ಯೋಗ್ಯ ಗುರುವಿನ ಭಾಗ್ಯ : ಕಾರಣಿಕ ಕುಮಾರಯೋಗಿ ಧಾರವಾಹಿ -೮ ಲೇಖಕರು ಜ.ಚ.ನಿ

ನಿಜಗುಣರ ವೇದಾಂತ ಗ್ರಂಥಗಳಲ್ಲಿಯೆ ಅದರಲ್ಲಿಯು ಕೈವಲ್ಯ ಪದ್ಧತಿಯಲ್ಲಿಯ ತಲ್ಲೀನರಾಗಿದ್ದ ಹುಬ್ಬಳ್ಳಿಯ ಸಿದ್ಧಾರೂಢರವರು ಅವರ ಈ ಇಷ್ಟಲಿಂಗದ ಮಹಿಮೆ ಹಿರಿಮೆಗಳ ಹಿತೋಪದೇಶವನ್ನೆ ಲೆಕ್ಕಿಸಿರಲಿಲ್ಲ. ಆತ್ಮಲಿಂಗವಿದ್ದ ಆರೂಢನಿಗೆ ಬಾಹ್ಯಲಿಂಗವೇಕೆ ಎಂದು ಅವರ ಗ್ರಹಿಕೆ. ಆದರೆ ತಮ್ಮ ಗ್ರಹಿಕೆಯಲ್ಲಿ ಗಂಧವಿಲ್ಲೆಂಬುದು ಅವರಿಗೆ ತಿಳಿದಿರಲಿಲ್ಲ. ಅಂತರ್ಲಿಂಗಧಾರಣ ಸಮರ್ಥನಿಗೂ ಬಾಹ್ಯಲಿಂಗದ ಅಗತ್ಯವಿದೆಯೆಂಬುದನ್ನು ಅವರು ಕಂಡುಕೊಂಡಿರಲಿಲ್ಲ. ನಿಜಗುಣರೆ ಮತ್ತೊಂದೆಡೆಯಲ್ಲಿ ಸೊಗಸಾದ ಇಸಾದೃಶ್ಯಕೊಟ್ಟು ಹೇಳಿದ್ದಾರೆ; ಇಷ್ಟ-  ಪ್ರಾಣ-ಭಾವಲಿಂಗಗಳು ಕ್ರಮವಾಗಿ ದೀಪ-ದೀಪದ ಕಿರಣ- ದೀಪದ ಪ್ರಕಾಶಗಳಂತೆ ಅವಿನಾಭಾವ ಸಂಬಂಧದಿಂದ ಇವೆಯೆಂದು ಇನಿದಾಗಿ ಬಿತ್ತರಿಸಿದ್ದಾರೆ. ಕತ್ತಲೆಯ ಮನೆಯಲ್ಲಿ ಹಣತೆ ಹಚ್ಚಿದ ಮೇಲೆ ಬೆಳಕು ಬಿತ್ತೆಂದು ದೀವಿಗೆಯನ್ನು ಆರಿಸಿದರೆ, ಎತ್ತಿ ಬಿಸುಡಿದರೆ ಬೆಳಗು ಉಳಿಯುತ್ತದೆಯೊ? ಉಳಿದಿರಲು ಸಾಧ್ಯವೊ? ಹಾಗೆಯೇ  ದೀಪದಂತಿದ್ದ ಇಷ್ಟಲಿಂಗ ಇಲ್ಲದಿರಲು ಪ್ರಾಣಕಿರಣವು ಇಲ್ಲ, ಭಾವ ಬೆಳಗು ಇಲ್ಲ. ಅನ್ನದ ಅವಶ್ಯಕತೆ ಇರುವವರೆವಿಗು ಇಷ್ಟಲಿಂಗದ ಅವಶ್ಯಕತೆ ಅನಿವಾರ್ಯ. ಸ್ಥೂಲ  ಶರೀರ ಹೊದ್ದಿರುವವರೆವಿಗು ಸ್ಥೂಲಲಿಂಗದ ಸಂಬಂಧ ಅಪರಿಹಾರ. ಈ ನಿಜವನರಿಯದವ ನಿಜವಾದ ಆರೂಢನಲ್ಲ, ಆರೂಢಪತಿತ. ಈ ತತ್ವವ ತಿಳಿಯದೆ ಸಿದ್ಧಾರೂಢರು ಅವರ ಕೆಲವು ಶಿಷ್ಯರು ಇಷ್ಟಲಿಂಗವನ್ನು ಬಿಟ್ಟುಬಿಟ್ಟಿದ್ದರು. ಅವರು ವೇದಾಂತಬಲ್ಲಿದರಾಗಿದ್ದರು. ಈ ಒಂದು ಕೊರತೆಯಿಂದ ಸ್ವಾಮಿಗಳವರು ಯೋಚನಾಕ್ರಾಂತರಾಗಿದ್ದರು. ಅವರ ಮನಸ್ಸು ಅಲ್ಲಿಂದ ಹಿಂಜರಿಯುತ್ತಿತ್ತು. ಯೋಗ್ಯಗುರುವಿನ ಬರುವನ್ನು ಹಾರೈಸುತ್ತಿತ್ತು. ಇಲ್ಲಿಯೇ ಇರು’ ಎಂದರ್ಥದ ಜಡೆಸಿದ್ದರ ಅಮೃತವಾಣಿಯಿಂದ ಇಲ್ಲಿಯೆ ನನಗೆ ಸದ್ಗುರುವಿನ ಸಂದರ್ಶನ ಭಾಗ್ಯಲಭಿಸಬಹುದೆಂದು ನಚ್ಚಿ ವಿಧಿಯಿಲ್ಲದೆ ಅಲ್ಲಿಯೆ ವಾಸವಾಗಿದ್ದರು.

