ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಅರಣ್ಯದೊಳು ಪಣ್ಯ | ನಾರಿ ಮಾನವ ಮಾರಿ
ದಾರಿಗೊಂಡವರ ಸೂರೆಗೊಂಬಳು ಗುರುವೆ
ಸೇರಿದೆನು ನಿಮ್ಮ ಕೃಪೆಯಾಗು ||೪೬||
ಗಂಡು ಹೆಣ್ಣುಗಳ ಆಕರ್ಷಣೆಯಲ್ಲಿ ಕಾಮನ ಪ್ರಾದುರ್ಭಾವವಾಗುವಂತೆ, ಮಾಯೆಯು ಜೀವಿಗಳ ಮೋಹದಲ್ಲಿ ಮೈದೋರುತ್ತಾಳೆ. ೨೮ನೆಯ ತ್ರಿಪದಿಯ ತಿರುಳಿನಲ್ಲಿ ತಿಳಿಸಿದಂತೆ, ಮನದ ಮುಂದಣ ಆಸೆಯೇ ಮಾಯೆಯಾಗಿ ಪರಿವರ್ತನೆ
ಹೊಂದುವದು. ಈ ಮಾಯೆಯು ಮಾನವನಿಗೆ ಮಹಾಮಾರಿಯಾಗಿದ್ದಾಳೆ. ಮಾರಿಯೆಂದರೆ ಮೃತ್ಯುದೇವತೆ. ಇದು ಪ್ರ ಸಿದ್ಧವಾದ ಅರ್ಥ, ವೇದಾಂತಿಗಳು ಮಾಯೆಗೆ ಅವಿದ್ಯೆ, ಅಜ್ಞಾನ ಅಥವಾ ಅಧ್ಯಾಸವೆಂದು ಕರೆದಿರುವರು. ಅಜ್ಞಾನದಿಂದ ಇಲ್ಲದ ಸಂಸಾರದಲ್ಲಿ ಆರೋಪಹೊರಸಿ ಮೋಹಗೊಂಡು ಮರುಳಾಗುವದೇ ಮಾಯೆಯ ಮುಖ್ಯಕಾರ್ಯ. ಸರ್ವಜ್ಞ ಕವಿಯು-
“ಜೊಳ್ಳು ಮನುಜರು ತಾವು ಸುಳ್ಳು ಸಂಸಾರದೊಳು
ಮಳ್ಳಿಡಿದು ಮಾಯೆಯೆಂಬವಳ ಬಲೆಯೊಳಗೆ
ಹೊಳ್ಳಾಡುತಿಹರು ಸರ್ವಜ್ಞ “
ಎಂದು ಮೇಲಿನ ಅಭಿಪ್ರಾಯವನ್ನೇ ಪುಷ್ಟಿಕರಿಸಿದ್ದಾನೆ. ಮಾಯೆಯ ಬಗ್ಗೆ ಶಿವಶರಣರ ವ್ಯಾಖ್ಯಾನ ಸರಳ ಹಾಗೂ ಸುಸ್ಪಷ್ಟವಾಗಿದೆ. ಅಕ್ಕಮಹಾದೇವಿಯು ಮಾಯೆಯ ಯಥಾರ್ಥ ಸ್ವರೂಪವನ್ನು ತಿಳಿಸಿದ್ದಾಳೆ.
“ಪುರುಷನ ಮುಂದೆ ಸ್ತ್ರೀ ಯೆಂಬ ಅಭಿಮಾನವಾಗಿ ಕಾಡಿಹುದು.
ಸ್ತ್ರೀಯ ಮುಂದೆ ಪುರುಷನೆಂಬ ಅಭಿಮಾನವಾಗಿ ಕಾಡಿಹುದು.
ಲೋಕವೆಂಬ ಮಾಯೆಗೆ ಶಿವಶರಣರ ಪರಿ ಹೊರಗಾಗಿಪ್ಪುದು.
ಚನ್ನಮಲ್ಲಿಕಾರ್ಜುನನೊಲಿದ ಶರಣಂಗ ಮಾಯೆಯೂ ಇಲ್ಲ.
ಮರಹೂ ಇಲ್ಲ. ಅಭಿಮಾನವೂ ಇಲ್ಲ. ಕೇಳಾ ಅಯ್ಯ !”
ಪುರುಷನಿಗೆ ಸ್ತ್ರೀಯು ಮಾಯೆ, ಸ್ತ್ರೀಯಗಳಿಗೆ ಪುರುಷ ಮಾಯೆ. ಇವರೀರ್ವರ ಮನದ ಮುಂದಣಬಯಕೆಯೇ ನಿಜವಾದ ಮಾಯೆ, ಕಾಲನ ಪರಿವೆಯಿಲ್ಲದೆ ಕಾಮನ ಬಾಣದ ಗುರಿಗೆ ಜೀವಿಯು ಮಾಯೆಯ ಬಲೆಯಲ್ಲಿ ಬೀಳುತ್ತಾನೆ.
“ಮಾಯೆಯೆಂಬ ರಕ್ಕಸಿ ಸಕಲ ಪ್ರಾಣಿಗಳ ಸಾರವ ಹೀರಿ.
ಹಿಪ್ಪೆಯ ಮಾಡಿ ಉಃಫೆಂದು ಊದುತ್ತಿದ್ದಾಳೆ.
ಇಂತೀ ತ್ರಿವಿಧ ಮುಖದಲ್ಲಿ ಕಾಡುವ ನಿಮ್ಮ
ಮಾಯೆಯ ಗೆಲವೊಡೆ
ಆರಳವಲ್ಲವಯ್ಯಾ ಅಖಂಡೇಶ್ವರ ನೀವು ಕರುಣಿಸದನ್ನಕ್ಕರ”.
ಎಂದು ಷಣ್ಮುಖಶಿವಯೋಗಿಗಳು ಅಪ್ಪಣೆಕೊಡಿಸಿದಂತೆ ಮಾಯೆಯೆಂಬ ರಾಕ್ಷಸಿಯು ಸಕಲ ಪ್ರಾಣಿಗಳನ್ನು ವಿನಾಶಗೊಳಿಸುತ್ತಿರುವಳು. ಕಾಲ-ಕಾಮ-ಮಾಯೆಂಬ ತ್ರಿವಿಧ ಮುಖದಲ್ಲಿ ಕಾಡುವ ಮಾಯೆಯನ್ನು ಗುರುಕರುಣೆಯಿಂದ ಮಾತ್ರ ಗೆಲ್ಲಬಹುದು. ಗುರುಕೃಪೆಯಾದ ಶರಣಂಗೆ ಮಾಯೆಯ ಉಪದ್ರವವಿಲ್ಲವೆಂಬುದೇ ಅಕ್ಕನ ಅಭಿಪ್ರಾಯ. ಹಡಪದಪ್ಪಣ್ಣನು-
“ಮರೆದರೆ ಮಾಯೆ; ಅರಿದರೆ ಮಾಯೆ ಇಲ್ಲವೆಂದು ತಿಳಿಸಿದ್ದಾನೆ. ಚೆನ್ನಬಸವಣ್ಣ ನವರು- “ಗುರುಕರುಣಿಸೆ ಬಿಟ್ಟಿತ್ತು ಮಾಯೆ’ಯೆಂದು ಸಿದ್ದಾಂತಗೊಳಿಸಿದ್ದಾರೆ.
