ಡಾ. ಸ.ಜ.ನಾಗಲೋಟಮಠ
ವೀರಶೈವ ಧರ್ಮದಲ್ಲಿ ಇಷ್ಟಲಿಂಗ, ಅಷ್ಟಾವರಣ, ಪಂಚಾಚಾರ ಹಾಗು ಷಟ್‌ಸ್ಥಲಗಳು ಬಹು ಮಹತ್ವದವು, ಪಾದೋದಕವು ಅಷ್ಟಾವರಣದಲ್ಲಿಯ ಒಂದು ಆವರಣ, ಪಾದೋದಕ ಶಬ್ದದ ಸರಳಾರ್ಥವೆಂದರೆ ಪಾದಗಳನ್ನು ತೊಳೆದ ನೀರು,ಇತ್ತೀಚೆಗೆ ಪಾದೋದಕವು ಗೊಂದಲವನ್ನು ಎಬ್ಬಿಸಿದೆ. ಹಲವಾರು ಜನ ಶರಣರು,ಸ್ವಾಮಿಗಳು, ಸ್ವಾಮಿನಿಯರು, ಜಗದ್ಗುರು ಎಂದು ಕರೆಸಿಕೊಳ್ಳುವವರು ಪಾದೋದಕದ ಬಗ್ಗೆ ಅಪಪ್ರಚಾರ ಮಾಡುತ್ತಿರುವರು. ಇವರೊಡನೆ ಕೆಲವು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೂ ಸೇರಿಕೊಂಡಿದ್ದಾರೆ. ಅವರೂ ಸಹ ಬೇರೆಯವರನ್ನು ತೆಗಳುವ ಪಾಂಡಿತ್ಯ ಪ್ರದರ್ಶಿಸುವರು. ಪಾದೋದಕವು ಅಷ್ಟಾವರಣದ ಒಂದು ಆವರಣ. ವೀರಶೈವ ಧರ್ಮ ಸ್ಥಾಪಕರು ಇದಕ್ಕೆ ಮಹತ್ವ ಕೊಟ್ಟು ಇದನ್ನು ಅಷ್ಟಾವರಣಗಳಲ್ಲಿ ಸೇರಿಸಿಕೊಂಡರು. ಶರಣರು ಇದನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರು. ಆದರೆ ಕೆಲವು ಶರಣರು ಹಾಗು ವೀರಶೈವರು ಇದನ್ನು ವಿರೋಧಿಸುತ್ತಿರಲೇಬೇಕು. ಆದ್ದರಿಂದ ಚನ್ನಬಸವಣ್ಣನವರು ಈ ವಚನ ರಚಿಸಿರಲು ಸಾಕು.
ಗುರುಜಂಗಮದ ಪಾದ ತೀರ್ಥವು ಲಿಂಗಾಭಿಷೇಕಕ್ಕೆ ಸಲ್ಲದೆಂಬ
ಮಂದಮತಿಗಳು ನೀವು ಕೇಳಿರೋ
ಮಂತ್ರ ಸಂಸ್ಕಾರದಿಂದ ಜಡಶಿಲೆ ಲಿಂಗವಾಗುತಿರ್ಪುದೆಂಬಿರಿ
ಆ ಮಂತ್ರ ಸಂಸ್ಕಾರದಿಂದ ಶಿವಾಂಶಿಕನಾದ ಮನುಷ್ಯನು
ಶಿವಜ್ಞಾನ ಸಂಪನ್ನನಾಗಿ ಗುರುವಾಗನೆ?
ಮತ್ತೆ ಜಂಗಮವಾಗನೆ? ಹೇಳಿರೊ
ಸಂಸ್ಕಾರದಿಂದ ಲಿಂಗಕ್ಕೆ ಸಂಸ್ಕಾರವಿಲ್ಲದ ಮನುಷ್ಯನ ಪಾದಜಲವು
ಸಲ್ಲದೆಂದಡೆ ಅದು ಸಹಜವೆಂಬೆನು
ಸಂಸ್ಕಾರ ವಿಶಿಷ್ಟವಾದ ಲಿಂಗಕ್ಕೆಯೂ ಜಂಗಮಕ್ಕೆಯೂ
ಅಭೇದವೆಂಬುದು ಆಗಮೋಕ್ತಿ-
“ಪದೋದಾದಭಿ ಷೇಚನಂ’ ಎಂದು ಸಾರುತಿಹುದು ಕಾಣಿರೋ
ಇದು ಕಾರಣ, ಅಂತಪ್ಪ ಗುರುಜಂಗಮದ ಪಾದತೀರ್ಥವು
ಆಯೋಗ್ಯವೆಂದಡೆ
ನಮ್ಮ ಕೂಡಲಚನ್ನಸಂಗಯ್ಯನ ವಚನವ
ನಿರಾಕರಿಸಿದಂತಕ್ಕು ಕಾಣಿರೋ
ಇಂಥದೇ ಒಂದು ವಚನವನ್ನು ಸಿದ್ಧರಾಮೇಶ್ವರರು ರಚಿಸಿರುವರು.