 

ಹೀಗಿರಲು ಒಂದು ದಿನ ಆಕಸ್ಮಿಕವಾಗಿ ಮಹಾಮಹಿಮರಾದ ವೀರವೈರಾಗ್ಯ ಸಂಪನ್ನರಾದ ಎಳಂದೂರು ಬಸವಲಿಂಗಸ್ವಾಮಿಗಳವರು ಆ ಪ್ರಾಂತದಲ್ಲಿ ಪ್ರಯಾಣ ಮಾಡುತ್ತ ಹುಬ್ಬಳ್ಳಿಗೆ ಬಂದರು. ಅದೇ ಊರಿನಲ್ಲಿಯೇ ಪ್ರಸಿದ್ಧರಾದ ಆರೂಢರಿಗೆ ನಿಜಗುಣರ ಕೃತಿಗಳಲ್ಲಿರುವ ಪರಿಣತಿಯನ್ನು ಕೇಳಿ ನೋಡಿ ಸಂತೋಷಿಸಬೇಕೆಂದು ಆರೂಢರಲ್ಲಿಗೆ ಆಗಮಿಸಿದರು. ಆರೂಢರೊಡನೆ ಆಧ್ಯಾತ್ಮಜಿಜ್ಞಾಸೆ ಆರಂಭವಾಯಿತು.   ಶ್ರೀಗಳ ಅಸ್ಖಲಿತವಾದ ಅನನ್ಯ ಸಾಧಾರಣವಾದ ಅನುಭವವನ್ನು ಕಂಡು ಆರೂಢರಿಗೆ ಅಚ್ಚರಿಯಾಯಿತು. ತಾವು ಮೌನತಾಳಿ ತಮ್ಮ ಶಿಷ್ಯರನ್ನು ವಾದಕ್ಕೆ ಮುಂದುಮಾಡಿದರು. ಶಿಷ್ಯರಲ್ಲಿ ಅಗ್ರಗಣ್ಯರಾಗಿದ್ದ ಸದಾಶಿವ ಸ್ವಾಮಿಗಳವರು ಚುರುಕಾಗಿ ಚರ್ಚೆಮಾಡಿದರು. ಏನು ಮಾಡಿದರೇನು ? ಅಪಕ್ವತೆಯನ್ನು ಶ್ರೀಗಳು ಕಂಡುಕೊಂಡರು. ಬರೀ ವಾದವಿಮರ್ಶೆಯ ಹೊರತು ಆಳ ಅನುಭವದ ಹುರುಳಿಲ್ಲ. ಕೇವಲ ಬೌದ್ಧಿಕವಾದವು ಆತ್ಮಶಾಂತಿಗೆ ಕಾರಣವಲ್ಲ ಎಂದು ಹೇಳಿ ಹೊರಗೆ ಬಂದು ಒಂದು ತಂಬಿಗೆಯನ್ನು ಕೇಳಿದರು. ಶ್ರೀಗಳ ಅನುಭವಕ್ಕೆ ಮೆಚ್ಚಿದ ಸದಾಶಿವಸ್ವಾಮಿಗಳವರೆ ತಂಬಿಗೆಯನ್ನು ತೆಗೆದುಕೊಂಡು ಬಂದರು. ಅವರೊಡನೆ ಬಹಿರ್ದೆಶಕ್ಕೆ ತೆರಳುತ್ತ ತಮ್ಮ ಹಿಂದೆ ಬರುತ್ತಲಿದ್ದ ಶಿಷ್ಯನ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಅಷ್ಟರಲ್ಲಿ ಜಲಾಶಯವೊಂದು ಹತ್ತಿರ ಕಂಡಿತು. ಶ್ರೀಗಳು ತಂಬಿಗೆಯನ್ನು ತೆಗೆದುಕೊಂಡು ಹೋಗಿ ಬಂದು ಹಸ್ತ ತೊಳೆದರು. ಹಲ್ಲುಜ್ಜಲು ಕಡ್ಡಿಯೊಂದನ್ನು ತರಹೇಳಿದರು. ಆರೂಢರ ಶಿಷ್ಯವೃತ್ತಿಯಲ್ಲಿದ್ದ ಸದಾಶಿವ ಸ್ವಾಮಿಗಳಿಗೆ ಹಲ್ಲುಕಡ್ಡಿಯ ಪರಿಚಯವಿರಲಿಲ್ಲ. ಅನುಮಾನಿಸುತ್ತ ನಾಲ್ಕು