ಹಾನಗಲ್ಲ ಕುಮಾರಸ್ವಾಮಿಗಳು

• ಬಿ. ಶಿವಮೂರ್ತಿ ಶಾಸ್ತ್ರಿ

(ಶರಣ ಸಾಹಿತ್ಯ ವಿದ್ವಾಂಸ ಬಿ. ಶಿವಮೂರ್ತಿಶಾಸ್ತ್ರಿಗಳು ಬಸವಯ್ಯ ಹುಲಿಕುಂಟೆಮಠ- ನೀಲಮ್ಮ ದಂಪತಿ ಪುತ್ರರು. ತುಮಕೂರಿನಲ್ಲಿ 23-2-1903 ರಂದು ಜನಿಸಿದರು. ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. 1936ರಲ್ಲಿ  ಮೈಸೂರು ಸಂಸ್ಥಾನದ ವಿದ್ವಾಂಸರಾದರು. ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಮತ್ತು ಪರಿಷತ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಮೈಸೂರು ಸರ್ಕಾರದ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಗಳ ಸ್ಥಾಪಕರೂ ಹೌದು. ಆಸ್ಥಾನ ವಿದ್ವಾನ್ ಬಿರುದಿನ ಜೊತೆಗೆ ಕೀರ್ತನ ಕೇಸರಿ ಎಂಬ ಬಿರುದೂ ಲಭಿಸಿತ್ತು.1966ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ,  1968ರಲ್ಲಿ ಜನತೆ ದೇವಗಂಗೆ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿತು. ಕರ್ನಾಟಕ ಏಕೀಕರಣಕ್ಕೆ ದುಡಿದವರು,

ಕೃತಿಗಳು:  ರಾಘವಾಂಕನ ವೀರೇಶ ಚರಿತೆ, ಕೋಡಿಹಳ್ಳಿ ಕೇಶೀರಾಜನ ‘ಷಡಕ್ಷರ ಮಂತ್ರ ಮಹಿಮೆ’ ಗುರುಸಿದ್ದನ ಮಾದೇಶ್ವರ ಸಾಂಗತ್ಯ ಇತ್ಯಾದಿ.  ಕನ್ನಡ ನಿಘಂಟು ಕಾರ್ಯ (1964) ಪೂರ್ಣಗೊಳಿಸಿದರು.  ಭಾಷಣ ಕಲೆ ಅತ್ಯುತ್ತಮ ಮಾಧ್ಯಮವೆಂದು ತಿಳಿದಿದ್ದ ಅವರು ಕನ್ನಡ ನಾಡಿನಲ್ಲೇ ಪ್ರಪ್ರಥಮವಾಗಿ ಭಾಷಣಕಲಾತರಗತಿಗಳನ್ನು ಪ್ರಾರಂಭಿಸಿದ ಹಿರಿಮೆ ಶಾಸ್ತ್ರಿಗಳದ್ದು.  ಶಿವಮೂರ್ತಿ ಶಾಸ್ತ್ರಿಗಳ ಅವಧಿಯಲ್ಲಿ ಪುಸ್ತಕ ಭಂಡಾರಕ್ಕೆ ಸುಮಾರು 4000  ಪುಸ್ತಕಗಳ ಸೇರ್ಪಡೆ ಆಯಿತು. ಆರ್. ನರಸಿಂಹಾಚಾರ್ಯರ ಕವಿಚರಿತ್ರೆ ಪರಿಷ್ಕೃತವಾಗಿ ಪ್ರಕಟವಾಯಿತು. ಬಿ. ಶಿವಮೂರ್ತಿ ಶಾಸ್ತ್ರಿಗಳು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 6 ಸಮ್ಮೇಳನಗಳು ನಡೆದಿವೆ. ಪರಿಷತ್ತಿಗೆ ನಾಡಿನ ನಾನಾ ಸಂಸ್ಥೆಗಳಲ್ಲಿ ಆಕಾಶವಾಣಿ, ದೂರದರ್ಶನ, ಶಿಕ್ಷಣ ಇಲಾಖೆ ಸಂಸ್ಕೃತಿ ಇಲಾಖೆ ಮೊದಲಾದ ಕಡೆ ಪ್ರಾತಿನಿಧ್ಯವಿರುವಂತೆ ಮಾಡಿದ್ದು ಶಾಸ್ತ್ರಿಗಳ ಹೆಗ್ಗಳಿಕೆಗಳಲ್ಲಿ ಒಂದು. ಬಿ. ಶಿವಮೂರ್ತಿ ಶಾಸ್ತ್ರಿಗಳು 15-01-1976 ರಲ್ಲಿ ಲಿಂಗೈಕ್ಯರಾದರು.

)

