ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಗಾಳಿ ಗಾಳಿಯ ಕೂಡಿ | ಜಾಳಂದ್ರ ಗಿರಿಗಳನು
ದಾಳಿಯನು ಒಯ್ದು-ಆಳುವ ಬಗೆಯನು ನಾ
ಕೇಳಿದೆನು ಗುರುವೆ ಕೃಪೆಯಾಗು || ೫೯ ||
ಅನಲಭೂತವನ್ನು ವರ್ಣಿಸಲು ರಾಮಾಯಣ ಕಥೆಯನ್ನು ಪ್ರಸ್ತಾಪಿಸಿದ್ದರೆ ಅನಿಲ ಭೂತದ ಭಯಾನಕತೆಯನ್ನು ವ್ಯಕ್ತಗೊಳಿಸಲು ಪೌರಾಣಿಕ ಕಥೆಯ ಮಾಧ್ಯಮವನ್ನು ಗ್ರಹಿಸಿದ್ದಾನೆ. ಶಿವಕವಿಯು
ಹಿಂದೆ ಗಾಳಿಯಲ್ಲಿ ಪರ್ವತಗಳು ಪಕ್ಷಿಗಳಂತೆ ಹಾರಾಡಿ ಜನತೆಯನ್ನು ಉಧ್ವಸ್ಥ ಗೊಳಿಸುತ್ತಿದ್ದವಂತೆ. ದೇವತೆಗಳ ಮೊರೆ ಕೇಳಿ ಇಂದ್ರನು ತನ್ನ ವಜ್ರಾಯುಧದಿಂದ ಗಿರಿಗಳ ರೆಕ್ಕೆಗಳನ್ನು ಕತ್ತರಿಸಿ ಹಾಕಿದನು. ಅಂದಿನಿಂದ ಪರ್ವತಗಳು ಕದಲುವದಿಲ್ಲ. ಹೀಗೆ ಇಂದ್ರನಿಂದ ಜಾಳಾದ (ಹಾಳಾದ) ಗಿರಿಗಳಲ್ಲಿ ಸಾಮಾನ್ಯ ಗಾಳಿಯು ಬಿರುಗಾಳಿಯೊಡನೆ ಕೂಡಿ ದಾಳಿಮಾಡಿ ಗಿಡ-ಬಳ್ಳಿಗಳನ್ನು ಹಾರಿಸಿಕೊಂಡು ಹೋಗಬಹುದು. ಆದರೆ ಆ ಗಾಳಿಯು ಪರ್ವತವನ್ನೇನೂ ಮಾಡಲಾರದು. ಇದೇ ಮಾತನ್ನು ಮಹಾಕವಿ ಕಾಳಿದಾಸನು ತನ್ನ ರಘುವಂಶ” ಕಾವ್ಯದಲ್ಲಿ
“ನ ಪಾದಪೋನ್ಮೂಲಶಕ್ತಿರಂಹಃ
ಶಿಲೋಚ್ಛಯೇ ಮೂರ್ಚ್ಛತಿ ಮಾರುತಸ್ಯ ‘
ಮರಗಳನ್ನು ಕಿತ್ತುಹಾಕಬಲ್ಲ ಶಕ್ತಿಯುಳ್ಳ ಗಾಳಿಯು ಪರ್ವತವನ್ನು ಹಾರಿಸುವಲ್ಲಿ ಬಲಹೀನವಾಗಿದೆ. ಅಂದರೆ ಅದು ಗಿರಿಯನ್ನು ಏನೂ ಮಾಡಲಾರದೆಂದೇ ತಿಳಿಸಿದ್ದಾನೆ.
ಶರೀರದಲ್ಲಿ ವಾಯು ತತ್ತ್ವದ ಮನವೇ ಗಾಳಿಯೆನಿಸುವದು. ಈ ಗಾಳಿರೂಪಿ ಮನವು ಗಾಳಿಯ ಕೂಡಿ=ಪ್ರಾಣವಾಯುವನ್ನು ಬೆರೆತು ಸಂಚರಿಸುತ್ತದೆ. ಶರೀರದ ಸಂಚಲನೆಗೆ ಐದು ವಾಯುಗಳು ಮುಖ್ಯ. ಪ್ರಾಣ, ಅಪಾನ, ವ್ಯಾನ, ದಾನ,ಸಮಾನಗಳೆಂದು. ಇವಕ್ಕೇನೆ _ ಪ್ರಾಣಪಂಚಕವೆನ್ನುವರು ಅಮರಸಿಂಹನು ಅಮರಕೋಶ’ದಲ್ಲಿ – |
“ಪ್ರಾಣೋSಪಾನಃ ಸಮಾನಶ್ಚೋದಾನವ್ಯಾನೌ ಚ ವಾಯವಃ !