ಬೆರಳುದ್ದದ ಒಂದು ಕಡ್ಡಿಯನ್ನು ತಂದುಕೊಟ್ಟರು. ಅದನ್ನು ಶ್ರೀಗಳು ನೋಡಿ ‘ತಮ್ಮಾ ನಿನ್ನ ಬುದ್ಧಿಯೂ ಸಹ ಇಷ್ಟೇ ಉದ್ದಿದೆ. ಅದ್ವೈತದಲ್ಲಿ ಮುಳುಗಿದ್ದ ನಿಮಗೆ ಬಾಹ್ಯಶೀಲಾಚರಣೆಯ ಅರಿವಿಲ್ಲ. ಬಾಹ್ಯ ಶೌಚಾಚರಣೆಯ ಮಾಡದವನು ಆತ್ಮನನ್ನು ಅರಿತು ಫಲವಿಲ್ಲ. ತಾನು ಶುಚಿಯಾಗಿದ್ದು ಮನೆ ಮೂಲೆಗಳಲ್ಲಿ ಅಶುಚಿಯಾಗಿದ್ದರೆ ಸಾಕೇನು? ತನ್ನ ಮನೆ ಶುಚಿಯಾಗಿರಬೇಡವೆ? ತಾನು ಶುಚಿಯಾಗಿದ್ದರೆ ಆರೋಗ್ಯ ಬರುವುದೇನು? ತಾನು ತನ್ನ ಮೈತೊಳೆದು ಬಿಳಿಯ ಬಟ್ಟೆಯನ್ನು ತೊಡುವಂತೆ ಮನೆಯ ಶುಭ್ರತೆಮಾಡಿ ಸುಣ್ಣ ಬಣ್ಣ ಬಳಿದರಲ್ಲವೆ? ಹಾಗೆ ಆತ್ಮನಿಗೆ ಅರಿವಿನ ಬೆಳಗು ಒಂದಿದ್ದರೆ ಸಾಲದು. ಶರೀರೇಂದ್ರಿಯಗಳೂ ಶುಭ್ರವಾಗಿರಬೇಕು. ಸುಣ್ಣ ಬಣ್ಣ ಬಳಿವ ಕುಂಚು ಎಷ್ಟುದ್ದವಿದ್ದರೆ ಲೇಸೆಂಬುದನ್ನು ತಿಳಿಯಬೇಡವೆ ? ಹಾಗೆ ಹಲ್ಲುಜ್ಜುವ ಕಡ್ಡಿ ಹನ್ನೆರಡು ಅಂಗುಲ ಉದ್ದಿರಬೇಕು ಇದು ಶಾಸ್ತ್ರ, ಆತ್ಮವಿಚಾರ ಮಾತ್ರ ಹೇಳುವುದೇ ಶಾಸ್ತ್ರವಲ್ಲ, ದೇಹಾತ್ಮಗಳ ಆಚಾರ ವಿಚಾರಗಳೆರಡನ್ನು ಹೇಳುವುದೇ ಶಾಸ್ತ್ರ, ಶರೀರೇಂದ್ರಿಯ ಮೋಹ ತ್ಯಜಿಸುವುದೆಂದರೆ ನೀವೆಲ್ಲ ತಿಳಿದಿರುವಂತೆ ಶರೀರೇಂದ್ರಿಯಗಳನ್ನು ಕೊಳೆಯಾಗಿ ಇರಿಸುವದಲ್ಲ. ಶೌಚ-ಸ್ನಾನ, ಹಲ್ಲುಜ್ಜುವಿಕೆ ಮುಂತಾದ ಬಾಹ್ಯ ಶೌಚಾಚಾರಗಳನ್ನು ಯಥಾವಿಧಿಯಾಗಿ ಆಚರಿಸಲೇ ಬೇಕು. ಆಚರಿಸದೆ ಇರುವದರಿಂದ ನಿಮಗೆಲ್ಲ ಹಲ್ಲುಜ್ಜುವ ಕಡ್ಡಿ ಎಷ್ಟಿರಬೇಕೆಂಬುದೇ ಗೊತ್ತಿಲ್ಲ. ಹೊರಗೆ ಹೋಗಿ ಬಂದಾದ ಮೇಲೆ  ತೊಳೆವುದೂ ಸಹ ನಿಮಗೆ ಗೊತ್ತಿದೆಯೊ ಇಲ್ಲೊ. ಹೊರಗಿನದನ್ನೆ ಅರಿಯದವನು ಒಳಗಿನದನ್ನು ಇನ್ನೆಷ್ಟು ಅರಿತಿರಬೇಕು? ಎಂದು ಚೆನ್ನಾಗಿ ಬುದ್ಧಿವಾದ ಹೇಳಿದರು.

 

ಇದನ್ನು ಕೇಳಿ ಸದಾಶಿವ ಸ್ವಾಮಿಗಳವರ ಮನಸ್ಸು ಪರಿವರ್ತನವಾಯಿತು. ಶಾರೀರಿಕ ಶೌಚವಿಧಾನವನ್ನೇ ಅರಿಯದ ಆತ್ಮವಿಚಾರದಿಂದ ಏನೂ ತಿರುಳಿಲ್ಲ ಎಂಬ  ವಾದ ಅವರ ಮನಸ್ಸಿಗೆ ಆಚ್ಚೊತ್ತಿದಂತಾಯಿತು. ಅದನರಿಯಲು ಮನಸ್ಸು ಉತ್ಸುಕಗೊಂಡಿತು. ಮೊದಲೆ ಆರೂಢರ ಕ್ರಿಯಾಲೋಪವನ್ನು ಒಪ್ಪದ ಸ್ವಾಮಿಗಳಿಗೆ ಇದನ್ನೆಲ್ಲ ಕಂಡಮೇಲೆ ಮತ್ತೂ ಮನಸ್ಸು ಅಲ್ಲಿರಲು ಹಿಮ್ಮೆಟ್ಟಿತು. ಶ್ರೀಗಳೊಡನೆ ಹೋಗಲು ಅಭಿಲಾಷೆಯಾಗಿ ಅವಾಗಳೆ ಅಪ್ಪಣೆ ಕೇಳಿದರು

 