ಚಂ| ವೃ| ಉರಿಯೊಳಗೈದೆ ಕರ್ಪೂರದವೊಲ್ ನಿಜಲಿಂಗದ ಸುಪ್ರಭಾತದೊಳ್ |

 ಬೆರೆದು ತದೇಕರೂಪವನೆ ತಾಳ್ದ ಮಹಾತ್ಮನ ಹಾನಗಲ್ಲಸ|

 ಚ್ಚರವರನಾ ಕುಮಾರ ಶಿವಯೋಗಿವರೇಣ್ಯನ ಪಾದಪಂಕಜಂ |

ನೆರೆನೆಲೆಸುತ್ತೆರಾಜಿಸುಗೆ ಸಂತತವೆನ್ನಯ ಹೃತ್ಸರಸಿನೊಳ್|

 ಕನ್ನಡ ನಾಡಿನಲ್ಲಿ ಇಂದಿನವರೆಗೆ ಆಗಿಹೋದ ಅನಂತ ಮಹಾನುಭಾವರು ಒಂದೊಂದು ಕಲೆಗಳಿಂದ ತಂತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವಾರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿ ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸುವ ಶ್ರೇಷ್ಠ ಮಹಾನುಭಾವರೆಂದರೆ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ಅವರ ಇಡೀಯ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸಾಮರ್ಥ್ಯಗಳೂ ಗುಂಘಿತವಾಗಿದ್ದುವು ವಿಚಾರ ಸ್ವಾತಂತ್ರ್ಯ, ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವ ಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯ ಅಭಿಮಾನ, ಕಾರ್ಯ ಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದುವು. ಮತ್ತು ಅಸದೃಶವಾದ ಸ್ವಾರ್ಥತ್ಯಾಗ ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ, ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾರ ಉದ್ದೇಶ, ಅತ್ಯಧಿಕ ಉತ್ತೇಜನ, ಪ್ರಚಂಡವಾದ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಹುಟ್ಟು ಗುಣವಾಗಿದ್ದುವು. ಇವೆಲ್ಲ ಸದ್ಗುಣಗಳಿಂದ ಶ್ರೀ ಕುಮಾರ ಶಿವಯೋಗಿಯು ತನ್ನ ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿ ಇಡಿಯ ಕನ್ನಡ ನಾಡಿನ ಕುವರನಾಗಿ, ವೀರಶೈವರ ಉದ್ಧಾರಕನಾಗಿ ಬಾಳಿದನು. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಜನಿಸುವ ಕುಮಾರನು ತಮ್ಮ ತಂದೆತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಒಂದು ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲ ಕೇಳಿಗಳಿಂದ ತಂತಮ್ಮ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು. ಆದರೆ, ಅಸಾಧಾರಣವಾದ ಪ್ರೌಢಲೀಲೆಗಳಿಂದ ಇಡೀ ಜನಾಂಗವನ್ನೇ ಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರ ಶಿವಯೋಗಿಯು ಮಾಡಿದನು. ಮಹಾನುಭಾವನಾದನು. ಆತನ ಸಹಜವಾದ ಕಿರುನಗೆ, ನನ್ನು ವಾತುಗಳು ಪುಣ್ಯಕಳೆಗಳನ್ನು ಕಂಡು ಕೇಳಿ, ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ  ಮಿತವಾದ, ಅನುಭವಪೂರ್ಣವಾದ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ. ಅವರು ಚಿತ್ತಸ್ಥೈರ್ಯದಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೇ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಅಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಆಡಿಯನ್ನಿಟ್ಟರು. ಆ ಕಾರ್ಯಗಳಲ್ಲಿ ಒದಗುವ ಯಾವ ಭಯಭೀತಿಗಳಿಗೂ ಅಂಜಲಿಲ್ಲ, ಅಳುಕಲಿಲ್ಲ, ದೊಡ್ಡ ನದಿಯ ಪ್ರವಾಹವು, ಎದುರಾಗುವ ಕಾಡು ಗಿಡಮರಗಳನ್ನು ತನ್ನ ಸೆಳವಿನಿಂದ ಭೇದಿಸಿ ದೊಡ್ಡ ದೊಡ್ಡ ಗುಂಡುಬಂಡೆಗಳ ಮೇಲೆ ನೆಗೆದು ಮುದಕ್ಕೆ ಸಾಗುವಂತೆ ಅವರು ತಮ್ಮ ಕಾರ್ಯಸಾಧನದಲ್ಲಿ ಎಡಬಿಡದೆ ಅಡ್ಡಬರುವ ದುರಂತವಾದ ಎಡರುಗಳನ್ನೂ ಸಹ ತಮ್ಮ ವೈರಾಗ್ಯಾದ ವಜ್ರಮುಷ್ಟಿಯಿಂದ ಹೊಡೆದು ಪುಡಿಮಾಡಿ ತಮ್ಮ ಧೈಯದತ್ತ ವಾಯುವೇಗದಿಂದ ಸಾಗುತ್ತಿದ್ದರು. ಸತ್ಯವನ್ನು ಎತ್ತಿ ಹಿಡಿಯಲು ಸ್ವಲ್ಪವೂ ಹೆದರದೆ ಸೆಣಸಿದರು. ಅವರು ಮಾಡಿದ ಆ ಕಾರ್ಯ ಪಟುತ್ವದ ಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು. ಆ ಪುಣ್ಯ ಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು. ಇದಲ್ಲದೆ ಆ ಮಹಾತ್ಮನು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ, ಪ್ರತಿಯೊಬ್ಬ ಸಮಾಜಾಭಿಮಾನಿಯ-ಸಂಸ್ಕೃತಾಭಿಮಾನಿಯ ಹೃದಯ ಮಂದಿರದ ಮಾನ್ಯ ಮೂರ್ತಿಯಾದನು. ವಿರಕ್ತಚಕ್ರವರ್ತಿಯಾದನು.

ಜನನ ಮತ್ತು ಬಾಲ್ಯ

ಧಾರವಾಡ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ‘ಜೋಯಿಸರ ಹರಳಹಳ್ಳಿ’ ಎಂಬುದೊಂದು ಗ್ರಾಮವುಂಟು, ಆ ಗ್ರಾಮದಲ್ಲಿ ‘ಬಸವಯ್ಯ ಮತ್ತು ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳು, ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿ ಕಾಲದಿಂದಲೂ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿಯೂ ಇತ್ತು. ಹೀಗಿರಲು ಕೆಲವು ಕಾಲದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ. ಶ. ೧೮೬೭ರಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಜನ್ಮತೊಟ್ಟರು. ಈ ಶಿಶುವು ಹಲವು ದಿನ ಹಣೆಯಲ್ಲಿ ಭಸ್ಮಧಾರಣವಿಲ್ಲದೆ ಹಾಲು ಕುಡಿಯದ್ದರಿಂದ ಈ ಶಿಶುವಿಗೆ ‘ಹಾಲಯ್ಯ’ ಎಂದು ಹೆಸರನ್ನಿಟ್ಟರೆಂದು ಜನ ಹೇಳುತ್ತಾರೆ. ಈ ಶಿಶುವು ಆ ದಂಪತಿಗಳಿಗೆ ಎರಡನೇ ಮಗನು. ಇವನು ಮುಂದೆ ಕ್ರಮವಾಗಿ ಬೆಳೆದು ಅಕ್ಷರಾಭ್ಯಾಸವನ್ನು ಆರಂಭಿಸಿದನು. ಹೀಗಿರುವಾಗ ಮೊದಲೇ ಮನೆಯಲ್ಲಿ ಬಡತನ; ಅದರಲ್ಲಿ ಮನೆಯನ್ನು ತೂಗಿಸಿಕೊಂಡು ಹೋಗುವ ಅಜ್ಜ-ಅಪ್ಪಗಳ ವಿಯೋಗ, ಹೀಗಾಗಿ ಇವರ ವಿದ್ಯಭ್ಯಾಸಕ್ಕೆ ಅನೇಕ ಅಡಚಣೆಗಳು ಅಡ್ಡವಾದುವು. ಮನೆಯ ಅಡಚಣೆಗಳಿಗಾಗಿ ಊರನ್ನೇ ಬಿಟ್ಟು ಅಲ್ಲೇ ಸಮೀಪದಲ್ಲಿರುವʼ ಕಜ್ಜರಿ ʼಎಂಬ ಗ್ರಾಮಕ್ಕೆ ಬಂದು, ಅಲ್ಲಿಯ ಒಬ್ಬ ಮಾನ್ಯಗೃಹಸ್ಥರ ಆಶ್ರಯದಿಂದ ಆತಂಕವಿಲ್ಲದೆ ವಿದ್ಯಾಭ್ಯಾಸವನ್ನು ಆರಂಭಿಸಿದರು. ‘ಬಡವರ ಮಕ್ಕಳು ಬುದ್ಧಿವಂತರುʼ ಎಂಬ ಮಾತು ಇವರಲ್ಲಿಯೂ ಸಾರ್ಥಕವಾಗಿತ್ತು, ತಮ್ಮ ಬುದ್ಧಿ ಕೌಶಲ್ಯದಿಂದ ಬೇಗಬೇಗ ಮಾಧ್ಯಮಿಕ ಪರೀಕ್ಷೆಯವರೆಗೆ ವಿದ್ಯಾರ್ಜನೆಯನ್ನು ಮಾಡಿದರು. ಆದರೆ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಆಮೇಲೆ ಲಿಂಗದಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಿಕ್ಷಣದ ಕನ್ನಡ ಶಾಲೆಯನ್ನು ಪ್ರಾರಂಭಮಾಡಿ, ತಾವು ಶಿಕ್ಷಕರಾದರು. ಬಾಲಕರಿಗೆ ಪಾಠ ಹೇಳುತ್ತಲೇ ತಾವು ನಿಜಗುಣರ ಅಧ್ಯಾತ್ಮಿಕ ಗ್ರಂಥಗಳನ್ನು ನೋಡುತ್ತಿದ್ದರು. ಹೀಗೆ ಕೆಲವು ಕಾಲ ಕಳೆಯಲು ಇಲ್ಲಿರುವ ಸುದ್ದಿಯನ್ನು ಕೇಳಿ ಅವರ ತಾಯಿಯಾದ ನೀಲಮ್ಮನವರು ಅವರ ವಿವಾಹವನ್ನು ಮಾಡಬೇಕೆಂದು ಮಗನ ಮೇಲಿನ ಮಮತೆಯಿಂದ ಬಂದು ಮನೆಗೆ ಕರೆದು ತಮ್ಮ ಹೃದ್ಗತವನ್ನು ಹೇಳಿದರು. ಆ ಮಾತನ್ನು ಕೇಳಿ ಶ್ರೀಗಳು-ಅಮ್ಮಾ! ಆದಾಗದು. ಅದು ಮೂರು ದಿನದ ಸಂಸಾರ ನಾಲ್ಕನೆಯ ದಿನಕ್ಕೆ ದುಃಖದ ಸಾಗರ, ಅದರಲ್ಲಿ ನನ್ನನ್ನು ಕೆಡುಹಬೇಡ. ಈ ನಶ್ವರವಾದ ಶರೀರದಿಂದ ಸತ್ಯ ಶಾಂತಿಯನ್ನು ಸಂಪಾದಿಸಬೇಕಾಗಿದೆ. ಈ ಕಾಯವೆಂಬ ಕಾಡಿನಲ್ಲಿ ಕಾಲನು ಶಾರ್ದೂಲ ವಿಕ್ರೀಡತವನ್ನೂ, ಕಾಮನು ಮತ್ತೇ ಭವಿಕ್ರೀಡಿತವನ್ನೂ ಮಾಡುತ್ತಿದ್ದಾರೆ. ಇವರನ್ನು ಸದೆಬಡಿಯಲು ಕಾಲಾರಿಯೂ ಕಾಮಾರಿಯೂ ಆದ ಶಿವನನ್ನು ಆರಾಧಿಸಬೇಕಾಗಿದೆ. ಅದಕ್ಕಾಗಿ ನನ್ನ ಹೃದಯವು ಹಂಬಲಿಸುತ್ತದೆ. ಆದ್ದರಿಂದ ಪೂಜ್ಯಳಾದ ತಾಯಿಯೆ ! ನಿನ್ನ ರಕ್ಷಣೆಯ ಋಣ ವಿಮೋಚನೆಗಾಗಿ ಶಿಕ್ಷಕ ವೃತ್ತಿಯಿಂದ ಸಂಪಾದಿಸಿ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತೇನೆ ಇಷ್ಟರಿಂದ ತೃಪ್ತಳೂ ಶಾಂತಳೂ ಆಗು. ಇನ್ನು ಮೇಲೆ ನೀ ತಾಯಿಯೆಂಬ ಭಾವನೆಯು ನನ್ನಲ್ಲಿಯೂ, ನಾನು ಮಗನೆಂಬ ಮೋಹವು ನಿನ್ನಲ್ಲಿಯೂ ಖಂಡಿತವಾಗಿ ಇರಕೂಡದು’ ಎಂದು ಹೇಳಿ ನಮಸ್ಕರಿಸಿ ಹಾಗೆಯೇ ವೀರವಿರತಿಯಿಂದ ಹುಬ್ಬಳ್ಳಿಗೆ ಬಂದು ಸೇರಿದರು. ಅಲ್ಲಿ ಆಗ ಪ್ರಸಿದ್ಧ ವೇದಾಂತಿಗಳೆನಿಸಿದ್ದ ಸಿದ್ಧಾರೂಢರಲ್ಲಿ ಒಳ್ಳೇ ಜಾಣ್ಮೆಯಿಂದ ನಿಜಗುಣರ ಗ್ರಂಥಗಳನ್ನು ಅಧ್ಯಯನ ಮಾಡಿದವರಾದರೂ ಅಲ್ಲಿ ನಿಜವಾದ ಶಾಂತಿಯನ್ನು ಹೊಂದಲಿಲ್ಲ. ಅವರ ಇಷ್ಟಲಿಂಗ ತ್ಯಾಗವೇ ಮುಂತಾದ ಕೆಲವು ಆಚರಣೆಗಳು ಇವರಿಗೆ ಮೆಚ್ಚುಗೆಯಾಗಲಿಲ್ಲ. ಆದಕಾರಣ ಅಲ್ಲಿಂದ ಶ್ರೀ ಜಡೆ ಸಿದ್ಧರಿದ್ದಲ್ಲಿಗೆ ಹೋಗಿ ಅವರಿಂದ ಇಷ್ಟಲಿಂಗದ ಅವಶ್ಯಕತೆಯನ್ನು ಅದರ ನೆಲೆ ಕಲೆಗಳನ್ನೂ ಅರಿತುಕೊಂಡು ಬಂದು ಮನಃ ಅವರ ಅಪ್ಪಣೆಯಂತೆ ಆರೂಢರಲ್ಲಿಯೇ ಇರಹತ್ತಿದರು.

