ಡಾ. ಬಸವರಾಜ ಜಗಜಂಪಿ
(ಸಾಹಿತಿ ಬಸವರಾಜ ಜಗಜಂಪಿ ಅವರು 1950 ಮೇ 25ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಕಲ್ಲಪ್ಪನವರ, ತಾಯಿ ಈರವ್ವ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರರು. ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ,ಪ್ರಸ್ತುತ ಗ್ರಂಥಾಲಯ ಆಡಳಿತ ನಿರ್ದೇಶಕರಾಗಿ ಕೆ.ಎಲ್.ಇ. ಮಹಾವಿದ್ಯಾಲಯ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ವಚನ ಸಾಹಿತ್ಯ, ಜನಪದ ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಪ್ರಮುಖ ಕೃತಿಗಳೆಂದರೆ ಕನ್ನಡ ಸಾಹಿತ್ಯ ಹಾಗೂ ಜೀವನ ಮೌಲ್ಯಗಳು, ಬಸವಪ್ರಭಪ್ಪನವರು ಹಂಪಣ್ಣವರ, ಮಲ್ಲಿಕಾರ್ಜುನ ದರ್ಶನ, ಕನ್ನಡ ಕಾಯಕಯೋಗಿ ಶಿವಬಸವ ಸ್ವಾಮಿಜಿ, ಕವಿ ಸಿದ್ದೇನಂಜೇಶ, ಕೆ.ಎಲ್.ಇ. ಸೊಸೈಟಿ, ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ, ಬೆಳಗಲಿ ಬಯಲ ಸಿರಿ, ರಸಾಯನ, ಸ್ಪಂದನ, ಶ್ರೀಗುರು, ಬಸವಪ್ರಸಾದ ಮುಂತಾದವು.)
ಉಚ್ಚ-ನೀಚ ಭಾವನೆಯನ್ನು ತೊಡೆದುಹಾಕಿ, ಸರ್ವಸಮಾನತೆಯನ್ನು ಮೆರೆದು, ಮನುಕುಲವನ್ನೇ ಪ್ರೀತಿಸುತ್ತ, ಪ್ರತಿಯೊಬ್ಬ ಮನುಷ್ಯನ ಉದ್ಧಾರಕ್ಕಾಗಿ ಶ್ರಮಿಸುತ್ತ, ತನ್ನ ವಿಶಿಷ್ಟ ಗುಣಗಳಿಂದ ಲಿಂಗಾಯತಧರ್ಮ ವಿಶ್ವವೆನಿಸಿದೆ. ಲಿಂಗಾಯತಧರ್ಮ ಸಮಾಜ-ಸಾಹಿತ್ಯ-ಸಂಸ್ಕೃತಿಗಳು ಗಮನಾರ್ಹ ಸ್ಥಾನ ಪಡೆಯುವಲ್ಲಿ ಹಲವಾರು ಪುಣ್ಯಪುರುಷರ ಅನನ್ಯ ದುಡಿಮೆಯೇ ಕಾರಣವಾಗಿದೆ. ಬಸವಾದಿ ಪ್ರಮಥರ ಬಳಿವಿಡಿದು ಬಂದ ನೂರೊಂದು ವಿರಕ್ತರು, ಶಿವಯೋಗಿಗಳು, ಆಚಾರ ಪುರುಷರು ಹಾಗೂ ಆಧುನಿಕ ಕಾಲದ ಮಹಾಪುರುಷರು, ಸರ್ವಾಂಗ ಪರಿಪೂರ್ಣ ಲಿಂಗಾಯತ ಸಮಾಜ ನಿರ್ಮಾಣಕ್ಕೆ ಹೆಣಗಿದ್ದು ಇಂದು ಇತಿಹಾಸ.
ಆದರೆ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಲಿಂಗಾಯತ ಧರ್ಮ ಸಮಾಜಗಳಿಗೆ ಒಂದು ಸಂಧಿಕಾಲ ಪ್ರಾಪ್ತವಾಗಿತ್ತು. ಪರಂಪರಾಗತ ಸಮಾಜದ ಸಾಮಾಜಿಕ, ಧಾರ್ಮಿಕ ರೀತಿನೀತಿಗಳು, ಕಟ್ಟುಪಾಡುಗಳು ಕಾಲಪ್ರಭಾವದಿಂದ ಶಿಥಿಲಗೊಂಡಿದ್ದವು. ಪಂಚಾಚಾರಗಳ ಪರಿಚಯವಿಲ್ಲದೆ, ಅಷ್ಟಾವರಣಗಳ ಅರಿವಿಲ್ಲದೆ, ಷಟ್‌ಸ್ಥಲಗಳ ಜ್ಞಾನವಿಲ್ಲದೆ ಲಿಂಗಾಯತ ಸಮಾಜ ಅಂಧಕಾರದಲ್ಲಿ ತೊಳಲಾಡುತ್ತಿತ್ತು. ಲಿಂಗಾಯತಕ್ಕೆಯೇ ಒಂದರ್ಥದಲ್ಲಿ ಅದು ಗ್ಲಾನಿಯ ಸಮಯ. ವ್ಯಾಪಾರ-ಉದ್ದಿಮೆಗಳು ಲಿಂಗಾಯತರ ಕೈಬಿಟ್ಟು; ಸಾಹಸಶೀಲ ಮನೋಭಾವದ ಪರಕೀಯರ ಕೈಸೇರಲಾರಂಭಿಸಿದವು. ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕ ಹಾಗೂ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು.
ಅನೀತಿ-ಅನ್ಯಾಯ-ಅನಾಚಾರ ಹಾಗೂ ಧರ್ಮಗ್ಲಾನಿಯಾದ ಸಂದರ್ಭದಲ್ಲಿ ಸಿಡಿಲಿನಂತೆ ಸ್ಫೋಟಗೊಂಡು ಆವಿರ್ಭವಿಸಿದ ವಿಭೂತಿ ಪುರುಷರು ಅಜ್ಞಾನಾಂಧಕಾರದಲ್ಲಿ ಮುಳುಗಿದ ಜನತೆಯನ್ನು ಮೇಲೆತ್ತಲೆತ್ನಿಸಿ, ನೂತನ ಪ್ರಜ್ಞಾವಂತ ಸಮಾಜವೊಂದರ ರೂವಾರಿಗಳೆನಿಸುತ್ತಾರೆ. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಜನಸಾಮಾನ್ಯರ ನೋವನ್ನು ಕಂಡು, ಮರುಗಿ ಸುಮ್ಮನಾಗದೆ, ಅದರಿಂದ ಕಳವಳಗೊಂಡು, ಸಂತಾಪವನ್ನು ತೋಡಿಕೊಂಡು, ತಮ್ಮ ಸಾತ್ವಿಕ ಶಕ್ತಿಯಿಂದ ಅದಕ್ಕೆ ಪರಿಹಾರ ಹುಡುಕಲು ಶ್ರಮಿಸುತ್ತಾರೆ; ಸಮಾಜದಲ್ಲಿ ಧರ್ಮವನ್ನು ನೆಲೆಗೊಳಿಸಿ, ಶೈಕ್ಷಣಿಕ ಕ್ರಾಂತಿಯನ್ನು ಗೈದು ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗುತ್ತಾರೆ.
ಸೈಪಿನ ಆಗರವೆನಿಸಿದ ಭರತಭೂಮಿಯಲ್ಲಿ ಅವತರಿಸಿದಷ್ಟು ವಿಭೂತಿ ಪುರುಷರು ಜಗತ್ತಿನ ಮತ್ತಾವ ದೇಶದಲ್ಲೂ ಕಾಣಸಿಗುವುದಿಲ್ಲ. ಭಾರತಾಂಬೆಯ ಜೇಷ್ಠ ಸುಪುತ್ರಿಯೆನಿಸಿದ ಕನ್ನಡಾಂಬೆಯ ಪುಣ್ಯೋದರದಲ್ಲಂತೂ ಅಸಂಖ್ಯ ಶರಣ-ದಾಸ-ಸಂತ-ಮಹಂತರು ಉದಯಿಸಿದ್ದಾರೆ. ಅವರಲ್ಲಿ ಹಾನಗಲ್ಲ ವಿರಕ್ತಮಠದ ಪೀಠಾಧ್ಯಕ್ಷರಾದ ಲಿಂ. ಶ್ರೀ ಮ. ನಿ. ಪ್ರ ಕುಮಾರ ಮಹಾಸ್ವಾಮಿಗಳು ಈ ಮಾಲಿಕೆಯೊಳಗಿನ ದಿವ್ಯರತ್ನವೆನ್ನಬೇಕು.
