ಗುರು-ವಿರಕ್ತ ಸಹಕಾರ

ಜ.ಚ.ನಿ

 

ಅರಿಯದರಂ ಸತ್ಪಥದೊಳ್

ನಿರಿಸಲ್ ತುತಿಪಳಿಗಳೊಳವು ಬುಧರ್ಗವು ಬೇಡಂ |

ಕಿರುವೆಂಚೆಗೆ ಕಟ್ಟುಂಟಾ-

ತೆರದಿಂ ವಾರಿಧಿಗೆ ಕಟ್ಟನಾರೆಸಗುವರೋ”

ನೀತಿ ಮಂಜರಿ

 

ಸಮಾಜದ ಭಕ್ತರಲ್ಲಿ ಒಳಪಂಗಡಗಳು, ವಿರಕ್ತರಲ್ಲಿ ಸಮಯ ಭೇದಗಳು ಸಾಲದೆ ಸಮಾಜ ಪುರುಷನಿಗೆ ಎರಡು ಕಣ್ಣುಗಳಂತಿರುವ ಗುರು ವಿರಕ್ತರು ನಾವು ಹೆಚ್ಚು ತಾವು ಹೆಚ್ಚೆಂದು ವಾದಿಸಿ ವಿದ್ವೇಷಕ್ಕೊಳಗಾದುದು ಸರ್ವರಿಗು ತಿಳಿದ ಸಂಗತಿ. ಈ ವೈರ ವಿಷವು ಸಮಾಜವನ್ನೇ ನಿರ್ವೀರವಾಗಿ ಮಾಡಿತ್ತು. ಈ ದಳ್ಳುರಿಯಿಂದ ದಗ್ಧವಾದ ಸಮಾಜದೇಳ್ಗೆ ಆಗಬೇಕಾದಷ್ಟಾಗದೆ ಮೊಟಗಾಗುತ್ತ ನಡೆದಿತ್ತು. ಜನಾಂಗದಲ್ಲಿ ಶಾಂತಿಯಿರಲಿಲ್ಲ. ಸ್ನೇಹವಿರಲಿಲ್ಲ. ಪರಸ್ಪರ ದೂಷಣೆ-ದೋಷಾರೋಪಣೆಯ ಸುರಿಮಳೆ ಸುರಿಯುತ್ತಿತ್ತು. ಮನೆ ಮನೆಯಲ್ಲಿ ಮತ್ಸರ ಪಕ್ಷಪಂಗಡ ಭಾಗ ವಿಭಾಗಗಳೇರ್ಪಟ್ಟವು. ತಂದೆ ಮಕ್ಕಳಿಗೆ ವ್ಯಾಜ್ಯ, ಅಣ್ಣ ತಮ್ಮಂದಿರಿಗೆ ವ್ಯಾಜ್ಯ ಬಂಧುಬಳಗದವರಿಗೆ ವ್ಯಾಜ್ಯ. ಕೊಡಕೊಳ್ಳುವುದಕ್ಕೆ ವ್ಯಾಜ್ಯ. ಹೀಗಾಗಿ ಪರಸಮಾಜಗಳಲ್ಲಿ ಪರಿಹಾಸಕ್ಕಿಟ್ಟಿತ್ತು. ಪರಸ್ಪರ ಸ್ನೇಹ ವಾತ್ಸಲ್ಯಗಳಿಲ್ಲದಾಗಿತ್ತು. ಇದನ್ನು ಕಂಡು ಕುಮಾರಯೋಗಿಗಳು ಕಡುನೊಂದರು. ಹೇಗಾದರು ಮಾಡಿ ಎಂತಾದರು ಮಾಡಿ ಗುರು-ವಿರಕ್ತರಲ್ಲಿ ಪರಸ್ಪರ ಸಹಕಾರ ಮೂಡಿಬರುವಂತೆ ಮಾಡಬೇಕೆಂದು ಮನಸ್ಸು ಮಾಡಿದ್ದಲ್ಲದೆ ಮಿತಿಮೀರಿ ಪ್ರಯತ್ನಪಟ್ಟರು. ಆದರೆ ಅದು ಫಲಿಸಲಿಲ್ಲ. ಪ್ರವಾಹದ ಸೆಳೆತ ಸಣ್ಣದಾಗಿರಲಿಲ್ಲ. ಆದರು ಸ್ವಾಮಿಗಳವರು ಹಿಂಜರಿಯಲಿಲ್ಲ. ಕೆಚ್ಚೆದೆಯಿಂದ ಮುಂದುವರಿದರು. ಬೇಕಾದಷ್ಟು ಶ್ರಮಿಸಿದರು. ವೆಚ್ಚಮಾಡಿದರು. ಕೊನೆಗು ಅದು ಸಹಕಾರಕ್ಕೆ ಬಾರದೆ ಹೋಯಿತು. ಅಲ್ಲದೆ ಸ್ವಾಮಿಗಳವರ ಮೇಲೆ ಎರಡು ಕಡೆಗಳಿಂದಲು ಆಕ್ಷೇಪಣೆಯ ಬಿರುಸು ಬಾಣಗಳು ಬಂದು ಬೀಳತೊಡಗಿದವು. ಸತ್ಯ ಮಾರ್ಗಾನುಯಾಯಿಗಳಾದ ಸ್ವಾಮಿಗಳವರು ಆ ಬಾಣಗಳಿಗೆ ಭಯಬೀಳಲಿಲ್ಲ. ಅವರು ಬರೀ ಕೀರ್ತಿಗಾಗಿ ಮಾಡತಕ್ಕವರಲ್ಲ. ಮನಮೆಚ್ಚಿ ಸಮಾಜ ಶಾಂತಿಗಾಗಿ ಮಾಡಹೊರಟಿದ್ದರು. ಅದರಿಂದಾಗಿ ತಮ್ಮ ಸಮತಾಭಾವವನ್ನು ತಾವು ಅದೆಂದಿಗೂ  ಬಿಡಲಿಲ್ಲ.