ಹೃದಿ ಪಾಣೋ ಗುದೆ…ಪಾನಃ ಸಮಾನೋ ನಾಭಿಮಂಡಲೇ|
ಉದಾನಃ ಕಂಠದೇಶ ಸ್ಯಾತ್ ವ್ಯಾನಃ ಸರ್ವಶರೀರಗಃ ||
ಹೃದಯದಲ್ಲಿ ಪ್ರಾಣವಾಯು, ಗುದದಲ್ಲಿ ಅಪಾನವಾಯು, ನಾಭಿಯಲ್ಲಿ ಸಮಾನ ವಾಯು, ಕಂಠದಲ್ಲಿ ಉದಾನವಾಯು ಮತ್ತು ಸಂಪೂರ್ಣಶರೀರದಲ್ಲಿ ವ್ಯಾನವಾಯು ವ್ಯಾಪಿಸಿರುತ್ತವೆಂದು ಈ ಐದು ವಾಯುಗಳು ಇರುವ ಸ್ಥಾನಗಳನ್ನು ನಿರ್ದೇಶಿಸಿದ್ದಾನೆ. ಈ ಐದಲ್ಲದೆ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ ವೆಂದು ಮತ್ತೆ ಐದು ಉಪವಾಯುಗಳಿವೆ. ಇವುಗಳಿಗೆ ನಾಗಪಂಚಕವೆನ್ನುತ್ತಾರೆ.
ಮಾನವನು ಅನ್ನ ನೀರುಗಳಿಲ್ಲದೇ ಕೆಲವು ಕಾಲ ಬದುಕಬಹುದು. ಆದರೆ ಗಾಳಿಯಿಲ್ಲದೆ ಬದುಕಲಾರನು. ವಾಯುಗಳು ಜೀವಾತ್ಮನಿಗೆ ಬಹುಮುಖ್ಯವಾಗಿವೆ. ಈ ವಿಷಯವನ್ನು ಷಟ್‌ಸ್ಥಲ ಜ್ಞಾನಿ ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ವಿವರ ವಾಗಿ ತಿಳಿಪಡಿಸಿದ್ದಾರೆ. ಒಂದೊಂದೆ ವಾಯುವಿನ ಗುಣಧರ್ಮವನ್ನು ಪ್ರತ್ಯೇಕವಾಗಿ ವಿವೇಚಿಸಿದ್ದಾರೆ.
೧) ಪ್ರಾಣವಾಯು : ಇಂದ್ರ ನೀಲವರ್ಣ, ಹೃದಯಸ್ಥಾನದಲ್ಲಿರ್ದು, ಅಂಗುಷ್ಠ ತೊಡಗಿ ಘ್ರಾಣಾಗ್ರಪರಿಯಂತರ ಸಪ್ರಾಣಿಸಿಕೊಂಡು ಉಚ್ಛ್ವಾಸ ನಿಶ್ವಾಸನಂಗೈಸಿ ಅನ್ನಜೀರ್ಣಿಕರಣಮಂ ಮಾಡಿಸುತ್ತಿಹುದು.
೨) ಅಪಾನವಾಯು : ಹರಿತವರ್ಣ, ಗುದಸ್ಥಾನದಲ್ಲಿರ್ದು, ಮಲಮೂತ್ರಂಗಳ ವಿಸರ್ಜನವಂ ಮಾಡಿಸಿ ಅಧೋದ್ವಾರವಂ ಬಲಿದು ಅನ್ನರಸ ವ್ಯಾಪ್ತಿಯ ಮಾಡಿಸುತ್ತಿಹುದು.
೩) ವ್ಯಾನವಾಯು : ಗೋಕ್ಷೀರವರ್ಣ, ಸರ್ವಸಂಧಿಯಲ್ಲಿರ್ದು ನೀಡಿಕೊಂಡಿ ಹುದನು, ಮುದುಡಿಕೊಂಡಿಹುದನು ಅನುಮಾಡಿ ಅನ್ನಪಾನಮಂ ತುಂಬಿಸುತ್ತಿಹುದು.
೪) ಉದಾನವಾಯು : ಎಳೆಮಿಂಚಿನ ವರ್ಣ, ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸು ಕಾಣುವ, ಏಳಿಸುವ, ಛರ್ಧಿಸುವ (ವಮನ) ರೋದನಂಗಳ ಮಾಡಿಸಿ ಅನ್ನರಸ ಆಹಾರ ಸ್ಥಾಪನಂಗೈಸುತ್ತಿಹುದು.
