ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.
ಪುತ್ರ ಕೇಳೀ ಲಿಂಗ | ಶ್ರೋತ್ರಾದಿ ಇಂದ್ರಿತನ್
ಮಾತ್ರೆಯ ಸುಜ್ಞಾನ-ಮಾತ್ರದೊಳರಿ ಎಂದಾ
ಧಾತ್ರೀಶ ಗುರುವೆ ಕೃಪೆಯಾಗು ||೧೫೮||
ಕರ್ಮೇಂದ್ರಿಯಗಳಲ್ಲಿ ಇಷ್ಟ (ಕ್ರಿಯಾ) ಲಿಂಗ ಸಂಬಂಧವನ್ನು ತೋರಿಸಿ ಈಗ ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗದ ಸಂಬಂಧವನ್ನು ತಿಳಿಸುತ್ತಾನೆ.
ಜ್ಞಾನೇಂದ್ರಿಯಗಳಿಗೆ ಧರ್ಮೆಂದ್ರಿಯಗಳೆಂತಲೂ ಹೆಸರು. ಈ ಜ್ಞಾನೇಂದ್ರಿಯಗಳು ಅಗ್ನಿತತ್ತ್ವದಿಂದ ಜನಿಸಿದವುಗಳು. ಅರ್ಥಾತ್ ಅಗ್ನಿಯ ಪಂಚೀಕರಣದಿಂದ ಪ್ರಕಟ ಗೊಂಡಿವೆ. ಶ್ರೋತ್ರ, ತ್ವಕ್, ನೇತ್ರ, ಜಿಹ್ವೆ, ಘಾಣಗಳೇ ಪಂಚಜ್ಞಾನೇಂದ್ರಿಯಗಳು. ಪಂಚೀಕೃತ ಅಗ್ನಿಯ ಅರ್ಧಭಾಗವೇ ನೇತ್ರ. ಉಳಿದ ಅರ್ಧಭಾಗದ ಅಗ್ನಿಯಲ್ಲಿ ಸೇರಿದ ಕಾಲುಭಾಗದ (೧/೮ನೇ ಭಾಗ) ಅಕಾಶ ತತ್ತ್ವವೇ ಶ್ರೋತ್ರ. ಕಾಲುಭಾಗದ (೧/೮) ವಾಯುವೇ ತ್ವಕ್ಕು. ಅಪ್ಪುವಿನ (೧/೮) ಪಾದಾಂಶವೇ ಜಿಹ್ವೆ. ಪೃಥ್ವಿಯ ಕಾಲು (೧/೮) ಭಾಗವೇ ನಾಶಿಕವಾಗಿದೆ. ಈ ಪಂಚಜ್ಞಾನೇಂದ್ರಿಯಗಳಿಗೆ ಪಂಚನ್ಮಾತ್ರೆಗಳು ಸಮರ್ಪಿತವಾಗುತ್ತವೆ. ಪಂಚತನ್ಮಾತ್ರೆಗಳು ಪಂಚೀಕೃತ ಜಲದ ಪಂಚ ಅಂಶಗಳು ಶಬ್ದ ಸ್ಪರ್ಶ, ರೂಪ, ರಸ, ಗಂಧಗಳೇ ಪಂಚತನ್ಮಾತ್ರೆಗಳೆನಿಸಿವೆ. ಪಂಚಜ್ಞಾನೇಂದ್ರಿಗಳಿಗೆ ಪಂಚತನ್ಮಾತ್ರೆಗಳು ಸಮರ್ಪಿತವಾಗುವಲ್ಲಿಯೇ ಸುಜ್ಞಾನದಿಂದ ಪ್ರಾಣಲಿಂಗ ಸಂಬಂಧವನ್ನು ಮಾಡಬೇಕು. ಇಂದ್ರಿಯಗಳನ್ನು ಲಿಂಗಗಳ್ನಾಗಿ ಗ್ರಹಿಸಿ ತನ್ಮಾತ್ರೆಗಳನ್ನು ಪ್ರಸಾದವನ್ನಾಗಿ ಸ್ವೀಕರಿಸುವ ಸುಜ್ಞಾನದ ಕಲೆಯನ್ನು ಕರಗತಮಾಡಿಕೊಳ್ಳುವದೇ ಪ್ರಾಣಲಿಂಗ ಧಾರಿಯ ಕರ್ತವ್ಯವಾಗಿದೆ.
