ಕುಮಾರ ಸ್ವಾಮಿಗಳವರ ಶಿಷ್ಯ ಸಂಪತ್ತು ಅಷ್ಟಿಷ್ಟಲ್ಲ; ಅಗಣಿತವಾಗಿದೆ. ಇಂದಿಗೆ ೪೧ ವರುಷಗಳಿಂದ ನಡೆಯುತ್ತಿರುವ ಶಿವಯೋಗಮಂದಿರದಲ್ಲಿಯೆ ಸಾವಿರಾರು ಮಂದಿ ಶಿಷ್ಯರಾಗಿದ್ದಾರೆ. ಆಚೆ ಉತ್ತರಕರ್ನಾಟಕದಲ್ಲಿ ಊರು ಊರಿನಲ್ಲಿ ಶಿಷ್ಯರಾಗಿದ್ದಾರೆ. ಸಮಾಜದ ಪ್ರಮುಖರನೇಕರು ಸ್ವಾಮಿಗಳವರಲ್ಲಿ ಶಿಷ್ಯತ್ವವನ್ನು ವಹಿಸಿದ್ದಾರೆ. ಆದರೆ ಅವರೆಲ್ಲರ ಹೆಸರುಗಳನ್ನು ಇಲ್ಲಿ ಹೆಸರಿಸಲು ಸಾಧ್ಯವಿಲ್ಲ. ಸ್ವಾಮಿಗಳವರಲ್ಲಿಯೂ ಸಮಾಜದಲ್ಲಿಯೂ ಪ್ರಮುಖರಾದವರ ಸಂಕ್ಷಿಪ್ತ ಪರಿಚಯ ಇಲ್ಲಿ ಅವಶ್ಯಕ.
೧. ಶ್ರೀ ಜಗದ್ಗುರು ಗುರುಸಿದ್ಧರಾಜೇಂದ್ರ ಸ್ವಾಮಿಗಳವರು.
ಇವರು ಹುಬ್ಬಳ್ಳಿಯಲ್ಲಿ ಪ್ರಸಿದ್ಧವಾಗಿರುವ ಮೂರುಸಾವಿರಮಠದ ಅಧಿಪತಿಗಳು. ವಿರಕ್ತಾಶ್ರಮದ ಕುಮಾರ ಸಮಯ ಮೂಲ ಪೀಠದವರು. ಈ ಮಠಕ್ಕೆ ಹಾನಗಲ್ಲ ಸ್ವಾಮಿಗಳವರೆ ಇವರನ್ನು ನಿಯೋಜಿಸಿದರು. ಇವರು ಮೊದಲು ಕೊಣ್ಣೂರು ಮಠಾಧಿಪತಿಗಳು. ಶಿವಯೋಗ ಮಂದಿರದಲ್ಲಿದ್ದು ಓದಿದವರು. ಮಂದಿರದ ಅಧ್ಯಕ್ಷತೆಯನ್ನು ವಹಿಸಿ ಅನೇಕ ದಿನ ಕೆಲಸಮಾಡಿದ್ದಾರೆ. ತಮ್ಮ ಮಠದಲ್ಲಿಯೆ ಒಂದು ಸಂಸ್ಕೃತ ಪಾಠಶಾಲೆಯನ್ನು ಉಚಿತ ಭೋಜನಾಲಯವನ್ನು ಸ್ಥಾಪಿಸಿ… ಕಲಕತ್ತಾ ಯೂನಿರ್ವಸಿಟಿ ಪರೀಕ್ಷೆಗಳನ್ನು ತಮ್ಮ ಪಾಠಶಾಲೆಯಲ್ಲಿಯೆ ನೆರವೇರುವಂತೆ ಮಾಡಿಸಿದ್ದಾರೆ. ಅಲ್ಲದೆ ಅದೇ ಹುಬ್ಬಳ್ಳಿಯಲ್ಲಿ ಔದ್ಯೋಗಿಕ ಶಿಕ್ಷಣ ಕಾಲೇಜ ಸ್ಥಾಪನೆಗಾಗಿ ಒಂದು ಲಕ್ಷರೂಪಾಯಿಗಳನ್ನು ಉದಾರವಾಗಿ ಆಶೀರ್ವದಿಸಿದ್ದಾರೆ.
೨. ನವಿಲುಗುಂದ ಗವಿಮಠದ ಶ್ರೀ ಮ.ನಿ.ಬಸವಲಿಂಗ ಸ್ವಾಮಿಗಳವರು.
ಇವರು ಶಿವಯೋಗಮಂದಿರದಲ್ಲಿದ್ದು ಓದಿ ವಿದ್ಯಾವಿಚಕ್ಷಣರಾಗಿ ಸ್ವಾಮಿಗಳವರ ಶಿಷ್ಯರಲ್ಲಿ ಅಗ್ರಗಣ್ಯರಾಗಿದ್ದಾರೆ. ಅವರ ಕೃಪೆಗೆ ಪಾತ್ರರಾಗಿದ್ದಾರೆ. ಮಂದಿರದ ಉಪಾಧ್ಯಕ್ಷರಾಗಿ ಬಹುಕಾಲ ಕೆಲಸ ಮಾಡಿದ್ದಾರೆ. ಸ್ವಾಮಿಗಳವರು ಇದ್ದಾಗಳೆ ಗ್ರಂಥ ಬರೆವ ಶಕ್ತಿಯನ್ನು ಗಳಿಸಿದ್ದರು. ಈಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ದುಡಿದಿದ್ದಾರೆ; ತುಂಬಾ ಹೆಸರು ಗಳಿಸಿದ್ದಾರೆ. ಸಂಘ ಸಂಸ್ಥೆಗಳಲ್ಲಿ ಅಂಗವಹಿಸಿದ್ದಾರೆ. ಸರ್ವಧರ್ಮ ಸಮನ್ವಯದಂತಹ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಅಯಾಮತದ ವಿದ್ಯಾವಂತರನ್ನು ಪ್ರತಿವರ್ಷ ಕರೆಯಿಸಿ ಮಠದಲ್ಲಿ ಭಾಷಣ ಮಾಡಿಸುತ್ತಾರೆ. ಎಲ್ಲ ತತ್ವಗಳ ಸಮನ್ವಯ ಪ್ರಚಾರ ಪ್ರಾರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಆದ ಬಸವೇಶ್ವರ ಕಾಲೇಜ ಸ್ಥಾಪನೆಗೆ ಮೂಲಕರ್ತರಾಗಿ ನಿಂತು ಕೆಲಸ ಮಾಡಿದ್ದಾರೆ. ಕಾಸುಕೂಡಿಸಿದ್ದಾರೆ. ಕೀರ್ತಿ ಪಡೆದಿದ್ದಾರೆ. ಹೀಗೆ ಅವರ ಕಾರ್ಯಕ್ಷೇತ್ರ ಅನೇಕ ಮುಖವಾಗಿದೆ. ಆಧುನಿಕ ಸಾಹಿತಿಗಳು ವಿದ್ವಾಂಸರು ಪ್ರಮುಖರು ಇವರಲ್ಲಿ ಶ್ರದ್ಧೆ ವಿಶ್ವಾಸವುಳ್ಳವರಾಗಿದ್ದಾರೆ.