ಸಮಾಜ ವೃಕ್ಷಕ್ಕೆ ಶ್ರೀಗುರುಗಳು ತಾಯ್ವೇರು. ಅವರನ್ನು ಹೀಗಳೆಯುವುದು ತರವಲ್ಲ. ಜಗದ್ಗುರು ಪಂಚಾಚಾರ್ಯರಂತಹ ಪೂಜ್ಯ ಪುರುಷರಿಂದ ಸಮಾಜ ಪರಿಪಾಲಿತವಾಗಿದೆ-ಆಗಬೇಕು ಎಂದು ಭಾವಿಸಿದ್ದರು.   ಸ್ವತಃ ತಾವೇ ಜಗದ್ಗುರು ಪಂಚಾಚಾರ್ಯರ ಮೇಲೆ ಪ್ರಾರ್ಥನೆಯ ಪದ್ಯಗಳನ್ನು ರಚಿಸಿದರು. ಹಾಗೆಯೆ ಬೋಧಿಸುತ್ತಿದ್ದರು. ಶಿವಯೋಗ ಮಂದಿರದ ವಟುಗಳಿಗು ಸಾಧಕರಿಗು ಕಲಿಸಿದರು. ನಿತ್ಯ ಭಜನೆಯಲ್ಲಿ ಹೇಳಿಸುತ್ತಿದ್ದರು.

ಗುರುಲಿಂಗ ಜಂಗಮರಲ್ಲಿ ಯಾವ ಹೆಚ್ಚು ಕಡಿಮೆಯಿಲ್ಲ. ಮೂರು ಒಂದೇ. ವ್ಯಕ್ತಿತ್ವ ಬೇರೆಯಾದರು ತತ್ವ ಒಂದೇ. ಜಂಗಮನಾದರು ಲಿಂಗ ಪೂಜಿಸುತ್ತಾನೆ. ಗುರುಧ್ಯಾನ ಮಾಡುತ್ತಾನೆ. ಹೊರಗೆ ಮಾತ್ರ ಗುರುವನ್ನು ಏಕೆ ಹೀಗಳೆಯಬೇಕು? ಲಿಂಗ ಆಚಾರಲಿಂಗ, ಗುರುಜಂಗಮರಿಬ್ಬರು ಚರಲಿಂಗಗಳು. ಪರಸ್ಪರ ಸಮಾನರು. ಗುರುವಾದರು ಲಿಂಗಪೂಜಿಸುತ್ತಾನೆ. ಜಂಗಮವನ್ನೇಕೆ ಜರಿಯಬೇಕು? ಗುರು ಜಂಗಮರಲ್ಲಿ ಕ್ರಿಯಾಚರಣೆ ದೃಷ್ಟಿಯಿಂದ ತರತಮ ಭಾವವಿದ್ದರೂ ತತ್ವತಃ ಯಾವ ಭೇದವಿಲ್ಲ. ಪರಸ್ಪರ ಪೂರಕಗಳಾಗಿವೆ. ಗುರುವಿರಕ್ತರಲ್ಲಿ ಪರಸ್ಪರ ಈ ಸಮಭಾವ ಸಮರತಿ ಸಮಕ್ರಿಯೆ ಬಾರದ ವಿನಹ ಸಮಾಜದ ಏಳ್ಗೆಯಿಲ್ಲ. ಸಾಮಾಜಿಕ ಶಾಂತಿ ಅದೊಂದು ಭ್ರಾಂತಿ; ಎಂಬುದು ಸ್ವಾಮಿಗಳವರ ದೃಢನಿಶ್ಚಯ; ದೃಢಪ್ರತ್ಯಯ

