ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಧಾರವಾಹಿ: ಭಾಗ-34 :

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

ಪ್ರಾಜ್ಞ ಗುರುವರ ದ್ವಿದಳ | ದಾಜ್ಞಾ ಚಕ್ರದೊಳು ಸ-

ರ್ವಜ್ಞ ಓಂಕಾರ-ಸುಜ್ಞ ಮಹಲಿಂಗವನು

ಸಂಜ್ಞೆಯಿಂದೊರೆದೆ ಕೃಪೆಯಾಗು   ||೧೪೪||

 ಈ ನವಚಕ್ರಗಳಲ್ಲಿ ನವಲಿಂಗಗಳನ್ನು ಸಂಜ್ಞೆಯಿಂದ ತೋರಿಸಿಕೊಡುವ ಗುರುನಾಥನು ಅತ್ಯಂತ ಪ್ರಾಜ್ಞನಾಗಿದ್ದಾನೆ. ಅವನಿಗೆ ಸರಿಸಮನಾದ ಪಂಡಿತನಿಲ್ಲ ವಿಜ್ಞಾನಿಯಿಲ್ಲ.

ವಿಶುದ್ಧಿಚಕ್ರದಿಂದ ಊರ್ಧ್ವಪಯಣ ಮಾಡುತ್ತಿರಲು ಆ ಜ್ಞಾನಚಕ್ರದ ಸಂದರ್ಶನವಾಗುವದು. ಇಲ್ಲಿ ‘ಹಂ ಕ್ಷಂ’ ಎಂಬ ಬೀಜಾಕ್ಷರಗಳಿಂದ ಪರಿಪೂರ್ಣವಾಗಿ ಎರಡು ದಳಗಳಿವೆ. ಈ ಆಜ್ಞಾಚಕ್ರಕ್ಕೆ ಆಧಾರವಾದುದು ಭ್ರೂಮಧ್ಯ ಭಾಗವು. ಇಲ್ಲಿ ಸರ್ವಜ್ಞ ಸ್ವರೂಪದ ಓಂಕಾರ ಪ್ರಣವ ಮಂತ್ರಮೂರ್ತಿಯಾದ ಮಹಾಲಿಂಗವು ಮನೆಮಾಡಿದೆ. ಈ ಮಹಾಲಿಂಗವು ಇರುಳು ಬಣ್ಣದ ಸದ್ಭಾವಪದ್ಮದಲ್ಲಿ ಜ್ಯೋತಿರಾಕೃತಿ ಯುಳ್ಳುದಾಗಿದೆ. ಮಹಾಲಿಂಗವು ಯಾವಾಗಲೂ ಓಂಕಾರ ಪ್ರಣವದಲ್ಲಿಯೇ ಮಗ್ನವಾಗಿದೆ. ಅಂತೆಯೇ ‘ಮಗ್ನ’ಪದ ಪ್ರಯೋಗವೂ ಸಮಂಜಸವಾಗುವದು. ಅಲ್ಲದೆ ಓಂಕಾರವು ಸರ್ವಜ್ಞ ರೂಪೆನಿಸುವದು. ಯಾಕಂದರೆ ಓಂಕಾರದಿಂದಲೇ ಸಕಲವೂ ವ್ಯಕ್ತಗೊಳ್ಳುವದು. ಇಂಥ ಪ್ರಣವ ರೂಪವೇ ಮಹಾಲಿಂಗ ಈ ಮಹಾಲಿಂಗಕ್ಕೆ ನೆಲೆಯಾದ ಆಜ್ಞಾಚಕ್ರದ ವಿವರವನ್ನು ವಿಶೇಷವಾಗಿ ೮೬ನೆಯ ತ್ರಿಪದಿಯಲ್ಲಿ ವಿವೇಚಿಸಲಾಗಿದೆ. ಆಜ್ಞಾಚಕ್ರಕ್ಕೆ ಆಜ್ಞೇಯ ಚಕ್ರವೆಂತಲೂ ಕರೆಯುವರು