ಗುರುಕರುಣೆಯಿಲ್ಲದ ದೇವತೆಗಳಿಗೂ ಮಾಯೆಯು ಬಿಟ್ಟಿಲ್ಲ. ಬಿಡುವದೂ
ಇಲ್ಲ, “ಬಿಟ್ಟೆನೆಂದರೆ ಬಿಡದೀಮಾಯೆ, ಬಿಡದಿದ್ದರೆ ಬೆಂಬತ್ತಿತ್ತು ಮಾಯೆ’
ಮತ್ತು : “ಬ್ರಹ್ಮಘನವೆಂದಡೆ ಬ್ರಹ್ಮನ ನುಂಗಿತ್ತು ಮಾಯೆ,
ವಿಷ್ಣು ಘನವೆಂದಡೆ ವಿಷ್ಣುವ ನುಂಗಿತ್ತು ಮಾಯೆ,
ರುದ್ರ ಘನವೆಂದಡೆ ರುದ್ರನ ನುಂಗಿತ್ತು ಮಾಯೆ,
ತಾ ಘನವೆಂದಡ ತನ್ನ ನುಂಗಿತ್ತು ಮಾಯೆ
ಸರ್ವವೂ ನಿನ್ನ ಮಾಯೆ. ಒಬ್ಬರನೊಳಕೊಂಡಿದ್ದ ಹೇಳಾ ಗುಹೇಶ್ವರ ?
ಎಂದು ಮಾಯಾಕೋಲಾಹಲಿಗಳಾದ ಪ್ರಭುಗಳು ಗುಹೇಶ್ವರನಲ್ಲಿ ಮಾಯೆಯ ವ್ಯಾಪಕತೆಯನ್ನು ಹೇಳಿದ್ದಾರೆ. ಮಾಯೆಗೆ ಹೊರತಾದವರು ವಿರಳ.
ಶಿವಕವಿ ಬಸವಲಿಂಗಶರಣರು ಮಾಯೆಯ ಮಾರ್ಮಿಕ ವಿಷಯವನ್ನು
ಮನನೀಯವಾಗಿ ಪ್ರತಿಪಾದಿಸಿದ್ದಾರೆ.
ಅರಣ್ಯ’ವೆಂದರೆ ಸಂಸಾರ. ಶಾಸ್ತ್ರಕಾರರು ಅರಣ್ಯ ಪದಕ್ಕೆ ‘ಭವ’ವೆಂತಲೂ ಅರ್ಥೈಸಿದ್ದಾರೆ. ಪ್ರತಿಯೊಂದು ಭವ (ಜನ್ಮ ) ದಲ್ಲಿಯೂ ಮಾಯೆಯ ಬಲೆ ತಪ್ಪಿದ್ದಲ್ಲ. ಈ ಸಂಸಾರವೆಂಬ ಅರಣ್ಯದಲ್ಲಿ ಮಾಯೆಯು ಮಾನವನಿಗೆ ಮಾರಿಯಾಗಿ
ಕಾಡುತ್ತಿದ್ದಾಳೆ. ಬೆಲೆವೆಣ್ಣು ವೇಶ್ಯಯರೂಪದಲ್ಲಿ ಆಕರ್ಷಣಗೊಂಡು ಮನುಷ್ಯನನ್ನು ಮೂಲೆಗುಂಪನ್ನಾಗಿಸುತ್ತಾಳೆ. ಸೂಳೆಯು ಅಥವಾ ಪಣ್ಯನಾರಿಯು ತನ್ನ ವಿಟನ ಹಿತವನ್ನು ಬಯಸದೆ, ಆತನು ಸರ್ವಸ್ವವನ್ನು ಸೂರೆಮಾಡುವಂತೆ ಮಾಯೆಯು
ಮಾನವನನ್ನು ಮರವೆಯೆಂಬ ಬಲೆಗೆ ಸಿಕ್ಕಿಸಿ ಮುರಿಯುತ್ತಾಳೆ. ಪೂರ್ವಸುಕೃತದಿಂದ ಯಾರಾದರೂ ಪಾರಮಾರ್ಥಿಕ ಜೀವನವನ್ನು ಕಂಡುಕೊಂಡರೆ ಅವರನ್ನೂ ತನ್ನತ್ತ ಬಲಾತ್ಕಾರವಾಗಿ ಎಳೆದುಕೊಳ್ಳುತ್ತಾಳೆ. ಶಿವಭಕ್ತಿಪಥದಲ್ಲಿ ದಾರಿಹಿಡಿದ ಭಕ್ತನಿಗೆ ತನು- ಮನ-ಧನಗಳಿಗೆ ತೊಂದರೆ ಕೊಡುತ್ತಾಳೆ. ಗುರುವೆ ! ಶರಣರು ಉಪದೇಶಿಸಿದಂತೆ ನಿನ್ನ ಕರುಣೆಯಿಂದಲೇ ಇವಳ ಜಾಲದಿಂದ ಪಾರಾಗಬಹುದೆಂದು ನಿಶ್ಚಯಿಸಿ ನಿನ್ನ ಪಾದವನ್ನು ಸೇರಿದೆನು. ಮಾಯೆಗೆ ಅಳುಕದ, ಅಂಜದ ಶರಣ ಮಾರ್ಗದತ್ತ ಮುನ್ನಡೆಸಿ ಮಾಯೆಯ ಜಾಲವನ್ನು ಪರಿಹರಿಸು.
