ಲೇಖಕರು : ಗುರು ಹಿರೇಮಠ, ಹಗರಿಬೊಮ್ಮನಹಳ್ಳಿ
ಅಸ್ತಿತ್ವದ ಶ್ರೇಷ್ಠ ಅಭಿವ್ಯಕ್ತಿಯೇ ಕಲೆಯಾಗಿದೆ. ಈ ಅಭಿವ್ಯಕ್ತಿಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ವ್ಯಕ್ತಿಯ ಸ್ವಭಾವ, ಸಂಸ್ಕೃತಿ, ಬೆಳೆದುಬಂದ ರೀತಿ ಮತ್ತು ಜಗತ್ತನ್ನು ಗ್ರಹಿಸುವ ಪರಿ ಇವೆಲ್ಲವುಗಳೂ ಆತನ ಅಭಿವ್ಯಕ್ತಿಯ ಮೇಲೆ ಪ್ರಭಾವ ಹೊಂದಿರುತ್ತವೆ.
ವಾಸ್ತವವಾಗಿ ಈ ಜೀವನವು ಕಲೆಗೆ ಆಧಾರವಾಗಿದ್ದರೆ, ಕಲೆಯು ಜೀವನವನ್ನು ಶ್ರೀಮಂತಗೊಳಿಸುತ್ತದೆ. ಈ ಕಾರಣದಿಂದಲೇ ಜೀವನ ಮತ್ತು ಕಲೆ ಒಂದಕ್ಕೊಂದು ಪೂರಕವಾಗಿವೆ.
ಕಲೆಗಳಲ್ಲಿಯೇ ಸಂಗೀತವು ಅತ್ಯಂತ ಉತ್ಕೃಷ್ಟವಾದದ್ದು.ಏಕೆಂದರೆ ಧರ್ಮಕ್ಕೆ ಮೂಲ ಮತ್ತು ಆಧಾರವಾದದ್ದು ‘ಕರುಣೆ’,ಇದೇ ನಮ್ಮ ಮೂಲ ಸ್ವಭಾವ, ಇದು ತೀವ್ರವಾಗಿ ಪ್ರಕಟಗೊಳ್ಳುವುದೇ ಸಂಗೀತದ ಮೂಲಕ. ಒಂದು ಹಂತದಲ್ಲಿ ಪ್ರೀತಿಯು ಮೊಗ್ಗಿನಂತೆ ಕಂಡುಬಂದರೆ ಕಾರುಣ್ಯವೆನ್ನುವುದು ಪರಿಪೂರ್ಣ ಅರಳುವಿಕೆಯಾಗಿದೆ. ಈ ಪ್ರೀತಿ ಮತ್ತು ಕಾರುಣ್ಯಗಳ ಹಾಗು ನಮ್ಮ ಎಲ್ಲ ಬಗೆಯ ಭಾವಗಳ ಪರಿಪೂರ್ಣ ಅಭಿವ್ಯಕ್ತಿಯ ಸಾಧ್ಯತೆ ಇರುವುದು ಸಂಗೀತ ದಲ್ಲಿ ಮಾತ್ರ. ಸಂಗೀತದ ಅಗಾಧತೆ ಅರ್ಥಮಾಡಿಕೊಳ್ಳುವಂಥದ್ದಲ್ಲ, ಬದಲಾಗಿ ಭಾವಿಸುವಂಥದ್ದು, ಅನುಭವಿಸುವಂಥದ್ದು ಹಾಗೆಯೇ ನಮ್ಮಲ್ಲಿ ನಾವು ಒಂದಾಗುವಂಥದ್ದು. ಇದೇ ನೈಜ ಜೀವನವಾಗಿದೆ.
ಸಂಗೀತವು ಕೇವಲ ಒಂದು ಕಲೆ ಅಷ್ಟೇ ಅಲ್ಲ, ಅದು ವಿಜ್ಞಾನವೂ ಆಗಿದೆ.ಏಕೆಂದರೆ ಅದನ್ನು ನಾವು ಪ್ರಯೋಗಕ್ಕೆ ಮತ್ತು ಸಂಶೋಧನೆಗೆ ಒಳಪಡಿಸಬಹುದು. ಸಂಗೀತ ಚಿಕಿತ್ಸೆ ಮೂಲಕ ಎಷ್ಟೊಂದು ರೋಗಿಗಳ ಕಾಯಿಲೆಗಳು ವಾಸಿಯಾಗಿರುವುದನ್ನು ನಾವು ದಿನ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ.