ವೀರವಿರಾಗಿಗಳಾಗಿ ಕೆಲವರು, ಶಾಲೆ-ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರಕೈಕೊಂಡು ವಿದ್ಯಾಪ್ರೇಮಿಗಳಾಗಿ ಮತ್ತೆ ಕೆಲವರು, ತತ್ವಜ್ಞಾನ ತತ್ವೋಪದೇಶದ ಬೋಧನೆಯ ಪುಣ್ಯಕಾರದಿಂದ ಇನ್ನು ಕೆಲವರು, ಪರಧರ್ಮೀಯರೊಂದಿಗೆ ವಾದಕ್ಕಿಳಿದು ಗೆದ್ದು ಪರವಾದಿಗಳೆನಿಸಿ ಹಲವರು, ಸಮಾಜವನ್ನು ಸಮರ್ಪಕವಾಗಿ ಸಂಘಟಿಸಿ ಯಶಸ್ವಿಯಾದ ಕೆಲವರು ನಮ್ಮಲ್ಲಿದ್ದಾರೆ, ಬಿಡಿಬಿಡಿಯಾಗಿ ಈ ಎಲ್ಲ ಕಾರ್ಯಗಳನ್ನು ಕೈಕೊಂಡು, ಇಡಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ನಿಷ್ಠೆಯಿಂದ ದುಡಿದೂ, ಅಪರೂಪವಾದುದನ್ನೇ ಸಾಧಿಸಿದ ಹಾನಗಲ್ಲ ಕುಮಾರ ಸ್ವಾಮಿಗಳು ವೀರಶೈವ -ಲಿಂಗಾಯತರೆಲ್ಲರಿಗೂ ಪರಮಾರಾಧ್ಯರು. ಅವರು ವಟುವತ್ಸಲರು, ಕಲಾಯೋಗಿಗಳು, ಕಾಯಕಪ್ರೇಮಿಗಳು, ನಮಗೆ ಅವರ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ತುಂಬ ಮುಖ್ಯ.
ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-
ಋಣವ ತೀರಿಸಬೇಕು ಋಣವ ತೀರಿಸಬೇಕು
ಋಣವ ತೀರಿಸುತ ಜಗದಾದಿ ಸತ್ವವನು
ಜನದಿ ಕಾಣುತ್ತದರೊಳ್ ಒಂದುಗೂಡಬೇಕು.
ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.
ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಪುಟ್ಟಗ್ರಾಮ ಜೋಯಿಸರ ಹರಳಳ್ಳಿ, ಶೀಲಸಂಪತ್ತಿನ ತವರೂರೆನಿಸಿತ್ತು. ಅಲ್ಲಿನ ಸಾಲಿಮಠದ ಬಸವಯ್ಯ ನೀಲಮ್ಮ ಎಂಬ ದಂಪತಿಗಳು ಅತ್ಯಂತ ಸುಶೀಲರು, ಶಿವಪೂಜಾನಿಷ್ಠರು. ಊರಲ್ಲಿನ ಮಕ್ಕಳಿನ ಅಕ್ಷರಾಭ್ಯಾಸ ಮಾಡಿಸುತ್ತಿದ್ದರಾದರೂ ಅವರು ತುಂಬ ದರಿದ್ರಾವಸ್ಥೆಯಲ್ಲಿದ್ದರು. ತಮಗೆ ಹುಟ್ಟಿದ ಮೊದಲ ಗಂಡು ಮಗು, ಶಿವಬಸಯ್ಯನ ಲಾಲನೆ ಪಾಲನೆಗಳಲ್ಲಿ ಅವರು ಸಂತಸದಿಂದ ದಿನಗಳೆಯುತ್ತಿದ್ದ ಸಂದರ್ಭ.ಸಾದ್ವಿ ಶಿರೋಮಣಿ ನೀಲಮ್ಮನ ಕನಸಿನಲ್ಲಿ ಕಾಣಿಸಿಕೊಂಡ ಜಂಗಮರೊಬ್ಬರು ಸುಗಂಧಭರಿತ ಸುಂದರ ಪುಷ್ಪವೊಂದನ್ನು ಆಶೀರ್ವದಿಸಿ, ‘ಅಮ್ಮಾ ನಮಗೋರ್ವ ಪುತ್ರನನ್ನು ಕೊಡು’ ಎಂದರು. ಅದನ್ನು ಕೇಳಿ ಶಿವಭಕ್ತ ನೀಲಮ್ಮ; ‘ತಮ್ಮ ಅನುಗ್ರಹದಿಂದ ಇನ್ನೊಬ್ಬ ಮಗ ಹುಟ್ಟಿದರೆ ಅವನನ್ನು ತಮಗೆ ಅಗತ್ಯವಾಗಿ ನೀಡುವೆನು’ ಎನ್ನುವಷ್ಟರಲ್ಲಿ ಅವಳಿಗೆ ಎಚ್ಚರವಾಯಿತು.
ಲಿಂಗದಳ್ಳಿ ನೀಲಮ್ಮನವರ ತವರೂರು. ಅದರ ಪಕ್ಕದ ನಂದಿಹಳ್ಳಿಯಲ್ಲಿ ಬಸವೇಶ್ವರನ ಜಾತ್ರೆ ನಡೆದಿತ್ತು. ಜನನೋಪಚಾರಕ್ಕೆಂದು ತವರಿಗೆ ಹೋಗಿದ್ದ ನೀಲಮ್ಮ, ನಂದಿಹಳ್ಳಿ ಬಸವಣ್ಣನ ಜಾತ್ರೆಗೆ ಹೋದಳು. ಜನಸಾಗರದ ‘ಹರಹರ ಮಹಾದೇವ’ ಎಂಬ ಜಯಘೋಷದ ಮಧ್ಯೆ ನಂದೀಶನ ತೇರು ಸಾಗಿತ್ತು. ಕೂಡಿದ ಭಕ್ತರು ರಥದ ಶಿಖರದತ್ತ ಉತ್ತತ್ತಿ-ಬಾಳೆಹಣ್ಣುಗಳನ್ನು ತೂರುತ್ತಿದ್ದ ಹೊತ್ತಿನಲ್ಲಿ ಶಿಖರಕ್ಕೆ ಬಡಿದ ಉತ್ತತ್ತಿಯೊಂದು ನೀಲಮ್ಮನ ಉಡಿಯಲ್ಲೇ ಬಂದು ಬಿದ್ದಿತು. ಅದರಿಂದ ಪುಳುಕಿತಳಾದ ಸಾದ್ವಿ ನೀಲಮ್ಮ, ಪ್ರಸಾದೋಪಾದಿ ಪ್ರಾಪ್ತವಾದ ಉತ್ತತ್ತಿಯನ್ನು ಜೋಪಾನವಾಗಿಟ್ಟುಕೊಂಡು ಸಂತಸದಿಂದ ಮನೆಗೆ ತೆರಳಿ, ಸ್ನಾನ ಪೂಜೆಗಳನ್ನು ಪೂರೈಸಿ ಶಿವಧ್ಯಾನ ಮಾಡುತ್ತ ಅದನ್ನು ಭಕ್ತಿಯಿಂದ ಸ್ವೀಕರಿಸಿದಳು. ನವಮಾಸ ತುಂಬುತ್ತಲೇ ಶಾಲಿವಾಹನ ಶಕೆ ೧೭೮೮ನೆಯ ಪ್ರಭವ ಸಂವತ್ಸರದ ಬ್ರಾಹೀ ಮುಹೂರ್ತದಲ್ಲಿ ಕಾರಣಿಕ ಪುತ್ರರತ್ನವೊಂದನ್ನು ಪಡೆದಳು.
ಶಿಶುವಿಗೆ ಲಿಂಗಧಾರಣೆಯ ಸಿದ್ಧತೆ ನಡೆದಿತ್ತು. ಸಂಭ್ರಮದಿಂದ ಓಡಾಡುತ್ತಿದ್ದ ವೃದ್ಧೆಯೊಬ್ಬಳನ್ನು ಕರೆದ ವೃದ್ಧ ಜಂಗಮರು, ‘ಪುತ್ರೋತ್ಸವವನ್ನು ಸಿಹಿ ಹಂಚಿ ಆಚರಿಸಬೇಕು’ ಎನ್ನುತ್ತಾರೆ. ಆಗ ಅವಳು ಏನೂ ಮಾಡದೆ ದೇವರು ಬಡವರಿಗೆ ಸಾಕೆನಿಸುವಷ್ಟು ಮಕ್ಕಳನ್ನು ಕೊಡುತ್ತಿರುವಾಗ, ಸಿಹಿ ಹಂಚಿ ದಾನ ಧರ್ಮ ಮಾಡಿದರೆ ಇನ್ನಷ್ಟು ಧಾರಾಳವಾಗಿ ಕೊಡಬಹುದು’ ಎಂದು ನಗುತ್ತಾಳೆ. ‘ಮಕ್ಕಳು ಅಷ್ಟು ಬೇಸರವಾಗಿದ್ದರೆ ನಮಗೆ ಕೊಟ್ಟು ಬಿಡಿರಿ’ ಎಂದ ಜಂಗಮರ ಮಾತಿಗೆ ಅವಳು
‘ಅಗತ್ಯವಾಗಿ ತೆಗೆದುಕೊಂಡು ಹೋಗಿರಿ’ ಎಂದು ಹಾಸ್ಯವಾಡುವಳು. ‘ಹಾಗೆಯೇ ಆಗಲಿ’ ಎಂದು ಜಂಗಯ್ಯ ಹೊರಟುಹೋದರು.
