ಶ್ರೀ ಶಿವಯೋಗ ಮಂದಿರ ಸಂದರ್ಶನ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

ಬನಶಂಕರಿಯಿಂದ ಏಳು ಕಿಲೋಮೀಟರ್‌ ದಾರಿಯನ್ನು ಕ್ರಮಿಸುತ್ತಿದ್ದಂತೆ ಶ್ರೀ ಶಿವಯೋಗ ಮಂದಿರವು ಕಾಣಬರುವುದು. ಸರಳ-ಸುಂದರ ವಿನ್ಯಾಸದ ಶ್ರೀ ಬಸವೇಶ್ವರ ಮಹಾದ್ವಾರ. ೧೯೯೭ಕ್ಕಿಂತ ಮುಂಚೆ ಇದರ ನಿರ್ಮಾಣವಾಗಿರಲಿಲ್ಲ. ಅನೇಕ ಸಲ ಸಂಸ್ಥೆಯ ಸಭೆಗಳಲ್ಲಿ ಮಹಾದ್ವಾರ ನಿರ್ಮಾಣದ ಠರಾವು ಆಗಿದ್ದವು. ೧-೪-೧೯೯೬ರಲ್ಲಿ ಮುಂಡರಗಿ. ಪೂಜ್ಯರು ಸಂಸ್ಥೆಯ ಅಧ್ಯಕ್ಷರಾದ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಚನ್ನಾಗಿರಲಿಲ್ಲ. ವಿದ್ಯುತ್ ಬಿಲ್ ಸಹ ಬಹಳ ಉಳಿದಿತ್ತು. ರುದ್ರಾಭಿಷೇಕ ನಿಧಿ ೪/೫ ಲಕ್ಷ ರೂ.ಗಳು ಬಳಕೆಯಾಗಿದ್ದವು. ಮಹಾದ್ವಾರದ ಮುಂಭಾಗ ಮತ್ತು ಉತ್ತರದಲ್ಲಿದ್ದ ದಾಸೋಹ ಇಮಾರತಿಗಳು ಬಿದ್ದಿದ್ದವು. ಹೊಸ ಬಿಲ್ಡಿಂಗ್ ತಯಾರಾಗಿ ಈ ಸ್ಥಳ ಹಾಳುಬಿದ್ದಿತ್ತು, ಆರ್ಥಿಕ ಭದ್ರತೆಗಾಗಿ ದಾಸೋಹ ನಿಧಿಯನ್ನು ಮತ್ತು ರುದ್ರಾಭಿಷೇಕ ನಿಧಿಯನ್ನು ಪುನಃ ಪ್ರಾರಂಭಿಸಿ ಹಣಕಾಸಿನ ಅನುಕೂಲತೆಯಾಗಹತ್ತಿತು. ಜೊತೆಗೆ ಮುಂಡರಗಿ ಮಠದ ಸದ್ಭಕ್ತರಾದ ಶ್ರೀ ವೀರಣ್ಣ ಚನ್ನಬಸಪ್ಪ ಮುಷ್ಟಿ ಗಂಗಾವತಿ ಇವರು ಮಹಾದ್ವಾರ ಕಟ್ಟಡಕ್ಕಾಗಿ ೫೧ ಸಾವಿರಗಳನ್ನು ಸಲ್ಲಿಸಿದರು. ಲಿಂ. ಶ್ರೀ ಸದಾಶಿವ ಮಹಾಸ್ವಾಮಿಗಳ ೧೫ ನೆಯ ಪುಣ್ಯಾರಾಧನೆ ದಿ. ೨-೧೧-೯೮ರಂದು ಈ ಮಹಾದ್ವಾರದ ಪ್ರವೇಶೋತ್ಸವವು ಅನೇಕ ಪೂಜ್ಯರ -ವಟುಸಾಧಕರ ಸದ್ಭಕ್ತರ ಸಮೂಹದಿಂದ ನೆರವೇರಿತು. ಬಸವಾದಿ ಶಿವಶರಣರ ಆದರ್ಶಗಳನ್ನು ತತ್ವಗಳನ್ನು ಆಚರಿಸಿ ಎರಡನೆಯ ಬಸವೇಶ್ವರರೆಂದೇ ಖ್ಯಾತನಾಮರಾದ ಪೂಜ್ಯ ಸಂಸ್ಥಾಪಕರ ಸದಾಶೆಯನ್ನು ಸ್ಮರಿಸಿ ಶ್ರೀ ಬಸವೇಶ್ವರ ಮಹಾದ್ವಾರವೆಂದು ಹೆಸರಿಸಲಾಗಿದೆ. ಮಹಾದ್ವಾರದ ಎಡಭಾಗದಲ್ಲಿಯ ದಾಸೋಹದ ಹಳೆಜಾಗೆಯಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿ ಶ್ರೀ ವಾಣಿಜ್ಯ ಮಳಿಗೆಗಳನ್ನು ರಚಿಸಲಾಯಿತು. ಬಂದ ಭಕ್ತರಿಗೆ ಅವಶ್ಯಕ ವಸ್ತುಗಳು ಲಭಿಸುವಂತಾಗಿದೆ. ಈ ಮಳಿಗೆಗಳಿಗೆ ವೈರಾಗ್ಯ ಶ್ರೀ ಮಲ್ಲಣಾರ್ಯರ ಹೆಸರಿಟ್ಟು ಸ್ಮರಿಸಲಾಯಿತು.

