ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ .ಭಾಗ-42 :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

 

ರಸನೇಂದ್ರಿಯದೊಳು ಶೋ ! ಭಿಸುವ ಚಿದ್ರಸವ ಭೋ-

ಗಿಪುದು ಬಹು ರಸಿಕ-ಅಸಮ ಗುರುಲಿಂಗವೆಂ-

ದುಸುರಿದೈ ಗುರುವೆ ಕೃಪೆಯಾಗು   ||೧೬೦||

 

ಜ್ಞಾನೇಂದ್ರಿಯಗಳಲ್ಲಿ ಎರಡನೆಯದು ರಸನೆ. ಇದು ಅಪ್‌ತತ್ತ್ವದಿಂದಾದ ತನ್ಮಾತ್ರೆಯನ್ನು ಗ್ರಹಿಸುವದು. ಅರ್ಥಾತ್ ರಸನೆ (ನಾಲಿಗೆ)ಗೆ ಅನುಭವವಾಗುವದು ರಸ. ರಸಗಳಲ್ಲಿಯೂ ಷಡ್ರಸಗಳೆಂದು ಪ್ರಸಿದ್ಧಿಯಿದೆ. ರಸನೇಂದ್ರಿಯದೊಳಗೆ ಶೋಭಿಸುವ ಮಧುರ, ಒಗರು, ಖಾರ, ಹುಳಿ, ಕಹಿ, ಲವಣವೆಂಬ ಆರು ರಸಗಳನ್ನು ಭೋಗಿಸುವವರಿಗೆ ರಸಿಕರೆಂತಲೂ ವಾಡಿಕೆಯುಂಟು. ದಿನಾಲು ಈ ಷಡ್ರಸಗಳನ್ನು ಭುಂಜಿಸುವವರಿಗೆ ರಸಿಕರೆಂದು ಹೇಳುವ ಅಗ್ಗಳಿಕೆ ಕೇಳಿಬರುತ್ತಿದೆ. ಸುಖ-ಜೀವಿಗಳು (ಶ್ರೀಮಂತರು) ಷಡ್ರಸಗಳಿಂದ ಕೂಡಿದ ಪದಾರ್ಥಗಳನ್ನು ಸ್ವೀಕರಿಸುತ್ತಾರೆ. ಇವರು ಷಡ್ರಸಗಳನ್ನು ಭೋಗಿಸುವ ಭೋಗಿಗಳೆನಿಸುವರೆ ವಿನಃ ಪ್ರಸಾದಿಗಳಾಗುವದಿಲ್ಲ. ಪ್ರಸಾದ ಗುಣಗಳನ್ನು ಪಡೆಯುವದಿಲ್ಲ.  ಪದಾರ್ಥ ಗುಣಗಳ ಬಾಧೆ ತಪ್ಪುವದಿಲ್ಲ.

 

ರಸನೇಂದ್ರಿಯಕ್ಕೆ ಗೋಚರಿಸುವ ಷಡ್ರಸಗಳನ್ನು ಗುರುತಿಸುವದು ಗುರುಲಿಂಗವು. ಈ ಗುರುಲಿಂಗವು ಕೇವಲ ರಸವನ್ನಾಗಿ ಗ್ರಹಿಸದೇ ಚಿದ್ರಸವನ್ನಾಗಿ ಸ್ವೀಕರಿಸುವಂತಾಗ ಬೇಕು. ಆಗ ರಸವು ಪ್ರಸಾದವಾಗಿ ಆನಂದವನ್ನು ಹುಟ್ಟಿಸುತ್ತದೆ. ರಸದ ಬಂಧನ ಗುರುಲಿಂಗಕ್ಕೆ ಇರುವದಿಲ್ಲ. ಗುರುಲಿಂಗವು ಸಕಲ ರಸಗಳನ್ನು ಗುರುತಿಸುವದರಿಂದ ಬಹುರಸಿಕವೆನಿಸಿದೆ. ಮತ್ತು ಅದು ರಸವನ್ನು ಚಿದ್ರಸವನ್ನಾಗಿ ಭೋಗಿಸುವದರಿಂದ ಈ ಗುರುಲಿಂಗಕ್ಕೆ ಸಮನಾದುದು ಮತ್ತೊಂದಿಲ್ಲ. ಅದಕ್ಕಾಗಿ ಅಸಮಗುರುಲಿಂಗವೆಂದು ವರ್ಣಿಸಲ್ಪಟ್ಟಿದೆ ಎಂದು ಮುಂತಾಗಿ ಗುರುನಾಥನು ರಸನೇಂದ್ರಿಯದಲ್ಲಿ ಗುರುಲಿಂಗದ ಗುರುತನ್ನು ತೋರಿಸಿಕೊಡುತ್ತಾನೆ.