ಮಗು ಹುಟ್ಟಿ ಐದಾರು ದಿನಗಳಾದರೂ ಮೊಲೆಹಾಲನ್ನೂ ಕುಡಿಯದೆ, ಎಲ್ಲರನ್ನೂ ಚಿಂತೆಗೀಡು ಮಾಡಿತು. ಸದ್ಭಕ್ತಿ ಸದಾಚಾರ ಸಂಪನ್ನಳೂ ಗುರುಲಿಂಗ ಜಂಗಮರಲ್ಲಿ ನಿಷ್ಠೆಯುಳ್ಳವಳೂ ಆದ ನೀಲಮ್ಮ, ಭವಹರ ಭಸ್ಮಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲವೆಂದು ಅರಿತವಳು ಶಿಶುವನ್ನು ಚೆನ್ನಾಗಿ ಎರೆದು, ಎರಡೂ ಹೊತ್ತು ಭಸ್ಮವನ್ನು ಧರಿಸುತ್ತಿದ್ದಂತೆಯೇ ಕ್ರಮೇಣವಾಗಿ ಶಿಶು ಮೊಲೆಯುಣ್ಣಲು ಪ್ರಾರಂಭಿಸಿತು. ‘ಹಾಲಯ್ಯ’ ಎಂಬ ಅನ್ವರ್ಥಕ ಹೆಸರನ್ನು ಹೊಂದಿದ ಹಾಲಿನಂಥ ಮಧುರ ಗುಣದ ಬಾಲಕ. ಆರು ವರ್ಷ ತುಂಬುತ್ತಲೆ ಹರಳಳ್ಳಿಯ ಗಾವ. ಶಾಲೆಯಲ್ಲಿ ಅಕ್ಷರಾಭ್ಯಾಸಕ್ಕೆ ತೊಡಗಿದನು. ಹಾಲಯ್ಯನ ಅಜ್ಜ, ಶತಾಯುಷಿ ಕೊಟ್ಟೂರಪ್ಪಯ್ಯ ನವರದೂ ಕಲಿಸುವ ಕಾಯಕವಾಗಿತ್ತು. ಹಾಲಯ್ಯನಿಗೆ ಅಜ್ಜನಿಂದ ವಿಶೇಷ ಅಭ್ಯಾಸದ ಸೌಲಭ್ಯ ಸಿಕ್ಕಿತು. ಎಂಟು ವರುಷದ ಹಾಲಯ್ಯ ಲಿಂಗದೀಕ್ಷೆಯನ್ನು ಪಡೆದನು.
ಹತ್ತು ಹನ್ನೆರಡು ಜನರಿಂದ ಕೂಡಿದ ದೊಡ್ಡ ಕುಟುಂಬದ ಉದರ ನಿರ್ವಹಣೆ, ಇಬ್ಬರು ಮೂವರ ಭಿಕ್ಷೆಯಿಂದಲೇ ಸಾಗುತ್ತಿತ್ತು. ತಂದೆ ಬಸವಯ್ಯ ಅಕಾಲದಲ್ಲೇ ಲಿಂಗೈಕ್ಯರಾದ ಕಾರಣ ಭಿಕ್ಷೆ ಮಾಡುವುದು ಹಾಲಯ್ಯನಿಗೂ ಅನಿವಾರ ವಾಯಿತು. ದಂಡ ಜೋಳಿಗೆಗಳನ್ನು ಹಿಡಿದು ಸಮೀಪದ ಹಳ್ಳಿಗೆ ಭಿಕ್ಷೆ ಹೋದ ಸಂದರ್ಭ, ಹಾಲಯ್ಯನ ಜೀವನದಲ್ಲಿ ಮಹತ್ವದ ತಿರುವನ್ನು ತಂದಿತು. ‘ಏನು ಅಯ್ಯಪ್ಪ! ಭಿಕ್ಷೆ ಬೇಡಾಕ ಮುದುಕ ಆಗೀಯೇನು? ಇನ್ನೂ ಹೀಗೆ ಎಷ್ಟು ದಿನ ಬೇಡುವುದಪ್ಪ? ವಯಸ್ಸು ಸಣ್ಣದು, ಕಲಿಯುವ ಅವಕಾಶವಿದೆ, ಕಲಿತು ವಿದ್ಯಾವಂತನಾಗಿ ಸಮಾಜದ ಋಣ ತೀರಿಸು’ ಎಂದು ಒಬ್ಬ ಹಿರಿಯರು ಹಾಲಯ್ಯನನ್ನು ಕುರಿತು ಮನೋವೇಧಕ ಮಾತುಗಳನ್ನಾಡಿದರು. ಹಿರಿಯರ ಕಳಕಳಿಯ ಮಾತು, ಮುಗ್ಧ ಮನದ ಹಾಲಯ್ಯನಿಗೆ ಚಿಂತೆಗೆ ಬದಲು ಚಿಂತನೆಗೆ ಹಚ್ಚಿತು. ಭಿಕ್ಷೆ ಬೇಡುವುದಕ್ಕೂ ಅಂದೇ ಕೊನೆಯಾಯ್ತು ಹೀಗೆ ಅಪರಿಚಿತ ಹಿರಿಯರಾಡಿದ ಮಾತು, ಸಮಾಜದ ಋಣದಿಂದ ವಿಮುಕ್ತರಾಗಲು ಪ್ರೇರಣೆ ನೀಡಿತು.
ಊರಲ್ಲಿ ಶಾಲೆಯಿರುವುದು ಕೇವಲ ಮೂರನೆಯ ವರ್ಗದ ವರೆಗೆ ಮಾತ್ರ. ಜ್ಞಾನದ ತೃಷೆಯಿದ್ದರೂ ಬೇರೆ ಊರಿಗೆ ಹೋಗಿ ಕಲಿಯುವ ಸಾಮರ್ಥ್ಯವಿಲ್ಲ. ಇದೇ ಚಿಂತೆಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗಲಿಲ್ಲ. ಮನೆಯವರ ಒತ್ತಾಯಕ್ಕೆ ಭಿಕ್ಷೆ ಬೇಡಲು ಹೋದರೂ ಬಂದದ್ದು ಮಾತ್ರ ಖಾಲಿ ಜೋಳಿಗೆಯೊಂದಿಗಷ್ಟೇ, ಏನು ಮಾಡಲೂ ತೋಚದೆ ಅಣ್ಣನ ಮಾತಿನಂತೆ ಬಟ್ಟೆ ತೊಳೆಯಲು ಊರ ಹೊರಗಿನ ಬಾವಿಗೆ ಹೊರಟ ಹಾಲಯ್ಯ, ವಿದ್ಯೆಯನ್ನು ಕಲಿಯದೆ ಮರ್ಯಾದೆ ಇಲ್ಲ’ ಎಂಬ ನಿರ್ಧಾರಕ್ಕೆ ಬಂದು, ತೊಳೆದ ಬಟ್ಟೆಯ ಗಂಟನ್ನು ಮನೆಗೆ ಮುಟ್ಟಿಸುವಂತೆ ಒಬ್ಬನ ಕೈಲಿ ಕೊಟ್ಟು, ದಿಟದ ಬಟ್ಟೆಯನ್ನು ಹಿಡಿದು, ದೇವರಗುಡ್ಡದ ಪಕ್ಕದಲ್ಲಿರುವ ಕಜ್ಜರಿ ಎಂಬ ಗ್ರಾಮಕ್ಕೆ ಬಂದನು. ಕಜ್ಜರಿಯ ಶಾಲೆಯಂತೆಯೇ ಅಲ್ಲಿನ ಮಹಾದೇವ ಪಂತ ಜೋಗಳೇಕರ ಎಂಬ ಶಿಕ್ಷಕರೂ ತುಂಬ ಪ್ರಸಿದ್ಧರಾದವರು. ಅದೇ ಶಾಲೆಯಲ್ಲಿ ಓದಬೇಕೆಂಬ ಅದಮ್ಯ ಹಂಬಲದ ಹಾಲಯ್ಯ ಒಂದು ಗಿಡದಡಿ ಕುಳಿತು ಬಿಟ್ಟ, ದಿವ್ಯತೇಜದ ಅವನನ್ನು ನೋಡಿದ ಆ ಗ್ರಾಮದ ಹಿರೇಮಠ ರಾಚಯ್ಯನವರು ಸಹಾನುಭೂತಿಯ ಮಾತುಗಳನ್ನಾಡಿ ಪ್ರೀತಿಯಿಂದ ಮಠಕ್ಕೆ ಕರೆತಂದು ಉಪಚರಿಸಿ, ಶಾಲೆಗೆ ಸೇರಿಸಿದರು.
ಜಾಣ ವಿದ್ಯಾರ್ಥಿಯಾಗಿದ್ದ ಹಾಲಯ್ಯ, ಶ್ರೀ ಜೋಗಳೇಕರ ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ನಿಷ್ಠೆಯಿಂದ ಓದತೊಡಗಿದನು. ಮುಲ್ಕಿ ಪರೀಕ್ಷೆಗಾಗಿ ಕಷ್ಟಪಟ್ಟು ಓದಿ, ಪರೀಕ್ಷೆಗೆ ಕೂಡ್ರಲು ಸಹಪಾಠಿ ಅಸುಂಡಿ ಶಿವನಗೌಡನೊಡನೆ ನಡೆದುಕೊಂಡೇ ಧಾರವಾಡಕ್ಕೆ ಹೋದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಶಿವಸಂಕಲ್ಪವೇ ಹಾಗಿರಲು ಮಾಡುವುದೇನು?