೫) ಸಮಾನವಾಯು : ನೀಲವರ್ಣ, ನಾಭಿಸ್ಥಾನದಲ್ಲಿರ್ದು ಅಪಾದಮಸ್ತಕ
ಪರಿಯಂತರ ಸಪ್ರಾಣಸಿಕೊಂಡ ಅನ್ನರಸಮಂ ಎಲ್ಲ ರೋಮನಾಳಂಗಳಿಗೆ ಹಂಚಿಕ್ಕುತ್ತಿಹುದು ” ಇವು ಪ್ರಾಣಪಂಚಕದ ಕೆಲಸಗಳು. ಇನ್ನು ನಾಗಪಂಚಕದ ಕಾರ್ಯವನ್ನು ಸಂಕ್ಷಿಪ್ತದಲ್ಲಿ ನೋಡುವಾ
೬) ನಾಗವಾಯು : ಪೀತವರ್ಣ, ವಾಗಿಂದ್ರಿಯ (ಬಾಯಿ)ಕ್ಕೆ ಕಾರಣವಾಗಿ ಸುವಾಕ್ಯ ದುರ್ವಾಕ್ಯಗಳನ್ನು ನುಡಿಸುವದು.
೭) ಕೂರ್ಮವಾಯು : ಶ್ವೇತವರ್ಣ ಪಾಣೀಂದ್ರಿಯ (ಕೈ)ದಿಂದ ಆದಾನ- ಪ್ರದಾನಗಳನ್ನು ಮಾಡಿಸುತ್ತಿಹುದು.
೮) ಕೃಕರ ವಾಯು : ಅಂಜನವರ್ಣ ಪಾದೇಂದ್ರಿಯವು ಗಮನಾಗಮನಗಳನ್ನು ಹೊಂದುವದು.
೯) ದೇವದತ್ತ ವಾಯು : ಸ್ಪಟಿಕವರ್ಣ ಪಾಯ್ವಿಂದ್ರಿಯವು (ಗುಹ್ಯ) ಕುಳಿತಲ್ಲಿ ಮಲಗಿಸಿ, ಮಲಗಿದಲ್ಲಿ ಏಳಿಸಿ, ನಿಂದಿರಿಸಿ, ಚೇತರಿಸಿ, ಒರಲಿಸುತ್ತ ಸರ್ಜನ ವಿಸರ್ಜನ ಗಳನ್ನು ಮಾಡಿಸುವದು.
೧೦) ಧನಂಜಯ ವಾಯು : ನೀಲವರ್ಣ ಗುದೇಂದ್ರಿಯವು. ಆನಂದಾದಿ ವಿಷಯದ ಅನುಭವವನ್ನು ಹೊಂದುವದು. ಈ ವಾಯುವು ಕರ್ಣದಲ್ಲಿ ಸಮುದ್ರ ಘೋಷವನ್ನು ಘೋಷಿಸಿ ಮರಣಕಾಲಕ್ಕೆ ನಿರ್ಘೋಷವನ್ನು ಪಡೆಯುವದು. ಈ ಎಲ್ಲ ವಾಯುಗಳಲ್ಲಿ ಪ್ರಾಣವಾಯುವೇ ಶರೀರದ ಜೀವಾಳವಾಗಿದೆ. ಆದರೂ ಎಲ್ಲ ವಾಯುಗಳ ಸಂಚಲನವು ಕ್ರಮಬದ್ಧವಾಗಿದ್ದರೆ ಮಾತ್ರ ಶಾರೀರಿಕ ವ್ಯವಹಾರವು ಸುಗಮವೂ, ಸುಲಲಿತವೂ ಆಗುವದು. ಈ ಶರೀರದ ಸುಸ್ಥಿತಿಗೆ ದಶವಾಯುಗಳೂ ಅವಶ್ಯವೆಂದಂತಾಯಿತು. ಚನ್ನಬಸವಣ್ಣನವರು ವಿವರಿಸಿದ ದಶವಾಯುಗಳ ವಿಚಾರ ವನ್ನು ೮೪೪ ನೆಯ ವಚನದಿಂದಲೂ ಅರಿಯಬಹುದು.
