ವೀರಶೈವ ಸಾಧಕನು ಗುರು,ಲಿಂಗ,ಜಂಗಮರನ್ನ ವಿಭೂತಿ,ರುದ್ರಾಕ್ಷಿ,ಮಂತ್ರಗಳಿಂದ ಪೂಜಿಸಿದಾಗ ದೊರೆಯುವ ಫಲವೇ ಪಾದೋದಕ-ಪ್ರಸಾದ.
ಪದಾರ್ಥವೆಂದರೆ:- ತಾನೆ ದುಡಿದದ್ದು,ತನ್ನದು ಎಂಬ ಅಹಂಕಾರ ಮಮಕಾರಗಳಿಂದ ಭುಂಜಿಸುವ ಆಹಾರ ಅದು ಪದಾರ್ಥ.
ಪ್ರಸಾದವೆಂದರೆ:- ಅದು ಪೂಜ್ಯರ ಕೃಪೆ,ಭಗವಂತನದಯೆ, ಹಿರಿಯರಿಂದ ಪಡೆದದ್ದು ಅನ್ನುವ ಭಾವದೊಂದಿಗೆ , ದೇವರಿಗೆ ಅರ್ಪಿಸಿ ಬಂದುದ್ದನ್ನ ದಾಸೋಹಂ ಭಾವದಿಂದ ಸೇವಿಸುವ ಆಹಾರ ಅದು ಪ್ರಸಾದ.
“ಎಲ್ಲಿ ಸೋಹಂ ಭಾವವಿದೆ ಅದು ಪದಾರ್ಥ, ಎಲ್ಲಿ ದಾಸೋಹಂ ಭಾವವಿದೆ ಅದು ಪ್ರಸಾದ”
“ಪದಾರ್ಥ ಸೇವನೆಯಿಂದ ಬಂಧನ, ಪ್ರಸಾದ ಸೇವನೆಯಿಂದ ಮುಕ್ತಿ”
ಯಾವುದನ್ನು ಸ್ವೀಕರಿಸಿದಾಗ ಪ್ರಸನ್ನತೆ ಉಂಟಾಗುವುದು ಅದುವೇ ಪ್ರಸಾದ.
ಬಾಹ್ಯ ದ್ರವ್ಯವು ಪದಾರ್ಥವಾದರೆ, ಅಂತರ್ದ್ರವ್ಯವು (ಶುದ್ಧ ಭಾವ) ಪ್ರಸಾದವಾಗುತ್ತದೆ.
ಇಷ್ಟಲಿಂಗಕ್ಕೆ ರೂಪವನ್ನು, ಪ್ರಾಣಲಿಂಗಕ್ಕೆ ರುಚಿಯನ್ನು, ಭಾವಲಿಂಗಕ್ಕೆ ತೃಪ್ತಿಯನ್ನು ನೀಡುವುದೇ ಪ್ರಸಾದ ರಹಸ್ಯ.
“ಒಲ್ಲೆನೆಂಬುದು ವೈರಾಗ್ಯ;ಒಲಿವೆನೆಂಬುದು ಕಾಯ ಗುಣ
ಆವ ಪದಾರ್ಥವಾದಡೇನು? ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ
ಕೂಡಲಸಂಗಮ ದೇವರ ನೊಲಿಸ ಬಂದ ಪ್ರಸಾದ ಕಾಯವ ಕೆಡಿಸಲಾಗದು”
– ಜೀವಿಯು ದಿಕ್ಷೆಯಿಂದ ಶುದ್ಧನಾಗಿ ಗುರುಲಿಂಗ ಜಂಗಮರನ್ನ ಪೂಜಿಸಿ, ಇವರಿಗೆ ತನ್ನದೆನ್ನುವದನ್ನೆಲ್ಲವನ್ನು ಅಂದರೆ ಬರಿ ಆಹಾರವನ್ನಷ್ಟೇ ಅಲ್ಲ, ಭೋಗ್ಯ ವಿಷಯಗಳನ್ನು, ಭೋಗಸಾಧನಗಳಾದದೇಹಂದ್ರಿಯಗಳನ್ನು,
ಭೋಕೃತವಾದ ತನ್ನನ್ನು ಗುರುಲಿಂಗ ಜಂಗಮಕ್ಕೆ ಅರ್ಪಿಸಿ
ಇವೆಲ್ಲವುಗಳನ್ನು ಪ್ರಸಾದ ರೂಪವಾಗಿ ಸ್ವೀಕರಿಸಬೇಕು.