ಸ್ವಾಮಿಗಳವರ ಈ ಸಹಕಾರ ಈ ಸಮತೆ ಕೆಲವರಿಗೆ ಸರಿಬೀಳಲಿಲ್ಲ. ಶ್ರೀಗಳವರೆ ಕಾಶೀನಾಥ ಶಾಸ್ತ್ರಿಗಳವರನ್ನು ಎತ್ತಿಕಟ್ಟಿರುವರೆಂದು ಇಲ್ಲದ ಸಲ್ಲದ ಆರೋಪಣೆ ಮಾಡುತ್ತಿದ್ದರು. ಇದರಲ್ಲಿ ಎಷ್ಟು ಮಾತ್ರಕ್ಕು ಸತ್ಯಾಂಶವಿಲ್ಲ. ಸಮಾಜ ಅನೈಕ್ಯತೆಗೆ ಕಾರಣರಾದವರನ್ನು ಕಂಡರೆ ಸ್ವಾಮಿಗಳವರು ಎಷ್ಟೂ ಸಹಿಸುತ್ತಿರಲಿಲ್ಲ. ಅವರ ಪ್ರಚಾರವನ್ನು ಪ್ರತಿಭಟಿಸುತ್ತಿದ್ದರು. ಅವರಿಂದಾದ ಅನೈಕ್ಯತೆಗಾಗಿ ತುಂಬಾ ವ್ಯಥೆಗೊಳ್ಳುತ್ತಿದ್ದರು. ಐಕ್ಯತೆಗಾಗಿ ಕಂಡ ಕಷ್ಟಗಳಿಗೆ ಗುರಿಯಾಗುತ್ತಿದ್ದರು. ಕಡೆಯಿಲ್ಲದ ನಷ್ಟಕ್ಕೆ ಎರವಲಾಗುತ್ತಿದ್ದರು.

ಸಾಲದ್ದಕ್ಕೆ ವಿರಕ್ತ ವಿರಕ್ತರಲ್ಲಿಯೆ ಸಹಕಾರವಿರಲಿಲ್ಲ; ಸೌಹಾರ್ದತೆ ಇರಲಿಲ್ಲ. ನಾಲ್ವರು ನಾಲ್ಕು ದಿಕ್ಕಾಗಿದ್ದರು. ಇವರುಗಳ ಐಕ್ಯತೆಯನ್ನಾದರು ಮಾಡಬೇಕೆಂದು ಸೀಮೆಯಿಲ್ಲದ ಸಾಹಸಪಟ್ಟರು. ಒಮ್ಮೆ ವಿರಕ್ತ ಸಮ್ಮೇಲನವನ್ನು ಶಿವಯೋಗ ಮಂದಿರದಲ್ಲಿಯೆ ಕರೆದರು. ಆಗ ಅನೇಕರು ಆಗಮಿಸಿದರು. ಅವರಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರಘಾಮಠದ ಶ್ರೀಗಳು, ಹುಬ್ಬಳ್ಳಿ ಶ್ರೀ ಜಗದ್ಗುರು ಮೂರುಸಾವಿರಮಠದ ಶ್ರೀಗಳು ಪ್ರಮುಖರು. ಇವರಿಬ್ಬರನ್ನು ಒಂದೆಡೆಗೆ ಸೇರಿಸಲು ಹಾನಗಲ್ಲ ಶ್ರೀಗಳವರು ಹಗಲಿರುಳೆಲ್ಲ ಶ್ರಮಿಸಿದರು. ಭಗೀರಥ ಪ್ರಯತ್ನದಿಂದ ಕೊನೆಗೆ ಒಂದೆಡೆಯಲ್ಲಿ ಕೂಡಿಸಿಯೇ ಬಿಟ್ಟರು. ಆದರೆ ಅದು ಕೊನೆಯವರೆಗು ಬಾಳಲಿಲ್ಲ. ಹಿಸುಕಿ ಹಣ್ಣು ಮಾಡಿದಲ್ಲಿ ಕಾಯಿ ಹಣ್ಣಾಗುವುದೆ ? ಯಾವುದಕ್ಕೂ ಮನಸ್ಸು ಬೇಕು. ಆತ್ಮೀಯತೆ ಬೇಕು. ಅಂತು ಬೀಜಾವಾಪ ಮಾಡಿದರು. ಬಿತ್ತಿದ ಬೀಜ ಬಿತ್ತಿದ ದಿನವೆ ಮೊಳಕೆ ಹಾಕದು. ಅದಕ್ಕು ಒಂದು ಅವಕಾಶ ಬೇಕು. ತಕ್ಕ ವಾತಾವರಣ ಬೇಕು. ಅಂದು ಸ್ವಾಮಿಗಳವರು ಬಿತ್ತಿದ ಬೀಜ ಇದೀಗ ನೆನೆದು ಮೊಳಕೆ ಹಾಕಿದೆ. ಇತ್ತೀಚೆಗೆ ಬೇರೆಬೇರೆ ಸಮಯದವರು ಸೇರತೊಡಗಿದ್ದಾರೆ. ಕೂಡಿ ಶಿವಪೂಜೆ ಮಾಡತೊಡಗಿದ್ದಾರೆ. ಇನ್ನೂ ಸಾಲದು. ಸುಳಿದೆಗೆದು ಬೆಳೆಯಬೇಕು. ಸುಮ ಅರಳಿ ಸುವಾಸಿಸಬೇಕು.

