ಜ.ಚ.ನಿ
ಬಹುದಿನಗಳಿಂದ ದಕ್ಷಿಣಭಾರತದಲ್ಲಿ ವೀರಶೈವ ಸಮಾಜವು ತನ್ನದೇ ಆದ ಒಂದು ವೈಶಿಷ್ಟ್ಯದಿಂದ ವೈಭವದಿಂದ ಬೆಳೆದು ಬಂದಿತ್ತು ; ಬೆಳಗಿ ನಿಂತಿತ್ತು . ಅದರಲ್ಲಿಯು ಕನ್ನಡ ನಾಡಿನಲ್ಲಿ ಅದರ ವೈಭವ ವೈಶಿಷ್ಟ್ಯಗಳಿಗೆ ಪಾರವೆ ಇರಲಿಲ್ಲ. ತಮಿಳುನಾಡಿನಿಂದ ಸೆಲೆಯೊಡೆದು ಬಂದಿದ್ದರೂ, ಕನ್ನಡ ನಾಡೆ ಅದರ ತಾಯ್ನಾಡು, ಕನ್ನಡ ನುಡಿಯೆ ಅದರ ತಾಯ್ನುಡಿ ಯಾವ ಕೊರತೆಯಿರಲಿಲ್ಲ. ಯಾವುದರಲ್ಲಿಯೂ ಕಮ್ಮಿಯಾಗಿರಲಿಲ್ಲ.
ಅಂತಹ ಸಮಾಜವು ನೂರಾರು ವರುಷಗಳ ಹಿಂದೆ ಎಲ್ಲ ಬಗೆಯಿಂದಲು ಕಳೆಗುಂದಿತ್ತು; ಕೃಷ್ಣಪಕ್ಷದಲ್ಲಿ ಕಾಲಿಟ್ಟಿತ್ತು. ಸುಮಾರು ಐವತ್ತುಲಕ್ಷ ಜನಸಂಖ್ಯೆಯುಳ್ಳ ಸಮಾಜಕ್ಕೆ ಯಾವ ಸ್ವತಂತ್ರ ಅಸ್ತಿತ್ವವಿರಲಿಲ್ಲ. ತನ್ನದೇ ಆಗಿದ್ದ ಸ್ವತಂತ್ರ ವೈಭವವನ್ನು ಸಹ ಕಳೆದುಕೊಂಡು ಅತಂತ್ರವಾಗಿತ್ತು: ಪರತಂತ್ರವಾಗಿತ್ತು.
ತನ್ನಲ್ಲಿರುವ ಪರಿಶುದ್ಧವಾದ ಪರಾಕಾಷ್ಠವಾದ ಶಿವಾನುಭವ ತತ್ವವನ್ನು ತಾನೇ ಮರೆತು ಕುಳಿತಿತ್ತು; ಮತ್ತೊಂದು ತೋರದ ತತ್ವಕ್ಕೆ ತಲೆಬಾಗಿತ್ತು. ಉತ್ಸಾಹಕಾರಕವು ಉಲ್ಲಾಸಜನಕವು ಆದ ತನ್ನ ಅಪಾರ ಸಾಹಿತ್ಯವನ್ನು ತಾನೇ ಕಣ್ಣೆತ್ತಿ ನೋಡದೆ, ಕಾಸಿತ್ತು ಪ್ರಚುರಿಸದೆ ಪವಡಿಸಿತ್ತು; ಬೇರೊಂದು ಸತ್ವವಿಲ್ಲದ ಸಾಹಿತ್ಯಕ್ಕೆ ಬಾಯ್ನೀರು ಬಿಡುತ್ತಿತ್ತು. ಉತ್ಕ್ರಾಂತಿಯುತವು ಉಜ್ವಲಕಾಂತಿ ಸಹಿತವು ಆದ ಸಂಸ್ಕೃತಿಯು ತನಗಿದ್ದರು ತಾನರಿಯದೆ ತೆಗೆದು ತೋರದೆ ತೇಜೋಹೀನವಾಗಿತ್ತು; ತರಗಲಾಗಿತ್ತು.
