ಮಹಾನುಭಾವಿ ಮೈಲಾರ ಬಸವಲಿಂಗ ಶರಣರು : ಶಾಪಗ್ರಸ್ಥರಲ್ಲ

ಲೇಖಕರು: : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

 

ಅನುಭಾವ ಅನುಭಾವವೆಂದೆಂಬಿರಿ

ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿಭೋ  !

ಅನುಭಾವವೆಂಬುದು ಶಿಶು ಕಂಡ ಕನಸು ಕಾಣಿಭೋ  !

ಅನುಭಾವವೆಂಬುದು ಅಂತರಂಗದ ರತ್ನ ಕಾಣಿಬೋ  !

ಮತ್ತು – ಭಕ್ತಿಗೆ ಅನುಭಾವವೆ ಬೀಜ ಕಾಣಿರೋ ;

ಭಕ್ತಿಗೆ ಅನುಭಾವವೆಚಾರ ಕಾಣಿರೋ

 

ಚನ್ನಬಸವಣ್ಣನವರ ಈ ನುಡಿಗಡಣ ಅನುಭಾವದ ನಿಲವನ್ನು ಹಾಗೂ ಅನುಭಾವವೇ ಭಕ್ತಿಗೆ ಮೂಲವೆಂಬುದನ್ನು ಪ್ರತಿಪಾದಿಸಿದೆ. ಅನುಭವಜನ್ಯವಾದ ಅನುಭಾವ, ನೆಲದ ಮರೆಯ ನಿಧಾನ, ಅತು ಕಂಡ ಕನಸು, ಅದು ಅಂತರಂಗದ ರತ್ನ, ಇಂಥ ಅನುಭಾವದ ನಿಲವಿನಲ್ಲಿ ಹಾಡುಗಬ್ಬಗಳನ್ನು ರಚಿಸಿದ ನಿಜಗುಣರು, ಸರ್ಪಭೂಷಣರು, ಮುಪ್ಪಿನ ಷಡಕ್ಷರಿಗಳು ಮತ್ತು ಬಾಲಲೀಲಾ ಮಹಾಂತರು ಪ್ರಸಿದ್ಧಿಯನ್ನು ಪಡೆದಿರುವಂತೆ ಮೈಲಾರಂಗವಲಿಂಗ ಶರಣರೂ ಪ್ರಖ್ಯಾತರು. ಕೇವಲ ಭಕ್ತಿಯ ಉದ್ರೇಕ ಹಾಗೂ ತಾತ್ಕಾಲಿಕ ಸ್ಫೂರ್ತಿಯ ಪ್ರಭಾವದಿಂದ ಪದ್ಯಗಳನ್ನು ರಚಿಸಿದವರು ಪಡಕ್ಷರಿಗಳು ; ಬಾಲಲೀಲಾ ಮಹಾಂತರು ಮತ್ತು ಘನಮಠದಾರ್ಯರು. ಆದರೆ ನಿಜಗುಣರಾಗಲಿ, ವಲಿಂಗ ಶರಣರಾಗಲಿ ಹಾಗಲ್ಲ. ತಮ್ಮ, ಸಾಸ್ತ್ರ, ಆಚಾರ, ಅನುಭವ ಇವೆಲ್ಲವು ಗಳನ್ನು ತಾವು ಮೈಗೂಡಿಸಿಕೊಂಡು ಇತರರಿಗೆ ಅಧಿಕಾರವಾಣಿಯಿಂದ ತಿಳಿಯು ವರತೆ ಪದ ಶ್ರೀಯನ್ನು ಇವರಿಬ್ಬರದು, ಅದರಲ್ಲೂ ಬಸವಲಿಂಗ ಶರಣರು ವೀರಶೈವ ತತ್ತ್ವಸಿದ್ಧಾಂತವನ್ನು ಸುಂದರವಾಗಿ, ಸುಬಂಧುರವಾಗಿ ಹಾಡುಗಬ್ಬಗಳಲ್ಲಿ ಕಟ್‌ಪದಿಗಳಲ್ಲಿ ಹೆಣೆದವರು.

 

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಹೆಸರಾಂತ ಹಳ್ಳಿ ಮೈಲಾರ. ಇಲ್ಲಿ ಶಿವಭಕ್ತಮನೆತನಕ್ಕೆ ಸೇರಿದ ಹರದ ವೃತ್ತಿಯ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಯ ಚೆನ್ನವೀರ ಶಿವಯೋಗಿಗಳಿಂದ ಅನುಗ್ರಹೀತರಾದವರು. ಅನುಭಾವವನ್ನು ಪಡೆದವರು. ಪೂಜ್ಯ ಮಹಾಸ್ವಾಮಿಗಳು ಹಳ್ಳಿಯಲ್ಲಿ ವೀರಶೈವ ವಿದ್ಯಾಕೇಂದ್ರವನ್ನು ತೆರೆದು ತಾವೊ ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವುಳ್ಳ ತತ್ತ್ವಪುರುಷರಾಗಿದ್ದವರು. ಬಸವಲಿಂಗ ಶರಣರ ವಾಣಿಯಲ್ಲಿ ಗುರು ಗರಿಮೆ ಪ್ರತಿಮಿಸಿದೆ; ವ್ಯಕ್ತಿತ್ವ ಪ್ರತಿಬಿಂಬಿಸಿದೆ..

 

ಸೃಷ್ಟಿಯೊಳಗುದಿಸಿದ ಶರಣರಿ

ಗಿಷ್ಟ ಸಿದ್ಧಿಯನ್ನು ಪಾಲಿಸು

ವಷ್ಟವರುಣ ಸ್ವರೂಪ ಚನ್ನವೀರ ನಮೋ  (ಶಿ, ದರ್ಪಣ ೬೯)

ಮತ್ತು – ನೂರೊಂದು ಸ್ಥಲದ ವಿಚಾರ ವಿಗ್ರಹ ಚನ್ನ

ವೀರ ಮದ್‌ಗುರು ಲಿಂಗ ಜಂಗಮದಂಘ್ರಿಗಳೆನ್ನ ಸಲುಹಲಿ

ತಾನೆ ಒಲಿಯಲಿ (ಶಿ. ದ. ೨೧)

 

ಅಚ್ಚವೀರಶೈವ ಸಂಸ್ಕೃತಿಯನ್ನು ಅಳವಡಿಸಿಕೊಂಡ ಬಸವಲಿಂಗ ಶರಣರು ಗುರು-ಲಿಂಗ-ಜಂಗಮರ ಹೊರತಾಗಿ ಅನ್ಯದೈವದ ಹೆಸರನ್ನು ಸಹ ಉಚ್ಚರಿಸದಷ್ಟು ನಿಷ್ಠಾವಂತರಾಗಿದ್ದರು. ಅಷ್ಟೇ ಏಕೆ ? ಈ ಪೂಜ್ಯತ್ರಯರಿಗಿಂತಲೂ ಶಿವನು ಅಧಿಕನಲ್ಲ ವೆಂಬುದನ್ನು ನಿರಾಭಾರಿ ವೀರಶೈವ ಸಿದ್ಧಾಂತ” ಕೃತಿಯಲ್ಲಿ ನಿರ್ಭಯವಾಗಿ ಹಾಗೂ ತಾತ್ವಿಕವಾಗಿಯೂ ಪ್ರತಿಪಾದಿಸಿದ್ದಾರೆ. ಶರಣರ ತಾತ್ವಿಕ ಹಿನ್ನೆಲೆಯಲ್ಲಿ ವಿಮರ್ಶಾ ಶಕ್ತಿಯೂ ಅಪಾರವಿದೆ. ಅದನ್ನು ಅವರ ಕೃತಿಗಳಲ್ಲಿ ಕಾಣಬಹುದು.

