ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಧಾರವಾಹಿ: ಭಾಗ-32

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

  

ಹೊರಗುರಿಯಲೊಳಗನ್ನ | ಪರಿಪಕ್ವವಾದಂತೆ

ಹೊರಗಣ ಸತ್ಕ್ರಿಯಾಂ-ತರದ ಸುಜ್ಞಾನವೆಂ-

ದೊರೆದ ಶ್ರೀಗುರುವೆ ಕೃಪೆಯಾಗು     || ||

 

ಈ ದಾರ್ಶನಿಕ ಶಿವಕವಿಯು ಲಿಂಗಭಕ್ತನು ಲಿಂಗರೂಪನು ಹೇಗಾಗಬಲ್ಲ ನೆಂಬುದನ್ನೂ, ಲಿಂಗಮಯನೆನಿಸಿದ ಲಕ್ಷಣವನ್ನು ದೃಷ್ಟಾಂತ ಪೂರ್ವಕವಾಗಿ ಪ್ರತಿಪಾದಿಸುತ್ತಾನೆ.

 

ಮನುಷ್ಯನಿಗೆ ಎರಡು ಹಸಿವೆಗಳು, ಒಂದು ಹೊಟ್ಟೆಯದು; ಇನ್ನೊಂದು ನೆತ್ತಿಯದು. ಸಾಮಾನ್ಯವಾಗಿ ಸಕಲರೂ ಹೊಟ್ಟೆ ತುಂಬಿಕೊಳ್ಳಲೆಂದು ಪ್ರಯತ್ನಿಸುವರು. ನೆತ್ತಿಯನ್ನು ತುಂಬಿಸಿಕೊಳ್ಳುವವರು ಬಹಳ ವಿರಳ. ಹೊಟ್ಟೆಯನ್ನು ತುಂಬಿಸಿಕೊಳ್ಳಲು ಪದಾರ್ಥಗಳಿದ್ದರೂ ಅವನ್ನು ಸಿದ್ಧಗೊಳಿಸಬೇಕಾಗುವದು. ಪಾಕವಾಗದೇ ದೇಹಕ್ಕೆ ಹಿತವೆನಿಸುವದಿಲ್ಲ. ಕಾರಣ ಅಡಿಗೆಯು ಸಿದ್ಧವಾಗಬೇಕಾದರೆ ಎಲ್ಲ ಸಾಧನ-ಸಾಮಗ್ರಿ ಗಳನ್ನು ಕೂಡಿಸಬೇಕು. ನಂತರ ಸ್ವಚ್ಛಗೊಳಿಸಿ ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ ಒಲೆಯ ಮೇಲಿಟ್ಟರಾಗುವದಿಲ್ಲ. ಕೆಳಗೆ ಚನ್ನಾಗಿ ಅಗ್ನಿಯನ್ನು ಪುಟಗೊಳಿಸಬೇಕಾಗುವದು. ಅಗ್ನಿಯ ಸಂಸ್ಕಾರವಿಲ್ಲದೆ ಅಕ್ಕಿಯು ಬೇಯದು. ಅನ್ನವಾಗದು. ಇದರಂತೆ ಅಂಗನು ಲಿಂಗಮಯನಾಗಬೇಕಾದರೆ ಸತ್ಕ್ರಿಯೆ ಹಾಗೂ ಸುಜ್ಞಾನಗಳ ಸಂಸ್ಕಾರ ಅವಶ್ಯಬೇಕು.

 

ಲಿಂಗಮಯನಾಗುವದಕ್ಕೆ ಸುಜ್ಞಾನ-ಸತ್ಕ್ರಿಯೆಗಳು ಮುಖ್ಯವೆಂಬುದನ್ನು ಒತ್ತಿ ಹೇಳುತ್ತಾನೆ. ಸುಜ್ಞಾನ-ಸತ್ಕ್ರಿಯೆಗಳ ಸಮನ್ವಯವೇ ವೀರಶೈವ ಸಿದ್ಧಾಂತ. ಕೆಲವು ಶಾಸ್ತ್ರಕಾರರು ಮೋಕ್ಷ ಪ್ರಾಪ್ತಿಗೆ ಕೇವಲ ಜ್ಞಾನವನ್ನು ಪ್ರತಿಪಾದಿಸಿದರೆ, ಹಲವರು ಯಜ್ಞಾದಿ ಕರ್ಮವನ್ನು ಬೋಧಿಸುತ್ತಾರೆ. ನಮ್ಮವರು ಜ್ಞಾನ-ಕರ್ಮಗಳೆರಡೂ ಬೇಕೆಂಬುದನ್ನು ಯುಕ್ತಿ ಯುಕ್ತನಾಗಿ ಮಂಡಿಸುತ್ತಾರೆ.