ವಾಯುತತ್ತ್ವದ ಮನವು ಪ್ರಾಣವಾಯುವಿನ ಸಂಚಲನೆಯಿಂದ ಶರೀರದಲ್ಲಿ ಚಂಚಲತನವನ್ನು ಹೊಂದುತ್ತದೆ. ಅಷ್ಟೇ ಅಲ್ಲದೆ ಗಾಳಿಯು ಜಾಳಂದ್ರ ಗಿರಿಗಳ ಮೇಲೆ ದಾಳಿಮಾಡಿ ದೇಹವನ್ನು ದಣಿಸಿ ಆಳುವ ರೀತಿಯನ್ನು ಕೇಳಿದೆನೆಂದು ಕವಿಯು ಚಕಿತನಾಗಿ ಶ್ರೀಗುರುಕೃಪೆಯನ್ನು ಯಾಚಿಸಿದ್ದಾನೆ. ಈ ಗಾಳಿಯ ದಾಳಿಯು ಪ್ರತ್ಯಕ್ಷವಾಗಿಯೂ ಕಾಣಬರುತ್ತದೆ. ಇಲ್ಲಿ ಜಾಳಂದ್ರ ಗಿರಿಗಳೆಂದರೆ ಕೆಲವರು ಈಡಾ- ಪಿಂಗಳ ನಾಡಿಗಳೆಂತಲೂ, ಎರಡೂ ಕಣ್ಣುಗಳೆಂತಲೂ ಅರ್ಥೈಸುತ್ತಾರೆ. ಪ್ರಾಣವಾಯು ಸೂರ್ಯನಾಡಿಯಾದ ಪಿಂಗಳೆಯ (ಮೂಗಿನ ಬಲರಂಧ್ರದ) ಲ್ಲಿ ಹಾಗೂ ಚಂದ್ರನಾಡಿ ಯಾದ ಈಡೆಯ (ಎಡರಂಧ್ರದ) ಲ್ಲಿ ಸಂಚರಿಸುತ್ತ ಅಂಗುಷ್ಠದಿಂದ ನೇತ್ರದವರೆಗೆ ಹರಿದಾಡುತ್ತದೆ. ಮತ್ತು ಎಲ್ಲ ವಾಯುಗಳಿಗೆ ಚೇತನವನ್ನು ಕೊಡುತ್ತದೆ. ಈ ಗಾಳಿಯ ಹರಿದಾಡುವಿಕೆಯು ಸಕ್ರಮವಾಗಿದ್ದರೆ ದೇಹಕ್ಕೆ ತೊಂದರೆಯಾಗುವದಿಲ್ಲ. ಶರೀರದಲ್ಲಿ ಜಾಲದಂತೆ ಹಬ್ಬಿರುವ ನರಗಳಲ್ಲಿ ಮತ್ತು ಸಂಧಿ ಸ್ಥಾನಗಳಲ್ಲಿ ವಾಯುವಿಕಾರವಾದರೆ ಆಯಾಸವಾಗುವದು. ಅದಕ್ಕೋಸುಗ ಜಾಳಂದ್ರಗಿರಿಗಳೆಂದರೆ ನರಗಳ ಕೂಡುವಿಕೆ ಹಾಗೂ ಸಂಧಿಸ್ಥಾನಗಳೆಂದು ಭಾವಿಸಬಹುದು. ಈ ಜಾಳಂದ್ರಗಿರಿಗಳಲ್ಲಿ ದಾಳಿಮಾಡಿ ವಾಯು ತನ್ನ ಶಕ್ತಿಯನ್ನು ತೋರಿಸಿ ಶರೀರವನ್ನು ಆಳತಕ್ಕ ರೀತಿಯು ಕಂಡುಬರುತ್ತದೆ. ಕಾರಣ ವಾಯುವಿನ ಅಭಿಮಾನವನ್ನು ಕಳೆದುಕೊಂಡಾಗ ಶರೀರಕ್ಕೆ ಬಾಧಕವಾಗು ವದಿಲ್ಲ. ವಾಯುವಿಕಾರದ ರೀತಿಯನ್ನು ಅರಿಯದಿದ್ದರೆ ವಾಯುಮಯ ಮನಸ್ಸಿನ ಹರಿದಾಟವೂ ನಿಲ್ಲುವದಿಲ್ಲ. ಅದಕ್ಕಾಗಿ ಮನವನ್ನು ನಿಲ್ಲಿಸುವದಕ್ಕಾಗಿ ಪ್ರಾಣಾಯಾಮ ದಿಂದ ವಾಯು ಶುದ್ಧಿಯನ್ನು ಮಾಡುವರು. ಶಿವಪೂಜೆಯನ್ನು ಪ್ರಾರಂಭಿಸುತ್ತಿರಲು ರೇಚಕ ಪೂರಕ ಕುಂಭಕಗಳಿಂದ ವಾಯುವಿನ ಪರಿಶುದ್ಧತೆ ಹಾಗೂ ಚಲನೆಯನ್ನು ಸ್ಥಿರಗೊಳಿಸುವರು. ಇದರಿಂದ ಮನಸ್ಸಿನ ಸ್ಥಿರತೆಯುಂಟಾಗುವದು. ಈ ವಿಚಾರವನ್ನು ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಮಾಯಾಕೋಲಾಹಲ ಅಲ್ಲಮ ಪ್ರಭುದೇವರು (ಸಾಧಕರಿಗಾಗಿ) ಬಸವಣ್ಣನವರಿಗೆ ಬೋಧಿಸಿದ್ದಾರೆ (ಸಾಧಕಾಂಗ ಗತಿಯಲ್ಲಿ)
“ಮಾಯೆಯೆಂಬುದು ಮನವು ಮನವೇ
ವಾಯುವಾಗಿಹುದಾ ಮನಸ್ಸೇ
ವಾಯುರೂಪಾಗಿರುತಲಿಹುದಾ ವಾಯು ಹರಿದಾಡಿ |
ಕಾಯವನು ಕಂಗೆಡಿಸಿ ಭಕ್ತಿಯ
ಬಾಯ ಕಾಣಿಸಲೀಯದಂತಾ