 

೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಬಸವಲಿಂಗ ಶರಣರು ಮೈಲಾರದ ಮೈಲಾರಲಿಂಗ ದೇವಸ್ಥಾನದ ಮುಂಭಾಗದಲ್ಲಿಯೇ ವ್ಯಾಪಾರವನ್ನು ಅರ್ಧಗಾಣಿಯ ಸೋಲು-ಗೆಲುವುಗಳಿಲ್ಲದೆ, ಆಶೆ-ಆಮಿಷಕ್ಕೆ ಒಳಗಾಗದೆ ಸತ್ಯ ಶುದ್ಧ ಕಾಯಕ ನಡೆಸುತ್ತಿದ್ದರು. ಆಗಾಗ ನಾಡಿನ ಪ್ರಸಿದ್ಧ ವ್ಯಾಪಾರಿ ಕೇಂದ್ರಗಳೆನಿಸಿದ ಸವಣೂರು, ಹುಬ್ಬಳ್ಳಿ, ಇಕ್ಕೇರಿ ಮೊದಲಾದ ಪಡಿಮೂಲೆ ಸ್ಥಳಗಳಲ್ಲಿ ಸರಕುಗಳನ್ನು ತರುತ್ತಿದ್ದುದು ಅವರ ಕೃತಿಗಳಿಂದ ಧ್ವನಿತವಾಗುತ್ತದೆ. ಗಿರಾಕಿಗಳೆಷ್ಟೇ ಇದ್ದರೂ ನಿರ್ದಿಷ್ಟ ವ್ಯಾಪಾರವಾದ ಬಳಿಕ ಆಧ್ಯಾತ್ಮ ವ್ಯವಹಾರದಲ್ಲಿ ತೊಡಗುತ್ತಿದ್ದರು. ಲಿಂಗಾರ್ಚನೆಗೈದು ಜಂಗಮ ತೃಪ್ತಿಗೊಳಿಸುತ್ತಿದ್ದರು. ತಾತ್ವಿಕ ಅನುಭಾವ ಚಿಂತನೆಯಲ್ಲಿ ಕಾಲ ಕಳೆಯುವರು. ಆರ್ಚನ ಅರ್ಪಣ ಅನುಭಾವ ಮಾಡುವದೆ ಶರಣ ಧರ್ಮ, ವೀರಶೈವನ ನಿಜಾಚರಣೆ.

ಮೈಲಾರಲಿಂಗ ದೇವಸ್ಥಾನಕ್ಕೆ ಬರುವ ಗೊರಪ್ಪಗಳ ವಿಚಿತ್ರ ವೇಷ-ಭಾಷೆ ಆಚರಣೆಗಳಿಂದ ಬಸಪ್ಪನಿಗೆ ಅನುಕಂಪ, ಏಕೆಂದರೆ, ವೀರಶೈವ ಸಂಸ್ಕೃತಿಯ ಪರಂಪರೆಯಲ್ಲಿ ಬೆಳೆದು ಬಂದ ಈತನಿಗೆ ಗೊರಪ್ಪಗಳ ಸಂಗ ಹಿಡಿಸಲಿಲ್ಲ. ಈ ಸಂಗತಿ ಇವರ ಅನುಭಾವ ಜೀವನದ ಶಿವಾನುಭವದರ್ಪಣದ ಪದ್ಯಗಳಿಂದ ವೇದ್ಯವಾಗದೆ ಇರದು. ಗೊರಪ್ಪಗಳ ಪವಾಡ ಕಾರಣೀಕ ಮೊದಲಾದ ಅಸಹಜ ಜೀವನಕ್ಕೆ ಮನಸೋಲಲಿಲ್ಲ. ತನ್ನ ಅನುಭಾವದಿಂದ ನಿಜವಾದ ಮೈಲಾರ ಲಿಂಗನಾರು ? ತೇರಾವುದು ? ಕಾರಣೀಕವಾವುದು ? ಎಂಬುದನ್ನು ಈ ಪದ್ಯಗಳಿಂದ ತಿಳಿಸುತ್ತಾರೆ. ನೋಡಿ.

 

ನೋಡಿರಮ್ಮ ಮೈಲಾರಲಿಂಗನ ಜಾತ್ರೆಯಾಗುತ್ತಿದೆ

ನಾಡ ಜನರಿಗೆ ತಿಳಿಯದು ಇದರ ಗೋಪ್ಯ ಬೇರಿದೆ   ||ಪಲ್ಲವಿ  ||

ತವೆ ಏಳ್ಕೋಟಿಗೆಮಿಗೆ ಮಂತ್ರವನುವ ಗೊರವರೊಪ್ಪುತಾರೆ

ಶಿವನಿಂದಕರೆದೆ ದಲ್ಲಣ ಕಡುಗಲಿ ವೀರರೆಸೆವುತಾರೆ

ಇವರೊಳಧಿಕ ಗುರುಚನ್ನವೀರ ಮೈಲಾರ ಲಿಂಗವಹರೆ  (ಪದ್ಯ ೫೧)

 

ಮತ್ತು – ನಂಬುವುದೆಮ್ಮ ಮೈಲಾರಲಿಂಗನ ಸೊಲ್ಲ ಕೇಳಿ ಕೇಳಿ,

ಢಂಭಕ ಮಾತಲ್ಲ ಕಾರಣಿಕನೆ ಬಲ್ಲ ಕೇಳಿ ಕೇಳಿ     ||ಪಲ್ಲವಿ)

ಪರತತ್ವದಿರವೆಮ್ಮ ಗೊರವನ ಶೌರ್ಯ ನವ ಕೇಳಿ ಕೇಳಿ   (ಪದ್ಯ ೫೨)

 

ನಿಜವಾದ ಮೈಲಾರಲಿಂಗನ ಜಾತ್ರೆಯ ಅರಿವು ಜನಸಾಮಾನ್ಯರಿಗೆ ಆಗುವದಿಲ್ಲ. ಏಳುಕೋಟಿ ಮಂತ್ರಗಳಿಗೆ ಮಂತ್ರರಾಜನೆನಿಸಿದ ಷಡಕ್ಷರ ಮಹಾಮಂತ್ರವನ್ನು ಬೋಧಿಸಬಲ್ಲ ಸದ್ಗುರುನಾಥನೇ ಮೈಲಾರಲಿಂಗ. ಮಲತ್ರಯಗಳನ್ನು ಕಳೆದು ತಾಪತ್ರಯಗಳನ್ನು ನಿವಾರಿಸಬಲ್ಲ ವೀರನೇ ಗುರು ಚನ್ನವೀರರು. ಇವರೇ ಹರ ನಿಂದಧಿಕರೆಂದು ಭಾವಿಸಿ ಪ್ರತಿದಿನವೂ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಯ ಗುರುಕುಲಕ್ಕೆ ತಪ್ಪದೆ ಆಗಮಿಸಿ ಶಿವಾನುಭವ ಗೋಷ್ಠಿಯಲ್ಲಿ ಕಾಲ ಕಳೆಯ ಹತ್ತುವರು. ಈ ಆಶ್ರಮ ಆ ಕಾಲದಲ್ಲಿ ಆಧ್ಯಾತ್ಮಿಕ ಮಹಾಕೇಂದ್ರವಾಗಿತ್ತು. ನಾಡಿನ ಅನೇಕ ಸಾಧಕರು ಇಲ್ಲಿಗೆ ಆಗಮಿಸಿ ತಮ್ಮ ಸಾಧನೆಯನ್ನು ಸದ್ಗುರು ಸನ್ನಿಧಿಯಲ್ಲಿ ಸಾರ್ಥಕಗೊಳಿಸುತ್ತಿದ್ದರು.

 

ಅರಸುತಿಹ ಲತೆ ಕಾಲ್ದೊಡಗಿದಂತೆ, ಬಡವರ ಮನೆಗೆ ಭಾಗ್ಯನಿಧಿ ದೊರೆತಂತೆ ಜಂಗಮ ಪುಂಗವರಾದ ಚನ್ನವೀರ ಮಹಾಶಿವಯೋಗಿಗಳ ಆಗಮನದಿಂದ ಶರಣರಿಗೆ ಅತ್ಯಾನಂದವನ್ನುಂಟು ಮಾಡಿತ್ತು. ವೀರಶೈವ ಸಂಸ್ಕೃತಿಯೇ, ಸಿದ್ಧಾಂತವೇ ಮೂರ್ತಿ ಮತ್ತಾದ ಈ ಪರಮ ಪೂಜ್ಯರಿಂದ ಅನುಗ್ರಹೀತರಾಗಿ ಪಾವನಾಂಗರೆನಿಸಿದರು ಶರಣರು, ಗುರುಸೇವೆಯಲ್ಲಿ ನಿರತರಾಗಿ ಕಿಂಕರತ್ವವನ್ನು ಅಳವಡಿಸಿಕೊಂಡು ಕಾಯಕ ಗೈಯುತ್ತ ಮಹಾದಾಸೋಹಿಯಾದರು.

