ಭಕ್ತಿ-ಮುಕ್ತಿ ಲೇಖಕರು :-ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ  

‘ಪೂಜ್ಯೇಷು ಅನುರಾಗೋ ಭಕ್ತಿಃ’ ಪೂಜ್ಯರಲ್ಲಿರುವ ಅನುರಾಗ(ಪ್ರೇಮ)ವೇ ಭಕ್ತಿ ಎಂದು ನಾರದಭಕ್ತಿಸೂತ್ರದಲ್ಲಿ ಹೇಳಲಾಗಿದೆ. ಗುರು-ಹಿರಿಯರು, ತಂದೆ- ತಾಯಿಗಳು ನಮಗೆ ಪೂಜ್ಯರು. ಅವರಲ್ಲಿ ನಾವು ಶ್ರದ್ಧಾಪೂರ್ವಕವಾದ ಪ್ರೇಮವನ್ನು ಹೊಂದಿರುತ್ತೇವೆ. ಇದು ಭಕ್ತಿ ಎನಿಸಿದರೂ ‘ಈಶ್ವರೇ ಪರಾನುರಕ್ತಿಃ ಭಕ್ತಿ’ ಅಂದರೆ ಪರಮಾತ್ಮನಲ್ಲಿ ನಾವು ಇಡುವ ಅತಿಶಯವಾದ ಅನುರಕ್ತಿಯೆ ಭಕ್ತಿ ಎಂದು ಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಪರಮಾತ್ಮನಲ್ಲಿರುವ ನಮ್ಮ ಶ್ರದ್ಧೆ, ಅನುರಕ್ತಿಗಳು ನಿಷ್ಠೆಯಾಗಿ ಮುಂದುವರೆಯಬೇಕು. ಆ ನಿಷ್ಠೆ ಏಕೋಭಾವವಾಗಿ ಸಹಜಗುಣವಾಗಿ ಬೆಳೆಯಬೇಕು. ಅಂದರೆ ಇಹಪರಗಳೆಲ್ಲವನ್ನು ಮರೆತು ಪರಮಾತ್ಮನೊಬ್ಬನನ್ನೆ ಮನದಲ್ಲಿ ನೆನೆವುದು ಅತ್ಯಂತ ಶ್ರೇಷ್ಠವಾದ ಭಕ್ತಿ ಎನಿಸುವುದು.

ಜಗತ್ತಿನಲ್ಲಿ ಅನೇಕರು ಬರೀ ಆಡಂಬರದ ಪೂಜಾದಿಗಳನ್ನು ನೆರವೇರಿಸುತ್ತ ತಾವೇ ಪರಮಭಕ್ತರೆಂದೂ, ತಾವು ಆಚರಿಸುವ ಭಕ್ತಿಯೇ ಶ್ರೇಷ್ಠ ಭಕ್ತಿ ಎಂದೂ ಗರ್ವದಿಂದ ನುಡಿಯುತ್ತಾರೆ. ಮನಸ್ಸಿನಲ್ಲಿ ಯಾವುದೇ ಶ್ರದ್ಧೆ, ನಿಷ್ಠೆ ಹಾಗು ದೃಢತೆ ಇಲ್ಲದ ಇಂತಹವರ ಭಕ್ತಿಯನ್ನು ಕಂಡು ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು, ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ ಮಾರಯ್ಯಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ’ ಎಂದು ಹೇಳುವ ಆಯ್ದಕ್ಕಿ ಲಕ್ಕಮ್ಮ. ಅದು ನಿರರ್ಥಕವಾದ ಭಕ್ತಿ, ಅದೆಂದೂ ಪರಮಾತ್ಮನಿಗೆ ಸಲ್ಲದು ಎಂದು ಸ್ಪಷ್ಟಪಡಿಸುತ್ತಾಳೆ. ನಿಜವಾದ ಭಕ್ತನು ಸದಾಚಾರವನ್ನು ಅರಿತು ಆಚರಿಸುತ್ತಾನೆ. ಸಿರಿಸಂಪತ್ತುಗಳ ವಿಷಯದಲ್ಲಿ ಅವನೆಂದೂ ಅಹಂಕಾರ, ಮಮಕಾರಗಳನ್ನು ಹೊಂದುವುದಿಲ್ಲ. ಅವೆಲ್ಲವೂ ಪರಮಾತ್ಮನ ಸೊಮ್ಮು ಎಂಬ ಭಾವ ಅವನಲ್ಲಿ ಗಟ್ಟಿಗೊಂಡಿರುತ್ತದೆ. ದಾಸೋಹಂಭಾವದಿಂದ ಶಿವನ ಸೊಮ್ಮು ಶಿವನಿಗೆ ಅರ್ಪಿಸುವ ಭಕ್ತನು ಶಿವನಿಗೆ ಪ್ರಿಯನಾಗಿರುತ್ತಾನೆ. ಭಕ್ತಿಯ ಕುರುಹಾದ ದಾಸೋಹವನ್ನು ಮಾಡುವುದು ಭಕ್ತನ ಕರ್ತವ್ಯಗಳಲ್ಲೊಂದು. ಪರಮಾತ್ಮನು ಭಕ್ತಿಪ್ರಿಯ. ಭಕ್ತಿಯಿಂದ ಸಮರ್ಪಿಸಿದ ನೀರೂ ಕೂಡ ಅವನಿಗೆ ಪ್ರಿಯವೆ.

