ನಿಜಗುಣ ಶಿವಯೋಗಿಗಳು

ವಿದ್ವಾನ್‌ ಜಿ.ವಿ.ಶಿವಸ್ವಾಮಿ

ನಮ್ಮ ರಾಜ್ಯವು ಧರ್ಮಸಮನ್ವಯದ ಪುಣ್ಯಭೂಮಿ. ಈ ನಾಡಿನಲ್ಲಿ ಅನೇಕ ಮಹಾತ್ಮರು, ಸಾಧು-ಸಂತರು, ಆಚಾರ್ಯರು, ಶಿವಶರಣರು ಆಗಾಗ್ಗೆ ಉದಯಿಸಿ ತಮ್ಮ ಆಧ್ಯಾತ್ಮಿಕ ತೇಜಸ್ಸಿನಿಂದ ಜನಸಾಮಾನ್ಯರನ್ನು ಉದ್ಧಾರ ಮಾಡಿರುವವರಲ್ಲಿ  ನಿಜಗುಣ ಶಿವಯೋಗಿಗಳೂ ಒಬ್ಬರು

 “ಜ್ಯೋತಿ ಬೆಳಗುತಿದೆ

ವಿಮಲ ಪರಂಜ್ಯೋತಿ ಬೆಳಗುತಿದೆ

ಮಾತು ಮನಂಗಳಿಂದತ್ತತ್ತ ಮೀರಿದ

ಸಾತಿಶಯದ ನಿರುಪಾಧಿಕ ನಿರ್ಮಲ

ಜ್ಯೋತಿ ಬೆಳಗುತಿದೆ”

ಎಂದು ಹೇಳಿ ಜನರಲ್ಲಿ ಇದ್ದ ಅಂಧಕಾರವನ್ನು ದೂರ ಮಾಡಲು ಪ್ರಯತ್ನಿಸಿದವರು ನಿಜಗುಣ ಶಿವಯೋಗಿಗಳು  ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನ್ನು ತುಂಬಿ ಬಸವಣ್ಣನೆಂಬ ಜ್ಯೋತಿ ಬೆಳಗಿಸಿದ ಮೇಲೆ ಅದು ಕಳೆಗುಂದುತ್ತಿದ್ದಾಗ ಮತ್ತೊಮ್ಮೆ ಆ ಜ್ಯೋತಿಗೆ ಅಧ್ಯಾತ್ಮಿಕ ತೈಲವನ್ನೆರೆದು ಹೊಸ ಬೆಳಕನ್ನು ಕೊಟ್ಟು ಆ ಜ್ಯೋತಿಯನ್ನು ನಾಡಿನಲ್ಲೆಲ್ಲಾ ಪ್ರಜ್ವಲಿಸುವಂತೆ ಮಾಡಿದ ಮಹಾತ್ಮರು  ನಿಜಗುಣ  ಶಿವಯೋಗಿಗಳು.

ನಿಜಗುಣರ ಕಾಲ ಮತ್ತು ಜೀವನವನ್ನು ಕುರಿತು ಹೇಳಬಹುದಾದ ಐತಿಹಾಸಿಕ ಆಧಾರಗಳು ಸಾಕಷ್ಟು ದೊರೆಯುವುದಿಲ್ಲ. ಅವರ ಕಾಲ  ದೇಶಾದಿಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಒಟ್ಟಿನಲ್ಲಿ ಅನೇಕ ವಿದ್ವಾಂಸರು ಇವರು ೧೬ನೇ ಶತಮಾನದಲ್ಲಿ ಇದ್ದಿರಬಹುದೆಂದು ಅಭಿಪ್ರಾಯ ಪಟ್ಟಿರುತ್ತಾರೆ.

