ಶ್ರೀ ಕುಮಾರ ಸ್ವಾಮಿಗಳ ವಿಚಾರಗಳು

ಶಿವಯೋಗಮಂದಿರದ ಸಾಧಕರಾಗಿದ್ದಾಗಿನ ಅವಧಿಯಲ್ಲಿ ಶ್ರೀ ಕುಮಾರ ಸ್ವಾಮಿಗಳು ಹೇಳಿದವಿಚಾರಗಳನ್ನು ಸಖರಾಯಪಟ್ಟಣದ ಶ್ರೀ ಸದಾಶಿವ ಪಟ್ಟಾಧ್ಯಕ್ಷರು ಬರೆದುಕೊಂಡ ಟಿಪ್ಪಣಿಗಳು.

ವೀರಶೈವ ತತ್ತ್ವ ವಿಚಾರ

೧. ಷಣ್ಮತಗಳಲ್ಲಿ ವೀರಶೈವ ಮತವು, ಶೈವದೊಳಗಿನ ಒಂದು ಭೇದವು. ಸಪ್ತವಿಧ ಶೈವಗಳಲ್ಲಿ ಶಿಷ್ಟತಮವಾದ ಅಪ್ರಾಕೃತವೆನಿಸಿದ ವೀರಶೈವ ಮತವು ವಿಶೇಷವು. ಈ ಮತಕ್ಕೆ ಲಿಂಗಾಂಗ ಸಾಮರಸ್ಯವೆ ಅಸಾಧಾರಣ ಲಕ್ಷಣವು.

 ೨. ವೀರಶೈವರಿಗೆಲ್ಲ ಅಪ್ರಾಕೃತತ್ವವು ಜನ್ಮದಿಂದಲೂ ಧರ್ಮದಿಂದಲೂ ಉಂಟು. ಅಪ್ರಾಕೃತತ್ವವು ಜನ್ಮದಿಂದ ಅವ್ಯಕ್ತ ಸ್ಥಿತಿಯಲ್ಲಿದ್ದು ಧರ್ಮದಿಂದ ವ್ಯಕ್ತಸ್ಥಿತಿಯನ್ನು ಹೊಂದುವುದು. ಇದರಿಂದ ಲಿಂಗಧಾರಣಾದಿಗಳು ವ್ಯರ್ಥವೆನಿಸವು. ಆಗಂತುಕರಿಗೆ ಮಾತ್ರ ಧರ್ಮದಿಂದ ಉಂಟು.

 ಈ ಧರ್ಮವು ಅತಿವರ್ಣಾಶ್ರಮಾನುಸಾರವಾದುದು. ಅಂದರೆ ಬ್ರಹ್ಮ ನಿರ್ಮಿತಗಳಾದ ಪ್ರಾಕೃತ ವರ್ಣಾಶ್ರಮ ಧರ್ಮಗಳನ್ನು ಮೀರಿದುದು. ಶಿವನಿರ್ಮಿತ ವರ್ಣಾಶ್ರಮ ಧರ್ಮವುಳ್ಳುದು. ಆದ್ದರಿಂದ ಅಪ್ರಾಕೃತ ಬ್ರಾಹ್ಮಣ್ಯಕ್ಕೂ ತದ್ಗತ ಗುರುತ್ವಕ್ಕೂ ಹಾನಿಯಲ್ಲ.

 ೩. ‘ಶಿವಲಿಂಗವನ್ನು ಧರಿಸಿದೊಡನೆ ಶಿವನೇ ಆಗುವನು’ ಎಂಬ ವಾಕ್ಯವು ಶಿವತ್ವದ ಅಂಕುರಾರೋಪಣ ಸೂಚಕವಾಗಿರುವುದು. ಕೇವಲ ತನ್ನೊಳಗೆ ಅವ್ಯಕ್ತವಾದ ಕಿಂಚಿತ್ ‘ ಶಿವತ್ವವನ್ನೇ ಲಿಂಗಧಾರಣಾದಿ ಸಂಸ್ಕಾರವು, ಅಂಕುರ ರೂಪದಿಂದ ವ್ಯಕ್ತಗೊಳಿಸುವ ಕಾರಣ ಇದು ಅರ್ಥವಾದವಲ್ಲ.  ʼʼಶಿವ ಏವ ನ ಸಂಶಯ?” ಎಂಬ ವಾಕ್ಯವು ಸಾರ್ಥಕವೆನಿಸುವುದು. ಶ್ರೀಗುರು ಸಂಸ್ಕಾರದಿಂದ ಬಂದ ಅಂಕುರರೂಪ ಶಿವತ್ವವನ್ನೆ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಾಂತರ್ಗತ ಲಿಂಗಾಂಗ ಸಾಮರಸ್ಯ ಮುಂತಾದವುಗಳು ಆಚಾರ ವಿಚಾರಗಳಿಂದ ಕೇವಲ ವ್ಯಕ್ತಸ್ಥಿತಿಗೆ ತರುವುದರಿಂದ ಶಿವತ್ವದ ವ್ಯಾಪಕಸ್ಥಿತಿಯು ಸ್ಪಷ್ಟ ಫಲವೆನಿಸುವುದು. ಅಂಕುರರೂಪ ಶಿವತ್ವವನ್ನು ವ್ಯಕ್ತಪಡಿಸುವುದರಿಂದ ʼʼಶಿವ ಏವ ನ ಸಂಶಯಃ” ಎಂಬ ವಾಕ್ಯ ಸಮನ್ವಯಕ್ಕೆ ಭಂಗಬಾರದು.

 ೪. ಲಿಂಗಧಾರಿಗಳಲ್ಲಿ ಏಳು ಭೇದಗಳಿರುವವು. ಅವುಗಳಲ್ಲಿ ಏಳನೇ ಭೇದವನ್ನು ಹೊಂದುತ್ತಾನೆಂದು ಕೆಲವು ಗ್ರಂಥಗಳಲ್ಲಿ ಉಕ್ತವಾಗಿರುವುದು.

 ಅಷ್ಟಾವರಣ ವಿಶಿಷ್ಟ ಪಂಚಾಚಾರವೆ ವೀರಶೈವ ಧರ್ಮವಾದ್ದರಿಂದ ಈ ಧರ್ಮವೇ ಇತರ ಲಿಂಗಧಾರಿಗಳ ಭೇದವನ್ನು ಸೂಚಿಸುವುದು. ಇದರಿಂದಾಗಿ ಇದು ವ್ಯಾವರ್ತಕ ಧರ್ಮವೆನಿಸುವುದು (ಇಲ್ಲಿ ವಿಚಾರವಿದೆ) ಯೋಗಜ್ಞಾನ ಸಮುಚ್ಚಯವೆ ವ್ಯಾವರ್ತಕ ಧರ್ಮವು

೫. ಲಿಂಗಧಾರಿಗಳಾದ ಅಪ್ರಾಕೃತರೆಲ್ಲರಿಗೂ ಪ್ರಾಕೃತ ವರ್ಣಾಶ್ರಮಗಳಿರುವುದಿಲ್ಲ. ಅಷ್ಟಾವರಣ, ಪಂಚಾಚಾರಾದಿ ಧರ್ಮವೃತ್ತಿಯಿಂದ ಜೀವಿಸುತ್ತಾರೆ. ಅದು ಹೇಗೆಂದರೆ : ಕೃಷಿ, ವಾಣಿಜ್ಯಾದಿ ವೃತ್ತಿಗಳನ್ನು ವೀರಶೈವರಲ್ಲಿ ಕಂಡರೂ ಗುರು, ಲಿಂಗ,  ಜಂಗಮ ಸೇವಾರ್ಥವಾಗಿಯೇ ಆ ವೃತ್ತಿಗಳನ್ನು ಕೈಗೊಂಡಿರುವುದರಿಂದ ಅವು ಪ್ರಾಕೃತವೆನಿಸದೆ ಅಪ್ರಾಕೃತ ವೃತ್ತಿಯಲ್ಲಿ ಗಣನೆಯಾಗಿರುವವು.

 ೬. ವೀರಶೈವ ನಿಯತಿಯಂತೆ ಲಿಂಗಧಾರಿಗಳಾದ ಅಪ್ರಾಕೃತರಲ್ಲಿಯೂ ಅಷ್ಟಾವರಣವೇ ಅಂಗ; ಪಂಚಾಚಾರವೆ ಪ್ರಾಣವಾದ ಭಕ್ತತ್ವವು ಉಂಟು.

೭. ಗುರು, ಲಿಂಗ, ಜಂಗಮ ಈ ತ್ರಿವರ್ಗಕ್ಕೂ ಅಷ್ಟಾವರಣ ವಿಶಿಷ್ಟ ಭಕ್ತತ್ವವುಂಟು.

೮. ಗುರು, ಲಿಂಗ, ಜಂಗಮವು-ಪರಶಿವ ಅಥವಾ ಪರಬ್ರಹ್ಮ ತತ್ತ್ವದ ಪರಿಣಾಮವು. ಲಿಂಗ, ಗುರು, ಜಂಗಮತ್ರಯದಲ್ಲಿ ಉಪಾಸಕೋಪಾಸ್ಯಭೇದವು ಕ್ರಮದಿಂದ ಸಂದರ್ಭಾನುಸಾರ ತೋರುವುದು. ಹೇಗಂದರೆ ಲಿಂಗ, ಗುರು, ಜಂಗಮತ್ರಯಗಳಲ್ಲಿ ಒಂದೊಂದು ಮೂರು ಮೂರು ಭೇದವಾಗಿ ನವವಿಧವಾದುದು ಶಾಸ್ತ್ರಾನುಭವ ಸಮ್ಮತವಾಗಿರುವುದರಿಂದ ಲಿಂಗದೊಳಗಿನ ಲಿಂಗಕ್ಕೆ ಗುರುವಿನಲ್ಲಿ ತೋರಿದ ಲಿಂಗವು ಉಪಾಸ್ಯವಾದುದು. ಅದಕ್ಕಿಂತಲೂ ಜಂಗಮದೊಳಗಿನ ಲಿಂಗವು ಶ್ರೇಷ್ಠ (ಉಪಾಸ್ಯ)ವಾದುದು. ಲಿಂಗದೊಳಗಿನ ಗುರುತ್ವಕ್ಕಿಂತಲೂ ಗುರುವಿನಲ್ಲಿರುವ ಗುರುತ್ವವು ಅಧಿಕ. ಅದಕ್ಕಿಂತಲೂ ಜಂಗಮದೊಳಗಿನ ಗುರುತ್ವವು ಶ್ರೇಷ್ಠ.  ಲಿಂಗದೊಳಗಿನ ಜಂಗಮತ್ವಕ್ಕಿಂತಲೂ ಗುರುವಿನಲ್ಲಿರುವ ಜಂಗಮತ್ವವು ಶ್ರೇಷ್ಠವು.

