ಅಖಿಲ ಭಾರತ ವೀರಶೈವ ಮಹಾಸಭಾಧಿವೇಶನ ಮಹಿಳಾ ಪರಿಷತ್ತಿನಲ್ಲಿ ಶ್ರೀಮತಿ ಜಯದೇವಿ ಲಿಗಾಡೆಯವರ ಭಾಷಣ
ಸ್ಥಳ :ಕುಮಾರ ನಗರ ದಿ. ೨೨-೨-೧೯೬೦
ಮಹಿಳೆಯರ ಉನ್ನತಿಗಾಗಿ ಶರಣರು ಮಹೋನ್ನತ ಕಾರ್ಯವನ್ನು ಮಾಡಿದ್ದಾರೆ
ಅಖಿಲ ಭಾರತ ವೀರಶೈವ ಮಹಾಸಭಾಧಿವೇಶನ ಮಹಿಳಾ ಪರಿಷತ್ತಿನಲ್ಲಿ ಶ್ರೀಮತಿ ಜಯದೇವಿ ಲಿಗಾಡೆಯವರ ಭಾಷಣ
ಸ್ಥಳ :ಕುಮಾರ ನಗರ ದಿ. ೨೨-೨-೧೯೬೦
ಸಂಗ್ರಹ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
ಹೆಣ್ಣು ಅಬಲೆಯೆಂದು ಕಡೆಗಣಿಸಿದ ಒಂದು ಕಾಲವೂ ಇದ್ದಿತು. ಆದರೆ ದಿನಗಳೆದಂತೆ ಬದಲಾದ ಪರಿಸ್ಥಿತಿಯೊಂದಿಗೆ ಹೆಣ್ಣಿನ ಆ ಸ್ಥಿತಿ ನಿವಾರಣೆಯಾಗುತ್ತ ಬಂದಿತು.
ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸಾಮಾಜಿಕದಲ್ಲಿ ಧಾರ್ಮಿಕದಲ್ಲಿ ಆರ್ಥಿಕದಲ್ಲಿ ಯಾವ ಅಧಿಕಾರವೂ ಇರಲಿಲ್ಲ. ಮನ್ನಣೆಯೂ ಇರಲಿಲ್ಲ. ಹೆಣ್ಣು ಶೂದ್ರಳು ಮೋಕ್ಷಕ್ಕೆ ಅರ್ಹಳಲ್ಲ ಅವಳಿಗೆ ಆತ್ಮವಿಲ್ಲ ಎಂದುಸಾರಿದರು ಕೆಲವರು. ಅಂಥ ಧರ್ಮದ ದಾರಿಯಲ್ಲಿ ಕುಗ್ಗುತ್ತ ಮುಗ್ಗುತ್ತ ಸಾವಿರ ನೋವುಗಳನ್ನು ತಾಳಿ ನಡೆದು ಬಂದಿರಲು ಹೆಣ್ಣು ಜೀವನ ತನ್ನ ಗೋಳನ್ನು ಹೇಳಿಕೊಳ್ಳಲು ಅದಕ್ಕೆ ಇರಲಿಲ್ಲ ಕೇಳುವ ಕಿವಿಯೂ ಇರಲಿಲ್ಲ. ಕಣ್ಣಿದ್ದು ಕುರುಡರಾದವರಿಗೆ ಅವರ ಸಾವು ನೋವುಗಳು ಕಾಣಲಿಲ್ಲ. ಹೀಗೆ ಹೆಣ್ಣಿನ ಕೊರಗು ಎಷ್ಟು? ಮರಗು ಎಷ್ಟು ಎಂದು ಲೆಕ್ಕಹಾಕಲು ಬರುವಂತಿಲ್ಲ. ತಿಂದ ಬೇನೆ, ನೊಂದ ನೋವು ಹೆತ್ತವರಿಗಲ್ಲದೆ ಹೊತ್ತವರಿಗಲ್ಲದೆ ಏನು ಗೊತ್ತು ? ಹೆಣ್ಣು ಮಕ್ಕಳು ಕರುಣದಿಂದ ಕರೆದದ್ದು, ಕರುಳು ಹರಿದು ಕೂಗಿದ್ದು ಮೊದಲು ಕೇಳಿಸಿತು ಶರಣರಿಗೆ.
