ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು
ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
ಯೇಷಾಂ ನ ವಿದ್ಯಾ ನ ತಮೋ ನ ದಾನಂ।
ನ ಜ್ಞಾನಂ ಚ ಶೀಲಂ ನ ಗುಣೋ ನ ಧರ್ಮಃ||
ತೇ ಮೃತ್ಯುಲೋಕೇ ಭುವಿಭಾರಭೂತಾ।
ಮನುಷ್ಯರೂಪೇಣ ಮೃಗಾಶ್ಚರಂತಿ ||
ವಿದ್ಯಾವಿನಯ ಸಂಪನ್ನನಾಗಿ ತಪೋನಿಷ್ಠನಾಗಿ, ದಾನಶೀಲನಾಗಿ, ಜ್ಞಾನಿಯಾಗಿ, ಸಚ್ಚಾರಿತ್ರ್ಯವುಳ್ಳವನಾಗಿ, ಧರ್ಮವಂತನಾಗಿ, ಗುಣವಂತನಾಗಿ ಬದುಕುವುದೇ ಮನುಷ್ಯನ ನಿಜವಾದ ಬದುಕು. ಇದಕ್ಕೆ ವ್ಯತಿರಿಕ್ತವಾಗಿ ಬದುಕುವವರು ಮನುಷ್ಯರಲ್ಲ. ಅವರು
ಭೂಮಿಗೆ ಭಾರವಾದ ಮನುಷ್ಯರೂಪದ ಪಶುಗಳು ಎಂದು ಸುಭಾಷಿತವೊಂದು ಹೇಳುತ್ತದೆ. ಮೂಲತಃ ಮನುಷ್ಯ ಅನೇಕ ಗುಣಗಳ ಸಂಗಮವಾಗಿದ್ದಾನೆ. ಅವನಲ್ಲಿರುವ ಗುಣಗಳ ವಿಶ್ಲೇಷಣೆಯಿಂದ ಇವನು ಒಳ್ಳೆಯವ, ಇವನು ಕೆಟ್ಟವ ಎಂದು ನಿರ್ಧರಿಸುತ್ತೇವೆ. ಸದ್ಗುಣಗಳನ್ನು ಹೊಂದಿದವನನ್ನು ದೇವಮಾನವ, ಮಹಾತ್ಮ ಎಂದೂ, ದುರ್ಗುಣಗಳುಳ್ಳವನನ್ನು ದುಷ್ಟ, ರಾಕ್ಷಸ ಎಂದೂ ಕರೆಯುತ್ತೇವೆ. ಆದ್ದರಿಂದ ಒಳ್ಳೆಯ ವ್ಯಕ್ತಿತ್ವವನ್ನು ಬಯಸುವವರು ಒಳ್ಳೆಯ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದುದು ಅತ್ಯವಶ್ಯ.
ಸದ್ಗುಣ ಸಂಪನ್ನರಾದವರು ಲೌಕಿಕ ಧನಸಂಪತ್ತಿಗಿಂತಲೂ ಸದ್ಗುಣಗಳನ್ನೇ ತಮ್ಮ ನಿಜವಾದ ಸಂಪತ್ತು ಎಂದು ಭಾವಿಸುತ್ತಾರೆ. ಅಂತಃಕರಣವನ್ನು ಪರಿಶುದ್ಧಗೊಳಿಸಿಕೊಂಡ ಅವರು ಸದಾ ಸತ್ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಕಾಯಾ ವಾಚಾ ಮನಸಾ ಯಾರಿಗೂ ಹಿಂಸೆಯನ್ನು ಮಾಡದಿರುವುದು, ಪ್ರಿಯವಾದ ಸತ್ಯವನ್ನು ಮಾತನಾಡುವುದು, ಧೈರ್ಯಶಾಲಿಗಳಾಗಿರುವುದು, ಕ್ಷಮಾಶೀಲರಾಗಿರುವುದು ಅವರ ಸಹಜ ಸ್ವಭಾವವಾಗಿರುತ್ತದೆ. ಅವರೆಂದೂ ಅನ್ಯರನ್ನು ನಿಂದಿಸುವುದಿಲ್ಲ. ಯಾರನ್ನೂ ದ್ವೇಷಿಸುವುದಿಲ್ಲ. ಸದಾ ಭಗವಂತನ ನಾಮಸ್ಮರಣೆಯಲ್ಲಿ ಕಾಲ ಕಳೆಯುವ ಅವರು, ತಮ್ಮ ಮೃದು ಮಧುರ ಮಾತುಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಸರ್ವೇಂದ್ರಿಯಗಳನ್ನು ವಿಷಯಗಳಿಂದ ವಿಮುಖಗೊಳಿಸಿ, ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಮೆಟ್ಟಿ ದೈವೀಪುರುಷರಾಗಿ ಕಂಗೊಳಿಸುತ್ತಾರೆ. ಇಂಥ ಸದ್ಗುಣ ಸಂಪನ್ನ ದೈವೀಪುರುಷರು ವಿಶ್ವವನ್ನೇ ಮನೆಯಾಗಿಸಿಕೊಂಡ ವಿಶ್ವಕುಟುಂಬಿಗಳು. ಅಂತೆಯೇ “ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್’ ಎಂಬ ಮಾತು ಅತ್ಯಂತ ಪ್ರಚಲಿತವಾಗಿರುತ್ತದೆ.