ಸಾಲದ್ದಕ್ಕೆ ಇಪ್ಪತ್ತನೆಯ ಶತಮಾನದ ಸುಧಾರಣೆಯನ್ನು ಸಮಾಜವು ಬಳಸಿಕೊಂಡಿರಲಿಲ್ಲ. ಪಾಶ್ಚಿಮಾತ್ಯ ವಿದ್ಯೆಯ ಗಂಧವನ್ನು ಆಘ್ರಾಣಿಸಿರಲಿಲ್ಲ. ವೈಜ್ಞಾನಿಕ ಸಹಾಯ ಸೌಕರ್ಯಗಳನ್ನು ಪಡೆಯಲು ಸಿದ್ಧವಾಗಿರಲಿಲ್ಲ. ಹಿಂದಿನ ಹಳೆಯ ಜಾಡಿನಲ್ಲಿಯೆ ಕುಂಟುತ್ತ ಕೂರುತ್ತ ನಡೆದಿತ್ತು. ಅನಾಗರಿಕತೆಯಿಂದ ಕುರುಡಾಗಿತ್ತು. ಅನೈಕ್ಯದ ಮುರುಕು ಕೋಲನ್ನೆ ಕೈಯಾಧಾರವನ್ನಾಗಿ ಮಾಡಿಕೊಂಡಿತ್ತು.
ಈ ದುರ್ಗತಿಗೀಡಾದ ಸಮಾಜವನ್ನು ಸುಧಾರಿಸಲು ಯಾವ ಮಹಾಪುರುಷನು ಮುಂದು ಬಂದಿರಲಿಲ್ಲ; ಮನಸ್ಸು ಮಾಡಿರಲಿಲ್ಲ. ಆಗ ಕಾರಣಿಕನಾದ ಕುಮಾರ ಯೋಗಿಯ ಕಾಂತಿಯುತವಾದ ಕಣ್ಣು ಇತ್ತ ಹೊರಳಿತು. ಮುಕುರದಂತಿದ್ದ ಮನಸ್ಸು ಇದನ್ನು ಗ್ರಹಿಸಿತು; ಮುಂದಾಲೋಚನೆ ಮಾಡಿತು.
ಇದರಿಂದಾಗಿ ತಮ್ಮ ಸುಖಸೌಕರ್ಯಗಳನ್ನು ಸ್ವಸ್ತಿ ಸಂತೋಷಗಳನ್ನು ಆಶಿಸಿದೆ ಸಮಾಜದ ಸರ್ವೋನ್ನತಿಗಾಗಿ ಸಾಹಸಪಡುವ ಹೆಚ್ಚಿನ ಕೆಲಸ ಕುಮಾರೇಶ್ವರ ಕೊರಳಿಗೆ ತಗಲುಬಿತ್ತು. ಅದರಂತೆ ಕರುಳು ಕೊರೆಯಹತ್ತಿತು. ಹೃದಯ ಮಿಡಿಯಹತ್ತಿತ್ತು.
ಇಡೀ ಸಮಾಜವೆ ಹೀಗೆ ಅಜ್ಞಾನಾಂಧಕಾರದಲ್ಲಿರುವಾಗ ಅನೈಕ್ಯರ ಸಮಾಜವ ಕಾಡುಸ್ಥಿತಿಯಲ್ಲಿರುವಾಗ ಇದೊಂದು ಪಾಠಶಾಲೆಯಿಂದ ಅದಕ್ಕೆ ಏನಾಗಬೇಕು? ಹಿರಿಮನೆಯ ಕತ್ತಲೆಯನ್ನೆಲ್ಲ ಒಂದೇ ಒಂದು ಮಿಣುಕುವ ಸೊಡರು ಹೇಗೆ ಕಳೆಯಬಲ್ಲುದು ? ಎಂದು ಮುಂತಾಗಿ ಯೋಚಿಸಿ ಇದಕ್ಕಿಂತಲು ಮಿಗಿಲಾದ ಕಾರ್ಯವನ್ನು ಕೈಕೊಳ್ಳಬೇಕು. ಸಮಾಜದ ಪ್ರತಿಯೊಂದು ವ್ಯಕ್ತಿಯು ಸುಧಾರಣೆಯನ್ನು ಹೊಂದಬೇಕು. ಸಾಂಪತ್ತಿಕ ಶೈಕ್ಷಣಿಕ ನೈತಿಕ ಮೊದಲಾದ ಸಕಲ ಕಲೆಗಳ ಊರ್ಜಿತಸ್ಥಿತಿಗೆ ಬರಬೇಕು ಎಂಬ ಉದಾತ್ತವಾದ ಉದಾರವಾದ ಯೋಚನೆಯನ್ನು ಮಾಡಿ ಅದಕ್ಕಾಗಿ ಅಲ್ಲಲ್ಲಿ ಸಂಚರಿಸುತ್ತ ಬೋಧಿಸುತ್ತ ಜನರನ್ನು ಹುರಿದುಂಬಿಸುತ್ತ ಒಮ್ಮೆ ಶ್ರೀಗಳವರು ಧಾರವಾಡಕ್ಕೆ ಬಂದರು. ಮಹಾಸಭೆಯ ಆಲೋಚನೆಯನ್ನು ಪ್ರಸ್ತಾಪಿಸಿದರು. ಈ ವಿಷಯದಲ್ಲಿ ಶ್ರೀ ಶಿರಸ್ತೆದಾರ್ ಆದ ಕೊಂಗವಾಡದ ಚನ್ನಪ್ಪಗೌಡರು, ಶ್ರೀಯುತ ಕಿತ್ತೂರು ರೇವಣಸಿದ್ದಪ್ಪನವರು, ಶ್ರೀ ಮರೆವಾಡದ ಸಿದ್ದಲಿಂಗಯ್ಯನವರು ಮುಂತಾದವರು ಸ್ವಾಮಿಗಳವರೊಡನೆ ಸಹಕರಿಸಿ ಕೆಲಸ ಮಾಡತೊಡಗಿದರು. ಕ್ರಿ.ಶ. ೧೯೦೩ರಲ್ಲಿ ಇಡೀ ಒಂದು ವರುಷ ಮಹಾಸಭೆಯ ಸ್ಥಾಪನೆಯ ವಿಷಯವಾಗಿ ಸ್ವಾಮಿಗಳವರು ಕೃಷಿ ಮಾಡಿದರು. ಅನೇಕ ಪ್ರಮುಖರೊಡಗೂಡಿದ ಒಂದು ಸಮಾಲೋಚನೆಯ ಸಭೆಯನ್ನು ಕೂಡಿಸಿದರು.