ದೇಹವು ಕಣ್ಣಿಗೆ ಕಾಣಿಸುತ್ತದೆ. ಅದು ಸ್ಥೂಲವಾಗಿದೆ. ಆದರೆ ದೇಹದಲ್ಲಿಯ ಪ್ರಾಣ ಕಾಣಿಸುವದಿಲ್ಲ. ಅದು ಸೂಕ್ಷ್ಮವಾದುದು. ಕರ್ಮೆಂದ್ರಿಯಗಳು ಕಾರ್ಯ ಮಾಡುವುದೆಲ್ಲ ಸ್ಪಷ್ಟವಾಗುತ್ತದೆ. ಜ್ಞಾನೇಂದ್ರಿಯಗಳು ಕಾರ್ಯಗೈಯುವದು ಗೋಚರಿಸುವದಿಲ್ಲ. ಜ್ಞಾನೇಂದ್ರಿಯಗಳು ಕಣ್ಣಿಗೆ ಕಂಡರೂ ಅವುಗಳ ಜ್ಞಾನೇಂದ್ರಿಯತ್ವವು ಕಾಣಿಸುವದಿಲ್ಲ. ಅದು ಅನುಭವದಿಂದಲೇ ವೇದ್ಯವಾಗುತ್ತದೆ. ಉದಾಹರಣೆಗಾಗಿ ಕಿವುಡನಿಗೆ ಕಿವಿಗಳಿರುತ್ತವೆ. ಆದರೆ ಅವನಿಗೆ ಯಾವ ಶಬ್ದವೂ ಕೇಳಿಸುವದಿಲ್ಲ. ಶೀತ ಬಾಧೆಯಾದವನಿಗೆ ಮೂಗಿದ್ದರೂ ವಾಸನೆ ಬರುವದಿಲ್ಲ. ಜ್ವರ ಬಂದವನಿಗೆ ನಾಲಿಗೆಯಿದ್ದರೂ ರುಚಿಸುವುದಿಲ್ಲ, ಶರೀರವು ಮರಗಟ್ಟಿದಾಗ ಯಾವುದೇ ತರಹದ ಸ್ಪರ್ಶ ತಿಳಿಯುವದಿಲ್ಲ. ಯಾಕೆಂದರೆ ಪದಾರ್ಥಗಳನ್ನು ಗ್ರಹಿಸುವ ಇಂದ್ರಿಯವು ಸೂಕ್ಷ್ಮವಾಗಿರುತ್ತದೆ, ಮತ್ತು ಅಲ್ಲಿ ಜ್ಞಾನಪೂರ್ವಕವಾದ ಗ್ರಹಿಕೆಯಾಗಬೇಕು. ಬೇರೊಂದು ಕಡೆ ಲಕ್ಷ್ಯವಿರುವ ವ್ಯಕ್ತಿಯು ಬೇರೊಬ್ಬನಿಂದ ಹೇಳಿದ ಮಾತನ್ನು ಕೇಳಲಾರನು, ಶಬ್ದಗಳು ಕಿವಿಗೆ ಬಿದ್ದರೂ ಅರ್ಥವಾಗುವದಿಲ್ಲ. ಉಂಡರೂ ಭೋಗಿಸಿದ ಪ್ರಸಾದವು ತೃಪ್ತಿಯನ್ನು ನೀಡಲಾರದು. ಆದುಕಾರಣ ಗುರುನಾಥನು ಇಲ್ಲಿ ಎಚ್ಚರಿಸಿದ್ದಾನೆ. –
“ ಶ್ರೋತ್ರಾದಿ ಇಂದ್ರಿತನ್ಮಾತ್ರೆಯ ಸುಜ್ಞಾನ ಮಾತ್ರದೊಳರಿ’ ಎಂದು.