ಯೋಗಧುರಂಧರರಾದ ಶ್ರೀಗಳವರು ‘ತಮ್ಮಾ ನಮ್ಮ ಸೇವೆ ಕಠಿಣವಾದುದು. ನೀನಾದರೊ ಆರೂಢರ ಶಿಥಿಲಾಚಾರ ಶಿಕ್ಷಣದಲ್ಲಿದ್ದವನು. ಕಷ್ಟದ ಸೇವೆಗೆ ಒಳಪಟ್ಟು ತೊಳಲಬೇಕಾದೀತು ? ತುಂಬಾ ವಿಚಾರಿಸಿ ಹೇಳು. ಎನ್ನಲು ಸ್ವಾಮಿಗಳ ಕಣ್ಣಲ್ಲಿ ನೀರೂರಿ ‘ಮಹಿಮರೆ, ಶಿವಯೋಗದ ಕಟ್ಟುಗಳು ಎಷ್ಟೇ ಕಷ್ಟದಾಯಕಗಳಾಗಿದ್ದರು ಸಹಿಸಬಲ್ಲೆನು, ಸೇವಿಸಬಲ್ಲೆನು. ತಮ್ಮೊಡನೆ ಬರಲು ತಮ್ಮ ಶಿಷ್ಯನಾಗಿರಲು ಅಪ್ಪಣೆ ಆಗಿಯೇ ತೀರಬೇಕೆಂದು ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರ ದೃಢನಿಶ್ಚಯವನ್ನು ಸತ್ಯಸಂಕಲ್ಪವನ್ನು ಕಂಡು ಶ್ರೀಗಳವರು ಶಿಷ್ಯನನ್ನಾಗಿ ಪರಿಗ್ರಹಿಸಿದರು.

ಸದಾಶಿವ ಸ್ವಾಮಿಗಳವರ ಸಂತೋಷಕ್ಕೆ ಪಾರವೆ ಇಲ್ಲದಾಯಿತು. ಬಹುದಿನಗಳ ನಿರೀಕ್ಷಣೆ ಇಂದು ಫಲಿಸಿತು; ಅಭೀಷ್ಟವು ತಾನೇ ಪ್ರಾಪ್ತಿಯಾಯಿತು; ತಾನಿದ್ದಲ್ಲಿಗೆ ಬಂದೊದಗಿತು. ವಿವೇಕಾನಂದರು ಪರಮಾತ್ಮನ ಪಿಪಾಸುಗಳಾಗಿ ದಕ್ಷಿಣೇಶ್ವರಕ್ಕೆ ಹೋದರೆ ನಮ್ಮ ಕಥಾನಾಯಕರಲ್ಲಿಗೆ ಶಿವನನ್ನು ಕಂಡ ಸದ್ಗುರುಗಳು ತಾವಾಗಿಯೇ ಆಗಮಿಸಿದರು; ಅನುಗ್ರಹಿಸಿದರು. ಭಾಗ್ಯವಿಶೇಷವಲ್ಲವೆ? ತಾನು ಹಂಬಲಿಸುತ್ತಿರುವ ವಸ್ತು ಅಥವಾ ಮಹಾವ್ಯಕ್ತಿ ತನ್ನಲ್ಲಿಗೆ ಬರುವುದೆಂದರೆ ಪುಣ್ಯದ ಪ್ರಭಾವ ಎಷ್ಟಿರಬೇಕು?

 