ವಾಯುವನೆ ಗೆಲುವವನೆ ಭಕ್ತನು ಬಸವ ಕೇಳೆಂದ” || ೨೦ ||
“ಮನದ ಮುಂದಣ-ಬಯಕೆಯೇ ಮಾಯೆಯಾಗಿರುವದು. ಅಂಥಾ ಮಾಯಾಮಯ ಮನವು ವಾಯುಮಯವಾಗಿದೆ. ವಾಯುವು ಶರೀರದಲ್ಲಿ ಸಂಚರಿಸಿ ಭಕ್ತಿಯ ಬಟ್ಟೆಯನ್ನು ಕಂಗೆಡಿಸುತ್ತದೆ. ಆದ್ದರಿಂದ ಈ ವಾಯುವನ್ನು ಗೆಲ್ಲಬಲ್ಲವನೇ ಭಕ್ತನು’ ಎಂದು ಹೇಳಿ ವಾಯುವನ್ನು ನಿಲ್ಲಿಸುವ ಪರಿಯನ್ನು ಮುಂದಿನ ಮಾತಿನಲ್ಲಿ ತಿಳಿಸುತ್ತಾರೆ, ಪ್ರಭುಗಳು –
ಆಲಿ ನಿಂದೊಡೆ ಸುಳಿದು ಸೂಸುವ
ಗಾಳಿ ನಿಲುವುದು ಗಾಳಿ ನಿಲೆ ಮನ
ಮೇಲೆ ನಿಲುವುದು ಮನವು ನಿಂದೊಡೆ ಬಿಂದು ನಿಂದಿಹುದು |
ಲೀಲೆಯಿಂದಾ ಬಂದು ನಿಂದೊಡೆ
ಕಾಲ ಕರ್ಮವ ಗೆದ್ದು ಮಾಯೆಯ
ಹೇಳ ಹೆಸರಿಲ್ಲೆನಿಸಬಹುದೈ ಬಸವ ಕೇಳೆಂದ || ೨೨ ||
ಕಣ್ಣಿನ ರೆಪ್ಪೆಯ ಬಡಿದಾಟ ನಿಂತರೆ ಗಾಳಿನಿಲ್ಲುವದು. ಅಂದರೆ ಲಿಂಗದಲ್ಲಿ ಆನಿಮಿಷ ದೃಷ್ಟಿಯನ್ನು ನಿಲ್ಲಿಸಿ ದೃಷ್ಟಿಯೋಗವನ್ನು ಸಾಧಿಸಬೇಕು. ಆಗ ವಾಯುವಿನ ಸಂಚಾರ ಸ್ಥಿರಗೊಂಡು ಮನಸ್ಸು ನಿಲ್ಲುವದು. ಮನವು ನಿಶ್ಚಂಚಲವಾದರೆ ಲಿಂಗದಲ್ಲಿ ಬಿಂದುವನ್ನು ಕಾಣುತ್ತೇವೆ. ಬಿಂದು (ಪ್ರಕಾಶ)ವನ್ನು ನಿಲ್ಲಿಸುತ್ತಿರಲು ಕಾಲ-ಕರ್ಮ- ಮಾಯೆಗಳನ್ನು ಹೇಳ ಹೆಸರಿಲ್ಲದಂತೆ ಮಾಡಬಹುದು.. ಹೀಗೆ ವಾಯುವನ್ನು ಹಿಡಿತದಲ್ಲಿ ತಂದರೆ ಅದರ ದಾಳಿಯು ನಿಲ್ಲುವದು
ಪ್ರಾಣವಾಯುವನ್ನು ಶರೀರದಲ್ಲಿ ತೆಗೆದುಕೊಳ್ಳುವುದಕ್ಕೆ ಶ್ವಾಸವೆಂತಲೂ, ಹೊರಕ್ಕೆ ಬಿಡುವದಕ್ಕೆ ನಿಃಶ್ವಾಸವೆಂತಲೂ ಕರೆಯುವರು. ಈ ಶ್ವಾಸ-ವಿಶ್ವಾಸಗಳು ಒಂದು ನಿಮಿಷಕ್ಕೆ ೧೫ ಸಲ ಜರುಗುವವು. ಅಷ್ಟೇ ಸಲ ನಡೆಯಬೇಕು. ಅಂದರೆ ಅದು ಕ್ರಮಬದ್ಧವಾದುದು. ಅವು ಒಂದು ತಾಸಿಗೆ ೯೦೦ ಆಗುತ್ತವೆ. ೨೪ ತಾಸು (ಒಂದು ದಿನ)ಗಳಲ್ಲಿ ೨೧,೬೦೦ ಶ್ವಾಸ ನಿಃಶ್ವಾಸಗಳು ಉಂಟಾಗುತ್ತವೆಂದು ಶಿವಾನುಭವಿಗಳು ಹೇಳುತ್ತಾರೆ. ಈ ಸಂಖ್ಯೆಗೆ ಅನುಗುಣವಾಗಿ ಶ್ವಾಸ ನಿಶ್ವಾಸದಲ್ಲಿ ಪ್ರಣವ ಪಂಚಾಕ್ಷರಿ ಯನ್ನು ತುಂಬಬೇಕು. ವಾಯು ಪ್ರಣವನಾದದೊಡನೆ ಬೆರೆಯಬೇಕು. ಆಗ ಮನ ಘನವಾಗುವದು. ಇದನ್ನು ಶಿಕ್ಷಿಸಬಲ್ಲವನು ಗುರುವು
. ಓ ಮಹಾಗುರುವೆ ! ಎನ್ನ ಮನವನ್ನು ಶಿಕ್ಷಿಸಿ ಘನ-ಮನವಾಗುವಂತೆ ಮಾಡು. ಪ್ರಾಣವು ಪ್ರಣವ ನಾದದಲ್ಲಿ ಬೆರೆಯುವಂತೆ ಕೃಪೆಮಾಡು. ಇದರಿಂದ ವಾಯು ವಿಕಾರದ ಭಯಾನಕತೆ ದೂರವಾಗಿ ಕಾಯವು ಪ್ರಸಾದಕಾಯವಾಗುವದು. ಇಂಥ ಸದ್ಭಕ್ತನಿಗೆ ಮಾತ್ರ ವಾಯುವು ಏನನ್ನೂ ಮಾಡಲಾರದು.
