ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
ಪರರ ಸಂಗವೆ ಕೆಟ್ಟ | ದುರಿತವೆಂದದ ಬಿಟ್ಟ
ವರ ಗುಹ್ಯ ದಿಟ್ಟ – ಗುರುಲಿಂಗವೆಂಬುದೆ-
ಚ್ಚರಗೊಟ್ಟ ಗುರುವೆ ಕೃಪೆಯಾಗು ||೧೫೨||
ಎರಡನೆಯ ಕರ್ಮೇಂದ್ರಿಯ ಗುಹ್ಯ. ಇದಕ್ಕೆ ಗುಪ್ತಾಂಗವೆಂತಲೂ ಹೆಸರು, ಜೀವಾತ್ಮರ ಉತ್ಪತ್ತಿಗೆ ಕಾರಣವಾದುದು ಗುಹೇಂದ್ರಿಯವೇ. ಸಂಗಸುಖಕ್ಕೂ ಇದುವೇ ಮೂಲ. ಸಂಗವು ಸ್ವಸ್ತ್ರೀಯೊಡನಾದರೆ ದೋಷವಿಲ್ಲ. ಪರಸ್ತ್ರೀ ಸಂಗವು ದುರಿತಕ್ಕೆ ದಾರಿಮಾಡುವದು. ಪರಸ್ತ್ರೀಸಂಗವನ್ನು ಶರಣಬಳಗವು ಅತ್ಯಂತ ಕಟುವಾಗಿ ಖಂಡಿಸಿರುವದನ್ನು ೧೩೦ ನೆಯ ತ್ರಿಪದಿಯ ವಿವರಣೆಯಲ್ಲಿಯೂ ನೋಡಬಹುದು. ಪ್ರಾಸಂಗಿಕವಾಗಿ ಮತ್ತೆ ಕೆಲವು ವಚನಗಳನ್ನು ಉದಾಹರಿಸುವದು ಅಪ್ರಸ್ತುತವೇನಲ್ಲ. ಪರಶಿವನಿಂದ ತವನಿಧಿ ಪಡೆದ ದೇವರದಾಸಿಮಯ್ಯನವರು –
ವೇಶಿಯ ಎಂಜಲ ತಿಂದು, ಈಶ್ವರ ಪ್ರಸಾದವ
ಭುಂಜಿಸಿದೊಡೆ ಓಸರಿಸಿತ್ತಯ್ಯ ಲಿಂಗವು
ಆತ ದ್ರೋಹಿ, ಭಾಷೆ ತಪ್ಪುಕನವನು
ಭವದಲ್ಲಿ ಬಳಲುವನು, ಅಂತಹನ ಕಂಡು
ಹೇಸಿ, ಕಡೆಗೆ ತೊಲಗಿದೆ ಕಾಣಾ ರಾಮನಾಥ |
ಭಕ್ತಿ ಭಾಂಡಾರಿ ಬಸವಣ್ಣನವರ ಆಪ್ತಕಾರ್ಯದರ್ಶಿ ಹಡಪದಪ್ಪಣ್ಣನವರು
ದಾಸಿಯಸಂಗ ಎರಡನೆಯ ಪಾತಕ
ವೇಶಿಯ ಸಂಗ ಮೂರನೆಯ ಪಾತಕ
ಮೀಸಲಳಿದ ಪರಸ್ತ್ರೀಯರ ಸಂಗ ಪಂಚ ಮಹಾಪಾತಕ,
ಇನಿಸು ಶಿವಭಕ್ತರಿಗೆ ಸಲ್ಲವು
ಇವನರಿದರಿದು ಮಾಡಿದನಾದರೆ ಯಮ ಪಟ್ಟಣವೆ ವಾಸವಾಗಿಪ್ಪರಲ್ಲದೆ
ಈ ದೇಶಕ್ಕೆ ಮರಳಿ ಬರಲಿಲ್ಲ. ನೋಡಾ
ಬಸವಪ್ರಿಯ ಕೂಡಲ ಚನ್ನಬಸವಣ್ಣ
ಭಕ್ತನಿಗೆ ವೇಶಿಯ ಸಂಗ, ದಾಸಿಯ ಸಂಗ, ಪರಸ್ತ್ರೀಯರ ಸಂಗ ಯಾವುದೂ ಉಚಿತವಲ್ಲ. ಈ ಸಂಗದಿಂದ ಪಂಚಮಹಾಪಾತಕವೇ ಪ್ರಾಪ್ತವಾಗುವದೆಂದು ಶರಣರು ಎಚ್ಚರಕೊಟ್ಟಿದ್ದಾರೆ. ಅದುಕಾರಣ ಪರಸ್ತ್ರೀಸಂಗವು ಬಹುಕೆಟ್ಟದ್ದು ಮತ್ತು
ದುರಿತಕಾರಕವೆಂದು ಅರಿತು ಅದರಿಂದ ದೂರವಾಗಿರಬೇಕು. ಇಲ್ಲವಾದರೆ ಇಂಥವರಿಗೆ ಯಮಪುರದ ವಾಸವೇ ಸ್ಥಿರವಾಗುವದು. ರೌರವನರಕದಲ್ಲಿ ಬಿದ್ದು ದುಃಖಿಯಾಗಬೇಕಾಗುವದು. ಪರಸ್ತ್ರೀ ಸಂಗದಿಂದ ದೂರಾದವರ ಗುಹ್ಯವೇ ಶ್ರೇಷ್ಠವೆನಿ
