ಡಾ|| ಬಸವರಾಜ ಹಿರೇಮಠ
ಸಹ ಪ್ರಾಧ್ಯಾಪಕರು,
ಆಯುರ್ವೇದ ಮತ್ತು ಯುನಾನಿ ತಬ್ಬಿಯಾ ಕಾಲೇಜು
ಮತ್ತು ಆಸ್ಪತ್ರೆ (ದೆಹಲಿ ಸರಕಾರ)
ಕರೋಲಬಾಗ, ನವದೆಹಲಿ-110005.
ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅವುಗಳು ಜೀವಿಸಲು ಪ್ರಾಣವಾಯು, ನೀರು ಮತ್ತು ಆಹಾರದ ಅವಶ್ಯಕತೆ ಇದ್ದೇ ಇದೆ. ಆದರೆ ಅವುಗಳನ್ನು ಸೇವಿಸುವ ವಿಧಾನ ಮತ್ತು ಪ್ರಮಾಣ ಭಿನ್ನಭಿನ್ನವಾಗಿದೆ.
ಸೃಷ್ಟಿ ಸಂಕುಲದಲ್ಲಿಯ ಪ್ರಾಣಿ, ಪಕ್ಷಿಗಳು ಜಲಚರವಾಸಿಗಳು ಮುಖ್ಯವಾಗಿ ತಮ್ಮ ಆಹಾರವನ್ನು ಹುಡುಕುವದರಲ್ಲಿಯೇ ಮಗ್ನವಾಗಿರುತ್ತವೆ. ಆದರೆ ವಿಕಸಿತ ಮೆದುಳು ಹೊಂದಿರುವ ಮನುಷ್ಯನು ಆಹಾರವನ್ನು ತನ್ನ ರುಚಿಗೆ ತಕ್ಕಂತೆ ಹಸಿವೆಗೆ ತಕ್ಕಂತೆ ತಯಾರಿಸಿ ಸೇವಿಸುತ್ತಾನೆ.
ಸೃಷ್ಟಿಯಲಿ ಮಾನವನ ವಿಕಾಸವಾದಂತೆ ಅವರ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿಯೂ ಅನೇಕ ಬದಲಾವಣೆಗಳಾದವು. ನಂತರ ಜ್ಞಾನ, ವಿಜ್ಞಾನಗಳ ರೂವಾರಿಯಾದ ಜ್ಞಾನ ಬೆಳೆದಂತೆ ವಿಜ್ಞಾನದ ವಿಕಸನವೂ ಆಯಿತು, ಆಗುತ್ತಿದೆ ಮುಂದೆಯೂ ಆಗುವದು.
ಆಹಾರವೇ ಔಷಧಿ, ಔಷಧಿಯೇ ಆಹಾರ ಎಂಬ ಮೇಲ್ಪಂಕ್ತಿಯನ್ನು ನೋಡಿದಾಗ ಕ್ಷಣಕಾಲ ಓದುಗರಲ್ಲಿ ಆಶ್ಚರ್ಯವೆನಿಸಿರಬಹುದು. ಅಂದರೆ, ಆಹಾರವನ್ನು ನಾವು ಯಾವಾಗ, ಹೇಗೆ, ಎಷ್ಟು ಪ್ರಮಾಣ ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಿ ಸೇವಿಸಬೇಕು.
ಆಹಾರ:- ಯಾವುದು ಶರೀರದ ಪೋಷಣೆ ಮಾಡುವುದೋ, ಮತ್ತು ಯಾವುದನ್ನು ಸೇವಿಸುವದರಿಂದ ಮನ ಪ್ರಸನ್ನತೆ ಮತ್ತು ಶಾರೀರಿಕ ಶಕ್ತಿ ವೃದ್ಧಿಸುವುದೋ ಅದು ಆಹಾರ. ಆಯುರ್ವೇದ ಆರ್ಷ ಗ್ರಂಥಗಳಲ್ಲಿ ಆಹಾರದ ಮಹತ್ವ, ಆಹಾರ ತಯಾರಿಸುವ ವಿಧಾನ, ಸಂತುಲಿತ ಆಹಾರ, ವಿರುದ್ಧ ಆಹಾರ, ಆಹಾರ ಸೇವನೆ ಕಾಲ ಮತ್ತು ಆಯಾ ರೋಗಗಳಿಗನುಸಾರ ರೋಗಿಗಳಿಗೆ ನೀಡಲಾಗುವ ಪಥ್ಯೆ ಆಹಾರಗಳ ಬಗ್ಗೆ ಅತ್ಯಂತ ವಿಸ್ತಾರವಾಗಿ ವಿವರಿಸಲಾಗಿದೆ.
ಸಂತುಲಿತ ಆಹಾರವೆಂದರೆ, ಯಾವುದು ಪಂಚಮಹಾಭೂತಾತ್ಮಕವಾಗಿರುವುದೊ, ಮಧುರಾಧಿ ಷಡ್ರಸಾತ್ಮವಾಗಿರುವುದೋ, ಶರೀರ ಪೋಷಣೆಯ ಜೊತೆಗೆ ಶಾರೀರಿಕ ಹಾಗೂ ಇಂದ್ರಿಯ ಶಕ್ತಿಗಳ ವೃದ್ಧಿಗೆ ಸಹಾಯಕವಾಗಿರುವುದೊ ಸಾತ್ವಿಕ ಗುಣವುಳ್ಳದ್ದಾಗಿರುವುದೋ ತಯಾರಿಸಿದ ಮೇಲೆ ಅದರಿಂದ ಹೊರಸೂಸುವ ಪರಿಮಳ ಅದರ ವರ್ಣ ಮತ್ತು ಅನುಸರಿಸಿದ ವಿಧಾನಗಳು ಇವೇ ಮೊದಲಾದವನ್ನೊಳಗೊಂಡ ಅಂಶಗಳ ಸಂಕ್ರಮಣವೇ ಸಂತುಲಿತ ಆಹಾರ.