ಚಿಕ್ಕವ್ಯಾಧನ ಬಲೆಗೆ | ಸಿಕ್ಕಿದಣ್ಣಗಳೆಲ್ಲ
ರಕ್ಕಸಿಯ ಮನೆಯ ಮಕ್ಕಳಹರು ಗುರುವೆ
ಚಕ್ಕನೆ ಎನಗೆ ಕೃಪೆಯಾಗು || ೪೭ ||
ಮಾಯೆ ಜೀವಿಗಳಿಗೆ ರಾಕ್ಷಸಿ ಜೀವಿಗಳನ್ನು ಹಿಡಿಸಿ ನುಂಗುವ ಹಿರಿಯ ಒಡತಿ. ಅವಳಿಗೆ ಸಹಾಯಕ ಚಿಕ್ಕ ಬೇಟೆಗಾರ; ಬೇಡ. ತಾನು ಚಿಕ್ಕವನಾದರೂ ಜೀವಿಗಳನ್ನು ತನ್ನ ಬಲೆಯೊಳಗೆ ಹಿಡಿಯುವಲ್ಲಿ ಬಲು ಜಾಣನಾಗಿದ್ದಾನೆ. ತನ್ನ ಬಲೆಗೆ ಬಿದ್ದ
ಪ್ರಾಣಿಗಳೆಲ್ಲವನ್ನು ಮಾಯಾರಾಕ್ಷಸಿಯ ಬಳಿಗೆ ಕಳುಹಿಸುತ್ತಾನೆ. ಇದೇ ಮಾತನ್ನು ಸ್ವತಂತ್ರ ಸಿದ್ಧಲಿಂಗೇಶ್ವರರು –
‘ಜಗದಗಲದ ಮಾಯಾಜಾಲವ ಹಿಡಿದು
ಕಾಲನೆಂಬ ಜಾಲಗಾರ, ಮಾಯಜಾಲವ ಬೀಸಿದ ನೋಡಯ್ಯ
ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ
ಬಲ್ಲ ಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ
ಆ ಕಾಲನ ಬಲೆಯಗೆ ಸಿಕ್ಕಿ ಬೀಳುತ್ತಿದೆ ಜಗವೆಲ್ಲ”
ಎಂದು ಹೇಳಿ; ಜಗದಗಲವಾದ ಮಾಯಾ ಬಲೆಯಲ್ಲಿ ಬೀಳುತ್ತಿರುವ ಜಗದ ಜೀವಿಗಳನ್ನು ಕಂಡು ಕನಿಕರಪಟ್ಟಿದ್ದಾರೆ.
ಮಾನವರನ್ನು ಮಾಯಾಬಲೆಯಲ್ಲಿ ಬೀಳಿಸುವ ಬೇಟೆಗಾರನು. ಈ ಬೇಟೆಗಾರನು ಮಾನವನ ಮೈಯಲ್ಲಿ ಚಿಕ್ಕವನಾಗಿ ವಾಸಮಾಡಿದ್ದರೂ ಅವನ ಕೆಲಸ ಭಯಂಕರವಾಗಿದೆ.ಅರ್ಥಾತ್ ಮನುಷ್ಯನಲ್ಲಿ ಚಿಕ್ಕದಾದ ಆಶೆಯೆಂಬ ಬೇಡನು ಅವನನ್ನು (ಮಾನವನನ್ನು) ಆಶಾಪಾಶದಲ್ಲಿ ಕಟ್ಟಿ ಮೋಹಾಂಗನೆಯರ ಬಲೆಗೆ ಬೀಳಿಸುತ್ತಾನೆ. ಮೋಹಪಾಶದಿಂದ ಹೊರಗೆ ಬಾರದೆ ಮಾರಿಮಾಯೆಯ ಮನೆಗೆ ತಲುಪಬೇಕಾಗುವದು. ಭವಚಕ್ರದಲ್ಲಿ ತಿರುಗಬೇಕಾಗುವದು. ಅಂತೆಯೇ ಶಿವಕವಿಯು ಚಕ್ಕನೆ ಎನಗೆ ಕೃಪೆಯಾಗೆಂದು ಬೇಡಿದ್ದಾನೆ. ಈ ಮಾಯಾಪಾಶದಲ್ಲಿ ಬಂಧಿತನಾಗುವದಕ್ಕಿಂತ ಮುಂಚೆಯೇ ತೀವ್ರವಾಗಿ ನನ್ನನ್ನು ಪಾರುಮಾಡೆಂದು ಪ್ರಾರ್ಥಿಸಿದ್ದಾನೆ. ಓ ಗುರುವೆ ! ಚಿಕ್ಕವ್ಯಾಧನ ಬಲೆಯಲ್ಲಿ ಬೀಳಿಸದೆ ರಕ್ಷಿಸು.
ಹುಲ್ಲು ಮೇಯಲು ಬಂದ | ಹುಲ್ಲೆಯಾ ಕರುವನ್ನು
ಹುಲ್ಲೆ ಹುಲಿಯಾಗಿ ಮೆಲ್ಲುವದ ಬಲ್ಲೆನಾ-
ನೊಲ್ಲೆ ಶ್ರೀ ಗುರುವೆ ಕೃಪೆಯಾಗು ||೪೮ ||
ಹುಲ್ಲೆ-ಚಿಗರಿ (ಜಿಂಕೆ) ಕರುವೆಂದರೆ ಅದರ ಮರಿ, ಚಿಕ್ಕದಾದ ಚಿಗರಿಯ ಮರಿಯು ಎಳೆಯ ಹುಲ್ಲಿಗಾಗಿ ಜಿಗಿಯುತ ಹೊಗುವದು. ಇದು ಅದರ ಸ್ವಭಾವ. ಅದರಂತೆ (ಜಿಂಕೆಯ ಮರಿಯಂತೆ) ಹಾರುವ (ಚಂಚಲವಾದ) ಜೀವಾತ್ಮನು ಹುಲ್ಲಿನಂತೆ ನಿಸ್ಸಾರವಾದ, ಬೆಲೆಯಿಲ್ಲದ ಸಾಂಸಾರಿಕ ವಿಷಯ ಸುಖವನ್ನು ಮೇಯ (ತಿನ್ನಲು ಬರುತ್ತಾನೆ.) ಆದರೆ ಹುಲ್ಲಿಗಾಗಿ ಹಂಬಲಿಸಿ ಮೇಯುವಲ್ಲಿ ತಲ್ಲೀನವಾದ ಹುಲ್ಲೆಯನ್ನು ಹುಲಿಯು ನೋಡಿ ಆನಂದದಿಂದ ತಿಂದುಹಾಕುತ್ತದೆ. ಹುಲಿಗೆ ಹುಲ್ಲೆಯು ಒಲುವಿನ ಓಗರ. ಅದನ್ನು ತಿನ್ನದೆ ಬಿಡುವದಿಲ್ಲ. ಹುಲ್ಲೆಯ ಕರುವಿನಂತಿದ್ದ ಜೀವಾತ್ಮನ ಕರಣವು ಸಾಂಸಾರಿಕ ವಿಷಯ ಸುಖವನ್ನು ಆಸ್ವಾದಿಸಲು ಬಯಸಿ, ಬಯಸಿ ಅಹಂಕಾರ-ಮಮಕಾರಗಳು ಅತಿಯಾಗಿ ಹೆಬ್ಬುಲಿಯಂತೆ ಅವನನ್ನೇ ನಾಶಮಾಡಿ ಬಿಡುತ್ತವೆ. ಜೀವಿಗೆ ಸಂಸಾರದ ಸುಖ ಸಿಕ್ಕದೆ ಹೋಗುತ್ತದೆ ಮತ್ತು ಅಹಂಕಾರಿಗೆ ಸುಖದ ಅನುಭವ ಆಗುವದಿಲ್ಲವೆಂಬುದು ಅನುಭವದ ನುಡಿ.
