ಲೇಖಕರು :ಶ್ರೀಪ್ರಭುಚನ್ನಬಸವಸ್ವಾಮೀಜಿ ಮೋಟಗಿಮಠ, ಅಥಣಿ

ನವಸಮಾಜ ನಿರ್ಮಾಣಕ್ಕಾಗಿ ೧೯೦೪ರಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭೆ’ ಸ್ಥಾಪಿಸಿದವರು, ನಾಡಿಗಾಗಿ ಶ್ರೀಗಳನ್ನು ನಿರ್ಮಿಸಲು ೧೯೦೯ರಂದು ‘ಶಿವಯೋಗಮಂದಿರ’ವನ್ನು ಕಟ್ಟಿದವರು, ಪರಳಿ ವ್ಯಾಜ್ಯದಲ್ಲಿ ಜಯಿಸಿದವರು, ಯೋಗಕ್ಕೆ ಸುಯೋಗವಿತ್ತವರು, ಸಂಸ್ಕೃತಿಸಂವರ್ಧನೆಗಾಗಿ ಶ್ರಮಿಸಿದವರು ಅವರೇ; ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳವರು. ಇಂತಹ ಕಾರಣಿಕ ಯುಗಪುರುಷನನ್ನು ನಿರ್ಮಿಸಿದ ನಿರ್ಮಾತೃಗಳು, ಯೋಗಸಿದ್ಧಿಯ ಶಿವಯೋಗಸಿದ್ಧರು, ಮಮತೆಯ ಮಂದಾರ ಯಳಂದೂರಿನ ಶ್ರೀ ಬಸವಲಿಂಗ ಸ್ವಾಮಿಗಳವರು.
ನಿರಂಜನ ಪೀಠವನ್ನು ಅಲಂಕರಿಸಿದ್ದು ದಕ್ಷಿಣ ಕರ್ನಾಟಕ ಮೈಸೂರು ಪ್ರಾಂತದ ಕೊಳ್ಳೆಗಾಲ ಸಮೀಪವಿರುವ ಯಳಂದೂರಿನಲ್ಲಿ. ಈ ಊರಿನ ವಿರಕ್ತಮಠದ ಮಹಾಸ್ವಾಮಿ ಗಳಾಗಿ, ನಿಜಮುಕ್ತನಾದರೆ, ಕ್ರಿ.ಶ. ೧೮೧೦ ರ ಸುಮಾರಿಗೆ ಜನಿಸಿದ್ದು ಉತ್ತರ ಕರ್ನಾಟಕದ ವಾತಾಪಿ ಪರಿಸರದಲ್ಲಿ. ಸ್ವಾಮಿ ವಿವೇಕಾನಂದರು ಹೇಳುವಂತೆ ‘ಆಕಾರವಿಲ್ಲದ ಧ್ವನಿಗಳು ಸೇವೆಯ ಮೂಲಕ ಸತ್ಕೀರ್ತಿಯ ಬದುಕನ್ನು ಸಾಕಾರಗೊಳಿಸಿದರು’ ಎನ್ನುವಂತೆ, ತಂದೆ, ತಾಯಿ, ಬಂಧು-ಬಳಗ, ಊರು ಕೇರಿ, ಎಲ್ಲ ಲೌಕಿಕ ಸಂಬಂಧಗಳ ಹಂಗು ಹರಿದ ಅಲಕ್ ನಿರಂಜನ ಪ್ರಭುಗಳು ಶ್ರೀ ಬಸವಲಿಂಗ ಸ್ವಾಮಿಗಳು.
