ಹಾನಗಲ್ಲ ಶ್ರೀಗಳವರ ವ್ಯಕ್ತಿತ್ವ

ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ

ಈ ಜಗತ್ತೆಂಬ ರಂಗಭೂಮಿಗೆ ಬಂದವರು, ತಾವು ಹೋಗುವಾಗ ತಮ್ಮದೊಂದು ಚರಿತ್ರೆಯನ್ನು ಅನ್ಯರಿಗಾಗಿ ಬಿಟ್ಟುಹೋಗಬೇಕಾಗುತ್ತದೆ. ಬಾಳಿದವರ ಸಚ್ಚರಿತ್ರೆ ಮುಂದೆ ಬಾಳುವವರಿಗೆ ಆದರ್ಶಮಯವಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಬದುಕಿ ಸತ್ತವರಿಗಿಂತಲೂ ಸತ್ತು ಬದುಕಿದವರು ಮೇಲು. ಇಂತಹ ಆದರ್ಶವ್ಯಕ್ತಿಗಳ ಮಾಲಿಕೆಯಲ್ಲಿ ಮಧ್ಯಸ್ಥಾನವು ಹಾನಗಲ್ಲ ಶ್ರೀಗಳವರಿಗೆ ದೊರೆಯುವುದೆಂಬ ಹೇಳಿಕೆ ನಿಸ್ಸಂದೇಹವಾದುದು.

ಹನ್ನೆರಡನೆಯ ಶತಮಾನದ ಶ್ರೀ ಬಸವ ಮಹಾನುಭಾವರಂತೆ ಸಮಾಜದ ಧಾರ್ಮಿಕ, ನೈತಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳವರು ಹೊಸದೊಂದು ವಾತಾವರಣವನ್ನೇ ನಿರ್ಮಿಸಿ, ಇಪ್ಪತ್ತನೆಯ ಶತಮಾನದ ಬಸವನೆನಿಸಿಕೊಂಡರು. ಇವರು ಕೇವಲ ಮುಖಕ್ಕೆ ಹಾಕಿದ ಮುಸುಕಿನ ಮರೆಯಲ್ಲಿ ಮಣಿಗಳನ್ನೆಣಿಸುತ್ತ ದೇವರನ್ನು ಹುಡುಕಲಿಲ್ಲ; ಅದರ ಜೊತೆಗೆ, ಜಗವ ತುಂಬಿದ ಶಿವತತ್ವವನ್ನು ಕಂಡು ನಲಿದು-ಸೇವಿಸುವ ಮಹಾಸ್ವಾಮಿಗಳಾಗಿದ್ದರು. ಹಿಂದೊಮ್ಮೆ ಸರ್ವಾಂಗ ಸುಂದರವಾಗಿ ಮೆರೆದ ಲಿಂಗಾಯತ ಸಮಾಜವು ಇಂದು, ಧಾರ್ಮಿಕ, ನೈತಿಕ ಅಧಃಪತನದಿಂದ ರುದ್ರರೂಪವನ್ನು ಧರಿಸಿ ಹುಚ್ಚೆದ್ದು ಕುಣಿಯುವುದನ್ನು ಕಂಡು ಮಮ್ಮಲ ಮರುಗಿ ಕರಗಿದರು. ಅದರ ಉಳಿಮೆಗಾಗಿ, ಉನ್ನತಿಗಾಗಿ ತಮ್ಮ ತನು ಮನಧನವನ್ನೇ ಅರ್ಪಿಸಿದರು; ಅದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಇದೇನಿಜವಾದ ಸ್ವಾಮಿಯ ಕುರುಹು ಅಲ್ಲವೆ? ಇಂತಹ ಸ್ವಾಮಿಗಳಿಂದಲೇ ಜಗದೋದ್ಧಾರ ಕಾರ್ಯವು ನೆರವೇರಬೇಕಾದುದು ಸಹಜ. ಆದರೆ ಭಕ್ತರ ಪ್ರಸಾದದಿಂದ ಪುಷ್ಟಗೊಂಡು ಬೆಳೆಯುತ್ತರಲಿರುವ ಸ್ವಾಮಿಗಳು ಶ್ರೀಗಳವರಿಂದ ಪಾಠ ಕಲಿಯುವುದು ಅವಶ್ಯವಲ್ಲವೆ? ಸ್ವಾಮಿಗಳಾದವರು ಸಮಾಜಕ್ಕೆ ಹೆತ್ತ ತಾಯಿಯಂತೆ ಇರಬೇಕು.ಅವರು ಸನ್ಮಾರ್ಗದ ಶಿಕ್ಷಣವನ್ನು ಪಡೆದು, ಸಮಾಜ ಬಂಧುಗಳಿಗೆ ಆಸರದ ಕೈಯನ್ನು ನೀಡಬೇಕಾದುದು ಅತ್ಯಾವಶ್ಯಕ.