ಲೌಕಿಕದಿಂದ ಎರವಾಗುತ್ತ ಅಧ್ಯಾತ್ಮದತ್ತ ಮನವನ್ನು ತಿರುಗಿಸಲು ಯೋಗ್ಯ ಸಂದರ್ಭ ಪ್ರಾಪ್ತವಾಯ್ತು. ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವ ಹೊಣೆ ಅವರ ಮೇಲಿತ್ತು. ಶಿವಶರಣರ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ. ನಿಜಗುಣರ ಷಟ್‌ಶಾಸ್ತ್ರಗಳ ಪ್ರಚಾರವಿದ್ದ ಕಾಲವದು. ತಾಯಿಯ ತವರೂರು ಲಿಂಗದಳ್ಳಿಯ ಸಮಾಳದೆ ಬಸವಯ್ಯನವರು ನಿಜಗುಣರ ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ್ದರು. ಅವರೊಂದಿಗೆ ಅಭ್ಯಾಸಕ್ಕೆ ತೊಡಗಿದ ಹಾಲಯ್ಯನವರ ಅಧ್ಯಾತ್ಮದ ಹಂಬಲಕ್ಕೆ ಕೈವಲ್ಯ ಪದ್ಧತಿಯ ವಿಶೇಷ ಬೆಂಬಲವೂ ದೊರೆಯಿತು.
ಕಲಿಕೆಯೊಂದಿಗೆ ಗಳಿಕೆಯೂ ನಡೆಯಬೇಕು. ತಾವು ತಮ್ಮ ಜೀವನ ನಿರ್ವಹಣೆಯ ಹೊಣೆಯನ್ನು ಇನ್ನೊಬ್ಬರ ಮೇಲೆ ಹೊರಿಸದಂತಿರಬೇಕು. ತಾವೊಬ್ಬರು ವಿದ್ಯಾವಂತರಾದರೆ ಸಾಲದು. ಊರಿನ ಮಕ್ಕಳೂ ಓದಬೇಕು ಎಂಬ ಆಲೋಚನೆಯಿಂದ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ವಿದ್ಯೆಯನ್ನು ನೀಡತೊಡಗಿದರು. ಶಾಸ್ತ್ರಚಿಂತನೆಯಿಂದ ಪಡೆದ ವೇದಾಂತ ಜ್ಞಾನವನ್ನು ಜನತೆಗೆ ಪರಿಣಾಮಕಾರಿಯಾಗಿ ಬೋಧಿಸುವ ಮೂಲಕ ಸಾಲಿಮಠದ ಅಜ್ಜನವರ ಕಾಯಕವನ್ನು ಮುಂದುವರಿಸಿದರು.
ಆಗಲೆ ಅವರಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳು ಮುಪ್ಪುರಿಗೊಂಡವು. ತಾಯಿ ನೀಲಮ್ಮನಿಗೂ ಮುಪ್ಪು ಆವರಿಸತೊಡಗಿತ್ತು. ಮಗನ ಮದುವೆ ಮಾಡಿ ಜವಾಬ್ದಾರಿ ಯಿಂದ ಮುಕ್ತಳಾಗಬೇಕೆಂದು, ಒಂದು ದಿನ ಹಾಲಯ್ಯನನ್ನು ಕಂಡ ನೀಲಮ್ಮನವರು, ನಿನಗೋಸ್ಕರ ಕನೈಯನ್ನು ಗೊತ್ತು ಮಾಡಿದ್ದೇನೆ, ವಿವಾಹ ಮಾಡಿಕೊಂಡು ನನ್ನನ್ನು ಜೋಪಾನ ಮಾಡು’ ಎನ್ನುತ್ತಾಳೆ. ಆಗ ಅವರು ಒಂದು ವರ್ಷದ ಅವಧಿಯನ್ನು ಪಡೆದು, ಅಧ್ಯಾಪನದೊಂದಿಗೆ ಅಧ್ಯಾತ್ಮ ಚಿಂತನೆಯನ್ನೂ ಮುಂದುವರಿಸಿದರು. ನೋಡು ನೋಡುವುದರಲ್ಲಿ ಮೂರು ವರುಷ ಕಳೆದವು. ಈ ಸಂಸಾರ ತುಂಬ ಮೋಹಕ, ಆಕರ್ಷಕ. ಆದರೆ ಅಷ್ಟೇ ನಿಸ್ಸಾರವೂ ಹೌದು. ಅದನ್ನರಿತ ಹಾಲಯ್ಯನವರು ಬ್ರಹ್ಮಚರದ ಕಠಿಣ ವ್ರತವನ್ನು ಕೈಕೊಂಡರು. ಹೆಣ್ಣು-ಹೊನ್ನು ಮಣ್ಣುಗಳ ಮೋಹ-ಮಾಯೆಗಳಿಂದ ದೂರವಿದ್ದು, ಜಿತೇಂದ್ರಿಯರಾಗಿ, ‘ಸಮಾಜ ಸೇವೆಯೇ ದೇವರ ಸೇವೆ’ ಎಂದು ತಿಳಿದು, ಹಗಲಿರುಳು ಸಮಾಜ ಕಲ್ಯಾಣಕ್ಕಾಗಿ ದುಡಿಯುವ ನಿರ್ಧಾರ ತಾಳಿದರು.
ಒಂದು ಕ್ಷಣ ಮಾತ್ರದಲ್ಲಿ ಭೌತಿಕ ಭೂತವನ್ನು ಹಿಡಿಸಬಲ್ಲ ಹೆಣ್ಣಿನ ಮಾಯೆ ಅದ್ಭುತ. ಅಂತೆಯೇ “ನಾಣು ಲಗ್ನವಾಗಲಾರೆ, ಸಂಸಾರ ಮಗ್ನನಾಗಲಾರೆ’ ಎಂದು ಶಮೆ-ದಮೆಗಳು ಗಟ್ಟಿಗೊಂಡ ಹಾಲಯ್ಯ ದೃಢನಿರ್ಧಾರ ಮಾಡಿದರು; ಉಕ್ತಿ ಬರುತ್ತಿರುವ ಯೌವ್ವನವನ್ನು ಕಠಿಣ ವೈರಾಗ್ಯಕ್ಕೆ ತೊಡಗಿಸಿದರು. ತಮ್ಮ ಬಳಿ ಬಂದ ತಾಯಿಯನ್ನು ನಿರಾಶೆ ಮಾಡಲು ಸಾಧ್ಯವಾಗದೆ ‘ಅಮ್ಮಾ! ಎಲ್ಲರಂತೆ ನನ್ನನ್ನು ಹೆತ್ತು ಹೊತ್ತು ರಕ್ಷಿಸಿರುವಿ. ನಿನ್ನ ಋಣ ದೊಡ್ಡದು. ನಿನ್ನ ಬಯಕೆಯನ್ನು ಪೂರೈಸುವ ಶಕ್ತಿ ನನ್ನಲ್ಲಿಲ್ಲ. ಸಂಸಾರದ ಆಶೆ ನನಗಿಲ್ಲ. ಕ್ಷಣಿಕವಾದ ಈ ಎಲ್ಲ ಭೋಗ ಲಾಲಸೆಗಳನ್ನು ಧಿಕ್ಕರಿಸಿ, ಅನಿರ್ವಚನೀಯವು, ಶಾಂತಿದಾಯಕವೂ ಸರ್ವದಾ ಆನಂದಮಯವೂ ಆದ ಪರಮಾತ್ಮನ ಸಾನಿಧ್ಯವನ್ನು ಹೊಂದುವ ಅಪೇಕ್ಷೆಯುಳ್ಳವನಿಗೆ ವಿಷಯವೆಂಬ ವಿಷವನ್ನು ಕುಡಿಸಬೇಡ’ ಎಂದು ತುಂಬು ಸೌಜನ್ಯದಿಂದಲೇ ಒಲಿಸಿದರು. ತಾಯಿಯ ಋಣವನ್ನು ಅಷ್ಟು ಸುಲಭವಾಗಿ ತೀರಿಸುವುದು ಸಾಧ್ಯವಿಲ್ಲವೆಂದ ಅವರು, ಮೂರು ವರುಷಗಳಲ್ಲಿ ಗಳಿಸಿದ ಮುನ್ನೂರು ರೂಪಾಯಿಗಳನ್ನು ತಾಯಿಗೆ ಅರ್ಪಿಸಿ, ಮಾತೃಋಣದಿಂದ ಮುಕ್ತರಾದರು. ಸಮಾಜ ಸೇವೆಯನ್ನು ಕೈಕೊಂಡು, ಪವಿತ್ರ ಧೈಯವನ್ನು ಹೊಂದಿ ಸಾಗಿರುವ ತಮ್ಮ ಮಾರ್ಗದಲ್ಲಿ ಅಡ್ಡಿ ಒಡ್ಡದೆ ಸಂತೋಷದಿಂದ ಆಶೀರ್ವದಿಸಿ ಬೀಳ್ಕೊಡುವಂತೆ ಪ್ರಾರ್ಥಿಸಿ, ಅಂದೇ ತಾಯಿ-ಮಕ್ಕಳ ಸಂಬಂಧಕ್ಕೆ ತಿಲಾಂಜಲಿಯನ್ನಿತ್ತರು; ಹೆಣ್ಣನದ ವ್ಯಾಮೋಹವನ್ನೂ ಅಳಿದರು.
