ಇವೆರಡು ಪರಸ್ಪರ ಪೂರಕವಾದವು, ಪ್ರೇರಕವಾದವು. ಒಂದು ಒಳಮ್ಮೆ ಇನ್ನೊಂದು ಹೊರಮೈ, ಎರಡು ಸೇರಿ ಒಮ್ಮೈ, ಒಂದನ್ನು ಬಿಟ್ಟು ಇನ್ನೊಂದು ಶೋಭಿಸುವಂತಿಲ್ಲ. ಇವೆರಡು ಸುಂದರ ಸಮನ್ವಯ ಸೃಷ್ಟಿ, ವೀರಶೈವರ ವಿಶಿಷ್ಟ ಸೃಷ್ಟಿ.
ಈ ಪೂರ್ಣವಾದ ಸಾರವಾದ ವಿಚಾರವನ್ನು ತಿಳಿದು ತಮ್ಮಲ್ಲಿ ಇವೆರಡನ್ನು ಅಳವಡಿಸಿಕೊಂಡ ಮಹಾನುಭಾವರೆಂದರೆ ಬಸವಣ್ಣನವರ ನಂತರ ಹಾನಗಲ್ಲ ಕುಮಾರ ಸ್ವಾಮಿಗಳವರೊಬ್ಬರೆ ! ದಾಸೋಹಂಭಾವದಿಂದಿರುವವರಲ್ಲಿ ದಾಸೋಹ ಸೇವೆಯ ಅಭಾವ, ದಾಸೋಹ ಸೇವೆಯನ್ನು ನಡೆಸುವವರಲ್ಲಿ ದಾಸೋಹಂಭಾವದ ಕೊರತೆ, ಎರಡನ್ನು ಸಮನ್ವಯವಾಗಿ ಸಮನಿಸಿಕೊಂಡವರು ಅತ್ಯಂತ ಅಪರೂಪ. ಇಲ್ಲೆಂದರೆ ಆಗದು ಅಪಲಾಪ.
‘ಎನಗಿಂತ ಕಿರಿಯರಿಲ್ಲ’ ಎಂಬ ಬಸವಣ್ಣನವರ ಜೀವಾಳದ ಅಮೃತೋಕ್ತಿಯನ್ನು ಚಾಚು ತಪ್ಪದೆ ತ್ರಿಕರಣಗಳಿಂದ ನಡೆಸಿಕೊಂಡು ಬಂದರು ಸ್ವಾಮಿಗಳವರು. ಅವರಿಗೆ ತಾವು ಹಿರಿಯರೆಂಬ ಭಾವನೆ ಕನಸಿನಲ್ಲಿಯು ಕಾಣಿಸಿಕೊಳ್ಳಲಿಲ್ಲ. ಅವರು ತಮ್ಮ ದಾಸೋಹಂಭಾವವನ್ನು ನುಡಿಗಿಂತ ಹೆಚ್ಚು ನಡೆಯಲ್ಲಿಯೆ ತೋರುತ್ತಿದ್ದರು. ಈ ವಿಷಯದಲ್ಲಿ ಅವರದು ‘ಕ್ರಿಯಾಕೇವಲ ಮುತ್ತರಂʼʼ
ಶ್ರೀಗಳವರಿಗೆ ತಾವು ಸ್ವಾಮಿಗಳೆಂಬ ಸ್ವಾಭಿಮಾನವಿರಲಿಲ್ಲ. ಸಭೆ ಸಂಸ್ಥೆಗಳ ಸ್ಥಾಪಕರೆಂಬ ಸ್ವಾಹಂಕಾರವಿರಲಿಲ್ಲ. ಒಮ್ಮೆ ಬಳ್ಳಾರಿಯಲ್ಲಿ ವೀರಶೈವ ಮಹಾಸಭೆಯು ಆರಂಭವಾಗುವ ಮೊದಲು ಆದಾರೋ ವಿಷಬೀಜ ಬಿತ್ತಿದರು. ಜರಗಬೇಕಾದ ಸಭೆಯ ಮೂಲಕ್ಕೆ ಕೊಡಲಿ ಏಟು ಹಾಕಿದರು. ಪರಸ್ಪರ ವೈಮನಸ್ಸಿನಿಂದ ಸಭೆಯ ನಿಲ್ಲುವ ಪ್ರಸಕ್ತಿ ಪ್ರಾಪ್ತವಾಯಿತು, ಆಗ ಸ್ವಾಮಿಗಳವರು ಪ್ರತಿಯೊಬ್ಬ ಗಣ್ಯ ಗೃಹಸ್ಥರ ಮನೆಗಳಿಗೆ ಪಾದಚಾರಿಗಳಾಗಿ ಪ್ರಸಾದದ ಹಂಗಿಲ್ಲದೆ ಹತ್ತಾರು ಸಲ, ನೂರಾರು ಸಲ ತಿರುಗಾಡಿ ತಿಳಿಹೇಳಿ ಎಲ್ಲರ ಹೃದಯಗಳನ್ನು ತಿಳಿಗೊಳಿಸಿದರು. ಸಭೆಯು ಸಾಂಗವಾಗಿ ಸಾಗುವಂತೆ ಮಾಡಿದರು. ಅವರ ದಾಸೋಹಂಭಾವಕ್ಕೆ ಇಂತಹ ಅನೇಕ ಉದಾಹರಣೆಗಳನ್ನು ಉದಹರಿಸಬಹುದು.