೩ ಹಾಲಕೆರೆಯ ಇಂದಿನ ಶ್ರೀ ಮ.ನಿ, ಅನ್ನದಾನ ಸ್ವಾಮಿಗಳವರು.
ಇವರು ಶಿವಯೋಗ ಮಂದಿರದಲ್ಲಿದ್ದು ಶಿಕ್ಷಣ ಪಡೆದವರಲ್ಲದಿದ್ದರು, ಹಾನಗಲ್ಲ ಸ್ವಾಮಿಗಳವರಿಂದ ಹೆಚ್ಚು ಉಪಕೃತರಾಗಿದ್ದಾರೆ. ಸ್ವಾಮಿಗಳವರು ಲಿಂಗೈಕ್ಯರಾದ ಮೇಲೆ ಶಿವಯೋಗಮಂದಿರದ ಅಧ್ಯಕ್ಷತೆಯನ್ನು ವಹಿಸಿ ಅಮೋಘವಾದ ಸೇವೆ ಸಲ್ಲಿಸಿದ್ದಾರೆ. ತಪೋನಿಷ್ಠರು, ಭವನ ನಿರ್ಮಾಣ ಚಿತ್ರ ಬರವಣಿಗೆ ಕಲೆಗಳಲ್ಲಿ ನಿಷ್ಣಾತರು. ಮೊನ್ನೆ ಮೊನ್ನೆ ಗದುಗಿನಲ್ಲಿ ಜ್ಞಾನ ದಾಸೋಹವನ್ನು ಕರೆದು ತಿಂಗಳುಗಟ್ಟಲೆ ಬಹು ವಿಜೃಂಭಣೆಯಿಂದ ಜರುಗಿಸಿದರು. ದೊಡ್ಡ ದೊಡ್ಡ ವಿದ್ವಾಂಸರನ್ನು ಶಿವಾನುಭವಿಗಳನ್ನು ಕರೆಯಿಸಿದ್ದರು.
೪. ಬಿದರಿ ಪಟ್ಟಾಧ್ಯಕ್ಷರವರು.
ಇವರ ನಿಜವಾದ ಹೆಸರು ಬಿದರೀ ಪ್ರಭುಕುಮಾರ ಪಟ್ಟಾಧ್ಯಕ್ಷರು. ಇವರು ಸ್ವಾಮಿಗಳವರ ಶಿಷ್ಯರು. ಬಹುಕಾಲ ಶಿವಯೋಗಮಂದಿರ ನಿವಾಸಿಗಳು. ಯೋಗದಲ್ಲಿ ಅದ್ವಿತೀಯರು. ಸಂಸ್ಥೆಯಲ್ಲಿ ಯೋಗ ಶಿಕ್ಷಣಾಚಾರ್ಯರಾಗಿದ್ದರು. ಉತ್ತರ ಭಾರತ ಸಂಚಾರ ಮಾಡಿ ಅಲ್ಲಿನ ಯೋಗಿಗಳಿಂದ ‘ಯೋಗಿರಾಜ’ ಎಂಬ ಬಿರುದು ಪಡೆದಿದ್ದರು. ಪ್ಲಾವಿನಿ ವಜ್ರೋಳಿ ಮುಂತಾದ ಮೇಲಿನ ಯೋಗಗಳಲ್ಲಿ ಸಂಪೂರ್ಣಸಿದ್ಧಿ ಇವರಿಗಿತ್ತು. ಶಾಂತರು ಸರಳಹೃದಯರು. ಸಾಧುಶೀಲರು. ಶಿವಪೂಜಾ ಧುರಂಧರರು. ನೀರ ಮೇಲೆ ಆಸನ ಹಾಕಿ ಎಷ್ಟು ಹೊತ್ತಾದರು ತೇಲುತ್ತಿದ್ದರು. ನೆಲದ ಮೇಲೆ ಆಸನ ಹಾಕಿ ಹನ್ನೆರಡು ಗಂಟೆ ಹೊತ್ತಾದರು ಸುಖವಾಗಿ ಸ್ಥಿರವಾಗಿ ಕುಳಿತಿರುತ್ತಿದ್ದರು. ಅನೇಕರಿಗೆ ದೀಕ್ಷಾ ಗುರುಗಳು. ಲಿಂಗೈಕ್ಯರಾಗಿದ್ದಾರೆ. ನಾಮಾಂಕಿತವಿಟ್ಟು ಒಂದು
೫. ಸಖರಾಯ ಪಟ್ಟಣದ ಪಟ್ಟಾಧ್ಯಕ್ಷರಾದ ಶ್ರೀ ಮ.ಲಿಂ.ಚ. ಸದಾಶಿವ ಶಿವಾಚಾರ್ಯಸ್ವಾಮಿಗಳವರು.