 

ಹೀಗೆ ಹಿರಿಯ ಸಾಧಕರಾದ ಬಸವಲಿಂಗ ಶರಣರು ಹೊಸದಾಗಿ ಗುರುಕುಲಕ್ಕೆ ಆಗಮಿಸುತ್ತಿದ್ದ ಸಾಧಕವಟುಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಆಚರಣೆಗೆ ತಕ್ಕ ನಡೆಯನ್ನು ಕಲಿಸುತ್ತಿದ್ದರು. ನಡೆಯಿಲ್ಲದ ಡಂಭಾಚಾರದ ವೇಷವನ್ನು ತೆಗೆಯಿಸಿ ನಡೆ-ನುಡಿ ಸಮನ್ವಯಗೊಂಡ ಮೇಲೆ ಗುರುಗಳಿಂದ ಕಾಷಾಯಾಂಬರವನ್ನು ಕೊಡಿಸುತ್ತಿದ್ದರು. ಕುಶಾಗ್ರಮತಿಗಳಾದ ಶರಣರು ಸುಮ್ಮನೆ ಕಾಲ ಕಳೆಯದೆ ಶರಣ ಸಾಹಿತ್ಯವನ್ನು, ಸಂಸ್ಕೃತ ವಾಙ್ಮಯವನ್ನು ಮತ್ತು ಕನ್ನಡ ಕಾವ್ಯಗಳನ್ನು ಅಭ್ಯಸಿಸು ತಿದ್ದರು. ಪೂಜ್ಯ ಗುರುಗಳ ಅನುಭಾವಪೂರ್ಣ ಪ್ರವಚನಗಳನ್ನು ಮನವಿಟ್ಟು ಆಲಿಸುತ್ತಿದ್ದರು. ನಡೆ ನುಡಿಯಲ್ಲಿ ಚನ್ನರಾದ ಚನ್ನವೀರರ ನಡೆಯೇ ಶರಣರಿಗೆ ಮಾರ್ಗದರ್ಶಿಯಾಗಿತ್ತು. ಶ್ರೀಗಳ ಹಿರಿಯ ಶಿಷ್ಯರಾದ ಗವಿಯ ಶಾಂತವೀರ ಸ್ವಾಮಿಗಳಿಂದಲೂ ಶರಣರು ಅನುಭಾವ ಪಡೆದಿದ್ದರು, ಈ ಮಾತನ್ನು ಅವರ ಪದ್ಯದಲ್ಲಿ ಕಾಣಬಹುದು.

 

ಬಸವಲಿಂಗ ಶರಣರು ಅಚ್ಚಗಣಾಚಾರಿಗಳಾಗಿದ್ದರು. ಹಾಗೆಯೇ ಲಿಂಗಾಚಾರಗಳೂ ಹೌದು. ಇವರ ಘನವಾದ ನಿಷ್ಠೆಯನ್ನು ಸಹಿಸದ ಕೆಲವು ಸಾಂಪ್ರದಾಯ ವಾದಿಗಳು ಇವರಿಗೆ ಕಿರುಕುಳವನ್ನು ಕೊಡುತ್ತಿದ್ದರು. ಸಮಯ ಸಾಧಿಸಿ ಹೊಸದಾಗಿ ಬಂದ ಹಡಗಲಿಯ ಕಟ್ಟಾವೈಷ್ಣವ ತಹಶೀಲದಾರನಿಗೆ ಶರಣರ ವಿರುದ್ಧ ಜಾಡಿಯನ್ನು ಹೇಳಿದರೂ ಶರಣರು ಅಂಜದೆ ಅಳುಕದೆ ತಮ್ಮ ನಿಷ್ಠೆಯನ್ನೇ ಮೆರೆದರು. ಅಧಿಕಾರಿಯು ವಿಷ್ಣುವಿನ ನಾಮಗಳನ್ನು ಕೊಂಡಾಡಲು ತಿಳಿಸಿದಾಗ ಶರಣರು ಒಪ್ಪಿ ಸುಂದರ ಪದ್ಯಗಳನ್ನೇ ರಚಿಸುತ್ತಾರೆ. ನ್ಯಾಯನಿಷ್ಠುರ; ದಾಕ್ಷಿಣ್ಯಪರರಾಗದೆ ಪವಿತ್ರ ಪ್ರಾಣಿಯಾದ ಗೋವಿನ ಮಹತ್ವವನ್ನು ತಿಳಿಸಿ ಅದರಿಂದ ತಯಾರಾಗುವ ಪಾವನ ಪಾಂಡುವರ್ಣದ ಶ್ರೀ ವಿಭೂತಿಯ ಘನತೆಯನ್ನು ವ್ಯಕ್ತಗೊಳಿಸುವ-

 

“ಗೋವಿಂದನಾದಿ ಗೋವಿಂದ ನಮ್ಮ

ಗೋವಿಂದಲಾದ ಪಾವನ ಪಾಂಡುರಂಗ

ಶ್ರೀ ವಿಭೂತಿಯು ಪಂಚಗೋವಿಂದ | ವೀರ

ಶೈವಾಗಮೋಕ್ತವು ಗೋವಿಂದ

ಪೀವ ಪಂಚಾಮೃತ ಗೋವಿಂದ | ಜಗ

ಜೀವ ಸಂತೃಪ್ತಿಯು ಗೋವಿಂದ

 

ಎನ್ನುವ ಐದು ನುಡಿಯ ಪದ್ಯವನ್ನು ರಚಿಸಿದರಲ್ಲದೆ ಮತ್ತೆ

 

“ಹರಿಯೆ ಬ್ರಹ್ಮಾಂಡ ಪಿಂಡಾಂಡ ದಶದಿಗ್‌ಭರಿತ

ಹರಿಯೆ ತ್ರೈಭುವನ ಅಟ್ಟುಂಬ ಸಕಲ ಜೀವಕ್ಕಾದಿ

ಹರಿಯ ಬಿಟ್ಟರಗಳಿಗೆ ಜೀವಿಸುವರಾರಿಲ್ಲ ಲೋಕದೊಳಗದು ಕಾರಣ |

ಹರಿಭಕ್ತನಹುದು, ಹರಭಕ್ತನಲ್ಲ ನಾಂ

ನರಸಿಂಹ ಮಧುಸೂದನ ಶಿರಿಯರಸ ವಾ

ಸರ ಯಂಕಟಾಚಲಾದಿ ಪ್ರಣವ ಸ್ಮರಣೆಯೊಳಗಿರ್ಪೆಂ ಸದಾ ||

 

ಎಂಬ ನಾನಾರ್ಥ ವೈಚಿತ್ರ್ಯದಿಂದ ಅರ್ಥ ವಿಸ್ತಾರ ತೋರಿಸಿ ನರಸಿಂಹಾದಿ ಶಬ್ದಗಳ ಆದಿ ಅಕ್ಷರ ಜೋಡಿಸುವ ಷಡಕ್ಷರ ಮಂತ್ರದ ಸ್ಮರಣೆ ಮಾಡಿದ್ದನ್ನು ಈ ಪದ್ಯದಲ್ಲಿ ಬರೆದು ಅಧಿಕಾರಿಯನ್ನು ಬೆರಗುಗೊಳಿಸುತ್ತಾರೆ. ಹಾಗೆ ಕೇಡಿಗಳೂ ತಣ್ಣಗಾಗುತ್ತಾರೆ.

 