ಪ್ರಾಣಲಿಂಗ ಸಂಬಂಧದಲ್ಲಿ ಸುಜ್ಞಾನವೇ ಮುಖ್ಯಸಾಧನವಾಗಿದೆ. ಸುಜ್ಞಾನ ಮಾಧ್ಯಮದಿಂದಲೇ ಸಂಬಂಧವನ್ನು ತಿಳಿಯಬಹುದು. ಹೀಗೆ ಉಪದೇಶಿಸುವ ಗುರು ಸಾಮಾನ್ಯನಲ್ಲ. ಅವನು ಧಾತ್ರೀಶನೆನಿಸಿದ್ದಾನೆ. ಶಿವನು ಬ್ರಹ್ಮಾಂಡ ಜಗದೊಡೆಯ ನಾದರೆ ಗುರುವು ಪಿಂಡಾಂಡ-ಜಗದೊಡೆಯನಾಗಿದ್ದಾನೆ. ಪಿಂಡಾಂಡದ ಸಕಲ ವಿಜ್ಞಾನ ಗುರುವಿಗೆ ವೇದ್ಯವಾದುದು. ಓ ಗುರುವೇ ! ಕೃಪೆಯಿಟ್ಟು ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗವನ್ನು ಸಂಬಂಧಗೊಳಿಸು. ಪ್ರಾಣಲಿಂಗದೊಳಗಿನ ಷಡ್ಲಿಂಗದರಿವನ್ನು ದಯಪಾಲಿಸು.
ನಾಸಿಕೇಂದ್ರಿಯದಿ ಸ | ದ್ವಾಸನೆಯ ಕೊಂಬುದು –
ಲ್ಲಾ ಸದಾಚಾರ – ವಾ ಸಲ್ಲಿಂಗವೆಂದುಪ
ದೇಶಿಸಿದ ಗುರುವೆ ಕೃಪೆಯಾಗು ||೧೫೯||
ಪೃಥ್ವಿತತ್ತ್ವದ ನಾಶಿಕ (ಮೂಗು)ವು ವಾಸನೆಯನ್ನು ಸ್ವೀಕರಿಸುತ್ತದೆ. ನಾಶಿಕೇಂದ್ರಿಯವೇ ಆಚಾರಲಿಂಗಕ್ಕೆ ಆಶ್ರಯ. ಮೂಗು ಯಾವುದೇ ವಾಸನೆಯನ್ನು ವಾಸಿಸುವದು ಸಹಜ. ಅದು ಅದರ ಪ್ರಕೃತಿ ಧರ್ಮ. ಈ ಪ್ರಾಕೃತಿಕ ಧರ್ಮವನ್ನು ಕಳೆಯಬೇಕಾದರೆ ಭಕ್ತನಾದವನು ಇದು ನಾಸಿಕವೆಂದು ಭಾವಿಸದೇ ಆಚಾರಲಿಂಗ ವೆಂದು ಗ್ರಹಿಸಬೇಕು. ಮೂಗಿನಿಂದ ಸ್ವೀಕರಿಸಲ್ಪಡುವ ಗಂಧವನ್ನು ಪದಾರ್ಥವೆಂದು ತಿಳಿಯದೇ ಅದನ್ನು ಗಂಧಪ್ರಸಾದವೆಂದು ಗ್ರಹಿಸಬೇಕು. ಯಾವುದೇ ವಾಸನೆಯನ್ನು ಆಚಾರಲಿಂಗದ ಸ್ಮರಣೆಮಾಡಿ ಗಂಧಪ್ರಸಾದವನ್ನಾಗಿ ಸ್ವೀಕರಿಸಬೇಕು. ಇದರಿಂದ
