ಲೇಖಕರು : ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು
ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ, ಹಾಲಕೆರೆ.
(ಪೂಜ್ಯರು ಶ್ರೀ ಶಿವಯೋಗಮಂದಿರದಲ್ಲಿ ಅಧ್ಯಯನ ಮಾಡುವಾಗ ಬರೆದ ಲೇಖನ)
ವೀರಶೈವ-ಲಿಂಗಾಯತ ಸಮಾಜ ತನ್ನನ್ನು ಸದಾಚಾರ, ಸದ್ವಿಚಾರ, ಸಮಭಾವಗಳಿಂದ ಒಟ್ಟುಗೂಡಿಸಲು ಹೊರಟು ತನ್ನಲ್ಲಿಯೇ ಆ ತಾತ್ವಿಕ ನೆಲೆಯನ್ನೆ ಮರೆಮಾಡಿಕೊಂಡಿತ್ತು. ಇಂಥ ಸಾಮಾಜಿಕ ಹೊಯ್ದಾಟದ ಕಾಲದಲ್ಲಿ ಹಲವು ಚೇತನಗಳು ಅಪೂರ್ವಕಾರ್ಯ ನಡೆಸಲು ಅವತರಿಸಿದ್ದವು. ಇಂಥವರಲ್ಲಿ ಒರ್ವರು, ವಿರತಿ ತೇಜ ತುಂಬಿದ ಬಾಗಲಕೋಟೆಯ ಶ್ರೀ ವೈರಾಗ್ಯದ ಮಲ್ಹಣಾರ್ಯರು. ಸಂಚಾರ ಮೂರ್ತಿಗಳಾಗಿದ್ದ ಅವರು ತಮ್ಮಂತೆಯೆ ಸಾಮಾಜಿಕ ಕಳಕಳಿವುಳ್ಳ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಧರ್ಮ ಪೀಠದಲ್ಲಿರುವ ತಮ್ಮಂಥವರು ನಡೆಸುವ ಕಾರ್ಯಗಳು ಸಮಾಜವನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯಬೇಕು. ಈ ಸಮಾಜದ ಗುರು-ವಿರಕ್ತ ಪೀಠಗಳಿಗೆ ಏರುವವರು ಶಿಕ್ಷಣ ಪಡೆಯುವ ಸಂಸ್ಥೆಯೊಂದು ಸ್ಥಾಪನೆಯಾಗಬೇಕು ಎಂದು ಪೀಠಿಕೆ ಹಾಕಿದ್ದರು. ಈ ಪೀಠಿಕೆಯೇ ಕುಮಾರ ಮಹಾಸ್ವಾಮಿಗಳವರ ಮನದಲ್ಲಿ ಹೆಮ್ಮರವಾಗಿ ಬೆಳೆದು, ಮುಂದೆ ಶಿವಯೋಗಮಂದಿರ ಸಂಸ್ಥೆಯನ್ನು ಸಾಕಾರಗೊಳಿಸಿತು. ಬಾಗಲಕೋಟೆಯ ೪ನೇ ವೀರಶೈವ ಮಹಾಅಧಿವೇಶನದಲ್ಲಿ ಅಂದಿನ ಸಮಾಜ ಪ್ರಮುಖರಲ್ಲಿ ಓರ್ವರಾದ ಶ್ರೀ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಶ್ರೀ ಶಿವಯೋಗಮಂದಿರ ಸ್ಥಾಪನೆಗೆ ನಿರ್ಣಯ ಮಂಡಿಸಿತು. ಪರಮ ತಪೋನಿಧಿಗಳಾದ ಇಲಕಲ್ಲ ಶ್ರೀ ವಿಜಯ ಮಹಾಂತ ಶಿವಯೋಗಿಗಳು ತೋರಿದ ಸ್ಥಳದಲ್ಲಿ, ಮಲಪಹಾರಿಣಿ ತಟದಲ್ಲಿ ೧೯೦೯ರ ರಥಸಪ್ತಮಿಯಂದು ಸ್ಥಾಪನೆಯಾಯಿತು. ಒಮ್ಮೆ ಶ್ರೀ ವಿಜಯಮಹಾಂತ ಶಿವಯೋಗಿಗಳು ತಾಡೋಲೆಗಳನ್ನು ಅಭ್ಯಸಿಸುವಾಗ ೭೦೦ ವರ್ಷಗಳ ಹಿಂದಿನ ಘಟ್ಟಿವಾಳ ಮುದ್ದಣ್ಣಗಳ ಕಾಲಜ್ಞಾನ ವಚನ ಕಣ್ಸೆಳೆಯಿತು. ಮುಂದೊಂದುದಿನ ದಿಟ ಜಂಗಮನೋರ್ವ ಶಿವಯೋಗ ಸಂಸ್ಥೆಯೊಂದನ್ನು ಹುಟ್ಟು ಹಾಕುವನೆಂಬ ಉಲ್ಲೇಖ ಆ ಕಾಲಜ್ಞಾನದಲ್ಲಿತ್ತು. ಘಟ್ಟಿವಾಳಯ್ಯ ಪರಮ ವೈರಾಗ್ಯಶಾಲಿ, ಇಂದ್ರಿಯಗಳನ್ನು ತೃಣೀಕರಿಸಿ ನಿರ್ಮೋಹಿತನಾಗಿದ್ದ. ‘ಸುವರ್ಣ ಎಂದರೆ
ಕಲ್ಲು, ಮನೆಯೆಂದರೆ ಸಂತೆ ಗುಡಿಸಲು’ ಎಂದು ಭಾವಿಸಿ ಸಕಲರಲ್ಲಿ ವಿಶ್ವಬಂದುತ್ವ ಕಾಣುವ ದೃಷ್ಟಿಉಳ್ಳವನಾಗಿದ್ದ. ಅವನು ಯಾರನ್ನೂ ಪೀಡಿಸುತ್ತಿರಲಿಲ್ಲ, ಯಾರ ಮನಸ್ಸನ್ನು ನೋಯಿಸುತ್ತಿರಲಿಲ್ಲ. ಅಹಿಂಸಾ ಧರ್ಮ ಪಾಲಕನಾಗಿದ್ದ. ಈ ಕಡುತರವಾದ ಆಚರಣಾ ಪ್ರವೃತ್ತಿಯನ್ನು ಕಂಡೇ ಜನರು ಘಟ್ಟಿವಾಳಯ್ಯನೆಂದು ಈ ಮುದ್ದಣ್ಣನನ್ನು ಕರೆಯುತ್ತಿದ್ದರು. ಮುದ್ದಣನೆಂಬುದು ಮರೆಯಾಗಿ ಘಟ್ಟಿವಾಳಯ್ಯನೆಂದೇ ಈತ ಪ್ರಸಿದ್ಧನಾಗಿದ್ದ.
ಬಸವಣ್ಣನವರು ನಡೆಸುವ ಅನುಭವ ಮಂಟಪದ ಕೀರ್ತಿಯನ್ನು ಕೇಳಿ ಕಲ್ಯಾಣಕ್ಕೆ ಬಂದಿದ್ದ ಈ ಘಟ್ಟಿವಾಳಯ್ಯ. ಬಸವಣ್ಣನವರ ಮಹಾಮನೆಯ ಮುಂದೆ ಜಾಗಟೆಯ ನಾದ ಕೇಳಿದಾಗ ಪ್ರಸಾದಕ್ಕೆ ಸಾಲು ಹಿಡಿದು ಹೋಗುವ ಜಂಗಮರನ್ನು ಕಂಡು ಘಟ್ಟಿವಾಳಯ್ಯ ‘ಇವರು ಉಪಾದಿಯಿಂದ ಶರೀರ ಪೋಷಕರು ಜ್ಞಾನ ಜಂಗಮ ಸ್ಥಲಕ್ಕೆ ಸಲ್ಲರು’ ಎಂದು ವಿಡಂಬಿಸಿದ್ದ.
“ತನುವ ಮರೆಯ ಬೇಕೆಂದು ಗುರುವ ತೋರಿ
ಮನವ ಮರೆಯ ಬೇಕೆಂದು ಲಿಂಗವ ತೋರಿ
ಧನವ ಮರೆಯ ಬೇಕೆಂದು ಜಂಗಮವ ತೋರಿ
ಲೇಸ ಮರೆದು ಕಷ್ಟಕ್ಕೆ ಕಡಿದಾದುವ ಭಾಷೆಹೀನರ ಕಂಡು
ನಾಚಿಕೆಯಾಯಿತ್ತು ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ”
ಘಟ್ಟಿವಾಳಯ್ಯಗಳ ವಿಡಂಬನೆ ಹೀಗೆ ಮುಂದುವರೆದಿತ್ತು.