ದುರ್ಗುಣಿಗಳ ಜೀವನಶೈಲಿ ಸದ್ಗುಣಿಗಳ ಜೀವನಶೈಲಿಗೆ ತೀರ ಭಿನ್ನವಾದುದು. ಕಾಮಕ್ರೋಧಾದಿಗಳಿಗೆ ದಾಸರಾಗಿ ವಿಷಯಭೋಗಗಳಲ್ಲಿ ಕಾಲಕಳೆಯುವ ದುರ್ಗುಣಿಗಳು ಲೋಕಕಂಟಕರಾಗಿ ಜೀವನ ನಡೆಸುತ್ತಾರೆ. ಸದಾ ಅಹಂಕಾರ ಮಮಕಾರಗಳಿಂದ ಬೀಗುವ ಅಜ್ಞಾನಿಗಳಿವರು. ಅನ್ಯಾಯ, ಅನೀತಿ, ಅನಾಚಾರಗಳಲ್ಲಿ ನಿರತರಾದ ಇವರು ದ್ವೇಷಾಸೂಯೆಗಳಲ್ಲಿ, ಭ್ರಷ್ಟ ವ್ಯವಹಾರಗಳಲ್ಲಿ ತೊಡಗಿರುತ್ತಾರೆ. ಇಂಥ ವ್ಯಕ್ತಿಗಳನ್ನು ಕುರಿತು
“ಅನೇಕ ಚಿತ್ತ ವಿಭ್ರಾಂತಾ ಮೋಹಜಾಲ ಸಮಾವೃತಾಃ |
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇಶುಚೌ॥
ಅಂದರೆ, ಅಜ್ಞಾನದಿಂದ ಭ್ರಮಿತ ಚಿತ್ತ(ಹುಚ್ಚ)ರಾದ ದುರ್ಗುಣಿಗಳು ಮೋಹಜಾಲದಲ್ಲಿ ಸಿಕ್ಕು ವಿಷಯಲಂಪಟರಾಗಿ ಘೋರ ನರಕಕ್ಕೆ ಭಾಜನರಾಗುತ್ತಾರೆ. ಎಂದು ಗೀತೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಇಹಪರಗಳಲ್ಲಿ ಸುಖಾಪೇಕ್ಷಿಗಳಾದ ಮನುಷ್ಯರು ಶ್ವೇಚ್ಛಾಚಾರಿಗಳಾಗದೆ ತಮ್ಮಲ್ಲಿರುವ ದುರಿತ ದುರ್ಗುಣಗಳನ್ನು ಬಿಟ್ಟು ಸದ್ಗುಣ ಸಂಪನ್ನರಾಗಬೇಕು. ತ್ಯಾಗಜೀವಿಗಳಾದ ಸದ್ಗುಣಿಗಳೇ ಪರಮಶಾಂತಿಯನ್ನು ಪಡೆಯುವರು. ದೇವಮಾನವರೆಂಬ ಖ್ಯಾತಿಗೆ ಅರ್ಹರಾಗುವರು.