ಯೋಗ್ಯ ಗುರುವನ್ನು ಹೊಂದುವ ಭಾಗ್ಯ

ಹೀಗೆ ಕೆಲವು ದಿನ ಕಳೆದ ಮೇಲೆ ಯೋಗಪಿತಾಮಹರೂ ಘನವೈರಾಗ್ಯ ಸಂಪನ್ನರೂ ಆದ ಶ್ರೀ ಎಳಂದೂರು ಬಸವಲಿಂಗಸ್ವಾಮಿಗಳು ದೇಶ ಸಂಚಾರಮಾಡುತ್ತಾ ಆರೂಢರಲ್ಲಿಗೆ ದಯಮಾಡಿಸಿದರು. ವೇದಾಂತದಲ್ಲಿಯೂ ಅಧ್ಯಾತ್ಮ ಅನುಭವದಲ್ಲಿಯೂ, ಯೌಗಿಕ ವಿದ್ಯೆಯಲ್ಲಿಯೂ ಇವರಿಗೆ ಇರುವ  ಅಪಾರವಾದ ವೈದುಷ್ಯವನ್ನು ಅಸದೃಶವಾದ ವೈರಾಗ್ಯವನ್ನೂ ಕಂಡು ಆರೂಢರ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನವನ್ನು ಪಡೆದ ನಮ್ಮ ಕುಮಾರಸ್ವಾಮಿಗಳು ಮೆಚ್ಚಿ ಇವರೇ ನನಗೆ ಸದ್ಗುರುಗಳೆಂದು ನಂಬಿ ಅವರ ಬೆಂಬತ್ತಿದರು. ಅವರ ಆ ಜನ್ಮದವರೆಗೂ ಗುರುಸನ್ನಿಧಿಯಲ್ಲಿದ್ದು ಸೇವೆಗೆಯ್ಯುತ್ತ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ, ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಹೀಗೆ ಹಲವು ದಿನ ಗುರುಕುಲವಾಸದಲ್ಲಿರುತ್ತಿರಲು ಮುಂದೆ ಶ್ರೀ ಬಸವಲಿಂಗ ಸ್ವಾಮಿಗಳವರ ಅಂತ್ಯ ಸಮಯವು ಸಮೀಪಿಸಿತು. ಆಗ ಅವರು ಕುಮಾರನನ್ನು ಕರೆದು ತಮ್ಮ ಸಾಧನ ಸಾಮಗ್ರಿಗಳನ್ನೂ ಕೊಟ್ಟು ಅನುಗ್ರಹಿಸಿ ಲಿಂಗೈಕ್ಯರಾದರು. ಕುಮಾರನಾದರೂ ಗುರುವಿತ್ತುದನ್ನೆ ತನ್ನ ಜೀವನದ ಪರಮ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತನಾದರೂ ಗುರುವಿನ ವಿರಹದ ವ್ಯಥೆಯನ್ನು ಕೊಂಚಕಾಲ ಅನುಭವಿಸದೆ ಇರಲಿಲ್ಲ.

ತಷೋಭೂಮಿ !