ಭಕ್ತಿಯ ಪ್ರಾರಂಭದ ಹಂತದಲ್ಲಿ ಪೂಜ್ಯನಾದ ದೇವ ಬೇರೆ, ಪೂಜಕನಾದ ತಾನು ಬೇರೆ ಎಂಬ ಭಾವ ಇರುತ್ತದೆ. ಭಕ್ತಿವಿಕಾಸವಾದಂತೆ ಪೂಜ್ಯ ಪೂಜಕನೆಂಬ ಭೇದಭಾವ ಇಲ್ಲದಂತಾಗಿ ಭಕ್ತ ಮತ್ತು ದೇವರಲ್ಲಿ ಸಹಜ ಸಾಮರಸ್ಯ ಉಂಟಾಗುತ್ತದೆ. ಇದೇ ಭಕ್ತಿಯ ನಿಜವಾದ ಉದ್ದೇಶ ಈ ಉದ್ದೇಶ ಈಡೇರಿದಾಗ ಭಕ್ತನು ಜನನ ಮರಣಗಳಿಂದ ಮುಕ್ತನಾಗಿ ಸ್ವಸ್ವರೂಪಾನುಸಂಧಾನದಲ್ಲಿ ನಿರತನಾಗುತ್ತಾನೆ. ಅದುವೇ ಮೋಕ್ಷ ಸ್ಥಿತಿ.

ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸಿ’ ಮೋಕ್ಷ ಸಂಪಾದನೆಯ ಅನೇಕ ಮಾರ್ಗಗಳಲ್ಲಿ ಭಕ್ತಿಮಾರ್ಗದಷ್ಟು ಸರಳವಾದ, ಸುಲಭವಾದ ಮಾರ್ಗ ಬೇರೊಂದಿಲ್ಲ. ಅನನ್ಯಗತಿಕನಾಗಿ ಭಕ್ತಿಯಿಂದ ನೆನೆವ ಭಕ್ತನನ್ನು ಸರ್ವವಿಧದಿಂದಲೂ ದೇವನೆ ರಕ್ಷಿಸುವನು. ಭಕ್ತನು ಮಾತ್ರ ಸದಾ ಆನಂದಾನುಭೂತಿಯಲ್ಲಿ ಮಗ್ನನಾಗಿರುತ್ತಾನೆ. ಕೊನೆಗೆ ದೇವರಲ್ಲಿಯೇ ಲೀನನಾಗುತ್ತಾನೆ. ಆನಂದಾನುಭೂತಿಯ ಸ್ಥಿತಿಯಂತೂ ಮೋಕ್ಷಕ್ಕಿಂತಲೂ ಶ್ರೇಷ್ಠವಾದುದು. ಅದು ಭಕ್ತನಿಗೆ ಮಾತ್ರ ಸಾಧ್ಯವಾದುದು. ಅದಕ್ಕಾಗಿಯೇ ನಿಜಗುಣ ಶಿವಯೋಗಿಗಳು:

ಕರುಣಿಸೆನಗಿದನ ಬೇಡುವನಭವ ಬೇರೊಂದು

ವರವನೊಲ್ಲೆನು ಮುಕ್ತಿದೊರೆವ ಸಾಧನವ

ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತಿಯನ್ನಾಚರಿಸುವ ಸಂದರ್ಭದಲ್ಲಿ ದೊರೆವ ಸುಖ, ಆನಂದ ಮುಕ್ತಿಯ ಸ್ಥಿತಿಯಲ್ಲಿ ದೊರೆಯದು. ಮುಕ್ತಿ ಎಂಬ ಸಕ್ಕರೆಯಾಗುವುದಕ್ಕಿಂತ ಇರುವೆಯಾಗಿ ಸಕ್ಕರೆಯ ಸವಿಯನ್ನು ಸವಿಯುವುದೇ ಮೇಲು ಎಂಬುದು ಅವರ ಅಭಿಪ್ರಾಯ. ಮುಕ್ತಿಗಿಂತ ಭಕ್ತಿಯೇ ಶ್ರೇಷ್ಠ, ಭಕ್ತಿಯೇ ಮುಕ್ತಿಯ ಜನನಿ. ಭಕ್ತಿಯ ಬಲದಿಂದ ಏನೆಲ್ಲವನ್ನೂ ಭಕ್ತನು ಸಾಧಿಸುತ್ತಾನೆ. ಆದರೆ ಅವನ ಭಕ್ತಿಯಲ್ಲಿ ಶ್ರದ್ಧೆ ನಿಷ್ಠೆಗಳು ನೆಲೆಗೊಂಡಿರಬೇಕು. ಅದುವೆ ನಿಜಭಕ್ತಿ, ಅದುವೇ ಮುಕ್ತಿಗೆ ಸಾಧನ.

Related Posts