ಮಹಿಳೆ ಪಾವನಳಾದಳು
12 ನೆಯ ಶತಮಾನದಲ್ಲಿ ಎಲ್ಲಾ ವರ್ಗದ ಮಹಿಳೆಯರು ಸಮಾನ ಗೌರವವನ್ನು ಸ್ವೀಕರಿಸಿದರು. ಅವರು ಸ್ವತಃ ಕಾಯಕವನ್ನು ಮಾಡಿ, ವಚನೆ ರಚನೆಯನ್ನು ಮಾಡಿರುವರು. ಎಲ್ಲಾ ಶರಣರು ಅಷ್ಟೇ ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು. ಹೆಣ್ಣು ಮಾಯೆಯಲ್ಲ ಅವಳು ಶಕ್ತಿ ಸ್ವರೂಪಗಳು. ಹೆಣ್ಣು ಹೆಣ್ಣಲ್ಲಾ ಹೆಣ್ಣು ರಕ್ಕಸಿಯಲ್ಲಾ ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ ಎಂದು ಅನ್ನಿಸಿಕೊಳ್ಳುವಂತಾಯಿತು..
ಬೇಕಾಗುವದಕ್ಕಿಂತಲೂ ಹೆಚ್ಚು ಸಂಗ್ರಹಿಸಬಾರದು. ಎಂಬ ಸಮತ ವಾದದ ತತ್ವವನ್ನು ಅಂದು ಬೀರಿದಳು ಲಕ್ಕಮ್ಮ.
ಕದರೀಯ ರೆಮ್ಮವ್ವ ಚದುರಿ ನಿನ್ನ ರಾಟೀಯ
ಸದರೀಗ ತಂದೆ ಬಾಪೂಜಿ
ಸದರೀಗ ತಂದ ಬಾಪೂಜಿ ತಾನೂತ
ಮಾದರಿ ಮಾಡ್ಯಾನ ಜಗದಾಗ
( ತಾಯಿಯ ಪದಗಳು )
ಶರಣರ ಮಹತ್ಕಾರ್ಯ
ರಾಟಿಯ ಕಾಯಕದ ಮಹತ್ವವನ್ನು ಮೊದಲು ತೋರಿಸಿದವಳು ಕರಿಯ ರೆಮ್ಮವ್ವ. ಹೀಗೆ ಒಬ್ಬರೆ ಇಬ್ಬರೆ? ಅನೇಕ ಶಿವಶರಣೆಯರು ತಮ್ಮ ತಮ್ಮ ಕಾಯಕ ದಲ್ಲಿ ನಿರತರಾದರು. ಜಗತ್ತಿನಲ್ಲಿ ಶ್ರೇಷ್ಠವೆನಿಸಿಕೊಂಡ ತತ್ವ ಅನುಭವಗಳನ್ನು ಆಚರಿಸಿ ಜನರಿಗೆ ದಾರಿ ತೋರಿದರು. ಧರ್ಮದಲ್ಲಿ ಸಮಾಜದಲ್ಲಿ ಸ್ತ್ರೀಯರು ಸಮಾನ ರಾಗಿ ಅನುಭಾವ, ಸತ್ಕ್ರಿಯೆ, ಆಚಾರ ವಿಚಾರಗಳಲ್ಲಿ ಕಡಿಮೆಯವರಲ್ಲ ಎಂಬುದನ್ನು ಸಿದ್ಧಪಡಿಸಿದರು. ಅಂಥ ಅನುವಿನ ತಿಳಿಬೆಳಕಿನಲ್ಲಿ ಸ್ತ್ರೀಯರನ್ನು ಸಲಹಿದರು ಬೆಳಸಿದರು, ನಮ್ಮ ಶರಣರು. ಆ ಪರಂಪರೆಯಲ್ಲಿ ನಾವು ಬೆಳೆದಿದ್ದೇವೆ
