ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-9

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ತಾತಾ ಎಂದರೆ ಕೊಡುವ | ದಾತ್ರೈ ಭುವನ ಪ್ರ-

ಖ್ಯಾತ ಸದ್ಭಕ್ತಿ-ಪ್ರೀತನಾದಿಯೊಳೆನ್ನ

ತಾತ ಶ್ರೀಗುರುವೆ ಕೃಪೆಯಾಗು II ೩೬ ||

‘ತಾತ’ ‘ಪದವೂ ಅಜ್ಜನ ಪರ್ಯಾಯವೇ, ಕೆಲವೊಂದು ಭಾಗದಲ್ಲಿ ಅಜ್ಜನಿಗೆ ತಾತನೆನ್ನುವದು ರೂಢಿಯಾಗಿದೆ. ಮತ್ತು ಅಜ್ಜನ ಪಿತನಿಗೆ ತಾತನೆನ್ನುವ ವಾಡಿಕೆಯೂ ಉಂಟು. ಇಲ್ಲಿ ಕವಿಯು ಶಬ್ದ ಚಮತ್ಕಾರದಿಂದ ಅರ್ಥವಿಸ್ತಾರವನ್ನು ವಿಶದಗೊಳಿಸಿ ದ್ದಾನೆ. ತಾ ಯೆಂದರೆ ಕೊಡುವುದೆಂದರ್ಥ. ತಾತಾಯೆಂದರೆ ಅಜ್ಜ ಒಮ್ಮೆ ಕ್ರಿಯಾ ಪದವಾಗಿ ಇನ್ನೊಮ್ಮೆ ನಾಮಪದವಾಗಿ ಪ್ರಯೋಗವಾಗಿದೆ. ಗುರುದೇವನೂ ತಾತನಾಗಿದ್ದಾನೆ. ಶಿಷ್ಯನ ಬೇಡಿದ ಬಯಕೆಗಳನ್ನು ಪೂರೈಸುವಲ್ಲಿ ಸಮರ್ಥನು. ‘ತಾತಾ’ ಎಂದು ಪ್ರಾರ್ಥಿಸಿದರೆ ಪ್ರಾರ್ಥಿಸಿದ ಕೊಡುಗೆಯನ್ನು ಕೊಡುವಲ್ಲಿ ದಾತೃವಾಗಿದ್ದಾನೆ. ಈ ದಾತೃತ್ವದಿಂದ ಗುರುವರನು ಮೂರುಲೋಕದಲ್ಲಿಯೂ ಪ್ರಖ್ಯಾತನಾಗಿದ್ದಾನೆ. ದಾತೃತ್ವದ ಸೆಲೆಯು ಸದ್ಭಕ್ತಿಯಿಂದ ಮಾತ್ರ ಹೊರಸೂಸುವದು. ಸದ್ಭಕ್ತಿಯಿಂದಲೇ ಗುರುನಾಥನು ಪ್ರೀತಿಯುಳ್ಳವನಾಗುವನು. ತಾತನು ತನ್ನ ಸೇವೆ ಮಾಡುವ ಮೊಮ್ಮಕ್ಕಳಿಗೆ ತನ್ನ ಸೊತ್ತನ್ನು ಕೊಡುವಂತೆ ಗುರುವು ಸದ್ಭಕ್ತಿಯುಳ್ಳ ಶಿಷ್ಯರಿಗೆ ಕೃಪೆ ಮಾಡುವನು. ಈ ತಾತನು ಆದಿಯಿಂದ ಆದವನಲ್ಲ. ಅನಾದಿ ನಿರಂಜನನಾಗಿದ್ದಾನೆ. ನಿರಂಜನ ವಸ್ತುವಿಗೆ ಆದಿಯೆಂಬುದಿಲ್ಲ. ಆದರಿಂದ ಗುರುವು ಅನಾದಿ ತಾತನು.