ವಿರುದ್ಧ ಆಹಾರ:
ಆಯುರ್ವೇದ ಗ್ರಂಥಗಳಲ್ಲಿ ವಿರುದ್ಧ ಆಹಾರ ಎಂದರೇನು? ಅವುಗಳಲ್ಲಿ ಎಷ್ಟು ವಿಧ ಮತ್ತು ವಿರುದ್ಧ ಆಹಾರ ಸೇವಿಸುವದರಿಂದ ಯಾವ ಯಾವ ರೋಗಗಳು ಉಂಟಾಗುವವು ಎಂಬುದನ್ನು ವಿವರಿಸಲಾಗಿದೆ.
ಉದಾಹರಣೆಗೆ:
- ವಿಧಿವಿರುದ್ಧ
- ಕಾಲವಿರುದ್ಧ
- ಸಂಸ್ಕಾರವಿರುದ್ಧ
- ಉಪಚಾರವಿರುದ್ಧ
- ದೇಶವಿರುದ್ಧ
- ಸಂಯೋಗ ವಿರುದ್ಧ
- ದೋಷವಿರುದ್ಧ
- ಪಾಕವಿರುದ್ಧ
- ಮೂತ್ರವಿರುದ್ಧ
- ಅಗ್ನಿವಿರುದ್ಧ
- ವೀರ್ಯ ವಿರುದ್ಧ
- ಕೋಷ್ಠವಿರುದ್ಧ
- ಅವಸ್ಥಾ ವಿರುದ್ಧ
- ಕ್ರಮವಿರುದ್ಧ
- ಪರಿಹಾರ ವಿರುದ್ಧ
ವಿಧಿವಿರುದ್ಧ ಏಕಾಂತ ಪ್ರದೇಶದಲ್ಲಿ ಕುಳಿತು ಸೇವಿಸದೇ ಇರುವದು.
ಕಾಲ ವಿರುದ್ಧ ಶೀತಕಾಲದಲ್ಲಿ ಶೀತ ಗುಣವುಳ್ಳ ಮತ್ತು ರೂಕ್ಷ ಸೇವನೆ
ಸಂಸ್ಕಾರ ವಿರುದ್ಧ : ಜೇಷಲ ಕಟ್ಟಿಗೆಯಲ್ಲಿ ನವಿಲಿನ ಮಾಂಸವನ್ನು ಸುಟ್ಟು ತಯಾರಿಸಲಾದ ಮಾಂಸ ವ್ಯಂಜನ.
ದೇಶ ವಿರುದ್ಧ :ಅತೀ ಮಳೆ ಬಿಳುವ ಪ್ರದೇಶದಲ್ಲಿ ಇದ್ದವರು ಸ್ನಿಗ್ಧ ಮತ್ತು ಶೀತಗುಣವುಳ್ಳ ಆಹಾರದ ಸೇವನೆ.
ಸಂಯೋಗ ವಿರುದ್ಧ :ಹುಳಿ ಪದಾರ್ಥ (ಆಮ್ಲರಸಾತ್ಮಕ) ಗಳನ್ನು ಹಾಲಿನೊಂದಿಗೆ ಬೆರೆಸಿ ತಯಾರಿಸಿದ ಅಹಾರ.
ದೋಷ ವಿರುದ್ಧ:ವಾತ ಪ್ರಕೃತಿಯುಳ್ಳ ವ್ಯಕ್ತಿಯು ರೂಕ್ಷ, ಶೀತ ಆಹಾರ ಸೇವನೆಯಿಂದ
ಪುನಃ ವಾತ ದೋಷವು ವೃದ್ಧಿಯಾಗುವದು.
ಪಾಕ ವಿರುದ್ಧ:ಉದಾಹರಣೆಗೆ, ಅನ್ನ ತಯಾರಿಸುವಾಗ ಅದು ಸರಿಯಾಗಿ ಬೆಂದಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇವೆ. ಅರೆಬೆಂದ ಅನ್ನ – ಹಾಗೂ ಸಂಪೂರ್ಣ ಸುಟ್ಟು ಹೋದ ಅನ್ನ ಇವರೆಡೂ ಪಾಕ ವಿರುದ್ಧ ಅಹಾರ.
ಮೂತ್ರಾ ವಿರುದ್ಧ : ಜೇನುತುಪ್ಪ ಹಾಗೂ ತುಪ್ಪ ಇವೆರಡನ್ನೂ ಸಮ ಪ್ರಮಾಣದಲ್ಲಿ
ಸೇವಿಸುವದೂ ಕೂಡಾ ಮೂತ್ರಾ ವಿರುದ್ಧವಾಗಿದೆ.