ಅನಂತರ ಏಕಾಂಗಿಯಾಗಿದ್ದು ಪ್ರಶಾಂತ ಚಿತ್ತದಿಂದ ತಪಸ್ಸನ್ನಾಚರಿಸಿ ಭಾವೀ ಸಮಾಜ ಮತ್ತು ಸಂಸ್ಕೃತಿಗಳ ಸೇವೆಗೆ ಆತ್ಮಶಕ್ತಿಯನ್ನು ಸಂಪಾದಿಸಲು ಯೋಗ ಯೋಗ್ಯವಾದ ತಪೋಭೂಮಿಯಾದ ನಿಜಗುಣರಿಗೆ ನಿಜ ನೆಲೆಯಾದ ಶಂಭುಲಿಂಗನ ಬೆಟ್ಟಕ್ಕೆ ಬಂದರು. ಅಲ್ಲಿ ಅನಂತಕಾಲವಿದ್ದು ಅತ್ಯುಗ್ರತಪವನ್ನಾಚರಿಸಿ ಅಚ್ಚಳಿಯದ ಶಾಂತಿ ದಾಂತಿಗಳನ್ನು ಸಂಪದಿಸಿದರು. ಆತನಲ್ಲಿ ವಿಲಕ್ಷಣವಾದ ಆತ್ಮ ತೇಜಸ್ಸು ಅಲ್ಲಿ ಹೊರಹೊಮ್ಮಿತು. ಅಂತರಾತ್ಮನಲ್ಲಿ ಆತನಿಗೆ ಆಳವಾದ ನೆಮ್ಮಿಗೆಯು ಚಿಮ್ಮಿತು. ಆದ್ದರಿಂದ ಅವನು ಅಲ್ಲಿಂದ ಹೊರಟು ಸೊರಬ ಪ್ರಾಂತದ ಕ್ಯಾಸನೂರು ಷಟ್ಕಾವ್ಯದ ಗುರುಬಸವಸ್ವಾಮಿಗಳ ಗದ್ದಿಗೆಯಲ್ಲಿ ಕೆಲವು ದಿನ ನಿಂತು ಅನುಷ್ಠಾನವನ್ನು ಆಚರಿಸತೊಡಗಿದನು. ಅಲ್ಲಿ ಸ್ವಯಂಪ್ರಕಾಶದ ದಿವ್ಯಜ್ಞಾನವು ಆತನಲ್ಲಿ ಮೈದೋರಿತು. ಸಾಮಾನ್ಯವಾಗಿ ಮನುಷ್ಯಮಾತ್ರರಿಗಿರುವ ಮಾನ, ಮಾಯಾ, ಲೋಭಗಳು ನಷ್ಟವಾದವು. ರತಿ, ಭಯ, ಶೋಕಗಳು ನಿರ್ಮೂಲವಾದವು ಹೀಗಿರಲು ಇವರ ಈ ಕೀರ್ತಿಯು ನಾಡಿನ ನಾಲ್ಕೂ ಕಡೆಗೆ ಹಬ್ಬತೊಡಗಿತು.

ಹಾನಗಲ್ಲ ಮಠಾಧಿಕಾರ

ಅದೇ ಸಮಯದಲ್ಲಿ ಧಾರವಾಡ ಜಿಲ್ಲಾ ಹಾನಗಲ್ಲ ವಿರಕ್ತಮಠಕ್ಕೆ ಒಬ್ಬ ಒಳ್ಳೇ ಮೂರ್ತಿಗಳು ಬೇಕಾದುದರಿಂದ ಕೀರ್ತಿವೆತ್ತ ಇವರನ್ನೇ ಮಾಡಬೇಕೆಂದು ಭಕ್ತರಲ್ಲಿ ಯೋಚನೆಯು ಹುಟ್ಟಿತು. ಅದರಂತೆ ಎಲ್ಲರೂ ಸೇರಿ ಇವರ ಬಳಿಗೆ ಬಂದು ವಿಷಯವನ್ನು ಭಿನ್ನವಿಸಿದರು. ಅದಕ್ಕೆ ಇವರು ಮೊದಲು ಒಪ್ಪಲಿಲ್ಲವಾದರೂ ಕೊನೆಗೆ ಅವರ ಆಗ್ರಹಾತಿಶಯಕ್ಕೆ ಮಠದ ಸ್ವಾಮಿಗಳಾದರೂ ಮಠದ ಮೋಹವನ್ನಿಟ್ಟುಕೊಳ್ಳಲಿಲ್ಲ. ಭೂಮಿ ಕಾಣಿಕೆಗಳ ಸಂಪಾದನೆಯ ಲೋಭವನ್ನು ಹಚ್ಚಿಕೊಳ್ಳಲಿಲ್ಲ. ಮಠದಲ್ಲಿಯೇ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅನ್ನದಾನವನ್ನೂ ಜ್ಞಾನ ಬೋಧೆಯನ್ನೂ ಪ್ರಾರಂಭಿಸಿದರು.

ಮಹಾಸಭೆಯ ಸಂಸ್ಥಾಪನೆ

 ಇಡಿಯ ಸಮಾಜವೇ  ಅಜ್ಞಾನಾಂಧಕಾರದಲ್ಲಿರುವಾಗ, ಅನೈಕ್ಯದ ಕಾಡುಸ್ಥಿತಿಯಲ್ಲಿರುವಾಗ, ಇದೊಂದು ಪಾಠಶಾಲೆಯಿಂದ ಅದಕ್ಕೆ ಏನಾಗಬೇಕು? ಹಿರಿಯ ಮನೆಯ ಕತ್ತಲನ್ನೆಲ್ಲಾ ಒಂದೇ ಒಂದು ಮಿಣುಕುವ ಸೊಡರು ಹೇಗೆ ಕಳೆಯಬಲ್ಲುದು? ಎಂದು ಯೋಚಿಸಿ ಇದಕ್ಕಿಂತಲೂ ಮಿಗಿಲಾದ ಕಾರ್ಯವನ್ನು ಕೈಗೊಳ್ಳಬೇಕು, ಸಮಾಜದ ಪ್ರತಿಯೊಂದು ವ್ಯಕ್ತಿಯೂ ಸುಧಾರಣೆಯನ್ನು ಹೊಂದಬೇಕು. ಸಾಂಪತ್ತಿಕ, ಶೈಕ್ಷಣಿಕ, ನೈತಿಕ ಮೊದಲಾದ ಸಲಕರಣೆಗಳನ್ನು ಊರ್ಜಿತ ಸ್ಥಿತಿಗೆ ಬರಬೇಕು ಎಂಬ ಉದಾತ್ತವಾದ ಯೋಚನೆಯನ್ನು ಮಾಡಿ ಅದಕ್ಕಾಗಿ ಅಲ್ಲಿಲ್ಲಿ ಸಂಚರಿಸುತ್ತ ಬೋಧಿಸುತ್ತ ಹುರಿದುಂಬಿಸುತ್ತ ಧಾರವಾಡಕ್ಕೆ ಬಂದು ಅಲ್ಲಿಯ ಹಲವು ಪ್ರಮುಖರೊಡನೆ ಪರ್ಯಾಲೋಚಿಸಿ ಕ್ರಿ.ಶ.೧೯೦೪ರಲ್ಲಿ ತಮ್ಮ ದೀರ್ಘ ಸಾಹಸದಿಂದ ಶ್ರೀಮದ್ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಜನ ಜಾಗ್ರತೆಯಿಲ್ಲದ ವಿಜ್ಞಾನ ಯುಗದ ಗಾಳಿಯಿಲ್ಲದ ಆ ಕಾಲದಲ್ಲಿ ಇಂತಹದೊಂದು ಮಹಾಸಭೆಯನ್ನು ಸ್ಥಾಪಿಸಿದ್ದು ಶ್ರೀಗಳಲ್ಲಿರುವ ಅದ್ವೀತಿಯವಾದ ಬುದ್ಧಿಸಾಮರ್ಥ್ಯವನ್ನು ವ್ಯಕ್ತಮಾಡುವುದಿಲ್ಲವೇ? ಆ ಸಭೆಯು ಆರೆಳು ವರ್ಷಗಳ ವರೆಗೆ ತಪ್ಪದೇ ಅವರ ನೇತೃತ್ವದಲ್ಲಿಯೇ ನಡೆಯಿತು. ಅದು ಈಗ ಕುಂಟುತ್ತಿರುವುದು ಲಿಂಗವಂತ ಸಮಾಜದ ದುರ್ದೈವವೇ ಸರಿ. ಆ ಸಭೆಯಿಂದ ಸಮಾಜದಲ್ಲಿ ಆದ ಕ್ರಾಂತಿಗಳು ಅನಿತಿನಿತಲ್ಲ. ಸಾಮಾಜಿಕ, ಶೈಕ್ಷಣಿಕ, ಸಾಂಪತ್ತಿಕ, ಸಾಹಿತ್ಯ ಮುಂತಾದ ಕಾರ್ಯಗಳು ಆ ಸಭೆಯ ಮುಖದಿಂದಲೇ ಸಾಗಹತ್ತಿದವು. ಅವು ಇಂದು ಈ ಸ್ಥಿತಿಯಲ್ಲಿರುವುದಾದರೂ ಆ ಮಹಾಸಭೆಯ ಬಲದಿಂದಲೇ. ಆ ಮೇಲೆ ಶ್ರೀಗಳು ಧರ್ಮೋತೇಜಕ ಸಭೆ, ಶಿವ ಪೋಷಿಣೀಸಭೆ ಮುಂತಾದವುಗಳನ್ನು ಸ್ಥಾಪಿಸಿ ಅಲ್ಲಲ್ಲಿ ನೆರವೇರಿಸಿದರು. ಅವುಗಳ ಮುಖದಿಂದ ಧಾರ್ಮಿಕ ನೈತಿಕ ವಿಚಾರಗಳನ್ನು ಹರಡಿದರು. ಆ ಕಾಲವು ವೀರಶೈವರ ಉತ್ಕ್ರಾಂತಿಯ ಕಾಲವಾಯಿತು.