 

ಜ್ಞಾನಂ ಪ್ರಧಾನಂ ನ ತು ಕರ್ಮಹೀನಂ

ಕರ್ಮಪ್ರಧಾನಂ ನ ಚ ತದ್ವಿಹೀನಮ್ |

ತಸ್ಮಾದ್ವಯೋರೇವ ಭವೇತ್ಪ್ರಸಿದ್ಧಿಃ

ಹ್ಯೇಕಪಕ್ಷೋ ವಿಹಗಃ ಪ್ರಯಾತಿ |

 

ಕರ್ಮರಹಿತವಾದ ಜ್ಞಾನವು ಪ್ರಧಾನವಾಗಬಾರದು. ಅಲ್ಲದೆ ಜ್ಞಾನಹೀನವಾದ ಕರ್ಮವೂ ಮುಖ್ಯವೆನಿಸಬಾರದು. ಉಭಯ ಪ್ರಾಧ್ಯಾನತೆಯಿಂದಲೇ ಮೋಕ್ಷ ಸಿದ್ಧಿಯು ಸಾಧ್ಯವಾಗುತ್ತದೆ. ಯಾಕಂದರೆ ಒಂದೇ ರೆಕ್ಕೆಯಿಂದ ಪಕ್ಷಿಯು ಆಕಾಶದಲ್ಲಿ ಹಾರಲಾರದು. ಅದು ಎರಡೂ ರೆಕ್ಕೆಗಳನ್ನು ಬಡಿಯುತ್ತ ಮಾತ್ರ ಸಂಚರಿಸಬಲ್ಲುದು. ಅದರಂತೆ ಸಾಧಕನು ಸದ್ಗುರುವಿನಿಂದ ಲಿಂಗವನ್ನು ಪೂಜಿಸುವ ಅನುಸಂಧಾನ ಮಾಡುವ ಸುಜ್ಞಾನವನ್ನೂ ಸಂಪಾದಿಸಬೇಕು. ಸುಜ್ಞಾನಯುಕ್ತವಾದ ಆಚರಣೆಯನ್ನು ಅನುಸರಿಸಬೇಕು. ಕರಗತಮಾಡಿಕೊಳ್ಳಬೇಕು. ವಿಜ್ಞಾನ ಕಲಿಯುವ ವಿದ್ಯಾರ್ಥಿಗಳಿಗೆ ಮೊದಲು ಸಿದ್ಧಾಂತವನ್ನು ತಿಳಿಸಿ ನಂತರ ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ ಗುರುಗಳು. ನಂತರ ಅವರಿಗೆ ಮಾಡಿ ಹಚ್ಚುತ್ತಾರೆ. ಹಾಗೇನೆ ವೀರಶೈವ ಸಿದ್ಧಾಂತ ದಲ್ಲಿಯೂ ಗುರುಗಳು ಶಿವಜ್ಞಾನವನ್ನು ತಿಳಿಸಿ ಮತ್ತು ಲಿಂಗವನ್ನು ಪೂಜಿಸುವ ವಿಧಾನವನ್ನು ಹೇಳಿ ಕೊಡುವರು. ಅವರು ಬೋಧಿಸಿದಂತೆ ಲಿಂಗಪೂಜಾ ಪದ್ಧತಿಯನ್ನು ಗುರು-ಲಿಂಗ-ಜಂಗಮರ ದಾಸೋಹದ ರೀತಿಯನ್ನು ಅಳವಡಿಸಿಕೊಳ್ಳ ಬೇಕಾಗುವದು. ಅಂದರೆ ಮಾತ್ರ ಅಂಗನು ಲಿಂಗಮಯನಾಗುವನು. ಲಿಂಗಪೂಜೆ ಯೆಂಬುದು ಪ್ರಯೋಗವಿದ್ದಂತೆ. ಅಂತೆಯೇ ನಮ್ಮ (ಶರಣ) ಸಿದ್ಧಾಂತಕ್ಕೆ ಪ್ರಾಯೋಗಿಕಸಿದ್ಧಾಂತ ಅಥವಾ ಪ್ರಾಯೋಗಿಕದರ್ಶನವೆಂದು ಕರೆದಿದ್ದಾರೆ. ಆದ್ದರಿಂದಲೇ ಇದು ಅತ್ಯಂತ ಮಹತ್ವವನ್ನು ಹೊಂದಿದೆ.

 

ಅನುಭವಿಗಳು ಲಿಂಗಾಂಗಸಮರಸ ಅಥವಾ ಮುಕ್ತಿಗೆ ಜ್ಞಾನಕ್ರಿಯೆಗಳೆರಡೂ ಅತ್ಯವಶ್ಯವೆಂದು ಪ್ರತಿಪಾದಿಸಿದ್ದಾರೆ. ‘ಕೈವಲ್ಯ ಪದ್ಧತಿ’ ಯಲ್ಲಿ ನಿಜಗುಣರು-

 

ಸುಮ್ಮನಾಗದರಿವಿನಿಂದವೆ ಮುಕುತಿ

ನೆಮ್ಮಿಲೇಸೆನಿಸುವ ಗುಣಗಣವಿಲ್ಲದವನಿಗೆ

 

ಮತ್ತು ‘ಪರಮಾನುಭವ ಬೋಧೆ’ ಯಲ್ಲಿಯೂ ಕೆಳಗಿನಂತೆ ಹಾಡಿದ್ದಾರೆ.