ಪ್ರತ್ಯುತ್ಪನ್ನ ಮತಿಯವರಾದ ಬಸವಲಿಂಗ ಶರಣರು ಭಕ್ತಿಯ ಉದ್ರೇಕದಿಂದಾಗಲಿ, ತಾತ್ಕಾಲಿಕ ಸ್ಫೂರ್ತಿಯಿಂದಾಗಲಿ ಕೃತಿಗಳನ್ನು ರಚಿಸಲಿಲ್ಲ. ತತ್ತ್ವ, ಶಾಸ್ತ್ರ ,ಆಚಾರ, ಅನುಭಾವಗಳ ಸಂಗಮದಲ್ಲಿ ಕ್ರಿಯಾಜ್ಞಾನಗಳ ಸಮುಚ್ಚಯದಲ್ಲಿ ಕೃತಿಗಳನ್ನು ರಚಿಸಿದರು. ಇವರ ಕೃತಿಗಳು ನಾಲ್ಕು ೧)ಶಿವಾನುಭವ ದರ್ಪಣ (ಹಾಡುಗಬ್ಬಗಳು) ೨) ನಿರಾಭಾರಿ ವೀರಶೈವ ಸಿದ್ಧಾಂತ (ಷಟ್‌ಪದಿಯಲ್ಲಿ ಬರೆದ ವೀರಶೈವ ಸೈದ್ಧಾಂತಿಕ ವಿಚಾರಗಳು) ೩) ಗುರು ಕರುಣ ತ್ರಿವಿಧಿ (ತ್ರಿಪದಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತವನ್ನು ಕ್ರಮವಾಗಿ ತಿಳಿಸಿದ ಕೃತಿ) ೪) ಲಿಂಗಪೂಜಾ ವಿಧಾನ (ಚೌಪದಿಯಲ್ಲಿ ಬರೆದದ್ದು) ಡಾ. ಎಸ್. ವ್ಹಿ, ಅಯ್ಯನಗೌಡ ಇವರು ಗದಗ “ವೀರಶೈವ ಅಧ್ಯಯನ ಸಂಸ್ಥೆ ʼʼ ಯಿಂದ ಪ್ರಕಟಿಸಿದ ಬಸವಲಿಂಗ ಶರಣರು ಸಮಗ್ರ ಕೃತಿಗಳು’ʼ ಇದರಲ್ಲಿ ಚನ್ನವೀರ ಸ್ವಾಮಿಗಳ ಇನ್ನೊಬ್ಬ ಶಿ಼ಷ್ಯರಾದ ಬನ್ನಿಮಟ್ಟಿ ಚನ್ನಪ್ಪನವರು ರಚಿಸಿದ “ಶಿವಾನುಭವ ದೀಪಿಕೆ ಯೆಂಬ ಗ್ರಂಥವನ್ನು  “ಷಟ್ ಸ್ಥಲ, ಜ್ಞಾನಾನುಭಾವ’ ಎಂಬ  ಹೆಸರಿಟ್ಟು ಹಸ್ತಪ್ರತಿಯ ಆಧಾರದಿಂದಲೋ, ತಮ್ಮ ಜಾಣೆಯಿಂದಲೋ ಬಸವಲಿಂಗ ಶರಣರಿಗೆ ಸೇರಿಸಿ, ಆ ಕೃತಿಕಾರರನ್ನು ಲುಪ್ತಗೊಳಿಸಿದ್ದು ಸಮಂಜಸವಲ್ಲ. ಶ್ರೀಯುತರು ಕನ್ನಡ ಅಧ್ಯಯನ ಪೀಠದ ಹಸ್ತ ಪ್ರತಿಭಾಂಡಾರದ ಕ್ರಮಾಂಕ ೧೦೬೧ ರಿಂದ ಸಂಗ್ರಹಿಸಿದ “ ಭಕ್ತಿ ಭಿನ್ನಹ ದಂಡಕ”ವು ಶರಣರೆಂದು ಖಚಿತಪಡಿಸಿದುದರಲ್ಲಿ ಔಚಿತ್ಯವಿದೆ.  “ಭಕ್ತಿ ಬಿನ್ನಹ ದಂಡಕ’ ವು ಶರಣರ ಐದನೆಯ ಕೃತಿಯೆನ್ನಬಹುದು. ಶರಣರ ಹೆಸರಿಗೆ ಸೇರಿಸಿದ “ಶಿವಾನುಭವ ದೀಪಿಕೆʼ’ ಯನ್ನು ಕುರಿತು ವಿಮರ್ಶಿಸಲು ಅವಕಾಶವಿಲ್ಲದಿದ್ದರೂ ಕೆಲವು ಮಾತುಗಳನ್ನು ಹೇಳುವದು ಅವಶ್ಯವಿದೆ; ಹಾಗೂ ಅನಿವಾರ್ಯವಿದೆ, ಅದರ ಕವಿ ಚಿನ್ನಪ್ಪನವರು “ಶಿವಾನುಭವ ದೀಪಿಕೆ’ಯ ಕೊನೆಯ ಕಂದ (೩೦೩)ದಲ್ಲಿ-

 

“ಪಾಹಿ ಗುರು ಚನ್ನವೀರಾ ಬಸವಪ್ರಭುವೆ’ʼ ಗುರು ಚನ್ನವೀರಾ ಎಂಬ ಅಂಕಿತವಿರುವುದರಿಂದ ಬಸವಲಿಂಗ ಶರಣರ ಕೃತಿಯೆಂದು ಭಾವಿಸುವುದು ಸರಿಯಲ್ಲ. ಎಲ್ಲ ಪದಗಳಲ್ಲಿ ಕೇವಲ ಬಸವಪ್ರಭುವೇ ಎಂದಿದೆ. ಬಸವಲಿಂಗ ಶರಣರಿಗೆ ಪ್ರೀತಿಯ ಪ್ರಭು (ಸ್ವಾಮಿ) ಅಥವಾ ಗುರುವಾದ ಚನ್ನವೀರರೆಂದು ಚನ್ನಪ್ಪನವರು ಅಂಕಿತ ಬಳಸಿರಲು ಸಾಕು. ಬವಣ್ಣನವರು ಕೂಡಲ ಸಂಗಮದೇವಾ ಎಂದು ವಚನಾಂಕಿತ ಹಾಕಿದರೆ; ಚನ್ನಬಸವಣ್ಣನವರೂ ಆದನ್ನೇ ಬಳಸಿ ಕೇವಲ ಚನ್ನ ಪದವನ್ನು ಬಳಸಿದ್ದನ್ನು ಗಮನಿಸಬೇಕು. ಹಾಗೆ ಇಲ್ಲಿಯೂ ಅಂಕಿತದ ಭಿನ್ನತೆಯಿದೆ. ಬವಲಿಂಗ ಶರಣರು ಪದಪದ್ಯಗಳಲ್ಲಿ ಚನ್ನವೀರ’ ನಾಮವನ್ನು ಬಳಸಿಕೊಂಡಿರುವುದಾದರೂ ಬಸವಪ್ರಭುವೆಂಬ ನಾಮಾಂಕಿತವನ್ನು ಬಳಸಿಲ್ಲ. ಅಲ್ಲದೆ ಸಮಗ್ರ ಕೃತಿಯಲ್ಲಿ ಬರುವ ವಿಷಯ ಜೋಡಣೆಯ ವ್ಯತ್ಯಾಸ ಅನುಭಾವದ ಆಳವನ್ನು ಅಳೆಯಬಹುದು. ಶಿವಾನುಭವ ದೀಪಿಕೆಯಲ್ಲಿ ಅನುಭಾವದ ಕೊರತೆಯನ್ನು ಕಾಣಬಹುದು. ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯನ್ನು ಅದಕ್ಕೆ ತುಲನೆ ಮಾಡಿದರೆ ಬಹಳ ವ್ಯತ್ಯಾಸವನ್ನು ಗಮನಿಸಲು ಸಾಧ್ಯವಿದೆ. ಹಲವಾರು ಕಾರಣಗಳಿಂದ “ಶಿವಾನುಭವ ದೀಪಿಕೆ’ ಬಸವಲಿಂಗ ಶರಣರದಂತೂ ಅಲ್ಲ. ಸಂಶೋಧನೆಯ ಹೆಸರಿನಲ್ಲಿ ಒಬ್ಬ ಕವಿಯನ್ನು ಲುಪ್ತಗೊಳಿಸುವ ಕಾರ್ಯ ಸರಿಯಲ್ಲ. ಸಂಶೋಧಕರು ಇನ್ನೂ ವಿಚಾರಿಸಬೇಕು. ಈ ಗ್ರಂಥ ಬಸವಲಿಂಗ ಶರಣರದು ಅಲ್ಲವೆಂದು ಸಿದ್ಧಮಾಡಲು ಸಾಕಷ್ಟು ಅಂಶಗಳಿವೆ.

 

