ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
ಬ್ರಹ್ಮವೊಂದೆ ಪರಮಸತ್ಯ. ಆ ಪರಮಸತ್ಯವನ್ನು ಅಭೇದಭಾವದಿಂದ ಅನುಭವಿಸುವವರೇ ಬ್ರಹ್ಮಜ್ಞಾನಿಗಳು. ಎಲ್ಲರೂ ಬ್ರಹ್ಮಜ್ಞಾನಿಗಳಾಗಲು ಸಾಧ್ಯವಿಲ್ಲ. ಬ್ರಹ್ಮಜ್ಞಾನಿಯಾಗಬೇಕಾದರೆ ತನುವಿನ ವ್ಯಾಮೋಹವನ್ನು ಕೈಬಿಡಬೇಕು. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಬೇಕು. ಭಾವಗತವಾದ ಅಹಂಕಾರವನ್ನು ಇಲ್ಲವಾಗಿಸಬೇಕು. ದೇಹ, ಮನ, ಬುದ್ಧಿ, ಪ್ರಾಣಗಳು ನಾನಲ್ಲವೆಂಬ ವಿಮಲಜ್ಞಾನವನ್ನು ಹೊಂದಬೇಕು. ಇಂಥವರು ದೇಹವೆ ನಾನೆಂಬ ಭ್ರಮೆಯಿಂದ ಮುಕ್ತರಾಗಿ ಪರಬ್ರಹ್ಮದ ಅರಿವಿನ ಕಳೆಯ ಆತ್ಮವೆಂದರಿತು ಪರಬ್ರಹ್ಮದೊಡನೆ ತಾದಾತ್ಮ ಹೊಂದಿ ಬ್ರಹ್ಮಾನಂದವನ್ನು ಅಂದರೆ ಪರಮಸುಖವನ್ನು ಸದಾ ಅನುಭವಿಸುತ್ತಾರೆ.
ಜನಸಾಮಾನ್ಯರಿಗೆ ಅಹಂಭಾವವನ್ನು ಅಳಿಯುವುದು, ದೇಹಗುಣ ಅಭಿಮಾನವನ್ನು ತ್ಯಜಿಸುವುದು ಕಷ್ಟವಾಗುತ್ತದೆ. ದೇಹವೆ ನಾನೆಂಬ ಅಭಿಮಾನ ಹಾಗು ಭೌತಿಕ ವಿಷಯಗಳೇ ಸುಖದ ನೆಲೆ ಎಂಬ ಭಾವನೆ ಹೊಂದಿದ ಅವರಿಗೆ ಪರವಸ್ತುವೆ ತಾವೆಂಬ ಅರಿವು ಸಾಧ್ಯವಾಗುವುದಿಲ್ಲ. ಬದುಕಿನುದ್ದಕ್ಕೂ ವಿಷಯಗಳ ಹಿಂದೆ ಹರಿಯುವ ಅವರು ಭವಬಂಧನದಲ್ಲಿ ಸಿಕ್ಕು ಸದಾ ದುಃಖವನ್ನನುಭವಿಸುತ್ತಾರೆ. ಇಂಥವರು ಯೋಗ್ಯ ಗುರುವನ್ನಾಶ್ರಯಿಸಿ ತಮ್ಮ ತನು ಮನ ಭಾವಗಳನ್ನು ಶಿವನಿಗೆ ಸಮರ್ಪಿಸಿ ಸಾಧನಾ ಪಥದಲ್ಲಿ ಮುಂದುವರೆದಾಗ ದೇವನ ಅರಿವು ಕೊನೆಗೆ ತಾನೇ ದೇವರೆಂಬ ಅರಿವು ಸಾಧ್ಯವಾಗುತ್ತದೆ. ಈ ಸಾಧನಾಪಥವೇ ಸುಖದ ಮಾರ್ಗ. ಈ ಮಾರ್ಗದಲ್ಲಿ ಮುನ್ನಡೆದವರು ಭವಬಂಧನದಿಂದ ಮುಕ್ತರಾಗುತ್ತಾರೆ.