 

ಅರುವಿನೊಳ್ಕೂಡಿ ತನ್ನನು ವಿಚಾರಿಸುವಾಗ

ಳರಿವುಮಾ ಸುವಿಚಾರ ಕ್ರಿಯೆಯವು

ನೆರೆಬಿಚ್ಚದಿರೆ ಮುಕ್ತಿಯೆಂಬುದು ಮಿಶ್ರ

ವರಿ ನೀನು ನಿರ್ಮಳಮತಿವಂತೆ

 

ಶ್ರೀಕಂಠ ಶಿವಾಚಾರ್ಯರು ತಾವೇ ಪ್ರಶ್ನಿಸಿ ಉತ್ತರಿಸಿದ್ದಾರೆ-

 

ಕಿಂ ಮೋಕ್ಷತರೋರ್ಬಿಜಮ್ ?

ಸಮ್ಯಕ್ ಜ್ಞಾನಂ ಕ್ರಿಯಾಸಹಿತಮ್

 

ಮೋಕ್ಷವೆಂಬ ವೃಕ್ಷದ ಬೀಜವಾವುದೆಂದರೆ ಕ್ರಿಯಾಸಹಿತವಾದ ಸುಜ್ಞಾನವಾಗಿದೆ. ಎಲ್ಲ ಶಿವಶರಣರೂ ಕ್ರಿಯಾಜ್ಞಾನ ಸಮಸಮುಚ್ಚಯವನ್ನು ಚೆನ್ನಾಗಿ ವಿವರಿಸಿದ್ದಾರೆ. ದೇವರ ದಾಸಿಮಾರ್ಯರು-

 

ಅಗ್ನಿ ಸುಡಲಲ್ಲದೆ ಸುಳಿಯಲರಿಯದು.

ವಾಯು ಸುಳಿವುದಲ್ಲದೆ ಸುಡಲರಿಯದು.

ಆ ಅಗ್ನಿ ವಾಯು ಕೂಡಿದಲ್ಲದೆ ಅಡಿ ಇಡಲರಿಯದು.

ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ ರಾಮನಾಥ.

 

ಅಗ್ನಿ-ವಾಯುಗಳೆರಡೂ ಕೂಡಿದಲ್ಲದೆ ಸುಡುವ ಕ್ರಿಯೆ ನಡೆಯದು. ಹಾಗೆ ಸಾಧಕವ ಕ್ರಿಯಾ-ಜ್ಞಾನಗಳನ್ನು ಅರಿತು ಸಮನ್ವಯ ಮಾಡಿಕೊಳ್ಳಬೇಕು ಶಿವಲೆಂಕ ಮಂಚಣ್ಣಗಳು-

 

ಕ್ರೀಯ ಮರೆದಲ್ಲಿ ಅರಿವು ಹೀನವಾಗಿಪ್ಪುದು,

ಅರಿವ ಮರೆದಲ್ಲಿ ಜ್ಞಾನ ಹೀನವಾಗಿಪ್ಪುದು,

ಜ್ಞಾನವ ಮರೆದಲ್ಲಿ ಬೆಳಗಿನ ಕಳೆ ನಷ್ಟವಾಯಿತ್ತು.

ಈಶಾನ್ಯಮೂರ್ತಿ ಮಲ್ಲಿಕಾರ್ಜುನ ಲಿಂಗವು.

ಅವರಿಗೆ ಮರೆಯಾಗಿ ತೊಲಗಿದ.

 

ಅಮುಗಿದೇವಯ್ಯಗಳು-

 

ಜ್ಞಾನದಲರಿಯದಡೇನಯ್ಯ, ಕೀಯನಾಚರಿಸದನ್ನಕ್ಕ ?

ನೆನೆದ ಮಾತ್ರದಲ್ಲಿ ಅಹುದೆ, ಕಾರ್ಯದಲಲ್ಲದೆ ?