 

ಚನ್ನಬಸವಣ್ಣನವರು ನಿರೂಪಿಸಿದ ಗುರುಲಿಂಗದ ಮಿಶ್ರಷಡ್ವಿದ ಲಿಂಗಾರ್ಪಣವನ್ನು ಅವಲೋಕಿಸುವದು ಯಥಾ ಯೋಗ್ಯವಾಗಿದೆ.

 

“ಗುರುಲಿಂಗದ ಮಿಶ್ರಷಡ್ವಿದ ಲಿಂಗಾರ್ಪಣದ ವಿವರವು. ಮಧುರವಾದ ರುಚಿಯನರಿವುದು ಆಚಾರಲಿಂಗದಲ್ಲಿ, ಒಗರಾದ ರುಚಿಯನರಿವುದು ಗುರುಲಿಂಗದಲ್ಲಿ, ಖಾರವಾದ ರುಚಿಯನರಿವುದು ಶಿವಲಿಂಗದಲ್ಲಿ, ಆಮ್ಲವಾದ ರುಚಿಯನರಿವುದು ಜಂಗಮ ಲಿಂಗದಲ್ಲಿ ; ಕಹಿಯಾದ ರುಚಿಯನರಿವುದು ಪ್ರಸಾದಲಿಂಗದಲ್ಲಿ, ಇವು ಎಲ್ಲರಲ್ಲಿಯ ರುಚಿಯನರಿವುದು ಮಹಾಲಿಂಗದಲ್ಲಿ. ಇಂತೀ ಪಂಚರಸಂಗಳು ಲವಣ ಕೂಡಿದಲ್ಲದೇ ರುಚಿಯಾಗಿ ಆ ಲವಣವನ್ನು ಪಂಚರಸಂಗಳಲ್ಲಿ ಕೂಡಿ ಅರ್ಪಿಸಬೇಕಲ್ಲದೆ ಬೇರೆ ಬೇರೆ  ಅರ್ಪಿಸಲಾಗದು. ಇಂತು ಗುರುಲಿಂಗದ ಮಿಶ್ರಾರ್ಪಣವು.”

 

ಗುರುಲಿಂಗದೊಳಗಿನ ಆಚಾರಲಿಂಗವು ಮಧುರ ರಸವನ್ನು, ಗುರುಲಿಂಗವು ಒಗರನ್ನು, ಶಿವಲಿಂಗವು ಖಾರವನ್ನು, ಜಂಗಮಲಿಂಗವು ಆಮ್ಲವನ್ನು, ಪ್ರಸಾದ ಲಿಂಗವು ಕಹಿಯನ್ನು ಅನುಭವಿಸುವದು. ಈ ಪಂಚರಸಗಳಾದರೂ ಲವಣ (ಉಪ್ಪು) ಕೂಡದೆ ರುಚಿಸುವದಿಲ್ಲವಾದ್ದರಿಂದ ಉಪ್ಪು ಪಂಚರಸಗಳಲ್ಲಿ ಅಂತರ್ಭೂತವಾಗುವದು. ಪಂಚರಸಗಳ ಅನುಭವವೇ ಗುರುಲಿಂಗದ ಮಹಾಲಿಂಗಕ್ಕಾಗುವದು. ಓ ಗುರುವೇ ! ರಸನೇಂದ್ರಿಯದೊಳಗಿನ ಗುರುಲಿಂಗವನ್ನು ಗುರುತಿಸುವ ಗೌರವವನ್ನಿತ್ತು ಕಾಪಾಡು.