ಆರು ಶಾಸ್ತ್ರಗಳನ್ನು ಬಲ್ಲ, ಜ್ಞಾನಿಗಳಾದ ಹುಬ್ಬಳ್ಳಿಯ ಸಿದ್ಧಾರೂಢರಲ್ಲಿ ವೇದಾಂತದ ಆಳವಾದ ಅಧ್ಯಯನವನ್ನು ನಡೆಸಿದ ಹಾಲಯ್ಯನವರು, ಸುವಿಚಾರದಿಂದ ಸ್ವಾನುಭವದಿಂದ ಚಿಂತನೆಗೈದರು. ಸತ್ಯ ಸಿದ್ಧಾಂತವನ್ನರಿಯಲು ಎಮ್ಮಿಗನೂರಿನ ಜಡೆಯಸಿದ್ದರಲ್ಲಿಗೆ ಹೋಗಿ, ತಮ್ಮ ಸ್ವಾಗತಕ್ಕೆ ಮೊದಲೇ ಸಿದ್ಧತೆ ನಡೆಸಿದ ಅವರನ್ನು ವಿಚಕ್ಷಣ ಮತಿಯಿಂದ ಪರೀಕ್ಷಿಸಿ, ಅವರಿಂದಲೇ ‘ಶಿವಯೋಗಿ ‘ಎಂಬ ಅಭಿದಾನವನ್ನೂ ಹೊಂದಿದರು.
ತಾಯಿಯೆದುರು ಪ್ರತಿಜ್ಞೆಗೈದುದನ್ನು ಪರೀಕ್ಷಿಸಲೆಂಬಂತೆ ಹುಬ್ಬಳ್ಳಿಯಲ್ಲಿ ಘಟನೆಯೊಂದು ನಡೆಯಿತು. ಹಾಲಯ್ಯನವರ ಪರಿಪೂರ್ಣ ವಿರತಿ ತಾಳಲು ಅದೊಂದೇ ಘಟನೆ ಸಾಕಾಯಿತು. ಒಂದು ದಿನ ಹಾಲಯ್ಯನವರು ಭಿಕ್ಷಾನ್ನಕ್ಕಾಗಿ ಸಂಚರಿಸುತ್ತ ಒಂದು ಮನೆಗೆ ಬಂದರು. ಒಬ್ಬಳೇ ಇದ್ದ ಯುವತಿ. ಹಾಲಯ್ಯನವರ ತೇಜಃಪುಂಜ ರೂಪಕ್ಕೆ ಮನಸೋತು, ಜೋಳಿಗೆಯನ್ನು ಗಟ್ಟಿಯಾಗಿ ಹಿಡಿದು, ಬಲವಾಗಿ ಎಳೆದು ಮನೆಯೊಳಗೆ ಆಹ್ವಾನಿಸಿದಳು. ಅದರಿಂದ ತೀವ್ರವಾಗಿ ಜಿಗುಪ್ಸೆಗೊಂಡ ವೀರವಿರಾಗಿ ಹಾಲಯ್ಯನವರು ಜೋಳಿಗೆಯನ್ನು ಅವಳ ಕೈಯಲ್ಲೇ ಬಿಟ್ಟು, ಇನ್ನೆಂದೂ ಆ ಪಾಪಿ ಹೆಂಗಸನ್ನು ನೋಡಬಾರದೆಂದು ಆತುರಾತುರವಾಗಿ ಹಿಂದಕ್ಕೆ ಬಂದರು. ‘ತಿನದೆ ಕೊಲ್ಲದು ಹು ಮಾತ್ರದೆ ಕೊಲ್ವುದು’ ಎಂಬ ಅಧ್ಯಾತ್ಮ ಗುರುವಿನ ನೈಜಜ್ಞಾನ ಪಡೆಯುವ ಹಂಬಲ ಹೆಚ್ಚಿತು. ಶಂಭುಲಿಂಗ ಬೆಟ್ಟದಲ್ಲಿ ಉಗ್ರತಪಗೈದು, ನಿಜಗುಣರನ್ನು ಸಾಕ್ಷಾತ್ಕರಿಸಿಕೊಂಡು, ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ ಎಳಂದೂರು ಬಸವಲಿಂಗ ಮಹಾಸ್ವಾಮಿಗಳು ಅದೇ ಸಂದರ್ಭದಲ್ಲಿ ಸಿದ್ಧಾರೂಢ ಮಠಕ್ಕೆ ಆಗಮಿಸಿದರು. ಜ್ಞಾನಪಿಪಾಸುಗಳಾದ ಹಾಲಯ್ಯನವರು ಸಿದ್ಧಾರೂಢರ ಆಣತಿಯಂತೆ ಬಸವಲಿಂಗ ಸ್ವಾಮಿಗಳೊಂದಿಗೆ ಚರ್ಚಿಸುತ್ತ ಅವರ ಘನವ್ಯಕ್ತಿತ್ವಕ್ಕೆ ಮನಸೋತರು.ಬಯಸದ ಸದ್ಗುರು ತಾವಾಗಿಯೇ ದೊರೆತುದಕ್ಕೆ ಸಂತುಷ್ಟಗೊಂಡರು. ಅವರನ್ನೇ ಪರಮಗುರುವೆಂದರು. , ಆಚಾರದ ಅರಕೆಯನ್ನು ತುಂಬಿಕೊಳ್ಳುವುದಕ್ಕಾಗಿ ಶ್ರೀಗುರುವಿನ ಅಪಣೆಯಂತೆ ಶಂಭುಲಿಂಗ ಬೆಟ್ಟದಲ್ಲಿ ನೆಲೆನಿಂತು, ನಿಜಗುಣರ ಆರು ಶಾಸ್ತ್ರಗಳನ್ನು ನಿಷ್ಠೆಯಿಂದ ಅಭ್ಯಸಿಸಿ ‘ಹಾಲಯ್ಯ ದೇಶಿಕರೆನಿಸಿದರು.
ಬಸವಲಿಂಗ ಸ್ವಾಮಿಗಳ ಕೇವಲ ಶಿಷ್ಯರಾಗಿ ನಿಜಗುಣರ ಷಟ್‌ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡ ಹಾಲಯ್ಯದೇಶಿಕರು ಹಳ್ಳಿಹಳ್ಳಿಗೆ ಹೋಗಿ ಅನುಭವ ಸಾರವನ್ನು ಬೋಧಿಸಿದರು. ಅವರ ಪ್ರಭಾವಯುತವಾದ ವಾಣಿಗೆ ಹಾಗೂ ನಿರೂಪಣೆಯ ವಿಧಾನಗಳಿಗೆ ಪಾಮರರೂ ಆಕರ್ಷಿತರಾದರು. ಬಸವಲಿಂಗ ಶ್ರೀಗಳ ಆದೇಶದಂತೆ ಗುರುವಿರಕ್ತರ ಸಂಬಂಧ ಸುಧಾರಣೆಗೆ ಹಾಲಯ್ಯದೇಶಿಕರು ನಿಷ್ಠೆಯಿಂದ ಪ್ರಯತ್ನಿಸಿದರು. ಹೀಗೆ ಯಳಂದೂರಿನ ಬಸವಲಿಂಗ ಸ್ವಾಮಿಗಳ ಸಂಕಲ್ಪವನ್ನು ಶ್ರದ್ಧೆ-ನಿಷ್ಠೆಗಳಿಂದ ಪೂರೈಸಿ ಗುರುಋಣಮುಕ್ತರಾದರು. ಗುರುಗಳೊಂದಿಗೆ ಸಂಚಾರ ಕೈಗೊಂಡರು. ಅಕಸ್ಮಾತ್ತಾಗಿ ಶ್ರೀಗಳ ದೇಹಸ್ಥಿತಿ ಕೆಟ್ಟು, ಅಣ್ಣಿಗೇರಿಯಲ್ಲಿ ಅವರು ಲಿಂಗದಲ್ಲಿ ಬೆರೆದ ಮೇಲೆ ತಾಯನಗಲಿದ ಶಿಶುವಿನಂತಾದ ಹಾಲಯ್ಯ ದೇಶಿಕರು, ಆತ್ಮಶಾಂತಿ ಪಡೆಯಲು ಸೊರಬದ ಸಪ್ತಕಾವ್ಯದ ಗುರುಬಸವಾರ್ಯರ ಗದ್ದುಗೆಯಲ್ಲಿ ಅನುಷ್ಠಾನಗೈದರು.