ಆಗ ಜೀವಿಯು ಶಿವನಂತೆ ಪ್ರಸಾದ ರೂಪನಾಗುವನು.
:- ಪ್ರಸಾದದಲ್ಲಿ 11 ವಿಧ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂಬರು ನೀವು ಕೇಳಿರಿ
ಶುದ್ಧ ಪ್ರಸಾದ ಗುರು ಮುಖದಿಂದ ಬಂದುದು
ಸಿದ್ಧ ಪ್ರಸಾದ ಲಿಂಗ ಮುಖದಿಂದ ಬಂದುದು
ಪ್ರಸಿದ್ಧ ಪ್ರಸಾದ ಜಂಗಮ ಮುಖದಿಂದ ಬಂದುದು
ಇದರೊಳಗೆ ಆವುದ ಘನವೆಂಬೇ? ಆವುದ ಕಿರಿದೆಂಬೇ
ಮಹಕ್ಕೆ ಮಹ, ಘನಕ್ಕೆ ಘನ, ಮಹಾಘನ ಪ್ರಸಾದ.
ಗುರುಪ್ರಸಾದದಿಂದ ತನು ಶುದ್ಧವಾಯಿತು.
ಲಿಂಗಪ್ರಸಾದದಿಂದ ಮನಶುದ್ದವಾಯಿತು.
ಜಂಗಮಪ್ರಸಾದದಿಂದ ಭಾವ ಶುದ್ಧವಾಯಿತು.
ಶರಣ ಸಂಗದಿಂದ ಪ್ರಸಾದ ಸಾಧ್ಯವಾಯಿತು
ಕೂಡಲ ಚನ್ನಸಂಗಮದೇವಯ್ಯ ಈ ತ್ರಿವಿಧ ಪ್ರಸಾದವ ಕೊಂಡೆನ್ನ ಭವಂನಾಸ್ತಿಯಾಯಿತ್ತು.
1 ಶುದ್ಧ ಪ್ರಸಾದ:- ಭಸ್ಮ ಲೇಪಿತಹಸ್ತದಿಂದ ಊಟದ ಪಾತ್ರೆಯಲ್ಲಿರುವ ಭೋಜನ ಪದಾರ್ಥಗಳನ್ನು ಶುದ್ಧ ಮಾಡುವುದು ಶುದ್ಧ ಪ್ರಸಾದ.
2 ಸಿದ್ದಪ್ರಸಾದ:- ಶುದ್ಧ ಪ್ರಸಾದವನ್ನು ಲಿಂಗಕ್ಕರ್ಪಿಸಿದಾಗ ಅಲ್ಲಿ ಪ್ರಸಾದ ಕಳೆವೇಧಿಸುವುದೇ ಸಿದ್ದ ಪ್ರಸಾದ.
3 ಪ್ರಸಿದ್ಧ ಪ್ರಸಾದ:- ಸಿದ್ದಪ್ರಸಾದವನ್ನು ಜಂಗಮಾರ್ಪಣ ಭಾವದಿಂದ ನಾಲಿಗೆಮೇಲಿಟ್ಟು ಸ್ವೀಕರಿಸುವುದೇ ಪ್ರಸಿದ್ಧ ಪ್ರಸಾದ .
4ಆಪ್ಯಾಯನ ಪ್ರಸಾದ:-ಶುದ್ಧ,ಸಿದ್ಧ,ಪ್ರಸಿದ್ಧ ಪ್ರಸಾದ ಸೇವನೆಯಿಂದಾದ ಮನೋವಿಕಾಸವೇ ಅಪ್ಯಾಯನ ಪ್ರಸಾದವೆನಿಸುತ್ತದೆ.
5 ಸಮಯ ಪ್ರಸಾದ:-ಈ ಪ್ರಸಾದ ಸೇವನೆಯ ಸಮಯದಲ್ಲಿ ಇತರ ಪದಾರ್ಥಗಳನ್ನು ಸೇವಿಸುವುದು ಅನರ್ಪಿತವೆಂದು ತಿಳಿಯುವುದು ಸಮಯಪ್ರಸಾದವಾಗಿದೆ.