ಅಗ್ನಿ ವಿರುದ್ಧ : ಮಂದಾಗ್ನಿಯುಳ್ಳ ವ್ಯಕ್ತಿ ಪತನಕ್ಕೆ ಜಡವಾದ (ಗುರು) ಆಹಾರ
ನೀಡುವದರಿಂದ ಆಹಾರವು ಸರಿಯಾಗಿ ಪಚನವಾಗುವದಿಲ್ಲ.
ವೀರ್ಯ ವಿರುದ್ಧ : ಶೀತ ವೀರ್ಯವುಳ್ಳ ಹಾಲಿಗೆ ಉಷ್ಣ ವೀರ್ಯವುಳ್ಳ ಪಿಪ್ಪಲಿ ಮಿಶ್ರಣ ಮಾಡಿ ಸೇವಿಸುವದರಿಂದ (ಹಾಲು ಮತ್ತು ಮತ್ಸ್ಯ)
ಕೋಷ್ಠ ವಿರುದ್ಧ:ಕ್ರೂರಕೋಷ್ಠವುಳ್ಳ ವ್ಯಕ್ತಿಗೆ ಅಲ್ಪ ಪ್ರಮಾಣದಲ್ಲಿ ಆಹಾರ ನೀಡುವದು
ಅವಸ್ಥಾ ವಿರುದ್ಧ: ಅಧಿಕ ಶ್ರಮದ ಕೆಲಸ ಮಾಡುವ ವ್ಯಕ್ತಿಗೆ ವಾತವರ್ಧಕ ಆಹಾರ
ನೀಡುವದು.
ಕ್ರಮ ವಿರುದ್ಧ :ಮಲಮೂತ್ರ ತ್ಯಾಜ ಮಾಡದೇ ಆಹಾರ ಸೇವನೆ.
ಆಹಾರ ಸೇವನ ಕಾಲ : ಆಹಾರವನ್ನು ಯಾವಾಗ ಸೇವನೆಯನ್ನು ಮಾಡಬೇಕು ಎನ್ನುವದೂ ಅಷ್ಟೆ ಮುಖ್ಯ.
ಇಲ್ಲಿ ಆಹಾರ ಸೇವನೆ ಕಾಲ:
• ಈ ಮೇಲೆ ವಿವರಿಸಿದ ಸಂತುಲಿತ ಆಹಾರವನ್ನು ಬೆಳಗಿನ ಜಾವ ಎದ್ದ ಮೇಲೆ ಮಲಮೂತ್ರ ವಿಸರ್ಜಿಸಿದ ಬಳಿಕ ಪ್ರಾತಃ ವಿಧಿ ವಿಧಾನಗಳನ್ನು ಮುಗಿಸಿದ ಬಳಿಕ ತನ್ನ ಎಲ್ಲಾ ಕುಟುಂಬದ ಸದಸ್ಯರೊಂದಿಗೆ ಒಟ್ಟಿಗೆ ಕುಳಿತು ತನ್ನ ಹಸಿವಿಗೆ ತಕ್ಕ ಹಾಗೆ ಸೇವನೆ ಮಾಡುವದು. ಆಹಾರವನ್ನು ಮಧ್ಯರಾತ್ರಿಯಲ್ಲಿಯೂ ನಸುಕಿನ ಜಾವದಲ್ಲಿಯೂ ಮತ್ತು ಸೇವನೆ ಮಾಡಬಾರದು.
ದಿವಸದಲ್ಲಿ ಎಷ್ಟು ಹೊತ್ತು ಊಟ ಮಾಡಬೇಕು?
- ಒಂದು ಹೊತ್ತು ಉಂಡವ ಯೋಗಿ
- ಎರಡು ಹೊತ್ತು ಉಂಡವ ಭೋಗಿ
- ಮೂರು ಹೊತ್ತು ಉಂಡವ ರೋಗಿ
- ನಾಲ್ಕು ಹೊತ್ತು ಉಂಡವ ಕಂಬಳಿಯಲ್ಲಿ ಕಚ್ಚಿಕೊಂಡು ಹೋಗಿ
ಈ ಮೇಲಿನ ಸಾಲುಗಳನ್ನು ವೈಜ್ಞಾನಿಕವಾಗಿ ಗಮನಿಸಿದಾಗ ಮೊದಲನೆಯ ಉಕ್ತಿ ಒಂದು ಹೊತ್ತು ಉಂಡವ ಯೋಗಿ ಅಂದರೆ ವ್ಯಕ್ತಿಯು ತನ್ನ ವಯಸ್ಸಿಗನುಗುಣವಾಗಿ ಜಠರಾಗ್ನಿಗನುಗುಣವಾಗಿ ಸಂತುಲಿತ ಆಹಾರವನ್ನು ಮಿತವಾಗಿ ದಿವಸದಲ್ಲಿ ಒಂದು ಹೊತ್ತು ಮಾತ್ರ ಸೇವಿಸುವದರಿಂದ ಅವನು ಯೋಗಿ. ಇದರರ್ಥ ಅವನು ಸದಾ ನಿರೋಗಿ, ನಿರೋಗಿಯೇ ನಿಜವಾದ ಯೋಗಿ.
ಆಹಾರ ಸೇವನೆ ನಂತರ ಏನು ಮಾಡಬೇಕು?