ಪೂರ್ವಾಭಿಮುಖವಾಗಿ ಮಹಾದ್ವಾರದಲ್ಲಿ ಪ್ರವೇಶಿಸುತ್ತಿದಂತೆ ಬಲಭಾಗದಲ್ಲಿ ಶ್ರೀ ವಿಜಯ ಮಹಾಂತೇಶ್ವರ ಅತಿಥಿಗೃಹ’ ಡಾ. ಮೂಜಗಂ ಅವರು ನೂರೊಂದು ಜನ ಗುರು ಜಂಗಮರೂಡನೆ ಪಾದಯಾತ್ರೆ ಮಾಡಿದ ನೆನಹಿನಲ್ಲಿ ರೂಪುಗೊಂಡಿದೆ. ಯಾತ್ರಾರ್ಥಿಗಳಾಗಿ ಆಗಮಿಸುವವರಿಗೆ ವಸತಿಗೆ ಅನುಕೂಲವಾಗಿದೆ. ಎಡಭಾಗದ ಕಟಂಜನದ ಕಾಂಪೌಂಡಿನಲ್ಲಿ ವಿಶಾಲವಾದ ಶ್ರೀ ನಾಲತ್ವಾಡ ವೀರೇಶ್ವರ ಶರಣರ ಉದ್ಯಾನವನ ಸುಂದರವಾಗಿ ರೂಪುಗೊಳ್ಳಹತ್ತಿದೆ. ದಕ್ಷಿಣದ ಗೇಟಿನಿಂದ ಮುಂದೆ ನಡೆದರೆ ದೊಡ್ಡ ಆಲದ ಮರದ ನೆರಳಿನಲ್ಲಿ ಸಾಗುತ್ತ ಬಲಕ್ಕೆ ಅರಕೇರಿಯವರ ಹಳೆ ಇಮಾರತಿ, ಇದರ ಮುಂದೆ ಗುಳೇದಗುಡ್ಡ ವಸ್ತ್ರದವರು ಕಟ್ಟಿಸಿದ ಇಮಾರತಿ ಇವು ಸಂಸ್ಥೆಯ ಸಂಚಾಲಕ ಶ್ರೀಗಳಿಗಾಗಿ ಇವೆ. ಎಡಭಾಗದ ಸಣ್ಣ ದ್ವಾರದಲ್ಲಿ ನಡೆದರೆ ಮೊದಲು ಬರುವುದು ಲಿಂ. ಶ್ರೀ ಸದಾಶಿವ ಮಹಾಸ್ವಾಮಿಗಳವರ ಗದ್ದುಗೆ. ಈ ಪೂಜ್ಯರು ಸುಮಾರು ೫೦ ವರುಷ ಪರ್ಯಂತರ ಸಂಚಾಲಕರಾಗಿ ಮಂದಿರದ ಸೇವೆಯನ್ನು ಮಾಡಿದವರು. ಗುರುಗಳಿಗಿಂತ ಚಿಕ್ಕದಾಗಿರಲೆಂದು ಹನ್ನೆರಡು ಕಮಾನುಗಳಲ್ಲಿ ಅಷ್ಟಕೋನ ಆಕಾರದ ಗದ್ದುಗೆ ಈ ಪೂಜ್ಯರದು. ಸುತ್ತಲು ಭಕ್ತರು ಸಂತಸದಿಂದ ಧ್ಯಾನ ಮಾಡಬಹುದು.

ಮುಂದೆ ಕಾಣುವುದು ಸಂಸ್ಥಾಪಕರ ಸಮಾಧಿ ಮಂದಿರ. ೬೩ ಕಲಶಗಳುಳ್ಳ ಗೋಪುರದ ಮಂದಿರ, ಭವ್ಯವಾದ ಶಿಲಾ ಮಂಟಪ, ಆಧುನಿಕ ಶಿಲ್ಪಕಲಾಕೃತಿಯ ವಿನೂತನ ಪ್ರಾತಿನಿಧ್ಯವಿಲ್ಲಿದೆ. ಭಾರತೀಯ ಸಂಸ್ಕೃತಿಯ ತವನಿಧಿ, ಮೂರನ್ನು ಒಳಗೊಂಡು ಅಖಂಡವಾದ ಎತ್ತರವಾದ ಕಮಾನು ಜಂಗಮತತ್ವದ ಔನ್ನತ್ಯವನ್ನು ಸೂಚಿಸುವ ಪಲ್ಲಕ್ಕಿದಂಡಿಗೆಯಂಥ ದೊಡ್ಡ ಕಮಾನು ಎಡ ಬಲಕ್ಕೆ ಚಿಕ್ಕೆರಡು ಕಮಾನುಗಳು. ಗುರು- ಜಂಗಮರ ಸಾಮರಸ್ಯವನ್ನು ಸಾಧಿಸಿ ಲಿಂಗತತ್ವದ ಮಹತ್ವವನ್ನು ಬಾನೆತ್ತರ ಬಿತ್ತರಿಸಿದ ಮಹಾತ್ಮನೀತನೆಂಬುದನ್ನು ಮುಂಭಾಗದ ಮೇಲಿರುವ ಲಿಂಗಮರಿ ಸೂಚಿಸುತ್ತದೆ. ಎಲ್ಲವನ್ನೊಳಗೊಂಡು ಲಿಂಗಮಯವಾದ ಸಂಕೇತವನ್ನು ತಿಳಿಸುತ್ತಿದೆ. ಈ ಮೇಲಿನ ಮಹಾಲಿಂಗವು ಒಳಹೊರಗು ಒಂದಾದ ಮಹಾನುಭಾವವೆಂಬುದನ್ನು ತಿಳಿಸುವ ಪೂರ್ವ ಪಶ್ಚಿಮದ ಕಮಾನುಗಳು, ಮಹಾ ಮಂದಿರವನ್ನು ಒಳ ಪ್ರವೇಶಿಸುತ್ತಿದ್ದಂತೆ ಶಿಲ್ಪಿಯ ಜಾಣ್ಮೆಯನ್ನು ಪರೀಕ್ಷಿಸಬಹುದು. ಸುಂದರ ಸುಳುಹುಗಳು, ಅಂದವಾದ ಮೂರ್ತಿಗಳು.