 ಮೈಸೂರು ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿಗೆ ಸ್ವಲ್ಪ ದೂರದಲ್ಲಿ ಪ್ರಶಾಂತವಾಗಿ ಹರಿಯುತ್ತಿರುವ ಕಾವೇರಿ  ಕಪಿಲೆಗಳ ಸುಗಮವೆಂದು ಹೆಸರು ಪಡೆದಿರುವ ತಿರುಮಲಕೂಡಲ ಆಚೆಗೆ ಸ್ವಲ್ಪ ದೂರದಲ್ಲಿ ಶುಭುಲಿಂಗನ ಬೆಟ್ಟವಿದೆ.ಬೆಟ್ಟದ ಪ್ರದೇಶಕ್ಕೆ ಸೇರಿದಂತೆ ಇರುವ ಒಂದು ಸಣ್ಣಗ್ರಾಮ ಚಿಲಕವಾಡಿ.  ಅದರ ಮತ್ತೊಂದು ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಕುಂತೂರು ಗ್ರಾಮವಿದೆ. ಇವೆರಡು ಗ್ರಾಮಗಳ ಎಲ್ಲೆಯಲ್ಲಿ ಇರುವುದೇ ಶಂಭುಲಿಂಗನ ಬೆಟ್ಟ, ಈ ಬೆಟ್ಟವು ಪವಿತ್ರವಾಗಿಯೂ ರಮಣೀಯವಾಗಿಯೂ ಇದ್ದು, ಸಾಧು-ಸಂತರ ತಪೋಕ್ಷೇತ್ರವಾಗಿ, ನಿಜಗುಣ ಶಿವಯೋಗಿಗಳ ಸಿದ್ಧಿಯ ತಾಣವಾಗಿದೆ. ಇಲ್ಲಿಯೇ ನಿಜಗುಣರು ತಪೋನುಷ್ಠಾನ ಮಾಡಿ ಶಿವಯೋಗ ಸಿದ್ಧಿಯನ್ನು ಪಡೆದುಕೊಂಡು ಜ್ಞಾನಜ್ಯೋತಿಯಾದರು. ಈ ಬೆಟ್ಟದಲ್ಲಿ ಇಂದಿಗೂ ನಿಜಗುಣರ ಗುಹೆ ಮತ್ತು  ಶಂಭುಲಿಂಗನ ದೇವಾಲಯ ಇವೆ. ಈ ಸ್ಥಳದಲ್ಲಿ ಸುಂದರವಾದ ಪ್ರಾರ್ಥನಾ ಮಂದಿರ ನಿರ್ಮಾಣಮಾಡಿ, ನಿಜಗುಣ ಶಿವಯೋಗಿಗಳ ಅಮೃತಶಿಲೆ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಇವರು ಕೊಳ್ಳೆಗಾಲದ ಸುತ್ತಮುತ್ತಲ ಪ್ರದೇಶಕ್ಕೆ  ರಾಜರಾಗಿದ್ದರೆಂದು ಕೆಲವು ಆಧಾರಗಳಿಂದ ತಿಳಿದು ಬರುತ್ತದೆ. ಇವರು ಬುದ್ಧನಂತೆ ರಾಜ್ಯ- ಕೋಶಾಧಿಗಳನ್ನು ತ್ಯಜಿಸಿ ಸನ್ಯಾಸಿಗಳಾದರು

ನಿಜಗುಣರು ಹೊರ ಪ್ರಪಂಚಕ್ಕೆ ರಾಜರಂತೆ ಕಂಡರೂ ಒಳಪ್ರಪಂಚದಲ್ಲಿ ತಪಸ್ವಿಗಳು, ರಾಜಭೋಗದಲ್ಲಿ ಯೋಗ ಬೀಜವನ್ನು ಬಿತ್ತಿ ಬೆಳಸಿದವರು. ಅವರ ಪ್ರಜಾನುರಾಗ, ದೀನ- ದಲಿತರ ಬಗ್ಗೆ ಅನುಕಂಪ, ಸಾಧು-ಸಂತರನ್ನು, ಶರಣರನ್ನು ಜಂಗಮರನ್ನು ಸಮಾನ ಭಾವನೆಯಿಂದ ಕಂಡು ಪೂಜಿಸಿದವರು. ಬಂದ ಯಾತ್ರಾರ್ಥಿಗಳಿಗೂ, ಗುರು ಜಂಗಮರಿಗೂ  ದಾಸೋಹವನ್ನು ನಡೆಸಿದ ಕಾಯಕ ನಿಷ್ಠರು,