ಸಂಸ್ಕೃತಿಯ ಸಂರಕ್ಷಣ

ಇವರಿಗೆ ಸಂಸ್ಕೃತಿಯಲ್ಲಿ ಅಪಾರವಾದ ಅಭಿಮಾನವಿತ್ತು. ಅದಕ್ಕಾಗಿ ಅವರು ತಮ್ಮ ತ್ರಿಕರಣಗಳನ್ನೂ ಸವೆಸಿದರು. ಅಲ್ಲಲ್ಲಿ ಸಭೆಗಳನ್ನು ಕರೆಯುತ್ತ ಸದ್ಬೋಧೆಯನ್ನು ಬೀರುತ್ತ ಸಂಚರಿಸುವಾಗ ಹಲವು ಕಡೆ ‘ನಿಧಿ’ ಕೂಡಿಸಿ ಪಾಠಶಾಲೆಗಳನ್ನು ಸ್ಥಾಪಿಸಿದರು. ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ಅಕ್ಕಿಆಲೂರು, ರೋಣ, ಇಳಕಲ್ಲ, ನೀರಡಗುಂಭ, ಅನಂತಪುರ, ಕೆಳದಿ ಚಿತ್ತಾಪುರ ಮುಂತಾದ ಊರುಗಳಲ್ಲಿ ಕೆಲವು ಸ್ವಂತ ಪ್ರಯತ್ನದಿಂದಲೂ ಕೆಲವು ಪರಪ್ರೇರಣೆಯಿಂದಲೂ ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ಈಗ ಕೆಲವು ನಡೆಯುತ್ತಿವೆ, ನಿಂತುಹೋಗಿವೆ. ಮೊಟ್ಟಮೊದಲು ಸ್ವಾಮಿಗಳವರ ಉಪದೇಶದಿಂದಲೇ ವೀರಶೈವರಲ್ಲಿ ವಾಚನ ಮಂದಿರಗಳು ಸ್ಥಾಪಿತವಾದುವು. ಪ್ರಾಚೀನ ಗ್ರಂಥಗಳ ಸಂಶೋಧನವನ್ನು ಮಾಡಲಿಕ್ಕೆ ಒಂದು ಮಂಡಲವನ್ನು ಏರ್ಪಡಿಸಲು ಸ್ವಾಮಿಗಳವರು ಪ್ರಯತ್ನ ಮಾಡಿದರು.  ಆದರೆ ಜನ-ಧನ ಸಹಾಯವು ಸಾಕಷ್ಟಾಗದ ಮೂಲಕ ಅದು ಸಂಪೂರ್ಣ ಸಿದ್ಧಿಗೆ ಹೋಗಲಿಲ್ಲ. ಹಾಗಾದರೂ ಶ್ರೀಗಳವರು ಕೆಲವು ಮಂದಿ ಪಂಡಿತರನ್ನು ತಂಜಾವೂರು, ತ್ರಾವಣಕೋರ ಮೊದಲಾದ ಸ್ಥಳಗಳಿಗೆ ಕಳಿಸಿ, ಕೆಲವು ಮಹತ್ವದ ವೀರಶೈವ ಮತ ಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಸಂಶೋಧನವನ್ನು ಮಾಡಿಸಿದರು ಮತ್ತು ಶಿವಯೋಗ ಮಂದಿರದಲ್ಲಿ ವೀರಶೈವ ಶಿಕ್ಷಣ ಸಮ್ಮೇಲನವನ್ನು ಸ್ಥಾಪಿಸಿದರು. ಆದರೆ ಅದು ಒಂದು ವರ್ಷ ಮಾತ್ರ ನಡೆಯಿತು. ಇದಲ್ಲದೆ ಕೊಲ್ಲಾಪುರದ ಕೈ ವೀರಬಸವಶ್ರೇಷ್ಠಿ ಬಿ. ಎ. ಅವರನ್ನು ಪಾಶ್ಚಾತ್ಯದೇಶಗಳಿಗೆ ವೀರಶೈವ ಪ್ರಚಾರಕ್ಕೆ ಕಳಿಸಬೇಕೆಂದು ಶ್ರೀಗಳವರು ಸಾಹಸಮಾಡಿದರು.  ಕಾರಣಾಂತರಗಳಿಂದ ಈ ಕಾರ್ಯವು ಕೊನೆಗಾಣಲಿಲ್ಲ. ಶ್ರೀಗಳವರ ಪ್ರಯತ್ನ ವಿಶೇಷದಿಂದಲೇ ಹುಳದ ಬಾಯಿಗೆ ಬಿದ್ದು ಹಾಳಾಗಿಹೋಗುತ್ತಿದ್ದ ಎಷ್ಟೋ ವಚನ ಗ್ರಂಥಗಳು ಪ್ರಸಾರಕ್ಕೆ ಬಂದವು. ಹೊಸಗ್ರಂಥಗಳಿಗೆ ಶ್ರೀಗಳವರು ಮುಕ್ತಹಸ್ತದಿಂದ ಸಹಾಯ ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಓದುವವರಿಗೂ ಹಲವು ವಿಧವಾಗಿ ಸಹಾಯ ಮಾಡಿದರು. ಕಾಶಿಯಲ್ಲಿ ಅಭ್ಯಾಸ ಮಾಡುವಾಗ ಶ್ರೀ ಮ.ನಿ.ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೂ, ಲಿಂಗೈಕ್ಯ ಶ್ರೀ ಬಾಳೇಹಳ್ಳಿ ಶ್ರೀ ಜಗದ್ಗುರು ಶಿವಾನಂದ ಶಿವಾಚಾರ ಮಹಾಸ್ವಾಮಿಗಳಿಗೂ ಶ್ರೀಗಳು ಧನಸಹಾಯ ಮಾಡಿದರೆಂದು ತಿಳಿದುಬರುತ್ತದೆ. ಧರ್ಮತರಂಗಿಣಿ, ಶಿವಪ್ರತಾಪ ಮೊದಲಾದ ಮಾಸ ಮತ್ತು ವಾರ ಪತ್ರಿಕೆಗಳು ಶ್ರೀಗಳವರ ಕೃಪೆಯಿಂದಲೇ ಹೊರಡುತ್ತಿದ್ದುವು. ಹೀಗೆ ಹಲವು ವಿಧವಾಗಿ ಶ್ರೀಗಳವರು ಲಿಂಗವಂತ ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡಿದರು.