ಶ್ರೀ ಜ.ಚ.ನಿ. ಯವರು ತಮ್ಮ ‘ಗುರುಕರುಣತ್ರಿವಿಧಿಯ ಭಾವ ವಿವರಣೆ’ ಯಲ್ಲಿ ‘ತ್ರೈಭುವನ’ ಎಂದರೆ ತ್ರಿವಿಧಾಂಗವೆಂದು ಅರ್ಥೈಸಿದ್ದಾರೆ. ಶ್ರೀಗುರುವು ತ್ಯಾಗಾಂಗಭುವನಕ್ಕೆ ಕ್ರಿಯಾಕಾರುಣ್ಯವನ್ನು, ಭೋಗಾಂಗಭುವನಕ್ಕೆ ಮಂತ್ರ ಕಾರುಣ್ಯವನ್ನು, ಯೋಗಾಂಗಭುವನಕ್ಕೆ ವೇಧಾಕಾರುಣ್ಯವನ್ನು ಕರುಣಿಸುವನು. ಶಿವದೀಕ್ಷೆಯಕಾಲಕ್ಕೆ ಕ್ರಿಯೆಯಿಂದ ಸೂಕ್ಷ್ಮತನುವನ್ನು ಶುದ್ಧಗೊಳಿಸಿ, ಸೂಕ್ಷ್ಮ ತನುವಿಗೆ ಮಂತ್ರಜಪವನ್ನು ಬೋಧಿಸುವನು. ಕಾರಣತನುವಿಗೆ ಮಂತ್ರಾನುಸಂಧಾನದ ವಿಧಾನವನ್ನು ಕಲಿಸುವನು. ಆದ್ದರಿಂದ ಕಾಣದ ಸ್ವರ್ಗ ಮತ್ತು ಪಾತಾಳದ ಕಲ್ಪನೆಗಿಂತ ತ್ರಿವಿಧಾಂಗಗಳಲ್ಲಿ ತ್ರೈಭುವನದ ಸಾರ್ಥಕತೆಯನ್ನು ತಿಳಿದು ಗುರುವಿನ ದಾತೃತ್ವದ ವಿಶಾಲತೆಯನ್ನು ಅರಿಯುವದು ಅವಶ್ಯವಾಗಿದೆ.

ಸುಳಿವ ಸೋದರಮಾವ | ನಳಿಯನಗ್ರಜಭಾವ

ಗೆಳೆಯ ನೀನೆನಗೆ ಹಳೆನೆಂಟ ಕುಲಕೋಟಿ

ಬಳಗವೈ ಗುರುವೆ ಕೃಪೆಯಾಗು || ೩೭ ||

ಈ ತ್ರಿಪದಿಯಲ್ಲಿ ಶಿವಕವಿಯು ಕೊನೆಯದಾಗಿ ಸಕಲ ಬಳಗವನ್ನೇ ಸರಗೊಳಿಸಿದ್ದಾನೆ. ಮಾನವನು ಶಿವನ ಸೃಷ್ಟಿಯಲ್ಲಿ ಹುಟ್ಟಿದ್ದರೆ, ತಂದೆ, ತಾತ, ತಮ್ಮ ಅಣ್ಣ, ಕಕ್ಕ, ಅಕ್ಕ, ತಾಯಿ, ತಂಗಿ, ಅತ್ತೆ, ಸೊಸೆ, ಮಾವ, ಅಳಿಯ ಗೆಳೆಯ ಇತ್ಯಾದಿ ಬಳಗವೆಲ್ಲ ಮಾನವನ ಸೃಷ್ಟಿಯಿಂದಾಗಿದೆ. ಸಾಮಾಜಿಕ ಜೀವನದಲ್ಲಿ ಸಮಾಜ ವ್ಯವಸ್ಥೆಗೆ ತಕ್ಕಂತೆ ಒಬ್ಬ ವ್ಯಕ್ತಿಯು ತಾಯಿ-ತಂದೆಗೆ ಮಗನಾಗುತ್ತಾನೆ. ತಾಯಿ- ತಂದೆಯ ತಂದೆ ಅಜ್ಜ, ಅಣ್ಣನಿಗೆ ತಮ್ಮ, ಅಜ್ಜನಿಗೆ ಮೊಮ್ಮಗ, ಮಾವನಿಗೆ ಅಳಿಯ, ಹೆಂಡತಿಗೆ ಗಂಡ, ಆತ್ಮೀಯ ಪರಿಚಯದ ಮತ್ತು ಹಿತಬಯಸುವವನು ಗೆಳೆಯ ನಾಗುವನು. ಹೀಗೆ ಕೆಲವರು ಸಮೀಪದ ಬಂಧುಗಳಾದರೆ ಮತ್ತೆ ಹಲವರು ಹಳೆಯ ನೆಂಟರಾಗುವರು. ಈ ರೀತಿ ಮಾನವ ನಿರ್ಮಿತ ಬಳಗವೆಲ್ಲ ಶ್ರೀಗುರುವಿನಲ್ಲಿದೆ  ಅಣ್ಣನವರೂ