ಶ್ರೀಮದ್ ಗುರುವಿನ ಹಸ್ತದಲ್ಲಿ ಹುಟ್ಟಿ ಸಾಧನೆಯನ್ನು ಅರಸಿ ಬಂದದ್ದು ಡಂಬಳದ ಜಗದ್ಗುರು ತೋಂಟದಾರ್ಯಮಠಕ್ಕೆ ಅರ್ಧನಾರೀಶ್ವರ ಗದ್ದುಗೆಯ ಸಾನ್ನಿಧ್ಯ ಸಾಧನೆಯ ತಲ್ಪವಾಯಿತು. ಶ್ರೀಮಠದ ಪುಣ್ಯಪರಿಸರವೇ ಬದುಕಿನ ಕಲ್ಪವಾಯಿತು. ಬಸವಲಿಂಗರು ಅಷ್ಟಾಂಗಯೋಗದ ಪರಿಣತರಾದರು. ಯಮ, ನಿಮಯ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಸ್ಥಳಗಳು ಸಿದ್ಧಿಯಾದವು. ಆ ಕುರಿತು ಅಥಣೀಶರ ಕಾವ್ಯವಾಣಿ ಹೀಗಿದೆ-
ಅಹಿಂಸೆ ಸತ್ಯಮಸ್ತೇಯ ಬ್ರಹ್ಮರ‍್ಯ ಅಪರಿಗ್ರಹ
ಯಮ ಆಸನ ಸಂವ್ಯಮದ ಆತ್ಮಸೂರ್ಯ
ಶೌಚ ತಪ ಸಂತೋಷ ಸ್ವಾಧ್ಯಾಯ ನಿಯಮಂ
ಅರಿತು ಮಾಡೊ ಒಮ್ಮೆ ಸ್ಥಿರಂ ಸುಖಂ ಆಸನಂ||
ಸವಿಕಲ್ಪ ನಿರ್ವಿಕಲ್ಪ ಸಿದ್ಧಿಯೆ ಶಿವಸಮಾಧಿ
ಸಾಧನೆಯಿಂದ ಸಿದ್ಧಿಗೆರೋ ಓ ನಿರುಪಾಧಿ
ಸೂರ್ಯನಮಸ್ಕಾರ ತಿಳಿಯುತ ಬೆಳಕಾಗೊ ಸಾಧಕ
ಅರಿವಿನ ಗುರು ಅಥಣೀಶನ ಅಂತರಂಗದ ಹೊಂಬೆಳಕ||
ಸತ್‌ಪ್ರೇರಣೆ
ಶುಭೋದಯದಿಂದ ಶುಭರಾತ್ರಿಯ ವರೆಗೆ ಸಾಧನೆ-ಸಾಧನೆ ಮಾಡುವುದೇ ಅಂತರಂಗದ ಅನ್ವೇಷಣೆ ಆರಂಭವಾಯಿತು. ಒಂದು ದಿನ ಓರ್ವ ಯೋಗಸಿದ್ಧರು ಕನಸಿನಲ್ಲಿ ಬಂದು ‘ಏಳು ಸಾಧಕ ಎದ್ದೆಳು. ನೀನು ಕೇವಲ ಮಠೀಯ ವ್ಯವಸ್ಥೆಯ ಕೂಸಾಗಿ ಬಾಳಲು ಬಂದಿಲ್ಲ. ನೀನು ಇನ್ನೂ ಉನ್ನತವಾದದ್ದನ್ನು ಸಾಧಿಸಲು ಬಂದಿದ್ದೀಯಾ ಪ್ರಯಾಣ ಬೆಳೆಸು’ ಎಂದು ವಾಣಿಯಾಯಿತು. ಆ ಪ್ರೇರಣೆಯ ಮಾತುಗಳು ಬಸವಲಿಂಗರಲ್ಲಿ ಬದಲಾವಣೆ ಬೀರಿತು. ಅದೇ ದಿನ ಬೆಳಗಿನ ಜಾವ ಬೇಗ ಎದ್ದು ಡಂಬಳದ ಅರ್ಧನಾರೀಶ್ವರರ ಸನ್ನಿಧಿಗೆ ಶರಣಾರ್ಥಿ ಸಲ್ಲಿಸಿ, ಅಲ್ಲಿಂದ ನೇರವಾಗಿ ಮೈಸೂರು ಪ್ರಾಂತದ ಶಂಭುಲಿಂಗನ ಬೆಟ್ಟಕ್ಕೆ ಪಾದ ಬೆಳೆಸಿದರು.