ಕುರುಡ ಕಾಣ ಪಥವ, ಹೆಳವ ನಡೆಯಲರಿಯ

ಒಂದಿಲ್ಲದಿರ್ದಡೊಂದಾಗದು

ಜ್ಞಾನವಿಲ್ಲದಿರ್ದ ಕ್ರೀಜಡನು

ಕ್ರೀಯಿಲ್ಲದ ಜ್ಞಾನ ವಾಗ್‌ಜಾಲ ಭ್ರಾಂತು

ಇದು ಕಾರಣ ಸಿದ್ಧಸೋಮನಾಥಲಿಂಗವ ಕೂಡುವ

ಶರಣಂಗೆ ಎರಡೂ ಬೇಕು

 

ಆಯ್ದಕ್ಕಿ ಮಾರಯ್ಯ ಶರಣರು-

 

ಮನದಲ್ಲಿ ಹುಟ್ಟಿದ ಅರಿವು

ಮಾಡುವ ಮಾಟದಲ್ಲಿ ಕಾಣಬಹುದು.

ಶರಣರ ಸಂಗಕ್ಕೆಳಸಿದ ಚಿತ್ತವ

ಅನುಭಾವದಲ್ಲಿ ಕಾಣಬಹುದು

ಒಳಹೊರಗೆ ತೆರೆಹಿಲ್ಲದ ಕೂಟ ನಿನ್ನದು

ಅಮರೇಶ್ವರ ಲಿಂಗದಲ್ಲಿ ಸಂಗನಬಸವಣ್ಣಾ

ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.

 

ಜ್ಞಾನನಿಧಿ ಚನ್ನಬಸವಣ್ಣನವರು-

 

ಕ್ರಿಯೆ ಜಡವೆಂಬರು, ಜ್ಞಾನ ಅಜಡವೆಂಬರು, ಅದೆಂತಯ್ಯಾ ?

ನೀತಿಯು ಹೇಳಿದುದು ಜಡವೆ ?

ಕಷ್ಟವಿಲ್ಲದೆ ಬಂದಂತೆ ಬೊಗಳಿ ಭೋಗಿಸಿ

ಭವಕ್ಕೆ ಹೋಗುವದು ಅಜಡವೆ ?

ಕ್ರಿಯಾ-ಜ್ಞಾನವೆಂಬ ಉಭಯ ಶಬ್ದಾರ್ಥವನರಿಯದೆ,

ಕಂಡ ಕಂಡ ಹಾಗೆ ಬೊಗಳುವ ಹೊಲೆಮಾದಿಗರನು ಏನೆಂಬೆ,

ಕೂಡಲ ಚನ್ನಸಂಗಮದೇವಾ ? || ೪೪೦ ||

 

ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ

ಜ್ಞಾನವೆಂದಡೆ ತಿಳಿಯುವುದು

ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು,

ಪರಸ್ತ್ರೀಯ ಭೋಗಿಸಬಾರದೆಂಬುದ ಜ್ಞಾನ,

ಅದರಂತೆ ಆಚರಿಸುವುದೆ ಕ್ರಿಯೆ.

ಅಂತು ಆಚರಿಸದಿದ್ದಡೆ, ಅದೆ ಅಜ್ಞಾನ ನೋಡಾ

ಕೂಡಲ ಚನ್ನಸಂಗಮದೇವಾ ॥ ೧೦೮೭ ॥

 

ಮೇಲಿನ ವಚನಗಳಲ್ಲಿ ಯಾವತ್ತೂ ಶರಣರು ಜ್ಞಾನ-ಕ್ರಿಯೆಗಳ ಸಂಗಮವನ್ನು  ಸುಂದರವಾಗಿ ಪ್ರತಿಪಾದಿಸಿದ್ದಾರೆ. ಜ್ಞಾನ-ಕ್ರಿಯೆಗಳಿಲ್ಲದೆ ಲಿಂಗಾಂಗ ಸಾಮರಸ್ಯದ ಸುಖ ಸಮನಿಸುವದಿಲ್ಲ. ಕ್ರಿಯೆಯನ್ನು ಮರೆತರೆ ಅರಿವು ಹೀನವೆನಿಸುವದು. ಅರಿವನ್ನು ಮರೆತರೆ ಜ್ಞಾನ ಹೀನವಾಗುವದು. ಶರಣರ ವ್ಯಾಖ್ಯಾನ ಬಹುಸೂಕ್ಷ್ಮವಾಗಿದೆ. ಕ್ರಿಯೆ