“ತಂದೆ ನೀನು, ತಾಯಿ ನೀನು, ಬಂಧು ನೀನು

ಬಳಗ ನೀನು ನೀನಲ್ಲದೆ ಎನಗೆ ಮತ್ತಾರೂ ಇಲ್ಲವಯ್ಯಾ”

ಎಂದು ಸಂಗಮನಾಥನಲ್ಲಿ ಎಲ್ಲ ಬಳಗವನ್ನು ಕಂಡಿರುವರು. ಗುರುದೇವನನ್ನು ಅನನ್ಯ ಭಕ್ತಿಯಿಂದ ಭಜಿಸಿದರೆ, ಅವನು ಸಕಲಬಳಗಸ್ಥನಾಗಿ ಸುಜ್ಞಾನ ಸುಧೆಯನ್ನು ಕರುಣಿಸಿ ಮುಕ್ತನನ್ನಾಗಿ ಮಾಡುತ್ತಾನೆ. ಅಂತೆಯೇ ಅನುಭವಿಯಾದ ಸರ್ವಜ್ಞ ಕವಿಯು ಗುರುಬಂಧುತ್ವದ ಅಧಿಕ್ಯತೆಯನ್ನು, ಸಾಂಸಾರಿಕ ಬಳಗದ ಕನಿಷ್ಠತೆಯನ್ನು ಬಣ್ಣಿಸಿರುವನು.

ಬಂಧುಗಳಾದವರು ಬಂದುಂಡು ಹೋಗುವರು.

ಬಂಧನವ ಕಳೆಯಲರಿಯರು.

ಸಾಂಸಾರಿಕ ಬಂಧುಗಳು ಧನ ಇದ್ದಾಗ ಬಂದುಂಡು, ಹರಣಮಾಡಿಕೊಂಡು ಹೋಗುವರು. ಆದರೆ ಈ ಗುರುಬಂಧು ಜೀವನ ಭವಬಂಧನವನ್ನೇ ಕಳೆಯುವನು.

ಬಂದೆಡರಿಗಂಜಬೇ | ಡೆಂದು ಧೈರ್ಯವನಿತ್ತು

ಹಿಂದು ಮುಂದೆನ್ನ ಕಾಯ್ದಿರ್ಪ ಭಕ್ತಜನ

ಬಂಧು ಶ್ರೀಗುರುವೆ ಕೃಪೆಯಾಗು ||೩೮ ||

“ಆಪತ್ಕಾಲದಲ್ಲಾದವನೇ ನಿಜವಾದ ಬಂಧು” ಎಂದು ಅನುಭವಿಗಳು ಹೇಳುತ್ತಾರೆ. ಹಣ್ಣಾದ ಮರಕ್ಕೆ ಪಕ್ಷಿಗಳು ಮುತ್ತಿ ಹಣ್ಣು ತೀರಿದ ಮೇಲೆ ಹೋಗುವಂತೆ ಬಂಧುಗಳು ಹಣವಿರುವವರೆಗೆ ಹೆಚ್ಚುವರು. ಹಣ ತೀರಿ ಬಡವನಾದರೆ ಯಾರೂ ಮಾತನಾಡಿಸುವದಿಲ್ಲ. ಧನವಂತನ ತೊಂದರೆಗಳನ್ನು, ಕೇಳುವವರು ಹಲವರು. ದರಿದ್ರನ ದುಃಖವನ್ನು ಆಲಿಸುವವರು ವಿರಳ. ಲೋಕದಲ್ಲಿ ಹಣದಿಂದ ಬಂಧುಗಳಲ್ಲದೆ ಗುಣದಿಂದ ಬಂಧುಗಳಿಲ್ಲ.

