ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಗ್ರಹಗೋಂಕಿದವ ತಾನೆ | ಗ್ರಹವಾಗುತಿಹನಂತೆ
ಮಹಲಿಂಗವ ನೀ | ವಹಿಸಲ್ಕೆ ನೀ ಲಿಂಗ
ವಹೆಯೆಂದ ಗುರುವೆ ಕೃಪೆಯಾಗು || ೧೩೬ ॥
ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕರು ಭೂತ-ಪ್ರೇತ-ಪಿಶಾಚಿಗಳನ್ನು ನಂಬುವದಿಲ್ಲ. ಹಲವರು ಹೆಚ್ಚಾಗಿ ನಂಬುತ್ತಾರೆ. ಕೆಲವರಂತೂ ಅತ್ಯಂತ ಭಯ ಪಡುತ್ತಾರೆ. ಆದರೆ ಅವುಗಳ ಯಥಾರ್ಥತೆಯನ್ನರಿತರೆ ಅಧೈರ್ಯಪಡಲೇಬೇಕಾಗುವದಿಲ್ಲ. ಮಾನವನ ಅತ್ಯಧಿಕವಾದ ದುರಾಶೆಯು ಶಾಂತವಾಗದೆ ದುರ್ಮರಣ ವನ್ನಪ್ಪಿದರೆ ಅವನ ಕಾರಣ ಶರೀರಗತವಾದ ಅತೃಪ್ತವಾಸನೆಯು ದುರ್ಬಲ ಮನಸ್ಸಿನ ಮಾನವರಲ್ಲಿ ಪ್ರವೇಶಿಸಿ ತನ್ನ ಕ್ರೀಡೆಯನ್ನು ನಡೆಸುತ್ತದೆ. ಇದಕ್ಕೇನೆ ಗ್ರಹಬಡಿಯುವದೆಂಬ ವಾಡಿಕೆ ಬೆಳೆದು ಬಂದಿದೆ. ವಾಸನಾಮಯೀ ಜೀವಿಯು ಪರಕಾಯವನ್ನು ಪ್ರವೇಶಿಸಿ ವಿವಿಧ ರೀತಿಯಲ್ಲಿ ತನ್ನ ಬಯಕೆಯನ್ನು ತೀರಿಸಿಕೊಳ್ಳಲು ಪ್ರಯತ್ನಸುತ್ತದೆ. ಆದ್ದರಿಂದ ಗ್ರಹಹೊಡೆದವನು ಆ ಪಿಶಾಚಿಯ ನಡೆ-ನುಡಿಯನ್ನು ಅವಶ್ಯ ಅನುಸರಿಸುವನು. ಹೆಣ್ಣುಗಂಡಿನಂತೆ ವರ್ತಿಸುವದು ಅಥವಾ ಗಂಡು ಹೆಣ್ಣಿನಂತೆ ವರ್ತಿಸುವದು ಕಾಣಬರುತ್ತದೆ.
ಗ್ರಹಸೋಂಕಿದವನು ಗ್ರಹದಂತಾಗುತ್ತಿರುವಾಗ ಪರಮ ಪವಿತ್ರವಾದ ಮಹಾಲಿಂಗದ ಸಂಬಂಧದಿಂದ ಜೀವಾತ್ಮನು ಲಿಂಗಮಯನಾಗುವದು ಸಾಧ್ಯವಿದೆ. ಶಿವಯೋಗಿ ಶಿವಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ’ಯಲ್ಲಿ
ಇಷ್ಟಲಿಂಗಮಿದಂ ಸಾಕ್ಷಾದನಿಷ್ಟ – ಪರಿಹಾರಕಮ್ |
ಧಾರಯೇದವಧಾನೇನ ಶರೀರೇ ಸರ್ವದಾ ಬುಧಃ || ೬-೫೦ ||
ಸುಜ್ಞಾನಿಯಾದವನು ಪ್ರತ್ಯಕ್ಷವಾಗಿ ಸಾಂಸಾರಿಕ ಅನಿಷ್ಟವನ್ನು ಪರಿಹರಿಸಬಲ್ಲ. ಈ ಇಷ್ಟಲಿಂಗವನ್ನು ತ್ರಿಕಾಲದಲ್ಲಿಯೂ ಶರೀರದ ಮೇಲೆ ಸಾವಧಾನದಿಂದ ಧರಿಸಬೇಕೆಂದು ಶ್ರೀ ರೇಣುಕಾಚಾರ್ಯರ ವಾಣಿಯಲ್ಲಿ ತಿಳಿಸಿದ್ದಾರೆ.