ಉಂಡು ನೂರಡಿಯ ತಿರುಗಾಡಿ, ಕೆಂಡಕ್ಕೆ ಕೈ ಕಾಸಿ
ಗಂಡ ಭುಜವ ಮೇಲ್ಮಾಡಿ ಮಲಗಿದೊಡೆ
ವೈದ್ಯನ ಗಂಡ ಸರ್ವಜ್ಞ ||
ರಾತ್ರಿ ಭೋಜನಾನಂತರ ಬೇಗನೇ ಮಲಗಬಾರದು, ಮರಾಠಿಯಲ್ಲಿ ಶತಪೌಲಿ ಎನ್ನುವರು. ಅಂದರೆ ಭೋಜನಾನಂತರ ಶರೀರಕ್ಕೆ ಆಯಾಸವಾಗದ ಹಾಗೆ ನೂರಾರು ಹೆಜ್ಜೆ ನಡೆದಾಡುವದು. ನಂತರ ಒಲೆಯ ಮುಂದೆ ಕುಳಿತು ಕೈಗಳನ್ನು ಸ್ವಲ್ಪ ಬೆಚ್ಚಗೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಯಾರ ಮನೆಯಲ್ಲಿಯೂ ಕಟ್ಟಿಗೆ, ಬೆರಣಿ ಹಾಗೂ ಇದ್ದಿಲು ಉಪಯೋಗಿಸಿ ಅಡುಗೆ ಮಾಡುತ್ತಿಲ್ಲ. ಆದ್ದರಿಂದ ಇದು ಸಾಧ್ಯವಾಗುತ್ತಿಲ್ಲ. ಗಂಡ ಭುಜವ ಮೇಲ್ಮಾಡಿ ದಲ್ಲಿ ಮಲಗುವದು. ಇದು ವೈಜ್ಞಾನಿಕವಾಗಿಯೂ ಅಷ್ಟೇ ಸತ್ಯವಾಗಿದೆ. ಈ ಭಂಗಿಯಲ್ಲಿ ಮಲಗಿದರೆ ಪಚನಕ್ರಿಯೆಯು ಸರಾಗವಾಗಿ ನಡೆಯುವದು. ಮಲಬದ್ಧತೆಯು ನಿವಾರಣೆಯಾಗುವದು. ಈ ಮೇಲಿನ ಸರ್ವಜ್ಞನ ವಚನದಿಂದ ಅರ್ಥೈಸುವದೇನೆಂದರೆ ಅಯುರ್ವೇದ ವಿಜ್ಞಾನ ಮತ್ತು ಅದರ ಮಹತ್ವವನ್ನು ತಮ್ಮ ವಚನಗಳ ಮೂಲಕ ಜನಸಾಮಾನ್ಯರಿಗೆ ತಲುಪುವ ಹಾಗೆ ಹೇಳಿದ್ದಾರೆ. ಹೀಗೆ ಹಲವಾರು ನಮ್ಮ ವಚನಕಾರರು ತಮ್ಮ ತಮ್ಮ ವಚನಗಳಲ್ಲಿ ಆಹಾರ, ನಿದ್ರಾ, ಬ್ರಹ್ಮಚರ್ಯಗಳ ಬಗ್ಗೆ ಉಲ್ಲೇಖಿಸಿದ್ದಾರೆ.
• ಆಹಾರವನ್ನು ಔಷಧಿಯಂತೆ ಸೇವಿಸುವದೂ ಒಂದು ವೈಜ್ಞಾನಿಕ ವಿಧಾನವೇ ಸರಿ – ಆಯಾ ರೋಗಗಳಿಗನುಸಾರ, ರೋಗಿಗಳನುಸಾರ.• ಆಯುರ್ವೇದದಲ್ಲಿ ಉಲ್ಲೇಖಿಸಿದ ಹಾಗೆ
ಮಂಡ, ಪೇಯಾ, ವಿಲೇಪಿ, ಯವಾಗೂ ಕೃಷರಾ, ಯೂಷ ಮುಂತಾದ ಪಥ್ಯ ಆಹಾರ ತಯಾರಿಕಾ ವಿಧಾನಗಳನ್ನು ಹಾಗೂ ಅವನ್ನು ಯಾವ ಯಾವ ಸಂದರ್ಭಗಳಲ್ಲಿ ಹೇಗೆ ಸೇವನೆ ಮಾಡಬೇಕು. ಮತ್ತು ಈ ಪಥ್ಯಕರ ಆಹಾರ ಸೇವನೆಯಿಂದ ಶರೀರಕ್ಕೆ ಉಂಟಾಗುವ ಲಾಭಗಳ ಬಗ್ಗೆ ತಿಳಿಸಲಾಗಿದೆ. ಇನ್ನು ಸರಳ ಭಾಷೆಯಲ್ಲಿ ವಿವರಿಸಬೇಕೆಂದರೆ ಮನೆಗಳಲ್ಲಿ ತಲೆತಲಾಂತರದಿಂದ ತಯಾರಿಸಿಕೊಂಡು ಬಂದ ಜೋಳದ ಗಂಜಿ, ಅಕ್ಕಿ ಗಂಜಿ, ನುಚ್ಚು, ಕಿಚಡಿ, ಅನ್ನ ಮುಂತಾದ ಭಕ್ಷ್ಯಗಳು, ಮಾಂಸ ಭಕ್ಷ್ಯಗಳು, ಪೇಯಗಳು, ವ್ಯಂಜನಗಳು ಮತ್ತು ವ್ಯಂಜನಗಳನ್ನು ತಯಾರಿಸುವಾಗ ಉಪಯೋಗಿಸುವ ಮಸಾಲೆ ಪದಾರ್ಥಗಳು, ಎಣ್ಣೆ, ಉಪ್ಪು, ಸಕ್ಕರೆ, ಬೆಲ್ಲ, ವಿವಿಧ ತರಕಾರಿಗಳು ದ್ವಿದಳ ಧಾನ್ಯಗಳು, ವಿವಿಧ ಹಣ್ಣುಗಳು ವಿವಿಧ ಉಪ್ಪಿನಕಾಯಿಗಳು ಎಲ್ಲವೂ ಔಷಧೀಯ ಗುಣಗಳನ್ನೇ ಹೊಂದಿವೆ.