ಗುರುವೆ ! ನಾನು ಇದೆಲ್ಲವನ್ನು ನಿನ್ನ ದಯೆಯಿಂದ ತಿಳಿದಿದ್ದೇನೆ. ಅದು ಕಾರಣ
ಈ ಸಾಂಸಾರಿಕ ವಿಷಯವನ್ನು ತ್ಯಜಿಸಿ ನಿನ್ನ ಮೊರೆ ಹೊಕ್ಕಿದ್ದೇನೆ ರಕ್ಷಿಸು ಮತ್ತು ಷಣ್ಮುಖ
ಸ್ವಾಮಿಗಳು –
‘ಹುಲಿಯ ಬಾಯಲ್ಲಿ ಸಿಕ್ಕಿದ ಹುಲ್ಲೆಯಂತೆ
ಸರ್ಪನ ಬಾಯಲ್ಲಿ ಸಿಕ್ಕಿದ ಕಪ್ಪೆಯಂತೆ,
ಸಕಲಲೋಕಾದಿ ಲೋಕಗಳು ಮಾಯೆಯ ಬಲೆಯಲ್ಲಿ ಸಿಕ್ಕಿ
ಸೆರೆ ಹೋಗುವದ ಕಂಡು ನಾನಂಜಿ ನಿಮ್ಮ ಮೊರೆಹೊಕ್ಕೆ
ಕಾಯಯ್ಯ ಕಾರುಣ್ಯವಿಧಿಯೆ | ಅಖಂಡೇಶ್ವರಾ?
ಎಂದು ಶಿವನಲ್ಲಿ ಬೇಡಿಕೊಂಡಂತೆ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಹುಲಿಯ ಬಾಯಲ್ಲಿ ಸಿಕ್ಕ ಹುಲ್ಲೆಯ ರಕ್ಷಕರಿಲ್ಲದೆ ನಾಶವಾಗುವಂತೆ, ಹಾವಿನ ಬಾಯಲ್ಲಿ ಸಿಕ್ಕ ಕಪ್ಪೆಯಂತೆ ಮಾಯೆಯ ಬಲೆಯಲ್ಲಿ ಬಿದ್ದ ನಾನು ನಿನ್ನಿಂದಲೇ ರಕ್ಷಿಸಲ್ಪಡಬೇಕು. ನೀನಲ್ಲದೆ ಬೇರೆ ರಕ್ಷಕರಿಲ್ಲ. ನೀನೇ ಕಾರುಣ್ಯಮಯನೂ ರಕ್ಷಕನೂ ಇರುವಿ. ನನ್ನ ದುರ್ಗುಣಗಳನ್ನು ದೂರಮಾಡಿ ಸುಗಣಗಳನ್ನು ದಯಪಾಲಿಸುವವನೂ, ಅಹಂಕಾರವನ್ನು ನಿರಸನ ಮಾಡುವವನೂ ನೀನೇ. ಆದ್ದರಿಂದ ಗುರುನಾಥ ! ಹುಲ್ಲಿನಂತೆ ನಿಸ್ಸಾರವಾದ ಸಂಸಾರವನ್ನು ಪ್ರಸಾದವನ್ನಾಗಿಸಿ ಸ್ವೀಕರಿಸುವ ಸುಬುದ್ಧಿಯನ್ನು ಅನುಗ್ರಹಿಸು. ಸಾಂಸಾರಿಕ
ವಿಷಯಗಳು ಪ್ರಸಾದವಾದರೆ ಪೋಷಕವಾಗುವದು. ಅದರಿಂದ ಮುಕ್ತನಾಗಬಹುದು. ಗುರುವೆ ! ಹುಲ್ಲೆಯ ಕರುವಿನಂತಿದ್ದ ನನ್ನ ಹರಣವು ಹಮ್ಮಿನಂತಿದ್ದ ಹೆಬ್ಬುಲಿಯ ಬಾಯಿಗೆ ಬೀಳದಂತೆ ರಕ್ಷಿಸು ಮತ್ತು ನನ್ನ ಹರಣವು ಹಮ್ಮಿನಂತಿದ್ದ ಹೆಬ್ಬುಲಿಯ
ಬಾಯಿಗೆ ಬೀಳದಂತೆ ರಕ್ಷಿಸು. ಮತ್ತು ನನ್ನ ಜೀವವಾಸನೆಗಳನ್ನು ಹಾಗೂ ಹಮ್ಮು ಬಿಮ್ಮುಗಳನ್ನು ನಿವಾರಿಸಿ ಶಿವಪ್ರಸಾದವನ್ನಾಗಿಸುವ ಸರಳ ಸಾತ್ವಿಕವಾದ ಶರಣ ಸಂಸಾರವನ್ನು ಕರುಣಿಸು.
ಹುಲಿ ಹುಲ್ಲೆಗಳು ತಮ್ಮ | ಕೊಲುವ ವ್ಯಾಧರ ತಲೆಯ
ಸನೆನುಂಗಿ ಮುಂಡ-ಸುಳಿದಾಡುವದ ಕಂಡಾ-
ನಲಸಿದೆನು ಗುರುವೆ ಕೃಪೆಯಾಗು ||೪೯||
ಜೀವಾತ್ಮನಿಗೆ ಜೀವಭ್ರಾಂತಿಯನ್ನು ಹೋಗಲಾಡಿಸುವಲ್ಲಿ ಶಾಸ್ತ್ರಕಾರರಾಗಲಿ, ವಚನಕಾರರಾಗಲಿ ಸಾಕಷ್ಟು ಬೆಡಗಿನ ವಚನಗಳನ್ನು ಹೇಳಿದ್ದಾರೆ. ಗಹನವಾದ ವಿಷಯವನ್ನು ಸಹಜವಾಗಿ ಹೇಳಿದರೆ ಸಾಧಕರ ಮನಸ್ಸಿಗೆ ನಾಟುವದಿಲ್ಲ. ಅದಕ್ಕಾಗಿ
ಆಳವಾಗಿ, ದೀರ್ಘವಾಗಿ ವಿಚಾರಿಸಲೆಂದು ಇಂಥ ಅನೇಕ ಬೆಡಗಿನ ವಚನಗಳಿಂದ ಶಿವಕವಿಯು ಮಾಯಾ ನಿರಸನವನ್ನು ಪ್ರತಿಪಾದಿಸಿದ್ದಾನೆ.