ಗುರುಗಳು ಬದುಕಿರುವವರೆವಿಗೂ ಅವರ ಸನ್ನಿಧಿಯಲ್ಲಿದ್ದು ಸೇವೆಗೈಯುತ್ತಾ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಶಿವಾನುಭವ ಸಾರಸವಿಯ ಸವಿದರು. ಅದಕ್ಕೆ ಮುಗ್ಧರಾದರು. ಪ್ರತಿದಿನ ರಾತ್ರಿ ನಿದ್ರೆ ಬರುವವರೆವಿಗು ಶಿವಾನುಭವ ಗ್ರಂಥಗಳನ್ನು ಓದುತ್ತಿದ್ದರು. ಹಗಲು ಗುರುಗಳ ಸಕಲವಿಧ ಸೇವೆಯಲ್ಲಿ ತೊಡಗಿರುತ್ತಿದ್ದರು. ಸೇವೆಯಲ್ಲಿ ಮೇಲು ಕೀಳೆಂಬ ಭಾವನೆಯಿರಲಿಲ್ಲ. ಯಾವ ಕೆಲಸವೆ ಆಗಲಿ ಗುರುಸೇವೆಯೆಂದು ಹರುಷದಿಂದ ಉಲ್ಲಾಸದಿಂದ ಮಾಡುತ್ತಿದ್ದರು. ಗುರುಗಳು ಶಿವಪೂಜೆಗೆ ಕುಳಿತಾಗ ಅದನ್ನು ತದೇಕ ಧ್ಯಾನದಿಂದ ತಲ್ಲೀನ ಮನಸ್ಸಿನಿಂದ ನಿರೀಕ್ಷಿಸುತ್ತಿದ್ದರು. ಆಗ ಬಾಹ್ಯ ಜಗತ್ತನ್ನು ಮರೆತಿರುತ್ತಿದ್ದರು. ಅವರಂತೆ ಅಂತರಾತ್ಮನ ಸಮರಸಕ್ಕೆ ಹಂಬಲಿಸುತ್ತಿದ್ದರು. ಗುರುಗಳ ಪೂಜೆಯ ಪ್ರಭಾವವು ಅವರ ಕಣ್ಣುಗಳ ಹೊಲಬಿನಿಂದ ಹೋಗಿ ಮನೋಮಂದಿರದಲ್ಲಿ ನಿಂದು ಅಂತರಂಗದಾದ್ಯಂತವನ್ನು ವ್ಯಾಪಿಸುತ್ತಿತ್ತು.  ಹೀಗೆ ಗುರುಗಳವರಲ್ಲಿ ಸದಾಚಾರ ಶಿವಪೂಜೆ ಶಿವಾನುಭವಗಳನ್ನು ಕಲಿತುದಲ್ಲದೆ ಯೋಗವಿದ್ಯೆಯನ್ನು ಅಭ್ಯಸಿಸಿದರು. ಕ್ರಿಯೋಪದೇಶವನ್ನು ಪಡೆದರು. ಗುರುಶಿಷ್ಯ ಸಂಬಂಧ ತೀರ ಹತ್ತಿರದ್ದಾಯಿತು; ತಾದಾತ್ಮ್ಯಭಾವದ್ದಾಯಿತು.

 