ಧಾರವಾಡ ಜಿಲ್ಲೆಯ ಹಾನಗಲ್ಲಿನ ವಿರಕ್ತ, ಲಿಂಗಾಯತ ಮಠಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ಅದರ ಪೀಠಾಧಿಪತಿಗಳಾದ ಶ್ರೀ ಫಕೀರ ಮಹಾಸ್ವಾಮಿಗಳಿಗೆ ತುಂಬ ವಯಸ್ಸಾಗಿತ್ತು. ಅವರು ತಮ್ಮ ಉತ್ತರಾಧಿಕಾರಿಯ ಶೋಧದಲ್ಲಿದ್ದರು. ಅದೇ ಸಂದರ್ಭದಲ್ಲಿ ಹಾಲಯ್ಯ ದೇಶಿಕರು ಮಳಗದ್ದಿಯ ಶ್ರೀ ಕೆಂಡಪ್ಪಗೌಡರೆಂಬ ಹಿರಿಯರ ದೃಷ್ಟಿಗೆ ಬಿದ್ದರು. ಅವರ ವಿವೇಕ, ಆಚಾರನಿಷ್ಠೆ, ಸದ್ಬೋಧಶಕ್ತಿ, ದಿವ್ಯತೇಜ, ಹರಳು ಗೊಳ್ಳುತ್ತಿರುವ ವೈರಾಗ್ಯ ಮೊದಲಾದ ಸಲ್ಲಕ್ಷಣಗಳನ್ನು ಕಂಡು ಕೆಂಡಪ್ಪಗೌಡರಿಗೆ ಸಂತೋಷವಾಯಿತಷ್ಟೇ ಅಲ್ಲ, ಹಾನಗಲ್ಲ ಮಠಕ್ಕೆ ಸುಯೋಗ್ಯ ಉತ್ತರಾಧಿಕಾರಿಗಳನ್ನು ಹುಡುಕಿದುದಕ್ಕೆ ಸಮಾಧಾನವೂ ಆಯಿತು.
ಮೂರು ವರುಷ ಮೌನವ್ರತ-ಅನುಷ್ಠಾನಗಳನ್ನು ಕೈಕೊಳ್ಳುವ ಸಂಕಲ್ಪಕೈಕೊಂಡ ಹಾಲಯ್ಯನವರು ಕೆಂಡಪ್ಪಗೌಡರ ಸೂಚನೆಯಂತೆ ಶ್ರೀ ಫಕೀರ ಮಹಾ ಸ್ವಾಮಿಗಳನ್ನು ಕಾಣಗಲು ಹಾನಗಲ್ಲಿಗೆ ಹೋದರು. ಸಮಾಜ ಸೇವೆಯನ್ನು ಮಾಡಬೇಕೆಂಬ ತಮ್ಮ ಪ್ರಬಲ ಹಂಬಲವನ್ನು ಸ್ವಾಮಿಗಳೆದುರು ಅರಿಕೆ ಮಾಡಿಕೊಂಡು ತಮ್ಮನ್ನು ಆಶೀರ್ವದಿಸುವಂತೆ ಪ್ರಾರ್ಥಿಸಿದರು. ಆಗ ಫಕೀರೇಶರು ‘ತಮ್ಮಾ, ಒಂದು ಸ್ಥಾನದ ಅಧಿಕಾರಿಯಾಗುವ ವರೆಗೆ ಬೋಧನಾಧಿಕಾರ ಬರಲಾರದು. ಹಾಗೂ ಸಮಾಜ ಸೇವೆ ಮಾಡುವ ಅವಕಾಶ ದೊರೆಯದು. ಅಂತೆಯೇ ಹಾನಗಲ್ಲ ಪೀಠಕ್ಕೆ ಅಧಿಕಾರಿಯಾಗು’ ಎಂದರು. ಅದಕ್ಕೆ ಅಲ್ಲಿ ಸೇರಿದ ಭಕ್ತ ಸಮೂಹವೂ ಒಪ್ಪಿ, ಹಾಲಯ್ಯನವರಲ್ಲಿ ಒತ್ತಾಯದ ಅರಿಕೆ ಮಾಡಿಕೊಳ್ಳಲು, ಅವರೂ ಆಗಲೆಂದು ಸಮ್ಮತಿಸಿದರು. ಅದು ಹಾನಗಲ್ಲ ಪೀಠದ ಸೌಭಾಗ್ಯವೆನ್ನಬೇಕು.
ಮಠಾಧಿಕಾರವನ್ನು ಅವರೆಂದೂ ಬಯಸಿದವರಲ್ಲ. ಅದು ತಾನಾಗಿಯೇ ಹುಡುಕಿಕೊಂಡು ಬಂದುದು. ಅಂತೆಯೇ, ಫಕೀರ ಮಹಾಸ್ವಾಮಿಗಳ ಸೇವೆ, ದಾಸೋಹದ ವ್ಯವಸ್ಥೆ, ಸಂಚಾರ, ಜನಜಾಗೃತಿ-ಹೀಗೆ ಎಲ್ಲವನ್ನೂ ಹಾಲಯ್ಯ ನಿಷ್ಠೆಯಿಂದ ಮಾಡತೊಡಗಿದರು. ಒಮ್ಮೆ ಅವರು ಭಕ್ತರ ಬಯಕೆಯಂತೆ ಮಲಸೀಮೆಯತ್ತ ಹೋದಾಗ ಫಕೀರಸ್ವಾಮಿಗಳ ಆರೋಗ್ಯ ತುಂಬ ವಿಷಮಿಸಿತು. ಅಕಸ್ಮಾತ್ತಾಗಿ ಹಾನಗಲ್ಲಿಗೆ ದಯಮಾಡಿಸಿದ ಮಹಾಮಹಿಮರೂ ಸವದತ್ತಿ ಶ್ರೀ ಕಲ್ಮಠದ ಅಧಿಪತಿಗಳೂ ಆದ ಬಿದರಿಯ ಕುಮಾರ ಮಹಾಸ್ವಾಮಿಗಳಿಗೆ ವಿಷಯ ತಿಳಿಸಿ, ಶ್ರೀಮಠಕ್ಕೆ ಹಾಲಯ್ಯನವರನ್ನು ಪಟ್ಟಾಧಿಕಾರಿಗಳನ್ನಾಗಿಸುವ ಗುರುತರ ಹೊಣೆಯನ್ನು ಹೊರಿಸಿ ಫಕೀರಸ್ವಾಮಿಗಳು ಲಿಂಗೈಕ್ಯರಾದರು.
ಮಲೆನಾಡ ಸೀಮೆಯಿಂದ ಹಾಲಯ್ಯ ದೇಶಿಕರನ್ನು ಕರೆಸಿ, ಸಮಸ್ತ ಸದ್ಭಕ್ತರ ಸಮಕ್ಷಮದಲ್ಲಿ ಅನ್ನಸಂತರ್ಪಣೆ ಮಾಡಿಸಿ, ಅವರನ್ನು ‘ಸದಾಶಿವ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ಫಕೀರಸ್ವಾಮಿಗಳ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು. ಬಿದರಿ ಕುಮಾರ ಶಿವಯೋಗಿಗಳಂಥ ಮಹಾತಪಸ್ವಿಗಳ ಮಂತ್ರಹಸ್ತದಿಂದ ಅಧಿಕಾರ ಸ್ವೀಕರಿಸಿದ ಸದಾಶಿವ ಸ್ವಾಮಿಗಳು ಶ್ರೀಮಠದ ಜೀರ್ಣೋದ್ಧಾರಕ್ಕಾಗಲಿ, ಹೊಲ ಗದ್ದೆಗಳ ಸುಧಾರಣೆಗಾಗಲಿ ಚಿಂತಿಸದೆ, ಅತ್ಯಂತ ಅಧೋಗತಿಗಿಳಿದಿದ್ದ ಲಿಂಗಾಯತ ಸಮಾಜದ ಪುನರುದ್ಧಾರದ ಗಂಭೀರ ಚಿಂತನೆಗೆ ತೊಡಗಿದರು. ಪ್ರಾಚೀನ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದ ಲಿಂಗಾಯತ ಧರ್ಮ-ಸಮಾಜಗಳ ದುರವಸ್ಥೆಯನ್ನು ಕಂಡು ಕಳವಳಗೊಂಡರು. ಧರ್ಮ-ಸಂಸ್ಕೃತಿಗಳ ಪರಿಜ್ಞಾನ ಪಡೆಯಲು ಸಂಸ್ಕೃತ ಭಾಷಾಭ್ಯಾಸದ ಅಗತ್ಯವನ್ನರಿತು, ಕನ್ನಡ ನಾಡಿನ ವಿವಿಧ ಸ್ಥಳಗಳಲ್ಲಿ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಿದರು. ಪರಿವ್ರಾಜಕರಾಗಿ ಹಾನಗಲ್ಲ ಪರಿಸರದ ಹಳ್ಳಿಗಳಗನ್ನು ಸುತ್ತಿದ ಶ್ರೀಗಳು ಜನಜೀವನವನ್ನು ನಿಕಟದಿಂದ ನೋಡಿದರು. ಸಮಾಜವನ್ನು ಅರ್ಥಪೂರ್ಣವಾಗಿ ಅಭ್ಯಸಿಸಿದರು. ಧರ್ಮಜಾಗೃತಿಯ ಕಾರ್ಯವನ್ನು ಕೈಕೊಂಡರು. ಲಿಂಗವಿಲ್ಲದ ಭವಿಗಳಿಗೆ ಸದ್ಬೋಧೆಯನ್ನು ನೀಡಿದರು. ಲಿಂಗಾಯತ ಧರ್ಮ, ಸಂಸ್ಕೃತಿ, ಸಾಹಿತ್ಯಗಳನ್ನು ಪೂಜ್ಯರು ಚೆನ್ನಾಗಿ ಅರಿತಿದ್ದರಷ್ಟೇ ಅಲ್ಲ, ಧರ್ಮ ತತ್ವಗಳನ್ನು ಕೂಡ ಅರ್ಥಪೂರ್ಣವಾಗಿ ಅಳವಡಿಸಿಕೊಂಡಿದ್ದರು.