ಅನ್ನದ ಮಹತ್ವ:
ತೈತ್ತಿರೀಯ ಉಪನಿಷತ್ತಿನಲ್ಲಿ ಅನ್ನದಿಂದಲೇ ಪ್ರಾಣಿಯ ಉತ್ಪತ್ತಿ, ಅನ್ನದಿಂದಲೇ ಶರೀರ ವೃದ್ಧಿಯಾಗುವದು.
ಯಥಾವಿಧಿ ಸೇವಿಸಿದ ಅನ್ನದಿಂದ ಶರೀರ ಸ್ವಾಸ್ಥ್ಯದಿಂದಿರುವದು ಹಾಗೂ ಧೀರ್ಘಾಯುಷ್ಯ ಪ್ರದವಾಗುವದು.
ಅನ್ನಂ ಬ್ರಹ್ಮೇತಿ ವ್ಯಜನಾತ್ – ಅಚಿದರೆ ಅನ್ನವು ಪರಬ್ರಹ್ಮ ಸ್ವರೂಪಿ, ವೈದ್ಯ ಚಾಣಕ್ಯನ ಪ್ರಕಾರ ಈ ಜಗತ್ತಿನಲ್ಲಿ ಮೂರೇ ಮೂರು ರತ್ನಗಳಿವೆ. ಅವು ಯಾವುವೆಂದರೆ ಅನ್ನ ಜಲ ಮತ್ತು ಸುಭಾಷಿತ, ಆದರೆ ಮೂರ್ಖರು ರತ್ನದ ಕಲ್ಲುಗಳನ್ನೇ ನಿಜವಾದ ರತ್ನಗಳೆಂದು ತಿಳಿದಿದ್ದಾರೆ.
ಆಕಳ ಹಾಲಿನ ಮಹತ್ವ:
ಎಲ್ಲಾ ತರಹದ ಹಾಲುಗಳಲ್ಲಿ ಆಕಳ ಹಾಲು ಶ್ರೇಷ್ಠವಾದುದು. ಅದು ಜೀವನೀಯ ಮತ್ತು ರಸಾಯನಗಳುಳ್ಳದ್ದಾಗಿದೆ. ಯಾರು ಆಕಳು ಹಾಲನ್ನು ಸೇವಿಸುವದಿಲ್ಲವೋ ಅವರು ಕೃಶ ಕಾಯದವರೂ, ನಿರ್ವೀರ್ಯರೂ, ದುರ್ಬಲರೂ ಹಾಗೂ ಕುರೂಪಿಗಳಾಗಿರುವರು.
ಇಂದ್ರದೇವನ ಪ್ರಕಾರ ಆಕಳ ಹಾಲು ಅಮೃತವೇ. ಯಾರು ಗೋದಾನವನ್ನು ಮಾಡುವರೋ ಅವರು ಅಮೃತವನ್ನೇ ದಾನ ಮಾಡಿದಂತೆ.
ಧಾರೋಷ್ಣ ಹಾಲು : ಅಂದರೆ ಆಕಳ ಹಾಲು ಕರೆಯುವ ಸಂದರ್ಭದಲ್ಲಿಯೇ ವಿಳಂಬ ಮಾಡದೇ ಸೇವಿಸುವದೇ ಧಾರೋಷ್ಣ ಹಾಲು.
ತಕ್ರದ (ಮಜ್ಜಿಗೆ) ಮಹತ್ವ:
ಯಾವ ರೀತಿ ದೇವತೆಗಳು ಅಮೃತವನ್ನು ಸೇವಿಸಿ ಅಮರರಾದರೋ ಅದೇ ರೀತಿ ಇಹಲೋಕದಲ್ಲಿ ತಕ್ರವನ್ನು ಸೇವಿಸುವದರಿಂದ ಅಮರರಾಗುತ್ತಾರೆ.
ಅಮೃತಂ ದುರ್ಲಭಂ ನೈರಾಂ, ದೇವಾನಾಮುದಕಂ ತಥಾ |
ಪಿತೃಣಾಂ ದುರ್ಲಭಂ ಪುತ್ರ ಸ್ತಕ್ರಂ ಶಕ್ರಸ್ಯ ದುರ್ಲಭಂ ||
ಇದರರ್ಥ : ಹೇಗೆ ಮನುಷ್ಯರಿಗೆ ಅಮೃತವು ದೇವತೆಗಳಿಗೆ ನೀರು, ತಂದೆಗೆ ಪುತ್ರನೂ ಹಾಗೂ
ಇಂದ್ರನಿಗೆ ತಕ್ರವೂ ದುರ್ಲಭವಾಗಿದೆ.ಅಲ್ಲದೇ- ಯಾವ ಮನೆಯಲ್ಲಿ ಮೊಸರು ಕಡೆದು ಮಜ್ಜಿಗೆ ಮಾಡುವ ಸಪ್ಪಳವೂ, ಚಿಕ್ಕ ಚಿಕ್ಕ ಮಕ್ಕಳ ಮನೆ ತುಂಬ ಓಡಾಡುವ ಸಪ್ಪಳವೂ ಮತ್ತು ಗುರುಗಳ, ಅತಿಥಿಗಳ ಆದರ ಸತ್ಕಾರವೂ ಇರುವದಿಲ್ಲವೋ ಅದು ಸ್ಮಶಾನಕ್ಕೆ ಸಮಾನ.