ಹಾನಗಲ್ಲ ಶ್ರೀಗಳವರ ಜೀವಿತ ಕಾಲದಲ್ಲಿ ಒದಗಿದ ಸಮಾಜ ಸನ್ನಿವೇಶಗಳು ಅವರ ಎದೆಯೊಳಗಿನ ಬತ್ತಿಯನ್ನು ಹೊತ್ತಿಸದೇ ಇರಲಿಲ್ಲ. ಬಂದ ಪರಿಸ್ಥಿತಿಯನ್ನು ಸಮಾಜದ ನಡತೆಯಲ್ಲಿ ಮೈಗೂಡಿಸುವ ಜಾಣೆಯು ಶ್ರೀಗಳವರಲ್ಲಿ ಸ್ವಾಭಾವಿಕವಾಗಿತ್ತು. ಎಂತೆಂತಹ ಭೀಷ್ಮಸನ್ನಿವೇಶಗಳು ಒದಗಿದರೂ ‘ಸಾಕು ಮಾಡೋ ದೇವಾ’ ಎಂದು ಕೂಗದೆ, ಹಣೆಗೆ ಕೈಹಚ್ಚಿಕೊಂಡು ಕೂಡ್ರದೆ,

ಶಾಸ್ತ್ರೀಯವಾದ, ಸರ್ವಸಮ್ಮತವಾದ, ವ್ಯವಹಾರಿಕ ಉಪಾಯವನ್ನು ಹುಡುಕಿ ತೆಗೆಯುತ್ತಿದ್ದರು, ಅವರ ನಿರ್ಮಲವಾದ ಅಂತಃಕರಣವ್ಯಾಪ್ತಿಯ ನೇಸರನ ಬೆಳಗಿನಂತೆ ಧನಿಕ-ದರಿದ್ರ, ಜಾಣ ಮೂಢ, ಉಚ್ಛ-ನೀಚ , ಸ್ತ್ರೀ-ಪುರುಷ ಎಂಬ ಭೇದಭಾವನೆಯಿಲ್ಲದೆ ಸರ್ವರಿಗೂ ‘ಜ್ಞಾನಾಮೃತವನ್ನು ಬಯಸುತ್ತಿತ್ತು. ಅವರು ಸುಖವನ್ನು ಕಾಣುತ್ತಿದ್ದುದು ಸ್ವಾರ್ಥಮಯ ಕ್ರಿಮಿಜೀವನದಲ್ಲಲ್ಲ, ನಿಸ್ವಾರ್ಥಮಯವಾದ ಘನಜೀವನದಲ್ಲಿ, ಇಂತಹ ಘನಜೀವಿಗೆ ಮಠಮಾನ್ಯಗಳು ಹಕ್ಕಿಯ ಗೂಡಿನಂತೆ ಸಣ್ಣದಾಗಿ ಕಂಡರೂ ಆಶ್ಚರ್ಯವೇನಲ್ಲ. ಶ್ರೀಗಳವರು ಲಿಂಗಾಯತ ಸಮಾಜದ ವಳಬೇನೆಯನ್ನರಿತು, ಅದರ ನಿವಾರಣೆಗೆ ಗುರು ಜ೦ಗಮರ ಸುಧಾರಣೆಯ ಜೀವನವೇ ಮುಖ್ಯವಾದದ್ದೆಂದು ಗ್ರಹಿಸಿದರು. ಕೇವಲ ಪುರುಷರಲ್ಲಿ ಧರ್ಮಜಾಗ್ರತೆಯಾದರೆ ಸಾಲದು, ಸ್ತ್ರೀ ವರ್ಗದಲ್ಲಿಯೂ ಕರ್ತವ್ಯಜ್ಞಾನದ ಉದಯವಾಗಲೆಂದು ಹಾರೈಸಿದರು, ಇಷ್ಟಲ್ಲದೆ, ಆಗಿನ ಕಾಲಕ್ಕೆ ಅಗತ್ಯವೆನಿಸಿಕೊಂಡ ಅಸ್ಪೃಶ್ಯರ ಶಿಕ್ಷಣದ ಕಡೆಗೆ ಅವರ ಲಕ್ಷ್ಯ ಹರಿದಿತ್ತು.

ಚಲವಾದಿಗಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸಿ, ಸರಿಯಾದ ಶಿಕ್ಷಣ ಕೊಟ್ಟರು; ಅವರಿಂದಲೂ ಸಮಾಜ ಸುಧಾರಣೆಯಾಗಲಿದೆಯೆಂದು ಮೇಲಿಂದ ಮೇಲೆ ಕೇಳುತ್ತಿದ್ದರು, ಪ್ರಯತ್ನವೇ ಅವರಿಗೆ ಸಹಜಗುಣವಾಗಿತ್ತು.

ಅಡಿಯ ಮಂದಿಗೆ ಸ್ವರ್ಗ | ಅಡಿಯ ಹಿಂದಿಡೆ ನರಕ

ಅಡಿಗಶ್ವಮೇಧಘಲವಕ್ಕು  ಸ್ವಾಮಿ ಕಾರ್ಯಕ್ಕೆ

ದುಡಿಯಲೆ ಬೇಕು ಸರ್ವಜ್ಞ

ಈ ಪದ್ಯದ ಭಾವ ಅವರ ಜೀವನದ ಉಸಿರಾಗಿತ್ತು, ಪ್ರಯತ್ನದಲ್ಲಿ ಸೋತರೂ ಅವರಿಗೊಂದು ಹೆಮ್ಮೆ ಮಹತ್ಕಾರ್ಯಕ್ಕಾಗಿ, ಲೋಕಸೇವೆಗಾಗಿ ಸಮಸ್ತ ಜೀವಮಾನವನ್ನೇ ತೇದು, ತುದಿಯಲ್ಲಿ ಸಿರಿಗೊಬಗಿಲ್ಲದೆ ಒಣಗಿಹೋಗುವುದರಲ್ಲಿಯೂ ಒಂದು ಆನಂದವನ್ನು ಶ್ರೀಗಳವರು ಅನುಭವಿಸುತ್ತಿದ್ದರು, ಈ ರೀತಿಯಿಂದ ಬಹುಮುಖ ಪ್ರಯತ್ನ ಮಾಡಿ, ಲಿಂಗಾಯತ ಸಮಾಜದ ಎಳ್ಗೆಗಾಗಿ ದುಡಿದರು; ಸಮಾಜ ಬಂಧುಗಳಲ್ಲಿ ನವಜಾಗೃತಿಯನ್ನುಂಟು ಮಾಡಿದರು.