ಮತ್ತು ಅರಿವುಗಳ ಸಮನ್ವಯದಲ್ಲಿಯೇ ಜ್ಞಾನದ ಬೆಳಕು ಬೆಳಗುವದೆಂದಿದ್ದಾರೆ. ಈ ಬೆಳಕೇ ಅನುಭಾವ.  ಕ್ರಿಯೆಯಿಲ್ಲದ ಜ್ಞಾನದಿಂದ ಸಾಧ್ಯವು ಸಿಗುವದಿಲ್ಲ. ಯಾಕೆಂದರೆ ಕುರುಡನೇ ತನ್ನ ಪಥವನ್ನು ಗುರುತಿಸಲಾರ. ಅದರಂತೆ ಹೆಳವನು ಪಥವನ್ನು ತಿಳಿದರೂ ಆ ದಾರಿಯನ್ನು ತುಳಿಯಲಾರನು ಅವರಿಬ್ಬರೂ ಒಂದುಗೂಡಿದಲ್ಲಿ ತಮ್ಮ ಗುರಿಯನ್ನು ಮುಟ್ಟಬಹುದು. ಹಾಗೆ ಕೇವಲ ಕ್ರಿಯೆ ಕುರುಡನಂತಾದರೆ ಕೇವಲ ಜ್ಞಾನ ಹೆಳವನಂತಿದೆ. ಒಂದಕ್ಕೆ ಚಾಲನೆಯಿದ್ದರೆ ತನ್ನ ಗುರಿಯನ್ನು ಗುರುತಿಸುವ ಶಕ್ತಿಯಿಲ್ಲ. ಇನ್ನೊಂದಕ್ಕೆ ಗುರಿ ನೋಡುವ ಶಕ್ತಿಯಿದ್ದರೆ ಚಾಲನ ಶಕ್ತಿಯಿಲ್ಲ. ಕಾರಣ ಕ್ರಿಯಾ ಜ್ಞಾನಗಳೆರಡೂ ಶಿವಪಥವನ್ನು ತಲುಪಿಸಲು ಶಕ್ಯವಾಗುವವು ಮತ್ತು ಜ್ಞಾನಕ್ಕೆ ಮೂರ್ತತೆಯಿಲ್ಲ, ಅದು ಮಾಡುವ ಮಾಟದಿಂದಲೇ ವೇದ್ಯವಾಗಬೇಕು. ಅಂದ ಬಳಿಕ ಕ್ರಿಯಾ-ಜ್ಞಾನಗಳಿಂದಾದ ಅನುಭಾವದಲ್ಲಿ ನೆಲೆನಿಂತ ಶರಣರನಿಲವು ಘನವಾದುದು. ಷಟ್‌ಸ್ಥಲ ಬ್ರಹ್ಮಿ ಜ್ಞಾನನಿಧಿ ಚನ್ನಬಸವಣ್ಣನವರ ಕ್ರಿಯಾ-ಜ್ಞಾನಗಳ ವಿಮರ್ಶೆ ಮಿಗಿಲಾಗಿದೆ. ಸುಸ್ಪಷ್ಟವಾದ ಕ್ರಿಯಾ-ಜ್ಞಾನಗಳ ಅಭಿನ್ನತೆಯನ್ನು ಅಥವಾ ಸಮಸಮುಚ್ಚವನ್ನು ಒತ್ತಿ ಹೇಳಿದ್ದಾರೆ.

 

ಶಿವಾದ್ವೈತ ದರ್ಶನ’ದಲ್ಲಿ ಜ.ಚ.ನಿ. ಯವರು ಜ್ಞಾನಕ್ರಿಯೆಗಳ ವಿಚಾರವನ್ನು ಮನನೀಯವಾಗಿ ತಿಳಿಸಿದ್ದಾರೆ-

 