ಶ್ರೀ ಕುಮಾರಮಹಾಸ್ವಾಮಿಗಳವರು ವೀರಶೈವ ಸಮಾಜಕ್ಕೆ ಏನು ಮಾಡಲಿಲ್ಲವೆಂದು ಪ್ರಶ್ನಿಸಬೇಕೇ ಹೊರತು ಏನು ಮಾಡಿದರೆಂಬುದು ಸರಿಯೆನಿಸದು. ಪರಮ ಪೂಜ್ಯರ ಜೀವನವು ಸಂಪೂರ್ಣವಾಗಿ ಲೋಕಕಲ್ಯಾಣಕ್ಕಾಗಿ ಸವೆದಿತ್ತು. ಮಹಾಸ್ವಾಮಿಗಳು ಅಂದಣವನೇರಿ ಮೆರೆಯಲಿಲ್ಲ, ಕುಂದಣವ ಗಳಿಸಿ ಗಡಣಿಸಲಿಲ್ಲ. ಕೀರ್ತಿವಾರ್ತೆಗಾಗಿ ಕಾರ್ಯಕೈಗೊಳ್ಳಲಿಲ್ಲ, ವೈರಾಗ್ಯ ಪ್ರದರ್ಶಿಸಲು ವಿಷಯ ತೊರದವರಲ್ಲ. ವಿರಾಗವೇ ಉಸಿರಾಗಿತ್ತು, ಸಮಾಜ ಸೇವೆಗಾಗಿಯೇ ತನುವ ಮೀಸಲುಗೊಳಿಸಿದವರು. ಸಂಸ್ಕೃತಿ ಸಂವರ್ಧನೆಗಾಗಿ ಧನವನ್ನು ಸೂರೆಗೈದವರು. ಶಿವಯೋಗ ಸಾಧನೆಗಾಗಿ ಮನವ ಮೀಸಲಿಟ್ಟವರು. ತಮ್ಮ ತನುವಿನ ಬಗೆಗೆ ನಿರ್ಮೋಹಿಗಳು, ಮನದಲ್ಲಿ ನಿರಹಂಕಾರಿಗಳು. ವಿಷಯದಲ್ಲಿ ಉದಾಸೀನರು. ಭಾವದಲ್ಲಿ ದಿಗಂಬರರು, ಚಿತ್ತದಲ್ಲಿ ನಿರಪೇಕ್ಷೆಯುಳ್ಳವರು. ತಮಗಾಗಿ ಯಾವುದನ್ನು ಬಯಸಲಿಲ್ಲ. ಶಿವಾನುಭವವನ್ನು ಅರಿಯಲು ಆತುರಪಟ್ಟವರು. ಹಲವು ಅನುಭಾವಿಗಳನ್ನು ಸಂಧಿಸಿದ್ದರು. ಜ್ಞಾನಾನಂದದಲ್ಲಿ ಒಂದಾಗಿ ಸಮರಸಗೊಂಡ ಪುಣ್ಯಾತ್ಮರು ಅವರು. ತಮ್ಮ ಆತ್ಮಚರಿತೆಯನ್ನು ಬರೆಯಿಸಿಕೊಳ್ಳಲಿಲ್ಲ. ಬರೆವವರಿಗೆ ಜರಿದರು. ಮಹಾನುಭಾವರ ದಿವ್ಯ ಚರಿತೆ ಬರೆಯಲು ಪ್ರೇರಣೆ ನೀಡಿದರು. ಆತ್ಮಸ್ತುತಿಯನ್ನೆಂದೂ ಮೆಚ್ಚಲಿಲ್ಲ. ಪರನಿಂದೆಯನ್ನು ಕೇಳಲಿಲ್ಲ. ಅಂಥವರ ಪುಣ್ಯಸ್ಮಾರಕ ಮುಂದಿನವರಿಗೆ ಮಾರ್ಗದರ್ಶಕವೆಂದರಿದ ಪೂಜ್ಯರ ಉತ್ತರಾಧಿಕಾರಿಗಳಾದ ಶ್ರೀ ಸದಾಶಿವ ಮಹಾಸ್ವಾಮಿಗಳವರ ದಿವ್ಯ ಭವ್ಯ ಕೊಡುಗೆ ಈ ಮಂದಿರ.

ಭಾರತದೇಶ ಸಾಂಸ್ಕೃತಿಕ ಕಲೆಯಿಂದ ಖ್ಯಾತಿ ಗಳಿಸಿದಂತೆ ಶಿವಯೋಗಮಂದಿರದ ಪರಿಸರ ಇದಕ್ಕೆ ಹೊರತಾಗಿಲ್ಲ, ಉತ್ತರದಲ್ಲಿ ಮಹಾಕೂಟ, ಪಟ್ಟದ ಕಲ್ಲು ಹಾಗೂ ಐಹೊಳೆಯ ದೇಗುಲಗಳು ಶಿಲ್ಪಕಲೆಯ ವೈಭವಕ್ಕೆ ತಾಣವಾಗಿವೆ. ಪಶ್ಚಿಮದ ಬಾದಾಮಿಯ ಮೇಣಬಸದಿಗಳು ಶಿಲಾಭವ್ಯತೆಗೆ ಹೆಸರಾಗಿವೆ. ದಕ್ಷಿಣದ ಬನಶಂಕರಿಯು ಭಕ್ತರಿಗೆ ಭಕ್ತಿಯ ಕೇಂದ್ರವಾಗಿರುವಂತೆ ಶಿವಯೋಗಮಂದಿರದ ಪೂರ್ವಕ್ಕೆ ಮಲಾಪಹಾರಿಣಿ ಉತ್ತರ ವಾಹಿನಿಯಾಗಿ ಹರಿಯುತ್ತಿದ್ದು  ಮಹಾಶಿವಯೋಗಿಯ ಸಮಾಧಿಗೆ ಧಬೆಧಬೆಯಿಂದ ನಿತ್ಯ ಓಂಕಾರ ಧ್ವನಿಸುತ್ತಿದೆ. ಸುತ್ತಲಿನ ಗುಡ್ಡಗಳು ಶಿವಯೋಗಿಯ ಕೀರ್ತಿಯನ್ನು ಎತ್ತರಕ್ಕೆ ಸಾರುತ್ತಿವೆ. ಇವೆಲ್ಲವನ್ನು ಗಮನಿಸಿದರೆ ಇಂಥ ಪುಣ್ಯಪುರುಷರಿಗೆ ಚಿರಸ್ಮಾರಕ ರಚಿಸಿದ ಶ್ರೀ ಸದಾಶಿವರ ಶ್ರಮ ಸಾರ್ಥಕವಲ್ಲವೆ? ಸದಾಶಿವ ಮಹಾಸ್ವಾಮಿಗಳು ಯೋಜನಾಬದ್ಧರು. ಸ್ವತಃ ಈ ಗುರು ಮಂದಿರ ನಿರ್ಮಾಣದ ನಕಾಶೆಯನ್ನು ತಯಾರಿಸಿ ಶಿಲ್ಪಿಗಳಿಂದ ಸಾಕಾರಗೊಳಿಸಿದವರು. ಅಭಿಯಂತರ ಬುದ್ಧಿಯನ್ನು ಹೊಂದಿದಂತೆ ಕಲಾವಿದನ ಹೃದಯವುಳ್ಳವರಾಗಿದ್ದರು ಅವರು.

ಈ ಮಹಾಮಂದಿರದ ಉದ್ದ-ಅಗಲ, ಉತ್ತರ-ದಕ್ಷಿಣಕ್ಕೆ ೭೩ ಅಡಿಗಳಿದ್ದರೆ, ಪೂರ್ವ ಪಶ್ಚಿಮಕ್ಕೆ ೫೧ ಅಡಿಗಳಷ್ಟಿದೆ. ಪಾತಾಳ-ಮರ್ತ್ಯ ಸ್ವರ್ಗಲೋಕವೆಂಬಂತೆ ಮೂರು ಭಾಗಗಳಲ್ಲಿ ಹಂತಹಂತವಾಗಿ ವಿನ್ಯಾಸಗೊಂಡಿದೆ. ಉತ್ತರಾಭಿಮುಖವಾಗಿ  ನಿರ್ಮಾಣವಾದ ಮಂದಿರ ಮುಂಭಾಗದ ಎತ್ತರ ಕಮಾನಿನ ಅಳತೆ ೨೯ಅಡಿ ೩ ಇಂಚು ಅಗಲವಾಗಿದ್ದರೆ, ೧೪ ಅಡಿ ೯ ಇಂಚು ಎತ್ತರವಾದ ಈ ಕಮಾನು ನೋಡುವಂತಾಗಿದೆ. ಇಂಥ ದೊಡ್ಡ ಕಮಾನು ಬೇರೆಲ್ಲೂ ಕಾಣುವುದಿಲ್ಲ. ಪೂರ್ವ-ಪಶ್ಚಿಮದ ಕಮಾನುಗಳು ೯ ಅಡಿ ಅಗಲವಾಗಿದ್ದು, ೧೧ ಅಡಿ ಎತ್ತರವಾಗಿವೆ. ಈ ಮುಂಭಾಗದ ಕೆಲಸ ೧೯೫೬ರ ನಂತರ ನಿರ್ಮಾಣವಾಯಿತು. ಮೇಲ್ಬಾಗ ಮೊದಲೇ ಪೂರ್ಣವಾಗಿತ್ತು. ಆದರೆ ಆರ್‌ಸಿಸಿ ಆಗಿರಲಿಲ್ಲ.