” ಕಾಯ ಜೀವವನರಿದೆನೆಂಬುವವರೆಲ್ಲರೂ ಹೋದರಲ್ಲಾ ಹೊಲಬುದಪ್ಪಿ!
ಹೊನ್ನು ಹೆಣ್ಣು ಮಣ್ಣಿಗಾಗಿ ಹೊರೆಯಾಡುವವರೆಲ್ಲರು
ಬಸವಣ್ಣನ ಬಾಗಿಲಲ್ಲಿ ಬಂದಿತರಾಗಿ ನೊಂದವರಿಗೇಕೆ
ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ ”
ಹೀಗೆ ಘಟ್ಟಿವಾಳಯ್ಯ ಜಂಗಮ ಸಮೂಹವನ್ನು ವಿಡಂಬಿಸಿದಾಗ ಆ ಜಂಗಮದೇವರುಗಳು ಘಟ್ಟಿವಾಳಯ್ಯನನ್ನು ನೋಯಿಸಿ ಆತನ ಕೊರಳ ಇಷ್ಟಲಿಂಗವನ್ನು ಕಸಿದುಕೊಂಡರು ಆಗಲೂ ಘಟ್ಟಿವಾಳಯ್ಯ ವಚನದಲ್ಲೆ ನುಡಿದಿದ್ದ,
“ಗೋಕುಲರೆಲ್ಲರು ಕೂಡಿ ಗೋಪತಿಯಣ್ಣನ ಮನೆಗೆ ಉಣಬಂದರೆಲ್ಲರು,
ನಾ ನೀಸಕ್ಕಿ ಕೂಳ ಕೇಳಿದರೆ ವೇಷದಾರಿಗಳು
ಘಾಸಿಯ ಮಾಡಿದರೆನ್ನುವ ಜಗದೀಶ ನೀನೆ ಬಲ್ಲೆ
ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ”
ಹೀಗೆ ಘಟ್ಟಿವಾಳಯ್ಯನ ಲಿಂಗದೇವನನ್ನು ಜಂಗಮದೇವರುಗಳು ತೆಗೆದುಕೊಂಡ ಮೇಲೆ, ಆತ ಗುಡ್ಡಕ್ಕೆ ಹೋಗಿ ಒಂದು ದೊಡ್ಡ ಗುಂಡಕಲ್ಲಿಗೆ ಹಗ್ಗವನ್ನು ಕಟ್ಟಿಕೊಂಡು ತನ್ನ ಕೊರಳಿಗೆ ಆ ಹಗ್ಗವನ್ನು ಶಿವದಾರದಂತೆ ಸುತ್ತಿಕೊಂಡು ಬಸವಣ್ಣನವರ ಮಹಾಮನೆಯತ್ತ ಬಂದಿದ್ದ. ಆ ದೊಡ್ಡ ಗುಂಡಕಲ್ಲು ಮಹಾಮನೆಯ ಬಾಗಿಲಿಗೆ ಅಡ್ಡವಾಗಿ ನಿಂತಿತ್ತು. ಒಳಗಿದ್ದವರು ಹೊರಗೆ; ಹೊರಗಿದ್ದವರು ಒಳಗೆ ಬರಲಾಗದೆ ಆ ಗುಂಡಕಲ್ಲು ದ್ವಾರವನ್ನು ಬಂದಿಸಿತ್ತು. ಶಿವಶರಣೆ ನಿಲಾಂಬಿಕೆಯವರು ಲಿಂಗದಲ್ಲಿ ಈ ಚೋದ್ಯವನ್ನು ಕಂಡು ಬಿಜ್ಜಳನ ಆಸ್ಥಾನದಲ್ಲಿರುವ ಬಸವಣ್ಣನವರಿಗೆ ಹೇಳಿ ಕಳುಹಿಸಿದ್ದರು. ಬಸವಣ್ಣ, ಅಲ್ಲಮ ಪ್ರಭುಗಳು, ಚನ್ನಬಸವಣ್ಣ, ಮಡಿವಾಳ ತಂದೆಗಳು ಮಹಾಮನೆಯತ್ತ ಬಂದಿದ್ದರು. ಘಟ್ಟಿವಾಳಯ್ಯನ ಜಂಗಮರ ವಿಡಂಬನೆ ಹೀಗೆ ಮುಂದುವರೆದಿತ್ತು.