6 ಪಂಚೇಂದ್ರಿಯವಿರಹಿತ ಪ್ರಸಾದ:- ಇತರ ವಿಷಯಗಳ ಕಡೆಗೆ ಪಂಚೇಂದ್ರಿಯಗಳನ್ನು ಹೋಗಗೊಡದಿರುವುದು.
7 ಅಂತಃಕರಣ ವಿರಹಿತ ಪ್ರಸಾದ:- ಇತರ ಸಂಕಲ್ಪಾದಿಗಳಿಗೆ ಅಂತಃಕರಣ ಸುಳಿಯದಂತೆಮಾಡಿ ನಿಶ್ಚಲತೆಯಿಂದ ಪ್ರಸಾದ ಸೇವಿಸುವುದು.
8 ಪ್ರಸಾದೀಯ ಪ್ರಸಾದ:- ಗುರುಲಿಂಗ ಜಂಗಮದಿಂದ ಪಡೆದ ಪ್ರಸಾದದೊಡನೆ ತನ್ನ ಪ್ರಸಾದವನ್ನು ಭುಂಜಿಸುವುದು ಪ್ರಸಾದೀಯ ಪ್ರಸಾದ.
9 ಸದ್ಭಾವ ಪ್ರಸಾದ:- ಪ್ರಸಾದದಲ್ಲಿ ಪದಾರ್ಥ ಭಾವನೆಯನ್ನಳಿದು ಸದ್ಭಾವದಿಂದ ಭೋಗಿಸುವುದು.
10 ಸಮತಾ ಪ್ರಸಾದ:- ಪ್ರಸಾದ ಸೇವನೆಯ ಸಮಯದ ಹೊರತು ಇನ್ನೇನನ್ನೂ ಸೇವಿಸದೆ ಶಾಂತಿ ಸಹನೆಗಳಿಂದ ಇರುವುದು.
11 ಜ್ಞಾನ ಪ್ರಸಾದ:- ಈ ಸಮತಾಪ್ರಸಾದದಿಂದ ಪುನಃ ಪೂಜೆ ಪ್ರಾರಂಭವಾಗುವವರೆಗೂ ಪ್ರಸಾದಕಾಯನಾಗಿರುವುದು ಜ್ಞಾನ ಪ್ರಸಾದವಾಗಿ ಕಂಗೊಳಿಸುತ್ತದೆ.
-ಗುರುವಿನ ಮುಖಾಂತರ ಬಂದ ಪ್ರಸಾದಕ್ಕೆ ಶುದ್ಧ ಪ್ರಸಾದ, ಇಷ್ಟಲಿಂಗಪ್ರಸಾದ,ರೂಪ ಪ್ರಸಾದ,ತ್ಯಾಗಾಂಗ ಪ್ರಸಾದವೆಂಬರು.
ಲಿಂಗ ಮುಖಾಂತರ ಬಂದ ಪ್ರಸಾದಕ್ಕೆ ಸಿದ್ಧ ಪ್ರಸಾದ,ಪ್ರಾಣ ಲಿಂಗಪ್ರಸಾದ, ರುಚಿ ಪ್ರಸಾದ ಭೋಗಾಂಗ ಪ್ರಸಾದವೆಂಬರು.
ಜಂಗಮನ ಮುಖಾಂತರ ಬಂದ ಪ್ರಸಾದಕ್ಕೆ ಪ್ರಸಿದ್ಧ ಪ್ರಸಾದ, ಭಾವಲಿಂಗ ಪ್ರಸಾದ,ತೃಪ್ತಿ ಪ್ರಸಾದ,ಯೋಗಾಂಗ ಪ್ರಸಾದವೆಂಬರು.