ಗುರುನಾಥನು ತನುತೊಂದರೆ, ಮನ ತೊಂದರೆ, ಧನತೊಂದರೆ ಹಾಗೂ ಇತರ ತೊಂದರೆಗಳು ಬಂದರೂ ಅಂಜದಿರೆಂದು ಶಿಷ್ಯನಿಗೆ ಧೈರ್ಯವನ್ನು ಕೊಡುತ್ತಾನೆ ಗುರುದೇವನು ನಿಜವಾದ ಭಕ್ತಜನಬಂಧುವಾಗಿದ್ದಾನೆ. ಅವನು ಶಿಷ್ಯನ ತನುತಾಪ, ಹೃತ್ತಾಪ, ವಿತ್ತಾಪಗಳನ್ನು ಕಳೆಯುತ್ತಾನೆ. ಗುರುವರನು ನಂಬಿದ ಭಕ್ತರಿಗೆ ಇಂಬುಗೊಟ್ಟು ಹಿಂದೆ ಮಂದೆ (ಭೂತ-ಭವಿಷ್ಯತ್ತು ಮತ್ತು ವರ್ತಮಾನಕಾಲದಲ್ಲಿಯೂ ರಕ್ಷಿಸುವನು. ಸದಾ ಸದ್ಭಕ್ತರ ಹಿತಚಿಂತನೆಗೈಯುವ ಗುರುಸ್ವಾಮಿಯು ಭಕ್ತಜನಬಂಧುವಲ್ಲದೆ ಮತ್ತೇನು ?

ಭಕ್ತಿದಾಸೋಹವು ವಿ | ರಕ್ತಿ ದೃಢ ಛಲ ನೇಮ

ಭಕ್ತಿಯನೆ ನಡೆಸಿಕೊಡುವಲ್ಲಿ ಗುರುವೆ ನೀ

ಭಕ್ತವತ್ಸಲನೆ ಕೃಪೆಯಾಗು ||39 ||

‘ಪೂಜೈಷು ಅನುರಾಗೋ ಭಕ್ತಿಃ” ಪೂಜ್ಯರಲ್ಲಿ ಇಟ್ಟ ಪ್ರೇಮವೇ ಭಕ್ತಿಯಾಗುವುದು  ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನಗಳನ್ನು ಸಮರ್ಪಿಸುವ ಕೈಂಕರ್ಯವೇ ದಾಸೋಹ. ಶಿವಪ್ರಸಾದವಲ್ಲದುದನ್ನು ತ್ಯಜಿಸುವದೇ ವಿರಕ್ತಿ. ಶಿವಾಚಾರವಲ್ಲದುದನ್ನು ನಿರೋಧಿಸುವದೇ ಛಲ. ಆ ನಿರೋಧ ಗಟ್ಟಿಮುಟ್ಟಾದರೆ ದೃಢ ಛಲವೆನಿಸುವದು. ಶಿವನ ಅನುಭಾವದಲ್ಲಿ ತಪ್ಪದೇ ನಡೆಯುವದೇ ನಿಯಮ. ವಿರಕ್ತಿ ಛಲನೇಮಗಳಿಂದೊಡಗೂಡಿದ ದಾಸೋಹಂಭಾವವು ಸ್ಥಿರವಾಗಿ ನಿಂತರೆ ಭಕ್ತಿಯ ಪರಿಪೂರ್ಣತೆಯು ಅಳವಡುವದು. ಇಂಥ ಭಕ್ತಿಯೇ ಮುಕ್ತಿಯ ಸಾಧನವು. “ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ’ನೆಂದು ಅಣ್ಣ ಬಸವಣ್ಣನವರು ಭಕ್ತಿಯ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.

