ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
ಕರ್ಮೇಂದ್ರಿಯಗಳಲ್ಲಿ ಕ್ರಿಯಾಲಿಂಗ
(ಇಷ್ಟಲಿಂಗದ ಸಂಬಂಧ)
ಕಂದ ಕೇಳೀ ಲಿಂಗ | ಮುಂದೆ ಕರ್ಮೇಂದ್ರಿಯದಿ
ನಿಂದ ನಿಲುಕಡೆಯ-ನೊಂದೊಂದ ಪೇಳ್ವೆ ನಿನ-
ಗೆಂದ ಶ್ರೀಗುರುವೆ ಕೃಪೆಯಾಗು || ೧೫೦ ||
ಈ ದಾರ್ಶನಿಕ ಕವಿಯು ಶಿವಾದ್ವೈತ ಸಿದ್ಧಾಂತದ ಮೂಲ ಚಿನ್ಹವೆನಿಸಿದ ಲಿಂಗವನ್ನು ಬಹಿರಂಗ ಹಾಗೂ ಅಂತರಂಗದಲ್ಲಿ ಧರಿಸುವ ಪರಿಯನ್ನು ಬಿತ್ತರಿಸಿದನು. ಒಳಹೊರಗೂ ಲಿಂಗಧಾರಣೆಯ ಚಾರಿತ್ರವನ್ನು ನಿರೂಪಿಸಿದನು. ಲಿಂಗವನ್ನು ಕೇವಲ ಧರಿಸಿಕೊಂಡರಾಗದು. ಅದನ್ನು ನೈಜಾಚರಣೆಯಲ್ಲಿ ಅಳವಡಿಸಿಕೊಳ್ಳಬೇಕಾಗುವದು. ಕಾರಣ ಇನ್ನು ಮುಂದೆ ಇಷ್ಟಲಿಂಗ, ಪ್ರಾಣಲಿಂಗ ಭಾವಲಿಂಗಗಳನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳುವ ವಿಧಾನವನ್ನು ಪ್ರತಿಪಾದಿಸುತ್ತಾನೆ.
ಯಾವ ಶಿಷ್ಯನಲ್ಲಿ ಜಿಜ್ಞಾಸೆ, ಜ್ಞಾನಪಿಪಾಸೆ ಹಾಗೂ ಜ್ಞಾನಗ್ರಹಣ ಶಕ್ತಿಗಳು ಅಧಿಕವಾಗಿರುತ್ತವೆಯೋ, ಸದ್ಭಕ್ತಿ ಸದ್ಭಾವನೆಗಳೇ ಜೀವನವಾಗಿರುವದೋ ಅಂಥ ಶಿಷ್ಯನಿಗೆ ಸದ್ಗುರುವು ಪುನಃ ಪುನಃ ಹೊಸವಿಷಯಗಳನ್ನು ತಿಳಿಸಲು ಆತುರನಾಗುವನು. ಈ ತ್ರಿಪದಿಯಲ್ಲಿ ಗುರು ಶಿಷ್ಯರ ಮಧುರ ಬಾಂಧವ್ಯ ವ್ಯಕ್ತವಾಗುತ್ತದೆ. ಇಲ್ಲಿ ಪೂಜ್ಯ ಲಿಂಗನಾಯಕನಹಳ್ಳಿ ಪರಮ ನಿರಂಜನ ಪುಂಗವರ ಜ್ಞಾನದ ಪ್ರಖರತೆ ಹಾಗೂ ಶಿಷ್ಯ ಬಸವಲಿಂಗ ಶರಣರ ಜ್ಞಾನಪಿಪಾಸೆಯ ಮಟ್ಟ ವ್ಯಕ್ತವಾಗದೇ ಇರದು.
ಕಂದ ! ಕೇಳು, ನಿನ್ನ ಕೈಯಲ್ಲಿ ಕಾಣಿಸಿಕೊಂಡ ಈ ಇಷ್ಟಲಿಂಗವು ಕ್ರಿಯಾ ಲಿಂಗವಾಗಿದೆ. ಯಾಕೆಂದರೆ ಸತ್ಕ್ರಿಯೆಗಳಿಂದಲೇ ಈ ಲಿಂಗದ ಸಾಕ್ಷಾತ್ಕಾರವಾಗುವದು. ಇದನ್ನು ನಿನ್ನ ಕರ್ಮೇಂದ್ರಿಯಗಳಾದ ಗುದ, ಗುಹ್ಯ ಪಾದ ಪಾಣಿ ಮತ್ತು ವಾಣಿಗಳೆಂಬ ಐದಿಂದ್ರಿಯಗಳಲ್ಲಿ ಪ್ರಕಟಗೊಳಿಸಿಕೊಳ್ಳಬೇಕು. ಅಂದರೆ ಈ ಲಿಂಗವು ಆಯಾ ಇಂದ್ರಿಯಗಳಲ್ಲಿ ನಿಂದ ನಿಲುವನ್ನು ಒಂದೊಂದನ್ನಾಗಿ ಮುಂದೆ ನಿರೂಪಿಸುತ್ತೇನೆ. ಚನ್ನಾಗಿ ಲಕ್ಷವಿಟ್ಟು ಕೇಳು. ಎಂದು ಹೇಳುವ ಗುರು ಶ್ರೀಗುರುವಲ್ಲದೆ ! ಪರಮಗುರುವಲ್ಲವೆ |