  ಸಮಾಜದ ಸಂಸ್ಕರಣ

 ಸಮಾಜದಲ್ಲಿರುವ ಇನ್ನಿತರ ಕೊರತೆಗಳಿಗಾಗಿ ಶ್ರೀಗಳವರು ಹಗಲಿರುಳು ಕನವರಿಸುತ್ತಿದ್ದರು. ಸಮಾಜದ ಪ್ರತಿಯೊಂದು ಕಲೆಗಳೂ ಹೇಗೆ ಮುಂದಕ್ಕೆ ಬರುವುವೆಂದು ಸದಾ ಯೋಚಿಸುತ್ತಿದ್ದರು. ಸಮಾಜದೇಳ್ಗೆಯ ಆಸಕ್ತಿಯು ಅವರ ರಕ್ತದ ಪ್ರತಿಕಣದಲ್ಲಿಯೂ ಬೆರೆತಿದ್ದಿತು. ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಊಹಿಸುವುದೇ ಅಸಾಧ್ಯ. ಸಮಾಜದಲ್ಲಿರುವ ಕಸವನ್ನೆಲ್ಲ ರಸವನ್ನಾಗಿ ಮಾಡಲು ಅವರು ಪ್ರಯತ್ನಪಟ್ಟರು. ಆ ಸಮಯದಲ್ಲಿ ತಮ್ಮ ಶರೀರದ ಸೌಖ್ಯವನ್ನೂ ಶ್ರಮವನ್ನೂ ಗಣಿಸಲಿಲ್ಲ. ಆ ಕಾರ್ಯದಲ್ಲಿ ಪ್ರವೃತ್ತರಾದಾಗ ಅವರಿಗೆ ಬಿಸಿಲು ಬೆಳದಿಂಗಳಾಗಿಯೂ, ಉಪವಾಸವು ಊಟವಾಗಿಯೂ, ಯೋಚನೆಯೇ ಜಪವಾಗಿಯೂ ಪರಿಣಮಿಸಿದವು. ಪರಳಿಯ ಪ್ರಕರಣದಲ್ಲಿ ಶ್ರೀಗಳು ವೀರಶೈವರ ಪರವಾಗಿ ಪ್ರಬಲವಾಗಿ ಹೋರಾಡಿ ಜಯಶೀಲರಾದ ವಿಷಯವು ಚಿರಸ್ಮರಣೀಯವಾಗಿದೆ. ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ  ಫಂಡಿನಂತೆ ಆಗುವುದರ ಸಲುವಾಗಿ ಶ್ರೀಗಳು ಹೇರಳ ಹಣವನ್ನು ಕೂಡಿಸಿ ಕೊಟ್ಟುದಲ್ಲದೆ ಅಹೋರಾತ್ರಿ ಅವಿಶ್ರಾಂತ ಶ್ರಮವಹಿಸಿ ಕೆಲಸ ಮಾಡಿದ್ದನ್ನು ವೀರಶೈವ ಸಮಾಜವು  ಎಂದಿಗೂ ಮರೆಯುವಂತಿಲ್ಲ. ಕಲಘಟಗಿ, ಸಿದ್ದಾಪುರ ಮೊದಲಾದ ಕಡೆಗಳಲ್ಲಿ ಹೋಗಿ ಅಲ್ಲಿರುವ ಜನಗಳ ವಾಗದ್ವೈತದ ಹುಚ್ಚನ್ನು ಬಿಡಿಸಿ ಲಿಂಗಯೋಗದ ತತ್ವವನ್ನು ಬೀರಿದರು. ‘ಹಾನಗಲ್ಲ ಶ್ರೀಗಳಿಂದ ಸಿದ್ಧಾಪುರದ ಸಾಧು ನಿರಸನ’ ಎಂಬ ತಲೆ ಬರೆಹದ ಲೇಖನವನ್ನು ‘ಮೈಸೂರು ಸ್ಟಾರ್’ ಪತ್ರಿಕೆಯಲ್ಲಿ ಓದಿದ್ದು ಜನರ ನೆನಪಿನಲ್ಲಿದೆ. ಜನರ ವ್ಯಾಜ್ಯಗಳನ್ನು ತಮ್ಮ ಬುದ್ಧಿ ಬಲದಿಂದ ಬಗೆಹರಿಸಿ ಅವರು ಕೋರ್ಟು ಕಚೇರಿಗಳಿಗೆ ದುಡ್ಡು ಸುರಿಯದಂತೆ ಮಾಡುತ್ತಿದ್ದರು. ವಿವಾಹ ಕಾರ್ಯಗಳಲ್ಲಿ ಮದ್ದು, ಮೆರವಣಿಗೆ ಮೊದಲಾದವುಗಳಿಗೆ ಮಾಡುತ್ತಿದ್ದ ಅತಿವ್ಯಯವನ್ನು ಎಷ್ಟೋ ಕಡೆಗಳಲ್ಲಿ ಕಡಿಮೆ ಮಾಡಿದರು. ಹೀಗೆ ಒಂದಲ್ಲ ಎರಡಲ್ಲ ಅನಂತ ಬಗೆಯಾಗಿ ಸಮಾಜ ಸುಧಾರಣೆಯನ್ನು ಮಾಡಿದರು. ‘ಕಾಯಕವೇ ಕೈಲಾಸ’ ಎಂಬ ಶರಣರ ದಿವ್ಯ ಬೋಧನೆಯನ್ನು ಜನರಿಗೆ ಸಾರಿದರು. ಪ್ರತಿಕ್ಷಣದಲ್ಲಿಯೂ ಜನಜೀವನದಲ್ಲಿ ಬೆರೆತು ತಿಳಿವನ್ನು ಬೋಧಿಸಿದರು.