ಅದಕ್ಕಿಂತ ಜಂಗಮದೊಳಗಿನ ಜಂಗಮತ್ವವು ಅಧಿಕವು. ಈ ಕ್ರಮವನ್ನನುಸರಿಸಿ ಉಪಾಸಕೋಪಾಸ್ಯ ಭಾವವನ್ನು ತಿಳಿಯತಕ್ಕುದು. ಆದರೂ ಒಂದೊಂದು ವಸ್ತುವಿನಲ್ಲಿರತಕ್ಕ ಲಿಂಗ, ಗುರು, ಜಂಗಮ ಇವು ಸಂದರ್ಭಾನುಸಾರವಾಗಿ ಪೂಜಕ

ಪೂಜ್ಯತ್ವವನ್ನು ಹೊಂದುವವು. ಇವುಗಳಿಗೆ ಕ್ರಮವಾಗಿ ಉಪಾಸಕೋಪಾಸ್ಯಭಾವವು ಇರುವುದು. ಸಂದರ್ಭಾನುಸಾರವಾಗಿ ಭಕ್ತವರ್ಗದ ಭಕ್ತಸ್ವರೂಪವಾದ ಲಿಂಗದಲ್ಲಿರುವ ಜಂಗಮಕ್ಕಿಂತಲೂ ಗುರುವಿನಲ್ಲಿರುವ ಲಿಂಗವು ಅಧಿಕವು.  ಗುರುವಿನಲ್ಲಿರುವ ಗುರು ಜಂಗಮಕ್ಕಿಂತಲೂ ಜಂಗಮದಲ್ಲಿರುವ ಜಂಗಮವು ಅಧಿಕವಾದುದು, ಮತ್ತು ಭಕ್ತವರ್ಗದ ಭಕ್ತನಾದರೂ ಯೋಗ್ಯವೃತ್ತಿಯಿಂದ ಗುರು, ಲಿಂಗ, ಜಂಗಮ ಸ್ವರೂಪನಾಗುವನು. ಗುರು, ಜಂಗಮರು ಯೋಗ ರೂಢಿಯಿಂದ ಗುರು ಲಿಂಗ ಜಂಗಮ ಸ್ವರೂಪರಾಗುವದು. ತತ್ತ್ವರೂಪವನೈದದೆ ತತ್ತ್ವದ್ದೇವತಾರಾಧನೆ ಮಾಡಲಿಕ್ಕೆ ಬರುವುದಿಲ್ಲ. ಆದ್ದರಿಂದ ಪದಾರ್ಥ ತನುವೆ ಕಾಲಾನುಗುಣವಾಗಿ ಪ್ರಸಾದತನು ಆಗುವಂತೆ ಭಕ್ತನಾದರೂ ಯೋಗ ವೃತ್ತಿಯಿಂದ ಗುರು ಲಿಂಗ ಜಂಗಮ ಸ್ವರೂಪವನ್ನು ಹೊಂದಿ  ಸಿದ್ಧನೆನಿಸುವನು. ಇದರಂತೆ ಗುರುವರ್ಗದಲ್ಲಿ ಜನಿಸಿರುವವರು, ಗುರುತ್ವ ಸಂಸ್ಕಾರದಿಂದ ಯೋಗರೂಢಿಯಿಂದ ಗುರುಲಿಂಗ ರೂಪವನ್ನು ಹೊಂದುವರು. ಮರಳಿ ಅವರಿಗೆ ಸಂಸ್ಕಾರ ವಿಶೇಷವಾದರೆ ರೂಢಿಯಿಂದಲೂ ಗುರು ಲಿಂಗ ಜಂಗಮ ಸ್ವರೂಪರಾಗುವರು. ಇವರಾದರೂ ಮೇಲ್ಕಂಡಂತೆ ಸಾಧಕ ಸ್ಥಿತಿಯಲ್ಲಿದ್ದು ಉನ್ನತಾವಸ್ಥೆಯನ್ನು ಹೊಂದುತ್ತ ಮುಂದೆ ಸಿದ್ಧ ಸ್ಥಿತಿಯನ್ನು ಹೊಂದುವರು. ಈ ಪ್ರಕಾರವಾಗಿ ಸಂಸ್ಕಾರವಾಗಿ ಅನುಷ್ಠಾನ ಉಪಾಸಕೋಪಾಸ್ಯ ವ್ಯವಸ್ಥೆಯು.

೯. ಗುರು ಜಂಗಮರಿಗೆ ಮತ್ತೊಂದನ್ನಾಶ್ರಯಿಸಿ ಪೂಜ್ಯತ್ವವಿಲ್ಲ. ಅವರು ಸ್ವಯಂ ಪೂಜ್ಯರು. ನಿತ್ಯ ಮುಕ್ತರು.  ಜಗದ್ಧಿತಾರ್ಥವಾಗಿ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಉಪಾಸಿಸುವುದುಂಟು. ವ್ಯಾಪಕವಾದ ಪರಲಿಂಗಕ್ಕೆ ಗುರುಲಿಂಗ ಜಂಗಮವೆಂತಲೂ ಪರ್ಯಾಯ ನಾಮಗಳುಂಟು. ಇದನ್ನೇ ಭೇದೋಪಭೇದಗಳಿಂದ ಸಮಯೋಚಿತವಾಗಿ ಸ್ವಸ್ವರೂಪವಾಗಿ ವ್ಯಾಪ್ಯರಾದ ಗುರು ಲಿಂಗ ಜಂಗಮರು ಪೂಜಿಸುವರು.

 ಗುರು ಜಂಗಮರು ಪೂಜ್ಯರಾಗಬೇಕಾದರೆ ವ್ಯಾಪಕವಾದ ತಮ್ಮ ನಿಜ ಸ್ವರೂಪವಾದ ಮೂಲ ಲಿಂಗವನ್ನು ತಂತಮ್ಮನಿರಾಭಾರಿ-ಸಾಭಾರಿ ಗುರುಗಳ ಪ್ರಯತ್ನ ವಿಶೇಷದಿಂದ ಸಂಸ್ಕರಿಸಿ ಲಿಂಗಾಕಾರಗೊಳಿಸಿ, ಅಂಗತ್ರಯವನ್ನು ಸಂಬಂಧಗೊಳಿಸಿ ಆಜ್ಞಾಪಿಸಿದಂತೆ ಆಚರಿಸುವುದರಿಂದ ಪೂಜ್ಯರೆನಿಸುವರು. ವಿಶುದ್ಧ ಸತ್ವಸ್ವರೂಪೋ ಪಾಧಿಯಂದೊಪ್ಪುವ ಗುರುಮೂರ್ತಿಯು ಮಲಿನ ಸತ್ವಸ್ವರೂಪ ವಿದ್ಯೋಪಹಿತ ಪುರುಷಾಕಾರ ಶರೀರದಲ್ಲಿದ್ದು ಜೀವಕಲೆಯನ್ನು ಸಂಸ್ಕರಿಸಿ ತಮಃ ಪ್ರಧಾನ ಪ್ರಕೃತಿ ಸ್ವರೂಪ ಶಿಲಾಮಯವಾದ ಲಿಂಗಾಕಾರದಲ್ಲಿ ಸ್ಥಾಪಿಸೋಣದರಿಂದ ಲಿಂಗವು ಪೂಜ್ಯವಾಗಿರುವುದು. ಅಂದರೆ ಗುರು ಜಂಗಮರಿಂದಲೆ ಲಿಂಗಕ್ಕೆ ಪೂಜ್ಯತ್ವವು ಬಂದಿರುವುದೆಂದು ಸ್ಪಷ್ಟವೆನಿಸುವುದು.

 ಚತುರ್ವಿಧ ವಾಗ್ವ್ಯವಹಾರ ಪರಬ್ರಹ್ಮಜ್ಞಾನ ಅಧಿಕಾರವುಳ್ಳ ಜೀವ ಚೈತನ್ಯ ವಿಶಿಷ್ಟ ಮನುಷ್ಯರಲ್ಲಿ ಬದ್ಧತ್ವ ಮುಕ್ತತ್ವವಿದ್ದಂತೆ-ಪಶುಪಕ್ಷ್ಯಾದಿ ಮೃತ್ಪಾಷಾಣಾದಿಗಳಲ್ಲಿ ಇಂಥ ಬಂಧತ್ವ ಮುಕ್ತತ್ವವಿರುವುದಿಲ್ಲ. ತಮಃ ಪ್ರಧಾನ ಕೃತಿಯಿಂದ ತೋರಿದ ಜಡಶಿಲೆಯಲ್ಲಿ ಪುರುಷನ ಚೈತನ್ಯಗತವಾಗಿರುವ ಚಿತ್ಕಲೆಯನ್ನು ಪ್ರತಿಷ್ಠಿಸಲು ಆಯಾ ವ್ಯಕ್ತಿಗೆ ಅದು ಪೂಜ್ಯವಾದ ಲಿಂಗವಿರುವುದು. ಚಿತ್ಕಲಾ ಪ್ರತಿಷ್ಠಿತವಾಗುವುದಕ್ಕಿಂತಲೂ ಪೂರ್ವದಲ್ಲಿ ಶಿಲಾಮಯ ಲಿಂಗಾಕಾರದಲ್ಲಿ ಈ ಬಗೆಯ ಬಂಧತ್ವದ ವ್ಯವಹಾರವೇ ಇಲ್ಲದ್ದರಿಂದ ಆ ಲಿಂಗಕ್ಕೆ ಮೋಕ್ಷಾಧಿಕಾರವೇ ಇಲ್ಲ.