ಸಮಾಜ ದೃಷ್ಟಿ ಬದಲಾಗಲಿ
ಆ ಹಿರಿಯ ತಾಯಂದಿರು ಗಳಿಸಿದ ಅನುಭಾವದಾಗರವನ್ನು ಉಳಿಸಿಕೊಂಡು, ಬಳಿಸಿಕೊಂಡು ಹೇಗೆ ಬೆಳಸಿಕೊಂಡು ಹೋಗಬೇಕು, ಎಂಬುವದೇ ನಮ್ಮ ಮೇಲಿರುವ ಇಂದಿನ ಹೊಣೆ; ಅಷ್ಟೆ ಸಮಾಜದ ಮೇಲೂ ಇದೆ. ಏಕೆಂದರೆ ಹೆಣ್ಣು ಮಕ್ಕಳ ಬಗೆಗೆ ಇರುವ ಸಮಾಜದ ದೃಷ್ಟಿಕೋನವು ಬದಲಾಗದೆ ಸ್ತ್ರೀಯರ ಉದ್ಧಾರವಿಲ್ಲ. ಸ್ತ್ರೀಯರ ಉದ್ಧಾರವಿಲ್ಲದೆ ಸಮಾಜಕ್ಕೆ ಪ್ರಗತಿ ಇಲ್ಲ.
ಸರಿಯಾದ ಶಿಕ್ಷಣ ಅವಶ್ಯ
ಸ್ತ್ರೀಯರಿಗೆ ಸರಿಯಾದ ಶಿಕ್ಷಣ ಸಿಗಬೇಕು. ಬರೀ ಅಕ್ಷರ ಜ್ಞಾನವಿದ್ದರೆ ಇಲ್ಲವೆ ಒಂದೆರಡು ಭಾಷೆಯನ್ನು ನುಡಿಯಲು ಕಲಿತರೆ ಸಾಲದು. ಇಂದಿನ ಉಚ್ಚ ಶಿಕ್ಷಣವು ಸ್ತ್ರೀಯರಿಗೆ ಎಷ್ಟು ಪ್ರಯೋಜನಕಾರಿಯಾಗಿದೆ, ಆಗಬಲ್ಲುದು? ಎಂಬುದನ್ನು ವಿಚಾರ ಮಾಡಬೇಕಾದುದು. ಗೃಹವಿಜ್ಞಾನಕ್ಕೂ ಸ್ತ್ರೀಯರ ಜೀವನಕ್ಕೂ ನಿಕಟ ಸಂಬಂಧ ಅಂಥ ಶಿಕ್ಷಣ ಅವರಿಗೆ ಸಿಗುವಂತೆ ಆಗಬೇಕು.
ಕಾಯದೆ ಕಾರ್ಯವಾಗಲಿ
`ಆರ್ಥಿಕದಲ್ಲಿ ಪಾಲು ಸಿಗಬೇಕು. ಎಂದು ಸರಕಾರ ಕಾಯ್ದೆ ಮಾಡಿದರೂ ತಂದೆ ತಾಯಿಗಳು ಅಣ್ಣ ತಮ್ಮಂದಿರು ಸಹಕರಿಸದ ಏನಃ ಕಾಯ್ದೆಯು ಕಾವ್ಯರೂಪದಲ್ಲಿ ಬರುವದು ದುಸ್ತರವಾದದು. ಸ್ತ್ರೀಯರಿಗೆ ಆರ್ಥಿಕದಲ್ಲಿ ಕಾಯ್ದೆಯು ಬೆಂಬಲ ವಿದ್ದರೂ ಕೆಲ ವಿಧವೆಯರ ಗೋಳು ಹೇಳತೀರದು. ಅಂಥವರ ಗೋಳಿನ ಬಾಳನ್ನು ಕಂಡಿದ್ದೇನೆ. ಅಂಥ ಕೆಲವರಿಗೆ ಪಾಲವು ಬೇಕಿಲ್ಲ ಹೊಟ್ಟೆ ತುಂಬ ಅನ್ನ, ವರುಷಕ್ಕೆ ಎರಡು ಸೀರೆ ಕೊಟ್ಟರೆ ಸಾಕಾಗಿದೆ