 “ಶಿವಪಥವನರಿವಡೆ ಗುರುಪಥವೇ ಮೊದಲು’ ಎಂಬ ಬಸವಣ್ಣನವರ ನುಡಿಯನ್ನು ಅರಿತ ನಿಜಗುಣರು ತಮ್ಮ ಗುರುಗಳಾದ ಶ್ರೀ ಶಂಭುಲಿಂಗಸ್ವಾಮಿಗಳವರ ನೇತೃತ್ವದಲ್ಲಿ ಶಿವಾದ್ವೈತ ಸಿದ್ಧಾಂತವನ್ನು ಕುರಿತು ಜಿಜ್ಞಾಸೆ ನಡೆಸಿ, ಅವರ ಮಾರ್ಗದರ್ಶನದಲ್ಲಿ ಜ್ಞಾನವನ್ನು ಸಂಪಾದಿಸಿಕೊಂಡರು. ಮೆಚ್ಚಿನ ಶಿಷ್ಯನಾದ ನಿಜಗುಣರ ಅಭಿರುಚಿಯನ್ನು ಗಮನಿಸಿದ ಗುರು ಶಂಭುಲಿಂಗಸ್ವಾಮಿಗಳು ಶಿಷ್ಯನನ್ನು ವೈರಾಗ್ಯ ಮೂರ್ತಿಯನ್ನಾಗಿ ಪರಿವರ್ತಿಸಲು ಸಂಸಾರದಲ್ಲಿ ಇರುವ ದುಃಖ ಮತ್ತು ಅದರ ವ್ಯಾಮೋಹದಿಂದಾಗುವ ಅನರ್ಥಗಳನ್ನು ವಿವರಿಸಿ, ಶಿವಾದ್ವೈತ ತತ್ತ್ವಗಳನ್ನು ಮತ್ತು ಮೋಕ್ಷಪದವಿಯ ಮಾರ್ಗವನ್ನು . – ಬೋಧಿಸಿದರೂ ನಿಜಗುಣರ ಮನಸ್ಸು ಸಂಸಾರದಿಂದ ವಿಮುಖವಾಗಲಿಲ್ಲ.