ಗುರು ಜಂಗಮರಿಗೆ ಸ್ವಾಮಿತ್ವ, ಸ್ವತಂತ್ರತ್ವದ ಅಧಿಕಾರವು, ಗುರುತ್ವ ಜಂಗಮತ್ವ ಸಂಸ್ಕಾರವಾಗುವದಕ್ಕಿಂತಲು ಮೊದಲು ಅವ್ಯಕ್ತಸ್ಥಿತಿಯಲ್ಲಿದ್ದು ಸಂಸ್ಕಾರ ವಿಶೇಷದಿಂದ ಸ್ಪಷ್ಟವೆನಿಸಿರುವ, ಅಂದರೆ ವ್ಯಕ್ತವಾಗಿರುವ ಸ್ಥಿತಿಯೇ ಮುಕ್ತಿಯೆನಿಸುವುದು. ವಿಸ್ತೃತ

ಸ್ಥಿತಿಯಲ್ಲಿದ್ದ ಬದ್ಧತ್ವವು ನಾಶವಾಗುತ್ತಾಗುತ್ತ ವ್ಯಾಪಕ ಸ್ಥಿತಿಯ ಸ್ವಾಮಿತ್ವ ಸ್ವತಂತ್ರತ್ವ ವುಂಟಾದದ್ದೇ ಮುಕ್ತತ್ವವೆನಿಸುವುದು. ಗುರು ಜಂಗಮರಲ್ಲಿ ಅಪ್ರಾಕೃತ ಪುರುಷತ್ವ ವಿದ್ದಂತೆ ಲಿಂಗದಲ್ಲಿಯಾದರೂ ಅಪ್ರಾಕೃತ ಶಿಲಾತ್ವವಿರುವುದು. ಪುರುಷಾಕಾರದ ಗುರು ಜಂಗಮಾದಿಗಳ ಪ್ರಯತ್ನದಿಂದಲೇ ಶಿಲೆಯಲ್ಲಿದ್ದ ಶಿಲಾಭಾವವು ಹೋಗಿ ಶಿವತ್ವವುಂಟಾಗುವುದು. ಆ ಶಿವತ್ವವು ವ್ಯಾಪಕಸ್ಥಿತಿಗೆ ಬರಬೇಕಾದರೆ ಆ ಭಕ್ತನು ಗುರು ಜಂಗಮರ ಪಾದೋದಕ ಪ್ರಸಾದಾದಿಗಳಿಂದ ಲಿಂಗದಲ್ಲಿ ವ್ಯಾಪಕತ್ವವನ್ನು

ತಂದುಕೊಂಡು ತದ್ವಾರಾ ವ್ಯಾಪಕನಾಗುವುದೇ ಮುಕ್ತಿಯು.  ಸಾರಾಂಶವಿದು : ಗುರು ಜಂಗಮರು ಅನ್ಯವಾದ ಲಿಂಗಾಶ್ರಯವನ್ನು ಮಾಡದೆ ಸ್ವಸ್ವರೂಪ ಲಿಂಗಾರ್ಚನಾದಿಗಳಿಂದ ಮುಕ್ತರಾಗುವರು. ಲಿಂಗವು ಗುರು ಜಂಗಮರಿಂದ ಸ್ಥಾಪಿಸಲ್ಪಟ್ಟು ಗುರು ಜಂಗಮರ ಕೃಪೆಯಿಂದಲೇ ವ್ಯಾಪಕ ಸ್ಥಿತಿಯನ್ನು ಹೊಂದಿ ತನ್ನನ್ನು ಆಶ್ರಯಿಸಿದ ಭಕ್ತನಿಗೆ ಮುಕ್ತಿಯನ್ನುಂಟು ಮಾಡುವುದು.

೧೦. ಕ್ರಿಯಾಜ್ಞಾನರೂಪ ಗುರು. ಕ್ರಿಯಾರೂಪ ಲಿಂಗ. ಜ್ಞಾನರೂಪ ಜಂಗಮ. ಹೀಗೆ ಗುರು-ಲಿಂಗ-ಜಂಗಮ ಶಬ್ದದ ಅನ್ವರ್ಥಕವಿರುವುದು. ಮತ್ತು ಭಕ್ತರ ಅನಿಷ್ಟವನ್ನು ಪರಿಹರಿಸಿ ಕೊಡುವುದರಿಂದಲೂ ‘ಇಷ್ಟಿ’ ಅಂದರೆ ಪೂಜಾ; ಆ ಪೂಜೆಯಿಂದ ನಿರಂತರ ಆರಾಧಿಸಲ್ಪಡುವುದರಿಂದಲೂ ಇಷ್ಟಲಿಂಗವೆ೦ದು ಅನ್ವರ್ಥಕವಾಗಿರುವುದು. ಮಲತ್ರಯ ರೂಪ ಅಜ್ಞಾನಾಂಧಕಾರವನ್ನು ದೂರಮಾಡಿ ಶಿವಾದೈತರೂಪ ನಿತ್ಯಾನಂದವನ್ನುಂಟುಮಾಡಿಕೊಡುವುದಕ್ಕೆ ಕರ್ತೃವಾದ್ದರಿಂದಲೂ ಸಂಶಯ ನಿರಸನದ್ವಾರದಿಂದ ನಿತ್ಯ ಮುಕ್ತಿಯನ್ನುಂಟುಮಾಡುವನಾದ್ದರಿಂದಲೂ  ಬಾಹ್ಯಾಂತರಗಳಲ್ಲಿ  ಹರಿದಾಡುವ ಮನಸ್ಸನ್ನು ಭೇದಿಸಿ ಬೋಧಿಸುವ ಘನ ಸಾಮರ್ಥ್ಯವುಳ್ಳವನಾದ್ದರಿಂದಲೂ ಗುರುವೆಂಬ ಶಬ್ದವು ಅನ್ವರ್ಥಕವಾಗಿರುವುದು.

ತನ್ನ ಪ್ರಕಾಶ ಸಾನ್ನಿಧ್ಯಮಾತ್ರದಿಂದ ಶಿವಶಕ್ತ್ಯತ್ಮಕ ಪ್ರಪಂಚವನ್ನು ಬೆಳಗಿ ಅನಿಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನುಂಟುಮಾಡಿ ಅಂತರ್ಬಹಿರ್ಮನಸ್ಸನ್ನು ಭೇದಿಸುವ ಸ್ವಯಂಪ್ರಕಾಶ ಸ್ವರೂಪವೇ ಜಂಗಮದ ಅನ್ವರ್ಥಕವಾಗಿರುವುದು.

ಸಚ್ಚಿದಾನಂದತ್ವವು ಲಿಂಗ-ಗುರು-ಜಂಗಮ ಈ ತ್ರಿವರ್ಗದ ಅಸಾಧಾರಣ ಲಕ್ಷಣಗಳಾಗಿದ್ದರೂ ಪರಸ್ಪರ ಭಿನ್ನಾಭಿನ್ನ ಲಕ್ಷಣಗಳಿಂದ (ಇಲ್ಲಿ ಅಭಿನ್ನವೆಂದರೆ ಅನ್ನೋನ್ಯವೆಂದರ್ಥ). ಜಗದ್ಧಿತಾರ್ಥವಾಗಿ ದಿವ್ಯ ಚೇಷ್ಟೆಯಿಂದ ಶೋಭಿಸುವವು.

 ೧೧. ಅಷ್ಟಾವರಣವೇ ಅಂಗವಾಗಿ ಪಂಚಾಚಾರವೇ ಪ್ರಾಣವಾಗಿ ಶೋಭಿಸುವ ಅಂಗನೇ ಭಕ್ತಶಬ್ದವಾಚ್ಯನು. ಶಿವನು, ‘ನಾನು ಭಕ್ತನ ಕೇವಲ ಚೈತನ್ಯ ಸ್ವರೂಪವಾದ ಶಿವಕಲೆಯಿಂದಲೂ ಶಿಲಾಮಯವಾದ ಲಿಂಗಾಕಾರದಲ್ಲಿ ಶೋಭಿಸಿ ಪೂಜ್ಯತೆಯ ಪಡೆದಿರುವದರಿಂದ ಆ ಭಕ್ತನ ಜಿಹ್ವಾದ್ವಾರದಿಂದಲೇ ಲಿಂಗರೂಪಿಯಾಗಿ ತೃಪ್ತಿಯನ್ನು ಹೊಂದುವೆನೆಂದು ಹೇಳುವುದೇ ಇದು ಪರ್ಯವಸಿತಾರ್ಥವು.

೧೨. ಅಪ್ರಾಕೃತ ಮುಮುಕ್ಷುಗಳಾದ ಗುರುಜಂಗಮೇತರ ಭಕ್ತವಂಶೀಯರೂ ಆಗಂತುಕರೂ ತಂತಮ್ಮ ಉದ್ಧಾರತೆಯ ದೆಸೆಯಿಂದ ಸ್ವಸ್ವರೂಪ ಲಿಂಗವನ್ನೂ ಆ ಲಿಂಗವನ್ನು ಕರುಣಿಸಿದ ಗುರುಮೂರ್ತಿಗಳನ್ನೂ ಆ ಲಿಂಗ ಮುಖವಾದ ಜಂಗಮ ಮೂರ್ತಿಗಳನ್ನೂ ಗುರು ಲಿಂಗ ಜಂಗಮ ಪೂಜಾಧಿಕಾರ ಪ್ರದಾಯಕ ವ್ರತರೂಪ ಭಸ್ಮ ರುದ್ರಾಕ್ಷಗಳ ಧಾರಣವನ್ನೂ ಇಷ್ಟಲಿಂಗವನ್ನು ಜಾಗ್ರತೆಗೊಳಿಸುವ ಸಾಧನವಾದ ಪಂಚಾಕ್ಷರ ಮಂತ್ರ ಜಪವನ್ನೂ ಗುರು ಲಿಂಗ ಜಂಗಮರೆಂಬ ಇಷ್ಟ ದೇವತೆಗಳ ಪಾದೋದಕ-ಪ್ರಸಾದರೂಪ ಫಲವನ್ನೂ ಭಕ್ತಿಯಿಂದ ಅರ್ಚನಾದಿಗಳ ದ್ವಾರಾ ಸೇವಿಸುವರು.

