ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.
ಪಂಚೇಂದ್ರಿ ಲಿಂಗದೊಳು | ಸಂಚರಿಸುವ ನಿಃಪ್ರ-
ಪಂಚ ಮಹಲಿಂಗ – ಕಂಚುಕ ನಿನಗೆಂದ ನಿ
ರ್ವಂಚನೆಯ ಗುರುವೆ ಕೃಪೆಯಾಗು ||೧೫೬||
ಶಿವಕವಿಯು ಇಲ್ಲಿ ಇದನ್ನು ಸಮನ್ವಯಗೊಳಿಸುತ್ತಾನೆ. ಗುದದಲ್ಲಿ ಆಚಾರ ಲಿಂಗವನ್ನು, ಗುಹ್ಯದಲ್ಲಿ ಗುರುಲಿಂಗವನ್ನು, ಪಾದಗಳಲ್ಲಿ ಶಿವಲಿಂಗವನ್ನು, ಕರಗಳಲ್ಲಿ ಜಂಗಮಲಿಂಗವನ್ನು, ವಾಣಿಯಲ್ಲಿ ಪ್ರಸಾದಲಿಂಗವನ್ನು ಪ್ರತ್ಯೇಕವಾಗಿ ಅಳವಡಿಸಿ ಕೊಳ್ಳುವದನ್ನು ಅರಿತಿದ್ದೇವೆ. ಆಯಾ ಕರ್ಮೇಂದ್ರಿಯಗಳಲ್ಲಿ ಆಯಾ ಲಿಂಗಗಳ ಅರಿವನ್ನು ಮಾಡಿಕೊಳ್ಳಬೇಕು. ಆದರೆ ಈ ಎಲ್ಲ ಇಂದ್ರಿಯಗಳ ವ್ಯವಹಾರ ಸ್ವತಂತ್ರವಾದುದಲ್ಲ. ಈ ಇಂದ್ರಿಯಗಳ ಕಾರ್ಯವ್ಯಾಪ್ತಿ ಕಾರ್ಯತೃಪ್ತಿ ಆತ್ಮನಿಗೆ ವೇದ್ಯವಾಗಬೇಕು. ಮಹಾಲಿಂಗಕ್ಕೆ ನೈವೇದ್ಯವಾಗಬೇಕು. ಆತ್ಮಸಂತೃಪ್ತಿಯಿಂದ ನಡೆಯುವ ಇಂದ್ರಿಯ ಕರ್ಮವೇ ಮಹಾಲಿಂಗನಿಗೆ ತೃಪ್ತಿಯಾಗುವದು.
ವಸ್ತುತಃ ಮಹಾಲಿಂಗವು ನಿಃಪ್ರಪಂಚಿಯು. ಪ್ರಪಂಚದ ಲೇಪ ಮಹಾಲಿಂಗಕ್ಕೆ ಇಲ್ಲ. ಅದಕ್ಕೆ ಅಂಟುವದೂ ಇಲ್ಲ. ಪಂಚೇಂದ್ರಿಯಗಳು ಪಂಚಲಿಂಗಮುಖವಾಗಿ ವ್ಯವಹರಿಸಿದರೆ ಮಹಾಲಿಂಗದ ರಕ್ಷಾಕವಚವು ಭಕ್ತನನ್ನು ಕಾಯುತ್ತದೆ. ಸಂತೈಸುತ್ತದೆ ಹಾಗೂ ಸಂತೃಪ್ತಿಯನ್ನೂ ನೀಡುತ್ತದೆ. ಪಂಚೇಂದ್ರಿಯಗಳ ತೃಪ್ತಿಯ ಅರಿವಾಗುವದು ಮಹಾಲಿಂಗಕ್ಕೇನೆ. ಮಹಾಲಿಂಗವು ಕ್ರಿಯಾಲಿಂಗಮುಖವಾಗಿ ಬಂದುದನ್ನು ಮಾತ್ರ ಸಂತೃಪ್ತಿಯಿಂದ ಸ್ವೀಕರಿಸುತ್ತದೆ.
ಈ ವಿಚಾರ ವ್ಯವಹಾರಿಕವಾಗಿ ಕಠಿಣವೆನಿಸಿದರೂ ಆಚರಿಸಿದಲ್ಲಿ ಸುಲಭವಾಗುವದೆಂದು ಗುರುನಾಥನು ಯಾವ ವಂಚನೆಯಿಲ್ಲದೆ ತತ್ತ್ವದ ತಿರುಳನ್ನು ತಿಳಿಸುತ್ತಾನೆ. ತತ್ತ್ವನಿಷ್ಠನಾದ ಸದ್ಗುರುವಿಗೆ ಉಪದೇಶಿಸುವಲ್ಲಿ ಅದಾವ ಸಂಕೋಚ ಆವರಿಸೀತು ! ಇಲ್ಲಿ ವಂಚನೆಗೂ ಇಂಬಿಲ್ಲ.
