಲಾರದವನಿಗೆ ಕಣ್ಣು ಬರುವಹಾಗೆ, ಕಿವಿಕೇಳಲಾರದವನಿಗೆ ಕಿವಿ ಕೇಳುವಹಾಗೆ, ವಿಷವೆಲ್ಲಾ ಅಮೃತ ಆಗುವಹಾಗೆ, ಆಸಾಧ್ಯವು ಸಾಧ್ಯವಾಗುವವು ಎನ್ನುವ ಬಸವವಾಣಿಯ ತಾತ್ಪರ್ಯವನ್ನೆ ಬಸವಲಿಂಗ ಶರಣರು ಚಿತ್ರಿಸಿದ್ದಾರೆ –
ಕೊರಡು ಕೊನರುವುದು ಬಲುಬರಡು ಹಯನಾಗುವುದು
ಕುರುಡಂಗೆ ಕಣ್ಣು ಬಹುದು ನಿನ್ನೊಲುಮೆ
ಎಂದರಿದೆನೈ ಗುರುವೇ ಕೃಪೆಯಾಗು.
ಮಾನಸವು ವಚನ ಸಂಧಾನವಾಗಿರ್ಪ ಮ
ಹಾನುಭಾವದ ಸುಜ್ಞಾನ ಮಂತ್ರದ ನಿಜವೇ
ನೀನೆಂದ ಗುರುವೇ ಕೃಪೆಯಾಗು,
ಗುರು ಲಿಂಗ ಚರತೀರ್ಥ ಚಿರಶೇಷ ಭಸಿತಾಕ್ಷಿ
ವರಮಣಿಮಂತ್ರಾಷ್ಟವರಣ ನಿನ್ನಂಗವೆಂ
ದೊರದ ಶ್ರೀ ಗುರುವೇ ಕೃಪೆಯಾಗು
ಎನ್ನುತ್ತಾ
ಎಲ್ಲವನ್ನು ಒಳಗೊಂಡಿರುವ ಮದ್ಗುರುವೆ,
ನೀನು ಅಷ್ಟಾವರಣವೇ ಅಂಗವೆಂದು
ಹೇಳಿಕೊಟ್ಟ ಗುರುವೇ ಕೃಪೆಯಾಗು.
ಬಸವ ಬಾರೆಂದನೆಗೆ ಅಸಮಲಿಂಗವೆ ನೀನೆಂ
ದುಸುರಿದಬಳಿಕ ಬಸವಲಿಂಗನೆ ಎಂದು
ಪೆಸರಿಟ್ಟಾ ಗುರುವೇ ಕೃಪೆಯಾಗು
ಬಸವಪ್ಪ ಇದ್ದವಾ ನಾನು ನಿನ್ನ ಕೃಪಾದೃಷ್ಠಿಯಿಂದ ನೀನು ನನ್ನನ್ನು ಬಸವಲಿಂಗವೆಂದು ಹೆಸರನ್ನು ಇಟ್ಟಾ ಗುರುವೇ ಕೃಪೆಮಾಡು ಎಂದು ಬಿನ್ನವಿಸಿಕೊಂಡು,
ವೀರಶೈವರ ಪಂಚಾಚಾರ ಷಟಸ್ಥಲ ಮಾರ್ಗೋ
ದ್ದಾರ ನಿಜಸುಖದ ಸಾರ ನಡೆ ನುಡಿ ಚೆನ್ನ
ವೀರ ಮದ್ಗುರುವೆ ಕೃಪೆಯಾಗು.
ಎನ್ನುತ್ತಾ ಸಮಾಪ್ತಿಮಾಡುವರು.