ಶಂಭುಲಿಂಗನ ತಟದಲ್ಲಿ…
ಬಸವಲಿಂಗರಲ್ಲಿ ಸಾಧನೆಯ ಹಸಿವಿನ ಹಂಬಲ ಮನದ ತುಂಬೆಲ್ಲ ಮನೆ ಮಾಡಿತ್ತು. ಶಂಭುಲಿಂಗನ ಬೆಟ್ಟ ನೋಡತ್ತಿದ್ದಂತೆ ರೋಮಾಂಚನಗೊಂಡರು. ಇದೇ ನನ್ನ ಉಳವಿಯ ಓಂಕಾರ! ಇದೇ ನನ್ನ ಸಾಧನೆಯ ಶ್ರೀಕಾರ! ಇದೇ ನನ್ನ ಬದುಕಿನ ಆಕಾರ!! ಎಂದು ಪರಿಭಾವಿಸಿ, ಎತ್ತರದ ಬೆಟ್ಟದ ತುಟ್ಟತುದಿಯಲ್ಲಿ ಏಕಾಂಗಿಯಾಗಿ, ಮೌನಿಯಾಗಿ ಕುಳಿತುಬಿಟ್ಟರು. ಇದೇ ಸ್ಥಳದಲ್ಲಿ ಶ್ರೀಮನ್ನಿಜಗುಣರು ತಪೋಗೈದ ತಲ್ಪ ಎಂದು ಭಾವಪರವಶರಾದರು. ನಿಜಗುಣರೆಂದರೆ ಬಸವಲಿಂಗರಿಗೆ ಆರಾಧ್ಯದೈವ. ಅವರು ಬರೆದ ಕೈವಲ್ಯಗಳು ಜೀವದ ಜೀವ. ಹೀಗಿರುವಾಗ ಚಿಲಕವಾಡಿಯ ಓರ್ವ ಶರಣ ಬಂಧು ತಮ್ಮ ಮನೆಯಲ್ಲಿರುವ ತಾಳೆಗರಿಗಳ ಕಟ್ಟನ್ನು ಬಸವಲಿಂಗ ಶ್ರೀಗಳ ಸನ್ನಿಧಿಗೆ ತಂದು ಅರ್ಪಿಸಿದನು. ಅದನ್ನು ತೆರೆದು ನೋಡಿ ಕುಣಿದಾಡಿದರು. ಅದು ನಿಜಗುಣರ ಕೈವಲ್ಯದ ಕಂಪಾಗಿತ್ತು.
ಏಳು ಸುನಿಯಾಮದಿಂದೇಳು ಕುಟಿಲದ ಭಜಗ
ನೇಳು ತೋರುವ ಪ್ರಣವದೇಳು ಭೇದವನು ಕಂ
ಡೇಳು ಸುಜ್ಞಾನ ಭೂಮಿಕೆ ಸಿದ್ಧಿಯಾಗಿ ಪದಿನೇಳು ತತ್ವದ ತನುವನು
ಏಳು ಜನ್ಮದ ಕಲುಷವನು ಜಯಿಪ ಯೋಗಿವರ
ರೇಳು ತಾರಾಗ್ರಹದೊಳು ಕೇಳುವ ಸುನಾದಾತ್ಮಾ
ಏಳು ಮಲಪಾಶ ದೂರನೆ ಶಂಭುಲಿಂಗ ನೀನೇಳು ಮುನಿಕುಲವಂದ್ಯನೆ.
ನಿಜಗುಣ ಶಿವಯೋಗಿಗಳ ಶಿವಕಾರುಣ್ಯದ ಸ್ಥಲದ ಈ ಏಳು ಎನ್ನುವ ತಾದ್ಯಾತ್ಮ ಸಿದ್ಧಿ ಬಡಿದೆಬ್ಬಿಸಿತು. ಸತತ ೧೨ ವರ್ಷಗಳ ಕಾಲ ಕಠೋರ ಸಿದ್ಧಿಯನ್ನು ಬಸವಲಿಂಗರು ಸಾಧಿಸಿದರು. ಇವರ ಸಾಧನೆಯನ್ನು ಕಂಡ ಕೊಳ್ಳೆಗಾಲದ ಪರಿಸರದ ಬಾಂಧವರೆಲ್ಲ ಸೇರಿ ಸುಕ್ಷೇತ್ರ ಯಳಂದೂರು ಶ್ರೀಮಠಕ್ಕೆ ಅಧಿಕಾರಿಗಳಾಗಲು ಬಿನ್ನವಿಸಿಕೊಂಡರು. ಎಲ್ಲ ಮಠ-ಪೀಠಗಳ ಹಂಗು ತೊರೆದ ನನಗೆ ಯಾವ ಮಠಗಳ ಸಹವಾಸ ಬೇಡ ಎಂದು ಏನೆಲ್ಲ ಮಾತನಾಡಿದರು. ಆದರೆ ದೈವಪ್ರೇರಣೆ ಬೇರೆಯಿತ್ತು. ಗುರುಹಿರಿಯರ ಒತ್ತಾಯಕ್ಕೆ ಮಣಿದು ಯಳಂದೂರು ವಿರಕ್ತಮಠದ ಅಧಿಪತಿಗಳಾದರು. ದಿನದಿಂದ ದಿನಕ್ಕೆ ಪೂಜ್ಯಶ್ರೀಗಳ ತಪಃ ಪ್ರಭಾವ ಪಸರಿಸತೊಡಗಿತು. ಅಲ್ಲಿಂದ ನಿಜಗುಣರ ಸಾಹಿತ್ಯದ ಮರ್ಮವನ್ನು ಅರಿಯಲು ಹುಬ್ಬಳ್ಳಿಗೆ ಆಗಮಿಸಿದರು.