 ಒಮ್ಮೆ ನಿಜಗುಣರು ಗುರುಗಳ ಬಳಿಗೆ ಹೋಗಿ, “ಏನು. ಮಾಡಲಿ – ಗುರುವೇ, ನಾನು ಸಂಸಾರವನ್ನು ತ್ಯಾಗ ಮಾಡಬೇಕೆನ್ನುತ್ತೇನೆ. ಆದರೆ ಸಂಸಾರ ನನ್ನನ್ನು ಬಿಡುತ್ತಿಲ್ಲ” ಎಂದರು, ಶಿಷ್ಯನ ಮನಸ್ಸನ್ನು ಅರಿತ ಗುರುಗಳು ಏನಾದರೂ ಮಾಡಿ   ಪರಿವರ್ತಿಸಬೇಕೆಂದು ಚಿಂತಿಸಿ, ಒಮ್ಮೆ ಊರು ಮುಂದೆ ಇರುವ ಮರವನ್ನು ಹೋಗಿ ತಬ್ಬಿಕೊಂಡು ನಿಂತುಬಿಟ್ಟರು. ರಾಜಗುರುಗಳ ವರ್ತನೆಯನ್ನು ಕಂಡ ಜನ ರಾಜನಿಗೆ ವರದಿ ಮಾಡಿದರು. ನಿಜಗುಣರು ಬಂದು ನೋಡಿ ಆಶ್ಚರ್ಯದಿಂದ ಗುರುಗಳನ್ನು ಕೇಳಿದರು, “ಇದೇನು ಗುರುವೇ ಹೀಗೆ ನಿಂತಿರುವಿರಿ?” ಇದರಲ್ಲಿ ಏನೂ ಆಶ್ಚರ್ಯವಿಲ್ಲ. ಈ ಸಂಸಾರ ನಿನ್ನನ್ನು ಹಿಡಿದುಕೊಂಡು ಹೇಗೆ ಬಿಡುತ್ತಿಲ್ಲವೋ, ಹಾಗೆ ಈ ಮರವು ನನ್ನನ್ನು ಹಿಡಿದುಕೊಂಡು ಬಿಡುತ್ತಿಲ್ಲ’ ಎಂದರು. ಗುರುಗಳ ಈ ಮಾತು ನಿಜಗುಣರ ಮನಸ್ಸಿಗೆ ನಾಟಿತು. ಮನಸ್ಸಿನಲ್ಲಿ ವಿದ್ಯುತ್ ಹರಿದಂತಾಯಿತು. ಹೌದು ಗುರುದೇವ, ನಾನೆ ಸಂಸಾರವನ್ನು ಹಿಡಿದುಕೊಂಡು ಸಂಸಾರವು ನನ್ನನ್ನು ಹಿಡಿದುಕೊಂಡಿದೆ ಎನ್ನುತ್ತಿದ್ದೇನೆ”. ಇಲ್ಲದ ನೆಪವನ್ನು ಮಾನವರು ಹುಡುಕುತ್ತಾರೆ, ನನ್ನ ಅಜ್ಞಾನಕ್ಕೆ ಸರಿಯಾದ ಮಾರ್ಗವನ್ನೇ ತೋರಿದಿರಿ.

ಆರು ನಾನೆಂದು ವಿಚಾರಿಸು ವಿಷಮ ಸಂ-

ಸಾರವನು ಕನಸೆಂದರಿ |

ಮಾರಮರ್ದನ ಶಂಭುಲಿಂಗವನೊಲಿಸಿ ಗಂಭೀರ ಸುಖದೊಳಿರೆಂದರುಪುವ

 ಎಂದು ನುಡಿದು ರಾಜ್ಯ ಮಡದಿ ಮಕ್ಕಳನ್ನು ತ್ಯಜಿಸಿ, ಗುರುಗಳ ಮಾರ್ಗದರ್ಶನದಂತೆ ಜಂಗಮ ದೀಕ್ಷೆಯನ್ನು ಪಡೆದು ನಾಡನ್ನೇ ಪ್ರೀತಿಸುವ ಪರಮ ವೈರಾಗ್ಯ ಮೂರ್ತಿಗಳಾದರು

 ನಿಜಗುಣ ಶಿವಯೋಗಿಗಳು ಬಹುಮುಖ ಪ್ರತಿಭೆ ಯುಳ್ಳವರು. ಅಗಾಧವಾದ ವಿದ್ವತ್ತಿನಿಂದಲೂ, ತಪಶ್ಚರ್ಯ ದಿಂದಲೂ, ಶಾಸ್ತ್ರಗಳ ಅಭ್ಯಾಸ ಬಲದಿಂದಲೂ ಜ್ಞಾನನಿಧಿ ಯಾದರು. ಗದ್ಯ-ಪದ್ಯದಲ್ಲಿ ಅನೇಕ ಗ್ರಂಥಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