ಸುವದು. ಅದುವೆ ದಿಟ್ಟತನದ ಪ್ರತೀಕ. ಯಾಕಂದರೆ ರಾಷ್ಟ್ರಕವಿ ಕು.ವೆಂ.ಪು. ಇವರು
‘ರಾಮಾಯಣ ದರ್ಶನ’ದಲ್ಲಿ “
ಇಂದ್ರ ವಿಜಯಿಗಿಂ ನೂರ್ಮಡಿ ವೀರವಿಕ್ರಮಿಯಲ್ತೆ ಇಂದ್ರಿಯ ವಿಜಯಿ”
ಅರಣ್ಯವಾಸದಲ್ಲಿ ಬ್ರಹ್ಮಚಾರಿಯಾದ ಲಕ್ಷ್ಮಣನು ಇಂದ್ರ ವಿಜಯಿಯಾದ. ಇಂದ್ರಜಿತ್ (ರಾವಣನ ಮಗ) ನನ್ನು ಜಯಿಸಿದಾಗ ಅವನನ್ನು ಪ್ರಶಂಸಿಸುತ್ತ ಬರೆದ ಮಹಾಕಾವ್ಯವಿದಾಗಿದೆ. ಇಂದ್ರಿಯ ವಿಜಯಿಯಾದವನೇ ಮಹಾವೀರ. ಅಂತೆಯೇ ಶಿವಕವಿಯ ದಿಟ್ಟ ಗುರುಲಿಂಗ’ ವೆಂದು ಉದಾಹರಿಸಿದ್ದು ಅತ್ಯಂತ ಮನನೀಯವಾಗಿದೆ.
ಇಂಥ ವೀರತ್ವವನ್ನೇ ಸಾಧಿಸಬಲ್ಲ ಗುಹೇಂದ್ರಿಯದಲ್ಲಿ ಗುರುಲಿಂಗವನ್ನು ಸಾಧಿಸಬೇಕು. ಅಳವಡಿಸಿಕೊಳ್ಳಬೇಕು ಎಂದು ಗುರುನಾಥನು ಶಿಷ್ಯನಿಗೆ ಎಚ್ಚರ ಕೊಡುತ್ತಾನೆ. ಸಮಯೋಚಿತ ಎಚ್ಚರಿಕೆಯನ್ನು ನೀಡುವ ಆತ್ಮೀಯ ಗುರುವೆ ! ಕೃಪೆದೋರು.
ಬಿಡದೆ ಸತ್ಪಥಮಾರ್ಗ | ನಿಡಿದು ತಾ ನುಡಿದಂತೆ
ನಡೆವ ಪಾದವು ತಾ-ಮೃಡನು ಶಿವಲಿಂಗವೆಂದು
ನುಡಿದ ಶ್ರೀಗುರುವೆ ಕೃಪೆಯಾಗು ||೧೫೩||
ಪಾದಗಳೆರಡು ಮೂರನೆಯ ಕರ್ಮೇದ್ರಿಯಗಳು. ಪಾದಗಳಿಂದ ಚಲನ- ವಲನ ನಡೆಯುವದು. ನಡೆಯುವದು ಪಾದಗಳ ಕರ್ಮವಾದರೂ ಅದು ಸತ್ಕರ್ಮವಾಗಬೇಕು. ಸಾರ್ಥಕವಾಗಬೇಕು. ವ್ಯರ್ಥವಾದ ನಡೆಯಾಗಬಾರದು. ನಡೆಯ ಅರ್ಥ ನುಡಿಯಲ್ಲಿದೆ.
ಪಾದಗಳು ಕ್ರಿಯಾದ್ಯೋತಕವೆಂದು ಅರಿತಿದ್ದೇವೆ. ಪಾದಗಳಿಂದಲೇ ಗಮನಾಗಮನಗಳನ್ನು ಸಾಧಿಸಲು ಬರುವದು. ಓಟಗಳ ಪಂದ್ಯಗಳಲ್ಲಿ ಪಾದಗಳ ಪಾತ್ರ ಬಹು ಮುಖ್ಯವಾದುದು. ಬಂಧುರ ಕಾಲುಗಳುಳ್ಳ ಪ್ರಾಣಿಗಳು ಅತ್ಯಂತ ವೇಗದಲ್ಲಿ ಓಡುತ್ತವೆ. ಅವುಗಳಲ್ಲಿ ಕುದುರೆ ಮತ್ತು ಜಿಂಕೆಗಳು ಮುಖ್ಯ ಪ್ರಾಣಿಗಳು. ಓಟಗಳ ಸ್ಪರ್ಧೆ ಜಾಗತಿಕವಾಗಿ ನಡೆಯುತ್ತದೆ. ಓಲಿಂಪಿಕ್ ಸ್ಪರ್ಧೆಗಳಲ್ಲಿ ೨೬ ಮೈಲು (ಮ್ಯಾ ರೇಥಾನ) ಇತಿಹಾಸವಿದೆ. ಇದುವೆ ಅತ್ಯಂತ ಕಠಿಣ ಪಂದ್ಯವೆನಿಸುವದೆಂದು ಕ್ರೀಡಾಪಟುಗಳ ಅಭಿಪ್ರಾಯ .
