ಪರಳಿ ವ್ಯಾಜ್ಯದಲ್ಲಿ ಪ್ರಯತ್ನ

ಲೇಖಕರು: ಜ.ಚ.ನಿ

 

“ ತಮಗಡಸಿದೆಡರ ನೀಕ್ಷಿಸ

ದೆ ಮಹಾಂತರ್ ಪೆರರ ಸಂಕಟಮನಪಹರಿಪರ್

ಹಿಮರುಚಿ ತನ್ನಯ ಮರ್ಬಂ

ತೆಮರದೆ ತಿರೆಯೊಳ್‌ ತಗುಳ್ದ ತಮಮಂ ತವಿಪಂ”

– ನೀತಿ ಮಂಜು

ಸ್ವಾಮಿಗಳವರು ಸಮಾಜ ಜೀವಿಗಳು. ಸತ್ಯಪ್ರೇಮಿಗಳು. ಸಮಾಜಕ್ಕೆ ಎಲ್ಲಿ ಯಾವ ಮೂಲೆಯಲ್ಲಿ ಪರಾಕ್ರಮಣ ನಡೆದರೂ ಅದನ್ನು ಸಹಿಸುತ್ತಿರಲಿಲ್ಲ. ಇನ್ನು ದುರಾಕ್ರಮಣ ನಡೆದರೆ ಕೇಳಬೇಕೆ ? ತಮಗಿರುವ ತೊಡರುಗಳನ್ನು ನೋಡುತ್ತಿರಲಿಲ್ಲ. ಶ್ರಮವಿಭಾಗವನ್ನೂ ಲೆಕ್ಕಿಸುತ್ತಿರಲಿಲ್ಲ. ವಾಯುವೇಗದಿಂದ ಅಲ್ಲಿಗೆ ಹೋಗಿ ಅದನ್ನು ತಡೆಗಟ್ಟುತ್ತಿದ್ದರು.

ಒಮ್ಮೆ ಹೈದರಾಬಾದ ಪ್ರಾಂತ್ಯದಲ್ಲಿದ್ದ ಪರಳೀ ವೈದ್ಯನಾಥ ಲಿಂಗದ ಪೂಜಾಧಿಕಾರದ ವ್ಯಾಜ್ಯ ಪ್ರಾರಂಭವಾಯಿತು. ಪರಕೀಯರು ಪೂಜಾಧಿಕಾರವನ್ನು ಆಕ್ರಮಿಸುವ ಸಾಹಸ ಮಾಡಿದರು. ಈ ಸಂಗತಿ ಎಲ್ಲೆಲ್ಲಿಯು ಹಬ್ಬಿತ್ತು. ಇದನ್ನು ಕೇಳಿ ‘ಸ್ವಾಮಿಗಳವರಿಗೆ ಸಮಾಧಾನವಾಗಲಿಲ್ಲ. ಶರೀರದಲ್ಲಿ ಸ್ವಾಸ್ಥ್ಯವಿಲ್ಲದಿದ್ದರು ಆ ಕ್ಷಣದಲ್ಲಿಯ ಅನೇಕ ಧರ್ಮಗ್ರಂಥಗಳನ್ನು ತೆಗೆದುಕೊಂಡು ಹತ್ತು ಹನ್ನೆರಡು ಮಂದಿ ಪಂಡಿತರನ್ನು ಕರೆದುಕೊಂಡು ಹೋಗಿ ವಾದ ಕ್ಷೇತ್ರಕ್ಕೆ ನೆರವಾದರು.

ಬರೀ ವೈದ್ಯನಾಥಲಿಂಗ ಪೂಜಾ  ವಿಷಯ ಒಂದಾಗಿದ್ದರೆ ಹೇಗೋ ಆಗಬಹುದಿತ್ತು.  ಜೊತೆಗೆ ಜಾತಿವಾದ ಮುಂದೆ ಬಂದಿತ್ತು. ಅಂತ್ಯಜ ಅಗ್ರಜ ಎಂಬ ಕೀಳು  ಭಾವ ಬಲಿತಿತ್ತು. ವೀರಶೈವರು ಅಂತ್ಯಜ (ಶೂದ್ರ)ರೆಂಬ ವಾದ ವಿಪರೀತಕ್ಕೇರಿತ್ತು. ಸ್ವಾಮಿಗಳವರಿಗೆ ಇದು ಸಹಿಸಲಿಲ್ಲ. ಇದಕ್ಕಾಗಿಯೆ ಈ ಹೊಲಸು ಕಳೆಯಲಿಕ್ಕಾಗಿ ಆವೇಗದಿಂದ ಆವೇಶದಿಂದ ಹೊರಟು ಹೋಗಿ ವಾದದಲ್ಲಿ  ಬಾಗಿಗಳಾದರು.