ಬಾಹ್ಯಾರಚನೆಯ ಅಷ್ಟಾವರಣಗಿಂತ ಅಂತರಂಗದ ಅಷ್ಟಾವರಣವನ್ನು ಮೈಗೂಡಿಸಿಕೊಳ್ಳುವವನಿಗೆ ಶೂನ್ಯಸಂಪಾದನೆ ಆಗುವುದು ಎಂದು ಸಮರೋಪಗೊಳಿಸುವರು, ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಕೃಪೆಯಿಂದ ಶರಣನಾಗಿ ಗುರುಗಳ ಘನವ್ಯಕ್ತಿತ್ವವನ್ನು ಚಿತ್ರಿಸಿ ಮಂಗಲಗೊಳಿಸುವುದರ ಮೂಲಕ ಗುರು ಕರುಣ ತ್ರಿವಿಧಿಯಲ್ಲಿ ಕ್ರಮಬದ್ಧವಾದ ವೀರಶೈವ ಸಿದ್ಧಾಂತ ತತ್ವವನ್ನು ಪ್ರತಿಪಾದಿಸಿದ್ದಾರೆ, ಶೂನ್ಯ ಸಂಪಾದನೆಯನ್ನು ಮಾಡಿಕೊಳ್ಳುವ ಸಾಧಕರಿಗೆ ಸ್ವಾನುಭಾವದಿಂದ ನಡೆಯುವವನಿಗೆ ಅತ್ಯುತ್ತಮ ಸಾಧನವಾಗಬಹುದಾಗಿದೆ.
ಶರಣನು ಗುರು ಕರುಣೆಯಿಂದ ಅರಳಿ ವೀರಶೈವ ಸಿದ್ಧಾಂತ ಶಾಸ್ತ್ರವನ್ನು ಹೊತ್ತು ಸರಳವಾಗಿ ಪರಿಚಯಿಸುವ ಒಂದು ಗ್ರಂಥವಾಗಿದೆ, ತ್ರಿಪದಿಗಳನ್ನು ಬರೆದು ಸರ್ವಜ್ಞನು ತಾನು ವಚನಗಳನ್ನು ರಚಿಸಿ ಸಮಾಜದ ಎಲ್ಲಾ ಅಂಕುಡೊಂಕು, ತತ್ವ, ನೀತಿ ಧರ್ಮವನ್ನು ಹೇಳಿದ ಹಾಗೆ ಶರಣರು ರಚಿಸಿದ ಮೂರು ಮೂರು ಸಾಲಿನ ಪದಗಳಿಂದ ಜೋಡಿಸಿ ಧರ್ಮತತ್ವವನ್ನು ನಡೆನುಡಿಯನ್ನು ಏಕಿಕರಿಸಿಕೊಂಡು ಅವರು ತ್ರಿಪದಿಗಳನ್ನು ರಚಿಸಿದ್ದಾರೆ, ತ್ರಿವಿಧ ಎಂದರೆ ಮೂರು ವಿಧ ಎಂದರ್ಥ, ಇದರಲ್ಲಿ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ವಿವರಣೆಯೊಂದಿಗೆ ಹೇಳಲ್ಪಟ್ಟಿದೆ, ಸಾಹಿತ್ಯದಲ್ಲಿ ತ್ರಿಪದಿಗಳಿಗೆ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದವುಗಳಾಗಿವೆ, 12ನೇಯ ಶತಮಾನದಲ್ಲಿ ಕೆಲವು ಶರಣ ಶರಣಿಯರು ತ್ರಿಪದಿಯಲ್ಲಿ ತಮ್ಮ ವಿಚಾರ ತತ್ವವನ್ನು ಹೇಳಿದ್ದಾರೆ, ಜಾನಪದ ಸಾಹಿತ್ಯವು, ಸರ್ವಜ್ಞನ ವಚನಗಳು ಹೀಗೆ ಹಲವು ಕವಿಗಳು ತ್ರಿಪದಿಯನ್ನು ರಚಿಸಿದ್ದಾರೆ ಮೈಲಾರದ ಬಸವಲಿಂಗ ಶರಣರು ‘ಗುರು ಕರುಣ ತ್ರಿವಿದಿ‘ಯನ್ನು ರಚಿಸಿ ತತ್ವ ವಿಚಾರವನ್ನು ಮಂಡಿಸಿಕೊಟ್ಟು ಗುರುವಿನ ತಕ್ಕ ಶಿಷ್ಯನಾಗಿ ಗುರು ಸ್ತೋತ್ರ, ಗುರು ಮಹತ್ವವನ್ನು ತಿಳಿಸಿ ವೀರಶೈವ ಧರ್ಮದ ತತ್ವ ಸಿದ್ಧಾಂತದ ಸರ್ವ ಮಗ್ಗಲುಗಳನ್ನು ತಿಳಿಸಿ, ಪಾರಾಯಣ ರೂಪದಲ್ಲಿ ಕೃತಿಯನ್ನು ರಚಿಸಿದ್ದಾರೆ.