ಬಯಲೊಳಗೆ ಬಯಲೊಗೆದು | ಬಯಲೊಳಗೆ ಸಂಚರಿಸಿ
ಬಯಲೊಳಗೆ ಬಯಲು-ಲಯವಾಗುತಿರೆ ಕಂಡು
ಭಯಗೊಂಡೆ ಗುರುವೆ ಕೃಪೆಯಾಗು | ೬೦ |
ಪಂಚ ಮಹಾಭೂತಗಳಲ್ಲಿ ನೆಲ-ಜಲ-ಅನಲ ಅನಿಲ ನಾಲ್ಕನ್ನು ಪ್ರತಿಪಾದಿಸಿ ಐದನೆಯ ಆಕಾಶದ ಇರುವನ್ನು ಬಿತ್ತರಿಸುತ್ತಾನೆ.
ಸಾಮಾನ್ಯವಾಗಿ ತೋರುವ ಈ ಮಹಾಬಯಲೊಳಗೆ ಒಂದು ಮನೆಯು ನಿರ್ಮಾಣವಾದರೆ ಅದಕ್ಕೆ ಮನೆಯ ಬಯಲೆನ್ನುವರು. ಅಂದರೆ ವಿಸ್ತಾರವಾದ ಬಯಲಿನಲ್ಲಿ ಮನೆಯಷ್ಟೇ ವಿಸ್ತಾರವಾದ ಸೀಮಿತವಾದ ಅವಕಾಶ ಕಂಡು ಬರುವದು. ಅರ್ಥಾತ್ ಹಿರಿದಾದುದು ಕಿರಿದಾಗುವದು. ಇಂಥ ಮನೆಯ ಒಳಬಯಲು ಹಾಗೂ ಹೊರ ಬಯಲುಗಳಲ್ಲಿ ಜೀವಾತ್ಮನು ಸಂಚರಿಸುತ್ತಾನೆ. ಕಾಲಾಂತರದಲ್ಲಿ ಆ ಮನೆಯು ನಾದುರಸ್ಥವಾಗಿ ಬಿದ್ದರೆ ಅದರ ಬಯಲು ಪುನಃ ಮೊದಲಿನ ಮಹಾ ಬಯಲಿನಲ್ಲಿ ಸೇರುತ್ತದೆ .ಜೀವಾತ್ಮನು ನಾಶವಾಗುವನು. ಆಗ ಎಲ್ಲವು ಮಹಾ ಬಯಲೇ ಆಗುವದು .ಇದು ಜಗದ ವಿಚಿತ್ರ ಗತಿಯಾಗಿದೆ.
ಅಧ್ಯಾತ್ಮ ವಿಚಾರದಲ್ಲಿ ಬಯಲೆಂದರೆ ಮಹಾ ಚೈತನ್ಯಮಯವಾದ ಪರಾತ್ಪರ ವಸ್ತು.