“ಶಿವಾದ್ವೈತ ತತ್ತ್ವದ ಕ್ರಿಯೆಯೆಂದರೆ ಕರ್ಮವಲ್ಲ. ಕರ್ಮನಿರ್ಮಲ ವಾದುದೇ ಕ್ರಿಯೆ. ಕ್ರಿಯಾ ದೀಕ್ಷೆಯ ತೇಜ ಉದಯವಾದೊಡನೆ ಕರ್ಮಕತ್ತಲೆ ಹರಿದು ಹೋಗಿರುತ್ತದೆ. ಅನಿತ್ಯ ಫಲದಾಯಕ ಪ್ರಾಕೃತ ಯಾಗಾದಿ ಜಡಕರ್ಮಗಳೆಲ್ಲ ಕಾಲ್ಕೀಳುತ್ತವೆ. ಕಾರಣ ಕರ್ಮಕ್ಕೆ ಮರಳಿ ಅವಕಾಶವಿಲ್ಲ, ಕರ್ಮವೆಂದರೆ ಅನಾಚಾರ, ಕ್ರಿಯೆಯೆಂದರೆ ಸದಾಚಾರ. ಜ್ಞಾನವಿಲ್ಲದ್ದು ಕರ್ಮ, ಜ್ಞಾನವುಳ್ಳದ್ದು ಕ್ರಿಯೆ. ಕರ್ಮ ರೋಗ; ಕ್ರಿಯೆ ಯೋಗ, ʼ’ಪೂರ್ವಜನ್ಮಕೃತಂ ಕರ್ಮ ವ್ಯಾಧಿರೂಪೇಣ ಬಾಧತೇʼʼ ಎಂಬುದು ಕರ್ಮವೆ ರೋಗವೆಂಬುದನ್ನು ಸಾರಿದೆ. ʼʼಯೋಗಃ ಕರ್ಮಸು ಕೌಶಲಂʼʼ  ಕರ್ಮ ಕೌಶಲ್ಯವೆ ಅಂದರೆ ಕ್ರಿಯೆಯೆ ಯೋಗವೆಂದು ಗೀತೆ ಪ್ರತಿಪಾದಿಸಿದೆ. ಜೀವನದ ಆಚಾರ ವಿಚಾರ ರೂಪ ಧರ್ಮವೆ ಕ್ರಿಯೆ. ಇಲ್ಲಿ ಕ್ರಿಯೆಯೆಂಬ ಪದವು ಬಹುಸೂಕ್ಷ್ಮ ವಾಗಿ ಸೂಚ್ಯವಾಗಿದೆ. ನಿರಂತರ ನಡೆವ ನಮ್ಮ ಒಳಹೊರಗಿನ ಕಾರ್ಯಗಳೆಲ್ಲ ಕ್ರಿಯೆಗಳಾಗಬೇಕಾದರೆ ಶಿವಾರ್ಪಣವಾಗಿರಬೇಕು; ಶಿವಾರ್ಥವಾಗಿರಬೇಕು. ಜೀವನ ಪ್ರತಿಯೊಂದು ಚಲನವೂ ಶಿವಮಯವಾಗಬೇಕು. ಉಸಿರಾಡುವಾಗ, ಉಲ್ಲಾಸಿಸು ವಾಗ, ಸ್ನಾಯು ಸ್ಪಂದಿಸುವಾಗ ಹೃದಯ ಹಂಬಲಿಸುವಾಗ, ಕಣ್ಣು ಎವೆ ಹಳಚುವಾಗ, ನುಡಿವಾಗ ನಡೆವಾಗ ಕುಳಿತಾಗ ಮಲಗಿದಾಗ ಅರಿವಾಗ ಆಲೋಚಿಸುವಾಗ ಯಾವುದೇ ಕಾರ್ಯವನ್ನು ಕಾಯಕವನ್ನು ಮಾಡುವಾಗ ಶಿವಭಾವ ಸಮನ್ವಿತರಾಗಿರುವುದೆ ಕ್ರಿಯೆಯೆ೦ದೆನಿಸುತ್ತದೆ”.ʼʼ

 

ಕ್ರಿಯಾ ಜ್ಞಾನಗಳೆರಡೂ ಜೀವನ ರಥದ ಚಕ್ರಗಳು. ಇವಿಲ್ಲದೆ ರಥ ಸುಗಮವಾಗಿ ಸಾಗದು, ಒಂದೇ ಗಾಲಿಯಿಂದ ಗಮ್ಯಸ್ಥಾನವನ್ನು ಮುಟ್ಟದು. ಒಂದೇ ರೆಕ್ಕೆಯಿಂದ ಪಕ್ಷಿ ಹಾರದು, ಲಿಂಗಾಂಗ ಸಮರಸ ಅಥವಾ ಶಿವಯೋಗದ ನಿಲವನ್ನು ಸಾಧಿಸಲು ಜ್ಞಾನ-ಕ್ರಿಯೆಗಳೆರಡೂ ಅವಶ್ಯ. ಅಣ್ಣ ಬಸವಣ್ಣ ಈ ಜ್ಞಾನ ಕ್ರಿಯೆಗಳ ಸಮನ್ವಯದಿಂದಲೇ ಲಿಂಗವಾಗಿದ್ದ, ಜಂಗಮ ಪ್ರಾಣಿಯೆನಿಸಿದ್ದ, ನಡೆ-ನುಡಿಯಲ್ಲಿ ಏಕಾರ್ಥವನ್ನು ಸಾಧಿಸಿದ ಮಹಾನುಭಾವಿಯಾಗಿದ್ದ ಅವನಲ್ಲಿಯೇ ಕೈಲಾಸ ನೆಲಸಿತ್ತು.

 

ಪರಮಗುರವೆ ! ಎನ್ನ ಸತ್ಕ್ರಿಯೆಯು ಅಂತರಂಗದ ಸುಜ್ಞಾನವನ್ನು ಹಾಗೂ ಅನುಭಾವವನ್ನು ಹೊರಸೂಸುವಂತೆ ಹರಸು, ಎನ್ನ ಸತ್ಕ್ರಿಯೆಯಿಂದಲೇ ಎನ್ನ ಶರಣ ಭಾವ ವ್ಯಕ್ತವಾಗುವಂತಾಗಲಿ.