ಮಹಾಲಿಂಗ : ಈ ಲಿಂಗಕ್ಕೆ ಆಜ್ಞಾಚಕ್ರವೇ ನೆಲೆ; ವೇಧಾರೂಪವೆ ಕಲೆ; ಹೃದಯವೇ ಮುಖ, ಜ್ಯೋತಿರಾಕಾರ, ಅಖಂಡರೂಪು, ದ್ವಿದಳದ ಸದ್ಭಾವ ಪದ್ಮದಲ್ಲಿರುತ್ತದೆ, ಮನಸೋ ಮನಃ?’ ಇದು ಮನಕ್ಕೆ ಮನವಾಗಿದೆ’ (ಪುಟ ೭೫) ಎಂದು ಮಹಾಲಿಂಗದ ವಿವರವು ”ನವಲಿಂಗ ಸಾಹಿತ್ಯ”ದಲ್ಲಿ ವಿವರಿಸಲ್ಪಟ್ಟಿದೆ.

ಸಾವಿರದ ದಳದಬ್ಜ| ವಾಗ್ವರನ ರಂಧ್ರದೊಳು

ಅ ಉ ಮಾಕ್ಷರದಾ-ಜೀವ ನಿಷ್ಕಳ ಲಿಂಗ*

ತವೆ ತೋರ್ದ ಗುರುವೆ ಕೃಪೆಯಾಗು  ||೧೪೫||

ಷಟ್‌ಚಕ್ರಗಳನ್ನು ಪರಿಕ್ರಮಿಸಿದ ಮೇಲೆ ಕಾಣುವದು ಬ್ರಹ್ಮರಂಧ್ರ, ಇದಕ್ಕೆ ವಾಗ್ವರನರಂಧ್ರ ಅಥವಾ  ಅಜರಂಧ್ರವೆಂತಲೂ ಹೆಸರು.  ವಾಕ್ಕೆಂದರೆ- ವಾಣೀ, ಸರಸ್ವತಿ, ವಿದ್ಯಾಧಿದೇವತೆ, ಜ್ಞಾನದೇವತೆಯ ವರನಾಗಬಲ್ಲವನೇ (ಜ್ಞಾನಿಯ) – ಬ್ರಹ್ಮರಂಧ್ರವನ್ನು ಹತ್ತಬಹುದು ಮತ್ತು ಅಜನೆಂದರೆ ಸಾವಿಲ್ಲದವನು, ಆರ್ಧಾತ್ ಸಾವನ್ನು ಮೀರಿ ಬ್ರಹ್ಮರೂಪಿಯೂ ಮಹಾಜ್ಞಾನಿಯಾದ ಮಹಾಜ್ಞಾನಿಯು ಬ್ರಹ್ಮ ರಂಧ್ರದ ಮಹತ್ವವನ್ನು ಅರಿತು ಆ ಮಹಾಚಕ್ರವನ್ನು ಪ್ರವೇಶಿಸಬಹುದೆಂತಲೂ ಅರ್ಥೈಸಬಹುದು. ಇದೇ ಸಾರ್ಥಕ ಅಥವಾ ಅನ್ವರ್ಥಕವಾದ ವ್ಯಾಖ್ಯೆಯನ್ನ ಬಹುದು.

ಶಿವಕವಿಯೂ ಸಾರ್ಥಕವಾದ ರೀತಿಯಲ್ಲಿಯೇ ಪದಪ್ರಯೋಗಮಾಡಿದ್ದಾನೆ. ‘ಸಾವಿರದ ದಳದಬ್ಜ’ʼ ಸಹ್ರದಳಗಳಿಂದ ಕೂಡಿದ್ದು ಈ ಕಮಲವನ್ನು ಕಂಡ ಮಹಾಯೋಗಿಗೆ ಸಾವಿಲ್ಲವೆಂತಲೂ ಹೇಳಬಹುದು.  ಬ್ರಹ್ಮರಂಧ್ರದ ವ್ಯಾಖ್ಯಾನವನ್ನು ೮೫ನೆಯ ತ್ರಿಪದಿಯಲ್ಲಿಯೂ ನೋಡಬಹುದು.

