ಜ.ಚ.ನಿ
ಕನ್ನಡ ನಾಡಿನಲ್ಲಿ ಇಂದಿನವರೆಗೂ ಆಗಿ ಹೋದ ಅನಂತ ಮಹಾನುಭಾವರು ಒಂದೊಂದು ಕೃತಿ ಕಲೆಗಳಿಂದ ತಮ್ಮ ತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ; ರಹಸ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಕಲಾವಂತರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿದ್ದಾರೆ. ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸಿದ ಶ್ರೇಷ್ಠ ಮಹಾನುಭಾವನೆಂದರೆ ವರಿಷ್ಠ ಕಾರಣಿಕ ಪುರುಷನೆಂದರೆ ಲಿಂ. ಶ್ರೀ ನಿ. ಪ್ರ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು. ಅವರ ಇಡೀ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ; ಐಹಿಕಾಮುಷ್ಮಿಕ ಸಾಧನವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸದ್ಗುಣಗಳು ಗುಂಪಿತವಾಗಿದ್ದವು; ಗುಡ್ಡೆಯಾಗಿದ್ದವು. ವಿಚಾರ ಸ್ವಾತಂತ್ರ ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯಭಿಮಾನ, ಕಾರ್ಯಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದವು. ಅಸದೃಶವಾದ ಸ್ವಾರ್ಥತ್ಯಾಗ, ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ
ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾತ್ತ ಉದ್ದೇಶ, ಉದಾರ ಉತ್ತೇಜನ, ಉನ್ನತ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಪ್ರಕೃತಿ ಗುಣಗಳಾಗಿದ್ದವು. ಈ ಎಲ್ಲ ಸದ್ಗುಣಗಳಿಂದ ಶ್ರೀ ಕುಮಾರಯೋಗಿಯು ತನ್ನ
ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿಯೆ ಇಡೀ ಕನ್ನಡ ಕುವರನಾಗಿ ಬದುಕಿದನು. ಕಾರಣಿಕನಾಗಿ ಬಾಳಿದನು. ಹೊಟ್ಟೆಯಲ್ಲಿ ಹುಟ್ಟುವ ಸಾಮಾನ್ಯ ಕುವರನು ತನ್ನ ತಂದೆ-ತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಇಡೀ ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲಕೇಳಿಗಳಿಂದ ತನ್ನ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು, ಅಸಾಧಾರಣವಾದ ಪ್ರೌಢಲೀಲೆಗಳಿಂದ ಪವಿತ್ರ ಕಾರ್ಯಗಳಿಂದ ಇಡೀ ಜನಾಂಗವನ್ನು ಕಡುಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರಯೋಗಿಯು ಮಾಡಿದನು; ಮಹಾಕಾರಣಿಕನಾದನು. ಆತನ ಸಹಜವಾದ ಸಣ್ಣನಗೆ, ನನ್ನಿವಾತು, ಪುಣ್ಯಕಳೆಗಳನ್ನು ಕಂಡು ಕೇಳಿ ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ, ಮಿತವಾದ ಅನುಭವಪೂರ್ಣ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ ಪಾಮರರಿಲ್ಲ. ಅವರು ಕೈಕೊಳ್ಳುತ್ತಿರುವ ಕಲ್ಮಷರಹಿತವಾದ ಕಾರ್ಯಕಲಾಪಗಳಿಗೆ ಸಂಪತ್ತು ಸಹಾಯಗಳನ್ನು ನೀಡದ ಸಾಹುಕಾರರಿಲ್ಲ, ಸಾಮಾಜಿಕರಿಲ್ಲ.
ಅವರು ಓಜಸ್ಸಿನಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೆ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಆಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅಡಿಯನ್ನಿಟ್ಟರು. ಆ ಮಹತ್ಕಾರ್ಯಗಳಲ್ಲಿ ಒದಗುವ ತೊಡಕು ತೊಂದರೆಗಳಿಗೂ ಬರುವ ಭಯಭೀತಿಗಳಿಗೂ ಅವರು ಅಂಜಲಿಲ್ಲ; ಅಳುಕಲಿಲ್ಲ. ದೊಡ್ಡ ಪ್ರವಾಹವು ತನಗೆ ಎದುರಾಗುವ ಕಾಡುಗೀಡುಗಳನ್ನು ತನ್ನ ಸೆಳೆವಿನಿಂದ ಭೇದಿಸಿ, ದೊಡ್ಡ ದೊಡ್ಡ ದುಂಡುಬಂಡೆಗಳ ಮೇಲೆ ನೆಗೆದು ಮುಂದಕ್ಕೆ ಸಾಗುವಂತೆ, ಸಾಗರ ಸೇರುವಂತೆ ಶ್ರೀಗಳು ತಮ್ಮ ಸತ್ಕಾರ್ಯಸಾಧನೆಯಲ್ಲಿ ಎಡೆಬಿಡದೆ ಅಡ್ಡಬರುವ ದುರಂತವಾದ ಎಡರುತೊಡರುಗಳನ್ನು ಸಹ ತನ್ನ ವೈರಾಗ್ಯದ ವಜ್ರಾಘಾತದಿಂದ ಹೊಡೆದು ಒಡೆದು ಪುಡಿಮಾಡಿ ತನ್ನ ಧೈಯದತ್ತ ವಾಯುವೇಗದಿಂದ ಸಾಗಿದರು. ಸಾಧಿಸಿದರು. ಸತ್ಯವನ್ನು ಎತ್ತಿಹಿಡಿಯಲು ಸಮಾಜವನ್ನು ಸುಂದರಗೊಳಿಸಲು ಸ್ವಲ್ಪವೂ ಹೆದರದೆ ಹಿಂಜರಿಯದೆ ಛಲತೊಟ್ಟರು; ಬಲ ಮುಡಿಪಿಟ್ಟರು. ಅವರು ಮಾಡಿದ ಮಹಾಕಾರ್ಯಗಳ ಮಹಾಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು, ಬೆರಗುಗೊಳಿಸಿತು. ಆ ಪುಣ್ಯಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು; ದಾರಿ ಹಚ್ಚಿತು. ಆ ಕುಮಾರಯೋಗಿಯು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ ಪ್ರತಿಯೊಬ್ಬ ಸಮಾಜಾಭಿಮಾನಿಯ ಸಂಸ್ಕೃತಿಯಭಿಮಾನಿಯ ಹೃದಯಮಂದಿರದ ಮಾನ್ಯಮೂರ್ತಿಯಾದನು; ಪೂಜ್ಯವ್ಯಕ್ತಿಯಾದನು; ಯೋಗಿಯಾದನು; ವಿರಾಗಿಯಾದನು ಕಾರಕನಾದನು; ಕಾರಣಿಕನಾದನು. ಅಂತಹ ಪುಣ್ಯಶ್ಲೋಕಿಯ ಪವಿತ್ರಚರಿತ್ರೆಯನ್ನು ಮನತಟ್ಟಿದ ರೀತಿಯಲ್ಲಿ ಮಂದಟ್ಟಾಗುವಂತೆ ಮುಂದಿರಿಸುವ ಪ್ರಯತ್ನ ಪಡಲಾಗಿದೆ; ಪ್ರವೇಶ ಮಾಡಲಾಗಿದೆ.