ಮರ್ತ್ಯಲೋಕವನ್ನು ಪ್ರತಿನಿಧಿಸುವ ಎರಡನೆಯ ಹಂತವು ೧೩ ಅಡಿಗಳಿಗೂ ಎತ್ತರವಾದ ನಾಲ್ಕು ಕಂಬಗಳಿವೆ. ಸತ್ಯ-ಪ್ರೀತಿ- ಅಹಿಂಸ-ಧರ್ಮಗಳನ್ನು ಮರ್ತ್ಯದ ಮಾನವರಿಗೆ ಬೋಧಿಸುವಂತಿದೆ. ಪುರುಷಾರ್ಥಗಳೂ ನಾಲ್ಕು. ಇವು ಅತ್ಯುನ್ನತ ಮಾರ್ಗಗಳಲ್ಲವೆ? ಮೂರನೆಯದು ಸ್ವರ್ಗವನ್ನು ಪ್ರತಿನಿಧಿಸುತ್ತಿದ್ದು ಪಂಚಾಚಾರಗಳೇ ಪ್ರಾಣವೆಂಬುದನ್ನು ತಿಳಿಸುವ ಪಂಚಕಮಾನುಗಳು ಸುಂದರವಾಗಿವೆ. ಕಂಬಗಳ ಕೆಲಸವೂ ನೋಡುವಂತಿದೆ. ಈ ಎಲ್ಲ ವಿನ್ಯಾಸವನ್ನು ಗಮನಿಸಿದರೆ ವೀರಶೈವ ಸಿದ್ಧಾಂತವನ್ನೇ ತಿಳಿಯಬಹುದು. ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ

ತತ್ವತ್ರಯಗಳು ವೀರಶೈವರದು. ಗುರು-ಲಿಂಗ-ಜಂಗಮರು ಆರಾಧ್ಯರೆಂಬುದನ್ನು ಮುಂಭಾಗದ ಕಮಾನುಗಳು ತಿಳಿಸಿದರೆ

ಪಾದೋದಕ-ಪ್ರಸಾದಗಳು ಅವರಿಂದ ಸಾಧ್ಯವೆಂಬುದು ಪೂರ್ವ ಪಶ್ಚಿಮ ಕಮಾನುಗಳು ತಿಳಿಸುತ್ತವೆ. ಪೂಜ್ಯರನ್ನು ಪೂಜಿಸುವ ಸಾಧನಗಳು ವಿಭೂತಿ-ರುದ್ರಾಕ್ಷಿ-ಮಂತ್ರಗಳು ಅವುಗಳಲ್ಲಿಯೇ ಕೂಡಿವೆ.

ಎರಡನೆ ಹಂತದ ಐದಂಕಣಗಳು ಪಂಚಾಚಾರಗಳನ್ನು ಬೋಧಿಸಿದರೆ, ಮೇಲಿನ ಐದು ಕಮಾನುಗಳು ಆತ್ಮವನ್ನೊಳಗೊಂಡ ಷಟ್‌ಸ್ಥಲವನ್ನು ನಿರೂಪಿಸುತ್ತವೆ. ಸೋಪಾನಗಳನ್ನು ಹತ್ತಿ ಗಂಟೆಯನ್ನು ಬಾರಿಸಿ ಶಿವಯೋಗಿಯ ದರ್ಶನ ಮಾಡಿಕೊಳ್ಳಬೇಕು. ಕಪ್ಪುಶಿಲೆಯ ಸುಂದರವಾದ ಎತ್ತರವಾದ ಬಾಗಿಲ ವಿನ್ಯಾಸ, ಒಳಗಿನ ಗದ್ದುಗೆಯ ವೈಭವ ಬಂದ ಭಕ್ತರನ್ನು ಆಕರ್ಷಿಸದೆ ಬಿಡದು. ಒಳಗಿರುವ ದಿವ್ಯಚೇತನವೇ ಬಾಗಿಲ ಮೇಲೆ ಮಂಡಿಸಿದಂತಿರುವ ಕುಮಾರೇಶ್ವರ ಭಾವಚಿತ್ರವು ಭಕ್ತಿಯಿಂದ ವಂದಿಸುವ ಭಕ್ತ ವೃಂದವನ್ನು ಹರಸುತ್ತಿದೆ; ಭಾವುಕರನ್ನು ಮಾತನಾಡಿಸುವಂತಿದೆ.