ಶ್ರೀಗಳ ದೂರದರ್ಶಿತ್ವ ತುಂಬ ವಿಲಕ್ಷಣವಾದುದು. ಅಂದಿನ ಲಿಂಗಾಯತ ಸಮಾಜದಲ್ಲಿ ವಿದ್ಯಾವಂತರು ತುಂಬ ವಿರಳರಾಗಿದ್ದರು. ಹಳ್ಳಿಗಳಲ್ಲಿನ ನಮ್ಮ ಸಮಾಜ ಬಾಂಧವರಂತೂ ದುರಭ್ಯಾಸಗಳಿಗೆ ದಾಸರಾಗಿ, ಕಾಯಕವನ್ನು ಕೈಬಿಟ್ಟು ಸೋಮಾರಿಗಳಾಗಿದ್ದರು. ಅದನ್ನು ಕಂಡು ಮರುಗಿದ ಶ್ರೀಗಳು ಹಳ್ಳಿಗಳಿಂದಲೇ ಸುಧಾರಣೆಯ ಕಾರ್ಯವನ್ನು ಆರಂಭಿಸಿದರು. ಬಲವಾದ ಸಂಘಟನೆಯಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯವೆಂಬುದನ್ನು ತಿಳಿದು, ಪ್ರಸ್ತುತ ಮಹತ್ಕಾರ್ಯದ ಸಾಧನೆಗೆ ಸಮಾನ ಮನಸ್ಕರನ್ನು ಕಲೆಹಾಕುವ ತುರ್ತು ಅಗತ್ಯವನ್ನು ಅರಿತರು. ಲಿಂಗಾಯತ ಸಮಾಜದಲ್ಲಿ ನವಚೈತನ್ಯವನ್ನು ತುಂಬಿ ಒಕ್ಕಟ್ಟನ್ನುಂಟು ಮಾಡಿ, ಆತ್ಮಗೌರವವನ್ನು ಕಾಯ್ದುಕೊಳ್ಳಲು ಸಮರ್ಥ ಸಾಧನವೊಂದನ್ನು ಕಲ್ಪಿಸಬೇಕಾಗಿತ್ತು. ಅಂತೆಯೇ, ಇದ್ದ ಕೆಲವೇ ಕೆಲವು ಸುಶಿಕ್ಷಿತರನ್ನು ಕರೆಸಿ ಸಭೆ ಸೇರಿಸಿ, ಸಮಾಜ ಸುಧಾರಣೆಯಾಗಬೇಕಾದರೆ ಶಿಕ್ಷಣದ ಅಗತ್ಯವಿದೆ, ಅದಕ್ಕೂ ಮೊದಲು ನಾವು ಸಂಘಟಿತರಾಗಬೇಕು. ಅದಕ್ಕಾಗಿ ನಮ್ಮದೇ ಆದ ಸಂಘವನ್ನು ಸ್ಥಾಪಿಸಿಕೊಳ್ಳಬೇಕೆಂದು ಹೇಳಿದರು . ಲಿಂಗಾಯತ ಸಮಾಜದ ಶ್ರೀಮಂತರನ್ನು ಗಣ್ಯರನ್ನು ಪ್ರತಿಭಾವಂತರನ್ನು ಬರಮಾಡಿಕೊಂಡು ಅವರೊಂದಿಗೆ ಆಲೋಚನೆ ನಡೆಸಿದರು. ೧೯೦೪ರಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು. ಸಮಾಜ ಬಾಂಧವರೆಲ್ಲ ಒಂದಾಗಿ ಮಹಾಸಭೆಯ ಸಕ್ರಿಯ ಸದಸ್ಯರಾದರು. ಸಮಾಜದಲ್ಲಿ ವಿಲಕ್ಷಣ ಜೀವಂತಿಕೆ ಮೂಡಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಲಿಂಗಾಯತರು ಮೆಲ್ಲನೆ ಪ್ರಗತಿಪಥದಲ್ಲಿ ಮುನ್ನಡೆ ಸಾಧಿಸತೊಡಗಿದರು
. ಶ್ರೀಗಳು ನಡೆಸಿದ ಪ್ರಯತ್ನದ ಫಲವಾಗಿ ಜನರಲ್ಲಿ ವಿಶ್ವಾಸ ಮೂಡಿತಷ್ಟೇ ಅಲ್ಲ, ನಿರೀಕ್ಷೆಗೆ ಮೀರಿ ಧನಸಂಚಯವಾಯಿತು. ವಿದ್ಯಾಪ್ರಸಾರದೊಂದಿಗೆ ಧರ್ಮ ಗ್ರಂಥಗಳ ಪಟಕಣೆಯ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಯಿತು. ವಿದ್ಯಾವಂತರನ್ನೂ ಪಂಡಿತರನ್ನೂ ಕವಿ-ಕಲೆಗಾರ-ಸಂಗೀತಗಾರರನ್ನೂ ಪೋಷೊಸಲಾಯಿತು.
ತತ್ವಾಧಿಕ್ಯ ಹಾಗೂ ತಪೋಬಲದ ಆಧಾರದ ಮೇಲೆ ರಚಿತವಾದ ಧರ್ಮಕ್ಕೆ ಶಾಶ್ವತತೆ ಇದೆಯೆಂಬುದನ್ನರಿತು, ಬಸವಾದಿ ಪ್ರಮಥರಿಂದ ಪ್ರಚುರಗೊಂಡ ಲಿಂಗಾಯತ ಧರ್ಮಕ್ಕೆ ಚಿರಕಾಲ ಬಾಳುವ ಶಕ್ತಿಸಾಮರ್ಥ್ಯಗಳಿವೆಯೆಂಬುದನ್ನು ಮನವರಿಕೆ ಮಾಡಿಕೊಂಡು ಅದಕ್ಕೆ ಇನ್ನೂ ಹೆಚ್ಚಿನ ಕಾಂತಿಯನ್ನೀಯಬೇಕೆಂಬ ಸಂಕಲ್ಪ ತಾಳಿದರು. ಯೋಗವಿದ್ಯಾನ್ವೇಷಕರೂ ಪರಮ ವೈರಾಗ್ಯ ಶಾಲಿಗಳೂ ಮಹಾಮಹಿಮರೂ ಆದ ಬಾಗಲಕೋಟೆಯ ಮಲ್ಲಣಾರ್ಯರ ಸೂಚನೆಯಂತೆ ಹಾಗೂ ಯಳಂದೂರ ಬಸವಲಿಂಗ ಯತಿಗಳ ಸತ್ಸಂಕಲ್ಪದಂತೆ ಯೋಗ್ಯ ಧಾರ್ಮಿಕ ಗುರುಗಳನ್ನೂ ಆಚಾರನಿಷ್ಠ ಶಿವಾನುಭವಿಗಳನ್ನೂ ತರಬೇತಿಗೊಳಿಸುವ ಬೃಹತ್ ಯೋಗ ಸಂಸ್ಥೆಯನ್ನು ನಿರ್ಮಿಸುವ ಹೊಣೆಹೊತ್ತ ಶ್ರೀಗಳು ಬಾಗಲಕೋಟೆಯಲ್ಲಿ ೧೯೦೮ರಲ್ಲಿ ನಾಲ್ಕನೆಯ ವೀರಶೈವ ಮಹಾಸಭೆಯನ್ನು ಏರ್ಪಡಿಸಿದರು. ಇಳಕಲ್ಲಿನ ಮಹಾತ್ವಸ್ವಿ ಮಹಾಂತ ಸ್ವಾಮಿಗಳು ತೋರಿದ ಸ್ಥಾನದಲ್ಲಿ ಶಿವಯೋಗಮಂದಿರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಯಿತು. ಮೂರೇ ಮೂರು ವಾರಗಳಲ್ಲಿ ಇಳಕಲ್ಲ ಶ್ರೀಗಳಿಂದ ಶಿವಯೋಗಮಂದಿರದ ಸ್ಥಳಕ್ಕೆ ಲಿಂಗಮುದ್ರೆ ಬಿದ್ದಿತು. ಕೇವಲ ಏಳು ಜನ ಸಾಧಕ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆಯೊಂದಿಗೆ ಅಧ್ಯಾತ್ಮ ಉನ್ನತಿ ಸಾಧಿಸುವ ವಿದ್ಯೆ ನೀಡುವ ಏರ್ಪಾಡಾಯಿತು. ಹೀಗೆ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರಗಳೆರಡೂ ಕುಮಾರೇಶರ ಎರಡು ಕಣ್ಣುಗಳೆನಿಸಿದವು.