 

ನಯನೇಂದ್ರಿಯದೊಳು ಚಿನು | ಮಯರೂಪ ನೋಟ ತ-

ನ್ಮಯವೆ ಶಿವಲಿಂಗ – ಸ್ವಯವೆಂದು ನಂಬು ನಿ-

ರ್ಣಯವೆಂದ ಗುರುವೆ ಕೃಪೆಯಾಗು  ||೧೬೧||

 

ಮೂರನೆಯ ಜ್ಞಾನೇಂದ್ರಿಯ ನಯನ. ನಯನವು ಅಗ್ನಿತತ್ತ್ವಾಧಿಕತ್ಯತೆ  ಯಿಂದಾದುದು. ಅಂತೆಯೇ ನೇತ್ರದಲ್ಲಿ ಪ್ರಕಾಶವಿದೆ. ರೂಪವನ್ನು ಗ್ರಹಿಸುವ ಸಾಮರ್ಥ್ಯವನ್ನು ಪಡೆದಿದೆ.

 

ರ್ವೇಷು ಗಾತ್ರೇಷು ಶಿರಃ ಪ್ರಧಾನಮ್ |

ಸರ್ವೆಂದ್ರಿಯಾಣಾಂ ನಯನಂ ಪ್ರಧಾನಮ್ ||ʼʼ

 

ಎಲ್ಲ ಅವಯವಗಳಲ್ಲಿ ಶಿರಸ್ಸೇ ಮುಖ್ಯವಾದುದು. ಎಲ್ಲ ಇಂದ್ರಿಯಗಳಲ್ಲಿ ನೇತ್ರೇಂದ್ರಿಯವೇ ಪ್ರಧಾನವಾದುದು. ನೇತ್ರವು ಸರ್ವಸುಂದರವಾದುದು. ಕಣ್ಣುಗಳಿಂದಲೇ ಮನುಷ್ಯನು ಶಿವನ ಸೃಷ್ಟಿಯ ಸೊಬಗನ್ನು ಸೌಂದರ್ಯವನ್ನು ನೋಡುತ್ತಾನೆ. ಆನಂದಿಸುತ್ತಾನೆ. ನೇತ್ರವಿಲ್ಲದವನ ಜನ್ಮ ನಿರರ್ಥಕವೇ ಸರಿ. ಕಣ್ಣಿನಲ್ಲಿ ಕಾಣುವ ರೂಪವು ಬರಿ ರೂಪವಾಗಬಾರದು. ಅದು ಚಿನುಮಯ ರೂಪವಾಗಬೇಕು. ಮಂಗಲ ರೂಪವಾಗಿ ಪರಿಣಮಿಸಬೇಕು. ಅಂದರೆ ಕಣ್ಣಿನಲ್ಲಿ ಶಿವಲಿಂಗದ ಸ್ವರೂಪು ತೋರಿ ಬರುವದು. ಇದು ನಿಶ್ಚಯವಾದ ಮಾತು. ಇದನ್ನು ನಂಬಿ ನಡೆಯೆಂದು ಗುರು ನಿರೂಪಿಸುತ್ತಾನೆ.

ಯಾವುದೇ ರೂಪವನ್ನು ಗ್ರಹಿಸುವದು ಕಣ್ಣಿನ ಪ್ರಾಕೃತಿಕ ಧರ್ಮ. ಕಂಡ ಸುಂದರ ರೂಪವನ್ನು ಮೋಹಿಸುವದು ವಿಕೃತಿಯೆನಿಸುವದು. ಆದರೆ ಮೋಹಕ ರೂಪವನ್ನು ನೋಡಿದರೂ ಶಿವರೂಪದಲ್ಲಿ ಭಾವಿಸುವದೇ ಶಿವಲಿಂಗದ ಸಂಸ್ಕೃತಿ. ಇಂಥ ಸಂಸ್ಕೃತಿಯನ್ನು ಸಮನ್ವಯಗೊಳಿಸಿಕೊಳ್ಳುವದೇ ಚನಮಯನ ದರ್ಶನ. ಶಿವಲಿಂಗದ ಸಾಕ್ಷಾತ್ಕಾರ.