ಪಾದೋದಕವೆಂಬುದು ಪರಮಾತ್ಮನ ಚಿದ್ರೂಪ ನೋಡಾ,
ಪಾದೋದಕವೆಂಬುದು ಮೋಕ್ಷದ ಮಾರ್ಗ ನೋಡಾ,
ಪಾದೋದಕವೆಂಬುದು ಪಾಪದ ಕೇಡು ನೋಡಾ
ಪಾದೋದಕವೆಂಬುದು ಪ್ರಮಥರ ಇರವು ನೋಡಾ
ಪಾದೋದಕವೆಂಬುದು ಕಪಿಲಸಿದ್ಧ ಮಲ್ಲಿಕಾರ್ಜುನನ ಮಹಿಮೆ ನೋಡಾ.
ಹೀಗೆ ಶರಣರೆಲ್ಲ ಪಾದೋದಕದ ಮಹತ್ವವನ್ನು ಹಾಡಿದ್ದಾರೆ. ಬಹುಶಃ ಆಗ ತೆಗಳುವವರ ಸಂಖ್ಯೆ ಸಣ್ಣದಿರಬೇಕು. ಇಂದು ಹೊಗಳುವವರು ಕಡಿಮೆ ಆಗಿದ್ದಾರೆ. ತೆಗಳುವವರು ಅಧಿಕವಾಗಿದ್ದಾರೆ. ಆದ್ದರಿಂದಲೇ ಪಾದೋದಕವು ಅಮಾನ್ಯವಾಗುತ್ತಲಿದೆ. ವೀರಶೈವರ ಅಷ್ಟಾವರಣಗಳು ಸಪ್ತಾವರಣವಾಗುತ್ತಿವೆ.
ಹಾಗಾದರೆ ಯಾವ ಕಾರಣಕ್ಕಾಗಿ ಹಿರಿಯರು ಈ ಪಾದೋದಕವನ್ನು ಸೇರಿಸಿದರು? ಯಾವದೋ ಮಹತ್ವದ ಕಾರಣ ಇದ್ದಿರಲೇ ಬೇಕು. ಪಾದೋದಕಕ್ಕೆ ಇನ್ನೊಂದು ಅರ್ಥ ಇರಬೇಕು. ಅದು ಸರಳಾರ್ಥದಂತೆ ಪಾದತೊಳೆದ ನೀರು ಇರಲಿಕ್ಕಿಲ್ಲ. ಪಾದಗಳು ಎಂದರೆ ಭೂಮಿಯ ಮೇಲೆ ನಿಲ್ಲುವ ಕರಣಗಳು. ಪಾದಗಳು ಮುಖ್ಯವಾಗಿ ನಡೆಯಲು ಬೇಕು. ಅಂದರೆ ವ್ಯಕ್ತಿಯ ನಡೆಯನ್ನು ಅವು ಪ್ರತಿನಿಧಿಸುತ್ತವೆ.
ಕಾಲಿನ ಹೆಬ್ಬೆರಳು ನಡೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಾರಣ ಪಾದೋದಕ ಪಡೆಯುವಾಗ ಹೆಬ್ಬೆರಳಿಗೆ ಮಹತ್ವ ಕೊಡುವರು. ಹೆಬ್ಬೆರಳು ಅಂದರೆ ವ್ಯಕ್ತಿಯ ನಡತೆ-ವ್ಯಕ್ತಿಯ ನಡಾವಳಿ, ಅಂದರೆ ವ್ಯಕ್ತಿ ಗುಣವಿಶೇಷಣಗಳು. ಒಟ್ಟಿನಲ್ಲಿ ವ್ಯಕ್ತಿಯ ಚಾರಿತ್ರ್ಯ,ಸಂಸ್ಕಾರ, ವ್ಯಕ್ತಿ ಬದುಕಿದ್ದ ರೀತಿ-ನೀತಿ, ಅವನ ನಡೆನುಡಿ, ಪಾದೋದಕ ಅಂದರೆ ವ್ಯಕ್ತಿಯ ರೀತಿ ನೀತಿ, ನಡೆನುಡಿ, ಸೇವೆ. ಜನ ಕಲ್ಯಾಣ ಕಾರ್ಯಗಳು. ಇವೆಲ್ಲಉತ್ತಮವಿದ್ದರೆ ಮಾತ್ರ ಆ ವ್ಯಕ್ತಿ ಪಾದೋದಕ ಕೊಡಲು ಅರ್ಹ, ಇಲ್ಲವಾದರೆ ಆ ನೀರು ನೀರಾಗಿಯೇ ಉಳಿಯುವುದು, ಕಡಿಮೆ ಇಲ್ಲವೆ ಕೀಳು ವ್ಯಕ್ತಿತ್ವದ ಪಾದೋದಕ ಕೊಡಲು ಅನರ್ಹ. ಅಂಥ ಪಾದೋದಕ ಕಲಶ ನೀರೇ ವಿನಃ ಪವಿತ್ರವಾದುದಲ್ಲ. ಈ ಮಾತನ್ನು ಕೆಳಗಿನ ವಚನದಲ್ಲಿ ತಿಳಿಯಬಹುದು.