ಹುಬ್ಬಳ್ಳಿಯಲ್ಲಿ ಹೃದಯವಂತ
ಅದಾಗಲೇ ನಿಜಗುಣರ ಕೈವಲ್ಯ ಸಾಹಿತ್ಯವನ್ನು ಒಂದು ಶಾಸ್ತ್ರ ಆಚರಿಸಿಕೊಂಡು ಬಂದಿದ್ದರು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳವರು. ನಾಡಿನ ಅನೇಕ ಯತಿಗಳು, ಸಾಧಕರು, ಶರಣರು ಚಿಂತಕರು ನಿತ್ಯವೂ ಸಿದ್ಧಾರೂಢ ಅಪ್ಪಂಗಳು ಕೈಲಾಸ ಮಂಟಪದಲ್ಲಿ ಭಾಗಿಯಾಗುತ್ತಿದ್ದರು. ಹುಬ್ಬಳ್ಳಿಯ ಸಿದ್ಧಾರೂಢರ ಹತ್ತಿರ ಬಂದು ಪರಸ್ಪರ ಭೇಟಿ ಮಾಡಿ, ಗಹನವಾಗಿ ಬಸವಲಿಂಗರು ಚಿಂತನದಲ್ಲಿ ತೊಡಗಿದರು. ಚರ್ಚೆಗಳು ಆರಂಭವಾದವು. ಎರಡು ಮಹಾಚೇತನಗಳು ಪರಸ್ಪರ ಸತ್‌ಚಿಂತನೆಯಲ್ಲಿ ತೊಡಗಿದ್ದನ್ನೇ ಆಲಿಸುತ್ತ ಕುಳಿತಿದ್ದ ಓರ್ವ ಶ್ರೇಷ್ಠ ಸಾಧಕ. ಶಾಸ್ತ್ರ ಚಿಂತನಗಳನ್ನು ಪೂರೈಸಿ ಬಸವಲಿಂಗ ಸ್ವಾಮಿಗಳು ಹೊರಗೆ ಬಂದು ನಿಂತರು. ಬೆನ್ನ ಹಿಂದೆಯೇ ಓಡಿ ಬಂದ ಈ ಸಾಧಕ ಸಾಷ್ಟಾಂಗವೆರಗಿದ.
ಹಾಲಯ್ಯ ದೇವರಿಗೆ ಹರಕೆ!
ಅಷ್ಟರಲ್ಲಿಯೇ ಗುರುಗಳು ನಾವು ಸಂಚಾರಕ್ಕೆ ಹೋಗಬೇಕು ಎಂದರು. ನೀರು ತುಂಬಿದ ಚರಿಗೆಯನ್ನು ತುಂಬಿ ಬಸವಲಿಂಗರ ಬೆನ್ನು ಹತ್ತಿದ. ಸೂಕ್ಷ್ಮತೆಯಿಂದ ಗ್ರಹಿಸಿದ ಶ್ರೀಗಳು ‘ತಮ್ಮಾ ಯಾರು ನೀನು’ ಅಂದರು. ‘ಅಜ್ಜಾರ ನಾನು ‘ಹಾಲಯ್ಯ ದೇವರು. ಹಾನಗಲ್ಲ ತಾಲೂಕು ಜೋಯಿಸರ ಹಳ್ಳಿಯಿಂದ ಬಂದಿದ್ದೀನ್ರಿ. ನಿತ್ಯ ಶಾಸ್ತç ಕೇಳಾಕ ಸಿದ್ಧಾರೂಢರ ಮಠಕ್ಕೆ ಬರತೀನ್ರಿ. ವಾಸ್ತವ್ಯ ಇದೇ ಊರಿನ ರುದ್ರಾಕ್ಷಿಮಠದಲ್ಲಿ ಇರತೀನಿ’ ಎಂದ. ಹೀಗೆ ತನ್ನ ಜೀವನದ ಬಾಲ್ಯದ ವಿವರಗಳನ್ನು ನೀಡಿದವರೇ ಹಾನಗಲ್ಲ ಕುಮಾರ ಮಹಾಸ್ವಾಮಿಗಳು. ಅವರ ಬಾಲ್ಯದಲ್ಲಿ ಸಾಧಕರಾಗಿದ್ದಾಗ ಕರೆಯುತ್ತಿದ್ದ ಮೂಲ ಹೆಸರು ಹಾಲಯ್ಯ. ಹಾಲಯ್ಯದೇವರು. ದೇವರ ವಿನಯ, ಭಕ್ತಿ ಸೌಜನ್ಯ ಕಂಡು ಬಸವಲಿಂಗರು ಸಂತಸಪಟ್ಟರು. ನಿರ್ಜನ ಪ್ರದೇಶದಲ್ಲಿ ಸಂಚಾರ ಮುಗಿಸಿ, ಒಂದು ಬಾವಿಯ ತಟದ ಕಟ್ಟೆಯ ಮೇಲೆ ಕುಳಿತುಕೊಂಡಿದ್ದಾರೆ.