ಗುರು ಜಂಗಮರಾದರೂ ತಂತಮ್ಮ ಸಾಭಾರಿ ಗುರುಗಳಿಂದ ಮೂರ್ತಿಕರಿಸಿ. ಕೊಡಲ್ಪಟ್ಟ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಪೂಜ್ಯ ಪೂಜಕ ಕ್ರಮವನ್ನತಿಕ್ರಮಿಸದೆ ಗುರು ಜಂಗಮರಿಂದ ಕೊಡಲ್ಪಟ್ಟ ಭಸ್ಮ ರುದ್ರಾಕ್ಷಧಾರಣವನ್ನು ಮತ್ತು ಪಂಚಾಕ್ಷರ ಜಪವನ್ನು ಗುರು ಲಿಂಗ ಜಂಗಮರ ಪಾದೋದಕ ಪ್ರಸಾದಗಳನ್ನು ಜಗದ್ಧಿತಾರ್ಥವಾಗಿ ಪವಿತ್ರ ಲೀಲೆಯಿಂದ ಅಪ್ರಾಕೃತ ಮುಮುಕ್ಷುಗಳೆಂಬಂತೆ ಸಿದ್ಧರಾದವರು ಅರ್ಚನಾದಿ ದ್ವಾರದಿಂದ ಸೇವಿಸುವರು. ಇವರು ಸಹ ಮುಂದೆ ಆಚರಣೆಯ ವಿಶೇಷದಿಂದ ಸಿದ್ಧರಾಗುವರು. ಇದರಿಂದ ಜಂಗಮ ಸಂಪ್ರದಾಯಕರ ಮತ್ತು ಗುರು ಜಂಗಮೇತರ ವಂಶೀಯರ ಅಷ್ಟಾವರಣಾಚರಣೆಯಲ್ಲಿ ತಾರತಮ್ಯ ಭಾವವುಂಟೆಂದು ಸ್ಪಷ್ಟವಾಗಿ ಕಂಡುಬರುವುದು.

ಸಾರಾಂಶವಿದು : ಲಿಂಗಧಾರಿಗಳಾದ ಇತರರು ಧರಿಸಿದ ಲಿಂಗಕ್ಕೂ, ವೀರಶೈವರು ಧರಿಸಿದ ಲಿಂಗಕ್ಕೂ ಯಾವ ತಾರತಮ್ಯವುಂಟೋ ಅವೇ ತಾರತಮ್ಯವು ವೀರಶೈವರಲ್ಲಿಯ ಪೂಜ್ಯ ಪೂಜಕರು ಧರಿಸಿರುವ ಲಿಂಗದಲ್ಲಿಯೂ ಉಂಟು. ಎಲ್ಲರೂ ಧರಿಸಿದ ಲಿಂಗದಲ್ಲಿ ತಾರತಮ್ಯವಿಲ್ಲದೆ ಒಂದೇ ಎಂದು ಹೇಳಲಿಕ್ಕೆ ಬರುವುದಿಲ್ಲ. ಗುರು ಜಂಗಮರನ್ನು ಅಗಲಿದರೆ ಅಥವಾ ಅಪ್ಪಣೆಯನ್ನು ಮೀರಿದರೆ ಅದರಂತೆ ಲಿಂಗವನ್ನಗಲಿದರೆ ಅಪೂಜ್ಯತೆಯುಂಟಾಗುತ್ತದೆ.

೧೩. ಗುರುವು ದೀಕ್ಷಾಕಾಲದಲ್ಲಿ ಶಿಷ್ಯನ ಮಸ್ತಕದಲ್ಲಿದ್ದ ಚಿತ್ಕಲೆಯನ್ನು ಲಿಂಗದಲ್ಲಿ ಸ್ಥಾಪಿಸಿ ಲಿಂಗದಲ್ಲಿದ್ದ ಶಿವಕಲೆಯನ್ನು ಶಿಷ್ಯನ ಪ್ರಾಣದಲ್ಲಿ ಸ್ಥಾಪಿಸಿ ಎರಡನ್ನು ಏಕೀಕರಿಸಿದ ನಂತರ ಲಿಂಗವು ಭಕ್ತನ ಅಂಗವನ್ನು ಬಿಟ್ಟು ಅಗಲಿ ಹೋದಲ್ಲಿ ಪರಸ್ಪರ ಐಕ್ಯತೆಗೂ-ಗುರ್ವಾಜ್ಞಾಪಾಲನೆಗೂ ಭಂಗ ಬರುವುದರಿಂದ ಗುರುವಿನ ಆಜ್ಞೆಗೂ ಲಿಂಗಕ್ಕೂ ಅಪೂಜ್ಯತೆಯುಂಟಾಗುವುದಲ್ಲದೆ ಲಿಂಗವನ್ನಗಲಿದ ಸಾಧಕನಿಗೆ ಭಕ್ತತ್ವದಿಂದ ಪಾತಿತ್ಯವುಂಟಾಗುವುದು. ಲಿಂಗವು ಭಕ್ತನ ದೇಹವನ್ನಾಶ್ರಯಿಸಿಕೊಂಡು ಪೂಜ್ಯತ್ವವನ್ನು ಹೊಂದಿರುವುದು. ಭಕ್ತದೇಹದಿಂದಗಲಿ ಲಿಂಗವು ಸ್ವತಂತ್ರಿಸಿ ಪೂಜಾರ್ಹವಾಗಲಾರದು. ಭಕ್ತ ದೇಹಸಾಪೇಕ್ಷೆಯುಳ್ಳ ಲಿಂಗವು ಅಗಲಿ ಹೋದಲ್ಲಿ ಲಿಂಗತ್ವವು ಲುಪ್ತವಾಗುವುದು. ಗುರುಕುಲೋತ್ಪನ್ನ ಗುರುಕರ ಸಂಜಾತ ಗುರುಕುಲವಾಸಿ ಸಾಧಕ ಸ್ಥಿತಿಯ ಗುರು ಜಂಗಮರಿಗೆ ಸ್ವಸ್ವರೂಪವಾದ ಗುರುದತ್ತ ಲಿಂಗವು ವಿಯೋಗವಾದಲ್ಲಿ ಗುರ್ವಾಜ್ಞಾ

ಪೂರ್ಣಸಿದ್ಧತೆಯ ಉಳುಮೆಯ ಮೂಲಕ ಕ್ರಿಯಾಲೋಪವೆನಿಸಿದ್ದರಿಂದ ಅಪೂಜ್ಯತೆಯೂ ಲಿಂಗಕ್ಕೆ ಭ್ರಷ್ಟತೆಯೂ ಪ್ರಾಪ್ತವಾಗುವುದು. ಪೂರ್ಣಸಿದ್ಧತೆಯನ್ನು ಹೊಂದಿದವರ ಶರೀರದಲ್ಲಿದ್ದ ಲಿಂಗಕ್ಕೂ ಪ್ರಾಣಕ್ಕೂ ಎಂದೂ ವಿಯೋಗವಾಗಲಾರದು. ಇದರಿಂದ ಸಾಧಕ ದೆಸೆಯಲ್ಲಿ ಅವಧಾನಿಗಳ ಅವಶ್ಯಕತೆಯಿಲ್ಲ. ಲಿಂಗಮೂರ್ತಿಯಲ್ಲಿ ಅವಧಾನಕ್ಕೆ ಅವಕಾಶವೇ ಇಲ್ಲದ್ದರಿಂದ ಸಾಧ್ಯ ಸಾಧಕದೆಸೆಯು ಇಲ್ಲವು. ಭಕ್ತಿಯಲ್ಲಿ ವ್ಯಾಪ್ಯವ್ಯಾಪಕತ್ವವು ಸಿದ್ಧ ಸಾಧಕತ್ವವು ಅವಧಾನಾದಿಗಳ ಪ್ರಯತ್ನದಿಂದ ಉಂಟಾಗಿ ತೋರುವಲ್ಲಿ ಗುರು ಜಂಗಮರಲ್ಲಿ ತೋರುವ ಸ್ಥಿತಿಯನ್ನು ಹೇಳುವುದೇನು ?

೧೪. ಪೂಜಕರಾದ ಅಷ್ಟಾವರಣ-ಪಂಚಾಚಾರವುಳ್ಳ ವೀರಶೈವರಿಗೆಲ್ಲ ಪಾದೋದಕವು ಅವಶ್ಯಕವಾಗಿ ಬೇಕು. ಅದರಂತೆ ಪೂಜ್ಯರಾದ ಗುರು ಲಿಂಗ ಜಂಗಮಗಳಿಗಾದರೂ ಬೇಕು. ಲಿಂಗಕ್ಕೆ ಹೇಗೆ ಬೇಕೆಂದರೆ : ಭಕ್ತನಿಚ್ಛೆಯು. ಭಕ್ತನ ಶಿರದರಮನೆಯ ಚಿತ್ಕಲಾ ವಸ್ತುವೇ ಲಿಂಗವು. ಅದೇ ಅವನ ಕರಗತವಾದದ್ದು. ಲಿಂಗವು ಭಕ್ತನನ್ನಾಶ್ರಯಿಸಿಕೊಂಡೇ ಇರಬೇಕಾಗುತ್ತದೆ. ಭಕ್ತನು ಲಿಂಗ ಭೋಗೋಪ ಭೋಗಿಯಾಗಿರುತ್ತಾನೆ. ಅನ್ನೋನ್ಯಾಪೇಕ್ಷೆಯಿರುವುದರಿಂದ ಭಕ್ತನಿಗೆ ಪಾದೋದಕ ಬೇಕಾಗಿದ್ದರೆ ಲಿಂಗಕ್ಕಾದರೂ ಬೇಕು. ಇದರಂತೆ ಗುರು ಜಂಗಮರಿಗೂ ಅವಶ್ಯ ಅವರವರ ಸ್ವಸ್ವರೂಪವಾದ ಲಿಂಗಕ್ಕೂ ಬೇಕು.

 ಪಾದೋದಕವು ಸಂಬಂಧದಿಂದ ದಶವಿಧವಾಗಿರುವುದು. ಮುಖ್ಯವಾಗಿ ತ್ರಿವಿಧವೆನಿಸಿರುವುದು. ಇದು ಸಹಜವು.