 ನಿಜಗುಣ ಶಿವಯೋಗಿಯು ಒಬ್ಬ ಸಾಮಾನ್ಯ ಕವಿ ಎಂದು ಹೇಳುವುದಕ್ಕಿಂತ ಒಬ್ಬ ದಾರ್ಶನಿಕ ಕವಿ ಎಂದು ಹೇಳಬೇಕಾಗುತ್ತದೆ. ಅವರ ಸಾಹಿತ್ಯ ಕೃಷಿ ವಿಫುಲವಾದದ್ದು. ಕನ್ನಡ ಸಂಸ್ಕೃತಿಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದೂ ಆಗಿದೆ. ಇವರಿಗೆ ವೇದ, ಆಗಮ, ಉಪನಿಷತ್ತು, ಸ್ಮೃತಿಗಳಲ್ಲಿ ಪಾಂಡಿತ್ಯವಲ್ಲದೆ, ಪುರಾಣ, ಇತಿಹಾಸ, ಸಂಗೀತ, ವ್ಯಾಕರಣ, ತರ್ಕ, ಜ್ಯೋತಿಷ್ಯ, ಯೋಗಗಳಲ್ಲಿಯೂ ಪಾಂಡಿತ್ಯ ಇತ್ತು. ‘ವಿದ್ಯಾಸಂಪನ್ನ, ಸುಜ್ಞಾನ ಚಕ್ರವರ್ತಿ’ ಮುಂತಾದ ಬಿರುದಗಳು ನಿಜಗುಣರನ್ನು ಆಶ್ರಯಿಸಿ ಗೌರವ ಪಡೆದವೆಂದರೆ ಉತ್ಪ್ರೇಕ್ಷೆಯಾಗಲಾರದು.

ನಿಜಗುಣ ಶಿವಯೋಗಿಗಳ ಕೃತಿಗಳು

೧)ಕೈವಲ್ಯ ಪದ್ಧತಿ

೨)ಪರಮಾನುಭವ ಬೋಧೆ

೩)ಅನುಭವ ಸಾರ

೪)ಪರಮಾರ್ಥಗೀತೆ

೫)ಪಾರಮಾರ್ಥ ಪ್ರಕಾಶಿಕೆ

೬)ವಿವೇಕ ಚಿಂತಾಮಣಿ

೭)ಅರವತ್ತು ಮೂವರ ಪುರಾತನ ತ್ರಿವಿಧಿ

ಮತ್ತು ದರ್ಶನ ಸಾರ, ಆತ್ಮ ತರ್ಕ ಚಿಂತಾಮಣಿ ಈ ಎರಡು ಗ್ರಂಥಗಳು ಸಿಕ್ಕಿರುವುದಿಲ್ಲ. ಇವರ ಕೃತಿಗಳು ತೆಲಗು, ತಮಿಳು, ಸಂಸ್ಕೃತ, ಮರಾಠಿ ಭಾಷೆಗಳಿಗೂ ಭಾಷಾಂತರ ಗೊಂಡಿವೆ. ನಿಜಗುಣರ ಕೃತಿಗಳನ್ನು ಓದಿ ನೋಡಿದಾಗ ನಮಗೆ ಸಾಹಿತ್ಯ ಶ್ರೀಮಂತಿಕೆಯ ಗೋಚರವಾಗುತ್ತದೆ. ಅವರ ಕೃತಿಗಳು ಒಂದಕ್ಕೊಂದು ಪೂರಕವೆಂಬಂತೆ ತೋರುತ್ತವೆ, ಮುಮುಕ್ಷುಗಳು ಮೊದಲು ‘ಪಾರಮಾರ್ಥದ ಪ್ರಕಾಶ’ ತಿಳಿಯಬೇಕು. ಅದಕ್ಕೆ ‘ವಿವೇಕ ಚಿಂತಾಮಣಿ’ಯ ಅರಿವು ಬೇಕು. ಅದನ್ನು ಪಡೆದುಕೊಂಡ ನಂತರ ‘ಅನುಭವಸಾರ’ ಬೇಕು. ಅನುಭವದ ಸಾರವನ್ನು ಜೀರ್ಣಿಸಿಕೊಂಡು ಜ್ಞಾನಿಯು ‘ಪರಮಾರ್ಥಗೀತೆ’ಯನ್ನು ಆನಂದ ದಿಂದ ಹಾಡುತ್ತಾ ‘ಕೈವಲ್ಯ ಪದ್ಧತಿ’ಯನ್ನು ತಿಳಿದು ಅನುಭವಿಸಬೇಕು ಎಂಬುದು ಅವರ ಗ್ರಂಥಗಳ ಅಧ್ಯಯನದಿಂದ ತಿಳಿದು ಬರುತ್ತದೆ