ಶ್ರೀಗಳವರು ಹಮ್ಮಿಕೊಂಡ ಕಾರ್ಯಕ್ರಮವು ವಿಶಾಲವೂ ಬಹುಮುಖವುಳ್ಳದಾಗಿದೆ, ಅವ್ರಗಳಲ್ಲಿ ಶಿವಯೋಗಮಂದಿರ ಮತ್ತು ವೀರಶೈವ ಮಹಾಸಭೆಗಳು ಬಹುಮುಖ್ಯವಾದವು. ಇವೆರಡೂ ಅವಳಿಜವಳಿ ಸಂಸ್ಥೆಗಳು,ಒಂದರಲ್ಲಿ ಲೌಕಿಕ ಮುಖ್ಯವಾದರೆ ಇನ್ನೊಂದರಲ್ಲಿ ಪಾರಮಾರ್ಥ ಗಣ್ಯವಾಗಿದೆ.ಇವೆರಡ ನಾಣ್ಯದ ಎರಡು ಮಗ್ಗುಲದಂತೆ ಇವೆ, ಇವೆರಡಕ್ಕೂ ಮೂಲಕಾರಣರು ಶ್ರೀ ಶಿವಯೋಗಿಗಳು, ಸಮಾಜದ ಹಿತಕ್ಕಾಗಿ ನಿರ್ಮಿಸಲ್ಪಟ್ಟ ಈ ಎರಡೂ ಸಂಸ್ಥೆಗಳಲ್ಲಿ ಶ್ರೀಗಳವರ ಬುದ್ಧಿ, ಸಾಹಸ, ತಪಸ್ಸು ಮನೆ ಮಾಡಿಕೊಂಡಿವೆ, ಅವರ ಪ್ರಭುದ್ಧಾವಸ್ಥೆಯ ಘಟನೆಗಳನ್ನು ಕಣ್ಣಿಟ್ಟು ಅವಲೋಕಿಸಿದರೆ ಅವರು ಅತಿಮಾನವರೆಂಬ ಮಾತು ದಿಟಪೂವಾಗಿ ನಿಲ್ಲುವುದು, ಲಿಂಗಾಯತ ಸಂಸ್ಕೃತಿಯ ಪುನರುದ್ಧಾರಕ್ಕಾಗಿ, ಸಾಮಾನ್ಯ ಜನತೆಯ ಉದ್ಧಾರಕ್ಕಾಗಿ ಇವೆರಡೂ ಸಂಸ್ಥೆಗಳನ್ನು ಕಟ್ಟಿ, ಅವು ಸರಿಯಾಗಿ ನಡೆಯಲೆಂದು ತಮ್ಮ ಶರೀರವನ್ನು ಚಂದನದಂತೆ ಸವೆಸಿ ದುಡಿದರು. ತಮ್ಮ ಜೀವನವನ್ನು ದೀವಿಗೆಯಂತೆ ಉರಿಸಿ, ಸಮಾಜದ ಕತ್ತಲೆಯನ್ನು ಹೋಗಲಾಡಿಸಲು ಯತ್ನಿಸಿದರು. ಬತ್ತಿ ತಾನು ಸುಟ್ಟುಕೊಂಡಾಗಲ್ಲವೆ ಇನ್ನೊಬ್ಬರಿಗೆ ಬೆಳಕಿನ ಸಹಾಯ ಸಿಗುವುದು? ಮಠಾಧಿಪತಿಗಳು ಲೋಕ ಸೇವೆಯನ್ನು ಕೈಕೊಂಡು, ತಮ್ಮ ಉದ್ಧಾರದೊಡನೆ ಜಗತ್ತನ್ನು ಸಹ ಉದ್ಧಾರ ಮಾಡಬಲ್ಲವರೆಂಬುದನ್ನು ಶ್ರೀಗಳು ತಮ್ಮ ಕರ್ತವ್ಯದಕ್ಷತೆಯಿಂದ ಸಿದ್ಧ ಮಾಡಿ ತೋರಿಸಿದರು. ಅರ್ಧ ಶತಮಾನದ ಹಿಂದೆ ಲಿಂಗಾಯತರು, ತಾವು ಲಿಂಗಾಯತರೆಂದು ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಿಂದೂ ಧರ್ಮದಲ್ಲಿ ತಮ್ಮ ಸ್ಥಾನವಾವುದು? ತಮ್ಮ ತತ್ವ ಸಂಸ್ಕೃತಿಗಳ ನೆಲೆಬೆಲೆಯೇನು? ತಮ್ಮ ಸಮಾಜ ಎತ್ತ ಸಾಗಿದೆ? ತಮ್ಮ ಭವ್ಯಭವಿಷ್ಯವೇನು?- ಎಂಬ ಕಲ್ಪನೆಯಿಲ್ಲದೆ ಸಮಾಜಬಂಧುಗಳು ಅರೆನಿದ್ರೆಯಲ್ಲಿದ್ದಾಗ, ಬಡಿದೆಬ್ಬಿಸಿ ಕಣ್ಣು ತೆರೆಯಿಸಿದವರು ಪೂಜ್ಯ ಹಾನಗಲ್ಲ ಶ್ರೀಗಳವರು. ಸಮಾಜದ ಯಾವ ಭಾಗದಲ್ಲಿಯೇ ಆಗಲಿ,ಕೊರತೆಯಾದುದನ್ನು ಕಂಡರೆ, ಅದು ತಮ್ಮ ಶರೀರದಲ್ಲಿಯ ನೋವೆಂದು ಅವರು ಬಗೆಯುತ್ತಿದ್ದರು. ತಮ್ಮ ಶರೀರದ ಪಂಚಪ್ರಾಣಗಳ ಪ್ರಯೋಜನವು ಸಮಾಜದ ಸ್ವಾಸ್ಥ್ಯಕ್ಕೆ ಆಗಲೆಂದು ಬಗೆದು, ತಮ್ಮ ಆತ್ಮಬಲವನ್ನು ತಪೋನಿಗ್ರಹದಿಂದ ಬೆಳೆಯಿಸಿಕೊಂಡರು. ಪಾವನತಮವಾದ ಶಂಭುಲಿಂಗನ ಬೆಟ್ಟದಲ್ಲಿ ಬಹುಕಾಲ ಅನುಷ್ಠಾನ ಮಾಡಿದರು. ಮುಂದೆ ಮಧುಕರ ವೃತ್ತಿಯನ್ನು ತಳೆದು, ಮಹಾತ್ಮರಿದ್ದೆಡೆಗೆ ಹೋಗಿ, ಅವರಿಂದ ಅನುಭಾವ ಸಂಪತ್ತನ್ನು ಪಡೆದರು. ತಪೋಭೂಮಿಯಾದ ಶ್ರೀ ಎಡೆಯೂರು ಕ್ಷೇತ್ರಕ್ಕೆ ಹೋಗಿ ಪ್ರಸಾದ ಸಿದ್ಧಿಯನ್ನು ಪಡೆದುಕೊಂಡರು.