 

ಶಿವಲಿಂಗದ ಮಿಶ್ರಷದ್ವಿಧ ಲಿಂಗಾರ್ಪಣದ ವಿವರವು ಇಂತಿದೆ – “ಪೀತ ವರ್ಣದ ರೂಪನರಿವುದು ಆಚಾರಲಿಂಗದಲ್ಲಿ, ಶ್ವೇತವರ್ಣದ ರೂಪನರಿವುದು ಗುರುಲಿಂಗದಲ್ಲಿ,  ಹರಿತವರ್ಣದ ರೂಪನರಿವುದು ಶಿವಲಿಂಗದಲ್ಲಿ, ಮಂಜಿಷ್ಠವರ್ಣದ ರೂಪನರಿವುದು ಜಂಗಮಲಿಂಗದಲ್ಲಿ, ಕಪೋತವರ್ಣದ ರೂಪನರಿವುದು ಪ್ರಸಾದ ಲಿಂಗದಲ್ಲಿ ,ಇಂತಿವು ಎಲ್ಲರಲ್ಲಿಯ ರೂಪನರಿವುದು    ಮಹಾಲಿಂಗದಲ್ಲಿ. ಇಂತು ಶಿವಲಿಂಗದ ಮಿಶ್ರಾರ್ಪಣ”ವೆಂದು ಚನ್ನಬಸವಣ್ಣನವರು ನಿರೂಪಿಸಿದ್ದಾರೆ.

 

ರೂಪವು ಪೀತ (ಹಳದಿ) ಶ್ವೇತ (ಬಿಳುಪು) ಹರಿತ (ಹಸಿರು) ಮಂಜಿಷ್ಠ(ಕಪ್ಪು)ಗಳೆಂದು ಐದು ತೆರ.   ರೂಪವನ್ನು ಗ್ರಹಿಸುವ ಶಿವಲಿಂಗವು  ಆಚಾರಲಿಂಗವಾಗಿ ಹಳದಿ ರೂಪವನ್ನು ಗ್ರಹಿಸಿದರೆ, ಗುರುಲಿಂಗವಾಗಿ ಬಿಳಿರೂಪವನ್ನು ನೋಡುತ್ತದೆ. ಶಿವಲಿಂಗದೊಳಗಿನ  ಶಿವಲಿಂಗವು ಹಸಿರುರೂಪವನ್ನು ಕಾಣುತ್ತದೆ. ಜಂಗಮಲಿಂಗವು ಮಂಜಿಷ್ಠ ಬಣ್ಣವನ್ನು ನೋಡಿದರೆ ಪ್ರಸಾದಲಿಂಗವು ಕಪೋತವರ್ಣವನ್ನು ಕಾಣುವದು. ಈ ಎಲ್ಲ ರೂಪಗಳ ಅರಿವು ಮಹಾಲಿಂಗಕ್ಕೆ ಆಗುವದು. ಗುರುವೆ ! ರೂಪವನ್ನು ಸುರೂಪವನ್ನಾಗಿ ಶಿವರೂಪವನ್ನಾಗಿ ನೋಡುವ ಶಿವಲಿಂಗಕ್ಕಾಶ್ರಯವಾದ ಕಂಗಳನ್ನಿತ್ತು ಕಾಪಾಡು.

 

ಅಂಗ ಸೋಂಕಿನ ಸುಖವೆ | ಲಿಂಗ ಸ್ಪರ್ಶನವಾಗ-

ಲಂಗ ತ್ವಗಿಂದ್ರಿಯ-ಜಂಗಮಲಿಂಗವೆಂದು

ಕಂಗೊಳಿಪ ಗುರುವೆ ಕೃಪೆಯಾಗು  ||೧೬೨||

 