ಆದರೆ ಶಿಷ್ಯನು ಗುರುಕೃಪೆಯನ್ನು ಸಂಪಾದಿಸಬೇಕು. ಕರುಣೆಯನ್ನು ಪಡೆಯ ಬೇಕು. ಅದಕ್ಕಾಗಿಯೇ ಈ ಶರಣರು ನುಡಿಗೊಮ್ಮೆ ಗುರುಕೃಪೆಯನ್ನು ಯಾಚಿಸಿದ್ದಾರೆ.
ಕರ್ಮೇಂದ್ರಿಯಗಳಿಷ್ಟ | ಬ್ರಹ್ಮದಂಘ್ರಿಗಳೆಂಬ
ಮರ್ಮವನು ತೋರಿ-ನಿರ್ಮಲನೆನಿಸಿದ ಸ–
ಧರ್ಮಿ ಶ್ರೀ ಗುರುವೇ ಕೃಪೆಯಾಗು ||೧೫೭||
ಪೃಥ್ವಿಯ ಪಂಚೀಕರಣದಿಂದ ಹುಟ್ಟಿದ ಈ ಪಂಚಕರ್ಮೇಂದ್ರಿಯಗಳಲ್ಲಿ ಕ್ರಿಯಾಲಿಂಗವನ್ನು ಅಳವಡಿಸಿಕೊಳ್ಳುವದರಿಂದಾಗುವ ಫಲಶೃತಿಯನ್ನಿಲ್ಲಿ ತಿಳಿಸಿದ್ದಾನೆ.
ಇಷ್ಟಲಿಂಗವು ಕ್ರಿಯಾಲಿಂಗವು, ಅದನ್ನು ಆಯಾ ಇಂದ್ರಿಯಗಳಲ್ಲಿ ಧಾರಣ ಮಾಡುವದರಿಂದ ಆ ಇಂದ್ರಿಯಗಳ ಪೂರ್ವಾಶ್ರಯವಳಿಯುವದು. ಆಗ ಅಲ್ಲಿ ಕರ್ಮೆ೦ದ್ರಿಯ ಭಾವವಿರುವದಿಲ್ಲ. ಆ ವ್ಯವಹಾರವೂ ಉಳಿಯುವದಿಲ್ಲ. ಅದುಕಾರಣ ಲಿಂಗವಂತನು ಕರ್ಮೆಂದ್ರಿಯಗಳ ಎಲ್ಲ ವ್ಯವಹಾರವನ್ನು ಲಿಂಗಮುಖವಾಗಿ ಮಾಡಬೇಕು. ಅಂದರೆ ಇಂದ್ರಿಯಗಳಲ್ಲಿ ಇಷ್ಟಲಿಂಗದ ಅಂಫ್ರಿ (ಚರಣ)ಗಳಾಗುತ್ತವೆ. ಆ ಲಿಂಗದ ಚರಣಗಳೇ ಭಕ್ತನ ಚರಣಗಳಾಗುತ್ತವೆ. ಆಗ ಆ ಲಿಂಗಭಕ್ತನು ಲಿಂಗಮುಂತಾಗಿ ಅರ್ಥಾತ್ ಲಿಂಗವನ್ನು ಮುಂದೆ ಮಾಡಿಯೇ ಆಚರಿಸುವನು. ಲಿಂಗಮುಖವಾಗಿ ನಡೆಯುವವನ ಕ್ರಿಯೆಗಳೆಲ್ಲ ಸತ್ಕ್ರಿಯಗಳಾಗುವವು. ಮಲತ್ರಯಗಳೆಲ್ಲ ನಿರ್ಮೂಲವಾಗಿ ನಿರ್ಮಲನೆನಿಸುವನು. ಇದುವೆ ಲಿಂಗಗಳನ್ನು ಅಂಗಾಂಗಗಳಲ್ಲಿ ಧರಿಸುವ ಮರ್ಮವೆಂದು ಶ್ರೀ ಗುರುನಾಥನು ಶಿಷ್ಯನಿಗೆ ಬೋಧಿಸುವನು. ಈ ತೆರನಾಗಿ ಕರುಣೆಯಿಂದ ಗುರುವು ಕರ್ಮೆಂದ್ರಿಯಗಳಿಗೆ ಕ್ರಿಯಾಲಿಂಗ (ಇಷ್ಟಲಿಂಗ) ದೊಳಗಿನ ಆರು ಲಿಂಗಗಳ ಸಂಬಂಧವನ್ನು ತೋರಿಸುತ್ತಾನೆ.
ಗುರುವೇ ! ಎನ್ನ ಕರ್ಮೇಂದ್ರಿಯಗಳಲ್ಲಿ ಕ್ರಿಯಾಲಿಂಗಗಳನ್ನು ಧರಿಸುವ ಶಕ್ತಿಯನ್ನು ದಯಪಾಲಿಸು, ಕ್ರಿಯಾಲಿಂಗಗಳನ್ನು ಇಂದ್ರಿಯಗಳಲ್ಲಿ ಧರಿಸಿ ಲಿಂಗ ಕಾಯನನ್ನಾಗಿಸು. ಇದು ನಿನ್ನ ಧರ್ಮ.