ಗುರುಶಿಷ್ಯರಿಬ್ಬರು ಸೇರಿ ಪ್ರಾಂತ ಪ್ರಯಾಣವನ್ನು ಕೈಕೊಂಡರು. ಅಲ್ಲಲ್ಲಿ ಸಂಚರಿಸುತ್ತ ಭಕ್ತಸಮೂಹಕ್ಕೆ ಸದ್ಬೋಧೆಯನ್ನು ಮಾಡುತ್ತ ಧಾರವಾಡ ಜಿಲ್ಲೆಯ ಅಣ್ಣಿಗೆರೆ ಗ್ರಾಮಕ್ಕೆ ಆಗಮಿಸಿದರು.  ಅಲ್ಲಿರುವಾಗಲೆ ಎಳಂದೂರು ಶ್ರೀಗಳವರಿಗೆ ದೇಹಾಲಸ್ಯವಾಯಿತು. ದಿನದಿನಕ್ಕೆ ದೇಹಾಲಸ್ಯವು ಉಲ್ಬಣಾವಸ್ಥೆಗೆ ಹೋಗಹತ್ತಿತು. ಇದನ್ನು ಕಂಡು ಸದಾಶಿವ ಸ್ವಾಮಿಗಳವರು ಚಿಂತಿಸತೊಡಗಿದರು. ಇದನ್ನು ಕಂಡು ಗುರುವರ್ಯರು ಹತ್ತಿರಕ್ಕೆ ಕರೆದು ನೇವರಿಸಿ ಕುಮಾರಾ! ನಿನ್ನಲ್ಲಿ ಯೋಗವಿದೆ; ತ್ಯಾಗವಿದೆ. ವಿರತಿಯಿದೆ ಉಪರತಿಯಿದೆ. ಕಾರ್ಯದಕ್ಷತೆಯಿದೆ; ಅಧ್ಯಾತ್ಮಿಕ ಬಲವಿದೆ. ಇನ್ನೇನಾಗಬೇಕು? ಸುಮ್ಮನೆ ಅಂಜದಿರು, ಅಳುಕದಿರು. ಧೈರ್ಯಗುಂದದೆ ಸತ್ಕಾರ್ಯ ತತ್ಪರನಾಗು. ಸಮಾಜಸೇವೆಯನೆಸಗು. ಸಮಾಜವು ಯೋಗಬಲ ಹೀನವಾಗಿದೆ. ತ್ಯಾಗಗುಣ ರಹಿತವಾಗಿದೆ. ವಿದ್ಯೆ-ಧರ್ಮಗಳಿಲ್ಲದೆ ಕುರುಡಾಗಿದೆ. ನಿರ್ವೀರ್ಯವಾದ ಸಮಾಜಕ್ಕೆ ಕಳೆತುಂಬಿ ಕಣ್ಣರಳಿಸಲು ನೀನು ಮುಂದೆ ಬರಬೇಕು.ಕೇವಲ ಯೋಗಿಯಾಗಿ ವಿರಾಗಿಯಾಗಿ ಕಣ್ಮುಚ್ಚಿ ಕುಳಿತರೆ ಸುಖವಿಲ್ಲ. ಸಮಾಜವು ಶಕ್ತಿಗುಂದಿ ಸಣ್ಣಾಗುತ್ತಿರುವಾಗ ಒಬ್ಬನೆ ಮುಕ್ತನಾಗಲು ಹವಣಿಸುವುದು ಹೆಚ್ಚಿನ ಸ್ವಾರ್ಥ. ಸಮಾಜ ಸೇವೆಯ ಯುಕ್ತಯೋಗ, ಅದೇ ತಾತ್ವಿಕ ತಪಸ್ಸು, ಸಮಾಜವೇ ನಿನ್ನ ಜೀವನ.  ಸಮಾಜಸೇವೆಯೆ ನಿನಗೆ ಪಾವನ, ಸಮಾಜದ ಮಕ್ಕಳೆ ನಿನ್ನ ಮಕ್ಕಳು. ಸಮಾಜದೇಳ್ಗೆಯೆ ನಿನ್ನ ಏಳ್ಗೆ.  ಸಮಾಜ ಮುಕ್ತಿಯೆ ನಿನ್ನ ಮುಕ್ತಿ .  ಯೋಚಿಸಬೇಡ. ಯೋಧನಂತೆ ಧೈರ್ಯತಾಳು. ನಿನಗೆ ದೇವನ ಬೆಂಬಲವಿದೆ. ಆಯುಷ್ಯರೇಖೆಯಿದೆ. ಸಮಾಜವೇ ನಾನೆಂದು ಭಾವಿಸಿ ಸೇವಿಸು. ಇದರಿಂದ ನೀನು ಆದರ್ಶಜೀವಿಯಾಗುವೆ. ಅಸಾಧಾರಣ ಶಿವಯೋಗಿಯಾಗುವೆ ಎಂದು ಹೇಳಿ ತಮ್ಮ ಯೋಗದ ಸಾಧನ ಸಾಮಗ್ರಿಗಳನ್ನು ಪೂರ್ಣ ಕೃಪಾ ಪ್ರಸಾದಾನುಗ್ರಹ ದೀಕ್ಷೆಯಿತ್ತು ಶುಭಾಶೀರ್ವಾದವನ್ನು ಕೊಟ್ಟು, ಲಿಂಗೈಕ್ಯರಾಗುವರು. ಸ್ವಾಮಿಗಳಾದರೊ ಗುರು ಅನುಗ್ರಹಿಸಿದುದನ್ನೆ ತಮ್ಮ ಭಾವೀ ಜೀವನದ ಪರಮ ಸಂಪತ್ತೆಂದು ಪರಮಾರ್ಥ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತರಾದರು. ಆದರೂ ಗುರುವಿರಹದ ವ್ಯಥೆಯನ್ನು ಕೆಲವು ಕಾಲ ಅನುಭವಿಸದೆ ಇರಲಿಲ್ಲ.

Related Posts