“ಯತೋ ವಾ ಇಮಾನಿ ಭೂತಾನಿ ಜಾಯಂತೇ
ಯೇನ ಜಾತಾನಿ ಜೀವಂತಿ ಯತ್ ಪ್ರಯಂತ್ಯಭಿಸಂವಿಶಂತಿ |
ತೈತ್ತರೀಯೋಪನಿಷತ್ತು || ೩-೧
ಎಂಬುವ ಶೃತಿಯಂತೆ ಆ ಪರವಸ್ತುವಿನಿಂದ ಹುಟ್ಟಿದ ಭೂತಗಳು (ಪ್ರಾಣಿಗಳು) ಬದುಕುತ್ತವೆ. ಕೊನೆಗೊಮ್ಮೆ ಸಾಯುತ್ತವೆ. ಬ್ರಹ್ಮಾಂಡ ಬಯಲು ರೂಪಿನ ಶಿವನಿಂದ ಪಿಂಡಾಂಡ ಬಯಲನ್ನು ಹೊಂದಿದ ಜೀವನು ಸಂಜನಿಸಿ ನವದ್ವಾರಮಯವಾದ ದೇಹವೆಂಬ ಬಯಲಿನಲ್ಲಿ ಹಾಗೂ ಹೊರ ಬಯಲಿನಲ್ಲಿ ಸಂಚರಿಸುತ್ತಾನೆ. ಕೊನೆಗೆ ಶರೀರವು ನಾಶವಾಗಲು ಅದರ ನವದ್ವಾರಗಳೂ ಮಹಾ ಬಯಲಿನಲ್ಲಿ ಕೂಡಿ ಜೀವಾತ್ಮನೂ ಕಾಣದಂತಾಗುವನು. ಈ ಎಲ್ಲದರ ವೈಚಿತ್ರ್ಯತೆಯನ್ನು ಕಾಣುತ್ತಿರಲು ಭಯ ಬರುವದು ಸಹಜ. ಜೀವನದ ಆಶಾಪಾಶಗಳಲ್ಲಿ ಬಿದ್ದ ಜೀವನಿಗೆ ಸಾಯುವದೆಂದರೆ ಬಲುಕಷ್ಟ. ಈ ಸಾವನ್ನು ಗೆಲ್ಲಬೇಕಾದರೆ ಬಯಲಾತ್ಮನಾದ ಶಿವನನ್ನು ಅರಿಯಲೇಬೇಕು. ಶಿವನೇ ತಾನಾಗಿ ಶಿವನಲ್ಲಿ ಬೆರೆತರೆ ಭಯ ದುಃಖಗಳು ಹುಟ್ಟಲಾರವು. ಸಕಲ ಶಾರೀರಿಕ ಉಪಾಧಿಗಳು ಬಿಟ್ಟು ಹೋಗುತ್ತವೆ.
ಶರಣರ ಸಾಧನೆಯಾದರೂ ಬಯಲುಗಳಿಕೆಯಲ್ಲಿಯೇ ಪರಿಸಮಾಪ್ತಿಯಾಗುತ್ತದೆ. ಶೂನ್ಯ ಸಂಪಾದನೆಯು ಶರಣತತ್ತ್ವದ ಮಹಾಮಣಿಹ. ಅದಕ್ಕಾಗಿ ಎಲ್ಲ ಶಿವಶರಣರು ಬಯಲು ಗಳಿಕೆಯ ಪರಿಯನ್ನು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಬಯಲು ಗಳಿಕೆಯೇ ಐಕ್ಯಸ್ಥಿತಿಯೆನಿಸಿರುವದು. ಈ ಬಯಲುಗಳಿಕೆಯ ಸುಲಭ ಮಾರ್ಗವನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯು –
“ವೇದಶಾಸ್ತ್ರಾಗಮಂಗಳೆಂಬ ಕೊಟ್ಟಣವ ಕುಟ್ಟುತ್ತ
ನುಚ್ಚು ತೌಡು ಕಾಣಿಭೋ ! ಇವ ಕುಟ್ಟಲೇಕೋ ?
ಅತ್ತಲಿತ್ತ ಹರಿವ ಮನದ ಶಿರವನರಿಯಬಲ್ಲಡೆ
ಬಟ್ಟಬಯಲು ಕಾಣಾ ಚೆನ್ನಮಲ್ಲಿಕಾರ್ಜುನಾ !”
ಎಂದು ಸೂತ್ರರೂಪವಾಗಿ ಮಹದರ್ಥವನ್ನು ತಿಳಿಸಿದ್ದಾಳೆ. ವೇದಶಾಸ್ತ್ರ ಆಗಮಂಗಳವಾದ-ವಿವಾದ-ಜಂಜಾಟದಿಂದ ಬಯಲಾತ್ಮನನ್ನು ಕಾಣಲು ಸಾಧ್ಯವಿಲ್ಲ. ಅತ್ತಲಿತ್ತ ಹರಿವ ಚಂಚಲ ಮನಸ್ಸಿನ ಜುಟ್ಟವನ್ನು ಹಿಡಿದರೆ ಬಟ್ಟ ಬಯಲು ದೊರಕೊಳ್ಳುವದು. ಪ್ರಭುದೇವರೂ ಸಹ –
“ಬಯಲು ಬಯಲನೆ ಬಿತ್ತಿ,
ಬಯಲು ಬಯಲನೆ ಬೆಳೆದು ;
ಬಯಲು ಬಯಲಾಯಿತ್ತಯ್ಯಾ ;
ಬಯಲು ಜೀವನ-ಬಯಲಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು.
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ !’