ಹುಲಿ-ಹುಲ್ಲೆಗಳು ತಮ್ಮನ್ನು ಕೊಲ್ಲುವ ಬೇಟೆಗಾರನ ತಲೆಯನ್ನು ಹೇಗೆ ನುಂಗಬಲ್ಲವು ? ಎಂಬ ಪ್ರಶ್ನೆ ಸಹಜವಾದುದು. ಇಲ್ಲಿ ವಾಚ್ಯಾರ್ಥ ಅಸಂಭವವಾದರೂ ಲಕ್ಷ್ಯತರ್ಥ ಸಂಭವಿಸುತ್ತದೆ. ಬೇಟೆಯಾಡುವ ಬೇಡನು ಹುಲಿ-ಜಿಂಕೆ ಮೊದಲಾದ
ಪ್ರಾಣಿಗಳಿಗಾಗಿ ಗಿಡ ಗಂಟೆಗಳ ಮರೆಯಲ್ಲಿ ಕುಳಿತು ತನ್ನ ಮನದಲ್ಲಿ ವಿಚಾರ ಮಾಡುತ್ತಿರುತ್ತಾನೆ. ದೇವರು ಪ್ರತಿಯೊಂದು ಪ್ರಾಣಿಗೂ ತನ್ನನ್ನು ರಕ್ಷಿಸಿಕೊಳ್ಳುವ ಜ್ಞಾನವನ್ನು ಬಲವನ್ನು ಕೊಟ್ಟಿರುತ್ತಾನೆ. ಆ ದಿಶೆಯಲ್ಲಿ ಪ್ರಾಣಿಗಳೂ ಸಹ ಬೇಟೆಗಾರನ
ಸುಳಿವನ್ನು ಕಂಡುಹಿಡಿದು ತಮ್ಮನ್ನು ಕೊಲ್ಲಬಂದ ಅವನ ಗುರಿಯಿಂದ ಪಾರಾಗಿ ಹೋಗುತ್ತವೆ. ಆಗ ವಿಚಾರಿಸುತ್ತಿರುವ ವ್ಯಾಧನ ತಲೆಯು ಬರಿದಲೆಯಾಗುತ್ತದೆ. ಜ್ಞಾನಶೂನ್ಯವಾದ ತಲೆಯು ಅದಾಗುತ್ತದೆ. ವಿಚಾರ ಶೂನ್ಯನಾದ ಬೇಟೆಗಾರನ
ಮುಂಡಮಾತ್ರ ಉಳಿಯುತ್ತಿದೆ. ಬೇಟೆಯಾಡುವ ಬಗ್ಗೆ ವಿಚಾರಿಸಿ, ಪ್ರಾಣಿಗಳನ್ನು ನಿರೀಕ್ಷಿಸಿ, ಕೊನೆಗೆ ಯಾವ ಬೇಟೆಯೂ ಸಿಗದಿದ್ದರೆ ಅವನಿಗೆ ಅಲಸಿಕೆ (ಬೇಸರ) ಯಾಗುವಲ್ಲಿ ಸಂದೇಹವಿಲ್ಲ. ಇದು ಶಬ್ದಾರ್ಥಗತವಾದ ಬಾಹ್ಯಚಿತ್ರ.
ಅಂತರಾರ್ಥ ಇಂತಿದೆ. ಹುಲಿ- ಅಹಂಕಾರ; ಹುಲ್ಲೆ ಜೀವ; ಕೊಲ್ಲುವವ್ಯಾಧ ವಿಷಯಗಳಲ್ಲಿಯ ಆಶೆಯೆಂಬ ಬೇಡ. ವಿಷಯಗತವಾದ ಆಶೆಯು ಅಹಂಕಾರಿ ಜೀವನನ್ನು ನಿಸ್ತೇಜಗೊಳಿಸಿ ನಾಶಮಾಡುತ್ತದೆ. ಅಂದರೆ ಅಹಂಕಾರಿಯ ಆಶೆಯು ಕೈಗೂಡದಿದ್ದರೆ ಕಳೆಗುಂದಿದಂತಾಗುವದು ಸಹಜ, ಶಕ್ತಿ ಹೀನನಾಗಿ ವಿನಾಶೋನ್ಮುಖನಾದ ಜೀವಾತ್ಮನು
ಪೂರ್ವಸುಕೃತದಿಂದ, ಗುರು ಕೃಪೆಯ ಬಲದಿಂದಲೂ ಜ್ಞಾನಿಯಾದರೆ ಆಶೆಯೆಂಬ ಬೇಡನ ತಲೆಯಲ್ಲಿ ಶೂನ್ಯವಾಗಿ ಮುಂಡಮಾತ್ರ ಉಳಿಯುವದು. ಅರ್ಥಾತ್ ಗುರುಕರುಣೆಯಿಂದ ಜೀವನು ಸುಜ್ಞಾನವನ್ನು ಪಡೆದರೆ ಅಹಂಕಾರ ಮತ್ತು ಜೀವಭಾವವು ತೊಲಗಿ ಆಶೆಯು ಇಲ್ಲದಾಗುವದು. ಆಶೆಯೇ ಇಲ್ಲವಾದ ಮೇಲೆ ಅದರ ಉಪಟಳ ಇನ್ನಿಲ್ಲದಾಗುವದು.
ಈ ತ್ರಿಪದಿಯನ್ನು ಇನ್ನೊಂದು ತೆರನಾಗಿ ವಿಚಾರಿಸಬಹುದು. ಬೇಡನು ಅನಿಮಿತ್ತವೈರಿಗಳಾದ ಪ್ರಾಣಿಗಳನ್ನು ಕೊಲ್ಲುತ್ತಿದ್ದರೆ; ಮಾನವರಿಗೆ ನಿಮಿತ್ತವೈರಿಗಳೆನಿಸಿದ ಅಹಂಕಾರ, ಜೀವಭಾವ, ಆಶೆ ಇತ್ಯಾದಿ ದುರ್ಗುಣಗಳನ್ನು ಬೇಟೆಯಾಡುವರು
ಗುರು-ಜಂಗಮರು. ಇವರು ತಮ್ಮ ಉಪದೇಶವೆಂಬ ಬಾಣದಿಂದ ಮಾನವರಲ್ಲಿಯ ದುರ್ಗುಣಗಳನ್ನು ಕಡೆಯುತ್ತಾರೆ. ಅಲ್ಪಜ್ಞನಾದ ಮನುಷ್ಯನು ಗುರೂಪದೇಶವನ್ನು ನುಂಗಿಯೂ (ಪಡೆದೂ) ಪುನಃ ಪುನಃ ಅಧಃಪ್ರವೃತ್ತಿಯಲ್ಲಿ ನಡೆದರೆ ಬೇಟೆಗಾರರೆನಿಸಿದ ಗುರು ಜಂಗಮರಿಗೆ ಬೇಜಾರವಾಗುವದು ಖಂಡಿತ. ಮಾನವನು ಜ್ಞಾನವನ್ನು ಹೊಂದಿಯೂ ಅಜ್ಞಾನಿಯಾದರೆ ನಿಜತಲೆಯಿಲ್ಲದಾಗುವನು. ಅವನ ದಿಂಡ ಮಾತ್ರ ತೋರುವದು. ಗುರುವೆ ! ಎನ್ನ ದುರ್ಗುಣಗಳನ್ನು ದೂರಮಾಡಿ ಸುಗುಣಿಯನ್ನಾಗಿ ಮಾಡು. ಜೀವಭಾವದ ಆಲಸ್ಯವನ್ನು ಕಳೆದು ಸತ್ಕ್ರಿಯೆಗಳಲ್ಲಿ ಉತ್ಸಾಹಿಯನ್ನಾಗಿ ಮಾಡು.