“ಅಂಡಜ ಮುಗ್ದೆಯ ಮಕ್ಕಳಿರಾ, ಕೆಂಡದ ಮಳೆ ಕರೆವಲ್ಲಿ
ನಿಮ್ಮ ಹಿಂಡಿರು ಹಳುಹೊಕ್ಕು ಹೋದಿರಲ್ಲಾ! ಜಂಗಮವೆಂಬುದಕ್ಕೆ
ನಾಚಿರಿ, ನಿಮ್ಮ ಕಂಗಳ ಹಿಂಡಿರ ತಿಂಬಳೆಯನ್ನರಿಯಿರಿ, ಅವಳು
ಒಮ್ಮೆ ತಿಂಬಳು ಒಮ್ಮೆ ಕರುಣಿಸಿ ಬಿಡುವಳು
ಅವಳು ತಿಂದು ತಿಂದು ಉಗುಳುವ ಬಾಯೊಳಗಣದೆಲ್ಲಾ
ಜಂಗಮವೇ? ಲೋಕವೇಲ್ಲಾ ಅವಳು, ಅವಳು ವಿರಹಿತವಾದ
ಜಂಗಮರಾರೈ ಬಸವಣ್ಣ? ಅವಳು ವಿರಹಿತವಾದ
ಭಕ್ತರಾರೈ ಬಸವಣ್ಣ? ಅವಳ ಮಕ್ಕಳು ನಿನ್ನ ಕೈಯಲ್ಲಿ
ಆರಾಧಿಸಿಕೊಂಬ ಜಂಗಮಕಾಣೈ ಬಸವಣ್ಣ!
ಅವಳು ವಿರಹಿತವಾದ ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ನಲ್ಲದಿಲ್ಲನಿಲ್ಲು ಮಾಣು”
ಹೀಗೆ ಘಟ್ಟಿವಾಳಯ್ಯನ ವಿಡಂಬನೆ ಸಾಗಿದ್ದಾಗ ಅಲ್ಲಮ ಪ್ರಭುಗಳು ಶಿವಾನುಭವ ನಡೆಸಿದ್ದರು. ಜಂಗಮರಿಗೆ ಹಾಗೂ ಘಟ್ಟಿವಾಳಯ್ಯನಿಗೆ ತಿಳಿಹೇಳಿ ಘಟ್ಟಿವಾಳಯ್ಯನ ಲಿಂಗವನ್ನು ಜಂಗಮರಿಂದ ಮರಳಿ ಕೊಡಿಸಿದ್ದರು. ಆಗ ಜಂಗಮದೇವರುಗಳು ಘಟ್ಟಿವಾಳಯ್ಯನನ್ನು ಅಣಕಿಸಿದ್ದರು. ‘ಏನು ಘಟ್ಟಿವಾಳಯ್ಯನವರೆ, ನಿಮಗೆ ಇಬ್ಬರು ಗಂಡಂದಿರೇನು.? ನಾವು ಕಟ್ಟಿದವನೊಬ್ಬ ನೀವು ಕಟ್ಟಿಕೊಂಡವನೊಬ್ಬ’. ಆಗ ಘಟ್ಟಿವಾಳಯ್ಯನವರು ತಮ್ಮ ಲಿಂಗಲೀಲೆ ಮೆರೆದಿದ್ದರು.