ಇನ್ನು ಬಸವಲಿಂಗ ಶರಣರು ಗುರುಕರಣ ತ್ರಿವಿಧಿಯನ್ನು ಗುರುಗಳಿಂದ ಶಾಪಗ್ರಸ್ಥರಾಗಿ ಬರೆದರೆಂದು ಹೇಳುವ ದಂತಕಥೆ ಬೆಳೆದುದೂ ದುರದೃಷ್ಟಕರವೆ ! ಕವಿರತ್ನ ಚನ್ನಕವಿಗಳು ಮುಳುಗುಂದ ಬಾಲಲಿಲಾ ಮಹಾಂತ ಸ್ವಾಮಿಗಳ  ಪುರಾಣದಲ್ಲಿ ಈ ಸಂಗತಿಯನ್ನು ಬಳಸಿಕೊಂಡಿದ್ದಾರೆ. ಬಹುಶಃ ಅವರು ತ್ರಿವಿಧಿಯನ್ನಾಗಲಿ ಅವರ ಸಾಹಿತ್ಯವನ್ನು ಸಮಗ್ರವಾಗಿ ಅವಲೋಕಿಸಿರಲಿಲ್ಲ. ಎಲ್ಲಿಯೂ ಈ ಸಂಗತಿ ತಿಳಿದು ಬರುವದಿಲ್ಲ. ಬಸವಲಿಂಗ ಶರಣರು ತಮ್ಮ “ನಿರಾಭಾರಿ ವೀರಶೈವ ಸಿದ್ಧಾಂತ”ದಲ್ಲಿ ಅಷ್ಟಾವರಣ ಮಹತ್ವ, ಪಂಚಾಚಾರಗಳ ವಿಶ್ಲೇಷಣೆ, ಧರ್ಮಾಚಾರಗಳೆಂಬ ತ್ರಿವಿಧ ಪ್ರಕರಣಗಳನ್ನು ವಿವರಿಸಿದರು.  ಶಿವಾನುಭವ ದರ್ಪಣ’ದಲ್ಲೂ ಬಿಡಿಬಿಡಿಯಾಗಿ ಅನೇಕ ತಾತ್ವಿಕ ವಿಷಯವಾಗಿ ಪದ್ಯಗಳನ್ನು ರಚಿಸಿದ್ದರೆ, ಗುರುಕರುಣ ತ್ರಿವಿಧಿಯು ಅಷ್ಟಾವರಣವೇ ಲಿಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ ವೀರಶೈವ ದಾರ್ಶನಿಕ ಸಿದ್ಧಾಂತವನ್ನು ಕ್ರಮಬದ್ಧವಾಗಿ ಹಾಗೂ ಸಮಗ್ರವಾಗಿ ಬೋಧಿಸುವ ಏಕೈಕ ಕೃತಿಯೆಂದರೆ ತಪ್ಪಾಗದು. ಇಲ್ಲಿ ಶಿವಕವಿಯ ಆಳವಾದ ಅನುಭವ, ತರ್ಕಬದ್ಧವಾದ ವಿಚಾರ, ವಿಮರ್ಶೆ ಹಾಗೂ ಶಾಸ್ತ್ರೀಯ ಸಿದ್ಧಾಂತಗಳು ಮುಪ್ಪುರಿಗೊಂಡಿವೆ. ವೀರಶೈವನು ನಿಜಾಚರಣೆಯಿಂದ ತತ್ತ್ವಪುರುಷನಾಗುವ ಬಗೆ ಈ ತ್ರಿವಿಧಿಯಲ್ಲಿ ಹಾಸುಹೊಕ್ಕಾಗಿದೆ. ಆದ್ದರಿಂದ ಈ ಕೃತಿ ಶಿವಕವಿಯ ಅತ್ಯುತ್ತಮ ಗ್ರಂಥವೆಂದೇ ಹೇಳಬೇಕು. ವೀರಶೈವರ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳು ಒಂದಕ್ಕೊಂದು ಆಚರಣೆಯಲ್ಲಿ ಹೇಗೆ ಸಮನ್ವಯಗೊಳ್ಳುತ್ತವೆಂಬ ಪರಿಯನ್ನು ಬಹು ಸುಂದರವಾಗಿ ಈ ಚಿಕ್ಕ ಕೃತಿಯಲ್ಲಿ ವರ್ಣಿಸಿದ್ದಾರೆ. ಇದರಿಂದ ಶಿವ ಕವಿಯ ಸ್ವಾನುಭಾವ ಮತ್ತು ವಿಚಕ್ಷಣಮತಿಯ ಪರಿಚಯವಾಗುವದು. ತ್ರಿವಿಧಿಯಲ್ಲಿ ೩೩೩ ತ್ರಿಪದಿಗಳಿದ್ದು ಎರಡೇ ಸಾಲಿನಲ್ಲಿ ಅಪಾರವಾದ ತತ್ತ್ವವನ್ನು ಹಿಡಿದಿರಿಸಿದ ಸಾಹಸ ಶರಣರದು.

 

ಆಲದ (ಮರ) ಬೀಜ ಅತಿ ಚಿಕ್ಕದಾಗಿದ್ದರೂ ವಿಶಾಲ ಗಿಡವನ್ನು ಒಳಗೊಂಡಿರುವಂತೆ ಈ ಗುರುಕರುಣ ತ್ರಿವಿಧಿಯಲ್ಲಿ ಸಮಗ್ರ ವೀರಶೈವ ಸಿದ್ಧಾಂತದ ದರ್ಶನವನ್ನು ಮಾಡಬಹುದು. ಬಹುಶಃ ಇದು ಗುರುಸ್ತುತಿಗೈವ ಪಾರಾಯಣ ತ್ರಿವಿಧಿಯೆಂಬುದಾಗಿ ಬಹುಜನರ ತಿಳುವಳಿಕೆಯಾಗಿತ್ತು; ಅಲ್ಲದೆ ಬಸವಲಿಂಗ ಶರಣರು ಶಾಪಗ್ರಸ್ಥರಾಗಿ ಗುರುಸ್ತುತಿಯನ್ನು ಮಾಡಿದ್ದೆಂಬುದಾಗಿಯೇ ಅನೇಕರು ಹೇಳುತ್ತಾರೆ. ಇದು ಸರಿಯಲ್ಲ. ಶಿವಕವಿ ಬಸವಲಿಂಗ ಶರಣರ ಸಮಗ್ರ ಕೃತಿಗಳನ್ನು ಅವಲೋಕಿಸಿದರೆ ಎಲ್ಲಿಯೂ ಶಾಪದ ಪ್ರಸಂಗ ಬರುವುದಿಲ್ಲ. ಬಸಪ್ಪ-ಮುಸಪ್ಪ ಎಂಬ ಶಬ್ದ ಸಾಮ್ಯದಿಂದ ಬೆಳೆದ ಕಥೆಯಿರಬೇಕು. ಮತ್ತು ಶಾಪಗ್ರಸ್ಥನಾಗಿ ಇಂಥ ತಾತ್ವಿಕ ಕೃತಿಯನ್ನು ರಚಿಸಲು ಸಾಧ್ಯವಿಲ್ಲ. ಗುರುಕರುಣೆಯನ್ನು ಕಳೆದುಕೊಂಡ ವ್ಯಕ್ತಿ ಮತಿಮಂದನಾಗಿ ಉತ್ತಮ ಕೃತಿಯನ್ನು ರಚಿಸಲಾರನು. ಗುರುಕರುಣೆಯಿಂದಲೇ ಇಂಥ ಉತ್ತಮ ಕೃತಿರತ್ನಗಳು ಮೂಡಿಬರುತ್ತವೆ. ಗುರುವಿಗೆ ಪ್ರತಿಮಾತನ್ನು ಆಡುವದೂ ಶರಣ ಜೀವನದಲ್ಲಿ ಸಲ್ಲದು. ಸದ್ಗುರುವಿನ ಮೌನ ನಿರ್ದೇಶನಗಳೂ ಶರಣನಿಗೆ ಮಾರ್ಗದರ್ಶಕವಾಗಬೇಕು. ಅರಿವುಳ್ಳವನೇ ಶರಣ. ಅಂಥ ಅರಿತ ಶರಣ ಮರೆತರೆ ಮತಿ ಅಮಂಗಲವಾಗಬಾರದೆಂದೆ ಶಿವಕವಿಗಳು ಸದ್ಗುರುವಿನಲ್ಲಿ ಮತಿಗೆ ಮಂಗಲ ಬೇಡುತ್ತ ಗುರುಕರುಣೆಯ ಹಿನ್ನೆಲೆಯಲ್ಲಿ ತ್ರಿವಿಧಿಯನ್ನು  ರಚಿಸಿರುವರು.

 

“ ಗುರುಕರುಣ ತ್ರಿವಿಧಿ’ಯು ಶ್ರೀ ಗುರು ಪ್ರಾರ್ಥನೆಯಿಂದ ಪ್ರಾರಂಭ ವಾಗುತ್ತದೆ. ತ್ರಿವಿಧಿಯಲ್ಲಿ ಶಿವಕವಿಗಳು ಅಷ್ಟಾವರಣವನ್ನು ಮುಖ್ಯವಾಗಿಟ್ಟುಕೊಂಡು ಪಂಚಾಚಾರಗಳನ್ನು ಮತ್ತು ಷಟ್‌ಸ್ಥಲಗಳನ್ನು ಅದರಲ್ಲಿಯೇ ಅಡಕಗೊಳಿಸಿದ್ದಾರೆ. ಏಕೆಂದರೆ ಜೀವಾತ್ಮನ ಅಷ್ಟಾಂಗಗಳು ವ್ಯಕ್ತವಾಗಿರುವಂತೆ ಅಷ್ಟಾವರಣವು ಸ್ಪುಟವಾಗಿದೆ. ಪಂಚಪ್ರಾಣಗಳು ಶರೀರದಲ್ಲಿ ಅವ್ಯಕ್ತವಾಗಿರುವಂತೆ ಪಂಚಾಚಾರಗಳು ಅಳವಟ್ಟಿವೆ. ಷಟ್‌ಸ್ಥಲಾತ್ಮವು ಅಷ್ಟಾವರಣಾಚರಣೆಯಿಂದ ವ್ಯಕ್ತವಾಗುತ್ತದೆ. ಪ್ರಥಮದಲ್ಲಿ ಸ್ತುತಿಗೈದ ಶ್ರೀಗುರು ನಿರಾಭಾರಿ ಜಂಗಮನೇ ಆಗಿದ್ದಾನೆ. ಬಸವಲಿಂಗ ಶರಣರು ಚಿನ್ಮಯಾನುಗ್ರಹ ಪಡೆದವರು. ನಿರಾಭಾರಿ ಗುರುವಿನ ಸುತ್ತಿಗೈದರೂ ಸಾಭಾರಿ ಸದ್ಗುರುವಿನ ಸ್ವರೂಪವನ್ನು, ಮಹತ್ವವನ್ನು ತಿಳಿಸುತ್ತಾರೆ. ಇದರಿಂದ ಈ ಗುರುವಿನ ಅವಶ್ಯಕತೆಯೇನೆಂಬುದು ಗೋಚರಿಸುತ್ತದೆ. ಅವಶ್ಯಕತೆಯ ಅರಿವಾಗುತಿದ್ದಂತೆ ಸದ್ಗುರುವನ್ನು ಹೃದಯತುಂಬಿ ಹಾಡುತ್ತಾರೆ ಕವಿಗಳು. ಗುರುದೀಕ್ಷೆ ಪಡೆದ ಭಕ್ತನು ಲೌಕಿಕ ತಂದೆ-ತಾಯಿ ಬಂಧು-ಬಳಗವನ್ನು ತ್ಯಜಿಸಿ ಗುರುವಿನಲ್ಲಿಯೇ ಎಲ್ಲವನ್ನು ಕಾಣಬೇಕು. ಸದ್ಗುರುವನ್ನೇ ಸರ್ವಸ್ವವೆಂದು ಆರಾಧಿಸಿದರೆ ಗುರುಕೃಪೆ ತೀವ್ರ ಲಭಿಸುವುದು.

