ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು
ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
ವ್ಯಕ್ತಿಯ ಬದುಕಿನಲ್ಲಿ ನಡೆನುಡಿಗಳಿಗೆ ಅಗ್ರಸ್ಥಾನ. ಅವೆರಡೂ ಪರಸ್ಪರ ಪೂರಕ. ನಡೆಯೊಳಗೆ ನುಡಿ ನುಡಿಯೊಳಗೆ ನಡೆ ತುಂಬಿದುದೇ ನಿಜವಾದ ಬದುಕು. ಅದು ಸಮಾಜಕ್ಕೂ ದೇವನಿಗೂ ಒಪ್ಪಿತವಾದ ಬದುಕು ನುಡಿಯಂತೆ ನಡೆ, ಮಾತಿನಂತೆ ಕೃತಿ ಇಲ್ಲದ ಬದುಕಿಗೆ ಯಾವ ಬೆಲೆಯೂ ಇಲ್ಲ.
ಜೀವಿಗಳಲ್ಲಿ ಮನುಷ್ಯನು ಶ್ರೇಷ್ಠ ಮಾತನಾಡುವ ವಿಶೇಷ ಶಕ್ತಿ ಅವನಿಗಿದೆ. ಮಾತೆಂಬುದು ಜ್ಯೋತಿರ್ಲಿಂಗ, ಕಾರಣ ಮಾತು ಪವಿತ್ರವಾಗಿರಬೇಕಾದುದು ಅತ್ಯಂತ ಅಪೇಕ್ಷಣೀಯ. ನಮ್ಮ ಮಾತು ಮೃದು ಮಧುರವಾಗಿದ್ದು, ಕೇಳುಗರ ಮನ ನೋಯದಂತಾದಾಗ ಸಹಜವಾಗಿಯೇ ಶ್ರೇಷ್ಠತ್ವವನ್ನು ಪಡೆಯುತ್ತದೆ.
ನಮ್ಮ ನುಡಿ(ಮಾತು) ಮುತ್ತಿನಹಾರದಂತೆ ಆಕರ್ಷಕವಾಗಿರಬೇಕು. ಮಾಣಿಕ್ಯದ ದೀಪ್ತಿಯಂತೆ ಕೇಳುಗರ ಮನ ಬೆಳಗಬೇಕು. ಸ್ಪಟಿಕದ ಶಲಾಕೆಯಂತೆ ನೇರವೂ ಪಾರದರ್ಶಕವೂ ಆಗಿರಬೇಕೆಂದು ಹೇಳುವ ಬಸವಣ್ಣ ‘ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪವಾಗುತ್ತದೆ’ ಎಂದು ನಮ್ಮನ್ನು ಎಚ್ಚರಿಸುತ್ತಾನೆ. ಹಾಗೆಯೇ ‘ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ’ ಎಂದು ಕೇಳುತ್ತಾನೆ. ‘ನುಡಿದಂತೆ ನಡೆ ಇದೇ ಜನ್ಮ ಕಡೆ’ ಎಂದರಿತ ಬಸವಣ್ಣನವರು ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ. ಕೂದಲೆಳೆಯಷ್ಟು ವ್ಯತ್ಯಾಸ ಬಂದರೂ ಸಂಸಾರದೊಳಗೆ ನನ್ನನ್ನು ಮುಳುಗಿಸಿ ನೀನೆದ್ದು ಹೋಗು’ ಎಂದು ಆರಾಧ್ಯದೇವನಿಗೆ ದೃಢವಾಗಿ ಹೇಳುತ್ತಾರೆ.