ಸಮಾಜದ ಬಗೆಗೆ ಪೂಜ್ಯರಿಗಿದ್ದ ಪ್ರೇಮ ಉಜ್ವಲವಾದುದು. ಮನುಷ್ಯ ಸಮಾಜಜೀವಿ. ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. ಪ್ರಗತಿಪರ ಜೀವಿಯೆನಿಸಿದ ಮಾನವನ ಸರ್ವಾಂಗೀಣ ವಿಕಾಸವು ಸಮಾಜವನ್ನೇ ಅವಲಂಬಿಸಿದೆ. ಅಂತೆಯೇ ಶ್ರೀಗಳು ಸದಾವಕಾಲ ಸಮಾಜದ ಹಿತಚಿಂತನೆಯನ್ನೇ ಮಾಡುತ್ತಿದ್ದರು. ‘ಎದ್ದರೆ ಸಮಾಜ, ಕುಳಿತರೆ ಸಮಾಜ’ ಎನ್ನುವಂತೆ ಯಾವಾಗಲೂ ‘ಸಮಾಜ ಸಮಾಜ’ ಎಂದು ಸಮಾಜದ ಉತ್ಕರ್ಷಕ್ಕಾಗಿ ಅವರು ಟೊಂಕಕಟ್ಟಿ ನಿಂತರು. ನಾವು ಸಾಧಿಸುವ ಸಾಮಾಜಿಕ ಪ್ರಗತಿಯೇ ದೇಶದ ಬೆಳವಣಿಗೆಯ ಅಡಿಗಲ್ಲು. ನೀತಿಯುತ ಸಮಾಜದ ನಿರ್ಮಾಣದಿಂದ ರಾಜಕೀಯಕ್ಕೂ ಭದ್ರವಾದ ಹಿನ್ನೆಲೆಯೊದಗುತ್ತದೆ. ಮಾನವನ ಪ್ರಕೃತಿಯ ರಹಸ್ಯ ಅಡಗಿರುವುದೇ ಸಾಮಾಜಿಕ ಜೀವನದಲ್ಲಿ ಎಂದು ತಿಳಿಸಿದರು. ಏರ್ಪಡಿಸಿದ ಶಿವಾನುಭವ ಗೋಷ್ಠಿಗಳಲ್ಲಿ ಆಡಿದ ಮಾತುಗಳಲ್ಲಿ, ನೀಡಿದ ಉಪನ್ಯಾಸಗಳಲ್ಲಿ, ನಡೆಸಿದ ಸಹಜ ಸಮಾಲೋಚನೆಯಲ್ಲಿ ಹೀಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಬಗೆಗೆ ಶ್ರೀಗಳು ನಡೆಸಿದ ಚಿಂತನೆ ಅನನ್ಯವಾದುದು. ಸಮಸ್ತ ಲಿಂಗಾಯತ ಸಮಾಜವೇ ಪೂಜ್ಯರ ಬೆಂಬಲವಾಗಿ ನಿಂತಿತು. ಅಂತೆಯೇ ಅವರು ಸಮಾಜದ ಸ್ವಾಮಿಗಳಾಗಿ ಆದರ್ಶ ಮಾರ್ಗದರ್ಶಕರೆನಿಸಿದರು. ‘ಸಮಾಜ ಸೇವೆಗೆ ಮತ್ತೊಮ್ಮೆ ಹುಟ್ಟಿ ಬರುತ್ತೇವೆ’ ಎಂದು ಹೇಳಿದ ಮಹಾತ್ಮರವರು.
ʼಸರಳ ಜೀವನ-ಉದಾತ್ತ ಚಿಂತನ’ ಎಂಬ ಸೂಕ್ತಿಯನ್ನರಿತು, ಅದನ್ನು ಅಚ್ಚುಕಟ್ಟಾಗಿ ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡ ಮಹಂತರವರು. ಅವರೆ೦ದೂ ಪಲ್ಲಕ್ಕಿಯನ್ನೇರಿದವರಲ್ಲ. ಸಿಂಹಾಸನದ ಮೇಲೆ ವಿರಾಜಮಾನರಾದವರಲ್ಲ. ಏನಿದ್ದರೂ ಅವರು ಭಕ್ತರ ಹೃದಯದಲ್ಲಿ ಭದ್ರವಾದ ಸ್ಥಾನ ಪಡೆದವರು. ಬರಿ ವಿದ್ವತ್ತು-ಬುದ್ಧಿವಂತಿಕೆಗಳಿಂದಷ್ಟೇ ಅಲ್ಲ, ಅನುಪಮ ತ್ಯಾಗ ಮತ್ತು ಸೇವಾ ಭಾವನೆಗಳಿಂದ ಅವರು ನಿಷ್ಕಾಮ ಸೇವೆಗೈದರು. ಮಠಕ್ಕಾಗಿ ಸಂಗ್ರಹಗೊಂಡ ಧನಧಾನ್ಯಗಳನ್ನು ಬರಗಾಲ ಪೀಡಿತರಿಗೆ, ರೋಗಿಗಳಿಗೆ ವಿನಯೋಗಿಸಿದ ತ್ಯಾಗಿಗಳವರು.
ಇಂದು ನಮ್ಮ ಸಮಾಜ ಶೈಕ್ಷಣಿಕಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ ಪ್ರಗತಿ ಸಾಧಿಸುವಲ್ಲಿ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪರಿಶ್ರಮ ಗಮನಾರ್ಹ ವಾಗಿದೆ. ಇಂದಿನ ಸುಶಿಕ್ಷಿತ ಲಿಂಗಾಯತ ಬಾಂಧವರು, ಮಹಾತಪಸ್ವಿ ಕುಮಾರೇಶರು ನಿರ್ದೇಶಿಸಿದ ದಾರಿಯಲ್ಲಿ ಸಾಗಿ, ಅವರ ತತ್ವಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ನಮ್ಮ ಸಮಾಜದ ಕಲ್ಯಾಣ ಸಾಧ್ಯ.
ಪೂಜ್ಯ ಕುಮಾರೇಶರು ಋಣದ ಬಗೆಗೆ ಮಾಡಿಕೊಂಡಿದ್ದ ಪರಿಕಲ್ಪನೆಯೇ ಅದ್ಭುತವಾದುದು. ಋಣದ ಕಲ್ಪನೆ- ಪರಿಕಲ್ಪನೆಗಳಿಲ್ಲದೆ, ಯಾವುದೇ ಗೊತ್ತುಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವಜನಾಂಗವನ್ನು ಕಂಡರೆ ಕನಿಕರ ಪಡಬೇಕಾಗುತ್ತದೆ. ಯಾವ ಜವಾಬ್ದಾರಿಯೂ ಇಲ್ಲದ ಇಂದಿನ ಯುವಕರಿಗೆ ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ. ತಮ್ಮ ತುಂಬು ತಾರುಣ್ಯದಲ್ಲಿಯೇ ಎಲ್ಲ ರೀತಿಯ ಹೊಣೆಗಾರಿಕೆಯನ್ನು ನಿರ್ವಹಿಸತೊಡಗಿದ್ದ ಕುಮಾರೇಶರ ಋಣಮುಕ್ತ ಬದುಕು, ಯುವಕರಿಗೆ ಅನುಕರಣೀಯ ಆದರ್ಶ; ವಿರಕ್ತರಿಗೆ ಆದರ್ಶ ಮಾರ್ಗದರ್ಶಿ, ತಾಯಿ-ತಂದೆ-ಗುರು-ಧರ್ಮ-ಸಮಾಜಗಳ ಋಣವನ್ನು ಅರಿತು, ಅರ್ಥಪೂರ್ಣವಾಗಿ ತೀರಿಸಿದ ಕುಮಾರೇಶರ ರೀತಿಯಂತೂ ಹೊಸಪೀಳಿಗೆಯ ನವಯುವಕರಿಗೆ ವಿಶೇಷ ಮಾದರಿ, ಒಬ್ಬರ ಋಣದಾಗ ಇರಬಾರದು, ಋಣಗೇಡಿಯಾಗಿ ಹೋಗಬಾರದು’ ಎಂಬ ಜನಪದರ ಮಾತು ಕೂಡ ಋಣವಿಮುಕ್ತಿಯ ಸಂದೇಶವನ್ನೇ ನೀಡುತ್ತದೆ:
೧೮೬೭ರಿಂದ ೧೯೩೦ರ ವರೆಗೆ ಅರವತ್ತೂರು ವರ್ಷ, ಸಾರ್ಥಕ ಬದುಕನ್ನು ಬದುಕಿ, ‘ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು’ ಎಂಬಂತೆ ಶಿವಯೋಗಿಗಳಾಗಿ, ಕಾಯಕಯೋಗಿಗಳಾಗಿ, ಸಮಾಜದ ಉದ್ಧಾರಕ್ಕಾಗಿ ದಣಿವರಿಯದೆ ದುಡಿದು, ತಮ್ಮ ಬದುಕನ್ನೇ ಸಮಾಜಕ್ಕಾಗಿ ಮುಡಿಪಿಟ್ಟು ಸಮಾಜ ಸಂಜೀವಿ’ ಯೆನಿಸಿದರು. ಅನ್ವರ್ಥಕವಾಗಿಯೂ, ಸಾರ್ಥಕವಾಗಿಯೂ ಋಣಮುಕ್ತರೆನಿಸಿದರು.