ತಾವು ಸ್ವತಃ ಸತ್ಪುರುಷರಾಗಿದ್ದರು ಶಿವಯೋಗಿಗಳಾಗಿದ್ದರು ತಮ್ಮಲ್ಲಿ ಆ ಭಾವನೆ ಅವರಿಗೆ ಎಳ್ಳಷ್ಟು ಇರಲಿಲ್ಲ. ಬೇರೆ ಬೇರೆ ಊರುಗಳಲ್ಲಿ ಯಾರಾದರು ಸತ್ಪುರುಷರಿದ್ದರೆ ಶಿವಯೋಗಿಗಳಿದ್ದರೆ ಅವರ ದರ್ಶನಕ್ಕೆ ದಯಮಾಡಿಸುತ್ತಿದ್ದರು. ಅಲ್ಲಿ ದಾಸೋಹಂಭಾವದಿಂದ ವರ್ತಿಸುತ್ತಿದ್ದರು. ‘ವಿನಮಿತನಹುದರಿಂದುಪಚಾರಮುಂಟೆ?” ಎಂಬ ನುಡಿಯನ್ನು ಸಾವಿರ ಪಾಲಿಗು ಸಾರ್ಥಕಗೊಳಿಸುತ್ತಿದ್ದರು.
ಸಾಧು ಮಾರ್ಗದಲ್ಲಿರುವವರನ್ನು ಕಂಡು ಅವರ ಸಂತೋಷ ಉಕ್ಕಿಬರುತ್ತಿತ್ತು. ಕುತೂಹಲ ಕೆರಳಿ ಬರುತ್ತಿತ್ತು. ಅವರನ್ನು ಕಾಣದೆ ಅವರಿಗೆ ತೃಪ್ತಿಯಿರುತ್ತಿರಲಿಲ್ಲ. ವಿನಯದಿಂದ ಅವರ ಗುಣವರ್ಣನೆಯಿಂದ ನೆನವಿನಿಂದ ಕಾಯವಾಙ್ಮನ ಸೇವೆಗಳನ್ನು ನಿರಪೇಕ್ಷೆಯಿಂದ ನಿರ್ಮಲ ಹೃದಯದಿಂದ ಸಮರ್ಪಿಸುತ್ತಿದ್ದರು.
ಒಮ್ಮೆ ಅಥಣಿ ಶಿವಯೋಗಿಗಳ ದರ್ಶನಕ್ಕೆ ದಯಮಾಡಿದ್ದರು. ಕಾಯಮನ ಸೇವೆಗಳೊಡನೆ ಎಂದಿಗೂ ಕಾಣಬರುವ ವಾಣಿ ಸೇವೆಯನ್ನು ಅವರಲ್ಲಿ ಸಲ್ಲಿಸಿದ್ದಾರೆ.
“ಮಂಗಳಾರತಿ ದೇವಗೆ ಶಿವಯೋಗಿಗೆ
ಕಂಗಳಾಲಯ ಸಂಗಗೆ II
ಜಂಗಮಲಿಂಗ ಭೇದದ ಸ್ವಯ ಚರಪರ
ಇಂಗಿತವರುಪಿದಂತಾಚರಿಸಿದ ಮಹಿಮಗೆ||ʼʼ
ಇದು ಅವರ ದರ್ಶನಕ್ಕೆ ದಯಮಾಡಿಸಿದಾಗ ಅವರ ಮೇಲೆ ಕಟ್ಟಿ ಹಾಡಿದ ಹಾಡಿಸಿದ ಮಂಗಳಾರತಿ, ಹೃದಯವುಕ್ಕಿದಾಗ ವಾಣಿಯು ಉಕ್ಕುವುದು ಅವರದೊಂದು ಸುಸ್ವಭಾವ. ಅದಕ್ಕೆ ಅವಕಾಶ ಕಲ್ಪಿಸಿಕೊಳ್ಳುತ್ತಿರಲಿಲ್ಲ. ಸಾಹಸದಿಂದ ಶಬ್ದಗಳನ್ನು ಸೆರೆಹಿಡಿದು ತಂದು ಪವಣಿಸುತ್ತಿರಲಿಲ್ಲ. ಹೃದಯದಿಂದ ಹುಟ್ಟಿ ಹೃದಯದಿಂದ ನಿರರ್ಗಳವಾಗಿ ಹೊರಹೊಮ್ಮುತ್ತಿತ್ತು. ಈ ಪದ್ಯವು ಅಷ್ಟೇ, ಅದರಿಂದಾಗಿ ಅರ್ಥ ಪೂರ್ಣವಾಗಿದೆ. ಶಿವಯೋಗಿಗಳವರ ಜೀವನ ಸಾರವನ್ನು ಸೂರೆಗೊಂಡಿದೆ. ಪಲ್ಲವಿಯಲ್ಲಿ ಪಲ್ಲವಿಸಿದ ಸ್ವಯ ಚರ ಪರ ಜಂಗಮ ವಿವರಣೆಯನ್ನು ಮುಂದಿನ ಪದಗಳಲ್ಲಿ ಸ್ವಾರಸ್ಯವಾಗಿ ಸಹಜಾರ್ಥವಾಗಿ ಬಿತ್ತರಿಸಿದ್ದಾರೆ.