ಇದೀಗ ಗುರು-ವಿರಕ್ತರ ದ್ವೇಷ ದಳ್ಳುರಿಯು ಹೊರಗೆ ಉರಿಯದಿದ್ದರು ಒಳಗೆ ಹೊಗೆಯಾಡುತ್ತಿದೆ. ಬಸವಣ್ಣನವರ ಕಿರಿಯ ಭಾವದ ಶರಣುಮಾರ್ಗದ ತಣ್ಣೀರು ಒಳಗೆ ಬೀಳದ ಹೊರತು ಬಳಕೆಗೆ ಬಾರದ ಹೊರತು ಅದು ನಂದುವಂತಿಲ್ಲ. ನ೦ದಿಸುವಂತಿಲ್ಲ.

ಹಿರಿಯರಿಗಿಂತಲು ಕಿರಿಯರಲ್ಲಿ ನಾವೇ ಹೆಚ್ಚಿನವರೆಂಬ ಹೆಮ್ಮೆ ಹೆಚ್ಚಿಹೋಗಿದೆ. ಅದರಲ್ಲಿಯು ಸ್ವಾಮಿಗಳಂತಹ ಸಮತಾಭಾವಿಗಳ ಶಿಷ್ಯ ಸಮುದಾಯದಲ್ಲಿ ಆ ಭಾವ ಹೆಮ್ಮೆ ಹೆಚ್ಚುತ್ತಿರುವುದು ವಿಷಾದಾಸ್ಪದವಾದುದು, ವಿಚಾರಾಸ್ಪದವಾದುದು. ಭಕ್ತರ ಒಳಪಂಗಡಗಳ ವಿಷಯದಲ್ಲಿಯು ಶ್ರೀಗಳವರಿಗೆ ತುಂಬಾ ಅಸಮಾಧಾನವಿತ್ತು. ಅವನ್ನೆಲ್ಲ ಅಳಿಯಲು ಅವಿಶ್ರಾಂತ ಶ್ರಮಿಸಿದರು. ಸಾಮ್ಯವಾದವು ಸಾಗಿಬರುವ ಈ ಕಾಲದಲ್ಲಿಯಾದರು ವಿವೇಚನೆಯಿಂದ ಆ ತರತಮ ಭಾವವನ್ನು ಸಂಕುಚಿತ ಸ್ವಭಾವವನ್ನು ತೆಗೆದುಹಾಕುವದಾದರೆ ಸಮಾಜಕ್ಕೆ ಲೇಸಾದೀತು. ಶ್ರೀಗಳವರ ಶ್ರಮ ಸಾರ್ಥಕವಾದೀತು. ಅವರ ದಿವ್ಯ ಆತ್ಮಕ್ಕೆ ಆನಂದವೆನಿಸಿತು.

 

Related Posts