ಈ ಸಹಸ್ರಾರ ದಳಪದ್ಮದಲ್ಲಿ ಮಂಡಿಸಿದ್ದುದು ಅ, ಉ, ಮ, ಈ ಮೂರು ಬೀಜಾಕ್ಷರ ಮಂತ್ರ ಮೂರ್ತಿಯಾದ ನಿಷ್ಕಳಲಿಂಗವು.  ಮಹಾಲಿಂಗದ ಓಂಕಾರದ ಮೂಲರೂಪವೇ ಅ.ಉ.ಮ. ಗಳು. ಇವುಗಳ ಅರ್ಥ ಅಸದಳವಾಗಿದೆ. ಅ ಕಾರವು ವ್ಯಾಪ್ತಿಯನ್ನು ಉ ಕಾರವು ಔನ್ನತ್ಯವನ್ನು ಮ ಕಾರವು ಮಾನವನ್ನು ಸೂಚಿಸುತ್ತದೆ. ಓಂಕಾರವು ಜಗದ್ವ್ಯಾಪ್ತಿ  ಔನ್ನತ್ಯ ಹಾಗೂ ಮಾನವನ್ನು ಹೊಂದಿದೆ. ವ್ಯಾಪಕತ್ವ, ಔನ್ನತ್ಯ ಮಾನಗಳೇ ಓಂಕಾರದ ಸ್ವರೂಪುಗಳು.  ಬ್ರಹ್ಮರಂಧ್ರದ ನಿಷ್ಕಳಬ್ರಹ್ಮವೇ ಸದ್ಗುರುವಿನ ಸಂಸ್ಕಾರದಿಂದ  ನಿಷ್ಕಳಲಿಂಗವಾಗಿ ಪರಿಣಮಿಸುವದು. ಈ ಲಿಂಗವು ಜ್ಯೋತಿವರ್ಣವುಳ್ಳುದಾಗಿ ನಿರಾವರಣದಿಂದ ಶೋಭಿಸುವುದು ವಾಗ್ವರನ ರಂಧ್ರವು ಮಸ್ತಕದ ಮಧ್ಯಭಾಗವನ್ನು ಆವರಿಸಿದೆ. ಸಾವಿರದಲದ ಕಲ್ಪನೆಯನ್ನು ಇಂದಿನ ಶಾರೀರಿಕ ವಿಜ್ಞಾನಿಗಳು ಒಪ್ಪಿದ್ದಾರೆ. ಯಾಕಂದರೆ ತಲೆಬುರುಡೆಯಲ್ಲಿ ಕಡಗೋಲಿನಂತೆ ಅಸಂಖ್ಯ ನಿರಿಗೆಗಳಿಂದ ಕೂಡಿದ ಈ ಪದ್ಮವನ್ನು (ಗ್ರಂಥಿಯನ್ನು) ಕಾಣುತ್ತಾರೆ. ನಿಷ್ಕಳಲಿಂಗಕ್ಕೆ ನಿಃಕಲ ಲಿಂಗವೆಂತಲೂ ಹೆಸರು. ಈ ಲಿಂಗವು ನಾದಬಿಂದು ಕಲಾತೀತವಾಗಿರುವದು.

ಇಂಥ ಸಹಸ್ರಾರದಲ್ಲಿ ನಿಷ್ಕಲಲಿಂಗವನ್ನು ತವತೋರಬಲ್ಲ ಗುರುವರನ ಆಧ್ಯಾತ್ಮಿಕ ವಿಜ್ಞಾನ ಅವರ್ಣನೀಯವಾವುದು. ಇವನ ಋಣ ತೀರಿಸುವದು ಸುಲಭವಲ್ಲ. ಗುರೂಪದೇಶದಂತೆ  ಅರಿತಾಚರಿಸುವದೇ ಸದ್ಗುರುವಿಗೆ ಸಂದ ಮಹಾಗೌರವ.

Related Posts