ಶಿವನ ಪ್ರತಿರೂಪನಾದ ಗುರುವಿನ ಕೃಪೆಗೆ ಭಕ್ತಿಯೇ ಮೂಲ. ಭಕ್ತಿಯುಳ್ಳ ಭಕ್ತನಿಗೆ ಗುರುವು ಭಕ್ತವತ್ಸಲನಾಗುವನು. ಭಕ್ತವತ್ಸಲನೇ ! ಭಕ್ತರಲ್ಲಿ ಭಕ್ತಿಯ ಬೀಜವನ್ನು ಬಿತ್ತಿ ಶಿವಯೋಗ ಫಲವನ್ನು ಬೆಳೆ, ಅಂದರೆ ಮಾತ್ರ ಭಕ್ತವತ್ಸಲನೆನ್ನುವ ನಾಮ ಸಾರ್ಥಕವಾಗಬಲ್ಲುದು.

ಮೊದಲಿನ ತ್ರಿಪದಿಯಲ್ಲಿ ಅಭಯವನ್ನಿತ್ತು ಧೈರ್ಯವನ್ನು ಬೋಧಿಸಿದ ಶ್ರೀಗುರುವು ಇಲ್ಲಿ ಭಕ್ತಿದಾಸೋಹ-ವಿರಕ್ತಿ ದೃಡಛಲ ನೇಮಗಳನ್ನು ಕಲಿಸಿ ಕೊಡುತ್ತಾನೆ. ಭಕ್ತವತ್ಸಲನಾದ ಗುರುವು ತನ್ನ ಶಿಷ್ಯನ ಮೇಲಿನ ಅಂತಃಕರಣದಿಂದ ಶರಣ ಮಾರ್ಗದ ಮುಖ್ಯ ಸಿದ್ಧಾಂತವಾದ, ಪಂಚಪ್ರಾಣಗಳಂತಿರುವ ಪಂಚಸೂತ್ರಗಳನ್ನು ಅರ್ಥಾತ್ ಪಂಚಾಚಾರಗಳನ್ನು ಕಲಿಸಿಕೊಡುವನು ! ನುಡಿ ಮತ್ತು ನಡೆಯನ್ನು ಏಕರೂಪಗೊಳಿಸುವ ಶಿಕ್ಷಣವನ್ನಿತ್ತು ಮುಕ್ತನನ್ನಾಗಿಸುವನು. ಇಂಥವನೇ ಸಕಲಬಂಧು ಬಳಗ, ಭಕ್ತಜನ ವತ್ಸಲನೂ ಹೌದು.