ಇವರು ಶಿವಯೋಗ ಮಂದಿರದಲ್ಲಿ ಸಂಸ್ಕೃತ ಶಿಕ್ಷಣ ಪಡೆದು ಸ್ವಾಮಿಗಳವರ ಕೃಪೆಗೆ ಪಾತ್ರರಾದವರು. ವಿದ್ಯೆಯಲ್ಲಿ ಯೋಗದಲ್ಲಿ ಶೀಲಾಚರಣೆಯಲ್ಲಿ ಶಿವಪೂಜೆಯಲ್ಲಿ ನಿಷ್ಣಾತರು. ಕನ್ನಡದಲ್ಲಿ ಕೆಲವು ಗ್ರಂಥಗಳನ್ನು ಬರೆದಿದ್ದಾರೆ. ಹಾನಗಲ್ಲ ಸ್ವಾಮಿಗಳವರ ಮೇಲೆ ಒಂದು ರಗಳೆಯ ಕಾವ್ಯವನ್ನು ಅವರ ನಾಮಾಂಕಿತವಿಟ್ಟು ಒಂದು ವಚನವನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ‘ಕೈವಲ್ಯೋಪನಿಷದ್ಭಾಷ್ಯ’ ಬರೆದಿದ್ದಾರೆ. ಅಚ್ಚಾಗುತ್ತಿದೆ. ಇದು ಇವರ ವೈಶಿಷ್ಟ್ಯ ನಮಗೆಲ್ಲ ಹೆಮ್ಮೆ. ಇದನ್ನು ಬರೆದು ಇವರು ನಿಜವಾಗಿ ಆಚಾರ್ಯ ಪದವಿಗೇರಿದ್ದಾರೆ. ಗಿರಿಯಾಪುರದಲ್ಲಿ ಶ್ರೀಗುರು ಕುಮಾರಾಶ್ರಮವನ್ನು ಸ್ಥಾಪಿಸಿದ್ದಾರೆ. ಮೊನ್ನೆ ಮೊನ್ನೆ ಮಾಘಮಾಸದಲ್ಲಿ ಅದೇ ಆಶ್ರಮದಲ್ಲಿ ಶಿವಾನುಭವ ಸಪ್ತಾಹ’ವನ್ನು ಸ್ವಾಮಿಗಳವರ ಸ್ಮಾರಕಕ್ಕಾಗಿ ಕೂಡಿಸಿ ಒಳ್ಳೆ ವೈಭವದಿಂದ ವ್ಯವಸ್ಥೆಯಿಂದ ನೆರವೇರಿಸಿದ ಪುಣ್ಯಪುರುಷರು. ಈ ಕೃತಿಯು ಸಹ ಅವರ ಪ್ರೇರಣೆಯ ಫಲ. ಅವರ ಸಪ್ತಾಹ ಸ್ಮಾರಕಚಿನ್ಹೆ.
೬ ಶ್ರೀ ಮ.ನಿ. ನಾಗನೂರು ಶಿವಬಸವ ಶ್ರೀಗಳವರು.
ಇವರು ಶಿವಯೋಗಮಂದಿರದಲ್ಲಿದ್ದು ಸ್ವಾಮಿಗಳವರಿಗೆ ಶಿಷ್ಯರಾದವರು, ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರು ವಿದ್ಯಾರ್ಥಿಗಳ ಪೋಷಣದಂತಹ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಬೆಳಗಾವಿ ಜಿಲ್ಲಾ ಕೇಂದ್ರದಲ್ಲಿ ಒಂದು ವಿದ್ಯಾರ್ಥಿ ನಿಲಯ ಸ್ಥಾಪಿಸಿ ಬಹುದಿನಗಳಿಂದ ಬಹುರೂಪದಲ್ಲಿ ಶ್ರಮಿಸಿ ಓದುವ ವಿದ್ಯಾರ್ಥಿಗಳಿಗೆ ಊಟ ವಸತಿಗಳನ್ನು ಏರ್ಪಡಿಸಿದ್ದಾರೆ. ಈಗ ಅದು ಬೃಹದ್ರೂಪದಲ್ಲಿ ಮೈದಾಳಿ ಕೆಲಸ ಮಾಡುತ್ತಿದೆ. ಇದೀಗ ಇವರು ಶಿವಯೋಗ ಮಂದಿರ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
೭. ಕೊಪ್ಪದ ಶ್ರೀ ಮ.ನಿ. ಮಹಾಂತ ಶ್ರೀಗಳವರು.
ಈಗ ಇಳಕಲ್ಲ ಮಠಾಧಿಕಾರಿಗಳಾಗಿದ್ದಾರೆ. ಇವರು ಶಿವಯೋಗಮಂದಿರದಲ್ಲಿದ್ದು ಶಿಕ್ಷಣ ಪಡೆದು ಉತ್ತಮ ವ್ಯಾಖ್ಯಾತೃಗಳಾಗಿದ್ದಾರೆ. ಜನಮನಾಕರ್ಷಣಶಕ್ತಿ ಇವರಲ್ಲಿ ಚನ್ನಾಗಿದೆ. ವಾಣಿ ಪ್ರಸನ್ನತೆಯಿದೆ. ಲೀಲಾಜಾಲವಾಗಿ ರುಚಿಕರವಾಗಿ ಮಾತಾಡಬಲ್ಲರು ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿ ತೇಲಿಸಬಲ್ಲರು. ಸ್ವಾಮಿಗಳವರ ಅಪ್ಪಣೆಯ ಮೇರೆಗೆ ನಾಡಿನ ಅನೇಕ ಭಾಗಗಳಲ್ಲಿ ಸಂಚರಿಸಿ ಧರ್ಮ ನೀತಿಗಳನ್ನು ಪೌರಾಣಿಕ ಕಥಾಜೋಡಣೆಯಿಂದ ಮನ ಮೆಚ್ಚುವಂತೆ ಬೋಧಿಸಿ ಜನ ಜಾಗೃತಿಯ ಮಾಡಿ ಶಿವಯೋಗಮಂದಿರ ಕೀರ್ತಿ ಬೆಳಗಿಸಿ ಕೃತಾರ್ಥರಾಗಿದ್ದಾರೆ. ಇಳಕಲ್ಲ ಮಠಾಧಿಪತಿಗಳಾದ ಮೇಲೆ ಹುನಗುಂದದಲ್ಲಿ ಒಂದು ಹೈಸ್ಕೂಲನ್ನು ಸ್ಥಾಪಿಸಿ ಉಚಿತ ಭೋಜನಾಲಯವನ್ನು ಏರ್ಪಡಿಸಿ ಸತ್ಕಾರ್ಯ ಮಾಡುತ್ತಿದ್ದಾರೆ. ಅಲ್ಲಿನ ಮಹಾಜನಗಳ ಪ್ರೇಮಾದರಗಳಿಗೆ ಪಾತ್ರರಾಗಿದ್ದಾರೆ. ಇವರು ವಿದ್ಯಾಗುಣ ಪಕ್ಷಪಾತಿಗಳು. ನಿಗರ್ವಿಗಳು. ಬೋಧಾಸಕ್ತರು. ಸ೦ತಸಚಿತ್ತರು. ಪ್ರೋತ್ಸಾಹಿಗಳು.