 

 

ಹತ್ತು ಚಕ್ರಗಳಲ್ಲಿ ಇಷ್ಟಲಿಂಗವು  (ಹತ್ತು ಚಕ್ರಗಳ ಗೊತ್ತುಗುರಿ)

 

 

ಕುವರ ಕೇಳೀ ಲಿಂಗ | ನವಚಕ್ರದೊಳಗೆ ತಾ-

ನವ ಲಿಂಗವಾಗಿ ತವೆ ರಾಜಿಸವುದ ಪೇ-

ಳುವೆನೆಂದ ಗುರುವೆ ಕೃಪೆಯಾಗು    ||೧೩೮||

 

ಸದ್ಗುರು ಕೃಪೆಯಿಂದ ಇಷ್ಟಲಿಂಗವನ್ನು ಸತ್ಕ್ರಿಯಾ-ಸುಜ್ಞಾನಗಳಿಂದ ಆರವಯವಗಳಲ್ಲಿ ಧರಿಸುವ ಕ್ರಮವನ್ನು ಅರಿತುಕೊಂಡ ಮೇಲೆ ಸೂಕ್ಷ್ಮ ಶರೀರದ (ಅಂತರಂಗ) ದಲ್ಲಿ ಲಿಂಗಧಾರಣೆಯ ನೆಲೆಯನ್ನು ಹಾಗೂ ಆ ವಿವರವನ್ನು ಶಿವಕವಿಯು ಇನ್ನೂ ತಿಳಿಸುತ್ತಾನೆ. ಸ್ಥೂಲ ತನುವಿನ ಬಹಿರಿಂದ್ರಿಯಗಳಲ್ಲಿ ಲಿಂಗಧಾರಣೆಯ ಕ್ರಮವನ್ನು ತೀವ್ರವಾಗಿ ತಿಳಿಯಬಹುದು. ಆದರೆ ಅಂತರಂಗದ ಲಿಂಗಧಾರಣೆಯ ಕ್ರಮ ಶ್ರಮದಾಯಕ ಹಾಗೂ ಸೂಕ್ಷ್ಮ ಗ್ರಾಹ್ಯವಾದುದು. ಆದರೂ ಪ್ರಯತ್ನದಿಂದ ಅರಿಯಲೇಬೇಕು. ಈಗಾಗಲೇ ನವಚಕ್ರಗಳಲ್ಲಿ ನವಬ್ರಹ್ಮರು ನವಲಿಂಗವಾದುವನ್ನು ಅರಿತಿದ್ದೇವೆ. ಅದುಕಾರಣ ಒಳಹೊರಗೂ ಏಕರೂಪವಾಗುವದೇ ವೀರಶೈವನ ಮುಖ್ಯ ಗುರಿಯಲ್ಲವೆ ? ಮತ್ತು ಇಲ್ಲಿ ಶಿವಭಕ್ತನು ಸತ್ಕ್ರಿಯಾ ಸುಜ್ಞಾನಪೂರ್ವಕ ನಿವೃತ್ತಿ ಕ್ರಮದಿಂದ ಮಹಾಲಿಂಗದಲ್ಲಿ ಬೆರೆಯುವ ಪೂಜಾ ವಿಧಾನವೂ ಅಭಿವ್ಯಕ್ತವಾಗಿದೆ.

ಶಿಷ್ಯನ ಬಿನ್ನಹದಂತೆ ಗುರುವು ನುಡಿಯಬ್ರಹ್ಮವನ್ನು ನಡೆಗೆ ತಂದಿರಿಸುವಾಗ ನವಚಕ್ರಗಳಲ್ಲಿಯ ನವಚೈತನ್ಯವನ್ನು ಒಬ್ಬುಳಿಮಾಡಿ ಇಷ್ಟಲಿಂಗದಲ್ಲಿ ಕರುಣಿಸಿದ ಕಥೆಯನ್ನು ಆಲಿಸಿದ್ದೇವೆ. ಹಿಂದೆ ಅಭ್ಯಸಿಸಿದ್ದೇವೆ. ನವಚಕ್ರಗಳ ವಿವರದೊಡನೆ ನವಬ್ರಹ್ಮರ ದರ್ಶನ ಮಾಡಿದ್ದೇವೆ. ಆ ಬ್ರಹ್ಮ ಚೈತನ್ಯವೆ ಸದ್ಗುರುವಿನ ಶಿವಯೋಗ ಶಕ್ತಿಯಿಂದ ಇಷ್ಟಲಿಂಗವಾಗಿ ಶಿಷ್ಯನ ಅಂಗೈಗೆ ಆಗಮಿಸಿದೆ. ಅದು ಸೃಷ್ಟಿ ಕ್ರಮ ಸೃಷ್ಟಿಯು ಪ್ರವೃತ್ತಿ ಪಥಕ್ಕಿಳಿಸುವದು. ಪ್ರವೃತ್ತಿ ಕ್ರಮದಿಂದ ನಿತ್ಯತ್ವ ಲಭಿಸದು. ನಿವೃತ್ತಿಯನ್ನು ಸಾಧಿಸಬೇಕಾಗುವದು. ಅದುಕಾರಣ ನಿವೃತ್ತಿಮಾರ್ಗದಲ್ಲಿ ಮುನ್ನಡೆಯ ಬೇಕಾಗುವದು. ಆಧಾರಾದಿ ಚಕ್ರಗಳಲ್ಲಿ ಆಚಾರಾದಿ ಲಿಂಗಗಳನ್ನು ಅನುಸಂಧಾನ ಮಾಡುತ್ತ ಹತ್ತು ಚಕ್ರಗಳನ್ನು ಹತ್ತಿ ಮಹಾಲಿಂಗದಲ್ಲಿ ಕೂಡುವ ಕಲೆಯನ್ನು ಈ ಕಳಾಗುರುವು ಕರುಣೆಯಿಂದ ಉಪದೇಶಿಸತೊಡಗಿದ್ದಾನೆ- ಕುವರ ! ಕೇಳು” ಎಂದು ಸಂಬೋಧಿಸಿ ಆತ್ಮೀಯತೆಯಿಂದ ತತ್ವವನ್ನು ತಿಳಿಸಿ ಗುರು ತಂದೆಯ ಘನತೆ ಅಪಾರವಾದುದು.