ಯುಗನಾಲ್ಕು ವೊಂದಾದ | ಜಗದೊಳಗೆ ತಾನಿರ್ಪ

ಬಗೆಯನಾ ಜಗದೊಳೊಗೆದ ಕಣ್ಣಲಿ  ನೋಡಿ ನಗುವ

ಶ್ರೀಗುರುವೆ ಕೃಪೆಯಾಗು ||40||

ಕವಿಯಾದವನು ಯುಗ ಧರ್ಮವನ್ನು ಯಾವಾಗಲೂ ಜಾಗ್ರತಗೊಳಿಸುತ್ತಾನೆ. ಅದು ಅವನ ಕರ್ತವ್ಯ ಕರ್ಮ. ಕವಿಯು ಸಮಾಜದ ಸಂವೇದನೆಯನ್ನು ತನ್ನ ಕೃತಿಯಿಂದ ಚಿತ್ರಿಸಬೇಕು. ಸಮಾಜದಲ್ಲಿ ಜಾಗ್ರತೆಯನ್ನು ತುಂಬುವಂತಾಗಬೇಕು. ತ್ರಿವಿಧಿಯ ಶಿವಕವಿಯೂ ಸಮಾಜದಲ್ಲಿ ಬಾಳಿ ಬೆಳೆದು ಕಾಯಕ ಜೀವಿಯಾಗಿ, ಇತರ ಜೀವಿಗಳ ತೊಳಲಾಟವನ್ನು ಕಂಡು ಕನಿಕರ ಪಡುತ್ತಾನೆ. ಗುರುಕೃಪೆಯನ್ನು ಪಡೆದು ಮುಕ್ತರಾಗಲು ಸೂಚಿಸಿದ್ದಾನೆ. ಜಗದ ನೆಂಟರು ನಿಜವಾದವರಲ್ಲ. ಸದ್ಗುರುವಿನನ್ನೇ ನಂಬಿರಿ. ಅವನೇ ನಿತ್ಯ-ಸತ್ಯನಾದ ಭಕ್ತವತ್ಸಲನೆಂಬುದನ್ನು ಹಿಂದಿನ ಪದ್ಯಗಳಿಂದ ಮನವರಿಕೆ ಮಾಡಿಕೊಟ್ಟಿದ್ದಾನೆ. ಅಲ್ಲದೆ ಗುರುವಾದವನಲ್ಲಿಯೂ ಭಕ್ತಿ-ಪ್ರೇಮ, ಯಥಾರ್ಥತೆ, ಕರ್ತವ್ಯ ಕರ್ಮಗಳು, ಇರಬೇಕೆಂಬುದನ್ನು ಈ ಮೂಲಕ ಸೂಚಿಸಿದ್ದಾನೆ.

ಕೃತಯುಗ, ತ್ರೇತಾಯುಗ, ದ್ವಾಪಾರಯುಗ ಮತ್ತು ಕಲಿಯುಗಗಳೆಂಬ ನಾಲ್ಕು ಯುಗಗಳಿಂದ ಕೂಡಿದ ಈ ಜಗತ್ತು ಕಾಲಚಕ್ರ ತಿರುಗುತ್ತಿದ್ದರೂ, ಜಗದ ಇರುವಿಕೆ ನಿಂತಿಲ್ಲ. ಜಗತ್ತಿನ ವ್ಯವಹಾರವೆಲ್ಲ ನಡೆದೇ ಇದೆ. ಇದು ಜಗದೀಶನ ಲೀಲೆ. ಜಗವನ್ನು ನಿರ್ಮಿಸುವದು ಸೃಷ್ಟಿಯೆನಿಸಿದರೆ. ವ್ಯವಸ್ಥಿತವಾಗಿ ಇರಿಸುವದೇ ಸ್ಥಿತಿಯೆನಿಸುವದು. ನಿಯಮ ಬದ್ಧವಾದ ಜಗದ ಇರುವಿಕೆಯನ್ನು ಅರಿಯುವದೇ ನಿಜ ಸ್ಥಿತಿ. ಮಾನವನು ಈ ನಿಜಸ್ಥಿತಿಯನ್ನರಿಯದೇ ಅಜ್ಞಾನದಿಂದ, ಮಾಯಮೋಹಗಳಿಂದ ಬುದ್ಧಿ ಶೂನ್ಯನಾಗಿ ಕಣ್ಣು ಬಿಟ್ಟು ಬಯಸಿ ಬಳಲುತ್ತಾನೆ. ತನ್ನದಲ್ಲದುದನ್ನು ಆಶಿಸಿ ಮರಗುತ್ತಾನೆ. ಕರ್ತವ್ಯಕರ್ಮವನ್ನು ಮಾಡದೇ ತನಗಾಗಿ ಬೇಡುತ್ತಾನೆ. ಇದು ಮಾನವನ ಅಜ್ಞಾನ. ಶ್ರೀಗುರುವು ಇದೆಲ್ಲವನ್ನು ತನ್ನ ಜ್ಞಾನ ಕಣ್ಣಿನಿಂದ ನೋಡಿ ನಗುತ್ತಾನೆ. ಈ ನಗುವಿನಲ್ಲಿ ಆನಂದವಿಲ್ಲ. ಇದು ಆಶ್ಚರ್ಯದ ನಗು, ಸಂವೇದನೆಯ ನಗು, ಕನಿಕರದ ನಗು. ಕಳಕಳಿಯ ಕೊರಗು.