೮. ಶ್ರೀ ಮ.ನಿ. ಜಡೆಸ್ವಾಮಿಗಳೆಂಬವರೊಬ್ಬರು.
ಇವರು ಅನೇಕ ಕಾಲ ಶಿವಯೋಗ ಮಂದಿರದಲ್ಲಿದ್ದು ಸಂಸ್ಥೆಯ ಸೇವೆ ಸಲ್ಲಿಸಿದ್ದಾರೆ. ಅನುಷ್ಠಾನ ಮಾಡುವದರಲ್ಲಿ ಸ್ವಾಮಿಗಳವರಿಗೆ ಅಚ್ಚು ಮೆಚ್ಚಿಗೆಯವರಾಗಿದ್ದರು. ಕಲ್ಯಾಣದಲ್ಲಿರುವ ಮುಖ್ಯವಾದ ಶೂನ್ಯಸಿಂಹಾಸನ ಮಠಕ್ಕೆ ಅಧಿಪತಿಗಳಾಗಿದ್ದಾರೆ. ಪ್ರಭುಸ್ವಾಮಿಗಳಾಗಿದ್ದಾರೆ. ಸದ್ಯಃ ಬೀರೂರಿನಲ್ಲಿದ್ದು ವಿದ್ಯಾಪ್ರೋತ್ಸಾಹ ಸೇವೆ ಸಲ್ಲಿಸುತ್ತಿದ್ದಾರೆ.
೯. ಈ ಕೃತಿಕರ್ತರ ಪರಿಚಯ ಅನಾವಶ್ಯಕವಾದರು ಕ್ರಮಪ್ರಾಪ್ತವಾಗಿ ಎರಡು ಮಾತನ್ನು ಹೇಳಿದರೆ ಹೆಚ್ಚೆನಿಸಲಾರದು; ಆತ್ಮಸುತ್ತಿಯೆನಿಸಲಾರದು. ಶ್ರೀ ಜಗದ್ಗುರು ನಿಡುಮಾಮಿಡಿ ಶ್ರೀಶೈಲ ಪೀಠವು ಪಂಚಪೀಠಗಳಲ್ಲೊಂದು. ಶ್ರೀಶೈಲ ಸೂರ್ಯಸಿಂಹಾಸನ ಪೀಠ. ಪ್ರಾಚೀನ ಪೀಠ, ಪ್ರಭಾವಯುತ ಪೀಠ. ಸ್ವಾಮಿಗಳವರ ಕೃಪೆಯ ಬಲದಿಂದ ಇದರ ಅಧಿಕಾರ ಪ್ರಾಪ್ತವಾಗಿದೆ. ಹಿಂದಿದ್ದ ಮೈಸೂರು ಮಹಾರಾಜರವರ ಆರ್ಡರ ಪ್ರಕಾರ ಕೋಲಾರ ಜಿಲ್ಲಾಧಿಕಾರಿಗಳು ಸ್ವತಃ ನಿಂತು ಪೀಠದ ಪಟ್ಟಾಧಿಕಾರವನ್ನು ನೆರವೇರಿಸಿದರು. ಶಿವಯೋಗ ಮಂದಿರ ಶಿಕ್ಷಣ ಪಡೆದವರಲ್ಲಿ ನಾವೊಬ್ಬರು. ಅಷ್ಟಿಷ್ಟು ಕನ್ನಡ ಸಾಹಿತ್ಯ ಸೇವೆ ನಡೆಯುತ್ತಿದೆಯೆಂಬುದಕ್ಕೆ ಈ ಕೃತಿಯೊಂದು ಸಾಕ್ಷಿ. ಇದು ಹನ್ನೆರಡನೆಯ ಕೃತಿ. ಗೌರಿಬಿದನೂರಿನಲ್ಲಿ ಕೋಮುಪಂಥಗಳ ಭಾವನೆಯಿಲ್ಲದೆ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಲಾಗಿದೆ. ಎರಡು ವರ್ಷಗಳಿಂದ ನಡೆಯುತಲಿದೆ. ಗೂಳೂರಿನ ಮಾಧ್ಯಮಿಕ ಶಾಲೆಯ ಕಟ್ಟಡಕ್ಕೆ ಪೀಠದಿಂದ ಧನಸಹಾಯ ಮಾಡಲಾಗಿದೆ. ಕರ್ನಾಟಕ ಏಕೀಕರಣ ವಿಷಯದಲ್ಲಿ ಭಾಷಣಗಳ ಮೂಲಕ ಸೇವ ಸಲ್ಲಿದೆ.
೧೦. ಭಾಲ್ಕಿ ಶ್ರೀ ಮ.ಲಿಂ.ಚ. ಚನ್ನಬಸವ ಪಟ್ಟಾಧ್ಯಕ್ಷರು.