ಗಂಧದ ಪೂರ್ವಾಶ್ರಯವು ಅಳಿಯುವದು. ಪ್ರಾಸಾದಿಕ ಭಾವನೆಯು ಮನದಲ್ಲಿ ಬೆಳೆಯುವದು. ಗಂಧಗಳು ಭಿನ್ನವಾಗಿದ್ದರೂ ಪ್ರಸಾದವೆಂದೇ ಸ್ವೀಕರಿಸುವದರಿಂದ ಅದರ ಬಾಧೆಯಾಗುವದಿಲ್ಲ. ಮೋಹಕ ಗಂಧವೇ ಆಗಿದ್ದರೂ ಲಿಂಗಮುಖವಾಗಿ ಪ್ರಸಾದವನ್ನಾಗಿಸಿ ಸ್ವೀಕರಿಸುವ ವ್ಯಕ್ತಿಗೆ (ಶರಣನಿಗೆ) ಆ ಮೋಹ ಪರಿಣಾಮ ಬೀರದು. ಪ್ರಾಸಾದಿಕಗಂಧವು ಆತ್ಮನನ್ನು ಉಲ್ಲಾಸಗೊಳಿಸುವದು. “ಸುಗಂಧಂ ಪುಷ್ಟಿವರ್ಧನಮ್” ಸುಗಂಧ ದ್ರವ್ಯಗಳ ಪರಿಣಾಮ ದೇಹದಲ್ಲಿ ಪುಷ್ಟಿಯನ್ನು ಹೆಚ್ಚಿಸುವದು. ಈ ದೈಹಿಕ ಉತ್ಸಾಹವನ್ನು ಸಾತ್ವಿಕಗೊಳಿಸುವದೇ ಲಿಂಗತತ್ತ್ವ. ಲಿಂಗವಂತನು ಆಚಾರಲಿಂಗಕ್ಕರ್ಪಿತವಾಗುವ ಸುಗಂಧದಿಂದ ಪುಷ್ಟಿಯನ್ನು ಪಡೆದು ಸದಾಕಾಲವೂ ಪ್ರಾಸಾದಿಕ (ಪ್ರಸನ್ನ) ಗುಣಗಳನ್ನು ಹೊಂದುವನು. ಇಂಥ ಶರಣನಿಗೆ ಯಾವಾಗಲೂ ಬೇಸರವೆಂಬುದು ಇರುವದಿಲ್ಲ ಅವನು ಆಲಸಿಯಾಗುವದಿಲ್ಲ. ಉಲ್ಲಾಸಗೊಳಿಸಬಲ್ಲ ತಥ್ಯವನ್ನು ಹೊಂದಿರುವುದೇ ಆಚಾರಲಿಂಗದ ಕುರುಹು.
ವೀರಶೈವರಲ್ಲಿ ಅರ್ಚನ, ಅರ್ಪಣ ಮತ್ತು ಅನುಭವಗಳು ಬಹಳ ಮುಖ್ಯವಾಗಿವೆ. ಲಿಂಗಾರ್ಚನೆಯಿಂದ ಆತ್ಮಾನುಸಂಧಾನ ಮಾಡಬೇಕು. ಲಿಂಗ ಗುಣಗಳನ್ನು ಪಡೆಯಲು ಲಿಂಗಾರ್ಪಣ ಮಾಡಬೇಕು. ಅರ್ಪಿಸಿದ್ದು ಅನುಭವದಲ್ಲಿ ಅಳವಡಬೇಕು. ಈ ಅರ್ಪಣ ವಿಧಾನವೇ ಪ್ರಸ್ತುತ ಪ್ರಕರಣದಲ್ಲಿ ಸ್ಪುಟಗೊಂಡಿದೆ.