ಗಂಡು ಹೆಣ್ಣಿನ ಜೀವನ
ಹೆಣ್ಣು ಗಂಡಿನ ಜೀವನ ಸುಗಮವೂ ಸುಂದರವೂ ಆಗಬೇಕಾದರೆ, ಪರಸ್ಪರರಲ್ಲಿ ತಿಳವಳಿಕೆ ಬೆಳೆಯಬೇಕು. ಸ್ತ್ರೀಯು ಪುರುಷನ ಪ್ರತಿಸ್ಪರ್ಧಿಯಲ್ಲಿ ಪೋಷಕಳು. ಬಾಪೂಜಿಯವರ ಮಾತಿನಲ್ಲಿ ಹೇಳಬೇಕಾದರೆ, ಸ್ತ್ರೀ ಪುರುಷರಿಬ್ಬರು ಪರಸ್ಪರ ಪಾಲಕರು ಚಾಲಕರು ಮೂಲಕರು ಎಂದು ಹೇಳಬಹುದು.
ಇಂದಿನ ಸ್ತ್ರೀಯರು ಹೆಚ್ಚಾಗಿ ವಚನ ವಾಜ್ಮಯವನ್ನು ಜಾನಪದಗಳನ್ನು ಓದಿ ತಿಳಿದು ಅಳವಡಿಸಿಕೊಳ್ಳಬೇಕು. ಅವುಗಳನ್ನು ಸಂಗ್ರಹಿಸುವ, ಹೊಸದಾಗಿ ಬರೆಯುವ ಕಾರ್ಯವನ್ನು ಮುನ್ನಡಿಸಬೇಕು. ಹರಟೆ ಪರನಿಂದೆಗಳಲ್ಲಿ ಕಾಲ ಕಳೆಯದೆ ಯಾವದಾದರೂ ಒಂದು ಉತ್ತಮ ಸಾಧನೆಯಲ್ಲಿ ಮನ ತೊಡಗಿಸ ಬೇಕು. ರಾಟಿಯ ಕಾಯಕವನ್ನು ಮತ್ತೆ ಅಳವಡಿಸಬೇಕು.
ಮಾನವೀಯ ಜೀವನದ ಶಿಖರದಮೇಲೆ ಅಹಿಂಸಾಮಯ ಪವಿತ್ರ ಪತಾಕೆ ಯನ್ನು ಹಾರಾಡಿಸುವ ನಿಜವಾದ ಶ್ರೇಯಸ್ಸನ್ನು ಸ್ತ್ರೀಯು ಕೈವಶಮಾಡಿಕೊಳ್ಳಬೇಕು. ವಿಶ್ವಶಾಂತಿಯ ನಿಜವಾದ ವಿಧಾನವು ಸ್ತ್ರೀಯರಲ್ಲಿದೆ. ಹೀಗಿದ್ದರೂ, ವಿಶ್ವ ಶಾಂತಿಗಾಗಿ ಸ್ತ್ರೀಯರು ಏನೂ ಮಾಡಲಿಲ್ಲ, ಇದರ ಬಗ್ಗೆ ನನಗೆ ನಾಚಿಕೆಯಾಗಿದೆ ಆದರ್ಶ ಪ್ರೇರಿತರಾಗಿ, ಅಹಿಂಸೆಯ ದಾರಿಯಲ್ಲಿ ಮುನ್ನುಗ್ಗುವ ಶಕ್ತಿಯಲ್ಲಿ ಪುರುಷರಿಗಿಂತಲೂ, ಸ್ತ್ರೀಯು ಅಧಿಕ ಗುಣಸಂಪನ್ನಳಾಗಿದ್ದಾಳೆ. ಇಂಥ ಶಕ್ತಿಯನ್ನು ಶರಣರು ಮತ್ತೆ ಮತ್ತೆ ಕರುಣಿಸಲಿ