ಇವರು ಶಿವಯೋಗ ಮಂದಿರದಲ್ಲಿದ್ದು ಶಿಕ್ಷಣ ಪಡೆದವರು. ಸ್ವಾಮಿಗಳವರ ಸೇವೆಯನ್ನು ಮಾಡಿ ಧನ್ಯರಾದವರು. ಇವರು ಹೈದರಾಬಾದ ಪ್ರಾಂತ್ಯದಲ್ಲಿ ಗುಲಬರ್ಗಾ ಜಿಲ್ಲೆಯ ಒಂದೂರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಆ ಭಾಗದ ವಿದ್ಯಾರ್ಥಿಗಳಿಗೆ ತುಂಬ ಸಹಾಯ ಮಾಡಿದ್ದಾರೆ; ಸತ್ಕಾರ್ಯ ನಿರತರಾಗಿದ್ದಾರೆ.
ಇದಲ್ಲದೆ ಶ್ರೀ ವ್ಯಾಕರಣಾಳ ಪಟ್ಟಾಧ್ಯಕ್ಷರು, ಕೆಳದಿ ಪಟ್ಟಾಧ್ಯಕ್ಷರು, ಸೂಡಿ ಪಟ್ಟಾಧ್ಯಕ್ಷರು ಶ್ರೀ ಸವದತ್ತಿ ಅಪ್ಪಯ್ಯ ಸ್ವಾಮಿಗಳವರು, ಬಾಗಲಕೋಟಿ ಕರವೀರಮಠದ ಶ್ರೀಗಳು, ನೇರಡುಗುಂಭ ಶ್ರೀಗಳು ಮುಖ್ಯ ಶಿಷ್ಯರಾಗಿದ್ದರು.
೧೧. ಶಿರೂರಿನ ಶ್ರೀ ಮಾಗಿ ಶಿವಬಸಪ್ಪ ಮಾಸ್ತರರು.
ಇವರು ಸಂಸ್ಥೆಯ ಸ್ಥಾಪನೆಯ ಮೊದಲ್ಗೊಂಡು ಇಂದಿನವರೆವಿಗು ಸಂಸ್ಥೆಯ ಮ್ಯಾನೇಜರರಾಗಿ ಅಮೋಘವಾದ ಸೇವೆ ಸಲ್ಲಿಸಿದ್ದಾರೆ; ಸಲ್ಲಿಸುತ್ತಿದ್ದಾರೆ. ಮನೆ ಬಾಳಿನ ಮಮತೆಯನ್ನು ಬಿಟ್ಟು ಔದಾರ್ಯದಿಂದ ಔತ್ಸುಕ್ಯದಿಂದ ಭಕ್ತಿಪ್ರಸಕ್ತಿಯಿಂದ ಸಂಸ್ಥೆಯ ಸೇವೆಗೆ ತಮ್ಮ ಆಯುಷ್ಯವನ್ನೇ ಮುಡಿಪಿಟ್ಟು ದುಡಿದು ಧನ್ಯರಾದರು. ಆದರ್ಶಜೀವಿಗಳಾದರು, ಸ್ವಾಮಿಗಳವರ ಸತ್ಕೃಪೆಗೆ ಪಾತ್ರರಾದರು. ಇವರ ತ್ಯಾಗ, ಸತ್ಯಸಂಧತೆ, ಸ್ವಾಮಿಗಳವರಲ್ಲಿದ್ದ ಗಾಢಭಕ್ತಿ ನಿಯಮ ನಿಷ್ಠೆ, ವಚನ ಪರಿಪಾಲನಾ ದೃಷ್ಟಿ, ಕಷ್ಟಸಹಿಷ್ಣುತೆ ಮುಂತಾದ ಗುಣಗಳು ಸ್ತುತ್ಯರ್ಹವಾದವು. ಈಗ ತೀರ ಅಪರವಯಸ್ಸಿನವರಾಗಿ ಸಂಸ್ಥೆಯಲ್ಲಿಯೆ ತಂಗಿದ್ದಾರೆ.
೧೨. ಸಂಗೀತಗಾರರು : ಶ್ರೀ ಪಂಚಾಕ್ಷರಿ ಗವಾಯಿಗಳವರು.
ಇವರು ಸ್ವಾಮಿಗಳವರ ಕೃಪೆಯಲ್ಲಿಯೇ ಬೆಳೆದು ಸಂಗೀತಾಭ್ಯಾಸ ಮಾಡಿ ನಂತರ ಒಂದು ಸಂಗೀತ ಪಾಠಶಾಲೆಯನ್ನು ಸ್ಥಾಪಿಸಿದರು. ಸ್ವಾಮಿಗಳವರ ಕೃಪೆಯಿಂದ ಗಾಯನ ನಯನ ಪಡೆದು ಅನೇಕ ಕುರುಡ ಮಕ್ಕಳಿಗೆ ಗಾನನೇತ್ರಗಳನ್ನು ತಂದುಕೊಟ್ಟರು. ಅವರಲ್ಲಿ ಶ್ರೀ ಪುಟ್ಟಯ್ಯನವರು ಅಗ್ರಗಣ್ಯರು. ಇವರು ಈಗ ಅದೇ ಪಾಠಶಾಲೆಯನ್ನು ತಮ್ಮಗಾಯನ ಕವನ ಕಲಾಶಕ್ತಿಗಳಿಂದ ಸುರಕ್ಷಿತವಾಗಿ ಮುಂದುವರಿಸಿದ್ದಾರೆ. ಗದಗಿನಲ್ಲಿ ಕುಮಾರಾಶ್ರಮವೊಂದನ್ನು ಸ್ಥಾಪಿಸಿ ಅಲ್ಲಿ ಗಾಯನ ಶಿಕ್ಷಣವನ್ನು ನಡೆಸಿದ್ದಾರೆ. ಅಲ್ಲದೆ ಕುರುಡರಿಗೆ ಆಧುನಿಕ ವಿಜ್ಞಾನ ಪದ್ಧತಿಯನ್ನನುಸರಿಸಿ ಅಕ್ಷರಾಭ್ಯಾಸವನ್ನು ಆರಂಭಿಸಿ ಅದರಲ್ಲಿಯು ಜಯಶೀಲರಾಗಿದ್ದಾರೆ. ಒಟ್ಟಿನಲ್ಲಿ ಕುಮಾರೇಶ್ವರನ ಕೃಪೆಯಿಂದ ಕನ್ನಡ ನಾಡಿನ ಕುರುಡ ಮಕ್ಕಳನೇಕರು ಗಾನ-ವಿದ್ಯೆಗಳನ್ನು ಕಲಿತು ಸ್ವತಂತ್ರಜೀವಿಗಳಾಗಿ ಸಾಂಸ್ಕೃತಿಕ ಜೀವಿಗಳಾಗಿ ಬದುಕುವಂತಾಗಿದೆ; ಬೆಳಗುವಂತಾಗಿದೆ.