ವಾದ ಬೇಗ  ಹರಿಯಲಿಲ್ಲ. ೩-೪ ತಿಂಗಳ ಕಾಲ ಮುಂದುವರೆಯಿತು. ವಾದ ಕೇಳುವ ವ್ಯಾಜ್ಯನೋಡುವ ಕುತೂಹಲದಿಂದ ಅನೇಕ ಸಾವಿರ ಜನರು ಸೇರಿದ್ದರು. ಅವರೆಲ್ಲರ ಊಟೋಪಚಾರ ವೆಚ್ಚವನ್ನು ಶ್ರೀಗಳವರ ನಿರ್ವಹಿಸಬೇಕಾಯಿತು.  ತಂದ ಹಣ ತೀರಿಹೋಗಿತ್ತು. ಕೈಯಲ್ಲಿ ಕಾಸಿರಲಿಲ್ಲ. ಹೇಗೆ ಮಾಡುವದು, ಯೋಚಿಸಲಿಲ್ಲ. ತಕ್ಷಣದಲ್ಲಿಯೆ ಸುತ್ತು ಮುತ್ತಹೋಗಿ ಭಿಕ್ಷೆಯಿಂದ ಬೇಕಾದಷ್ಟು ಹಣ ತಂದರು. ಕೊನೆಯವರೆವಿಗು ಬಂದವರ ಯೋಗಕ್ಷೇಮವನ್ನು ನಿತ್ತರಿಸಿದರು. ಸ್ವಾಮಿಗಳವರದು ಅಕ್ಷಯ ಪಾತ್ರೆ; ಅಮೃತ ಹಸ್ತ ಅಂದ ಮೇಲೆ ಕೊರತೆಯ ಮಾತೇಕೆ?

ಈ ವ್ಯಾಜ್ಯದಲ್ಲಿ ಉಂಟಾದ ಸ್ವಾಮಿಗಳವರ ಕಷ್ಟ-ನಷ್ಟ ಅಪಾರವಾದದ್ದು. ಆದರೂ ಯೋಚನೆ ಸ್ವಾಮಿಗಳವರಲ್ಲಿ ಇರಲಿಲ್ಲ. ನಿರ್ಣಯವು ಸಮಾಜದಂತಾದ ಸಂಗತಿಯು ತಿಳಿದೊಡನೆ ಸ್ವಾಮಿಗಳವರಿಗೆ ಸಂತೋಷವುಂಟಾಯಿತು. ಆ ಕಷ್ಟ ನಷ್ಟಗಳು ತುಂಬಿ ಬಂದವು. ಅನೇಕ ಕಡೆಗಳಿಂದ ಪ್ರಶಂಸಾ ಪತ್ರಗಳು ಸ್ವಾಮಿಗಳವರಿಗೆ ಬಂದವು. ವ್ಯಾಜ್ಯದ ಸಮಯದಲ್ಲಿ ಮುಕ್ತ ಹಸ್ತದಿಂದ ಸಹಾಯಮಾಡಿದವರಿಗೆ ಪ್ರಶಸ್ತಿ ಪ್ರದಾನದಿಂದ ಸಂತೋಷ ಪಡಿಸಿದರು. ಶುಭಾಶೀರ್ವಾದ ಮಾಡಿದರು.

ಕುಮಾರಯೋಗಿಯು ಪರಳೀ ವ್ಯಾಜ್ಯದ ಪ್ರಭಾಕರ ! ಅಹುದು. ಪರಮ ಪೂಜ್ಯರು ಆ ಭಗೀರಥ ಪ್ರಯತ್ನ ಪಡದಿದ್ದರೆ ಆ ವಿಜಯದ ಬೆಳಕು ಸಮಾಜಕ್ಕೆಲ್ಲಿ ಹೇಗೆ ದೊರಕುತ್ತಿತ್ತು? ಕುಮಾರಯೋಗಿಗಳಂತಹ ಸಾಹಸಿಗಳನ್ನು ಸಹಾಯಕಾರಿಗಳನ್ನು ಪಡೆದ ಸಮಾಜವೆ ಧನ್ಯ. ಅದುವೆ ಮಾನ್ಯ. ಅವರೆ ಅದಕೊಂದು ಭವ್ಯಭಾಗ್ಯ; ದಿವ್ಯ ಸಂಪತ್ತಿ.

Related Posts