ಮಿತಾಹಾರ ಅಂದರೆ:
ಯಾವುದರ ಸೇವನೆಯಿಂದ ಶರೀರ ಮತ್ತು ಜೀವಾತ್ಮನು ತೃಪ್ತಿಯಾಗುವನೋ ಮತ್ತು ಜಠರದ ಒಂದು ನಾಲ್ಕಾಂಶ ಭಾಗವು ಖಾಲಿ ಇರುವದೋ ಮತ್ತು ಹಾಲು ಮೊಸರು, ಮಜ್ಜಿಗೆ, ತುಪ್ಪ ಇತ್ಯಾದಿಗಳಿಂದ ಕೂಡಿದ ಆಹಾರ.ಹಿತಕರವಾದ, ತನ್ನ ಹಸಿವಿಗೆ ತಕ್ಕಂತೆ ಮತ್ತು ಹಾಲು, ತುಪ್ಪಗಳಿಂದ ಕೂಡಿದ ಆಹಾರ ಸೇವನೆಯೂ ಕೂಡ ಒಂದು ತಪಸ್ಸು ಇದ್ದಂತೆ.
ಇನ್ನು ಆಹಾರವನ್ನು ಯಾವಾಗ ಮತ್ತು ಎಷ್ಟು ಹೊತ್ತು ಸೇವಿಸಬೇಕು ಎನ್ನವದೂ ಅಷ್ಟೇ ಮುಖ್ಯವಾಗಿದೆ. ಆಹಾರವನ್ನು ಬೆಳಗ್ಗೆ ಮತ್ತು ಸಾಯಂಕಾಲ ಅಂದರೆ ದಿವಸದಲ್ಲಿ ಎರಡೇ ಹೊತ್ತು ಸೇವಿಸಬೇಕು ಹಾಗೂ ಇದುವೇ ವೇದ ಸಮ್ಮತವಾಗಿದೆ. ಅಲ್ಲದೇ ಭೋಜನಾಂತರ ತಕ್ಷಣವೇ ವ್ಯಾಯಾಮ ಮಾಡುವದಾಗಲೀ, ಮೈಥುನದಲ್ಲಿ ತೊಡಗುವದಾಗಲೀ, ಓದುವದಾಗಲಿ ಅತಿಯಾಗಿ ಜಲಪಾನ ಮಾಡುವದಾಗಲೀ, ಹಾಡುವದಾಗಲೀ ಅಥವಾ ಮಲ್ಲಯುದ್ಧ ಮಾಡುವದಾಗಲೀ ಮಾಡಬಾರದು. ಕನಿಷ್ಠ ಪಕ್ಷ ಭೋಜನ ಆದ ಮೇಲೆ ಒಂದು ಗಂಟೆ ಒಳಗೆ ಮೇಲೆ ವಿವರಿಸಿದವುಗಳನ್ನು ಮಾಡಬಾರದು.
ಔಷಧ:
ಔಷಧ, ಔಷಧಿ, ಪ್ರಾಯಶ್ಚಿತ್, ಪ್ರಶಮನ, ಬೇಷಜ, ಮುಂತಾದ ಅನ್ವರ್ಥಗಳು ಔಷಧಿಗೆ ಇವೆ. ಅಂದರೆ ಯಾವುದು ರೋಗವನ್ನು ಸಂಪೂರ್ಣ ಹೋಗಲಾಡಿಸಿ ಪುನಃ ಆರೋಗ್ಯವನ್ನು ದೊರಕಿಸಿಕೊಡುವದೋ ಅದೇ ಔಷಧಿ.
ಔಷಧಿ ಎಂದರೆ – ಜನಸಾಮಾನ್ಯರು ತಿಳಿದ ಹಾಗೆ ಔಷಧಿ ಅಂಗಡಿಯಲ್ಲಿ ಕೊಂಡುಕೊಳ್ಳುವ ಮಾತ್ರೆ/ಗುಳಿಗೆ ಔಷಧಿ ಇವೇ ಮೊದಲಾದವುಗಳಲ್ಲದೇ ಔಷಧಿಗೆ ಒಂದು ದೊಡ್ಡ ಅರ್ಥವನ್ನು ಕೊಡಬಹುದಾಗಿದೆ.
ಔಷಧಿ: ಭಾರತೀಯ ಆಯುರ್ವೇದ ಪರಂಪರೆಯ ಆರ್ಷ ಗ್ರಂಥಗಳಾದ ಚರಕ ಸಂಹಿತೆ, ಸುಪ್ರಿತ ಸಂಹಿತೆ, ಅಷ್ಟಾಂಗ ಸಂಗ್ರಹ ಮುಂತಾದವುಗಳಲ್ಲಿ ಔಷಧಿ ಅಂದರೆ ಏನು? ಅವುಗಳ ಮೂಲ ಏನು? ಔಷಧಿಯ ತಯಾರಿಕಾ ವಿಧಾನಗಳೇನು? ಅವನ್ನು ಯಾವ ಯಾವ ಸ್ವರೂಪದಲ್ಲಿ ತಯಾರಿಸಬೇಕು ಎಂಬಿತ್ಯಾದಿ ಅಂಶಗಳನ್ನು ವಿವರವಾಗಿ, ಸ್ಪಷ್ಟವಾಗಿ ವಿವರಿಸಲಾಗಿದೆ.