೧೩. ಕೀರ್ತನಕಾರರು :
೧. ದೇವಲಾಪುರದ ಶ್ರೀ ಬಸವಲಿಂಗ ಶಾಸ್ತ್ರಿಗಳವರು.
ಇವರು ಸ್ವಾಮಿಗಳವರ ಆಶೀರ್ವಾದದಿಂದ ಆಶ್ರಯದಿಂದ ಅದ್ವಿತೀಯ ಕೀರ್ತನಕಾರರಾದರು. ತಮ್ಮ ಅಸ್ಖಲಿತವಾದ ಅದ್ಭುತವಾದ ವಾಕ್ ವೈಖರಿಯಿಂದ ಜನರನ್ನು ತಲೆದೂಗಿಸುತ್ತಿದ್ದರು. ಮಂಜುಳವಾದ ಕಂಠದಿಂದ ಮನ ಮೆಚ್ಚಿಸುತ್ತಿದರು. ವಿಷಯ ನಿರೂಪಣೆಯಲ್ಲಿ ಅವರದೇ ಒಂದು ವೈಶಿಷ್ಟ್ಯ. ಎಷ್ಟು ಅಲ್ಪ ಅವಕಾಶ ಕೊಟ್ಟರು ಅದರಲ್ಲಿಯೆ ವಿಷಯವನ್ನು ಸೂಕ್ತವಾಗಿ ತೃಪ್ತಿಕರವಾಗಿ ಪ್ರತಿಪಾದಿಸುತ್ತಿದ್ದರು. ಜನರನ್ನು ಹರ್ಷವುಳಕಿತರನ್ನಾಗಿ ಮಾಡುತ್ತಿದ್ದರು. ಕೊನೆಯವರೆಗು ಕೀರ್ತನ ಸೇವೆಯನ್ನು ಸಲ್ಲಿಸಿ ಕನ್ನಡ ನಾಡಿನಲ್ಲಿ ತಮ್ಮ ಸಂಸ್ಥೆಯ ಕೀರ್ತಿ ಹರಡಿದರು. ಶಿವಯೋಗ ಮಂದಿರದಲ್ಲಿಯ ಸಮಾಧಿಸ್ಥರಾದರು.
ಎರಡನೆಯವರು ಹಿರಿಯಹಾಳ ಶ್ರೀ ವೀರಯ್ಯನವರು. ಇವರು ಆ ಕೀರ್ತನ ಕಲೆಯನ್ನು ಸ್ವಾಮಿಗಳವರಲ್ಲಿಯೆ ಅಭ್ಯಸಿಸಿದವರು. ಅಭ್ಯುದಯಕ್ಕೆ ಬಂದವರು. ಹೆಚ್ಚಿನ ಸಂಗೀತ ಹೆಚ್ಚಿನ ವಿದ್ವತ್ತು ಇಲ್ಲದಿದ್ದರೂ ಕಲೆಯಲ್ಲಿ ಹಿಂದಡಿಯಿಡದವರು. ಇದ್ದ ಸಂಗೀತದಲ್ಲಿಯೆ ವಿಚಾರಾತ್ಮಕವಾಗಿ ವಿನೋದಾತ್ಮಕವಾಗಿ ಕೀರ್ತನ ಮಾಡಬಲ್ಲ ಸಮರ್ಥರು. ಜಂಭದ ಮಾತಿಲ್ಲ. ಜನತಾ ಪ್ರೇಮಿಗಳು. ಈಗಲು ಕೀರ್ತನ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸ್ವಾಮಿಗಳವರಲ್ಲಿ ಮೀರಿದ ಭಕ್ತಿವಂತರಾಗಿದ್ದಾರೆ.
೧೪. ಕವಿಗಳು :
೧. ದ್ಯಾಂಪೂರಿನ ಶ್ರೀ ಚನ್ನಕವಿಗಳು. ಇವರು ಸ್ವಾಮಿಭಕ್ತರು. ಪುರಾಣಕರ್ತರು. ಷಟ್ಪದಿಯಲ್ಲಿ ಅನೇಕ ಪುರಾಣಗಳನ್ನು ಬರೆದಿದ್ದಾರೆ. ಪುರಾಣ ನಿರ್ಮಾಣ ವಿಷಯದಲ್ಲಿ ಇವರು ವೀರಶೈವ ವ್ಯಾಸರು. ರಾಘವಾಂಕನ ಕಾವ್ಯಕನ್ನಿಕೆ ಇವರ ಕೈವಿಡಿದಿದ್ದಳು; ಕೃತಾರ್ಥಳಾಗಿದ್ದಳು. ಚನ್ನಕವಿಗಳು ತಮ್ಮ ಕಾವ್ಯ ಶ್ರೀಯನ್ನು ಕೊನೆಯ ಉಸಿರಿನಲ್ಲಿಯು ಸ್ವಾಮಿಗಳವರ ಪಾದದಲ್ಲಿರಿಸಿ ಕೃತಾರ್ಥರಾದರು; ಕೀರ್ತಿಕಾಯರಾದರು.
ಎರಡನೆಯವರು…. ಶ್ರೀ ಲಿಂಗಪ್ಪ ಮಾಸ್ತರರು.