ಷಟ್‌ಸ್ಥಲಜ್ಞಾನಿಗಳಾದ ಚನ್ನಬಸವಣ್ಣನವರು ನಿರೂಪಿಸಿದ “ಮಿಶ್ರಾರ್ಪಣ’ವು ಅತ್ಯಂತ ಮಹತ್ವಪೂರ್ಣವಾದುದು. ಮಿಶ್ರಾರ್ಪಣದ ಅರಿವಿಲ್ಲದೆ ಅಂಗನು ಲಿಂಗನಾಗನು. ಅರ್ಪಣಸದ್ಭಾವವೇ ಚರಮಗುರಿಯಾಗಿದೆ. ಅರ್ಪಣವು ಕಾಯಾರ್ಪಣ, ಕರಣಾರ್ಪಣ, ಮತ್ತು ಭಾವಾರ್ಪಣವೆಂದು ಮೂಬಗೆಯಾಗಿದೆ. ಕ್ರಿಯೆಯಿಂದ ಮಾಡುವದು ಕ್ರಿಯಾರ್ಪಣ, ಜ್ಞಾನದಿಂದ ಗ್ರಹಿಸುವದು ಕರಣಾರ್ಪಣ, ಭಾವದಲ್ಲಿ ಆನಂದಿಸುವದು ಭಾವಾರ್ಪಣ. ಈ ವಿಚಾರವನ್ನು ಮಿಶ್ರಾರ್ಪಣದಿಂದಲೇ ಅವಲೋಕಿಸುವದು ಸೂಕ್ತ.
“ಕಾಯಾರ್ಪಣ : ಕಾಯದ ಕೈಯ ಮುಟ್ಟಿ, ಕ್ರಿಯಾರ್ಪಣವ ಮಾಡುವಾಗ; ಭೋಜ್ಯವಾಚಾರ ಲಿಂಗದಲ್ಲಿ ಪಾನ್ಯ ಗುರುಲಿಂಗದಲ್ಲಿ ಭಕ್ಷ್ಯ ಶಿವಲಿಂಗದಲ್ಲಿ ಚೋಹ್ಯ ಜಂಗಮಲಿಂಗದಲ್ಲಿ ಲೇಹ್ಯ ಪ್ರಸಾದಲಿಂಗದಲ್ಲಿ. ಇವು ಎಲ್ಲರಲ್ಲಿಯ ಅರಿವು ಮಹಾಲಿಂಗದಲ್ಲಿ, ಇಂತೀ ಷಡ್ವಿಧಕಾಯಾರ್ಪಣವಾದಲ್ಲಿ ಮುಂದೆ ಕರಣಾರ್ಪಣದ ಭೇದಮಂ ಪೇಳ್ವೆ.”
‘ಕರಣಾರ್ಪಣ : ನಾಶಿಕದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ನೇತ್ರದಲ್ಲಿ ಶಿವಲಿಂಗ, ತ್ವಕ್ಕಿನಲ್ಲಿ ಜಂಗಮಲಿಂಗ, ಶ್ರೋತ್ರದಲ್ಲಿ ಪ್ರಸಾದಲಿಂಗ, ಹೃದಯದಲ್ಲಿ ಮಹಾಲಿಂಗವು. ಇಂತೀ ಷಡ್ವಧಲಿಂಗಾರ್ಪಣವೆಂತೆಂದೊಡೆ ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ, ಶಿವಲಿಂಗದರಿವು ರೂಪು ಜಂಗಮಲಿಂಗದರಿವು ಸ್ಪರ್ಶನ, ಪ್ರಸಾದಲಿಂಗದರಿವು ಶಬ್ದ ಮಹಾಲಿಂಗದರಿವು ಸರ್ವೆಂದ್ರಿಯ. ಇಂತೀ ಷಡ್ವಧಲಿಂಗಕ್ಕೆ ಮಿಶ್ರಾರ್ಪಣವು”.