೧೫. ಗುರುಲಿಂಗ ಜಂಗಮರಲ್ಲಿ ಅಂತಃಪ್ರಭೇದಗಳಿರುವುದರಿಂದ ಲಿಂಗದಲ್ಲಿದ್ದ ಗುರುಜಂಗಮರ ಸಾನಿಧ್ಯದಿಂದ ಅನಿರ್ವಾಹ ಪಕ್ಷದಲ್ಲಿ ಸಂಬಂಧಾಚರಣೆಯಿಂದ ಪಾದೋದಕ ಪ್ರಸಾದಗಳ ನಿರ್ವಾಹವಾಗುತ್ತದೆ.  

೧೬. ಮುಖ್ಯವಾಗಿ ಗುರು ಪಾದೋದಕ, ಲಿಂಗ ಪಾದೋದಕ, ಜಂಗಮ ಪಾದೋದಕಗಳೆಂದು ಮೂರು ಪ್ರಕಾರಗಳು. ಇವು ಒಂದೊಂದೇ ಮೂರು ಮೂರು ಭೇದಗಳಿಂದ ಕೂಡಿ ನವವಿಧವಾಗಿರುವುದು. ಇವೆಲ್ಲವುಗಳ ಸಮಷ್ಠಿಯಾದುದೇ ಮಹಾ ಪಾದೋದಕ ಜಂಗಮ ಪಾದೋದಕವು. ಇದು ಗಣನೆಯಲ್ಲಿ ಸೇರಲು ದಶ ವಿಧವಾಯಿತು. ಈ ದಶವಿಧ ಪಾದೋದಕದಲ್ಲಿ ಸಂಬಂಧದಿಂದಲೂ ಸಹಜದಿಂದಲೂ ಅನೇಕ ರೀತಿಯಿಂದ ಸಂಬಂಧವುಂಟು. ಸಹಜವು ಒಂದೇ ಪ್ರಕಾರವಿದ್ದು ಸಂಬಂಧದಿಂದ

ಅನೇಕ ವಿಧವಾಗಿರುವುದು. ಸಂದರ್ಭಾನುಸಾರ ಸಂಬಂಧವನ್ನೂ ಮತ್ತೆ ಅನೇಕ ಪ್ರಕಾರ ಮಾಡುವುದುಂಟು. ಮೂರು ಪಾದೋದಕಗಳಲ್ಲಿ ಒಂದೊಂದರೊಳಗೆ ಮೂರು ಮೂರು ಲಿಂಗಗಳ ಸಂಬಂಧ ಮತ್ತು ಪರತರ ಶಿವಲಿಂಗ ಸಂಬಂಧ ; ಇವುಗಳಿಂದ ದಶವಿಧವಾಗಿರುವುದು. ಪಂಚಾಂಗುಲಿಗಳಿಂದ ಅಂದರೆ ಸೂಚಕ ಮುದ್ರೆಯಿಂದ ಎರೆದು ಸ್ವೀಕರಿಸುವುದೇ ದೀಕ್ಷಾಪಾದೋದಕ ಅಥವಾ ಗುರು ಪಾದೋದಕ; ಶಂಖಮುದ್ರೆಯಲ್ಲಿ ಲಿಂಗದ ಮೇಲೆ ಅಭಿಷೇಕ ಮಾಡಿ ಪೂಜಿಸಿದ ಪಾದೋದಕವನ್ನು ಲಿಂಗವನ್ನೆತ್ತಿ ಸ್ವೀಕರಿಸುವುದೆ ಶಿಕ್ಷಾಪಾದೋದಕ ಅಥವಾ ಲಿಂಗ ಪಾದೋದಕ (ಕ್ರಿಯಾ ಪಾದೋದಕ)ವೆಂದು ಪರ್ಯಾಯ ನಾಮಗಳು. ಜಿಹ್ವಾಗ್ರಕ್ಕೆ ಪಾತ್ರೆಯನ್ನೆತ್ತಿ ಇಲ್ಲವೆ ಚಿನ್ಮುದ್ರೆಯಿಂದಾಗಲಿ ಕುರಂಗ ಮುದ್ರೆಯಿಂದಾಗಲಿ ಮುಟ್ಟಿ ಸ್ವೀಕರಿಸುವುದೇ ಮೋಕ್ಷ ಪಾದೋದಕ ಅಥವಾ ಜ್ಞಾನ ಪಾದೋದಕ (ಜಂಗಮ ಪಾದೋದಕ)ವೆಂದು ಹೆಸರುಗಳು. ಪಂಚಾಂಗುಲಿಗಳ ಕೂಟದಲ್ಲಿ ನಿರಾಭಾರಿಗಳು ಸಮಷ್ಟಿರೂಪ ಪ್ರಣವನನ್ನು ಭಾವಿಸಿ ಅದೇ ತನ್ನ ಗುರುವೆಂಬ ಭಾವನೆಯಿಂದ ಸ್ವೀಕರಿಸುವ ಕಾರಣ ಗುರು ಪಾದೋದಕವು; ಹಸ್ತದಲ್ಲಿಯೆ ಲಿಂಗ ಸಂಬಂಧವಿರುವುದರಿಂದಲೂ ಲಿಂಗಾಭಿಷಿಕ್ತವಾದ್ದರಿಂದಲೂ ಲಿಂಗ ಪಾದೋದಕ; ಜಿಹ್ವಾಗ್ರದಲ್ಲಿ ಜಂಗಮ ವಿರುವದರಿಂದ ಜಂಗಮಕ್ಕೆ ಮುಟ್ಟಿಸಿ ತೆಗೆದುಕೊಳ್ಳುವುದರಿಂದ ಜಂಗಮ ಪಾದೋದಕವೆಂಬ ಹೆಸರು.

೧೭. ಭ್ರಮಾರೂಪ ಸಂಸ್ಕಾರಕ್ಕೆ ಕಾರಣವಾದ ಕಲ್ಪನೆಯ ಪದಾರ್ಥ ಲಕ್ಷಣವು ಅರ್ಥಾತ್ ಕಲ್ಪಿತ ತತ್ತ್ವವೇ ಪದಾರ್ಥ ಲಕ್ಷಣವು. ಸಚ್ಚಿದಾನಂದತ್ವವೆ ಪ್ರಸಾದ ಲಕ್ಷಣವು. ಸಾಧಕರಿಂದ ವೀರಮಾಹೇಶ್ವರರು ಸ್ಥೂಲ ಪದಾರ್ಥವನ್ನು ತ್ಯಜಿಸಿ ಸೂಕ್ಷ್ಮ ರೂಪ ಪದಾರ್ಥವನ್ನು ಗುರ ಲಿಂಗ ಜಂಗಮಕ್ಕೆ ಅರ್ಪಿಸಿ ತನ್ಮುಖದಿಂದ ಒಕ್ಕುಳಿದ ಪ್ರಸಾದವನ್ನು ಸ್ವೀಕರಿಸುತ್ತಾರೆ.

೧೮. ಗುರು ಜಂಗಮರ ಪಾದೋದಕವು ಪ್ರಸಾದವಲ್ಲ. ಪದಾರ್ಥವೆಂದರೆ ಗುರು ಲಿಂಗ ಜಂಗಮರಿಗೆ ಅರ್ಪಣವಾದ ಪ್ರತಿಯೊಂದು ಪರಿಶುದ್ಧ ವಸ್ತುವು ಪ್ರಸಾದವಾಗುವುದೆಂಬ ಪ್ರಮಾಣ ಅನುಭವಾದಿಗಳಿಗೆ ವಿರೋಧವಾಗುವುದು. ಪ್ರಸಾದವೆಂದರೆ ಅಷ್ಟಾವರಣಗಳಲ್ಲಿ ಅಂತಿಮವಾದ ಪಾದೋದಕ ಸೇವನಾಂತರ ಗ್ರಹಿಸಬೇಕಾದ ಪ್ರಸಾದವು; -ಇದಕ್ಕೆ ಬೇರೆಯಾದುದೊ ? ಒಂದೆಯೊ ? ಒಂದೆಯಾದರೆ ಅದರ ಸ್ವೀಕಾರವೇಕೆ ? ಇದೇ ಪ್ರಸಾದವಾದರೆ ಅಷ್ಟಾವರಣಗಳು ಹೇಗೆ ನಿರ್ವಾಹಕ ಮಾಡಲ್ಪಡುವವು ? ಬೇರೆಯಾದರೆ ಪಾದೋದಕಕ್ಕೆ ಕಲ್ಪಿತತ್ವದಿಂದ ಪದಾರ್ಥತ್ವ ವುಂಟಾಗುವುದು. ಮತ್ತು ಗುರು ಲಿಂಗ ಜಂಗಮಕ್ಕೆ ಅರ್ಪಣವಾದುದು ಪ್ರಸಾದ ವಾಗುವುದೆಂಬ ಪ್ರಮಾಣಗಳಿಗೆ ವ್ಯರ್ಥತೆಯುಂಟಾಗುವುದು. ಇದಲ್ಲದೆ ಅಷ್ಟಾವರಣವೆ ಅಂಗವಾಗಿ ಪಂಚಾಚಾರವೆ ಪ್ರಾಣವಾದ ವೀರಶೈವತ್ವಕ್ಕೆ ಅಂಗಲೋಪದಿಂದ ದೋಷವುಂಟಾಗುವುದು. ಪಾದೋದಕವು ಪ್ರಸಾದವೆನಿಸುವುದು. ಪಾದೋದಕವು ಪೂಜ್ಯರ ಮಸ್ತಕದಲ್ಲಿ ಸಚ್ಚಿದಾನಂದ ಸ್ವರೂಪವಾಗಿರುವದೆಂದು ಈ ಮೊದಲು ಉಕ್ತವಾಗಿರುವುದು. ಅಂತಹ ಸಚ್ಚಿದಾನಂದ ಸ್ವರೂಪವೆ ಪ್ರಸಾದವೆನಿಸುವುದು. ಆ ಪ್ರಸಾದವೆ ಪೂಜಕನ ಇಚ್ಛಾ ಜ್ಞಾನ ಕ್ರಿಯಾದಿಗಳಿಂದ ಚಲನಕ್ರಿಯೆಯನ್ನು ಹೊಂದಿ ಚಿದ್ರಸವಾಗಿ ಬಹಿಷ್ಕರಿಸುವುದರಿಂದ ಪ್ರಸಾದವೆನಿಸಿರುವುದು. ಆ ಪೂಜ್ಯರಾದ