ನಾಲ್ಕನೆಯ ಜ್ಞಾನೇಂದ್ರಿಯ ತ್ವಕ್ಕು ಅರ್ಥಾತ್ ಚರ್ಮ. ಇದು ವಾಯು ತತ್ತ್ವಪ್ರಧಾನವಾದುದು. ಈ ತ್ವಗಿಂದ್ರಿಯಕ್ಕೆ ಶೀತೋಷ್ಣಗಳ ಸ್ಪರ್ಶವಾಗುತ್ತದೆ. ಚರ್ಮಕ್ಕೆ ತಂಪು, ಉಷ್ಣಗಳೆನಿಸಿದ ಸ್ಪರ್ಶಸುಖ ಅನುಭವಕ್ಕೆ ಬರುವದು. ಬೇಸಿಗೆಯಲ್ಲಿ ತಂಪುಸ್ಪರ್ಶ ಸುಖವೆನಿಸಿದರೆ; ಚಳಿಗಾಲದಲ್ಲಿ ಉಷ್ಣಸ್ಪರ್ಶ ಹಿತವೆನಿಸುವದು. ಮಳೆಗಾಲದಲ್ಲಿ ಮಂದೋಷ್ಣವು ಆನಂದವನ್ನುಂಟು ಮಾಡುವದು. ಆದರೆ  ಯಾವುದೇ ಅಂಗಸೋಂಕಿನ ಸುಖವು ಲಿಂಗಸ್ಪರ್ಶನದ ಅನುಭವವಾಗುವಂತಾಗ ಬೇಕು. ಸ್ಪರ್ಶವು ಶಾರೀರಿಕವೆನಿಸಿದರೆ ಅದು ಜೀವಿಯನ್ನು ಮೋಹಪಾಶದಲ್ಲಿ ಕೆಡುವುದು. ಅದಕ್ಕಾಗಿ ಲಿಂಗಮುಖವಾಗಿ ಸ್ಪರ್ಶಿಸುವ ತ್ವಗಿಂದ್ರಿಯದಲ್ಲಿ ಜಂಗಮ ಲಿಂಗವನ್ನು ನೆನಯಬೇಕು. ಭಾವಿಸಬೇಕು. ಅಂದರೆ ಭಕ್ತನು ಸಂಸಾರಿಯಾಗಿಯೂ ಕಂಗೊಳಿಸಬಲ್ಲನು. ತನ್ನನ್ನು ನೆರೆನಂಬಿದ ಶಿಷ್ಯನಿಗೆ ಮನೋಜ್ಞ ರೂಪವಾಗಿ

ಕಂಗೊಳಿಪ ಗುರುನಾಥನು ಜಂಗಮಲಿಂಗದ ಅರಿವು ಮೂಡುವಂತೆ ಬೋಧಿಸಿ ಹರಸುತ್ತಾನೆ.

 

ಚನ್ನಬಸವಣ್ಣನವರು ಪ್ರತಿಪಾದಿಸಿದಂತೆ-  “ಜಂಗಮಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣದ ವಿವರವು. ಕಠಿಣವಾದ ಸ್ಪರ್ಶನವನರಿವುದು ಆಚಾರಲಿಂಗದಲ್ಲಿ; ಮೃದುವಾದ ಸ್ಪರ್ಶನವನರಿವುದು ಗುರುಲಿಂಗದಲ್ಲಿ: ಉಷ್ಣವಾದ ಸ್ಪರ್ಶನವನರಿವುದು ಶಿವಲಿಂಗದಲ್ಲಿ: ಶೈತ್ಯವಾದ ಸ್ಪರ್ಶನವನರಿವುದು ಜಂಗಮ ಲಿಂಗದಲ್ಲಿ: ನುಣುಪು ಮಿಶ್ರವಾದ ಸ್ಪರ್ಶನವನರಿವುದು ಪ್ರಸಾದಲಿಂಗದಲ್ಲಿ ; ಇಂತಿವು ಎಲ್ಲರಲ್ಲಿಯ ಸ್ಪರ್ಶನವನರಿವುದು ಮಹಾಲಿಂಗದಲ್ಲಿ ಇಂತು ಜಂಗಮಲಿಂಗದ ಮಿಶ್ರಾರ್ಪಣವು”

ಸ್ಪರ್ಶದಲ್ಲಿಯೂ ಕಠಿಣ, ಮೃದು, ಉಷ್ಣ ಶೈತ್ಯ, ನುಣುಪು ಮಿಶ್ರವೆಂದು ಆರು ವಿಧವಾಗಿದೆ. ಇವುಗಳನ್ನು ಕ್ರಮವಾಗಿ ಜಂಗಮಲಿಂಗದೊಳಗಿನ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗಗಳಿಂದ ಅರಿಯಬೇಕು. ಐದರ ಅನುಭವವೇ ಮಹಾಲಿಂಗಕ್ಕೆ ತೃಪ್ತಿಯನ್ನೀಯುವದು. ಗುರುದೇವ ! ಸ್ಪರ್ಶಸುಖ ಬಯಸುವ ತ್ವಗಿಂದ್ರಿಯದಲ್ಲಿ ಜಂಗಮಲಿಂಗದ ಸಾಕ್ಷಾತ್ಕಾರವಾಗುವಂತೆ ಕರುಣಿಸಿ ಲಿಂಗಸ್ಪರ್ಶಸುಖವನ್ನು ಅನುಭವಿಸಬಲ್ಲ ಘನತೆಯನ್ನಿತ್ತು ಸಲಹು.

Related Posts