ಇಷ್ಟಕ್ಕೆ ತೃಪ್ತರಾಗಲಿಲ್ಲ ಶ್ರೀ ಹಾನಗಲ್ಲ ಶ್ರೀಗಳು; ಲೋಕಸೇವೆ ಒಬ್ಬ ವ್ಯಕ್ತಿಯಿಂದ ಪರಿಪೂರ್ಣವಾಗಿ ನಡೆಯಲಾರದೆಂದು ಬಗೆದು, ಚರ ತಿಂಥಿಣಿಯೊಂದನ್ನುತಮ್ಮ ವಲಯವನ್ನಾಗಿರಿಸಿಕೊಂಡು, ಸಮಾಜದ ಅಭ್ಯುದಯ ಕಾರ್ಯಕ್ಕೆ ಕೈಹಾಕಿದರು. ಧರ್ಮಾಚರಣೆಯಲ್ಲಿಯೇ ಸತ್ಯ ಸೌಂದರ್ಯಗಳ ಸ್ವಾರಸ್ಯವಿದೆಯೆಂದು ಬೋಧೆ ಮಾಡುತ್ತ ಜನಾಂಗದಲ್ಲಿ ಆಸ್ತಿಕ್ಯ, ಔತ್ಸುಕ್ಯಗಳನ್ನು ಹುಟ್ಟಿಸಿದವರು. ಶ್ರೀಗಳವರ ಪ್ರಯತ್ನದಿಂದ ಲಿಂಗಾಯತರು ಲಿಂಗಧಾರಣದ ಮಹತಿಯನ್ನು ತಿಳಿದರು;ಉಪಟಳದಿಂದ ಪಾರಾದರು. ವೀರಶೈವ ಮಹಾಸಭೆಯನ್ನು ಶ್ರೀಗಳವರು ಕೂಡಿಸಿ ಧರ್ಮಪ್ರಸಾರ ಮಾಡಿದರು. ಶಿವಯೋಗ ವಿದ್ಯೆಯ ಪ್ರಸಾರಕ್ಕಾಗಿ ಶಿವಯೋಗಮಂದಿರವನ್ನು ಭದ್ರಗೊಳಿಸಿದರು. ಅವರ ಧಾರ್ಮಿಕ ಆಂದೋಲನವು ಸಾರ್ವಜನಿಕ ಪ್ರೇಮ ಮತ್ತು ಹಿರಿಯರ ಬುದ್ದಿವಂತಿಕೆಯಿಂದ ಸಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಅವರ ಪರಿಶ್ರಮದ ಫಲವಾಗಿ, ಅಲ್ಪದಿನಗಳಲ್ಲಿಯೇ ಅಲ್ಲಲ್ಲಿ, ಕೀರ್ತನಕಾರಿಗಳು, ಧರ್ಮಬೋಧಕರು, ಸಂಗೀತ ಕಲಾವಿದರು ನಿಸ್ವಾರ್ಥ ಬುದ್ಧಿಯಿಂದ ಸಮಾಜ ಸೇವೆ ಮಾಡುತ್ತಿರುವುದು ಗೋಚರವಾಯಿತು. ಶಾಸ್ತ್ರೋಕ್ತ ರೀತಿಯಲ್ಲಿ ನಿರ್ಮಿತವಾದ ಲಿಂಗಭಸ್ಮಗಳು ಶಿವಯೋಗಮಂದಿರದ ಮುಖಾಂತರ ಸದ್ಭಕ್ತರ ನಿಜಾಚರಣೆಗೆ ದೊರೆಯತೊಡಗಿದವು. ಈ ಮಂದಿರದಲ್ಲಿ ನುರಿತ ಯೋಗಸಾಧಕರು ಶಿವಯೋಗದಲ್ಲಿ ಮಹಾಸಿದ್ಧಿಯನ್ನು ಪಡೆದರು. ಇಲ್ಲಿ ಸಾಧನೆ ಮಾಡಿದ ಹರಗುರು ಚರಮೂರ್ತಿಗಳು ನಾಡಿನಲ್ಲಿ ಹಬ್ಬಿ, ಬೀಳು ಬಿದ್ದಿರುವ ಮಠಗಳನ್ನಾಶ್ರಯಿಸಿ ಧರ್ಮಬೋಧೆಗೆ ಸಿದ್ಧರಾದರು. ನಾಡು ಚೇತರಿಸಿಕೊಂಡಿತು; ನುಡಿ ಮೈಮುರಿಯ ತೊಡಗಿತು. ಶಿವಯೋಗಮಂದಿರದ ದೀಪಗಳು ಎಲ್ಲೆಡೆಯಲ್ಲಿ ಪಸರಿಸಿ ನಾಡು ಬೆಳಗುವಂತಾಯಿತು. ಶ್ರೀಗಳವರ ಉನ್ನತ ದೃಷ್ಟಿ, ಉನ್ನತ ಧ್ಯೇಯಗಳ ಸಮನ್ವಯದಿಂದ ಅವರ ಜೀವನದ ದಾರಿ ಹೆದ್ದಾರಿಯಾಯಿತು. ಆನೆ ನಡೆದುದೇ ದಾರಿಯಲ್ಲವೆ?