ಬೇರಾಗಸಕೆ ಬೆಳೆದ | ನಾರಿಕೇಳದ ಕುಜವ
ನಾರ ಹಂಗಿಲ್ಲದೇರಿದೆ ನಾನಿಳಿಯ
ಲಾರೆನೈ ಗುರುವೆ ಕೃಪ
ಈ ಪದ್ಯದ ಮಾದರಿಯಲ್ಲಿ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಉಪದೇಶಿಸಿದ್ದಾನೆ –
ಉರ್ಧ್ವ ಮೂಲಮಧಃಶಾಖಮ್
ಅಶ್ವತ್ಥಂ ಪ್ರಾಹುರವ್ಯಯಮ್ |
ಛಂದಾಂಸಿ ಯಸ್ಯ ಪರ್ಣಾನಿ
ಯಸ್ತಂ ವೇದ ಸ ವೇದವಿತ್ || ೧೫.೧ ||
ಹಾಲಿನಿಂದ ಉತ್ಪನ್ನವಾಗುವ ಬೆಣ್ಣೆಯು ಮಜ್ಜಿಗೆಯಲ್ಲಿ ಮೇಲೆ ತೇಲುತ್ತಿರುವಂತೆ, ಸಕಲಸಾರತರವಾದ ಆತ್ಮ ತತ್ತ್ವವೂ ಊರ್ಧ್ವವಾಗಿದೆ. ಅದು ಸೂಕ್ಷ್ಮಕ್ಕಿಂತಲೂ ಸೂಕ್ಷ್ಮವೂ, ಸ್ಥೂಲಕ್ಕಿಂತಲೂ ಸ್ಥೂಲವೂ ಆಗಿ, ಎಲ್ಲ ಜಗತ್ತಿಗೆ ಕಾರಣವಾಗಿ, ನಿತ್ಯವಾಗಿ
ಸರ್ವಕ್ಕೂ ಮಿಗಿಲಾಗಿ ತೋರುತ್ತದೆ. ಇದುವೆ ಊರ್ಧ್ವವೆನಿಸುವದು. ಈ ಪರವಸ್ತುವಿ ನಿಂದ ಉತ್ಪನ್ನವಾದ ಸಂಸಾರ ವೃಕ್ಷವೇ ಅಶ್ವತ್ಥವು. ಈ ಮರದ ಮೂಲವು ಮೇಲೆ ಇದ್ದು ಶಾಖೆಗಳು ಕೆಳಮುಖವಾಗಿವೆ. ಇದು ಸನಾತನವಾದುದು. ಇದರ ಎಲೆಗಳು
ಛಂದಸ್ಸುಗಳು. ಅದನ್ನು ಯಾವನು ಚನ್ನಾಗಿ ತಿಳಿದುಕೊಳ್ಳುವನೋ ಅವನು ವೇದವನ್ನು ತಿಳಿದವನಾಗುವನು. ಕಠೋಪನಿಷತ್ತಿನಲ್ಲಿಯೂ –
ಊರ್ಧ್ವಮೂಲೋವಾಕ್ಯಾಖ
ಏಷೋಡಶ್ವತ್ಥ: ಸನಾತನಃ
ತದೇವ ಶುಕ್ರಂ ತದ್ಬ್ರಹ್ಮ
ತದೇವಾಮೃತಮುಚ್ಯತೇ || ೨೩-೧ ||
ಮೇಲೆ (ಬೊಡ್ಡೆ)-ಬೇರು, ಕೆಳಗೆ ಕೊಂಬೆಗಳು ಇರುವ ಅಶ್ವತ್ಥ ವೃಕ್ಷವು ಬಹು ಸನಾತನವಾಗಿದ್ದು, ವಿಶುದ್ಧ ಜ್ಯೋತಿಸ್ವರೂಪವಾಗಿದೆ. ಅದುವೆ ಬ್ರಹ್ಮವಸ್ತು, ಅದಕ್ಕೇನೆ ಅಮೃತವೆಂದು ಕರೆಯಲಾಗುವದು. ಈ ಸ್ವಯಂಜ್ಯೋತಿ, ಅಮೃತಮಯ ಬ್ರಹ್ಮನಿಂದ ಹುಟ್ಟಿದ ಕೆಳಮುಖವಾದ ಸೃಷ್ಟಿಗೆ ಅಧಃಸೃಷ್ಟಿಯೆಂದು ಕರೆಯುತ್ತಾರೆ. ಸಾಂಸಾರಿಕ
ವಿಷಯಭೋಗಗಳೂ ಕೆಳಮುಖವಾಗಿವೆ. ಬ್ರಹ್ಮಸಂಭೂತನಾದ ಜೀವಾತ್ಮನು ವಿಷಯ ಭೋಗಗಳಲ್ಲಿ ತಲ್ಲೀನನಾದರೆ ಪುನಃ ಮೂಲಜ್ಞಾನದ ಅರಿವು ಹಾರಿಹೋಗುತ್ತದೆ. ಅಧೋಮುಖವಾದ ವಿಷಯಗಳನ್ನು ಕೆಳಮುಖವಾದ ಚಿತ್ತವೃತ್ತಿಯಿಂದ ತೀವ್ರವಾಗಿ, ಸಹಜವಾಗಿ ಗ್ರಹಿಸಿದಂತೆ; ಊರ್ಧ್ವಮುಖವಾದ ಮೂಲ ಪರವಸ್ತುವಿನ ಜ್ಞಾನವನ್ನು ಮಾಡಿಕೊಳ್ಳುವದು ಸುಲಭವಾಗುವದಿಲ್ಲ.