ವಿಜ್ಞಾನ ಯುಗದ ಇಂದಿನ ಮಾನವರು ಕಲ್ಪನೆಯಲ್ಲಿ ದೇವರನ್ನು ಅರಸುತ್ತಾರೆ. ದೇವರು ಎಲ್ಲಿದ್ದಾನೆ? ಗುಡಿ ಗುಂಡಾರಗಳು ಶೋಷಣೆಯ ಕೇಂದ್ರಗಳು; ಶಿಲಾಮೂರ್ತಿಗಳಿಗೆ ನಮಸ್ಕಾರವೇಕೆ? ಇತ್ಯಾದಿ ಪ್ರಶ್ನೆಗಳು ಮೌಲಿಕವಾದವುಗಳೆ! ಧರ್ಮ ಮತ್ತು ವಿಜ್ಞಾನಕ್ಕೆ ಎಲ್ಲಿಲ್ಲದ ನಂಟು. ಅವೆರಡಕ್ಕೂ ಅವಿನಾಭಾವ ಸಂಬಂಧವುಂಟು. ವಿಜ್ಞಾನಿ ಐನ್‌ಸ್ಟೀನ್‌ನು ‘ಧರ್ಮವಿಲ್ಲದ ವಿಜ್ಞಾನ ಕುರುಡು, ವಿಜ್ಞಾನವಿಲ್ಲದ ಧರ್ಮ ಕುಂಟು’ ಎಂದು ಹೇಳಿದ್ದನ್ನು ಅರ್ಥೈಸಿಕೊಳ್ಳಬೇಕು. ಧರ್ಮ ಕ್ರಿಯಾಶೀಲ. ವಿಜ್ಞಾನ ಜ್ಞಾನಮಯ. ಕೇವಲ ಕ್ರಿಯೆಯಾಗಲಿ, ಕೇವಲ ಜ್ಞಾನವಾಗಲಿ ಸಾರ್ಥಕವಲ್ಲ. ಕ್ರಿಯಾಜ್ಞಾನಗಳ ಸಮನ್ವಯವಾಗಬೇಕು. ಒಂದೇ ರೆಕ್ಕೆಯಿಂದ ಹಕ್ಕಿ ಹಾರಲಾರದು. ಕುರುಡ-ಕುಂಟರಿಬ್ಬರು ಸೇರಿ ದಾರಿಯನ್ನು ಗಮನಿಸಿ ಗುರಿಯನ್ನು ಮುಟ್ಟಬಲ್ಲರು. ಮಾನವಧರ್ಮವನ್ನು ಅರ್ಥಮಾಡಿಕೊಳ್ಳಬೇಕು. ಮೂಢನಂಬಿಕೆಯನ್ನು ದೂರ ತಳ್ಳಿ, ಕ್ರಿಯಾ ಜ್ಞಾನಗಳಲ್ಲಿ ಏಕಾರ್ಥವನ್ನು ಹೊಂದಿದ ಶಿವಶರಣರು ಸಕಲ ಜೀವಿಗಳ ಲೇಸ ನೆರಹಿದವರು. ಮಾನವರಲ್ಲಿ ಮಹಾದೇವನನ್ನು ಕಂಡವರು. ಆ ಮಾರ್ಗದಲ್ಲಿ ಮುನ್ನಡೆದವರು. ಅದೇ ರೀತಿ ಈ ಸಂಸ್ಥೆಯ ಸಂಸ್ಥಾಪಕರು ಜೀವನ ಪರ್ಯಂತರ ಮಾನವರ ಕಲ್ಯಾಣ ಬಯಸಿದವರು ಮಹಾಚೇತನರು ಜಂಗಮ ಜ್ಯೋತಿಗಳು, ಅವರ ಸ್ಮರಣೆ-ವಂದನೆ, ತ್ರಿಕಾಲದಲ್ಲಿ ಯೋಗ್ಯ.

 ವಿಶ್ವಾಸದಲ್ಲಿ ದೇವರಿದ್ದಾನೆ. ಶ್ರದ್ಧೆಯೆಂಬ ಕನ್ನಡಕ ಹಾಕಿ ಸದ್ಭಾವನೆಯಿಂದ ವಂದಿಸಿದರೆ ಮಹಾಸ್ವಾಮಿಯ ಕರುಣೆ ಆಗುವುದು. ಕನ್ನಡಿಯು ಬಿಂಬದಂತೆ ಪ್ರತಿಬಿಂಬ ತೋರುವುದಿಲ್ಲವೆ? ಸದ್ಭಾವನೆಯ ಪ್ರತಿಫಲವೆ ದೇವದರ್ಶನದಲ್ಲಿ ಕಾಣುವುದು. ಗುರುಗಳ ಹಸ್ತಸ್ಪರ್ಶದಿಂದ ಶಿಲೆಯೂ ದೇವರಾಗುವುದು. ದುರಾಚಾರ-ದುರ್ನಡತೆ-ದುರಭ್ಯಾಸಗಳನ್ನು ದೂರಿರಿಸಿ ಸದ್ಭಾವ ಬೆಳಸಲೆಂದೇ ದೇವಸ್ಥಾನಗಳು ಬೆಳೆದಿವೆ.

ಶ್ರೀ ಕುಮಾರ ಮಹಾಸ್ವಾಮಿಗಳ ಗದ್ದುಗೆಯ ಬಾಗಿಲಲ್ಲಿ ದರ್ಶನ ಮಾಡಿಕೊಳ್ಳಬೇಕು. ಗರ್ಭಗುಡಿಯ ಗದ್ದುಗೆ  ನಿರ್ಮಾಣವಾದರೂ ಕಲಾತ್ಮಕವಾಗಿದೆ, ತಾತ್ವಿಕವಾಗಿದೆ. ಲಿಂಗದ ವಿನ್ಯಾಸದಲ್ಲಿ ಕೆಳಗೆ ಪೀಠ, ಮೇಲೆ ಬಾಣದಂತೆ ಗದ್ದುಗೆಯ ರಚನೆಯಾಗಿದೆ. ಸುಂದರವಾದ ಸಾಣಿ ಹಿಡಿದ ಕಂಬಗಳೆರಡರ ಮೇಲೆ ಮನೋಹರ ಕಮಾನಿನ ಮಧ್ಯದಲ್ಲಿ ಗದ್ದುಗೆಯಿದೆ. ಗರ್ಭಗುಡಿಯಲ್ಲಿ ಎಲ್ಲರಿಗೆ ಪ್ರವೇಶವಿಲ್ಲ. ಪಕ್ಕಾ ಮಡಿಯಿಂದ ಶುದ್ಧ ಮನಸ್ಸಿನ ಭಕ್ತರು ಮಾತ್ರ ಮರಿದೇವರು ಪೂಜೆಯನ್ನು ಮಾಡುವಾಗ ಪ್ರವೇಶ ಪಡೆಯಬಲ್ಲರು. ಮಹಾದೇವಿಯಕ್ಕನ ವಚನದಂತೆ ‘ಕಲ್ಯಾಣವೆಂಬುದಿನ್ನಾರಿಗೆ ಹೊಗಬಾರದು. – ಆಸೆ ಆಮಿಷ ಅಳಿದವಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು. ಎಲ್ಲರಿಗೂ ಆತ್ಮೋದ್ದಾರ ಅರ್ಥಾತ್ ಮಂಗಲಜೀವನ  ಲಭಿಸುವುದಿಲ್ಲ. ಬಂದವರಿಗೆಲ್ಲ ಮಹಾಶಿವಯೋಗಿಯ ಗದ್ದುಗೆ ಸೇವೆ ದೊರೆಯುವುದಿಲ್ಲ. ಯಾರು ಆಸೆ, ಆಮಿಷಗಳನ್ನು ಅಳಿಯುವುದಿಲ್ಲವೋ ಅವರು ಆತ್ಮೋದ್ಧಾರ ಮಾಡಿಕೊಳ್ಳಲಾರರು. ಅಂಥವರು ಶ್ರೀ ಸ್ವಾಮಿಯ ಕೃಪೆ ಹೊಂದಲಾರರು. ಅಜ್ಞ ಮಾನವರು,