ಹಾಲಯ್ಯದೇವರು ಮನ ಬಿಚ್ಚಿ ಮಾತನಾಡಿದರು. ಅಜ್ಜಾ ಅವರ ಸಿದ್ಧಾರೂಢರ ಮುಂದ ತಾವು ಲಿಂಗಾಂಗಸಾಮರಸ್ಯದ ಕುರಿತು ಮಾತನಾಡಿದ ಮಾತು ಕೇಳಿ ನನಗ ಬಹಳ ಸಂತೋಷ ಆತರೀ ಎಂದರು. ಆಗ ಮುಗುಳ್ನಕ್ಕ ಬಸವಲಿಂಗರು ಹೇಳುತ್ತಾರೆ. ‘ಏ ಮರೀ ನೀನು ಆರೂಢಮಠದ ಶಿಥಿಲಾಚರಣೆಯಲ್ಲಿ ಸಿಲುಕಿಕೊಂಡಿ ರುವೆ. ಇಲ್ಲಿ ಲಿಂಗ ಲಿಂಗಾಂಗ ಸಾಮರಸ್ಯ ಶಿವಯೋಗ ಸಾಧನೆ ಸಾಧ್ಯವಾಗೋದಿಲ್ಲೋ ತಮ್ಮಾ’ ಎಂದರು. ‘ಯಪ್ಪಾ ನೀವ ನನ್ನ ಉದ್ಧರಿಸಬೇಕು’ ಎಂದು ಪ್ರಾರ್ಥಿಸಿದರು. ಹಾಲಯ್ಯನ ಹಸಿವು ಕಂಡ ಸಿದ್ಧಿಪುರುಷ ಬಸವಲಿಂಗರು ‘ಆಗಲಿ ತಮ್ಮಾ ನಿನಗ ಲಿಂಗಾಂಗಯೋಗದ ಸಕೀಲ-ಸಾಧನೆಯ ಸಮಗ್ರತೆ ತಿಳಿಸುತ್ತೇನೆ, ಬಾ ನನ್ನೊಂದಿಗೆ ಅಂದರು. ಸ್ವರ್ಗವೇ ಧರೆಗಿಳಿದಂತೆ ಭಾಸವಾಯಿತು. ಹಾಲಯ್ಯದೇವರು ಬಸವಲಿಂಗರ ಬೆನ್ನು ಹತ್ತಿದರು.
ಹಾಲಯ್ಯ-ಕುಮಾರ ಸ್ವಾಮಿಗಳಾದರು
ಸಂಚಾರ ಮಾಡುತ್ತ ನೇರವಾಗಿ ತೋಂಟದಾರ್ಯ ಸಂಸ್ಥಾನಮಠ ಅಣ್ಣಿಗೇರಿಗೆ ದಯಮಾಡಿಸಿದರು. ಹಾಲಯ್ಯದೇವರು ಕಜ್ಜಾಯ ಭಿಕ್ಷೆ ಮಾಡಿಕೊಂಡು ಬರುತ್ತಿದ್ದರು. ಬಸವಲಿಂಗ ಸ್ವಾಮಿಗಳೊಂದಿಗೆ ಸೇರಿ ಪೂಜಾ ಪ್ರಸಾದ ನೆರವೇರಿಸುತ್ತಿದ್ದರು.