ಆಹಾರವೇ ಔಷಧಿ:
ಪ್ರಾಣ: ಪ್ರಾಣಬೃತಾಂ ಅನ್ನಂ ತದ್‍ಯುಕ್ತ್ಯಾ ನಿವಂತಿ ಅಸೂನ್|
ವಿಷಂ ಪ್ರಾಣಹರಂ ತಚ್ಛ್ ಯುಕ್ತಿಯುಕ್ತಂ ರಸಾಯನಂ|| (ಚರಕ)
ಆಹಾರವು ಸಹ ಜೀವರಾಶಿಗಳಿಗೆ ಪ್ರಾಣವೇ ಸರಿ. ಅದನ್ನು ಯುಕ್ತಿಪೂರ್ವಕವಾಗಿ ಸೇವಿಸಿದರೆ ಅದು ಶರೀರಕ್ಕೆ ರಸಾಯನ ಇಲ್ಲದಿದ್ದರೆ ಅದೇ ವಿಷಕ್ಕೆ ಸಮಾನವಾಗಿ ಪ್ರಾಣಹರಣವನ್ನುಂಟು ಮಾಡುವದು.
ಇದರರ್ಥ ಮನುಷ್ಯನು ತನ್ನ ವಯೋಬಲಕ್ಕನುಗುಣವಾಗಿ ತನ್ನ ಜಠರಾಗ್ನಿ ಬಲಕ್ಕನುಗುಣವಾಗಿ ಶರೀರಕ್ಕೆ ಸಾತ್ಮ್ಯಕ್ಕನುಗುಣವಾಗಿ ಆಹಾರವನ್ನು ಸೇವಿಸಬೇಕು.
ಏಕರಸಾಭ್ಯಾನೋ ದುರ್ಬಲ್ಯಕರಾಣಾಂ|| (ಚರಕ)
ಸರ್ವ ರಸಾಭ್ಯುಸೋ ಬಲಕರಾಣಾಂ||
ಇದರರ್ಥ-
ಸೇವಿಸುವ ಆಹಾರವು ಮಧುರಾದಿ ಷಡ್ರಸಗಳಿಂದ ಯುಕ್ತವಾಗಿರಬೇಕು. ಹಾಗೆಯೇ ಆಹಾರದ ವರ್ಣ, ಗಂಧ, ರುಚಿ ಆದರ ಆಕಾರ ಮನಸ್ಸಿಗೆ ಮುದ ನೀಡುವಂತಿರಬೇಕು. ಆಹಾರ ಸೇವನೆಯಿಂದ ಇಂದ್ರಿಯಗಳು ಪ್ರಸನ್ನವಾಗಿರಬೇಕು ಹಾಗೂ ಆರೋಗ್ಯಕ್ಕೆ ಹಿತಕರವಾಗಿರಬೇಕು.
ಆಹಾರವು ಮೂರು ವಿಧವಾಗಿದೆ
ಸಾತ್ವಿಕ ಆಹಾರ:- ಸಾತ್ವಿಕ ಆಹಾರ ಸೇವನೆಯಿಂದ ಆಯುಷ್ಯ, ಮನೋಬಲ, ಶಾರೀರಿಕಬಲ, ಸ್ವಾಸ್ತ್ಯವನ್ನು ವೃದ್ಧಿಸುವಂಥಾದ್ದು, ಮನಕ್ಕೆ ಆಹ್ಲಾದವನ್ನುಂಟು ಮಾಡುವದು. ಮತ್ತು ಘೃತಾದಿ ಸ್ನಿಗ್ಧ ಗುಣಗಳಿಂದ ಕೂಡಿದ ಆಹಾರ, ಹಾಗೂ ಸಾತ್ವಿಕ ಗುಣವುಳ್ಳವರು ಭೋಜಿಯಾಗಿರುತ್ತಾರೆ.
ರಾಜಸು ಆಹಾರ: ಯಾವ ಆಹಾರದ ಸೇವನೆಯಿಂದ ಎದೆ ಉರಿ, ಹೊಟ್ಟೆ ಉರಿ ಕಂಡುಬರುವದೋ, ಆಹಾರವು ಹುಳಿ, ಉಪ್ಪು, ಖಾರ ಕ್ಷಾರಯುಕ್ತವಾಗಿರುವದೋ, ದುಃಖ ಶೋಕ ಮತ್ತು ರೋಗವನ್ನುಂಟು ಮಾಡುವದೋ ಇಂಥ ಆಹಾರವು ರಾಜಸ ಪ್ರಕೃತಿಯವರಿಗೆ ಹೆಚ್ಚು ಪ್ರೀಯವಾಗಿರುವದು. ರಾಜಸ ಪ್ರಕೃತಿಯುಳ್ಳವರು ಪೂರ್ಣ ಭೋಜಿಯಾಗಿರುತ್ತಾರೆ.