 

ಯುಗಪ್ರಜ್ಞೆಯುಳ್ಳ ಗುರು ಶಿಷ್ಯನ ಯೋಗಕ್ಷೇಮವನ್ನು ಚಿಂತಿಸುತ್ತಾನೆ. ಆಗ ತ್ರಿವಿಧಿಯ ಮೂಲ ಬೀಜವೇ ವ್ಯಕ್ತವಾಗುತ್ತದೆ. ಶರಣರು ತ್ರಿವಿಧಿಯನ್ನು ರಚಿಸುವಲ್ಲಿ ಬಹಳ ಸುಂದರ ಕ್ರಮವನ್ನು ಅನುಸರಿಸಿದ್ದಾರೆ. ಶಾಸ್ತ್ರದ ಪದ್ಧತಿಯಂತೆ ವಿಷಯದ ಉಪಕ್ರಮ ಮಾಡುತ್ತ ಅದನ್ನು ಪ್ರತಿಪಾದಿಸಿ ಕೊನೆಗೆ ಉಪಸಂಹಾರ ಮಾಡುತ್ತ ಮುಂದಿನ ವಿಷಯಕ್ಕೆ ಕೊಂಡಿಯಂತೆ ಜೋಡಿಸುತ್ತ ಸಂಪೂರ್ಣವಾಗಿ ೩೩೩ ತ್ರಿಪದಿಗಳನ್ನು ರಚಿಸಿರುವರು.

 

ಗುರುವಿನ ಸಂವೇದನೆಯ ನಗುವೇ ಈ ಗುರುಕರುಣ ತ್ರಿವಿಧಿಯ ದಾರ್ಶನಿಕ ಸಿದ್ಧಾಂತದ ಬೀಜಾರೋಪಣವಾಗುತ್ತದೆ. ಜೀವಕೋಟಿ ಹುಟ್ಟಿ ಎಡರು ಕಂಟಕಗಳಲ್ಲಿ ಬಳಲಿ ವ್ಯರ್ಥವಾಗಿ ಸಾಯುವದು ಯಾವ ಹಿತೈಷಿ ಸದ್ಗುರುವಿಗೆ ನೆಮ್ಮದಿಯಾದೀತು ? ಸಾವಿನ ಅಧಿಪತಿಯಾದ ಯಮನು ಕೋಣನ ಸವಾರಿ ಮಾಡುವಲ್ಲಿ ಸಾಂಕೇತಿಕತೆಯನ್ನು ಇರಿಸಿ ಶಿವಕವಿಗಳು ಸಾವಿನ ಕಾರಣವನ್ನು ಮುಂದೆ ಸೂಚಿಸುತ್ತಾರೆ. ಕಾಮಕೇಳಿಯಲ್ಲಿ ಮೈ-ಮರೆತ ಮಾನವನು ಮಾಯಾಬಂಧನದಲ್ಲಿ ಸಿಲುಕುತ್ತಾನೆ. ಶರಣ ಸಿದ್ಧಾಂತದಂತೆ ಮಾಯೆ ಹೊರಗಿನದಲ್ಲ. ಮನದ ಮುಂದಣ ಆಶೆಯೇ ಮಾಯೆಯಾಗಿ ಮನುಷ್ಯನನ್ನು ಕಾಡುತ್ತದೆ. ಕಾಮನ ಉರುವಣಿಗೆಯಲ್ಲಿ ಮಹಾಮಾರಿ ಮಾಯೆಯ ಉಪಟಳಕ್ಕೆ ಬಲಿಯಾಗುವ ಈ ಕಾಯದ ಉತ್ಪತ್ತಿಯ ಬಗೆಯನ್ನು ಮಾರ್ಮಿಕವಾಗಿ ತಿಳಿಸುತ್ತಾರೆ. ಪಂಚಭೂತಗಳ ಭಯಾನಕತೆಯನ್ನು ವಿವರಿಸುತ್ತ ಪಂಚಭೂತಗಳ ಪಂಚೀಕರಣದ ಪಂಚಭೂತಮಯವಾದ ಕಾರಣದಿಂದಲೇ ಶರೀರವಾಯಿತೆಂದು ಪ್ರತಿಪಾದಿಸುತ್ತಾರೆ. ದೇಹವಿಕಾರದ ಅರಿವನ್ನು ಬಹುಸುಂದರವಾಗಿ ನೀಡುತ್ತಾರೆ. ಅಜ್ಞಾನಿಯಾದ ಜೀವಿಯು ಅಷ್ಟಮದಗಳಿಂದ ಸಪ್ತವ್ಯಸನಗಳನ್ನು ಅನುಭವಿಸುವದು ಗಾಳಿಗಿಕ್ಕಿದ ಸೊಡರೆಂಬುದನ್ನು ಸೂಚಿಸುತ್ತಾರೆ. ಮತ್ತೆ ಒಂದೊಂದಾಗಿ ಪಂಚೇಂದ್ರಿಯಗಳ ಪಂಚವಿಷಯಗಳ ಪ್ರಸ್ತಾಪ ಮಾಡುವಲ್ಲಿ ಶಿವಕವಿಗಳ ಐತಿಹಾಸಿಕ ಪ್ರಜ್ಞೆ, ತೀರ್ಥ ಕ್ಷೇತ್ರಗಳ ಪರಿಚಯ, ವ್ಯಾವಹಾರಿಕ ಜ್ಞಾನ, ಯೌಗಿಕ ಪ್ರತಿಭೆಗಳು ವ್ಯಕ್ತವಾಗಿವೆ.

 

ಶಬ್ದಾದಿ ಪಂಚ ವಿಷಯಗಳ ಪ್ರಸ್ತಾಪದ ನಂತರ ಅಂತಃಕರುಣ ಚತುಷ್ಟಯ ಹಾಗೂ ಗುಣತ್ರಯದ ನಿರೂಪ ಬಂದಿದೆ. ಹೀಗೆ ಶರೀರ ವಿಜ್ಞಾನ, ಶರೀರಿಗೆ ಅಂಟಿದ ಅಜ್ಞಾನ, ವಿಷಯ ವಾಸನೆ ಇತ್ಯಾದಿಗಳ ವಿಚಾರವು ನೇರವಾಗಿ ತಿಳಿದಂತೆ ಸಂಸಾರ ಹೇಯವೆನಿಸುವುದು ಸಹಜ. ಎಲ್ಲ ವಿಷಯಗಳನ್ನು ಶರಣರು ಸ್ವಾರಸ್ಯವಾಗಿ ಪ್ರತಿಪಾದಿಸಿದ್ದಾರೆ. ವಿಷಯದ ಮನವರಿಕೆಯಾಗಲು ಬೆಡಗಿನ ನುಡಿಯನ್ನು, ಶೇಷಾರ್ಥದ ಪರಿಯನ್ನು ಉಪಯೋಗಿಸಿದ್ದಾರೆ. ಕವಿಗಳ ಜಾಣ್ಮೆ ಅನುಭಾವಗಳು ಒಡಮೂಡಿವೆ. ಶಿಷ್ಯನು ಸಂಸಾರ ಬಂಧನದಿಂದ ತನುತಾಪಗಳಿಂದ ಮುಕ್ತನಾಗಲು ಗುರುವಿನಲ್ಲಿ ಪ್ರಾರ್ಥಿಸುತ್ತಾನೆ. ಹೀಗೆ ಗುರುಕರುಣ ತ್ರಿವಿಧಿಯ ನಿರೂಪಣೆ ಕ್ರಮಬದ್ಧ ಕಥಾನಕದಂತೆ ಸಾಗಿದೆ. ತ್ರಿಪದಿಯ ಪ್ರತಿಪದಗಳು ವೈಶಿಷ್ಟ್ಯವನ್ನು ಪಡೆದಿವೆ. ಸಂಸಾರ ಹೇಯಸ್ಥಲದ ಕೆಲವು ತ್ರಿಪದಿಗಳು ೩-೪ ಅರ್ಥಗಳನ್ನು ಅಭಿವ್ಯಂಜಿಸಿವೆ. ೫೦ನೇಯ