ಮೂರ್ತಿಗಳಲ್ಲಿ ಈ ಪಾದೋದಕ ಸಂಬಂಧಗಳಿಂದ ಇಚ್ಛಾ ಜ್ಞಾನ ಕ್ರಿಯೆಗಳೇನೂ ಇಲ್ಲದೆ ಸ್ವಸ್ವರೂಪಾನು ಸಂಧಾನವೇ ಇರುವುದು. ಇಂತಹ ಪೂಜ್ಯರ ಮಸ್ತಕಗತವಾದ ಚಿದ್ಬಿಂದುವೆ ದ್ರವಿಸಿ ಸುಷುಮ್ನಾದ್ವಾರವಾಗಿ ಪಾದಾಂಗುಷ್ಪಗಳಿಂದ ಬಹಿಷ್ಕರಿಸಿದಲ್ಲಿ ಗುರು ಲಿಂಗ ಜಂಗಮ ಪಾದೋದಕ ರೂಪವಾಗಿ ಕಂಗೊಳಿಸುವುದರಿಂದ ಪಾದೋದಕ ರೂಪ ಪ್ರಸಾದವೆನಿಸುವುದು. ಇದೇ ಪ್ರಸಾದವಾದರೆ ಮುಂದೆ ಪ್ರಸಾದವನ್ನು ಏಕೆ ಪಡೆಯಬೇಕೆಂದರೆ : ಪ್ರಸಾದವು ಸಾಮಾನ್ಯ ವಿಶೇಷವೆಂದು ಎರಡು ಬಗೆಯಾಗಿರುವುದು. ಈ ಪಾದೋದಕ ರೂಪ ಪ್ರಸಾದದ ಸಾಮಾನ್ಯ ರೂಪದಿಂದ ಪ್ರಸಾದವೆನಿಸಿ ವಿಶೇಷ ರೂಪದಿಂದ ಪಾದೋದಕವೆನಿಸುವುದು. ಇದರಂತೆ ಅಷ್ಟಾವರಣಗಳಲ್ಲಿಯೂ ಪ್ರಸಾದತ್ವವು ಸಾಮಾನ್ಯ ನೀತಿ ರೀತಿಯಿಂದಿರುವುದು. ಅಂದರೆ ಭಸ್ಮ ರುದ್ರಾಕ್ಷಿ ಮಂತ್ರಾದಿಗಳು ಸಾಮಾನ್ಯವಾಗಿ ಪ್ರಸಾದವಾಗಿದ್ದರೂ ವಿಶೇಷತ್ವದಿಂದ ಭಸ್ಮರುದ್ರಾಕ್ಷಿಗಳೇ ಆಗುವುವು. ಕಡೆಯದಾದ ಈ ಪ್ರಸಾದವು ಫಲರೂಪವಾದ್ದರಿಂದ ಇದರಲ್ಲಿ ಸಾಮಾನ್ಯ ವಿಶೇಷ ರೂಪ ಪ್ರಸಾದತ್ವವಿರುವುದು. ಸಾಮಾನ್ಯ ವಿಶೇಷತ್ವಗಳೆರಡೂ ಇಲ್ಲಿ ಐಕ್ಯವಾಗಿರುವುದರಿಂದ ಐಕ್ಯ ಸ್ಥಲದಲ್ಲಿ ನಿಲುಕಡೆಯೆನಿಸಿರುವುದು.

೧೯. ವೀರಶೈವ ಸಿದ್ಧಾಂತವು .ದ್ವೈತಾದ್ವೈ ತವಾದ್ದರಿಂದ ಗುರು ಲಿಂಗ ಜಂಗಮರಲ್ಲಿ ಭೇದಾಭೇದ ಭಕ್ತನಿಗೆ ಇರಬೇಕು. ಭಕ್ತ ಶಬ್ದವನ್ನು ವಿಚಾರಿಸಿದರೆ ಭಕ್ತಿಪ್ರಧಾನವುಳ್ಳವನೆ ವೀರಶೈವನೆಂದು ತಿಳಿಯುವುದರಿಂದಲೂ, ಭೇದಾಭೇದವನ್ನುಂಟುಮಾಡುವುದರಿಂದ ವೀರಶೈವ ಮತವು ಭಾಕ್ತಿಕ ಮತವಾದ್ದರಿಂದಲೂ, ಭೇದ ಪದವು ಭಾಗ-ವಿಭಾಗ ಮಾಡುವ ಸ್ವಭಾವವುಳ್ಳದ್ದೆಂತೂ, ಪೂಜ್ಯ ಪೂಜಕ ವಸ್ತುಗಳಲ್ಲಿ ಭೇದಾ ಭೇದವನ್ನೆಸಗುವ ಸಾಮರ್ಥ್ಯವುಳ್ಳದ್ದೆಂತಲೂ, ಪ್ರಸಾದ ಭಕ್ತಿ-ಮುಕ್ತಿಗಳಿಗೆ ಏಕದೇಶ ಸ್ಥಿತಿಯಿರುವುದರಿಂದ ಭೇದಾ  ಭೇದಭಾವನೆಯು ಅವಶ್ಯ ಇರಬೇಕಾಗುವುದು. ಆದ್ದರಿಂದ ನಿರ್ವಿಶೇಷೋಪಾಸನೆಯು ಘಟಿಸುವುದು.

೨೦. ಲಿಂಗಪಾದೋದಕವನ್ನು ಗುರು ಜಂಗಮರ ಮಸ್ತಕಕ್ಕೆ ಎರೆಯದಿದ್ದರೂ ಅದು ಲಿಂಗ ಪಾದೋದಕವಾಗುವುದು ಎಂಬ ವಿಷಯವನ್ನು ಶಾಸ್ತ್ರವು ವಿಧಿಸಿರುವುದಿಲ್ಲ; ವಿಧಿಸಬೇಕಾಗಿಯೂ ಇಲ್ಲ. ಮತ್ತು ಅಂಗರೂಪ ಭಕ್ತನಿಗೆ ಗುರು ಜಂಗಮ ಪಾದೋದಕವನ್ನು ಲಿಂಗದ ಮೇಲೆ ಅಭಿಷೇಕ ಮಾಡದಿದ್ದರೆ ಗುರು ಜಂಗಮರ ಪಾದೋದಕವಾಗುವುದಿಲ್ಲ. ಆಚಾರದಲ್ಲಿ ಸಂಬಂಧವೆಂತಲೂ, ಸಹಜವೆಂತಲೂ ಎರಡು ವಿಧವಾಗಿರುವುದು. ಇವೆರಡನ್ನೂ ಪರಸ್ಪರ ಭಿನ್ನ ಭಿನ್ನ ಕಾಲದಲ್ಲಿ ಆಚರಿಸಿ ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಹೊಂದಬೇಕು. ಗುರು ಜಂಗಮರು ಪ್ರತ್ಯಕ್ಷವಿಲ್ಲದಾಗ ಲಿಂಗಮೂರ್ತಿಯಲ್ಲಿ ಗುರುಜಂಗಮರನ್ನು ಅನುಸಂಧಾನಿಸಿ ಆ ಲಿಂಗಮೂರ್ತಿಯನ್ನು ನಿಯಮಿತ ಸ್ಥಿತಿಯಲ್ಲಿರಿಸಿ ಹಸ್ತಪಾದಾದಿಗಳನ್ನು ಭಾವಿಸಿ  ವಾಮ ದಕ್ಷಿಣ ಪಾದಾಂಗುಷ್ಠಗಳನ್ನೂ, ತನ್ನ ಧ್ಯೇಯ ಸ್ಥಾನವನ್ನೂ ಕಲ್ಪಿಸಿ ಗುರು ಲಿಂಗ ಜಂಗಮರ ಸ್ವರೂಪವನ್ನು ಮಂತ್ರಾದಿಗಳ ಅವಧಾನತೆಯಿಂದ ಎರೆದರೆ ಅವ್ಯಕ್ತವಾದ ಶಿವಸ್ವರೂಪ ಪಾದೋದಕವು ವ್ಯಕ್ತವಾಗುವುದು. ಹೀಗಾಗುವ ಪೂರ್ವದಲ್ಲಿ ಶಿವನು

ಅದೇ ಆತ್ಮನಲ್ಲಿ ತನ್ನೊಡನೆ ಐಕ್ಯವಾಗಬೇಕಾಗಿರುವುದು. ಆದರೆ ಹೇಗೆ ಸೃಷ್ಟಿಯೋ ಹಾಗೆ ಸ೦ಹಾರವಿರಬೇಕಾಗುವುದು.