ಈ ಪ್ರಸಿದ್ಧ ಪ್ರಸಾದ ಅರ್ಥಾತ್ ಜಂಗಪ್ರಸಾದವನ್ನ ಮಹಾಮನೆಯಲ್ಲಿ ಬಸವೇಶ್ವರರು ಸ್ವೀಕರಿಸುತ್ತಿದ್ದರು
ಬಸವೇಶ್ವರರು ಮಿಗಿಸಿದ ಪ್ರಸಾದವನ್ನ ಅವರ ಸೇವಕರು ಸ್ವೀಕರಿಸುತ್ತಿದ್ದರು, ಅವರ ಸೇವಕರು ಮಿಗಿಸಿದ ಪ್ರಸಾದವನ್ನ ಕಲ್ಯಾಣದ ಅಂಗಳಕ್ಕೆ ಪ್ರಭುದೇವರ ದರ್ಶನಕ್ಕೆಂದು ಅಪಘಾನಿಸ್ತಾನದಿಂದ ಆಗಮಿಸಿದ ಮರುಳ ಶಂಕರ ದೇವ
ಚಂದ್ರಮನಿಗೆ ಚಕೋರ ಪಕ್ಷಿಯು ಹಾರೈಸಿಕೊಂಡಿರುವಂತೆ, ವಸಂತ ಋತುವನ್ನು ಕೋಗಿಲೆ ನಿರೀಕ್ಷಿಸಿದ್ದು ಕೊಂಡಿರುವಂತೆ 12 ವರ್ಷಗಳ ಕಾಲ ಮಹಾಮನೆಯ ಪ್ರಸಾದ ಕುಂಡಲದಲ್ಲಿದ್ದು ಮಿಕ್ಕ ಪ್ರಸಾದವನ್ನ ಸ್ವೀಕರಿಸಿದ.
ಆ ಶರಣರ ಮಾತನ್ನ ಕೇಳಲೇಬೇಕು
“ಜಂಗಮ ಪಾದೋದಕವ ಮಜ್ಜನವ ಮಾಡಿ,
ಪ್ರಸಾದಂಬುವ ಮಾಡಿ, ಎನಗೆನ್ನ ಗುರು ತಂದೆ, ಶಿವ ಕಲ್ಯಾಣ ಮಾಡಿದ.
ಹಿಂಗದಿರು ಕಂಡಾ ಎಂದು ಕಂಕಣವ ಕಟ್ಟಿದ.
ಲಿಂಗೈಕ್ಯ ಚೈತನ್ಯ ಪ್ರಸಾದವೆಂದು,
ತನಗೆ ಚೈತನ್ಯ ಜಂಗಮವೆಂದು,
ನನಗೆ ಚೈತನ್ಯ ಲಿಂಗವೆಂದು ನಿರೂಪಿಸಿದ.
ಜಂಗಮಪ್ರಸಾದ ಬಸವಣ್ಣನಿಂದಲ್ಲದೆ ದೊರಕೊಳ್ಳದೆಂದು ಬಸವಣ್ಣನ ಸಾರಿದೆ.
ಒಡೆಯರೊಕ್ಕುದ ತಾ ಸವಿದು,
ತನ್ನೊಕ್ಕೂದ ಮಿಕ್ಕುದ ತನ್ನ ಗೃಹಚರರಂಡು,
ಮಿಕ್ಕ ಶೇಷಪ್ರಸಾದವು ಎನ್ನ ಲಿಂಗಕಾಯಿತ್ತು.
ಆ ಪ್ರಸಾದ ಗುಂಡವೇ ಗೃಹವಾಗಿತ್ತು.
ಆ ಪ್ರಸಾದ ಅರ್ಪಿಸುತ್ತಲೇ ಎನ್ನ ಲಿಂಗಕ್ಕೆ ಪೂಜೆ.
ಎನಗೆ ಹೊದಿಕೆಯಾಗಿ ಎನ್ನ ತನು ಶುದ್ಧ ಪ್ರಸಾದವಾಯಿತ್ತು, ಮನಸ್ಸಿದ್ದ ಪ್ರಸಾದವಾಯಿತ್ತು.
ಗುರುವವಿಡಿದನಾಗಿ ಆನೆ ಪ್ರಸಿದ್ಧ ಪ್ರಸಾದವಾದೆನಯ್ಯ.
ಇನ್ನು ಬದುಕಿದೆನು ಕಾಣ,
ಶುದ್ಧ ಸಿದ್ದ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತ ಚೆನ್ನಮಲ್ಲಿಕಾರ್ಜುನ ದೇವಯ್ಯ,
ನಿಮ್ಮ ಶರಣ ಸಿದ್ದರಾಮಯ್ಯನ ಕಂಡು ಸಿಕಿಕರ್ಪೂರ ಯೋಗದಂತಾದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.