 

ಬೇರಾಗಸಕೆ ಬೆಳೆದ | ನಾರಿಕೇಳದ ಕುಜವ

ನಾರ ಹಂಗಿಲ್ಲ ದೇರಿದೆ ನಾನಿಳಿಯ

ಲಾರನೈ ಗುರುವೆ ಕೃಪೆಯಾಗು ||

 

ಈ ತ್ರಿಪದಿಯಂತೂ ವೀರಶೈವ ಸಿದ್ಧಾಂತವನ್ನು ಬೋಧಿಸುವ ಪರಿಣತ ಪ್ರಜ್ಞೆಯ ದ್ಯೋತಕವಾಗಿದೆ. ಅದೆಷ್ಟು ಅರ್ಥಗಳನ್ನು ಮಾಡಿದರೂ ತ್ರಿಪದಿಯ ಅಂತಸತ್ವ ಪ್ರಕಟವಾಗುತ್ತದೆ.

 

ಶಿಷ್ಯನ ಪ್ರಾರ್ಥನೆಯಂತೆ ಗುರುಕಾರುಣ್ಯದಿಂದ ದೊರೆಯುವದೇ ಇಷ್ಟಲಿಂಗ, ನುಡಿಯ ಬ್ರಹ್ಮವು ನಡೆಗೆ ಬಂದು ಇಷ್ಟಲಿಂಗವೆನಿಸುತ್ತದೆ. ಈ ಲಿಂಗ ಹೊರಗಿನದಲ್ಲ. ಶಿಷ್ಯನ ಚಿಚ್ಚೈತನ್ಯವೇ ಸದ್ಗುರುವಿನ ಯೋಗಶಕ್ತಿಯಿಂದ ಶಿಷ್ಯನ ಭಕ್ತಿಗಾಗಿ ಅರುಹಿನ ಕುರುಹೆ ಮೂರ್ತಗೊಂಡು ಇಷ್ಟಲಿಂಗವಾಗುತ್ತದೆ. ದೇಹದ ನವಚಕ್ರಗಳಲ್ಲಿಯ ನವಬ್ರಹ್ಮರು ಪ್ರವೃತ್ತಿಕ್ರಮದಿಂದ ಇಷ್ಟಲಿಂಗದಲ್ಲಿ ನವಲಿಂಗಗಳಾಗಿ ರೂಪುಗೊಳ್ಳುವ ವಿಧಾನ ಅದ್ಭುತವಾದುದು. ಮುಕ್ತಿಮಾರ್ಗಕ್ಕೆ ಯೋಗಮಾರ್ಗ, ಷಣ್ಮುಖೀ, ಖೇಚರೀ ಮುದ್ರೆಗಳು ಇರುತ್ತಿದ್ದರೂ ಅವು ಸುಲಭ ಸಾಧ್ಯವಲ್ಲವೆಂದು ಯುಕ್ತಿ ಯುಕ್ತವಾಗಿ ಶಿವಕವಿಗಳು ನಿರಸನಮಾಡಿ ಲಿಂಗಾಂಗಯೋಗದ ಸರಳತೆಯನ್ನು ತಿಳಿಸುತ್ತಾರೆ. ಅದಕ್ಕೆ ಸಹಕಾರಿಯೆಂಬಂತೆ ಲಿಂಗಲಕ್ಷಣ ಲಿಂಗವ್ಯಾಪ್ತಿಯನ್ನು ಹೇಳುತ್ತ ಈ ಲಿಂಗವು ಪ್ರಣವದಿರವೆಂಬುದನ್ನು ತಿಳಿಸುತ್ತಾರೆ. ಲಿಂಗ ಷಟ್‌ಸ್ಥಾನಗಳಲ್ಲಿ ಷಡಕ್ಷರ ಮಂತ್ರ ಸಂಬಂಧವನ್ನು ಬೋಧಿಸುತ್ತಾರೆ. ಇಂಥ ಅಸಾಧಾರಣ ಲಿಂಗವನ್ನು ಅಂತರಂಗಗಳಲ್ಲಿ ಧರಿಸಿಕೊಳ್ಳುವ ಯೋಗ್ಯತೆಯನ್ನು ವಿವರಿಸಿ ಲಿಂಗಾಂಗ ಸಾಮರಸ್ಯದ ರಹಸ್ಯವು ನಿವೃತ್ತಿಕ್ರಮದಿಂದ ಆಧಾರಾದಿ ಚಕ್ರಗಳಲ್ಲಿ ಆಚಾರಾದಿ ಲಿಂಗಗಳ ಆರಾಧನೆಯ ಮೂಲಕ ಬೋಧಿಸಲ್ಪಟ್ಟಿದೆ. ಸಾಧಕನು ಸರ್ವಾಂಗ-ಲಿಂಗಿಯಾಗಲು ಕರ್ಮೇಂದ್ರಿಯಗಳಲ್ಲಿ ಇಷ್ಟಲಿಂಗದ,  ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗದ, ಕರಣಂಗಳಲ್ಲಿ ಭಾವಲಿಂಗದ ಸಂಬಂಧವನ್ನು ಕ್ರಮವಾಗಿ ಅರಹುತ್ತಾರೆ. ಪುನಃ ಲಿಂಗದ ಅವಶ್ಯಕತೆ ಅರ್ಥಾತ್ ಪ್ರಾಣಲಿಂಗಪೂಜೆ, ಭಾವಲಿಂಗ ಪೂಜೆಯ ಪರಿಯನ್ನು ಪ್ರಸ್ತಾಪಿಸಿದ್ದಾರೆ. ಮೂರು ವಿಧದಲ್ಲಿ ತ್ರಿವಿಧ ಲಿಂಗಸಂಬಂಧ ಹಾಗೂ ತ್ರಿವಿಧಾಂಗದ ತ್ರಿವಿಧತೆಯನ್ನು ಹೇಳುವಲ್ಲಿ ಶಿವಕವಿಗಳು ಲಿಂಗತತ್ತ್ವದ ವ್ಯಾಪಕತೆಯನ್ನು ಅವರ್ಣನೀಯವಾಗಿ ಪ್ರತಿಪಾದಿಸುತ್ತಾರೆ. ಈ ವಿಚಾರ ವಚನ ಸಾಹಿತ್ಯದಲ್ಲೂ ಹೆಚ್ಚು ಕಾಣುತ್ತಿಲ್ಲ.

 

ಇಷ್ಟ ಪ್ರಾಣ ಭಾವಲಿಂಗಗಳ ಅನುಸಂಧಾನ ಮಾಡುವ ಭಕ್ತನು ಲಿಂಗದ ಪ್ರಾಣ ಜಂಗಮನನ್ನು ಆರಾಧಿಸಬೇಕೆಂಬುದನ್ನು ತಿಳಿಸುತ್ತ ಜಂಗಮನ ನಿಲವು, ಭೇದ ಹಾಗೂ ಜಂಗಮನ ಕರ್ತವ್ಯವನ್ನು ಬಿತ್ತರಿಸಿದ್ದಾರೆ. ನುಡಿದಂತೆ ನಡೆವ ಮಾರ್ಗ ಷಟ್‌ಸ್ಥಲ. ಇದನ್ನು ಅನುಗ್ರಹಿಸುವವನು ಜಂಗಮನೆಂಬುದನ್ನು ಶರಣರು ಸ್ಪಷ್ಟಗೊಳಿಸಿರುವರು.   ಗುರು ಧರ್ಮಕರ್ತೃವಾದರೆ ಜಂಗಮ ಧರ್ಮ ಸಂಶೋಧಕನೆಂಬುದನ್ನು ಶರಣರು ವ್ಯಕ್ತಗೊಳಿಸಿರುವರು.