ಮುಖಸ್ತುತಿಗಾಗಿ ಅವರು ಬಣ್ಣಿಸುತ್ತಿರಲಿಲ್ಲ. ಅದು ಅವರ ಹತ್ತಿರಕ್ಕೆ ಸುಳಿಯುತ್ತಿರಲಿಲ್ಲ. ಮುಖಸ್ತುತಿಗಾಗಿ ಯಾವಜೀವವು ಎಲ್ಲಿಯು ಅವರು ಮನಸ್ಸು ಮಾಡಿದವರಲ್ಲ. ಇದು ತಮಗು ಇಷ್ಟವಿರಲಿಲ್ಲ. ಇನ್ನೊಬ್ಬರ ವಿಷಯದಲ್ಲಿಯು ತಾವು ಮಾಡುತ್ತಿರಲಿಲ್ಲ.
ಎಡೆಯೂರು ತೋಂಟದಾರ್ಯರ ಸೊನ್ನಲಾಪುರ ಸಿದ್ಧರಾಮೇಶ್ವರರ ಗದ್ದುಗೆಗಳ ದರ್ಶನಕ್ಕೆ ದಯಮಾಡಿದಾಗಲು ಸ್ವಾಮಿಗಳು ವಾಣಿಸೇವೆಯನ್ನು ಪದ್ಯಗಳ ಮುಖಾಂತರ ಸಲ್ಲಿಸಿದ್ದಾರೆ. ಇದರಿಂದಾಗಿ ಅವರು ಮುಖಸ್ತುತಿ ಪರರಲ್ಲ ಎಂಬುದು ವ್ಯಗ್ಗಳವಾಗುತ್ತದೆ. ಸ್ವಾಮಿಗಳವರ ದಾಸೋಹಂಭಾವ ಆಳವಾದುದು ಅಪಾರವಾದುದು ಅದನ್ನು ಅಳೆಯಲು ನಮ್ಮಂಥವರಿಂದ ಸಾಧ್ಯವಿಲ್ಲ.
ಇನ್ನು ಅವರ ದಾಸೋಹ ಸೇವೆಗೆ ಶಿವಯೋಗ ಮಂದಿರವೆ ಒಂದು ದೊಡ್ಡ ನಿದರ್ಶನ. ಅಲ್ಲಿ ಒಂದು ದೊಡ್ಡ ದಾಸೋಹವನ್ನು ಏರ್ಪಡಿಸಿ ಅಲ್ಲಿನ ಕೆಲಸಗಾರರಲ್ಲದೆ ಪ್ರತಿ ದಿನವು ಪರಸ್ಥಳಗಳಿಂದ ಬರುತ್ತಿರುವ ನೂರಿನ್ನೂರು ಜನ ಅತಿಥಿ ಅಭ್ಯಾಗತರಿಗೆ ಪ್ರಸಾದ ವಿನಿಯೋಗ ಕೊರತೆಯಿಲ್ಲದೆ ನಡೆಯುತ್ತಿತ್ತು. ನಡೆಯುತ್ತಿದೆ. ಆ ದಾಸೋಹದಲ್ಲಿ ದೊಡ್ಡವರು ಚಿಕ್ಕವರು ಧನಿಕರು ದರಿದ್ರರು ಎಂಬ ಭೇದಭಾವವಿಲ್ಲ. ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಪ್ರಸಾದದ ಏರ್ಪಾಡಿಲ್ಲ, ಇದು ನಿಜವಾದ ದಾಸೋಹ ಸೇವೆ