ತಾಮಸಿಕ ಆಹಾರ:-
ಆಹಾರ ತಯಾರಿಸಿದ ಎಷ್ಟೋ ಗಂಟೆಗಳ ಮೇಲೆ ಸೇವಿಸುವದು, ಅಥವಾ ರಾತ್ರಿ ಮಾಡಿದ ಅಡುಗೆ ಬೆಳಿಗ್ಗೆ ಸೇವಿಸುವದು, ಬೇರೊಬ್ಬರ ಎಂಜಲು ಹಾಗೂ ಶರೀರದಲ್ಲಿ ತಾಮಸೀ ಗುಣ ಉತ್ಪನ್ನ ಮಾಡುವದು ತಾಮಸಿಕ ಆಹಾರವಾಗದ್ದು, ತಾಮಸ ಪ್ರಕೃತಿಯುಳ್ಳವರು ಅತೀ ಭೋಜಿಯಾಗಿರುತ್ತಾರೆ.
ವಿಷ್ಣು ಪುರಾಣದಲ್ಲಿ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವದನ್ನು ವಿವರಿಸಲಾಗಿದೆ:
ಜಠರಂ ಪೂರಯೇದರ್ಧಂ ಅನ್ನೈರ್ಭಾಗಂ ಜಲೇನ ಜೆ|
ವಾಯೋಃ ಸಂಚಣಾರ್ಥಆಯ ಚತುರ್ಥಂ ಅವಶೇಷಯೇತ್||
ಅಂದರೆ –
ಜಠರದ ಅರ್ಥ ಭಾಗ ಆಹಾರದಿಂದಲೂ, ಆಹಾರದ ಅರ್ಧಭಾಗ ನೀರಿನಿಂದಲೂ ಹಾಗೂ ನೀರಿನ ಅಂಗವಾದ ವಾಯುವಿನಿಂದಲೂ ಕೂಡಿದ್ದರೆ ಔಷಧಿಯೇ ಆಹಾರ:
ಚರಕಾಚಾರ್ಯರು ಹೇಳಿದ ಹಾಗೆ ಜಗತ್ತಿನಲ್ಲಿ ದೊರೆಯುವ ಎಲ್ಲಾ ವನಸ್ಪತಿಗಳಲ್ಲಿ, ಪಶು ಪಕ್ಷಿಗಳಲ್ಲಿ, ಜಲಚರ ಪ್ರಾಣಿಗಳಲ್ಲಿ, ಭೂಗರ್ಭದಲ್ಲಿ ಸ್ಥಿತಿ ಮೂಲ ವಸ್ತುಗಳಲ್ಲಿ ಔಷಧಿಯ ಗುಣಗಳಿವೆ. ಇವುಗಳನ್ನು ಹೇಗೆ ಬಳಸಬೇಕು. ಹೇಗೆ ಔಷಧಿಯಾಗಿ ತಯಾರಿಸಬೇಕು ಎನ್ನುವದು ಬಹಳ ಮುಖ್ಯವಾಗಿದೆ.
• ಆಹಾರದಲ್ಲಿ ಬಳಸುವ ಎಲ್ಲಾ ವಸ್ತುಗಳು ಒಂದಿಲ್ಲಾ ಒಂದು ಔಷಧಿಯ ಗುಣಗಳನ್ನು ಹೊಂದಿರುತ್ತವೆ.
• ಉದಾಹರಣೆಗೆ – ಆಹಾರದಲ್ಲಿ ಬಳಸಲಾಗುವ ಶುಂಠಿ, ಕಾಳುಮೆಣಸು ಸಾಸಿವೆ, ಜೀರಿಗೆ, ಅಜವಾನ, ಲವಂಗ, ಏಲಕ್ಕಿ, ಕಲ್ಲು ಸಕ್ಕರೆ, ಬೆಲ್ಲ ವಿವಿಧ ತರಕಾರಿಗಳು ವಿವಿಧ ಹಣ್ಣುಗಳು.
ಅಲ್ಲದೇ – ಕೆಲವು ಔಷಧೀಯ ಪೇಯಗಳು, ಪಾನಕಗಳು, ಮಾಂಸರಸಗಳನ್ನು ಸ್ವಲ್ಪದರಲ್ಲೇ ವಿವರಿಸಲಾಗಿದೆ.
ಉದಾಹರಣೆಗೆ – ಅರ್ಜುನ ಕ್ಷೀರಪಾಕ
ಖರ್ಜೂರಾದಿ ಮರಿಫ.
ಚಿಂಚಾ ಪಾನಕ
ವಿವಿಧ ಔಷಧಿಯುಕ್ತ ತಕ್ರಗಳು
ಔಷಧಿಯುಕ್ತ ಮಾಂಸಭಕ್ಷಗಳು
ಇವೆಲ್ಲವುಗಳು ಔಷಧಿಯುಕ್ತ ಆಹಾರಗಳೇ,
ಇವೆಲ್ಲವುಗಳ ಆಧಾರದ ಮೇಲೆ ಈ ವೈಜ್ಞಾನಿಕ ಲೇಖನದ ಶೀರ್ಷಿಕೆಗೆ ಒಂದು ವೈಜ್ಞಾನಿಕ ಪರಿಕಲ್ಪನೆಯನ್ನು ನೀಡುವ ಪ್ರಯತ್ನ ಲೇಖಕರದ್ದಾಗಿದೆ.