ಬಯಲಿನಲ್ಲಿ ಬಯಲನ್ನು ಬಿತ್ತಿ, ಅದನ್ನೇ ಬೆಳೆದು ಅದರಲ್ಲಿಯೇ ಜೀವನ ಸಾಗಿಸಿ ಕೊನೆಗೊಮ್ಮೆಆ ಬಯಲಿನಲ್ಲಿ ಬೆರೆಯಬೇಕಾದರೆ ಗುಹೇಶ್ವರನ ಪೂಜೆ ಅವಶ್ಯವೆಂದು ನಾನೂ ಆ ರೀತಿ ಆತನನ್ನು ಪೂಜಿಸಿ ಬಯಲಾಗಿದ್ದೇನೆಂದು ತಿಳಿಸಿದ್ದಾರೆ. ಈ ಬಯಲ ತತ್ತ್ವವನ್ನರಿಯಬೇಕಾದರೆ ಗುರುಕರುಣೆ ಅತ್ಯವಶ್ಯ. ಗುರುಕೃಪೆಯಿಂದ ಇಷ್ಟಲಿಂಗವನ್ನು ಪಡೆದು ಲಿಂಗಪ್ರಾಣಿಯಾಗಿ ಸರ್ವಾಂಗ-ಲಿಂಗಮಯನಾದವನು ಬಯಲಾಗುವನು. ಇಥವರಿಗೆ ಭಯವೆಂಬುದೇ ಇಲ್ಲ. ಈ ವಿಷಯವನ್ನು ಮಹಾ ಶರಣ ಹಡಪದಪ್ಪಣ್ಣಗಳು-
ಬಯಲಿಂದಲೇ ಹುಟ್ಟಿ ಬಯಲಿಂದಲೇ ಬೆಳೆದು,
ಬಯಲಾಮೃತವನೆ ಉಂಡು ಬಯಲನೆ ಉಟ್ಟು
ಬಯಲನೆ ತೊಟ್ಟು ಬಯಲು ಬಯಲೊಳಗೆ ಬೆರೆದ ಭೇದವ
ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು
ಭವವಿರಹಿತ ಶರಣರ ನಿಲವ ?
ಬಸವಪ್ರಿಯ ಕೂಡಲಚೆನ್ನಬಸವಣ್ಣ (೧೧೭ ವ.ಸಾ.ಸಂ.)
ಬಯಲಾತ್ಮರಾದ ಭವಭಯವಿರಹಿತ ಶರಣರ ನಿಲುವನ್ನು ಭವಭಾರಿಗಳು ಎಂದೂ ತಿಳಿಯಲಾರರೆಂದು ತಿಳಿಸಿದ್ದಾರೆ.
ಜಾನಪದ ಕವಿ ಹಾಗೂ ಸಂತ ಶಿಶುನಾಳ ಶರೀಫ ಸಾಹೇಬರು ಸಹ ಬಯಲು ತತ್ತ್ವವನ್ನು ಕುರಿತು ಸುಂದರವಾಗಿ ಹಾಡಿದ್ದಾರೆ.
ಬಯಲೊಳು ಬಯಲು ಪುಟ್ಟಿಸಿದಾ ನಿ-
ರ್ಭಯಲಿನೊಳಗೆ ತನ್ನ ಆಲಯವ ಕಟ್ಟಿಸಿದ !
ಭವನಿವಾರಣ ಭಕ್ತರಕ್ಷಕ ಹೌದೆನುತ ನಿಶ್ಚಯಿಸಿ ಮನದೊಳು |
ತವಕ ತೂರ್ಯದಿಂದ ಲಕ್ಷಿಸಿ ಭವ ಸಮುದ್ರವ ದಾಂಟು, ದಾಂಟುತ |
ನಡೆಯೋ ಖಾದರಲಿಂಗ ನೆಲಸಿರ್ಪ ಗುಡಿಗೆ ನಡಿಯೋ ದೇವರ ಚಾಕರಿಗೆ II
ಖಾದರಲಿಂಗನೂ ಬಯಲಾತ್ಮನೇ, ಭವಸಮುದ್ರವನ್ನು ದಾಟಲು ಬಯಲಾಗಿ ಬಯಲಾತ್ಮನನ್ನು ಪೂಜಿಸಬೇಕು.
ಅಭಯಸ್ವರೂಪಿಯಾದ ಸದ್ಗುರುವೆ ! ಈ ಭವದ ಭಯವನ್ನು ನೀಗಿಸಲು ಶರಣರ ಪರಿಯನ್ನು ತಿಳಿಸು. ಶೂನ್ಯ ಸಂಪಾದನೆಯನ್ನು ಮಾಡುವ ಸುಜ್ಞಾನವನ್ನಿತ್ತು ಕರುಣಿಸಿ ಕಾಪಾಡು. ಅಂದರೆ ಬಯಲುಗಳಿಕೆಯನ್ನು ಸಾಧಿಸಬಲ್ಲೆನು.