ಇದೆಲ್ಲದರ ಫಲವಾಗಿ ಕ್ರಿ.ಶ. ೧೯೦೪ ಮೇ ತಿಂಗಳಲ್ಲಿ ಕೈ. ಶ್ರೀಮಂತ ಲಿಂಗಪ್ಪ ಜಾಯಪ್ಪ ಸರ್ ದೇಸಾಯಿ ಶಿರಸಂಗಿ ಇವರ ಅಧ್ಯಕ್ಷತೆಯಲ್ಲಿ ಶ್ರೀಮದ್ವೀರಶೈವ ಮಹಾಸಭೆಯನ್ನು ಸಂಸ್ಥಾಪಿಸಿದರು. ಆಗಳೆ ತಮ್ಮ ದೀರ್ಘವಾದ ಸಾಹಸದಿಂದ ಪ್ರೇರಣೆಯಿಂದ ಒಂದು ಲಕ್ಷದ ವರೆವಿಗೂ ಹಣ ಶೇಖರಿಸಿ ಲಿಂಗಾಯತ ಎಜ್ಯುಕೇಷನಲ್ ಫಂಡಾಗಿ’ ಇರಿಸಿದರು. ಅದರ ಬಡ್ಡಿಯಿಂದ ಬಡವಿದ್ಯಾರ್ಥಿಗಳಿಗೆ ಸಹಾಯ ಸಿಕ್ಕಹತ್ತಿತು. ಅದು ಮೊದಲ್ಗೊಂಡು ಸಮಾಜದಲ್ಲಿ ಆಂಗ್ಲವಿದ್ಯಾವಂತರು ಕಾಣತೊಡಗಿದರು.
ಸಮಾಜದಲ್ಲಿ ಜನಜಾಗ್ರತಿಯಿಲ್ಲದ ವಿಜ್ಞಾನ ವಿಚಾರದ ಗಾಳಿಯಿಲ್ಲದ ಆ ಕಾಲದಲ್ಲಿ ಇಂತಹದೊಂದು ಮಹಾಸಭೆಯನ್ನು ಸ್ಥಾಪಿಸಿದ್ದು ಸ್ವಾಮಿಗಳವರಲ್ಲಿರುವ ಅದ್ವಿತೀಯವಾದ ಬುದ್ಧಿಸಾಮರ್ಥ್ಯವನ್ನು ಸಮಾಜೋನ್ನತಿಯ ಉತ್ಕಂಠತೆಯನ್ನು ವ್ಯಕ್ತಮಾಡುವದಿಲ್ಲವೆ ?