. ‘ಕೈವಲ್ಯ ಪದ್ಧತಿ’ಯು ನಿಜಗುಣ ಶಿವಯೋಗಿಗಳ ಕೊನೆಯ ಕೃತಿರತ್ನವಾಗಿದೆ. ವೇದಾಂತ ತತ್ತ್ವಗಳನ್ನು ಬೋಧನೆ ಮಾಡುವಾಗ ‘ಪರಮಾನುಭವ’ವಿಲ್ಲದೆ ಬೋಧನೆ ಮಾಡಲಾಗುವುದಿಲ್ಲ. ಎಲ್ಲವನ್ನೂ ಗುರುಮುಖೇಣ ಅರಿಯಬೇಕು.

“ಶ್ರೀಗುರು ವಚನೋಪದೇಶವನಾಲಿಸಿ ದಾಗಳಹುದು ನರರಿಗೆ ಮುಕುತಿ…..

ಎಂದು ಒತ್ತಿಹೇಳಿದ್ದಾರೆ. ತಾವು  ಗುರುಮುಖದಿಂದ ತಿಳಿದ ತತ್ವಗಳನ್ನು ಅರಗಿಸಿಕೊಂಡು, ಶಿವಯೋಗ ಸಿದ್ಧಪುರುಷರಾಗಿ, ತಾವು ಗಳಿಸಿದ ಜ್ಞಾನವಾಹಿನಿಯನ್ನು ನಾಡಿನಲ್ಲೆಲ್ಲಾ ಹರಡಿಸಿ ಜನಸಾಮಾನ್ಯರ ಕಲ್ಯಾಣಕ್ಕಾಗಿ ತಮ್ಮ ತತ್ವಗಳನ್ನು ಉಪದೇಶಿಸಿರುವುದು ತಿಳಿದುಬರುತ್ತದೆ.  ಪುರಂದರದಾಸರು ‘ಪುರಂದರ ವಿಠಲ’ ಎಂತಲೂ ಅಕ್ಕಮಹಾದೇವಿ ‘ಚನ್ನಮಲ್ಲಿ ಕಾರ್ಜುನ’ ನೆಂತಲೂ, ಬಸವಣ್ಣನವರು ‘ಕೂಡಲ ಸಂಗಮದೇವ’ ನೆಂತಲೂ ತಮ್ಮ ವಚನಗಳ ಅಂತ್ಯದಲ್ಲಿ ಅಂಕಿತವನ್ನು ಹೇಳಿ ಕೊಂಡಿರುವರಂತೆ, ನಿಜಗುಣ ಶಿವಯೋಗಿಗಳೂ ಸಹ ‘ಶಂಭುಲಿಂಗ’  ಎಂದು ಅಂಕಿತವನ್ನು ಇಟ್ಟುಕೊಂಡಿದ್ದಾರೆ.

 ಉದಾಹರಣೆಗೆ

 : ಪ್ರಣವಾಕಾರದ ಗುಣಮೂರು ಮುಟ್ಟಿದ

 ಗಣನೆಗತೀತಾರ್ಥವನೆ ತೋರುವ ||

ಅಣುಮಾತ್ರ ಚಲನೆ ಇಲ್ಲದ ಮೋಕ್ಷ ಚಿಂತಾ |

 ಮಣಿಯೆನಿಸುವ ಶಂಭುಲಿಂಗವೆ ತಾನಾದ |

 ಎಂದು ಹಾಡಿದ್ದಾರೆ.