ಅಹಂಕಾರಿಗಳು ಇತ್ತ ಬರಲಾರರು. ನೀನು ನಾನೆಂಬ ದ್ವಂದ್ವ ಅಳಿದು ಅಹಂಕಾರವನ್ನು ದೂರ ತಳ್ಳಿದರೆ ಮಾತ್ರ ಕುಮಾರೇಶನ ದರ್ಶನ ಲಭಿಸುವುದೆಂಬ ಭಾವನೆಯಿಲ್ಲಿದೆ. ದೂರದಿಂದಲೇ ಸ್ವಾಮಿಯ ದರ್ಶನ ಲಾಭ ಪಡೆದು ಅವರ ಸಾಧನೆ- ಸಂದೇಶಗಳನ್ನು ಮೆಲುಕು ಹಾಕಿದರೆ ಸಾಕು. ನಿಮ್ಮ ಪ್ರವಾಸ ಸಾರ್ಥಕ. ಶ್ರೀ ಸ್ವಾಮಿಯ ದರ್ಶನ ಪಡೆದು ಕೃತಾರ್ಥಭಾವದಿಂದ ಉತ್ತರಾಭಿಮುಖವಾಗಿ ಮುನ್ನೆಡವಾಗ ಬಲಭಾಗದಲ್ಲಿ ರುದ್ರಾಕ್ಷಿ ಮರಗಳ ವನ . ಮಂದೆ ಕಾಣುವ ಎತ್ತರದ ಕಾಂಪೌಂಡಿನಲ್ಲಿ ‘ಕಲ್ಮಠ’ ವೆಂದು ಕರೆಯಿಸಿಕೊಳ್ಳುವ ಜ್ಞಾನ ದೇಗುಲ, ಸಾಧಕರ ಸಾಧನೆಯ ಕೇಂದ್ರ. ಇದು ಎರಡನೆಯ ಸಲ ರೂಪುಗೊಂಡಿದೆ. ಇಲ್ಲಿ ಒಳಗೆ ಗವಿಗಳಿವೆ. ಯೋಗಸಾಧನೆಗೆ ಧ್ಯಾನ ಮಾಡಲು ಉಪಯೋಗವಾಗುತ್ತಿವೆ. ಎಡಬಲಕ್ಕೆ ಕೋಣೆಗಳಿವೆ. ಅಧ್ಯಾಪಕರು ವಾಸ ಮಾಡುತ್ತಾರೆ. ಯಾತ್ರಿಕರ ಗದ್ದಲ ಹೆಚ್ಚಾಗಿ ಶಿವಯೋಗ ಮಂದಿರದ ಶೈಕ್ಷಣಿಕ ನಿಯಮಾನುಸಾರವಾಗಿ ವಟು ಸಾಧಕರಿಗೆ ಮೇಲ್ಮಠದಲ್ಲಿ ಹಾಗೂ ಹಳೆ ಕನ್ನಡ ಶಾಲೆಯಲ್ಲಿ ಶ್ರೀ ಕುಮಾರೇಶ್ವರ ಸಂಸ್ಕೃತ ವಿದ್ಯಾಪೀಠವು ಕಾರ್ಯ ಮಾಡುತ್ತಿದೆ.

ಕಲ್ಮಠದ ಉತ್ತರಕ್ಕೆ ಹಿಂದೆ ವಿವರಿಸಿದಂತೆ ಎಡಭಾಗದಲ್ಲಿ ಶ್ರೀ ವಿಜಯಮಹಾಂತೇಶ್ವರ ಗ್ರಂಥಾಲಯ ಹಾಗೂ ಶ್ರೀ ರೇವಣಸಿದ್ದೇಶ್ವರ ವಾಚನಾಲಯವಿದೆ. ಬಲಭಾಗದಲ್ಲಿ ಮುದ್ರಣಾಲಯವಿತ್ತು. ಈಗ ಅದರ ಕಾರ್ಯ ನಡೆದಿಲ್ಲ. ಬೇರೆಡೆಗೆ ಅಚ್ಚು ಮಾಡಿಸಿ ಸುಕುಮಾರ ಪತ್ರಿಕೆ ಪ್ರಕಟವಾಗುತ್ತಿದೆ. ಈ ಕಲ್ಮಠದಿಂದ ಮುಂದೆ ಈಶಾನ್ಯ ದಿಕ್ಕಿಗೆ ಇರುವ ಇಮಾರತಿಗೆ ‘ಹೊಸಮಠ’ ವೆಂದು ಕರೆಯುತ್ತಾರೆ. ಇದನ್ನು ಹಾಲಕೆರೆ ಅಜ್ಜ ನವರು ಕಟ್ಟಿಸಿದ್ದಾರೆ. ಇಲ್ಲಿ ಎಡ ಭಾಗದಲ್ಲಿ ಗವಿಯಿದೆ. ಬಿಲ್ವವನದ ಮಧ್ಯದಲ್ಲಿ ಸಣ್ಣ ಗುಡಿಯಿದೆ. ಸಂಸ್ಥೆಯ ಸ್ಥಾಪನೆಗೆ ಸ್ಥಾನವನ್ನು ಹುಡುಕಲು ಬಂದ ಶ್ರೀ ವಿಜಯಮಹಾಂತ ಸ್ವಾಮಿಗಳವರ ಮಹಾಂತಮ್ಮನೆಂಬ ಗೋವು ಸೆಗಣಿ ಹಾಕಿ ಮಲಗಿದ ನೆನಹಿನಲ್ಲಿ ಇದನ್ನು ಕಟ್ಟಿಸಿದ್ದಾರೆ. ಇದರ ಮುಂದೆ ಹೊಸದಾಗಿ ಕಟ್ಟಿಸಿದ ಹೊಸಮಠವಿದೆ. ಇಲ್ಲಿ ಹಾಲಕೆರೆ ಶ್ರೀಗಳ ಶಿವಪೂಜೆ ನಡೆಯುತ್ತಿದೆ. ಇದನ್ನು ನೋಡಿ ಪಶ್ಚಿಮದ ಕಡೆಗೆ ಆಗಮಿಸಿದರೆ ಯಳಂದೂರು ಶ್ರೀ ಬಸವಲಿಂಗಸ್ವಾಮಿಗಳ ಸ್ಮಾರಕ ವಿಭೂತಿ ನಿರ್ಮಾಣ ಕೇಂದ್ರವಿದೆ. ಪರಿಶುದ್ಧ ಪಾವನ ಭಸ್ಮ ಗಟ್ಟಿಗಳನ್ನು ಪಡೆಯಬಹುದು. ಅಲ್ಲಿಂದ ಮತ್ತೆ ದಕ್ಷಿಣಕ್ಕೆ ಹೊರಳಿದರೆ ಗೋಶಾಲೆಯಿದೆ. ಇತ್ತೀಚೆಗೆ ಇಂದಿನ ಅಧ್ಯಕ್ಷರು ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ  ವಿನೂತನವಾಗಿ ನಿರ್ಮಿಸಿದ ಗೋಶಾಲೆಯನ್ನು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಂದ ಉದ್ಘಾಟನೆ ಮಾಡಿಸಿದರು. ಗೋಮೂತ್ರವನ್ನು ಸಂಗ್ರಹಿಸುವ ವ್ಯವಸ್ಥೆಯೂ ಆಗಿದೆ. ಅದರ ಪಕ್ಕದಲ್ಲಿ ಶ್ರೀ ಕುಮಾರೇಶ್ವರ ದಾಸೋಹ ಮಂದಿರ, ಶ್ರೀ ಸದಾಶಿವ ಮಹಾಸ್ವಾಮಿಗಳವರ ಅಮೃತ ಮಹೋತ್ಸವ ನೆನಹಿನಲ್ಲಿ ಕಟ್ಟಿಸಿದ ಮಹಾಮನೆ, ನಿರಂತರ ಪ್ರಸಾದ ವ್ಯವಸ್ಥೆ ನಡೆಯಲೆಂದು ೧೯೯೬ರಿಂದ ದಾಸೋಹ ನಿಧಿಯನ್ನು ಸ್ಥಾಪಿಸಲಾಯಿತು. ೫೦೧೧ ರೂ. ದಕ್ಕೂ ಹೆಚ್ಚಿಗೆ ದೇಣಿಗೆ ನೀಡಿದವರ ಹೆಸರಿನಲ್ಲಿ ಒಂದು ದಿನ ಪ್ರಸಾದ ವಿತರಣೆಯಾಗುವುದು. ಪ್ರಸಾದ ಸ್ವೀಕರಿಸಿ  ದಣಿವಾರಿಸಿಕೊಂಡು ನಿಮ್ಮ ಭಕ್ತಿಯ ಕಾಣಿಕೆಯನ್ನಿತ್ತು ಪಾವತಿ ಪಡೆಯಬೇಕು; ದಾಸೋಹ ಮಂದಿರಗಳಲ್ಲಿ ಪ್ರಸಾದ ಸ್ವೀಕರಿಸಿ ಹಾಗೇ ಹೋಗುವುದು ಭಕ್ತರ ಲಕ್ಷಣವಲ್ಲ. ತಮಗೆ ಸಾಧ್ಯವಾದಷ್ಟು ದಾನ ಮಾಡಬೇಕು.