“ಸಂಸ್ಕಾರವಿಲ್ಲದ ಮನುಷ್ಯನ ಪಾದ ಜಲವು ಸಲ್ಲದೆಂದಡೆ ಅದು ಸಹಜವೆಂಬೆನು” ಒಬ್ಬರ ಪಾದೋದಕ ಸ್ವೀಕರಿಸುವುದೆಂದರೆ ಅವನ ನಡತೆಯನ್ನು ಒಪ್ಪಿಕೊಂಡಂತೆ, ಅವರು ಬಾಳಿದಂತೆ ಬಾಳಲು ಆಶೆ ಪಟ್ಟಂತೆ. ಅಂಥ ನಡತೆಯನ್ನು ಅನುಕರಿಸಲು ಸಿದ್ಧರಾದಂತೆ.
ಪಾದೋದಕದಲ್ಲಿ ಇನ್ನೊಂದು ಸಂಗತಿ ಇದೆ. ಅದೆಂದರೆ ಸಮಾನತೆ ತರುವುದು, ವೀರಶೈವರಲ್ಲಿ ಒಬ್ಬರು ಹೆಚ್ಚಿನವರು, ಉಳಿದವರು ಕೆಳಮಟ್ಟದವರು ಎಂಬ ಪಶ್ನೆಯಿಲ್ಲ. ಎಲ್ಲರೂ ಸಮಾನರೆ, ಶಿಷ್ಯನು ಗುರುವಿನ ಪಾದೋದಕ ಸ್ವೀಕರಿಸುವನು. ತತ್‌ಕ್ಷಣವೇ ಗುರುವು ಶಿಷ್ಯನಿಗೆ ನಮಸ್ಕರಿಸಿ ಪಾದೋದಕ ಕೊಡಬೇಕೆಂದು ಪ್ರಾರ್ಥಿಸುವನು. ಆಗ ಗುರುವು ಶಿಷ್ಯನನ್ನು ತನ್ನ ಗುರುವೆಂದು ಭಾವಿಸುವನು. ನಿಯಮದ ಪ್ರಕಾರ, ಪಾದೋದಕ ಪಡೆಯುವನು, ಶಿಷ್ಯನು ಗುರುವಿಗಿಂತ ವಯಸ್ಸಿನಲ್ಲಿ ಚಿಕ್ಕವನಿರಬಹುದು. ಕಡಿಮೆ ಕಲಿತವನಿರಬಹುದು. ಆದರೂ ಈಗ ಅವನು ತನ್ನ ಗುರುವಿನ ಗುರುವೂ ಹೌದು. ಅಂದರೆ ಎಲ್ಲರೂ ಸಮಾನರಾದಂತೆ. ಇದೇ ವೀರಶೈವ ಧರ್ಮದ ಗುರಿ.
ಅನೇಕ ಹಿರಿಯ ಸ್ವಾಮಿಗಳು ಪಾದೋದಕವನ್ನು ಪಡೆಯಲು ಕ್ರಿಯಾಮೂರ್ತಿಗಳನ್ನು ಗುರುತಿಸಿರುತ್ತಾರೆ. ಅವರು ಸ್ವಾಮಿಗಳಿಗಿಂತ ಚಿಕ್ಕವರಿರಬಹುದು, ಕಡಿಮೆ ಕಲಿತವರಿರಬಹುದು, ಗೃಹಸ್ಥರಾಗಿರಬಹುದು. ಆದರೆ ಇವರ ನಡತೆ ಶುದ್ಧವಾಗಿರುತ್ತದೆ. ಸಮಾಜದಲ್ಲಿ ಅವರಿಗೆ ಗೌರವ ಸ್ಥಾನವಿರುವುದು. ಕಾರಣವೇ ಪಾದೋದಕ ಎರಡು ಫಲಕೊಡುವುದು. ಒಂದು ಜಾಗತಿಕ ಸಮಾನತೆ ಎರಡನೆಯದು ಜೀವನದಲ್ಲಿ ಒಳ್ಳೆಯ ನಡತೆ ಅಳವಡಿಸಿಕೊಳ್ಳುವುದು, ದೂರು ಮಾಡಿದರೆ ಧರ್ಮವನ್ನೇ ಹಾಳು ಮಾಡಿದಂತೆ. ಮರಳಿ ಈ ಜನರು ಸನಾತನ ಧರ್ಮವನ್ನೇ ಒಪ್ಪಿಕೊಂಡಂತೆ ಅನಿಸುವುದು. ವೀರಶೈವರಲ್ಲಿ ನಾನು ಹೆಚ್ಚು ನೀನು ಕಡಿಮೆ ಎಂಬ ಪ್ರಶ್ನೆಯೇ ಬರುವುದಿಲ್ಲ.