ಓಟದ ಸ್ಪರ್ಧೆಗಳು ಜೀವನ ಶ್ರೇಯಸ್ಸಿಗೆ ಕಾರಣವಾಗಬಹುದು. ಆದರೆ ಆತ್ಮೋನ್ನತಿಯತ್ತ ತಿರುಗಿದರೆ ಅದನ್ನು ಸಾಧಿಸಬಹುದು. ಆತ್ಮೋನ್ನತಿಗೆ ನಡೆ-ನುಡಿಗಳ ಹೊಂದಾಣಿಕೆಯೇ ಮುಖ್ಯ. ಅದ ಕಾರಣ ನಡೆಗೆ ಕಾರಣವೆನಿಸಿದ ಪಾದಗಳು ಸತ್ಪಥವನ್ನು ಬಿಡದಂತೆ ಸನ್ಮಾರ್ಗದಲ್ಲಿ ನಡೆಯಬೇಕು. ಮಹಾತ್ಮರ ನಡೆಯನ್ನು ಅನುಸರಿಸಿ ನಡೆಯಬೇಕು. ಸಜ್ಜನರ ನಡೆಯಲ್ಲಿ ಶಿವನಿರುತ್ತಾನೆಂಬ ಸರ್ವಜ್ಞನ ಈ ಮಾತು ಮನೋಜ್ಞವಾಗಿದೆ –
ಲಜ್ಜೆಯನು ತೊರೆದು ನೀ | ಹೆಜ್ಜೆಯನು ಸಾಧಿಪಡೆ
ಸಜ್ಜೆಯಲ್ಲಿ ಶಿವನ ಧರಿಸಿಪ್ಪ ಶರಣರ
ಹೆಜ್ಜೆಯಲಿ ನಡೆಯೋ ಸರ್ವಜ್ಞ
ಸಜ್ಜನರ ನಡೆಯನ್ನು ಅನುಸರಿಸುವಲ್ಲಿ ನಾಚಿಕೆಯನ್ನು ತೊರೆದು ಮುನ್ನಡೆಯಬೇಕು ನಿಜಗುಣರು ಶಿವನಲ್ಲಿ –
“ಶಾಂತರೊಸೆದಹುದೆಂದು ಬಣ್ಣಿಸುವ ವರ್ತನವನ್ನೇ ಬೇಡಿದ್ದಾರೆ.
ಇದುವೆ ನಿಜವಾದ ನಡೆಯಾಗಿದೆ. ಆಗ “ನುಡಿದಂತೆ ನಡೆ ಇದೇ ಜನ್ಮಕಡೆ” ಎಂಬ ಶರಣವಾಣಿ ಯಥಾರ್ಥವಾಗಿ ತೋರುವದು. ಮಹಾತ್ಮರ ನಡೆಯನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಾಗದಿದ್ದರೂ ಸ್ವಲ್ಪಾದರು ಆಚರಿಸಲು ಪ್ರಯತ್ನಿಸುವವನಿಗೂ ಕೇಡಿಲ್ಲ. ಅದುಕಾರಣ ಮಹಾನುಭಾವರು ತೋರಿಸಿದ ಸನ್ಮಾರ್ಗವನ್ನು ಚಾಚೂ ತಪ್ಪದಂತೆ ನಡೆಯಬೇಕು. ಇಂಥ ನಡೆಯಲ್ಲಿ ಶಿವನು ಮನೆ ಮಾಡಿಕೊಂಡಿರುವನಲ್ಲದೆ ಶಿವಲಿಂಗದ ಸಾಕ್ಷಾತ್ಕಾರವಾಗುವದೆಂದು ಶ್ರೀಗುರುರಾಯನು ಮನೋಜ್ಞವಾಗಿ ನುಡಿಯುತ್ತಾನೆ. ಶ್ರೀಗುರುವಿನ ತೇಜೋಮಯ ಶಿವಲಿಂಗದ ದರ್ಶನವಾಗಬಲ್ಲದು. ಓ ಗುರುವೆ ! ಎನ್ನ ಪಾದಂಗಳಲ್ಲಿ ಶಿವಲಿಂಗವನ್ನು ಕಾಣುವ ಒಳ್ನಡೆಯನ್ನು ಕರುಣಿಸು.