ನಿಜವಾಗಿಯೂ ನೋಡಿದರೆ ಮನುಷ್ಯ ಬದುಕಲಿಕ್ಕಾಗಿ ಆಹಾರ ಸೇವಿಸಬೇಕು, ಆದರೆ ಆಹಾರ ಸೇವಿಸಲಿಕ್ಕಾಗಿ ಬದುಕಿರುವವರೇ ಬಹಳಜನ ಈ ಲೋಕದಲ್ಲಿ.
ಕೇವಲ ಒಕ್ಕೂ-ಮಿಕ್ಕುದ ತೆಗೆದುಕೊಳ್ಳುವವನು ಮಾತ್ರ ಪ್ರಸಾದಿಯಲ್ಲ, ಬಂದುದನ್ನು ಬೇಕು-ಬೇಡನ್ನದೆ, ಹಿತ- ಅಹಿತವೆನ್ನದೆ, ಸ್ತುತಿ-ನಿಂದೆ ಎನ್ನದೆ ಸಮಭಾವವಾಗಿ ಸ್ವೀಕರಿಸುವುದು ಪ್ರಸಾದಿಯಾದವನ ಸಲ್ಲಕ್ಷಣವೆನ್ನುವರು ಶರಣರು.
ಅದನ್ನೇ ಷಣ್ಮುಖ ಶಿವಯೋಗಿಗಳು ವಿವರಿಸುವಂತೆ :-
ಎನ್ನ ಆಗು ಹೋಗು, ಸುಖ-ದುಃಖ,ಆನಿ-ವೃದ್ಧಿ,ಭಯ-ಭೀತಿ, ಲಜ್ಜೆ-ಮೋಹ,ಸಜ್ಜನ-ಸಮತೆ,ಸಳುವು-ಸಂಚಾರ,ಚಿತ್ತ -ಸುಚಿತ್ತ,ಬುದ್ಧಿ-ಸುಬುದ್ಧಿ,ಅಹಂಕಾರ-ನಿರಹಂಕಾರ,ಭಾವ -ಸದ್ಭಾವ, ಎಡ-ಬಲ,ಮೇಲು-ಕೀಳು ಮೊದಲಾದವುಗಳೆಲ್ಲ ಪ್ರಸಾದವೆಂಬುದು ಇಂತಾಗಿ ಅಖಂಡೇಶ್ವರ ನೀನೆಂಬ ಪ್ರಸಾದ ಸಾಗರದಲ್ಲಿ ನಾನೆಂಬುದು ಮುಳುಗಿ ನೆಲೆದಪ್ಪಿ ಹೋದೆನಯ್ಯ.
ಹೀಗೆ ಪರಿಶುದ್ಧ ಕ್ರಿಯೆಯಿಂದ ಪ್ರಸಾದಿಯು ನಡೆದುದೆ ಶಿವಪಥವೆನಿಸುತ್ತದೆ.
:-ಗುರು ಕರುಣ ತ್ರಿವಿಧಿಯಲ್ಲಿ ಪ್ರಸಾದ ತ್ರೈವಿಧವನ್ನು ಶ್ರೀ ಗುರು ಶಿಷ್ಯನಿಗೆ ಉದ್ದರಿಸುವನು
“ಶುದ್ಧ ಶೇಷವೇ ಇಷ್ಟ, ಸಿದ್ಧವೇ ಪ್ರಾಣ, ಪ್ರಸಿದ್ಧವೇ ಭಾವ, ನಿರ್ಧರ ತ್ರೈಲಿಂಗವ
ಸಮುದ್ದರಿಪ -ಗುರುವಿಗೆ ಕೃಪೆಯಾಗು”
ಈ ಮೂರು ಪ್ರಸಾದವ ಸ್ವೀಕರಿಸುವಲ್ಲಿ ಪ್ರಸಾದದಲ್ಲಿ ನಿರ್ಧರ (ನಿಷ್ಠೆಯ) ಭಾವವಿರಬೇಕೆನ್ನುವರು ಮೈಲಾರದ ಬಸವಲಿಂಗ ಶರಣರು.