ಷಡಂಗಗಳಲ್ಲಿ ಷಡ್ಲಿಂಗಗಳನ್ನು ವಿವರಿಸಿ ಅವುಗಳಿಗಾಗುವ ಪದಾರ್ಥಗಳ ವಿಚಾರವನ್ನು ವಿವರವಾಗಿ ತೋರಿಸಿದ್ದಾರೆ. ಮುಂದುವರೆದು ಆಚಾರಲಿಂಗದಲ್ಲಿಯೇ ಆರು ಲಿಂಗಗಳಾಗುವ ಮತ್ತು ಆಚಾರಲಿಂಗದರಿವಾದ ಗಂಧವೂ ಆರಾಗುವ ಪರಿಯನ್ನು ಪ್ರತಿಪಾದಿಸಿದ್ದಾರೆ; ನೋಡಿ –
“ಆಚಾರಲಿಂಗದ ಮಿಶ್ರ ಷಡ್ಡಿಧ ಲಿಂಗಾರ್ಪಣದ ವಿವರವೆಂತೆಂದೊಡೆ. ಆವುದಾನೊಂದು ಅರ್ಪಣಕ್ಕೆ ಬೇಕಾದುದು ಬೇರು, ಗೆಣಸು, ಮೊದಲಾದ ಗಂಧವನುವುದು ಆಚಾರಲಿಂಗದಲ್ಲಿ; ಮರ, ತಿಗುಡು, ಹಗಿನ ಮೊದಲಾದ ಗಂಧವನರಿವುದು ಗುರುಲಿಂಗದಲ್ಲಿ; ಚಿಗುರು ಮೊದಲಾದ ಪತ್ರಿಯ ಗಂಧವನರಿವುದು ಶಿವಲಿಂಗದಲ್ಲಿ ;ಮೊಗ್ಗೆ ಮೊದಲಾದ ಪುಷ್ಪದ ಗಂಧವನರಿವುದು ಜಂಗಮಲಿಂಗದಲ್ಲಿ; ಕಾಯಿ ಹಣ್ಣು ಮೊದಲಾದ ಫಲದ ಗಂಧವನರಿವುದು ಪ್ರಸಾದಲಿಂಗದಲ್ಲಿ; ಇವೆಲ್ಲರಲ್ಲಿಯ ಗಂಧವನರಿವುದು ಮಹಾಲಿಂಗದಲ್ಲಿ. ಇಂತು ಆಚಾರಲಿಂಗದ ಮಿಶ್ರಾರ್ಪಣವು. ”
ಹೀಗೆ ಬೇರು, ಬೊಡ್ಡೆ, ಚಿಗುರು-ಎಲೆ, ಮೊಗ್ಗೆ-ಪುಷ್ಪ, ಕಾಯಿ-ಹಣ್ಣುಗಳ ಗಂಧವನ್ನು ಆಚಾರಲಿಂಗದ ಆರು ಲಿಂಗಗಳಿಗೆ ಸಮರ್ಪಿಸುವ ಸಾವಧಾನತೆಯನ್ನು, ಸುಜ್ಞಾನವನ್ನು ಪಡೆಯಬೇಕು. ಇದುವೇ ಭವದ ಬಂಧನದಿಂದ ಬಿಡುಗಡೆಯಾಗುವ ಉಪಾಯ. ಷಡ್ವಿಧ ಮಿಶ್ರಾರ್ಪಣ ವಿಧಾನದಿಂದ ವಿಷಯಗಳು ಪ್ರಸಾದವಾಗಿ ಪ್ರಸನ್ನತೆಉನ್ನು ಕೊಡಬಲ್ಲವು. ಓ ಗುರುವೆ ! ಇಂಥ ಸೂಕ್ಷ್ಮತೆಯನ್ನು ಗ್ರಹಿಸುವು ಯೋಗ್ಯತೆಉನ್ನು ಸುಜ್ಞಾನವನ್ನು ಕರುಣಿಸಿ ಸಲಹು.