ಸಂಗೀತವು ಅತ್ಯಂತ ಶ್ರೇಷ್ಠ ಶಿಕ್ಷಣವಾಗಿದ್ದು ವ್ಯಕ್ತಿಗೆ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಅಧ್ಯಾತ್ಮಿಕ ಶಿಕ್ಷಣವನ್ನು ನೀಡುತ್ತದೆ. ಈ ಸಾಧ್ಯತೆ ಇರುವುದು ಬಹುಷಹ ಸಂಗೀತಕ್ಕೆ ಮಾತ್ರ. ನಾವು ದಿನನಿತ್ಯ ಎಷ್ಟೊಂದು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇವೆ. ಆದರೆ ನಾವು ಯಾವುದೇ ಕೆಲಸ ಅಥವಾ ಕ್ರಿಯೆಯನ್ನು ಅಖಂಡವಾಗಿ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ದೇಹದ ಅಂಗಾಂಗಗಳು ಕೆಲಸದಲ್ಲಿ ನಿರತವಾದಾಗ ಮನಸ್ಸು ಬೇರೊಂದನ್ನು ವಿಚಾರ ಮಾಡುತ್ತದೆ, ಅಲ್ಲಿ ಭಾವವೆಂಬುದು ಇರುವುದೇ ಇಲ್ಲ. ಇನ್ನು ಇವೆಲ್ಲವುಗಳಿಗೆ ಸಾಕ್ಷೀಭೂತವಾಗಿ ನಿಲ್ಲುವ ಪ್ರಜ್ಞೆ ಬಹಳ ದೂರದ ಮಾತು.
ಸಂಗೀತ ಒಂದೇ ನಮ್ಮ ಎಲ್ಲ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ವಲಯಗಳಲ್ಲಿ ಒಂದು ಸಾಮರಸ್ಯವನ್ನು ಸೃಷ್ಟಿಸುತ್ತದೆ. ಈ ಒಂದು ಸಾಮರಸ್ಯ ಅಥವಾ ಒಂದು ಅಖಂಡ ಸ್ಥಿತಿಯು ವ್ಯಕ್ತಿಯಲ್ಲಿ ಅಮಿತವಾದ ಆನಂದವನ್ನು ಉಂಟುಮಾಡುತ್ತದೆ. ಏಕೆಂದರೆ ಅದೇ ಆತನ ಮೂಲ ಸ್ಥಿತಿಯಾಗಿದೆ. ಯಾವ ಪ್ರೀತಿ ಮತ್ತು ಶಾಂತಿಗಾಗಿ ಜಗತ್ತು ಹಾತೊರೆಯುತ್ತದೆಯೋ, ಹೋರಾಡುತ್ತದೆಯೋ ಅದು ಸಂಗೀತದ ಮೂಲಕ ತನಗೆ ಸುಮ್ಮನೆ ಲಭಿಸಿಬಿಡುತ್ತದೆ. ಈ ಕಾರಣಕ್ಕಾಗಿಯೇ ‘ ಸಬ್ ಹೈ ಅಪೂರ್ಣ ಸಂಗೀತ ಬಿನಾ ‘ ಎಂಬ ವಾಕ್ಯವನ್ನು ಇಲ್ಲಿ ಸ್ಮರಿಸಬಹುದು.
ನಾವೆಲ್ಲ ಅಸ್ತಿತ್ವವಿಲ್ಲದ ಸತ್ಯಗಳನ್ನು ಸತ್ಯವೆಂದು ಭಾವಿಸಿ ಒಂದು ಸೀಮಿತ ಜಗತ್ತಿನಲ್ಲಿ ಬದುಕುತ್ತೇವೆ. ಜಾತಿ, ಧರ್ಮ, ದೇಶ, ಭಾಷೆ, ನೆಲ, ಜಲ ಮೊದಲಾದ ಸೀಮಿತ ಚೌಕಟ್ಟಿನೊಳಗೆ ಬದುಕುವ ವಿಭಜಿತ ಮನಸ್ಥಿತಿಗೆ ಸಂಗೀತವು ಎಲ್ಲರನ್ನೂ ಒಂದುಗೂಡಿಸುವ ಒಂದು ಸೇತುವೆಯಾಗಿ ಕೆಲಸ ಮಾಡುತ್ತದೆ. ಏಕೆಂದರೆ ಸಂಗೀತವೆನ್ನುವುದು ಒಂದು ವಿಶ್ವಭಾಷೆ.