“ಲೀಲೆಗೊಳಗಾದ ಲಿಂಗವೇ, ಬಾರಯ್ಯ ಎನ್ನಂಗದೊಳಗಾಗು
ಶೃತ, ದೃಷ್ಟ, ಅನುಮಾನದಲ್ಲಿ ನೋಡುವವರೆಲ್ಲರಿಗೂ
ಅತೀತವಾಗು ಹಾಗೆಂಬುದಕ್ಕೆ ಮುನ್ನವೇ ಆ ಗುಂಡು
ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ ಕಾಯವಡಗಿ ಭಾವವೆಂಬ
ಭಾವಬಯಲಾಯಿತ್ತು ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ”
ಘಟ್ಟಿವಾಳಯ್ಯನವರು ಆ ಗುಂಡನ್ನು ಪರಬ್ರಹ್ಮವೆಂದು ತನ್ನ ಕಾಯದ ಕರಸ್ಥಲದ ಇಷ್ಟಲಿಂಗದಲ್ಲಿ ಅಡಗಿಸಿದ್ದರು. ಘಟ್ಟಿವಾಳಯ್ಯನವರು ಕಲ್ಯಾಣದ ಬೀದಿ ಬೀದಿಗಳಲ್ಲಿ ತಮ್ಮ ದೇಹವನ್ನು ಕೈಮಾಡಿ ತೋರಿಸುತ್ತ ‘ಇದು ಲಿಂಗಕಾಯ ಯಾರೂ ಸಮಾದಿ ಮಾಡ ಬೇಕಿಲ್ಲ, ಇದು ಲಿಂಗದಲ್ಲಿ ಐಕ್ಯವಾಗುತ್ತೆ’. ಎಂದು ನುಡಿಯುತ್ತಿದ್ದರು. ಇಂಥ ಘಟ್ಟಿವಾಳಯ್ಯನವರು ತಮ್ಮ ಲಿಂಗೈಕ್ಯ ಸಮಿಪಿಸಿದಾಗ ಕಲ್ಯಾಣದ ರಾಜ ಬೀದಿಯಲ್ಲಿ ದೇಹವನ್ನು ತ್ಯಜಿಸಿದರು. ಈ ಸುದ್ದಿಯನ್ನು ಚಾರರಿಂದ ತಿಳಿದ ಬಿಜ್ಜಳನು ಬಸವಣ್ಣನವರಿಗೆ ‘ನಿಮ್ಮ ಶರಣರಿಗೆ ನುಡಿದಂತೆ ನಡೆಯುವ ನಡೆಯಿಲ್ಲ, ಯಾರೋ ಒಬ್ಬ ತನ್ನ ಕಾಯಕ್ಕೆ ಸಮಾದಿ ಮಾಡ ಬೇಕಿಲ್ಲ ಎನ್ನುತ್ತಿದ್ದವನು ರಾಜ ಬೀದಿಯಲ್ಲಿ ಬಿದ್ದು ಸತ್ತಿರುವನಂತೆ ಅವನ ನುಡಿ ನಡೆಯಾಗಿಲ್ಲವಲ್ಲ?’ ಎಂದಿದ್ದನ್ನು ಕೇಳಿದ ಬಸವಣ್ಣನವರು ತಮ್ಮ ಶರಣ ಬಳಗದವರೊಂದಿಗೆ ಘಟ್ಟಿವಾಳಯ್ಯನವರು ಜೀವಬಿಟ್ಟ ರಾಜ ಬೀದಿಯಲ್ಲಿ ಬಂದಿದ್ದರು. ಘಟ್ಟಿವಾಳಯ್ಯನ ಲಿಂಗಕಾಯವನ್ನು ಸುತ್ತುವರೆದು ಸಮಾಧಿ ಕ್ರಿಯೆಗೆಂದು ಹೊತ್ತೊಯ್ಯಲು ಆ ಮಹಾಶಿವಶರಣನ ಕಾಯವನ್ನು ಮೇಲೆತ್ತುತ್ತಿದ್ದರು, ಹಾಗೆ ಎತ್ತಿದ ಬಸವಾದಿ ಶಿವಶರಣರ ಕರದಲ್ಲಿಯೇ ಅಡಗಿದಂತೆ ಘಟ್ಟಿವಾಳಯ್ಯನ ಲಿಂಗಕಾಯ ಬಯಲಾಗಿತ್ತು. ಈ ಸುದ್ದಿ ಚಾರರಿಂದ ಬಿಜ್ಜಳಗೆ ತಲುಪಿತ್ತು, ಆತ ಓಡೋಡಿ ಬಂದಿದ್ದ. ಈ ಮಹಾ ಶರಣನ ದರ್ಶನವಾಗಲಿಲ್ಲವಲ್ಲ ಎಂದು ಖಿನ್ನನಾಗಿದ್ದ. ಘಟ್ಟಿವಾಳಯ್ಯನ ಮಹಿಮೆಯನ್ನು ಶರಣರು ಕೊಂಡಾಡಿದ್ದರು.