ಕಠೋಪನಿಷತ್ತು- ಭಗವದ್ಗೀತೆಗಳಂತೆ ಶಿವಕವಿಯು ಅಶ್ವತ್ಥವೃಕ್ಷದ ಕಲ್ಪನೆಯನ್ನು ಈ ವಿಲಕ್ಷಣವಾದ ತೆಂಗಿನಮರದ ನಿರೂಪದೊಡನೆ ವಾಚಕರಿಗೆ ಸನ್ನಿಹಿತಗೊಳಿಸಿದ್ದಾನೆ. ಇಲ್ಲಿಯೂ ತೆಂಗಿನಮರದ ಬೇರು ಆಕಾಶದಲ್ಲಿ ಬೆಳೆದಿವೆ. ಶಾಖೆಗಳು ಕೆಳಮುಖವಾಗಿವೆ. ಫಲಗಳು ಭೂಮಿಯನ್ನಾಶ್ರಯಿಸಿವೆ. ತೆಂಗು ಭೂಲೋಕದ ಕಲ್ಪವೃಕ್ಷ. ಅಶ್ವತ್ಥ ಹಾಗಲ್ಲ. ತೆಂಗು ಕಲ್ಪವೃಕ್ಷದಂತೆ ಎಲ್ಲವನ್ನೂ ಕೊಡಬಲ್ಲುದು. ಅಶ್ವತ್ಥದಿಂದ ಹೆಚ್ಚಿನ ಲಾಭ ಸಿಕ್ಕದು. ತೆಂಗಿನ ದೃಷ್ಟಾಂತ ಗೀತೋಪನಿಷತ್ತುಗಳಿಗಿಂತಲೂ ಮಿಗಿಲಾಗಿದೆ. ತೆಂಗಿನ ಮರವು ಎಷ್ಟು ಎತ್ತರವಾಗಿದೆಯೋ ಹಾಗೆ ಶಿವ-ಜೀವರಿಗೂ ಅಷ್ಟು
ಅಂತರವಿದೆ. ಶಿವಾಂಶಿಕನಾದ ಜೀವನು ಫಲವನ್ನಾಶ್ರಯಿಸಿ ನಿಲ್ಲುವದು ಸರಿಯಲ್ಲ. ಮೂಲವನ್ನು ಅರಿಯಲೇಬೇಕು. ನಿವೃತ್ತಿ ಮಾರ್ಗದಿಂದಲೇ ಪ್ರವೃತ್ತಿಯಳಿಯುವದು. ಪ್ರವೃತ್ತಿಪಥಕ್ಕಿಳಿದ ಜೀವನು ನಿವೃತ್ತಿಯನ್ನು ಸಾಧಿಸುವ ರಂಗಭೂಮಿಯು
ಭೂವಲಯವೇ ಆಗಿದೆ. ಭೂಲೋಕದಲ್ಲಿಯೇ ಮಾನವ ಜನ್ಮದ ಸಾರ್ಥಕತೆಯನ್ನು ಸಾಧಿಸಲು ಸಾಧ್ಯವಾಗುವದು. ಸಕಲ ಸೌಭಾಗ್ಯದ ತವರು ಭೂಲೋಕ. ಸಕಲಸಿದ್ಧಿಯ ಆಗರ ಇಹಲೋಕ, ಭೌತಿಕ-ಪಾರಮಾರ್ಥಗಳೆರಡನ್ನು ಸಾಧಿಸುವ ಸ್ಥಾನವೂ ಇದಾಗಿದೆ.
ಪ್ರಭುಲಿಂಗಲೀಲೆಯಲ್ಲಿ ಶಿವನು ಪಾರ್ವತಿಗೆ ಉತ್ತರಿಸಿದ ನಿರೂಪವು ಅತ್ಯಂತ ಸಮೀಚೀನವಾಗಿದೆ- ”ನನ್ನ ಸನ್ನಿಧಿಯಲ್ಲಿದ್ದ ಈ ಪುಣ್ಯ ಜೀವಿಗಳು ಪುಣ್ಯ ತೀರಿದ ಮೇಲೆ ಪುನಃ ಭೂಲೋಕಕ್ಕೆ ತೆರಳಬೇಕಾಗುವದು. ಅಲ್ಲದೆ ಯೋಗ ಬಲ್ಲ ಯೋಗಿಗಳು ಸಹ ಮಾನವ ಶರೀರಿಗಳಾಗಿ ಭೂಮಿಯಲ್ಲಿ ಭಕ್ತಿಮಾರ್ಗದಿಂದ ಅಮೃತ ಫಲವನ್ನು ಪಡೆಯಬಲ್ಲರು. ಅಮರರಾಗಬಲ್ಲರು. ನಿತ್ಯಮುಕ್ತರಾಗುವರು’. ಭೂಮಿ ಯಲ್ಲಿಯೇ ಸಕಲ ಭೋಗಭಾಗ್ಯಗಳುಂಟು. ತೆಂಗಿನಂಥ ಅಮೃತ ಫಲ ಪಡೆಯಲು
ಸಾಧ್ಯವಾಗುವದು. ಈ ಫಲದಲ್ಲಿ ತೀರ್ಥ ಪ್ರಸಾದಗಳೆರಡೂ ಸಮನ್ವಿತವಾಗಿವೆ. ವೀರಶೈವ ಸಿದ್ದಾಂತದ ಮುಖ್ಯ ಫಲಗಳು
ಪಾದೋದಕ ಪ್ರಸಾದಗಳು. ಇವೆರಡರಿಂದಲೇ ಶರಣಜೀವನ, ಶರಣತತ್ವ ತಿರುಳು ಮೆರಗುಗೊಂಡಿದೆ.
ತೆಂಗಿನ ಫಲವು ಸುಲಭವಾಗಿ ಸಿಕ್ಕುವದಿಲ್ಲ. ತೆಂಗಿನಕಾಯಿಯನ್ನು ದೇವರಿಗೆ ಒಡೆಯುವದು ಸಾಮಾನ್ಯವಾದರೂ, ಸಾಂಕೇತಿಕ ಅರ್ಥ ಅಡಗಿದೆ. ಅಂತೆಯೇ ಕವಿಯು ಇಲ್ಲಿ ಇದರಿಂದ ಅನೇಕಾರ್ಥಗಳನ್ನು ಅಭಿವ್ಯಂಜಿಸಿ ತರಂಗಾಯಮಾನ ವಾಗಿಸಿದ್ದಾನೆ. ಅಜ್ಞಾನವೆಂಬ ಕಾಯಿ (ಜೀವಾತ್ಮನ ಶರೀರ ಅಥವಾ ಕಾಯ)ಯ ಮೇಲಿನ ಮಹಾಮಾರಿಯಾದ ಮಾಯೆಯೆಂಬ ಘಟ್ಟಿಯಾದ ಸಿಪ್ಪೆಯನ್ನು ತೆಗೆದು ಮಮಕಾರವೆಂಬ ಜುಬ್ಬರವನ್ನು ಸುಲಿದು ಅಹಂಕಾರವೆಂಬ ಚಿಪ್ಪನ್ನು ಒಡೆದಾಗ, ಮಾಯೆ, ಮಮಕಾರ, ಅಹಂಕಾರಗಳು ಕಳಚಿಹೋಗಿ ಅಮೃತಸದೃಶ್ಯವಾದ ನಿರ್ಮಲವಾದ ಎಳೆನೀರು, ಖೊಬ್ಬರಿಗಳು ಪ್ರಾಪ್ತವಾಗುತ್ತವೆ. ಗುರುಕೃಪೆಯಿಂದ ಮಮಕಾರ-ಅಹಂಕಾರ ಮಾಯಾ ರಹಿತನಾದ ಶರಣನ ಹೃದಯವು ತೆಂಗಿನ ಹಾಲಿನಂತೆ ನಿರ್ಮಲವೂ ಖೊಬ್ಬರಿಯಂತೆ ಮಧುರವೂ ಆಗಿ ಶಿವನಿಗೆ ಸಮರ್ಪಿತ ವಾಗುತ್ತದೆ. ಇಂಥ ಶರಣನ ಹೃದಯವು ತೆಂಗಿನ ಹಾಲಿನಂತೆ ನಿರ್ಮಲವೂ ಖೊಬ್ಬರಿಯಂತೆ ಮಧುರವೂ ಆಗಿ ಶಿವನಿಗೆ ಸಮರ್ಪಿತವಾಗುತ್ತದೆ. ಇಂಥ ಶರಣನು ಊರ್ಧ್ವಮುಖಿಯಾಗಿ ಮೂಲ ತತ್ತ್ವವನ್ನು ಸೇರುತ್ತಾನೆ. ತ್ರಿಪದಿಯ ಅಂತರಾರ್ಥವು ಇಂತಾದರೆ, ವಾಚ್ಯಧ್ವನಿ ಕೆಳಗಿನಂತಿದೆ.