“ನಂಬಿದರೆ ಪ್ರಸಾದ;ನಂಬದಿದ್ದರೆ ವಿಷ ವೆನಿಸುವುದು”
ದೃಢನಿಷ್ಠೆಯಿಂದಲೇ ಪದಾರ್ಥವು ಪ್ರಸಾದವೆನಿಸುವುದು, ಇಂಥ ಪ್ರಸಾದಿಕ ಕ್ರಿಯೆಗಳಿಂದ, ಪ್ರಸಾದಿಕ ಪ್ರಜ್ಞೆಯಿಂದ, ಪ್ರಸಾದಿಕಾನುಭೂತಿಯಿಂದ ಅಂಗನು ಪ್ರಸಾದ ಕಾಯನಾಗುವನು ಜೊತೆಗೆ ಯಾವಾಗಲೂ ಪ್ರಸನ್ನ ಚಿತ್ತವುಳ್ಳವನಾಗುವನು “ಪ್ರಸಾದಸ್ತು ಪ್ರಸನ್ನತಾ”.
ಆಹಾರವನ್ನು ಭಗವಂತನ ಪ್ರಸಾದವೆಂದು ಆತನಿಗೆ ಅರ್ಪಿಸಿ ತುತ್ತಿಗೊಮ್ಮೆ ಆತನನ್ನು ನೆನೆಯುತ್ತ ಉಣ್ಣಬೇಕು,
ಇದು ದೇಹ ಭಾವವನ್ನು ಕಳೆದುಕೊಂಡು ಪ್ರಸಾದ ಭಾವವನ್ನು ಅಳವಡಿಸಿಕೊಳ್ಳುವ ಸುಂದರ ಸೂತ್ರವಾಗಿದೆ
ಅದನ್ನೇ ಬಸವಣ್ಣನವರು ತಿಳಿಸುತ್ತಾರೆ
“ಮೌನದಲುಂಬುವುದು ಆಚಾರವಲ್ಲ,
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಾ ಶರಣೆನ್ನುತ್ತಿರಬೇಕು,
ಕರಣವೃತ್ತಿಗಳಡಗುವವು
ಕೂಡಲಸಂಗನ ನೆನೆವುತ್ತಲುಂಡಡೆ”
ಆತನ ಕರುಣೆಯ ಸ್ಮರಣೆಯಿಂದ ಕರಣವೃತ್ತಿಗಳು ಅಂದರೆ ಇಂದ್ರಿಯವಿಕಾರಗಳು ಅರ್ಥಾತ್ ಮನಸ್ಸು ಪ್ರಸನ್ನವಾಗುತ್ತದೆ.
ಹೀಗೆ ಪ್ರಸಾದ ಸ್ವೀಕರಿಸುವಲ್ಲಿ ಮನೋನೈರ್ಮಲ್ಯ ನೆಲೆಗೊಂಡು, ಮಾನಸಿಕವಾದ ಶಾಶ್ವತ ಪ್ರಸನ್ನತೆ ಅಳವಡುವುದು, ಹೀಗೆ ಸ್ವೀಕರಿಸುತ್ತಾ ಬದುಕುವಲ್ಲಿ ಸಾಧಕನು ಲಿಂಗ ಭೂಗೋಪಭೋಗಿಯಾಗಿರುತ್ತಾನೆ.
ಭಗವಂತನಿಗೆ ಅರ್ಪಿಸುವದನ್ನ ಶ್ರದ್ಧೆಯಿಂದ ಅರ್ಪಿಸಬೇಕು, ಅಟ್ಟಹಾಸದಿಂದ ಅಥವಾ ಪ್ರಸಿದ್ಧಿಗೊಸ್ಕರ,ದೇವರ ಕಾಟ ಕಳೆಯಲೆಂದು ಅರ್ಪಿಸಬಾರದು.
ಅರ್ಪಣ ಮನೋಭಾವ ಸಾಧಕನಲ್ಲಿ ನೆಲೆಗೊಳ್ಳಬೇಕು. ಅರ್ಪಿಸಿದ ಪ್ರಸಾದದಲ್ಲಿ ಒಂದು ಕಣವನ್ನು ಸಹ ಬಿಡದೆ ಉಪಯೋಗಿಸಬೇಕು ಅರ್ಥಾತ್ ಪ್ರಸಾದವನ್ನು ಕೆಡಿಸಬಾರದು