ಹಿಂದೆ ವಿವರಿಸಿದ ಆರೂ ಸ್ಥಾನಗಳನ್ನು ಹೊರತುಪಡಿಸಿ ಕೆಲವರು ಲಿಂಗವನ್ನು ನಡದಲ್ಲಿ ಹಾಕುವರು .. ಕೆಲವರಿಗಂತೂ ಇದೊಂದು ಹೊಸಬಗೆಯಾಗಿದೆ. ಆದರೆ ಇದು ಶುದ್ಧತಪ್ಪು. ಯಾಕಂದರೆ-
ನಾಭೇರಧಸ್ತಾತ್ ಲಿಂಗಸ್ಯ ಧಾರಣಂ ಪಾಪಕಾರಣಮ್ || ಸಿ. ಶ. ೬-೫೨ ||
ನಾಭಿಯ ಕೆಳಗೆ ಲಿಂಗವನ್ನು ಧರಿಸುವದರಿಂದ ಪಾಪ ಭಾಗಿಗಳಾಗಬೇಕಾಗುವದು. ಅಗಸ್ತ್ಯರಿಗೆ ರೇಣುಕರು ಎಚ್ಚರಿಕೆಯನ್ನಿತ್ತಿದ್ದಾರೆ. ಇಷ್ಟಲಿಂಗವು ಸಾಮಾನ್ಯವಾದುದಲ್ಲ. ನಮ್ಮ ಸಕಲ ಅನಿಷ್ಟಗಳನ್ನು ಕಳೆಯಬಲ್ಲ ಮಹಾಸಾಧನವಾಗಿದೆ. ಜ.ಚ.ನಿ. ಯವರು ಸಿದ್ಧಾಂತ ಶಿಖಾಮಣಿಯ ಅನುವಾದ ಕಾವ್ಯವೆನಿಸಿದ ‘ಮಣಿ ಮುಕುರ’ದಲ್ಲಿ
ಇಷ್ಟಲಿಂಗವಿದು ತಾಂ ಸಾಕ್ಷಾದನಿಷ್ಟ ಪರಿ-
ಹಾರಕಮಿದನಂ ಬಲ್ಲಿದರಾವಾಗಳುಂ
ಶರೀರದೊಳವಧಾನದಿಂದಗಲದಂತೆವೊಲ್
ಧರಿಸಿರ್ಪುದಳ್ಕರಿಂ ಸುಕ್ಷೇಮ ಕಾರಣಂ || ಪು ೫೬ ||
ಇಷ್ಟಲಿಂಗವನ್ನು ಅವಧಾನಪೂರ್ವಕ ಸದಾ ಶರೀರದ ಮೇಲೆ ಧರಿಸಿಕೊಂಡಿರ ಬೇಕೆಂದು ಹೇಳಿದ್ದಾರೆ. ಆದರೆ ಇಂದಿನ ವೀರಶೈವ ಧರ್ಮಾನುಯಾಯಿಗಳು – ಲಿಂಗವನ್ನು ಹಾಕಿಕೊಳ್ಳುವದೇ ಬೇಡವಾಗಿದೆ. ಹಾಕಿದರೆ ನಾಚಿಕೆ, ಅದನ್ನು ದೇವರ ಜಗುಲಿಯ ಮೇಲೋ, ಮನೆಯಗೂಟಕ್ಕೂ ಹಾಕುತ್ತಾರೆ. ಹಲವರಿಗೆ ದೇವರೂ ಇರುವದಿಲ್ಲ. ಕೆಲವರು ಸ್ನಾನ ಮಾಡಿದಾಗ ಪೂಜಿಸಿ ಪುನಃ ಜಗುಲಿಗೆ ಕಳಿಸುತ್ತಾರೆ. ಜಗುಲಿಯ ಮೇಲೆ ಇಡುವದರಿಂದ ಅದು ಇಷ್ಟಲಿಂಗವೆನಿಸುವದಿಲ್ಲ. ಗುರುದೀಕ್ಷೆಯ ಸಂಸ್ಕಾರದಿಂದ ಬಂದ ಲಿಂಗವೇ ಲಿಂಗಗುಣಗಳನ್ನು ಕರುಣಿಸಬಲ್ಲುದು. ಮತ್ತೆ ಕೆಲವರು ಲಿಂಗದ ಕರಡಿಗೆಯನ್ನು ಶೋಭೆಗೆಂದು ಧರಿಸುತ್ತಾರೆ. ಆದರೆ ಅದು ಖಾಲಿಯಾಗಿಯೋ ಅಥವಾ ಚಿಲ್ಲರೆ ನಾಣ್ಯಗಳನ್ನಿಡುವ ಪೆಟ್ಟಿಗೆಯಾಗಿಯೋ ಉಪಯೋಗಿಸಲ್ಪಡುತ್ತದೆ. ಇಂಥ ಲಿಂಗವಂತರಿಗೆ ಲಿಂಗವಂತಿಕೆಯಾಗಲಿ ಅಥವಾ ಲಿಂಗಗುಣಗಳಾಗಲಿ ಯಾವ ಕಾಲದಲ್ಲಿಯೂ ಬರಲಾರವು. ಅವರು ಲಿಂಗವಂತರೆಂದೆನ್ನಿಸಿಕೊಳ್ಳಲು ಯೋಗ್ಯರಲ್ಲ.
ಲಿಂಗವೇ ಪ್ರಾಣ, ಪ್ರಾಣವೇ ಲಿಂಗವೆಂಬ ಭಾವ ಬಲಿಯಬೇಕು. ಆಗ ಪ್ರಾಣಲಿಂಗದ ಸಂಬಂಧವಾಗುವದು. ಇಷ್ಟಲಿಂಗವು ಅಕಸ್ಮಾತ್ ಕಳಚಿದರೆ ಪ್ರಾಣವು ತಾನಾಗಿ ಹೋದಂತಾಗಬೇಕು. ಇಂಥ ಭಾವ ಬೆಳೆಯುವದರಿಂದ ಭಾವಲಿಂಗ ಸಂಗಿಯೆನಿಸುವನು. ಇವನಿಗೆ ಭಾವಲಿಂಗದ ಸಾಕ್ಷಾತ್ಕಾರ ಸುಲಭವಾಗುವದು. ನಿಜ ಲಿಂಗಮಯನಾಗುವನು, ಓ ಗುರುವೆ’! ಕರುಣಿಸು ನಿಜಲಿಂಗಸ್ವರೂಪಿ ನಾನಾಗುವಂತೆ