ಗದುಗಿನ ತೋಂಟದಾರ್ಯಮಠದ ಪೀಠವೇರಬೇಕಿದ್ದ ಬಸವಲಿಂಗರು ಕೆಲವೊಂದು ಘಟನೆಗಳಿಂದ ಅಣ್ಣಿಗೆರಿಯಲ್ಲಿ ನೆಲೆಸಿದ್ದರು. ಜನರ ಬಾಯಿಂದ ಬಾಯಿಗೆ ಹರಿದಾಡಿತು. ಹಾಲಯ್ಯ ದೇವರಿಗೆ ಯೌಗಿಕ ಮಾರ್ಗವನ್ನು ತಿಳಿಹೇಳುತ್ತಿದ್ದರು. ಅಲ್ಲಿಂದ ಶಂಭುಲಿಂಗ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಕೆಲವು ವರ್ಷ ಅನುಷ್ಠಾನ ಮಾಡಿಸಿದರು. ಅಲ್ಲಿಂದ ತಾವು ಪೀಠವೇರಿದ್ದ ಯಳಂದೂರು ವಿರಕ್ತಮಠಕ್ಕೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಯವರೆಗೂ ದೇವರಾಗಿದ್ದ ಹಾಲಯ್ಯ ದೇವರಿಗೆ ಬಸವಲಿಂಗ ಮಹಾಸ್ವಾಮಿಗಳು ೧೮೯೨ರಲ್ಲಿ ಹಸ್ತಮಸ್ತಕ ಸಂಯೋಗ ಮಾಡಿ ಚಿನ್ಮಯಾನುಗ್ರಹ ದೀಕ್ಷೆಯನ್ನು ಯಳಂದೂರು ಮಠದಲ್ಲಿ ದಯಪಾಲಿಸುತ್ತಾರೆ. ಅಂದಿನಿಂದ ಹಾಲಯ್ಯ ದೇಶಿಕರಾಗಿ ನೂತನ ನಾಮದೊಂದಿಗೆ ಮನ್ನಡೆಯುತ್ತಾರೆ. ಸಾಧನೆಯ ಅನುಗ್ರಹ ದಯಪಾಲಿಸಿದರು. ಇದಾದ ನಂತರ ನೇರವಾಗಿ ಅಣ್ಣಿಗೇರಿಗೆ ಬಂದು ನೆಲೆಸಿದರು ವೈರಾಗ್ಯನಿಧಿ ಬಸವಲಿಂಗ ಸ್ವಾಮಿಗಳು. ಬಸವಲಿಂಗ ಗುರುಗಳು ಸಾನಿಧ್ಯದಿಂದ ಹಾಲಯ್ಯ ದೇವರಲ್ಲಿದ್ದ ಅಧ್ಯಾತ್ಮ ಬೆಳಗು ಬೆಳಗತೊಡಗಿತು.
ಅವಿಶ್ರಾಂತ ಅರವಿಂದರಾಗಿ ನಾಡಿನ ಹಾಗು ಸಾಧಕರ ಅಭ್ಯುದಯಕ್ಕಾಗಿ ಶ್ರಮಿಸಿದ ಬಸವಲಿಂಗ ಮಹಾಸ್ವಾಮಿಗಳು ವಯೋಸಹಜ ಒಂದಿಷ್ಟು ಆರೋಗ್ಯ ತೊಂದರೆಯಿಂದಾಗಿ ಕ್ರಿ.ಶ. ೧೮೯೪ರಂದು ಅಣ್ಣಿಗೇರಿ ಶ್ರೀ ತೋಂಟದಾರ್ಯ ಮಠದಲ್ಲಿ ಲಿಂಗೈಕ್ಯರಾದರು. ಅಂದು ಗದುಗಿನ ತೋಂಟದಾರ್ಯಮಠದ ಜಗದ್ಗುರುಗಳಾಗಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕ್ರಿಯಾಸಮಾಧಿ ನೆರವೇರಿತು.
ಯೋಗಸಿದ್ಧಿಯ ಶಿವಪುರುಷ ಯಳಂದೂರು ಬಸವಲಿಂಗಪ್ರಭುಗಳು ಬಯಲಿನಲ್ಲಿ ಬಯಲಾದರು.
ಗ್ರಂಥಋಣ:
೧. ಎಳಂದೂರು ಬಸವಲಿಂಗ ಸ್ವಾಮಿಗಳು
ಪ್ರ: ತೋಂಟದಾರ್ಯಮಠ, ಗದಗ, ೧೯೯೦
೨. ಹಾನಗಲ್ಲ ಗುರುಕುಮಾರ ಸ್ವಾಮಿಗಳು : ಗುರುಕಂದ
ಪ್ರ: ಶಿವಯೋಗಮಂದಿರ ಸಂಸ್ಥೆ, ಶಿವಯೋಗಮಂದಿರ, ೨೦೧೦