ಹೀಗೆ, ಬಹುಮುಖದ ವ್ಯಕ್ತಿತ್ವವನ್ನು ಪಡೆದ ಶ್ರೀಗಳವರು ಲಿಂಗಾಯತ ಸಮಾಜವನ್ನು ಆದರ್ಶಪ್ರಾಯವಾಗಿ ಮೂಡಿಸುವ ಕಾರ್ಯದಲ್ಲಿದ್ದಾಗಲೇ ಸಂಜೆಯಾಯಿತು. ಕರ್ಮಸಾಕ್ಷಿಯಾದ ಆತ್ಮರವಿಯು ಕಣ್ಮರೆಯಾದನು. ಗುರುವು ಅಗೋಚರನಾದನು. ಅವನು ಇನ್ನೆಲ್ಲಿ ದರ್ಶನ ನೀಡುವನು? ಅವನ ಪ್ರಯತ್ನರೂಪೀ ಸಂಧ್ಯಾಕಿರಣಗಳು ನಮಗೆ ಮಾರ್ಗದರ್ಶನ ಮಾಡಿಸುತ್ತಲಿವೆ. ಅಂತಹ ಕಾರಣಪುರುಷನು ಇನ್ನೊಮ್ಮೆ ಮೂಡಿ ಬಾರದೆ ಇರನೆಂದು ನಮ್ಮ ನಂಬಿಗೆ.

(ಆಕರ : ನುಡಿಲಿಂಗ-ಲೇ: ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು, ನವಲಗುಂದ)

Related Posts