ಇವರು ಸ್ವಾಮಿ ಶಿಷ್ಯರು. ಕಾವ್ಯಜೀವಿಗಳು ಸ್ವಾಮಿಗಳವರ ಮೇಲೆ ಅನೇಕ ಪದ್ಯಗಳನ್ನು ಬರೆದಿದ್ದಾರೆ. ಕಾವ್ಯವೊಂದನ್ನು ಕಟ್ಟಿದ್ದಾರೆ. (ಅದಾವುದೊ ಹೆಸರು ಗೊತ್ತಿಲ್ಲ) ಸ್ವಾಮಿಗಳವರಲ್ಲಿ ಅಚಲವಾದ ಭಕ್ತಿಯಿತ್ತು. ಇವರು ಮುಕ್ತರಾಗಿದ್ದಾರೆ.
೧೫. ಸಂಶೋಧಕರು ಅಥವಾ ಶಿವಾನುಭಾವಿಗಳು : ಶ್ರೀ ಚನ್ನಮಲ್ಲಿಕಾರ್ಜುನರು ‘ಸದ್ಧರ್ಮ ದೀಪಿಕೆ’ಯ ಸಂಪಾದಕರು. ಇವರು ಸ್ವಾಮಿಗಳವರ ತುಂಬಾ ನೆಚ್ಚಿನ ಶಿಷ್ಯರು. ಮೊದಲಿನಿಂದಲು ಸ್ವಾಮಿಗಳವರಲ್ಲಿ ಪಳಗಿದ್ದಾರೆ. ಅವರ ಸನ್ನಿಧಿಯಲ್ಲಿಗೆ ಆಗಾಗ್ಗೆ ಬಂದು ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಭಾಷಣ ಮಾಡಿದ್ದಾರೆ. ಅಲ್ಲದೆ ಶ್ರೀಗಳವರ ಆಶೀರ್ವಾದದಿಂದ ಒಂದು ಪ್ರೆಸ್ಸನ್ನು ಪಡೆದು ಹಾವೇರಿಯಲ್ಲಿದ್ದು ‘ಸದ್ಧರ್ಮ ದೀಪಿಕೆ’ ಮಾಸಿಕ ಹೊರಡಿಸಿದರು. ಅನೇಕ ಸ್ವತಂತ್ರ ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಪುರಾತನ ಗ್ರಂಥಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಅಕ್ಕಮಹಾದೇವಿಯ ರಗಳೆ ಪ್ರಧಾನವಾದುದು. ಸ್ವಾಮಿಗಳವರಲ್ಲಿದ್ದು ಶಿವಾನುಭವ ಮರ್ಮವನ್ನು ಚನ್ನಾಗಿ ಅರಿತಿದ್ದಾರೆ, ಈಗಲು ಅದೇ ಮಾಸಿಕವನ್ನು ಹೊರಡಿಸುತ್ತಿದ್ದಾರೆ.
ಎರಡನೆಯವರು ದ್ಯಾಂಪೂರ ಶ್ರೀ ಮಹಾಲಿಂಗಪ್ಪನವರು. ಇವರು ಶಿವಯೋಗ ಮಂದಿರದಲ್ಲಿಯೆ ಅನೇಕ ವರುಷಗಳವರೆಗೆ ಸ್ವಾಮಿಗಳವರ ಸನ್ನಿಧಿಯಲ್ಲಿದ್ದು ಪುರಾತನ ಗ್ರಂಥಗಳನ್ನು ಸಂಶೋಧಿಸಿದ್ದಾರೆ. ಸ್ವಾಮಿಗಳವರಿಂದ ಉತ್ತೇಜಿತರಾಗಿದ್ದಾರೆ. ಈಗಲು ಅದೇ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಮೂರನೆಯದಾಗಿ ಇಟಗಿ ಶ್ರೀ ಸೋಮನಾಥ ಶಾಸ್ತ್ರಿಗಳವರು. ಇವರು ಸಂಸ್ಕೃತ ಪಂಡಿತರು. ಮಗ್ಗಿಮಾಯಿದೇವರ ಸಂಸ್ಕೃತ ಶಿವಾನುಭವ ಗ್ರಂಥಗಳ ವಿಚಾರವನ್ನು ಸ್ವಾಮಿಗಳವರಲ್ಲಿ ಆಳವಾಗಿ ಅಭ್ಯಸಿಸಿದ್ದರು. ಶಿವಾನುಭವಿಗಳಾಗಿದ್ದರು. ಶಿಷ್ಯರಾಗಿದ್ದರು. ಶಿವಾಧೀನರಾಗಿದ್ದಾರೆ.
೧೬. ಲೇಖಕರು : ಶ್ರೀ ಕರ್ಜಿಗಿ ಗುರುಮೂರ್ತಿ ಶಾಸ್ತ್ರಿಗಳವರು. ಇವರು ಸ್ವಾಮಿಗಳವರಲ್ಲಿ ನಿಷ್ಠಾವಂತ ಶಿಷ್ಯರು. ಸ್ವಾಮಿಗಳವರಿಂದ ಪ್ರಚೋದಿತರಾಗಿ ಅನೇಕ ಬಗೆಯ ಲೇಖನಗಳನ್ನು ಬರೆಯುತ್ತಿದ್ದರು. ‘ಶಿವಪ್ರತಾಪ’ ಎಂಬ ವಾರ ಪತ್ರಿಕೆಯ ಸಂಪಾದಕರಾಗಿದ್ದರು. ಸ್ವಾಮಿಗಳವರ ಆಶ್ರಯ ಅಪ್ಪಣೆಗಳಿಂದ ಆ ಪತ್ರಿಕೆ ಹೊರಬಿದ್ದು ಕೆಲವು ದಿನ ಮಾತ್ರ ಕೆಲಸ ಮಾಡಿತು. ಶಾಸ್ತ್ರಿಗಳವರು ಸ್ವಾಮಿಗಳವರ ಜನ್ಮಭೂಮಿಯ ಬಳಿಯವರು. ಅದರಿಂದಾಗಿ ಸ್ವಾಮಿಗಳವರ ಸಂಕ್ಷಿಪ್ತ ಚರಿತೆಯನ್ನು ಸಂಗ್ರಹಿಸಿ ಸ್ಮಾರಕ ಚಂದ್ರಿಕೆಯಲ್ಲಿ ಕೊಟ್ಟಿದ್ದಾರೆ. ಅದುವೆ ಈ ಗ್ರಂಥಕ್ಕೆ ಬೀಜ. ಇವರು ಶಿವಾಧೀನರಾಗಿದ್ದಾರೆ.