ಸಮಾಜದಲ್ಲಿ ಮಿಥ್ಯಾಜ್ಞಾನಿಗಳಿಗೂ ಕೊರತೆ ಏನಿಲ್ಲ. ಅವರು ಬ್ರಹ್ಮವನ್ನರಿಯದಿದ್ದರೂ ಮಾತಿನ ಬ್ರಹ್ಮವನಾಡುವವರು. ಶಬ್ದಜಾಲದೊಳಗೆ ಬದುಕು ಸಾಗಿಸುವ ಇವರು ಲೌಕಿಕ ವಿಷಯಗಳಿಂದ ವಿಮುಖರಾದವರಲ್ಲ. ಅಜ್ಞಾನವನ್ನು ಕಳೆದುಕೊಂಡು ನಿಜಜ್ಞಾನಿಗಳಾಗಬೇಕೆಂದು ಬಯಸುವವರೂ ಅಲ್ಲ. ‘ಅಹಂ ಬ್ರಹ್ಮಾಸ್ಮಿ’ ‘ನಾನೇ ಬ್ರಹ್ಮ’ ಎಂದು ಹೇಳುತ್ತ ಗಾಢಭ್ರಮೆಯೊಳಗಿರುವ ಇಂಥವರನ್ನು ಕುರಿತು ಹೇಳುವ ಕತೆಯೊಂದು ಹೀಗಿದೆ: ಬ್ರಹ್ಮವನ್ನರಿಯದಿದ್ದರೂ ಬ್ರಹ್ಮವನ್ನರಿತಿರುವೆ ಎಂದು ಹೇಳುತ್ತಿದ್ದ ಮಿಥ್ಯಾಜ್ಞಾನಿಯೊಬ್ಬ ‘ಅಹಂ ಬ್ರಹ್ಮಾಸ್ಮಿ’ ಎಂದು ಹೇಳುತ್ತ ರಸ್ತೆಯಲ್ಲಿ ನಡೆದು ಹೊರಟಿದ್ದ. ಅದೇ ರಸ್ತೆಯಲ್ಲಿ ಎದುರಿನಿಂದ ಮದವೇರಿದ ಆನೆಯೊಂದು ಬರುತ್ತಿತ್ತು. ಅದರ ಮಾವುತ ‘ಆನೆಗೆ ಮದವೇರಿದೆ. ರಸ್ತೆಯಲ್ಲಿ ಎದುರಿನಿಂದ ಬರುವವರು ದೂರ ಸರಿಯಬೇಕೆಂದು ಕೂಗಿ ಕೂಗಿ ಹೇಳುತ್ತಿದ್ದ. ಆದರೆ ಈ ಮಿಥ್ಯಾಜ್ಞಾನಿ ‘ನಾನು ಬ್ರಹ್ಮನಿದ್ದೇನೆ. ಆನೆಯೂ ಬ್ರಹ್ಮವಿದೆ ಈ ಆನೆ ನನಗೇನು ಮಾಡುತ್ತದೆ?’ ಎಂದು ದುರಹಂಕಾರದಿಂದ ಮಾವುತನ ಮಾತನ್ನು ಲೆಕ್ಕಿಸದೇ ಮುಂದುವರೆದ. ಆಗ ಮದೋನ್ಮತ್ತ ಆನೆ ತನ್ನ ಸೊಂಡಿಲಿನಿಂದ ಈ ದುರಹಂಕಾರಿಯನ್ನು ಎತ್ತಿ ಒಗೆಯಿತು. ಪೆಟ್ಟು ತಿಂದ ಮಿಥ್ಯಾಜ್ಞಾನಿ ಶ್ರೀ ರಾಮಕೃಷ್ಣ ಪರಮಹಂಸರಲ್ಲಿಗೆ ಬಂದು ಬ್ರಹ್ಮನಾದ ನನಗೆ ಹೀಗೇಕಾಯಿತು ಎಂದು ಕೇಳಿದ. ಆಗ ರಾಮಕೃಷ್ಣರು ಇವನ ಅಜ್ಞಾನಕ್ಕೆ ನಕ್ಕು “ನೀನೇನೊ ಬ್ರಹ್ಮ ಸರಿ. ಆದರೆ ಎದುರಿನಿಂದ ಕೂಗಿ ಹೇಳುತ್ತಿದ್ದ ಮಾವುತನೂ ಒಬ್ಬ ಬ್ರಹ್ಮ ಎಂಬುದನ್ನು ಏಕೆ ಅರಿಯಲಿಲ್ಲ.?’ ಎಂದಾಗ ತನ್ನ ಅಜ್ಞಾನಕ್ಕೆ ತಾನೇ ನಾಚಿ ತಲೆ ತಗ್ಗಿಸಿದ.
ಬರೀ ಶಾಸ್ತ್ರಾಧ್ಯಯನ ಮಾಡಿದವರು ಎಂದೂ ಬ್ರಹ್ಮಜ್ಞಾನಿಗಳಾಗುವುದಿಲ್ಲ. ಬ್ರಹ್ಮವನ್ನರಿತವರು ಸುಮ್ಮನಾಗಿರಬೇಕು. ಬಾಹ್ಯದಲ್ಲಿ ಎಂದೂ ತಮ್ಮ ಬ್ರಹ್ಮದ್ವೈತವನ್ನು ಬಳಸಬಾರದು. ಅಂತೆಯೇ ನಿಜಗುಣರು ‘ಬಳಸದಿರದ್ವೈತವನು ಬಾಹ್ಯದಲ್ಲಿ ನಿನ್ನೊಳಗೇಕೋ ಭಾವನೆಯೊಡಗೂಡು’ ಎಂದು ಸ್ಪಷ್ಟಪಡಿಸಿದ್ದಾರೆ. ಬ್ರಹ್ಮಜ್ಞಾನವನ್ನರಿತವರು ಸತ್ತು ಸ್ವರ್ಗ ಸೇರಬೇಕೆಂದೇನೂ ಅಲ್ಲ. ಅವರು ಬ್ರಹ್ಮವನ್ನರಿತೂ ನಮ್ಮ ಮಧ್ಯದಲ್ಲಿ ಇರಬಲ್ಲರು. ಅವರೇ ಜೀವನ್ಮುಕ್ತರು, ಕಾಯವನ್ನೇ ಕೈಲಾಸವಾಗಿಸಿಕೊಂಡ ಪುಣ್ಯಪುರುಷರು.