 

ಬಾಹ್ಯ ಜಂಗಮನ ಸೇವೆಗೈಯುತ್ತ ಅಂತರಂಗದಲ್ಲಿ ಜಂಗಮನ ಸಾಕ್ಷಾತ್ಕಾರದ ಸ್ವರೂಪವನ್ನು ಅರಿಯಬೇಕು. ಜಂಗಮ ಪುಂಗವನಿಂದ ಪ್ರಾಪ್ತವಾಗುವದು ಪರಬ್ರಹ್ಮರೂಪಿ ಪಾದೋದಕ ಪ್ರಸಾದಗಳು. ಪಾದೋದಕವನ್ನು ಪಡೆವ ವಿಧಾನ ಹಾಗೂ ಮಹಿಮೆಯನ್ನು ತಿಳಿಸಿ ಅದರ ಪರಿಣಾಮವನ್ನು ವಿವರಿಸುತ್ತಾರೆ. ಭಕ್ತರನ್ನು ಪೊರೆವ ಮಹಾತಾಯಿ ಪ್ರಸಾದವೆನಿಸಿದ್ದರಿಂದ ಅದನ್ನು ಒಳಹೊರಗೂ ಪರಿಣಾಮಿಸಿಕೊಳ್ಳಬೇಕು. ಏಕೆಂದರೆ ಪ್ರಸಾದ ಸದ್ಭಾವವೇ ವೀರಶೈವರ ಆತ್ಯಂತಿಕ ಸಿದ್ಧಿಯೆನಿಸಿದೆ. ಇದುವೆ ನಿತ್ಯ ಮುಕ್ತತ್ವವೆನಿಸಿದೆ.

 

ಪ್ರಸಾದ ಸದ್ಭಾವಿಯಾದ ಶರಣು ನಿಜೈಕ್ಯ ಸ್ಥಿತಿಯಲ್ಲಿರುವಾಗ ಮತ್ತೆ ಸಾಧನಗಳ ಅವಶ್ಯಕತೆಯೆನಿಸದು. ಅದಕ್ಕಾಗಿ ಶಿವಕವಿಗಳು ಸಾಧನಗಳಿಂದ ಸಾಧ್ಯವೆನಿಸಿದ ಚಿದ್ಭಸಿತ, ಚಿದ್ರುದ್ರಾಕ್ಷಗಳ ಮಹತ್ವವನ್ನು ವಿವರಿಸಿ ಮನ ಚಿದ್ಘನವಾಗುವ ನಿಜಮಂತ್ರದ ಸ್ವರೂಪವನ್ನು ನಿರೂಪಿಸುತ್ತಾರೆ. ಕಾಯದಲ್ಲಿ ಗುರುಲಿಂಗ ಜಂಗಮರ ಆಯತವನ್ನು ಅರಿಯಲು ಬಾಹ್ಯಾಚರಣೆಯ ವಿವರವನ್ನು ತಿಳಿಸಿ ಆಂತರಿಕ ಅಷ್ಟಾವರಣದ ಅಳವಡಿಕೆಯನ್ನು ಸಾಧಿಸಿದಾಗ ನೈಜ ಶೂನ್ಯ ಸಂಪಾದನೆಯಾಗುವುದೆಂಬುದನ್ನು ಈ ತ್ರಿವಿಧಿಯಲ್ಲಿ ಅವಲೋಕಿಸಬಹುದು. ‘ಶೂನ್ಯ ಸಂಪಾದನೆ” ಉಕ್ಕಿನ ಕಡಲೆಯಾಗಿರುವಾಗ ಅದನ್ನು ಸಾಧಿಸುವ, ಆಚರಿಸುವ ದಾರ್ಶನಿಕ ಸಿದ್ಧಾಂತವನ್ನು ಸಾಕ್ಷಾತ್ಕರಿಸಿಕೊಳ್ಳಲು ಮಹಾನುಭಾವಿ ಮೈಲಾರ ಭಸವಲಿಂಗ ಶರಣರ ಈ ಗುರುಕರುಣ ಶ್ರಿವಿಧಿಯು ಅಧ್ಯಾತ್ಮದ ಕೈಮರವೆನಿಸಿದೆ. ವೀರಶೈವ  ಸಿದ್ಧಾಂತದ ರಸಘಟ್ಟಿ ಗುರುಕರಣ ತ್ರಿವಿಧಿಯೆಂದರೆ ತಪ್ಪಲ್ಲ.ಶೂನ್ಯ ಸಂಪಾದನೆಯನ್ನು ಬಯಸುವ ಸಾಧಕರಿಗೆ ಅತ್ಯುತ್ತಮ ಸಾಧನ ಗುರುಕರಣ ತ್ರಿವಿಧಿಯೆಂಬುದನ್ನು ಬೇರೆ ಹೇಳಬೇಕಿಲ್ಲ.

 

ಬಸವಲಿಂಗ ಶರಣರು ʼ’ಶಿವಾನುಭಾವ ದರ್ಪಣ’ʼದಲ್ಲಿ ೭೦ ಪದ್ಯಗಳನ್ನು ರಚಿಸಿದ್ದು ವಿವಿಧ ರಾಗ ಮಾಲಿಕೆಯಲ್ಲಿ ಸಂಯೋಜನೆ ಮಾಡಿದ್ದಾರೆ. ಪ್ರಾರ್ಥನೆ, ನೀತಿ, ತತ್ವಗಳನ್ನು ಹೃದಯಂಗಮವಾಗಿ ಹಾಡಿದ್ದಾರೆ. ಸದ್ಗುರು ಚನ್ನವೀರರ ವ್ಯಕ್ತಿತ್ವವನ್ನು ಹಲವಾರು ಪದ್ಯಗಳಲ್ಲಿ ಸ್ತುತಿಸಿದ್ದನ್ನು ನೋಡಬಹುದು. ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ ವಿಚಾರಗಳನ್ನು ದ್ವಿಪದಿ, ಚೌಪದಿ, ಷಟ್‌ ಪದಿಗಳಲ್ಲಿ ವ್ಯಕ್ತ ಮಾಡಿದ್ದಾರೆ. ಅನೇಕ ಪದ್ಯಗಳು ಅತ್ಯಂತ ಮನನೀಯವಾಗಿವೆ. ಗೇಯಯೋಗ್ಯವಾಗಿವೆ. ಇನ್ನು ನಾಲ್ಕನೆ ಕೃತಿಯನಿಸಿದ ‘ಲಿಂಗ ಪೂಜಾ ವಿಧಾನ’ ದಲ್ಲಿ ಸಂಕಲ್ಪದಿಂದ ಪ್ರಾರಂಭಿಸಿ ಉಪಚಾರಗಳ ಅರ್ಥ ವಿವರಣೆಯೊಂದಿಗೆ ವಿಶೇಷವಾಗಿ ವಿಧಾನವನ್ನು ಬೆಳೆಸಿದ್ದಾರೆ. ಪಾದ್ಯಾದಿ ಅಭಿಷೇಕಗಳನ್ನು ಇಷ್ಟಲಿಂಗಕ್ಕೆ ಸಮರ್ಪಿಸುವಲ್ಲಿ ಅನಂದವಾಗಿ ನೆರವೇರಿಸಲು ವಿವರಿಸಿದ್ದಾರೆ. ೫೨ ಚೌಪದಿಗಳಲ್ಲಿ ಈ ವಿಧಾನ ಪರಿಸಮಾಪ್ತಿಗೊಂಡಿದೆ. ರಾಜೋಪಚಾರಗಳನ್ನು ಹೇಳುವಲ್ಲಿ ಶರಣರಿಗೆ ಸಂತೃಪ್ತಿಯೆನಿಸಿದೆ.

 

ಶಿವಕವಿ ಬಸವಲಿಂಗ ಶರಣರ ಅನುಭಾವವನ್ನು ಅಳೆಯುವದು, ಅಳವಡಿಸಿ ಕೊಳ್ಳುವದು ಆಚಾರ ಮತ್ತು ಅನುಭಾವಗಳಿಂದ ಮಾತ್ರ ಸಾಧ್ಯ. ಅದನ್ನು ಸಾಧಿಸಿಕೊಂಡರೆ ಆಗುವ ಆನಂದ ಅಪಾರ. ಇಂಥ ಅನುಭಾವ ತೊರೆಯಲ್ಲಿ ಮಿಂದು ಮಡಿಯಾಗಿ ಪರಿಪೂರ್ಣತೆಯನ್ನು ಪಡೆಯಲು ಬಸವಲಿಂಗ ಶರಣರ ಸಮಗ್ರ ಸಾಹಿತ್ಯ, ಶರಣತತ್ವ ಜಿಜ್ಞಾಸುಗಳಿಗೆ ಅತ್ಯುತ್ತಮ ಮೌಲಿಕ ಸಾಧನವಾಗಿದೆ. ಇದರಿಂದ ಮಹಾನುಭಾವಿಗಳಾದ ಮೈಲಾರ ಬಸವಲಿಂಗ ಶರಣರು ಶಾಪಗ್ರಸ್ಥರಲ್ಲವೆಂಬುದು ಸ್ಪಷ್ಟವಾಗದೇ ಇರದು.

Related Posts