ಸಮಯಾವಕಾಶವಿದ್ದರೆ ಮೇಲ್ಮಠದ ಕಡೆಗೆ ಶಾಂತವಾಗಿ ಹೋಗಿ ಬರಬಹುದು. ಶ್ರೀ ವಿಜಯ ಮಹಾಂತೇಶ್ವರ ಅತಿಥಿಗೃಹದಲ್ಲಿ ತಂಗಬಹುದು. ಅದರ ಮುಂದೆ ಅರಕೇರಿಯವರ ಖೋಲಿಯಿದೆ. ಇದು ಮೊದಲಿನ ಆಕಾರದಲ್ಲಿಯೇ ಇದೆ. ಶ್ರೀ ಸದಾಶಿವ ಮಹಾಸ್ವಾಮಿಗಳು ೩-೪ ದಶಕಗಳ ಕಾಲ ವಾಸ್ತವ್ಯ ಮಾಡಿದ್ದರು. ಸಾಧಕರಿಗೆ ಇಲ್ಲಿ ಸಂಸ್ಕೃತ ಪಾಠ ಹೇಳುತ್ತಿದ್ದರು. ಒಮ್ಮೆ ಬೆಳಗು ಮುಂಜಾನೆ ಶೌಚಕ್ಕಾಗಿ ಹೋಗುವಾಗ ಹಾವೊಂದು ಕಚ್ಚಿದ ಕಾರಣ ಗುಳೇದಗುಡ್ಡದ ವಸ್ತ್ರದ ಸದಾಶಿವಯ್ಯ  ಸಹೋದರರು ಅರಕೇರಿ ಖೋಲಿಯ ಬಲಭಾಗದಲ್ಲಿ ಪೂಜ್ಯ ಶ್ರೀಗಳಿಗಾಗಿ ಪೂಜಾ ಮಂದಿರವನ್ನು ಕಟ್ಟಿಸಿಕೊಟ್ಟರು. ಅದರ  ಬಲಭಾಗದಲ್ಲಿ ಸಂಸ್ಕೃತ ವಿದ್ಯಾಪೀಠವಿದೆ. ವಟು ಸಾಧಕರ ಶಿಕ್ಷಣ ಇಲ್ಲಿಯೇ ನಡೆಯುತ್ತಿದೆ. ಅದರ ಪಕ್ಕದಲ್ಲಿ ಶ್ರೀ ಕೊಟ್ಟೂರು ಬಸವೇಶ್ವರ ಮಂದಿರವಿದೆ. ಶಿವಯೋಗ ಮಂದಿರ ಸ್ಥಾಪನೆಯ ಪೂರ್ವದಲ್ಲಿದ್ದ ಕುರುಹು, ಕೇವಲ ಶಿಥಿಲವಾದ ಕಟ್ಟೆಯಿತ್ತು. ಉಸ್ಮಾನಾಬಾದ್ ಜಿಲ್ಲೆಯ ಮೊರಬ ಗ್ರಾಮದ ಶ್ರೀ ಶಂಭುಲಿಂಗ ಶಿವಾಚಾರ್ಯರು ಇದನ್ನು ಕಟ್ಟಿಸಿದರು. ಸಂಸ್ಥೆಯಲ್ಲಿ ಇದ್ದು ಅಧ್ಯಯನಗೈದು ಈ ಸ್ಮಾರಕವನ್ನು ಜೀರ್ಣೋದ್ಧಾರಗೈದಿರುವರು. ಇದರ ಪಕ್ಕದಲ್ಲಿ ಹುಬ್ಬಳ್ಳಿ ಮೂಜಗಂ ಅವರು ತಮ್ಮ ವಸತಿಗಾಗಿ ತಮ್ಮ ಮಠದಿಂದಲೆ ಈ ಧ್ಯಾನಧಾಮವನ್ನು ಕಟ್ಟಿಸಿದರು. ಧ್ಯಾನಧಾಮದ ಪಕ್ಕದಲ್ಲಿ ಬೈಲಹೊಂಗಲ ಶ್ರೀಗಳು ನೂತನ ಮಂದಿರವನ್ನು ಕಟ್ಟಿಸಿರುವರು. ಅದರ ಮುಂಭಾಗದಲ್ಲಿ ವಿನೂತನ ಕಟ್ಟಡ ಪ್ರಾರಂಭವಾಗಿ ಹಾಗೇ ಉಳಿದಿದೆ. ಮೇಲ್ಮಠಕ್ಕೆ ಹೋಗುವಾಗ ಕೊಳ್ಳ ದಾಟಿದ ಬಳಿಕ ಬಲಭಾಗದಲ್ಲಿ ತೆಂಗಿನ ಬನವಿದೆ. ಪರಮ ಪೂಜ್ಯ ಶ್ರೀ  ಕು ಮಾರಶಿವಯೋಗಿಗಳ ಜನ್ಮ ಶತಮಾನೋತ್ಸವ ಕಾಲಕ್ಕೆ ಅವರ ಜನ್ಮಭೂಮಿಯಿಂದ ಶ್ರೀಕುಮಾರ ಜ್ಯೋತಿಯನ್ನು ತರಲಾಯಿತು. ಆ ನೆನಹಿಗಾಗಿ ೧೦೧ ತೆಂಗಿನ ಮರಗಳನ್ನು ನೆಡಲಾಯಿತು. ನಂತರ ಮತ್ತೆ ಹಲವು ತೆಂಗಿನ ಸಸಿಗಳನ್ನು ಹಚ್ಚಲಾಗಿದೆ. ಎಡಭಾಗದಲ್ಲಿ ವ್ಯಾಕರನಾಳ ಶ್ರೀ ಪಟ್ಟಾಧ್ಯಕ್ಷರ ಗದ್ದುಗೆಯಿದೆ. ಕೆಳಗೆ ಶಿವಪೂಜೆಗಾಗಿ ಗವಿಯೂ ಇದೆ. ಶ್ರೀಗಳು ವ್ಯಾಕರನಾಳ ಮತ್ತು ಮುದಗಲ್ಲ ಹಿರೇಮಠದ ಅಧಿಕಾರಿಗಳಾಗಿದ್ದರು. ಸಂಸ್ಕೃತ ಪಂಡಿತರು. ಉತ್ತಮ ಸಾಧಕರಾಗಿ ವಟು ಸಾಧಕರಿಗೆ ಪ್ರೌಢ ಪಾಠಗಳನ್ನು ಹೇಳುತ್ತ ಯೋಗ ಸಾಧನೆಯಲ್ಲೂ ಪಳಗಿ ಯೋಗಶಿಕ್ಷಣವನ್ನು ಬೋಧಿಸುತ್ತಿದ್ದರು. ಮುಂದೆ ಬರುವುದು ಕುಮಾರವನ ತೆಂಗಿನ ಮರಗಳ ಮಧ್ಯದಲ್ಲಿ ವಟು ಸಾಧಕರ ಶಿವಪೂಜಾ ಹಾಗೂ ಪ್ರಸಾದ ನಿಲಯವಿದೆ. ಹಳೆಯ ಇಮಾರತಿ ಶಿಥಿಲವಾದಾಗ ಈ ನೂತನ ಮಂದಿರದ ನಿರ್ಮಾಣವಾದರೂ ಭದ್ರವಾಗಲಿಲ್ಲ. ೧೯೯೬ರಲ್ಲಿ ರಿಪೇರಿಯಾದರೂ ಸಾಕಾಗಲಿಲ್ಲ. ಪಕ್ಕದಲ್ಲೇ ಮಲಾಪಹಾರಿಣಿ ಹರಿಯುತ್ತಿದೆ. ವಟು ಸಾಧಕರಿಗೆ ಅನುಕೂಲವಾಗಿದೆ. ಶಿವಯೋಗ ಮಂದಿರದಲ್ಲಿ ದರ್ಶನೀಯ ಸ್ಥಳಗಳಾಗಿವೆ. ಇಲ್ಲಿ ಶಾಂತಿ-ಸಮಾಧಾನದೊಂದಿಗೆ ಯೋಗದ, ಶಿವಯೋಗದ ತರಬೇತಿಯನ್ನು ಅರಿತರೆ ಅವರೂ ಪರಮಶಾಂತಿಯನ್ನು ಪಡೆಯಲು ಸಾಧ್ಯವಾಗುವುದು. ಎಲ್ಲವನ್ನು ಅವಲೋಕಿಸಿ ಮರಳಿ ಊರಿಗೆ ಹೊರಡಬಹುದು.