 

ವಾಮಕರದಲ್ಲಿ ಕಾಣುವ ಇಷ್ಟಲಿಂಗವು ಒಂಬತ್ತು ಚಕ್ರಗಳಲ್ಲಿ ಒಂಬತ್ತು ತೆರನಾಗುತ್ತದೆ. ಎಲ್ಲ ಶರಣರು ಷಟ್‌ಚಕ್ರ ಹಾಗೂ ನವಚಕ್ರಗಳನ್ನು ವಿವರಿಸಿದ್ದಾರೆ. ಆದರೆ ನಮ್ಮ ಶಿವಕವಿಗಳು ಅತಿಸೂಕ್ಷ್ಮವಾದ ಹತ್ತನೆಯ ಅಣುಚಕ್ರವನ್ನೂ ನಿರೂಪಿಸಿದ್ದಾರೆ.  ೧. ಆಧಾರ ೨. ಸ್ವಾಧಿಷ್ಠಾನ ೩. ಮಣಿಪೂರಕ ೪. ಅನಾಹತ ೫. ವಿಶುದ್ಧಿ ೬ ಆಜ್ಞಾ ೭ ಬ್ರಹ್ಮರಂಧ್ರ ೮. ಶಿಖಾ ೯. ಪಶ್ಚಿಮ ಹಾಗೂ ೧೦ ಅಣುಚಕ್ರ. ಇವುಗಳಲ್ಲಿ ಕ್ರಮವಾಗಿ ೧. ಆಚಾರಲಿಂಗ ೨. ಗುರುಲಿಂಗ ೩ ಶಿವಲಿಂಗ ೪. ಜಂಗಮ ಲಿಂಗ ೫. ಪ್ರಸಾದಲಿಂಗ ೬ ಮಹಾಲಿಂಗ ೭ ನಿಷ್ಕಳಲಿಂಗ ೮. ನಿಶೂನ್ಯಲಿಂಗ ೯. ನಿರಂಜನಲಿಂಗ ೧೦. ಇವೆಲ್ಲವುಗಳನ್ನೊಳಗೊಂಡ ಅಣುಮಹಾಲಿಂಗವು. ಮುಖ್ಯವಾಗಿ ಹಸಿಗೆಯಾದವು ನವಲಿಂಗಗಳು. ಅಂತೆಯೇ ನವಚಕ್ರದೊಳಗೆ ನವಲಿಂಗವಾಗಿ ಶೋಭಿಸುವ ವಿವರವನ್ನು ಪೇಳುತ್ತೇನೆ. ಚಿತ್ತವಿಟ್ಟು ಕೇಳೆಂದು ಸದ್ಗುರು ಬೋಧಿಸಿದ್ದಾನೆ.

 

ನಿಷ್ಕಲವೆನಿಸಿ ನಿಶೂನ್ಯವಾದ ಮತ್ತು ಕೊನೆಗೆ ನಿರಂಜನ ಸ್ವರೂಪ ಹೊಂದಿದ ಲಿಂಗವು ನಿತ್ಯಪರಿಪೂರ್ಣ ಸಚ್ಚಿದಾನಂದಮಯ ಮಹಾಲಿಂಗದಲ್ಲಿ ಬೆರೆದ ಬಳಿಕ ಯಾವ ವ್ಯವಹಾರವು ನಿಲ್ಲುವದಿಲ್ಲ, ಅಂಥ ಮಹತ್ವವುಳ್ಳುದೇ ಹತ್ತನೆಯ ಮಹಲಿಂಗವು. ಇದು ಅತ್ಯಂತ ಸೂಕ್ಷ್ಮವಾಗಿದ್ದರಿಂದಲೇ ಅಣು ಚಕ್ರದಲ್ಲಿ ಶೋಭಿಸುತ್ತದೆ.

Related Posts