ಮನುಷ್ಯನು ತಿಳಿದೂ ತಪ್ಪು ಮಾಡುತ್ತಾನೆ. ಲಿಂಗೈಕ್ಯ ಜಗದ್ಗುರು ಅನ್ನ ದಾನಿ ಮಹಾಸ್ವಾಮಿಗಳು ಅಪ್ಪಣೆಕೊಡಿಸುತ್ತಿದ್ದಂತೆ – ‘ರಾತ್ರಿ ಕಂಡ ಭಾವಿಯಲ್ಲಿ ಹಗಲು ಬೀಳಬಾರದು.” ಜೀವಾತ್ಮನು ಅರಿತರೂ ಅಜ್ಞಾನದಿಂದ, ಮಾಯಾಪಾಶದಿಂದ ಮರೆತು ಮರಣವನ್ನಪ್ಪುತ್ತಾನೆ. ಭವಚಕ್ರದಲ್ಲಿ ತಾನೇ ತಿರುಗುತ್ತಾನೆ. ಮಾನವ ಜನ್ಮದ ಸಾಫಲ್ಯತೆಯನ್ನು ಪಡೆಯದೇ ಹೋಗುವನಲ್ಲವೆಂದು ಗುರುವಿಗೆ ವೇದನೆಯಾಗುತ್ತದೆ. ವೇದನೆ ಆಗಬೇಕು. ಅದುವೆ ಸದ್ಗುರುವಿನ ಪರಿಪೂರ್ಣ ಹೃದಯ. ಭಕ್ತವಾತ್ಸಲ್ಯದ ಪ್ರತೀಕ.

ಪ್ರತಿಯೊಬ್ಬ ಮಾನವನು ಮಾನವ ತನುವನ್ನು ಪಡೆದ ಮೇಲೆ ಮಹಾಲಿಂಗ ರಂಗ ಕವಿಯು ಹೇಳಿದ-

“ಹುಟ್ಟಿದರೆ ಸಾವಿಲ್ಲದಿಹ ಬಲು ಬಟ್ಟೆಯನ್ನು ಸಾಧಿಸಬೇಕದು |

ನೆಟ್ಟನಳವಡದಿರ್ದೊಡೀ ತನುವಿದ್ದ ಬಳಿಕೇನು”

ಎಂಬ ಮಾತನ್ನು ಅರಿತು ಆಚರಿಸಬೇಕು. ಜಡಕರ್ಮಗಳ ಜಾಲದಲ್ಲಿ ಸಿಕ್ಕು ನುಚ್ಚು ನೂರಾಗುವದನ್ನು ತಪ್ಪಿಸಿಕೊಂಡು ಮಾಯಾ ಪಾಶವನ್ನು ಹರಿದುಕೊಳ್ಳಬೇಕು. ಅಂದರೆ ಗುರುವಿಗೆ ಸಂತಸ, ಇಲ್ಲದಿದ್ದರೆ ನೋವು, ಶಿಷ್ಯನ ಸದಿಚ್ಛೆ, ಗುರುವಿನ ಸಂವೇದನೆ ಭವಸಾಗರದಿಂದ ದಾಟಿಸಬಲ್ಲುದು.

ಅದಕ್ಕಾಗಿ ಶಿಷ್ಯನು ಸದ್ಗುರುವಿನ ಅಪಾರ ಮಹಿಮಾತಿಶಯವನ್ನು ಅರಿತು ಶರಣಾಗತನಾಗಬೇಕು. ಬೇಡಬೇಕು. ಗುರುವಾದರೂ ವಿಶ್ವಕುಟುಂಬಿಯೂ ಭಕ್ತ ವತ್ಸಲನೂ ಆಗಬೇಕು. ಅಂಥವನು ಮಾನವನ ಮೂರ್ಖತನಕ್ಕೆ ನಗುತ್ತಾನೆ. ಕರುಣೆ ಯಿಂದ ಕನವರಿಸಿ ಉದ್ಧರಿಸುತ್ತಾನೆ. ಓ ಗುರುವೆ, ನಿನ್ನ ಅಂತಃಕರಣದ ಸಂವೇದನೆಯು ನಮ್ಮನ್ನು ಉದ್ಧರಿಸಲಿ.

Related Posts