ಶಿವಯೋಗ ಮಂದಿರದ ಸ್ಥಾಪನೆ

ಈ ರೀತಿಯಾಗಿ ಅವರೊಬ್ಬರೇ ಸಮಾಜದಲ್ಲಿ ಸಂಚರಿಸಿ ಈ ಸುಧಾರಣೆಯ ಕಾರ್ಯವನ್ನು ಮಾಡುವುದಕ್ಕಿಂತಲೂ ಇಡಿಯ ಗುರುವರ್ಗವೇ ಸುಧಾರಿಸಿ ಈ ಕಾರ್ಯಕ್ಕೆ ಬೆಂಬಲಿಗರಾದರೆ ಪ್ರಗತಿಯ ಇನ್ನೂ ಹೆಚ್ಚು ಹೆಚ್ಚಾಗಿ ಸಾಗಿ ಶೀಘ್ರದಲ್ಲಿ ಸಮಾಜವು ಸುಧಾರಣೆಯ ಶಿಖರವನ್ನೇರುವುದೆಂದು ಮನಸ್ಸಿನಲ್ಲೇ ಯೋಚಿಸತೊಡಗಿದರು. ಅದೇ ಸಮಯಕ್ಕೆ ವೈರಾಗ್ಯಮೂರ್ತಿಯಾದ ಬಾಗಲಕೋಟೆಯ ಮಲ್ಲಣಾರ್ಯರ ಸಮಾಗಮವಾಯಿತು. ಬೆಂಕಿಯು ಗಾಳಿಯ ಸಂಪರ್ಕದಿಂದ ಪ್ರಜ್ವಲಿಸುವಂತೆ ಅವರ ಉತ್ತೇಜನ ಸಂಭಾಷಣೆಯಿಂದ ಇವರಲ್ಲಿ ಮೊಳೆತ ಯೋಜನೆಯು ಪಲ್ಲವಿಸಿ ಪ್ರಫುಲ್ಲವಾಯಿತು. ಕೂಡಲೇ ತಮ್ಮ ವಿಚಾರವನ್ನು ತಾವೇ ಸ್ಥಾಪಿಸಿದ ಬಾಗಲಕೋಟೆಯ ನಾಲ್ಕನೆಯ ವೀರಶೈವ ಮಹಾಸಭೆಯ ಮುಂದಿರಿಸಿ ನಿರ್ಧರಿಸಿದರು. ಆ ನಿರ್ಧಾರದಂತೆ ಕ್ರಿ.ಶ.೧೯೦೯ರಲ್ಲಿ ಬಿಜಾಪುರ ಜಿಲ್ಲಾ ಬಾದಾಮಿ ಸಮೀಪದ ಈಗಿರುವ ಸ್ಥಳದಲ್ಲಿ ‘ಶ್ರೀ ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಆ ಸಂಸ್ಥೆಯ ದಕ್ಷಿಣಕ್ಕೆ ಬನಶಂಕರಿ, ನಾಗನಾಥ, ಮಹಾಕೂಟ, ವಾತಾಪಿಪುರ (ಬಾದಾಮಿ) ಉತ್ತರ ಪಟ್ಟದಕಲ್ಲು, ಐಹೊಳೆ ಶಂಕರ ಲಿಂಗ ದೇವಾಲಯ, ಸಿದ್ಧನಾಥಾಶ್ರಮಗಳು ಶೋಭಿಸುತ್ತಿವೆ. ಕ್ರೂರ ಮೃಗಗಳ ವಾಸದಿಂದಲೂ, ಕಳ್ಳಕಾಕರ ಭಯದಿಂದಲೂ ಭೀಕರವಾದ ಆ ಅರಣ್ಯವು ಇಂದು ಆಶ್ರಮವಾಗಿ ಸತ್ಪುರುಷರಿಗೆ ಆಶ್ರಯವಾಯಿತು. ಮಗ್ಗುಲಲ್ಲಿಯೇ ತಿಳಿತಿಳಿಯಾಗಿ ಹರಿಯುವ ಮಲಪ್ರಭಾನದಿಯ ನೀರು, ಹಚ್ಚಗೆ ಹಸುರುಮುಡಿದು ಹೂತು ಕಾತು ಕಂಗೊಳಿಸುವ ತರುಲತೆಗಳು, ಆ ಹೂ ಗಂಪನ್ನು ಹೊತ್ತು ಹಗುರಾಗಿ ತೀಡುವ ತಂಗಾಳಿ ಪಾಂಥಸ್ಥರ ಪರಿಶ್ರಮವನ್ನು ಪರಿಹರಿಸುವುವು. ಅಲ್ಲಿ ಕುಕಿಲ್ವ ಕೋಗಿಲೆಗಳು, ನರ್ತಿಸುವ ನವಿಲುಗಳು, ಹರಿದಾಡುವ ಹರಿಣಗಳು, ಹಾರಾಡುವ ಹಕ್ಕಿಗಳು; ಓಡಾಡುವ ಮೊಲ ಅಳಿಲುಗಳು ನೋಡುವವರ ಕಣ್ಮನಗಳನ್ನು ತಣಿಸುವುವು. ಅನುಷ್ಠಾನಕ್ಕೆಂದು ಕಟ್ಟಿಸಿದ ಹಸರು ಹುಲ್ಲಿನ ಗುಡಿಸಲುಗಳು, ಕಲ್ಲುಬಂಡೆಗಳಿಂದ ಕಟ್ಟಿದ ಗವಿಗಳು ತಾವಾಗಿ ಹಟ್ಟಿ ಹೆಣೆದು ನಿಂತ ಲತಾ ಮಂಟಪಗಳು ಪ್ರತಿಯೊಬ್ಬರ ಚಿತ್ತವೃತ್ತಿಗಳನ್ನೂ ಸೆಳೆದು ಶಾಂತಿಗೊಳಿಸುವುವು, ಅದರಲ್ಲಿಯೂ ಚೈತ್ರ ಮಾಸದ ಹುಣ್ಣಿಮೆಯ ತಿಳಿಯಾದ ಬೆಳುದಿಂಗಳಲ್ಲಿ ನಿಂತು ಸುತ್ತಮುತ್ತಿನ ಆ ನೈಸರ್ಗಿಕ ವನ ಸೌಂದರ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬನ ಹೃದಯದಲ್ಲಿ ಆನಂದವುಂಟಾಗುತ್ತದೆ. ಅಷ್ಟೇ ಅಲ್ಲ, ನೋಡುವವನ ಹೃದಯವೂ ಸಹ ಆ ಕಾಡಿನ ಚೆಲುವಿನಲ್ಲಿ ತಲ್ಲೀನವಾಗಿಬಿಡುತ್ತದೆ. ಇಂತಹ ಪ್ರಾಕೃತಿಕ ಸೌಂದಯ್ಯದಿಂದ ಕೂಡಿದ ಆ ಸಂಸ್ಥೆಯ ಸ್ಥಿರಜೀವಿತಕ್ಕೆ ಶ್ರೀಗಳವರು ಸುಮಾರು ೪-೫ ಲಕ್ಷ ರೂಪಾಯಿಗಳನ್ನು ಕೂಡಿಸಿದರು. ಸುಮಾರು ೪-೫ ಮೈಲಿನ ಭೂಮಿಯ ಸ್ವಾಮಿತ್ವವನ್ನು ಸತ್ಕಾರದಿಂದ ಸಂಪಾದಿಸಿದರು. ೧೦೦-೨೦೦ ಗೋವುಗಳನ್ನು ರಕ್ಷಿಸಿದರು. ಅವುಗಳ ಸಲುವಾಗಿ ೫೦ ಎಕರೆ ಗುಡ್ಡವನ್ನುಸರಕಾದವರಿಂದ ಇನಾಮನ್ನಾಗಿ ಪಡೆದರು. ಸದ್ಭಕ್ತರು ಬೇರೆಬೇರೆ ಕಡೆಗೆ ನೂರಾರು ಕೂರಿಗೆ ಭೂಮಿಯನ್ನು (೧ ಕೂರಿಗೆಗೆ ೪ ಎಕರೆ) ಭಕ್ತಿಯಿಂದ ಅರ್ಪಿಸಿದರು. ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯನ್ನು ಬಾಗಿಲು ಕೋಟೆಯಲ್ಲಿ ಸ್ಥಾಪಿಸಿದರು. ಶಿವಯೋಗ ಮಂದಿರದಲ್ಲಿಯೇ ಒಂದು ದೊಡ್ಡ ಗ್ರಂಥಾಲಯವನ್ನು ರಚಿಸಿದರು. ಅದರಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್ ಗ್ರಂಥಗಳನ್ನು ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಶೇಖರಿಸಿದರು. ಇದಲ್ಲದೆ ತಾಳೆಯೋಲೆಗಳನ್ನು ಕೈಬರೆಹದ ಕಡತಗಳನ್ನೂ ೩೦೦-೪೦೦ಕ್ಕೆ ಕಡಿಮೆಯಿಲ್ಲದಷ್ಟು ಕೂಡಹಾಕಿದ್ದಾರೆ. ಪರಿಶುದ್ಧವಾದ ಭಸ್ಮ, ಪಂಚಸೂತ್ರದ ಶಿವಲಿಂಗಗಳನ್ನು ತಯಾರಿಸುವ ಏರ್ಪಾಡನ್ನು ಮಾಡಿದರು. ವೈದ್ಯರ ಸಂಶೋಧನವನ್ನು ಮಾಡಿದರು. ಹಲವು ದಿವ್ಯೌಷಧಿಗಳನ್ನು ತಯಾರಿಸಿದರು. ಬಿಳುಪನ್ನು ಕಳೆಯುವ ‘ಧೃತಿ’ ಎಂಬ ಸಿದ್ದೌಷಧಿಯು ಅಲ್ಲಿ ಈಗಲೂ ಸಿಕ್ಕುತ್ತದೆ. ಅದರಿಂದ ಎಷ್ಟೋ ಜನರು ಗುಣ ಹೊಂದುತ್ತಲಿದ್ದಾರೆ. ಶಿವರಾತ್ರಿಯ ಜಾತ್ರೆಯ ಕಾಲಕ್ಕೆ ಹಲವು ಪರಿಷತ್ತು ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಆ ಸಂಸ್ಥೆಯಲ್ಲಿ ಅಂದಿನಿಂದ ಇಂದಿನವರೆಗೆ ಸುಮಾರು ೩೦೦-೩೫೦ಕ್ಕೆ ಕಡಿಮೆಯಿಲ್ಲದಷ್ಟು ಸಾಧಕರು ಅಧ್ಯಯನ ಮಾಡಿ ತಯಾರಾಗಿದ್ದಾರೆ. ಕನ್ನಡ, ಸಂಸ್ಕೃತ, ಸಂಗೀತಗಳಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದಾರೆ. ಅಷ್ಟಾಂಗ ಯೋಗವನ್ನೂ ಇಷ್ಟ ಲಿಂಗದ ವಿಚಾರವನ್ನೂ ಅರಿತುಕೊಂಡಿದ್ದಾರೆ. ಪ್ರಾಣಾಯಾಮದ ವಿಧಾನವನ್ನೂ ಪ್ರಾಣಲಿಂಗದ ನೆಲೆ ಕಲೆಗಳನ್ನೂ  ಗುರ್ತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆ ಸಂಸ್ಥೆಯಿಂದ ಭಾಷಣಕಾರರು, ಕೀರ್ತನಕಾರರು, ಪೌರಾಣಿಕರು, ಲೇಖಕರು, ಯೋಗಿಗಳು, ಅನುಭವಿಗಳು, ಸಂಗೀತಜ್ಞರು ಮುಂತಾಗಿ ಅನೇಕ ಕಲೆಗಳಲ್ಲಿ ತಯಾರಾಗಿದ್ದಾರೆ. ಈ ಸಂಸ್ಥೆಗೆ ಸಂಬಂಧಪಟ್ಟ ಶಾಖಾಮಂದಿರಗಳನ್ನು ಕಪ್ಪನಹಳ್ಳಿ, ಕೋಡಿಕೊಪ್ಪ, ಬಾದಾಮಿ ಮೊದಲಾದ ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಿಂದ ತಯಾರಾಗಿ ಹೋದ ಹಲವರು ಅಲ್ಲಲ್ಲಿ ಪಾಠಶಾಲೆ, ಬೋರ್ಡಿಂಗುಗಳನ್ನು ಸ್ಥಾಪಿಸಿದ್ದಾರೆ. ಆದುದರಿಂದ ವೀರಶೈವ  ಸಮಾಜಕ್ಕೂ ಸಂಸ್ಕೃತಿಗೂ ಈ ಸಂಸ್ಥೆಯಿಂದ ಅಪಾರವಾದ ಕೆಲಸವಾಗಿದೆ. ಈ ದೃಷ್ಟಿಯಿಂದ ವೀರಶೈವ ಸಮಾಜಕ್ಕೆ ಉಪಕಾರಮಾಡಿದ ಈ ಸಂಸ್ಥೆಯು ಆರ್ಯ ಸಮಾಜಕ್ಕೆ ‘ಕಾಂಗಡಿ ಗುರುಕುಲ’ವಿದ್ದಂತೆ ಇದೆಯೆನ್ನಬಹುದು. ಸಾಹಿತ್ಯಸೇವೆಗೆ, ಅನುಭವ ವಿಚಾರಕ್ಕೆ ೨೦ನೇ ಶತಮಾನದ ಅನುಭವ ಮಂಟಪವನ್ನು ಸ್ಥಾಪಿಸಿ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ದ್ವೀತಿಯ ಬಸವಣ್ಣನೆನಿಸಿದರು.

ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಎತ್ತರವೂ ತೆಳುವೂ ಆದ ಮೈಕಟ್ಟು, ಹೊಳೆಯುವ ಕಣ್ಣುಗಳು, ಮಿಗಿಲಾದ ಕಾರ್ಯ ಶ್ರದ್ಧೆ, ನೈಜವಾದ ವೈರಾಗ್ಯ, ದೂರದೃಷ್ಟಿಯಿಂದ ಕೂಡಿದ ಕಾರ್ಯಪಟುತ್ವ, ಮಿಗಿಲಾದ ವಿದ್ಯಾಭಿಮಾನ, ಅತಿಶಯವಾದ ಜ್ಞಾನಾಭಿರುಚಿ, ಚೊಕ್ಕವಾದ ಸತ್ಯಸಂಧತೆ, ಗಂಭೀರವಾದ ಮಾತುಕತೆ ಇತ್ಯಾದಿ ಸದ್ಗುಣಗಳಿಂದ ಕೂಡಿದ್ದರು, ಆದುದರಿಂದ ಅವರನ್ನು ನಿಜವಾಗಿಯೂ ಆಧುನಿಕ ಕಾಲದ ಮಹಾನುಭಾವರೆನ್ನಬಹುದು. ಈ ಮಹಾತ್ಮರನ್ನು ಕುರಿತು ಕನ್ನಡದಲ್ಲಿ ಸ್ಮಾರಕ ಸಂಚಿಕೆ’ ‘ಕಾರಣಿಕ ಕುಮಾರಶಿವಯೋಗಿ’ ಎಂಬ ಗ್ರಂಥಗಳು ಹುಟ್ಟಿವೆ. ಶಿವಯೋಗ ಮಂದಿರದ ಇತ್ತೀಚೆಗೆ ‘ಸುಕುಮಾರ’ ಎಂಬ ಒಂದು ಮಾಸ ಪತ್ರಿಕೆ ಕೂಡ ಪ್ರಕಟವಾಗುತ್ತಿದೆ. ಹೀಗೆ ಶ್ರೀಗಳ ಚರಿತ್ರೆಯು ಪ್ರಭಾವಪೂರ್ಣವಾಗಿದೆ.

(ಆಕರ : ವೀರಶೈವ ಮಹಾಪುರುಷರು ಲೇ:ಬಿ. ಶಿವಮೂರ್ತಿಶಾಸ್ತ್ರಿ)

Related Posts