ಅಧಃ ಪ್ರವತ್ತಿಯ ಮಾನವನ ಮನಸ್ಸು ಈ ಸಂಸಾರ ವೃಕ್ಷದಲ್ಲಿ ವ್ಯಕ್ತವಾಗಿ ತೋರುವ ಸ್ತ್ರೀಯಳ ಕುಚ-ಫಲವನ್ನು ಕಂಡು, ಆ ಕ್ಷಣದಲ್ಲಿಯೇ ಯಾರ ಹಂಗಿಲ್ಲದೆ ಸುಲಭವಾಗಿ ಅಲ್ಲಿಗೆ ಏರುತ್ತದೆ; ಭೋಗಲಾಲಸೆಯಿಂದ ಮನಸ್ಸು ನಿವೃತ್ತವಾಗು
ವುದಿಲ್ಲ. ಈ ಅಧೋಮುಖವಾದ ಮನಸ್ಸು ಸಾಂಸಾರಿಕ ಭೋಗದಿಂದ ಊರ್ಧ್ವ ಮುಖವಾಗಬೇಕಾದರೆ ಗುರುಕರುಣೆ ಅತ್ಯವಶ್ಯಬೇಕು.
ಗುರು ಕೃಪೆಯಿಂದ ಶುದ್ಧಾಂತಃಕರಣಿಯಾದ ಜೀವನು ಊರ್ಧ್ವ ಸೃಷ್ಟಿಯಲ್ಲಿ ನಡೆಯಬೇಕಾಗುವದು. ಮರದ ಬೇರಿನ ಕೊಂಬೆಗಳಿಗೆ ರಸಿರುವಂತೆ, ದೇಹದ ಮೂಲಬೇರು-ಮೂಲಜ್ಞಾನವು; ಆಗಸವೆಂದರೆ-ಬ್ರಹ್ಮರಂದ್ರ, ಅದರಿಂದಲೇ ಎಲ್ಲ
ಚೇತನಗಳು ಚಲಿಸುತ್ತವೆ. ಸಣ್ಣ ಮೆದುಳಿನಿಂದಲೇ ಶರೀರದ ಎಲ್ಲ ಕ್ರಿಯೆಗಳಿಗೆ ಪ್ರೇರಣೆ ದೊರೆಯುತ್ತದೆ. ಇಲ್ಲಿ ನಾರಿಕೇಳಫಲವೆಂದರೆ ಇಷ್ಟಲಿಂಗವು. ಇದು ಶ್ರೀಗುರು ಕರುಣೆಯಿಂದ ಸಾಧ್ಯವಾಗುವದು. ಅವನಿಲ್ಲದೆ ಲಿಂಗದ ನೆಲೆಕಲೆಗಳು ತಿಳಿಯಲಾರವು. ಲಿಂಗದ ಉತ್ಪತ್ತಿಯೂ ಆಗುವದಿಲ್ಲ. ಯೋಗಾಭ್ಯಾಸಿಯಾದವನು ಬ್ರಹ್ಮರಂಧ್ರಕ್ಕೆರೆ ಬಹುದು. ಇಳಿದು ಬರುವದು ಕಠಿಣವಾಗುವದು. ಭ್ರಹ್ಮರಂಧ್ರದಿಂದಿಳಿದು ಜಾಗ್ರತಾವಸ್ಥೆಯಲ್ಲಿ ಫಲರೂಪ ಇಷ್ಟಲಿಂಗದ ಪೂಜೆ, ಅನುಸಂಧಾನವನ್ನು ಮಾಡಿ ನಿತ್ಯಮುಕ್ತರಾಗುವದೇ ವೀರಶೈವ ಸಿದ್ದಾಂತ.
ವೀರಶೈವರ ಪರಮ ಗುರುದೇವನು ಶಿಷ್ಯನ ಸಹಸ್ರಾರದಲ್ಲಿಯ ಚಿಚ್ಚ್ಯತನ್ಯವನ್ನು ಯೋಗ ಶಕ್ತಿಯಿಂದ ಶಿವದೀಕ್ಷೆಯಲ್ಲಿ ಇಷ್ಟಲಿಂಗವನ್ನಾಗಿ, ಅರುವಿನ ಕುರುಹನ್ನಾಗಿ ಕರುಣಿಸಬಲ್ಲನು. ಭೌತಿಕ ಮರವಾದ ತೆಂಗಿನ ಫಲದಲ್ಲಿ ತಂಪು, ಸೋಂಪು,
ಕಂಪುಗಳಿರುವಂತೆ, ಈ ಆಧ್ಯಾತ್ಮಿಕ ವೃಕ್ಷವಾದ ದೇಹದಲ್ಲಿ ಫಲರೂಪವಾದ
ಇಷ್ಟಲಿಂಗದಲ್ಲಿ ಶಿವಾತ್ಮವಿದ್ಯೆಯ ಸಾರಸರ್ವಸ್ವವು ಅಡಕವಾಗಿದೆ. ಲಿಂಗ ಸಾಕ್ಷಾತ್ಕಾರ
ದಿಂದಲೇ ಶರಣ ಮಾರ್ಗದ ಭದ್ರ ಬುನಾದಿ. ಅದಕ್ಕಾಗಿಯೇ ಜ.ಚ.ನಿ. ಯವರು
“ವೀರಶೈವ ಸಾಂಸ್ಕಾರಿಕ ಜೀವನ ಕಲೆಯನ್ನು ಬೋಧಿಸುವ ಪರಿಣತ ಪ್ರಜ್ಞೆಯ
ಪದ್ಯವಿದು’ ಎಂದು ಅನುಭವ ಪೂರ್ಣವಾಗಿ ಉಲ್ಲೇಖಿಸಿದ್ದು ಯಥೋಚಿತವಾಗಿದೆ.
ಈ ಚಿಕ್ಕದಾದ ತ್ರಿಪದಿಯಲ್ಲಿ ಅದೆಷ್ಟು ಅರ್ಥಗಳನ್ನು ಅಳವಡಿಸಿದ್ದಾರೆಂಬುದು
ಗಮನೀಯವಾಗಿದೆ. ಇಲ್ಲಿ ಶಿವಕವಿಯ ಅನುಭವ ಮಡುಗಟ್ಟಿದೆ. ಕೆನೆಗಟ್ಟಿದೆ.