ಜೀವನವನ್ನು ಸಚೇತನಗೊಳಿಸುವ ಸೃಜನಶೀಲತೆ ಸಂಗೀತದ ಮೂಲಕ ಹೊರಹೊಮ್ಮುತ್ತದೆ. ಸಂಗೀತವು ಭಾಷಾ ಸಾಮರ್ಥ್ಯವನ್ನು ಬೆಳೆಸುತ್ತದೆ. ಗ್ರಹಿಕೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಸಾಮಾಜಿಕ ಗುಂಪಿನಲ್ಲಿ ಸಾಮರಸ್ಯ ಉಂಟುಮಾಡಿ, ಸಾಮಾಜಿಕ ಕೌಶಲಗಳನ್ನು ಕಲಿಸುತ್ತದೆ ಹಾಗೆ ಮನಸ್ಸಿನ ಒತ್ತಡ ನಿವಾರಿಸಿ ಒಳ್ಳೆಯ ಆರೋಗ್ಯ ವೃದ್ಧಿಗೆ ಸಹಾಯಕವಾಗಿದೆ.
ಹಾಗಾದರೆ ನಮಗೆ ಇಲ್ಲೊಂದು ಪ್ರಶ್ನೆ ಮೂಡುತ್ತದೆ, ಅದೇನೆಂದರೆ ಎಲ್ಲ ಪ್ರಕಾರದ ಸಂಗೀತವು ಶ್ರೇಷ್ಠತೆಯುಳ್ಳದ್ದಾಗಿದೆಯೇ? ಎಂಬುದು. ಇಲ್ಲ, ಏಕೆಂದರೆ ಯಾವ ಸಂಗೀತದಿಂದ ಮನಸ್ಸು ವ್ಯಾಕುಲತೆಗೆ, ಪ್ರಕ್ಷುಬ್ಧತೆಗೆ, ಚಿಂತೆಗೆ, ಬಯಕೆಗೆ, ಅಸಮಧಾನಕ್ಕೆ ಒಳಗಾಗುತ್ತದೆಯೋ ಅದು ಅತ್ಯಂತ ಕೀಳುಮಟ್ಟದ್ದಾಗಿರುತ್ತದೆ.ಈ ತೆರನಾದ ಸಂಗೀತವು ತಿರಸ್ಕಾರ್ಹವಾದುದು. ಯಾವ ಸಂಗೀತವನ್ನು ಹಾಡುವುದರಿಂದ, ನುಡಿಸುವುದರಿಂದ, ಆಲಿಸುವುದರಿಂದ, ಮನಸ್ಸು ಪ್ರಸನ್ನಗೊಳ್ಳುತ್ತದೆಯೋ, ಆನಂದ ಪಡೆಯುತ್ತದೆಯೋ, ಹಾಗೆಯೇ ಮನಸು, ಭಾವ, ಬುದ್ಧಿ, ಶುದ್ಧತೆಗೆ ಒಳಗಾಗುತ್ತವೆಯೋ ಅದು ಮಾತ್ರ ಉತ್ಕೃಷ್ಟ ಮಟ್ಟದ ಸಂಗೀತವಾಗಿರುತ್ತದೆ.
ಒಟ್ಟಾರೆಯಾಗಿ ವ್ಯಕ್ತಿಯನ್ನು ಪೂರ್ಣತ್ವದೆಡೆಗೆ ಮುನ್ನಡೆಸುವಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಅದರ ಪ್ರಕಾರಗಳು ಬಹಳ ಪ್ರಮುಖ ಪಾತ್ರವಹಿಸಿರುವದನ್ನು ನಾವು ಇಲ್ಲಿ ಸ್ಮರಿಸಬಹುದು.