ಮೊದಲೆ ದುರ್ಮದ (ಲ) ಗಳೆವ | ಗುದಿಗಾನಂದವ ತಳೆವ
ಗುದದೊಳಾಚಾರ- ವಿದಿತ ಲಿಂಗವನು ಪೇ-
ಳ್ದಧಿಕಾರಿ ಗುರುವೆ ಕೃಪೆಯಾಗು ||೧೫೧||
ಕರ್ಮೇಂದ್ರಿಯಗಳಲ್ಲಿ ಮೊದಲನೆಯದು ಗುದ. ಗುದೇಂದ್ರಿಯವು ಪೃಥ್ವಿ ತತ್ವಪ್ರಧಾನವಾದುದು. ಶರೀರವೂ ಪೃಥ್ವಿತತ್ವಾಧಿಕ್ಯತೆಯಿಂದ ಕೂಡಿದೆ. ಪೃಥ್ವಿಯು ಗಂಧಗುಣವುಳ್ಳುದು. ೫೬ನೆಯ ತ್ರಿಪದಿಯಲ್ಲಿ ಭೂಮಿತತ್ವದ ವಿಚಾರವನ್ನು ಅವಲೋಕಿಸಬಹುದು. ಗುದೇಂದ್ರಿಯ ಶುದ್ಧತೆಯೇ ಶರೀರ ವೃದ್ಧಿಗೆ ಕಾರಣ, ಅದು ಚೆನ್ನಾಗಿ ತನ್ನ ಕಾರ್ಯವನ್ನು ನಿರ್ವಹಿಸದಿದ್ದರೆ ಅಲ್ಲಿನ ಅಧಿದೈವನಾದ ಯಮನ ಸದನವನ್ನು ಸೇರಬೇಕಾಗುವದು. ಕಾರಣ ಗುದೇಂದ್ರಿಯವು ದರ್ಮಲವನ್ನು ಪ್ರತಿನಿತ್ಯ ದೂರಗೊಳಿಸುವದು, ಮಲವಿಸರ್ಜನೆಯಾದರೆ ದೈಹಿಕ ಆನಂದ ಸಿಕ್ಕುವದು. ಶರೀರವು ಉತ್ಸಾಹಗೊಳ್ಳುವರು. ‘ದುರ್ಮಲ ಶಬ್ದದ ಹೊರತಾಗಿ ‘ದುರ್ಮದ ಪದವೂ ಕಾಲಾಂತರದಲ್ಲಿ ಸಿಕ್ಕುತ್ತದೆ. ದುರ್ಮದ ಪದ ಪ್ರಯೋಗದಿಂದಲೂ ಅರ್ಥ ವಿಸ್ತಾರಗೊಳ್ಳುತ್ತದೆ. ಮಲ ಶಬ್ದದಿಂದ ಭೌತಿಕ ಮಲ ಹಾಗೂ ಆಧ್ಯಾತ್ಮಿಕ ಮಲಗಳೆಂದೂ ಗ್ರಹಿಸಬಹುದು. ಈ ಮಲಗಳನ್ನು ಶರೀರದಿಂದ ದೂರಗೊಳಿಸುವಂತೆ ಮದವನ್ನು ದೂರೀಕರಿಸಬೇಕು. ಮದವು ಜೀವನಿಗೆ ಅನಿಮಿತ್ತ ವೈರಿಯೆನಿಸಿದೆ. ಪ್ರತಿಯೊಬ್ಬ ಮಾನವನು ತನ್ನಲ್ಲಿರುವ ದುರಹಂಕಾರವನ್ನು ದೂರಗೊಳಿಸಿದಲ್ಲದೆ ಆನಂದ ಸಿಕ್ಕಲಾರದು. ಮದ ತಮಸಿಗುಣ. ಈ ಮದದ ವಿಚಾರ ೬೩ನೆಯ ತ್ರಿಪದಿಯಲ್ಲಿ ಅವಲೋಕಿಸಬಹುದು.
ಮದೋನ್ಮತ್ತ ತಾಮಸಿಗೆ ಆನಂದ ಎಂದಿಗೂ ಸಿಕ್ಕದು. ಕಾರಣ ದುರ್ಮಲವನ್ನು ಹಾಗೂ ದುರ್ಮದವನ್ನು ದೂರೀಕರಿಸಿದರೇನೆ ಅಲ್ಲಿ ಆಚಾರಲಿಂಗದ ಪ್ರತಿಷ್ಠೆಯಾಗುವದು. ಈ ಲಿಂಗವು ಅನ್ವರ್ಥಕನಾಮವನ್ನು ಹೊಂದಿದೆ. ಸದಾಚಾರಗಳಿಂದ ಆಚಾರಲಿಂಗವು ಪ್ರಕಟಗೊಳ್ಳುವದು. ಆಚಾರಲಿಂಗದ ಅರಿವನ್ನು ಮಾಡಿಕೊಡುವ ಗುರು ಅಧಿಕಾರಿಯಾಗಬೇಕಂತೆ | ಅಂದರೆ ತಾನು ಸ್ವತಃ ಸದಾಚರಣೆಯಿಂದ ಏಕರೂಪವಾಗಬೇಕು. ತನ್ನ ನಡೆ ನುಡಿಗಳು ಒಂದಾಗಿರಬೇಕು. ಇಂಥ ಗುರುನಾಥನು ತೋರಿದ ಮಾರ್ಗವು ಮುಕ್ತಿದಾಯಕವಾಗಬಲ್ಲುದು.