ಮಹಾದ್ವಾರದ ಮುಂಭಾಗದಲ್ಲಿ ಗುಡ್ಡದ ಪಕ್ಕದಲ್ಲಿ ಶ್ರೀ ದೇವೀ ಹೊಸೂರ ಶೆಟ್ಟರ ವಸತಿಗೃಹಗಳು ನಿರ್ಮಾಣವಾಗಿವೆ. ಇವು ಇಲ್ಲಿಯ ಕೆಲಸಗಾರರಿಗೆ ಅನುಕೂಲವಾಗಿವೆ. ಅದರ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ ಗೆಸ್ಟ್ ಹೌಸ್,. ಅದರ ಎಡಭಾಗದಲ್ಲಿ ಹೊಸದಾಗಿ ರೂಪುಗೊಂಡ ಕನ್ನಡ ಶಾಲೆ ನಿರ್ಮಾಣವಾಗಿದೆ. ಹಳೆ ಗೋವನಕಿ ಗ್ರಾಮದ ಮಕ್ಕಳಿಗೆ ಉಪಯೋಗವಾಗಿದೆ. ಎದುರಿಗೆ ಶ್ರೀ ಜಗದ್ಗುರು ಬಾಲಗಂಗಾಧರನಾಥ ಸ್ವಾಮಿಗಳು, ಆದಿ ಚುಂಚನಗಿರಿ ಇವರು ಸಂಸ್ಥೆಯ ಗೋವುಗಳಿಗೆ ಗೋಶಾಲೆಯನ್ನು ಕಟ್ಟಿಸಿದರು. ಈ ಶ್ರೀಗಳು ತಮ್ಮ ಪಟ್ಟಾಭಿಷೇಕದ ೩೦ನೇ ವರ್ಷದ ನೆನಹಿನಲ್ಲಿ ಚಿಕ್ಕರಥವನ್ನು ಸಂಸ್ಥೆಗೆ ಕಾಣಿಕೆಯಾಗಿ ಸಲ್ಲಿಸಿರುವರು. ವನಸಂಪತ್ತು ಬೆಳೆಸಲು ಸಹ ಶ್ರೀಗಳ ಸಹಕಾರ ಸಂದಿದೆ. ಅವರ ಕೊಡುಗೆ ಸ್ಮರಣೀಯ.

.

Related Posts