ಮಹಾಸಭೆಯು ಪ್ರತಿವರ್ಷವು ಸ್ವಾಮಿಗಳವರ ನೇತೃತ್ವದಲ್ಲಿ ನಡೆಯತೊಡಗಿತು. ಅದರಿಂದ ಸಮಾಜದಲ್ಲಿ ಆದ ಕ್ರಾಂತಿಗಳು ಅನಿತಿನಿತಲ್ಲ. ಸಾಮಾಜಿಕ ಶೈಕ್ಷಣಿಕ ಸಾಂಪತ್ತಿಕ ಸಾಹಿತ್ಯಕ ಮುಂತಾದ ಕಾರ್ಯಕ್ಷೇತ್ರಗಳಲ್ಲಿ ಸುಧಾರಣೆಯು ಭರದಿಂದ ಸಾಗಹತ್ತಿತು. ಈ ರೀತಿ ಆರೇಳು ವರುಷ ಸ್ವಾಮಿಗಳವರ ಸಾಹಸದಿಂದ ಸಭೆಯು ತಪ್ಪದೆ ಯಶಸ್ವಿಯಾಗಿ ಸಾಗಿ ಕೆಲಸ ಮಾಡಿತು. ಶ್ರೀಮಂತ ಶಿರಸಂಗಿ ಲಿಂಗರಾಜರು, ಸರ್ ಕೆ.ಪಿ. ಪುಟ್ಟಣ್ಣಸೆಟ್ಟರು, ವಂಟಮುರಿ ರಾಜಾಲಖಮನಗೌಡ, ಬಸವಪ್ರಭು ದೇಸಾಯರು, ಸೊನ್ನಲಾಪುರದ ವಾರದ ಮಲ್ಲಪ್ಪನವರು, ಹಂದಿಗನೂರು ಬುಳ್ಳಪ್ಪ ಬಸವಂತಪ್ಪ ದೇಸಾಯರು, ರಾವಬಹದ್ದೂರ್ ಅರಟಾಳ ರುದ್ರಗೌಡರು, ಮೊದಲಾದ ಸಮಾಜ ಪ್ರಮುಖರು ಸ್ವಾಮಿಗಳವರ ಪ್ರಭಾವಕ್ಕೆ ಒಳಪಟ್ಟು ಶ್ರದ್ಧೆವಹಿಸಿ ಮಹಾಸಭೆಯ ಅಧ್ಯಕ್ಷರಾಗಿ ಕೆಲಸಮಾಡಿದರು. ಸಮಾಜದ ಶ್ರೀಮಂತರು ಧೀಮಂತರು ಈ ಸಭೆಯಲ್ಲಿ ಭಾಗವಹಿಸಿದರು. ಸಮಾಜದ ಏಳ್ಗಗೆ ಮನಸ್ಸು ಮಾಡಿದರು; ಮುಂದುವರಿದರು.
ಆಮೇಲೆ ಸ್ವಾಮಿಗಳವರು ಧರ್ಮೊತ್ತೇಜಕ ಸಭೆ, ಶಿವತೋಷಿಣೀ ಸಭೆ ಮುಂತಾದವುಗಳನ್ನು ಸ್ಥಾಪಿಸಿ ಅಲ್ಲಲ್ಲಿ ನೆರವೇರಿಸಿದರು. ಹಳ್ಳಿಹಳ್ಳಿಗೆ ಧರ್ಮನೀತಿಗಳ ಸಂದೇಶ ಬೀರಿದರು. ಮಹಾಸಭೆಯು ಸಂಸ್ಥಾಪಿತವಾದ ಮೇಲೆ ಅದಕ್ಕೆ ಅಂಗವಾಗಿ ಅಖಿಲ ಭಾರತ ವೀರಶೈವ ಮಹಿಳಾ ಪರಿಷತ್ತು, ವೀರಶೈವ ತರುಣ ಪರಿಷತ್ತು, ಶಿಕ್ಷಣ ಸಮ್ಮೇಲನ, ವೈದ್ಯ ಸಮ್ಮೇಲನ ಮೊದಲಾದ ಸಾಂಘಿಕ ಚಟುವಟಿಕೆಗಳು ಉದಯವಾಗಿವೆ; ಉತ್ತೇಜಿತವಾಗಿವೆ. ಇವೆಲ್ಲವುಗಳ ಪ್ರಭಾವದಿಂದ ಸಮಾಜದ ಸ್ತ್ರೀಪುರುಷರಲ್ಲಿ ಪಂಡಿತ ಪಾಮರರಲ್ಲಿ ಆಬಾಲವೃದ್ಧರಲ್ಲಿ ನವೀನವಾದ ಜಾಗ್ರತಿ ಮೈದೋರಿತು. ಆ ಕಾಲವು ವೀರಶೈವರ ಉತ್ಕ್ರಾಂತಿಯ ಕಾಲವಾಯಿತು. ಸಮಾಜದಲ್ಲಿ ವಿದ್ಯಾಭಾನು ಉದಯವಾದನು. ಅಂಧಕಾರ ಅಳಿಯಿತು. ಜನಾಂಗ ಜಡನಿದ್ದೆಯಿಂದ ಜಾಗ್ರವಾಯಿತು. ಇದಕ್ಕೆಲ್ಲ ಕುಮಾರ ಯೋಗಿಯು ಮೂಲ ಕಾರಣನಾದನು.