೨೧. ಪೂಜ್ಯರಾದ ಗುರು ಜಂಗಮರಲ್ಲಿ ಪಾದೋದಕವನ್ನು ಕೊಡುವ ಇಚ್ಛೆ ಯತ್ನಾದಿಗಳು ಇಲ್ಲವೇ ಇಲ್ಲ. ಪ್ರದಾತೃತ್ವವು ಗುರು ಜಂಗಮರ ಭಾವನೆಯಲ್ಲಿ  ಎಂದೂ ಬರುವುದಿಲ್ಲ. ಸುಮ್ಮನೆ ನೋಡುವವರಿಗೆ ಮಾತ್ರ ಇದ್ದಂತೆ ಕಾಣಿಸಬಹುದು. ಪೂಜ್ಯರಾದ ಗುರು ಜಂಗಮರ ಮಸ್ತಕದ ಮಧ್ಯ ಸಹೃದಯದಲ್ಲಿ ನೆಲೆಸಿರುವ ಶಿವನಂದಾಮೃತವು ಪೂಜಕರ ಇಚ್ಛೆ ಯತ್ನಾದಿಗಳಿಂದ ಸುಷುಮ್ನಾ ಮಾರ್ಗವಾಗಿ ಪಾದಾಂಗುಷ್ಠ ದ್ವಾರದಿಂದ ಬಹಿಷ್ಕರಿಸಿ ಭಕ್ತನ ಹಸ್ತಗತವಾಗುವುದು. ಆ ಭಕ್ತನು ತಾನು ಪಡೆದುಕೊಂಡು ಪರಮಾನಂದ ಶಿವಸ್ವರೂಪವೇ ಪ್ರತ್ಯಕ್ಷವಾಗಿರುವುದನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸದೆ ಸ್ವೀಕರಿಸಬಾರದು. ಸ್ವೀಕರಿಸಿದ್ದಾದರೆ ಪಾತಿತ್ಯವುಂಟಾಗುವುದೆಂಬ ಶಾಸ್ತ್ರವಿಧಿಗನುಸರಿಸಿ ಆ ಪೂಜ್ಯ ಮೂರ್ತಿಗಳಿಗೆ ಭಕ್ತಿಪೂರ್ವಕ ಶಿವನಂದಾಮೃತವನ್ನು ಅರ್ಪಿಸಿದರೆ ಅವರು ಕೈಕೊಳ್ಳಲೇಬೇಕು. ಪಕ್ಷಾಂತರ ಕೈಕೊಳ್ಳದಿದ್ದರೆ ಭಕ್ತನ ಸಶಾಸ್ತ್ರೀಯವಾದ ಭಕ್ತಿಯನ್ನು ತಿರಸ್ಕರಿಸಬಾರದೆಂಬ ಶಾಸ್ತ್ರೋಕ್ತಿಯ ಉಲ್ಲಂಘನೆಯೇ ವೀರಶೈವ ಮತದ ಭಾಕ್ತಿಕ ಧರ್ಮಾಚರಣೆಗೆ ಲೋಪವುಂಟಾಗುವುದು. ಆದ್ದರಿಂದ ಯೋಗ್ಯವೆಂದು ಅದನ್ನು ಸ್ವೀಕರಿಸಿದರೆ ದತ್ತಾಪಹಾರ ದೋಷವೆನಿಸುವುದು. ಮಧ್ಯೆ ಸಮಷ್ಟಿಯಿಂದ ಆದಿ ಸಮಷ್ಟಿಗೆ ಹೋಗಬೇಕಾದುದು ಸ್ವಭಾವಸಿದ್ಧವಾದುದು. ದತ್ತಾಪಹಾರ ದೋಷವೆಂದರೆ ದಾನವನ್ನು ಕೊಡತಕ್ಕ ವಸ್ತುವಿನಲ್ಲಿ ತನ್ನದೆಂದು ತೆಗೆದುಕೊಂಡು ತನ್ನ ಸ್ವಾರ್ಥಕ್ಕಾಗಿ ಉಪಯೋಗ ಮಾಡುವುದೆ ದತ್ತಾಪಹಾರ ದೋಷವೆನಿಸುವುದು.

 ಉದಾಹರಣೆಗಾಗಿ : ಗುರು ಲಿಂಗ ಜಂಗಮಕ್ಕೆ ತನು ಮನ ಧನಗಳನ್ನು ಸಂಕಲ್ಪಪೂರ್ವಕ ಅರ್ಪಿಸಿ ಮರಳಿ ಆ ಗುರು ಜಂಗಮರ ಸೇವೆಗಾಗಿಯೂ ಆ ಗುರು ಜಂಗಮರ ಇಚ್ಛಾನುಸಾರವಾದ ವೀರಶೈವ ಧರ್ಮಾರ್ಥ ಕಾರಗಳಿಗಾಗಿಯೂ ಆ ತನು ಮನ ಧನಗಳ ವಿನಿಯೋಗಿಸದೆ ತನ್ನ ಮತ್ತು ತನ್ನವರ ಶರೀರಾದಿಗಳ ರಕ್ಷಣೆಗಾಗಿಯೂ ಬಂಧು ಬಳಗದವರ ಪೋಷಣೆಗಾಗಿಯೂ ಆ ತನು ಮನ ಧನಗಳನ್ನು ಪ್ರಯೋಗಿಸಿದರೆ ದತ್ತಾಪಹಾರ ದೋಷವೆನಿಸುವುದು. ಮತ್ತು ಶಿವನು ಲೋಕದಲ್ಲಿ ಅನೇಕ ಪದಾರ್ಥಗಳನ್ನು ಕೊಟ್ಟಿರುವನಷ್ಟೆ ? ಭಕ್ತನು ಭಕ್ತಿಯಿಂದ ಆ ಪದಾರ್ಥಗಳನ್ನು ಶಿವನಿಗೆ ಅರ್ಪಿಸಿದರೆ ಅವುಗಳನ್ನು ಪರಮಾತ್ಮನು ಸ್ವೀಕರಿಸದಿದ್ದರೆ ಆ ಭಕ್ತನು ಹೇಗೆ ಉದ್ಧಾರವಾಗಬೇಕು ? ಸ್ವೀಕರಿಸಿದ್ದಾದರೆ ಶಿವನು ದತ್ತಾಪಹಾರಕನಾಗುವನೇನು ? ಅದರಂತೆ ಪರಶಿವನ ಆಜ್ಞಾನುಸಾರವಾಗಿಯೂ ಜಗದ್ದಿತಾರ್ಥವಾಗಿಯೂ ಅವತರಿಸಿದ ಗುರು ಇಚ್ಛಾನುಸಾರವಾಗಿಯೂ ಜಂಗಮರ ಉತ್ತಮಾಂಗಗತ ಚಿದ್ರಸವನ್ನು ಶಿಷ್ಯನ ಪ್ರಾರ್ಥನಾದಿಗಳಿಂದ ಸಾಕ್ಷತ್ಕರಿಸಿದ್ದನ್ನು ಭಕ್ತನು ಭಕ್ತಿಪೂರ್ವಕ ಆರ್ಪಿಸಲು  ಅದನ್ನು ಆ ಪೂಜ್ಯರು ಸಸ್ವರೂಪವಾದ ಲಿಂಗಕ್ಕರ್ಪಿಸಿ ಆ ಲಿಂಗಮೂರ್ತಿಯ ಕೃಪಾಪ್ರಸಾದವನ್ನು ಸೇವಿಸಿದುದಕ್ಕೆ ದತ್ತಾಪಹಾರ ದೋಷವು ವಿರುವುದೆಂದು ಹೇಳುವ ಬಗೆ ಹೇಗೆ ? ಅಲ್ಲದೆ ನಾವು ನಿತ್ಯಲಿಂಗ ಪೂಜೆಯಲ್ಲಿ ಲಿಂಗಕ್ಕೆ ಅರ್ಪಿಸಿದುದನ್ನೆಲ್ಲ ಲಿಂಗವು ಕೈಕೊಂಡರೆ ಅದೂ ಸಹ ಲಿಂಗದ ದತ್ತಾಪಹಾರ ವಾದೀತಲ್ಲವೆ ?

೨೨. ಗುರು ಕರುಣಿಸಿದ ಲಿಂಗವನ್ನು ಪೂಜ್ಯವೆಂದು ತಿಳಿದು ಆರಾಧಿಸುವರು. ಆ ಲಿಂಗಕ್ಕೆ ಮಾತೃಸ್ಥಾನವಾದ ಗುರುಮೂರ್ತಿಯನ್ನು ಮಾತ್ರ ಧಿಕ್ಕರಿಸುವುದು ತನ್ನ ಜನಕನ ಮುಖ್ಯ ಸಾಮರ್ಥ್ಯವನ್ನು ತಿರಸ್ಕರಿಸಿದವನಿಗಿಂತಲೂ ಅಧಿಕವಾದ

ದೋಷವಾಗುವುದು. ಗುರುವಿಲ್ಲದೆ ಲಿಂಗ ದೊರೆಯದು. ಕಾರಣ ಸಾಧಕ ಗುರುವಾಗಿದ್ದರೂ ಆತನಲ್ಲಿ ದೋಷವನ್ನು ಕಲ್ಪಿಸಬಾರದು; ಗುಣವನೆಣಿಸಬಾರದು. ಶಿವಸ್ವರೂಪರಾದರೂ ಸ್ವಸ್ವರೂಪ ಲಿಂಗಭಕ್ತರು ಎಣಿಸಿದ ಗುರು ಜಂಗಮರು ತಮ್ಮ

ಅನುಸಂಧಾನದ ನಿಲುಕಡೆಗೆ ಅತೀತವಾದ ಅಣುಚಕ್ರದ ನಿರಂಜನ ಲಿಂಗದಿಂದ ಭಾವಲಿಂಗಕ್ಕೆ ಪ್ರಾಣರೂಪವಾದ ಪರ ಜಂಗಮದಿಂದೊಗೆದ ಚಿತ್ಕಲೆಯೇ ಭಕ್ತನ ಭಕ್ತಿ ಪ್ರಾರ್ಥನಾದಿಗಳಿಂದ ಶಿಖಾಚಕ್ರಕ್ಕೆ ಆವಿರ್ಭವಿಸಿದಲ್ಲಿ ಪ್ರಾಣಲಿಂಗಕ್ಕೆ ಚೇತನಾ