ಬಸವಣ್ಣನವರು ಒಂದು ಸಾಮಾಜಿಕ ಚಳುವಳಿಯ ನಾಯಕರು, ಕಲ್ಯಾಣ ರಾಜ್ಯಕಟ್ಟಬೇಕೆಂದು ಬಯಸಿದವರು. ಅವರಲ್ಲಿ ಇಂಥ ದೃಢತೆ ಇರಬೇಕಾದುದು ಅತ್ಯವಶ್ಯ. ಏಕೆಂದರೆ ಸಾಮಾನ್ಯ ಜನರು ತಮ್ಮ ನಾಯಕನ ನಡೆನುಡಿಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ.
ಬೋಧಿಸುವವನು ಮೊದಲು ಸಾಧಿಸಬೇಕು, ನುಡಿದವನು ಮೊದಲು ನಡೆಯಬೇಕು. ಬೋಧೆ ಪರಿಣಾಮಕಾರಿಯಾಗುವುದು ಮತ್ತು ಬೋಧಕನಿಗೆ ಬೋಧಿಸುವ ನೈತಿಕ ಹಕ್ಕು ದೊರೆಯುವುದು ಆಚರಣೆಯಲ್ಲಿದ್ದಾಗ ಮಾತ್ರ ರಾಮಕೃಷ್ಣ ಪರಮಹಂಸರಲ್ಲಿಗೆ ಹಣ್ಣಾದ ಮುದುಕಿಯೊಬ್ಬಳು ಬಂದು ತನ್ನ ಮೊಮ್ಮಗ ಬಹಳಷ್ಟು ಬೆಲ್ಲ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಅದನ್ನು ಬಿಡಿಸಬೇಕೆಂದು ಪಾರ್ಥಿಸುತ್ತಾಳೆ. ರಾಮಕೃಷ್ಣರು ಎಂಟು ದಿನ ಬಿಟ್ಟು ಮೊಮ್ಮಗನನ್ನು ಕರೆದುಕೊಂಡು ಬರಲು ಹೇಳುತ್ತಾರೆ. ಹಾಗೆಯೇ ಮುದುಕಿಯು ಎಂಟು ದಿನಗಳ ನಂತರ ಮೊಮ್ಮಗನನ್ನು ಅವರಲ್ಲಿಗೆ ಕರೆತರುತ್ತಾಳೆ. ರಾಮಕೃಷ್ಣರು ಆ ಹುಡುಗನಿಗೆ ಅತಿಯಾಗಿ ಬೆಲ್ಲ ತಿನ್ನಬಾರದೆಂದೂ, ಅದರಿಂದ ಆರೋಗ್ಯ ಕೆಡುವುದೆಂದೂ ಬೋಧಿಸುತ್ತಾರೆ. ಆಶ್ಚರ್ಯಚಕಿತಳಾದ ಮುದುಕಿ ಈ ಮಾತನ್ನು ಎಂಟು ದಿನಗಳ ಹಿಂದೆಯೇ ಹೇಳಬಹುದಾಗಿತ್ತಲ್ಲ ಎನ್ನುತ್ತಾಳೆ. ಆಗ ರಾಮಕೃಷ್ಣರು ‘ತಾಯಿ ಆಗ ನಾನೇ ಹೆಚ್ಚಾಗಿ ಬೆಲ್ಲ ತಿನ್ನುತ್ತಿದ್ದೆ. ಆ ಹುಡುಗನಿಗೆ ಹೇಳುವ ನೈತಿಕ ಹಕ್ಕು ನನಗೆಲ್ಲಿತ್ತು? ಈ ಎಂಟು ದಿನಗಳ ಅವಧಿಯಲ್ಲಿ ನಾನು ಸಂಪೂರ್ಣವಾಗಿ ಬೆಲ್ಲ ತಿನ್ನುವುದನ್ನು ತ್ಯಜಿಸಿರುವೆ’ ಎನ್ನುತ್ತಾರೆ. ಅಂತೆಯೇ ನಡೆದು ನುಡಿಯುವುದು ಶ್ರೇಯಸ್ಕರ. ಅದುವೇ ಶ್ರೇಷ್ಠ ಜನರ ಆದರ್ಶ.