ಶ್ರೀ ಮಲ್ಲಿಕಾರ್ಜುನ ದೇಶಿಕರು. ಇವರು ಸ್ವಾಮಿಗಳವರಲ್ಲಿ ಅನೇಕ ದಿನಗಳಿದ್ದು ಸೇವೆ ಮಾಡಿದ್ದಾರೆ. ಅಭ್ಯಾಸ ಮಾಡಿದ್ದಾರೆ. ಅಭ್ಯಾಸಕ್ಕಿಂತ ಆಶೋತ್ತರವೇ ಮಿಗಿಲಾಗಿದ್ದ ಇವರನ್ನು ಇಂದು ಒಬ್ಬ ಲೇಖಕರಾಗುವಂತೆ ಮಾಡಿದ್ದಾರೆ ಸ್ವಾಮಿಗಳವರು. ಇವರು ಈಚೆಗೆ ನಾಲ್ಕಾರು ಪುಸ್ತಕಗಳನ್ನು ಬರೆದಿದ್ದಾರೆ.
೧೭. ಪುರಾಣಿಕರು :
೧. ತೆಲಸಂಗದ ಶ್ರೀ ಬಸವಲಿಂಗ ಪಟ್ಟದ್ದೇವರು. ಇವರು ಶಿವಯೋಗಮಂದಿರದಲ್ಲಿಯೆ ಇದ್ದು ಅಭ್ಯಾಸಮಾಡಿದವರು. ಸಂಸ್ಕೃತದಲ್ಲಿ ಚನ್ನಾಗಿ ಗತಿಯಿದ್ದವರು. ಮರಾಠಿ ಭಾಷೆಯ ಪರಿಚಯವು ಇವರಿಗಿದೆ. ಇವರು ಶಿವಯೋಗ ಮಂದಿರದಲ್ಲಿಯೆ ಸಂಗೀತಾಭ್ಯಾಸವನ್ನು ತಕ್ಕಷ್ಟು ಮಾಡಿ ಪುರಾಣ ಹೇಳುವದರಲ್ಲಿ ಪ್ರವೀಣರಾಗಿದ್ದಾರೆ. ಶಾರೀರವಿದೆ; ಸೇಮುಷಿಯಿದೆ. ಇವರಲ್ಲದೆ ಶ್ರೀ ರುದ್ರದೇಶಿಕರು ಎಡಹಳ್ಳಿ ಇವರು ಸಹ ಪುರಾಣವನ್ನು ಹೇಳಬಲ್ಲರು.
ಇದಲ್ಲದೆ ಸಾಮಾಜಿಕರಲ್ಲಿ ದೇವಿಹೊಸೂರು ರಾ.ಬ. ಚನ್ನಬಸವಪ್ಪ ಶೆಟ್ಟರು, ಶಿರಸಂಗಿ ಲಿಂಗರಾಜರು, ಅರಟಾಳ ರುದ್ರಗೌಡರು, ಮೆಣಸಿನಕಾಯಿ ಸಾಹೇಬರು, ಕಿತ್ತೂರು ರೇವಣಸಿದ್ದಪ್ಪನವರು, ಶ್ರೀ ವೀರಬಸವ ಶ್ರೇಷ್ಟಿಯವರು, ವಾರದ ಅಪ್ಪಾಸಾಹೇಬರು, ಒಂಟಮುರಿ ದೇಸಾಯರು, ಇಟಗಿ ದೇಸಾಯರು, ಸವದತ್ತಿ ಮೂಗಪ್ಪಣ್ಣನವರು, ತೇರದಾಳ ಬುದ್ದಯ್ಯನವರು, ಧಾರವಾಡ ಶಿವಲಿಂಗ ಶಾಸ್ತ್ರಿಗ ಗಳು, ರೋಣ ಜೋಳದ ಮಾಸ್ತರರು, ಅಡ್ನೂರಿನ ಪ್ರಭುಗೌಡರು, ಕುರಹಟ್ಟಿ ಪರ್ವತಗೌಡರು, ಬೆನಕೊಪ್ಪ ಭಾಪುಗೌಡರು ಮುಂತಾಗಿ ಅನೇಕ ಪ್ರಮುಖ ಶಿಷ್ಯರಿದ್ದರು; ಈಗಲು ಇವರಲ್ಲಿ ಕೆಲವರಿದ್ದಾರೆ.
ಹಾವೇರಿ ಶ್ರೀಗಳವರು
ಇವರು ಹಾನಗಲ್ಲ ಕುಮಾರ ಸ್ವಾಮಿಗಳವರಿಗೆ ಮಲ್ಲಣಾರ್ಯರಂತೆ ಅತ್ಯಂತ ಆಪ್ತರು. ಆದರಾಭಿಮಾನಿಗಳು. ಕೊನೆಯವರೆವಿಗು ಸ್ವಾಮಿಗಳವರೊಡನೆ ಸಹಕರಿಸಿ ಕೆಲಸ ಮಾಡಿದರು. ಸ್ವಾಮಿಗಳವರು ಶಿವಯೋಗ ಮಂದಿರ ಭಾರವನ್ನು ತಮ್ಮ ತರುವಾಯ ಇವರ ಹೆಗಲ ಮೇಲಿರಿಸಿ ಇಳುಹಿ ಹೋದರು. ಹಾವೇರಿ ಹುಕ್ಕೇರಿಮಠದ ಶ್ರೀ ಮ.ನಿ. ಶಿವಬಸವ ಸ್ವಾಮಿಗಳವರು ಆ ಭಾರವನ್ನು ತಮ್ಮ ಉಸಿರು ಇರುವವರೆವಿಗು ಹೊತ್ತು ನಿತ್ತರಿಸಿದರು. ಯಶಸ್ವಿಗಳಾದರು. ಇವರು ತಪೋನಿಷ್ಠರು. ಸದಾಚಾರ ನಿರತರು.