ರೂಪವಾದ ಚರಜಂಗಮದಿಂದೊಗೆದು ಚಿನ್ನಾದ ಸ್ವರೂಪವನ್ನು ಧರಿಸಿ ಅಲ್ಲಿಂದ ಭಕ್ತನ ಪ್ರಾರ್ಥನೆಯ ವಿಶೇಷದಿಂದ ಬ್ರಹ್ಮರಂಧ್ರಕ್ಕೆ ಅವತರಿಸಿ ಅಲ್ಲಿಯ ಇಷ್ಟಲಿಂಗಕ್ಕೆ ಚೇತನ ಸ್ವರೂಪವಾದ ಸ್ವಯಜಂಗಮದಿಂದೊಗೆದ ಚಿದ್ಬಿಂದುವೇ ಚಿದ್ರಸವೆನಿಸಿ ಭ್ರೂಮಧ್ಯಾದಿ ಆಧಾರಾಂತವಾದ ಮಹಾಲಿಂಗಾದಿ ಆಚಾರ ಲಿಂಗಾಂತಮಾದ ಷಡ್ಲಿಂಗಗಳನ್ನು ಭಕ್ತನು ಪ್ರಾರ್ಥಿಸಿ ಭಾವನಾದಿ ಸಂಸ್ಕಾರ ವಿಶೇಷದಿಂದ ಆಯಾ ಲಿಂಗಗಳಿಂದ ಆಯಾ ಸ್ಥಾನಗಳಿಗೆ ಅವತರಿಸುತ್ತ ಮೂಲಾಧಾರಗತವಾದ ಆಚಾರಲಿಂಗ ಸ್ಥಾನದಲ್ಲಿ ಇತ್ತೆರನಾಗಿ ಲಿಂಗಾಂಗ ಶಿವಶಕ್ತಿ ಗುರುಲಿಂಗ ಈ ಅಪರ ಪರ್ಯಾಯ ನಾಮಗಳುಳ್ಳ ಪಾದಾಂಗುಷ್ಠ ದ್ವಯಗಳಿಂದ ಆಯಾ ಸ್ವರೂಪವನ್ನು ಹೊಂದಿ ಬಲದಂಗುಷ್ಠದಲ್ಲಿ ಗುರು  ಪಾದೋದಕವಾಗಿ   ಎಡದಂಗುಷ್ಠದಲ್ಲಿ ಲಿಂಗಪಾದೋದಕವಾಗಿ ಅವತರಿಸಿದ ನಂತರ ಆ ಎರಡು ಅಂಗುಷ್ಠಗಳ ಮಧ್ಯದಲ್ಲಿ ಸಂಬಂಧದಿಂದುಂಟಾದ ಸಾಮರಸ್ಯ ರೂಪಾದ ಜಂಗಮ ಪಾದೋದಕವು ಅವತರಿಸಿ ಆಯಾ ಮಂತ್ರ ತಂತ್ರ ಪ್ರಯೋಗಗಳಿಂದ ಸಂಸ್ಕರಿಸಿದ ಪರಿಶುದ್ಧ ಪಾತ್ರೆಯಲ್ಲಿ ಕಂಗೊಳಿಸುತ್ತಿರುವುದು.

೨೩. ಲಿಂಗದಲ್ಲಿ ಲಿಂಗ ಪಾದೋದಕವನ್ನು, ಗುರುವಿನಲ್ಲಿ ಗುರು ಪಾದೋದಕವನ್ನು, ಜಂಗಮದಲ್ಲಿ ಜಂಗಮ ಪಾದೋದಕವನ್ನು ಹೊಂದಬೇಕೆಂಬ ವಿಶೇಷ ವಿಧಿಯಲ್ಲ. ಶಿವ ಪಾದೋದಕವನ್ನು ಸ್ವೀಕರಿಸಬೇಕೆಂಬ ಸಾಮಾನ್ಯ ವಿಧಿಯಾಗಿರುವುದು. ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಸ್ವೀಕರಿಸಬೇಕು. ಅದರಲ್ಲಿ ಒಂದು ಕಡಿಮೆಯಾದರೂ ಅದು ಅನಶನವಾಗುವುದು; ಎಂಬ ವಿಶೇಷ ವಿಧಿಯು ಮಾತ್ರ ಇರುವುದು. ಗುರುಜಂಗಮರು ಸ್ವಪಾದೋದಕದಿಂದ ಸ್ವಪೂಜ್ಯವಾದ ಲಿಂಗಕ್ಕೆರೆಯುವರೆಂದು ಭ್ರಮಾದೃಷ್ಟಿಯುಳ್ಳವರಿಗೆ ಕಂಡರೂ ಪ್ರಮಾದೃಷ್ಟಿ ಯುಳ್ಳವರಿಗೆ ಮಾತ್ರ ಹಾಗೆ ಕಾಣದು. ಒಬ್ಬನು ಮಗಳನ್ನೂ ಮಡದಿಯನ್ನೂ ಆಲಂಗಿಸುವನು. ಆದರೆ ದೋಷದೃಷ್ಟಿಯುಳ್ಳವನಿಗೆ ಪುತ್ರಿಯ ಆಲಿಂಗನವೂ ಸಹ ದೋಷವಾಗಿಯೇ ಕಾಣುವುದು. ಪ್ರಮಾದೃಷ್ಟಿಯುಳ್ಳ ವಿಚಾರಿಗೆ ಮಾತ್ರ ಆ ಆಲಿಂಗನದ ನಿರ್ದೋಷದ ನಿಜಸ್ಥಿತಿಯು ಗೊತ್ತಾಗುವುದು. ಇದು ಸ್ವಚ್ಛವಾದ ನಂತರ ಪರಬ್ರಹ್ಮಸ್ವರೂಪ ಗುರು ಲಿಂಗ ಜಂಗಮದ ಪಾದೋದಕವು.

೨೪. ಪತಿ ಸ್ಥಾನವನ್ನು ಹೊಂದಿದವನು ಪೂಜ್ಯನು. ಪತ್ನಿ ಸ್ಥಾನಾಪನ್ನನಾದವನು ಪೂಜಕನು. ಪತಿರೂಪನಾದ ಪೂಜ್ಯನಿಂದ ಪತ್ನಿ ಸ್ವರೂಪನಾದ ಪೂಜಕನಲ್ಲಿ ಆವಿರ್ಭವಿಸಿ ಪಾದೋದಕ ಶಿಶುವು ತೋರುವುದು. ಇದಕ್ಕೆ ಉದಾಹರಣೆಗಾಗಿ ಕೊಟ್ಟಿರುವ

ಲೋಕಾನುಭವವಾದರೂ ವಿರೋಧಿಸದು. ಸತಿ-ಪತಿಗಳ ಸಾಮರಸ್ಯ ಸಂಯೋಗ ದಿಂದುಂಟಾಗುವ ಶಿಶುವು ಪತಿಯಲ್ಲಿ ಅವ್ಯಕ್ತರೀತಿಯಿಂದ ಬಿಂದುವಿನಷ್ಟು ಜೀವ ಚೈತನ್ಯ ರೂಪವಾಗಿ ಮೂರು ತಿಂಗಳು ವಾಸ ಮಾಡಿದ್ದು ಸತಿಪತಿಗಳ ಸಂಯೋಗ

ವಿಶೇಷದಿಂದ ಘನೀಭೂತವಾದ ಬಿಂದುವೇ ದ್ರವಿಸಿ ಆ ಜೀವ  ಚೈತನ್ಯದೊಡಗೊಂಡು ಜನನ ಧೃತಿಯೆನಿಸಿ  ಸತಿಯ ಗರ್ಭವನ್ನು ಪ್ರವೇಶಿಸಿ ಕ್ರಮದಿಂದ ಸಾವಯವ ರೂಪ ಪಿಂಡವು ವರ್ಧನವಾಗುತ್ತ ಕಡೆಗೆ ಬಹಿಷ್ಕೃತವಾಗಿ ಪುತ್ರರೂಪದಿಂದ ತೋರುವಂತೆ ಪೂಜ್ಯನಲ್ಲಿದ್ದ ಪಾದೋದಕವು ಪೂಜಕನಲ್ಲಿ ತೋರುವದಾದ್ದರಿಂದ ವಿರೋಧವೆನಿಸದು.

೨೫. ಅದು ತನ್ನ ಪಾದೋದಕವಲ್ಲ. ಹೇಗೆಂದರೆ : ವ್ಯಾಪ್ಯನಾದ ಗುರುವು ಅಥವಾ ಜಂಗಮವು ಅಭಿನ್ನವಾದ ಪರಲಿಂಗಾನುಭವದಿಂದ ಅನುಸಂಧಾನದಿಂದಿರುವಾಗ ಆ ಪಶ್ಚಿಮ ಚಕ್ರಗತವಾಗಿ ಸ್ವಸ್ವರೂಪದಿಂ ಘನೀಭೂತವಾಗಿದ್ದ ಆನಂದವೇ ದ್ರವಿಸಿ ಭಕ್ತನ ಕ್ರಿಯಾಕಲಾಪಗಳಿಂದ ಭೇದರೂಪವಾಗಿ ಪಾದದ್ವಾರಾ ತೋರುವುದು. ಅಂತಹ ಪರಲಿಂಗ ಸ್ವರೂಪ ಆನಂದ ರಸವನ್ನು ಭಕ್ತನು ಭಕ್ತಿಯಿಂದ ಶಾಸ್ತ್ರ ವಿಧಿಗನುಸರಿಸಿ ಪೂಜ್ಯರಿಗೆ ಅರ್ಪಿಸುವನು. ಅದನ್ನೇ ಆ ಭಕ್ತಿರೂಪವಾಗಿ ಬಂದ

ಶಿವಾನಂದರೂಪ ತೀರ್ಥವನ್ನೇ ಪೂಜ್ಯರು ತಮಗೆ ಪೂಜ್ಯವೆನಿಸಿದ ಸ್ವಸ್ವರೂಪ ಲಿಂಗಕ್ಕೆ ಅರ್ಪಿಸಿ ಸೇವಿಸುವುದರಿಂದ ದೋಷವೆನಿಸುವುದಿಲ್ಲ. ಆದ್ದರಿಂದ ಸ್ವಪಾದೋದಕವನ್ನು ಶ್ರೇಷ್ಟ ಲಿಂಗಕ್ಕೆ ಅಭಿಷೇಕಿಸಿ ಸ್ವೀಕರಿಸುವುದು ಭೇದಾಭೇದ ಸಿದ್ಧಾಂತ ವಿರೋಧವೆನಿಸದು. ವೀರಶೈವ ಮತವು ಭೇದಾಭೇದ ಸ್ವರೂಪವುಳ್ಳದ್ದಾದ್ದರಿಂದ ಪಾದೋದಕವಾದರೂ ಸ್ವಸ್ವರೂಪದಲ್ಲಿ ಅಭೇದರೂಪವಾಗಿಯೂ ಕ್ರಿಯೆಯಲ್ಲಿ ಭೇದರೂಪವಾಗಿಯೂ ತೋರುವುದು. ಇಂತಹ ಭೇದಾಭೇದ ಸ್ವರೂಪವೆನಿಸಿದ ಚಿದ್ರಸಕ್ಕೆ ಸ್ವಪಾದೋದಕವೆಂದು ಆಕ್ಷೇಪಿಸುವುದು ವೀರಶೈವಮತ ಸಿದ್ಧಾಂತಕ್ಕೆ ವಿರೋಧವೆನಿಸುವುದು.

Related Posts