  ನಿಜಗುಣರ ಸಮಗ್ರ ಜೀವನ ಚರಿತ್ರೆಯಿಂದ ತಿಳಿದು ಬರುವುದೇನೆಂದರೆ ಅವರು ಒಬ್ಬ ದಕ್ಷ ಆಡಳಿತಗಾರರೂ | ಸಮಾಜ ಸುಧಾರಕರೂ, ಕವಿಗಳೂ, ದಾರ್ಶನಿಕರೂ, ತತ್ವನಿಷ್ಠರೂ | ಮಹಾತ್ಮರೂ ಆಗಿದ್ದರು. ಅವರೆಲ್ಲಿ ನಾವೆಲ್ಲಿ ? ಮಾನವರಾಗಿ | ಹುಟ್ಟಿ ಮಹಾಮಹಿಮರಾಗಿ ಮಾನವರ ಸರ್ವತೋಮುಖ ಪ್ರಗತಿಗಾಗಿ ದುಡಿದರು. ಅವರು ಬಡವ-ಬಲ್ಲಿದ, ಉಚ್ಚ  ನೀಚ ಎಂಬ ಭೇದ ಭಾವನೆಯನ್ನು ತೊಡೆದು ಹಾಕಲು, ಪ್ರಯತ್ನಿಸಿದರು ಶರಣರ ಜೀವನದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದವರು.

 ದೇವರನ್ನು ನಂಬಬೇಕು,ದೇವ ಲೋಕವೆಂಬುದು ಅವು ಅಲ್ಲಿಯೂ ಇಲ್ಲ, ಅವೆಲ್ಲವೂ ಇಲ್ಲಿಯೇ ಇವೆ. ಸತ್ಯವನ್ನ ನುಡಿವುದೇ ದೇವಲೋಕ, ಮಿಥ್ಯವನ್ನ ನುಡಿವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ ಅನಾಚಾರವೇ ನರಕ, ಎಂದು ಬಸವಣ್ಣನವರು ನುಡಿದಿರುವ ವಚನದ ಸಾರವನ್ನು ತಿಳಿದು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಅಧ್ಯಾತ್ಮಿಕ ರಂಗದ ಧೃವತಾರೆಯಾಗಿ ಮಿನುಗಿ, ಆಚರಣೆಯಲ್ಲಿ ನಡೆ ನುಡಿಗಳನ್ನು ಹೊ೦ದಾಗಿಸಿ ಸಮಾಜದ ಜನತೆಯನ್ನು ಕೈಹಿಡಿದು ನಡೆಸಿದವರು. ಅವರ ಉಪದೇಶಗಳು ಕಲುಷಿತ ವಾತಾವರಣದಲ್ಲಿ ಕಂಗೆಟ್ಟುನಿಂತ ಜೀವಿಗೆ ಶಾಂತಿ, ಸುಖ, ನೆಮ್ಮದಿಯನ್ನು ನೀಡುತ್ತವೆ. ನಿಜಗುಣ ಶಿವಯೋಗಿಗಳು ಬೋಧಿಸಿದ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ. ನಿಜಗುಣ ಶಿವಯೋಗಿಗಳ ಕೃತಿಗಳ ಪ್ರಭಾವ ಶ್ರೀ ಸರ್ಪಭೂಷಣ ಶಿವಯೋಗಿಗಳ ಮೇಲೆ ಆಗಿದೆ. ಅವರು ತಮ್ಮ ‘ಕೈವಲ್ಯ ಕಲ್ಪವಲ್ಲರಿ’ಯಲ್ಲಿ ನಿಜಗುಣರನ್ನು ಸ್ಮರಿಸಿರುತ್ತಾರೆ

Related Posts