ನಾನು ಎಲ್ಲರಿಗಿಂತ ಕಿರಿಯ ಎಂಬುದೇ ಕೊನೆಯ ಮಾತು. ಗುರು-ಶಿಷ್ಯರ ಸಂಬಂಧಗಳು ಹೇಗಿರಬೇಕು ಎಂಬ ಪ್ರಶ್ನೆಗೆ ಕೆಳಗಿನ ವಚನ ಉತ್ತರಿಸುತ್ತದೆ.
ಶ್ರೀಗುರುಲಿಂಗವು ಶಿಷ್ಯನ ಬರವ ಕಂಡು
ಬಂದು ಪಾದದ ಮೇಲೆ ಬೀಳುವಾತ ಗುರುಲಿಂಗ
ಮಂಡೆಯ ಹಿಡಿದೆತ್ತುವಾತ ಶಿಷ್ಯ.
ಶ್ರೀಗುರುಲಿಂಗವು ಶಿಷ್ಯನ ಸಿಂಹಾಸನದಲ್ಲಿ ಕುಳ್ಳಿರಿಸಿ
ಪಾದಾರ್ಚನೆಯ ಮಾಡುವಾತ ಗುರುಲಿಂಗ
ಮಾಡಿಸಿಕೊಂಬಾತ ಶಿಷ್ಯ
ಶ್ರೀಗುರುಲಿಂಗವು ಶಿಷ್ಯನಾರೋಗಣೆಯ ಮಾಡುತ್ತಿದ್ದಾನೆಂದು ಬಂದು
ಪ್ರಸಾದವ ಕೊಂಬಾತ ಗುರುಲಿಂಗ, ಇಕ್ಕುವಾತ ಶಿಷ್ಯ.
ಇದು ಕಾರಣ ದ್ವಿವಿಧ ಸಂಬಂಧ ಸಮಮತವಾಯಿತ್ತು
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ
ಎಲ್ಲ ಕಡೆಗೂ ಎಲ್ಲ ಹಂತಗಳಲ್ಲಿ ಜಾಗತಿಕ ಸಮಾನತೆ ಒಡೆದು ಕಾಣಬೇಕು. ಇದೇ ನಿಯಮವನ್ನು ನಾವು ಬೆಳೆಸಬೇಕು. ಇಲ್ಲವಾದರೆ ವೀರಶೈವ ಪ್ರಮುಖರು ನಾವೇ ಎಂದು ಹೇಳಿಕೊಂಡು ತಿರುಗುತ್ತಿರುವ ಸ್ವಾಮಿಗಳು, ಅವರ ಬೆಂಬಲಿಗರು ಕೂಡಿಕೊಂಡು ವೀರಶೈವ ಧರ್ಮದ ನಿಯಮಗಳನ್ನು ಪರಿಶೀಲಿಸಿ ಹೊಸ ನಿಯಮಗಳನ್ನು ಬರೆಯಬೇಕು. ಹಿರಿಯರು-ಶರಣರು ನಡೆದು ಬಂದ ರೀತಿ-ನೀತಿಗಳು ದೋಷರಹಿತವಾಗಿವೆ ಎಂದು ಸಾರಬೇಕು. ಎಲ್ಲರೂ ಇವರ ನಿಯಮ ಪಾಲಿಸಬೇಕು ಎಂದು ಹೇಳಬೇಕು. ಆಗ ಮಾತ್ರ ವೀರಶೈವ ಜನಸಾಮಾನ್ಯರಲ್ಲಿ ಗೊಂದಲ ಕಡಿಮೆಯಾಗುವುದು. ಇಲ್ಲದೆ ಹೋದರೆ ಧರ್ಮದ ನಿಯಮಗಳಿಗೂ ಮುಂದಾಳುಗಳ ನಡತೆಗೂ ಅಂತರ ಕಂಡುಬರುವುದು.