ಘಟ್ಟಿವಾಳಯ್ಯನವರ ಈ ದೃಷ್ಟಾಂತದಲ್ಲಿ ‘ಶರಣ ಜ್ಞಾನದನಿಧಿ, ಜಂಗಮವೆಂಬುದು ಜ್ಞಾನದ ಸಂಖೇತ’ ಎಂಬುದನ್ನು ಜಂಗಮ ಸಮೂಹದಲ್ಲಿ ಮೂಡಿಸಲು ಯತ್ನಿಸಿರುವರು. ಕರದಿಷ್ಟಲಿಂಗದಲ್ಲಿ ಬೃಹದಾಕಾರದ ಕಲ್ಲುಗುಂಡನ್ನಡಗಿಸಿ ಲಿಂಗಮಹಾತ್ಮೆ ಮೆರೆದ ಮಹಾಮಹಿಮನಾಗಿದ್ದುದು ಮಿಂಚಿನಂತೆ ಹೊಳೆಯುತ್ತದೆ. ಇಂಥ ಘಟ್ಟಿವಾಳಯ್ಯ ಮುಂದೊಂದು ದಿನ ದಿಟ ಜಂಗಮನೊರ್ವ ಈ ಭುವಿಯಲ್ಲಿ ಉದಯಿಸುವನೆಂಬ ಕಾಲಜ್ಞಾನ ವಚನವನ್ನು ಹೇಳಿದ್ದ,
“ಗಿಡಮಾಗಡಿ ಎಂಬ ಪುರದ ಜಂಗಮದೇವ
ಮೃಡಕಣಾ ಭಿಕ್ಷವ ಬೇಡ್ಯಾನು!
ಪೊಡವಿಗೆ ಬಾಗಿ ನೀಡಲು ದೃಢದಿಂದ
ನೀಡಿಸಿಕೊಂಡಾನು !
ಮಲಪುರಿಯ ತೀರದಿ ವಿರಕ್ತಜಂಗಮನೊಬ್ಬ
ನಲವಿಂದ ಹುಚ್ಚನೆನಿಸ್ಯಾನು !
ಲೋಲ ಜನಗಳು ಹೆಸರನೇ ಇಟ್ಟಾರು ಆ
ಸ್ಥಳದಲ್ಲಿಯೇ ಹೂಳಿಸಿಕೊಂಡಾನು”
(ಹಳ್ಳೂರು ಕಾಲಜ್ಞಾನ)
ತಮ್ಮ ಅಂತಃ ಚಕ್ಷುವಿನಲ್ಲಿ ಭೂತ-ಭವಿಷತ್-ವರ್ತಮಾನ ತ್ರಿಕಾಲದ ಆಗುಹೋಗುಗಳನ್ನು ಶಿವಶರಣರು ಕಾಣುತ್ತಿದ್ದರು. ಕಂಡದನ್ನು ಬೆಡಗಿನಲ್ಲಿ ನುಡಿಯುತ್ತಿದ್ದರು. ಈ ಕಾಲಜ್ಞಾನ ವಚನ ಅಂತಹದು. ಮಲಪುರಿ ಎನ್ನುವದೇ ಮಲಪಹಾರಿಣಿ ನದಿತೀರ. ಇಲ್ಲಿಯ ವಿರಕ್ತಜಂಗಮ ಬೇರಾರು ಅಲ್ಲ, ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು. ೭೦೦ ವರ್ಷಗಳ ಹಿಂದೆಯೇ ನುಡಿದ ಈ ಕಾಲಜ್ಞಾನ ವಚನ
ಇಂದು ತಮ್ಮ ಪಾರಾಯಣ ಸಂದರ್ಭದಲ್ಲಿ ಕಂಡು ವಿವೇಚಿಸಲಾಗಿ ಅದು ದಿಟವಾದುದ್ದನ್ನು ಕಂಡು ಶ್ರೀ ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳಿಗೆ ಘಟ್ಟಿವಾಳಯ್ಯನ ಕಾಲಜ್ಞಾನ ಆಶ್ಚರ್ಯ ಮೂಡಿಸಿತ್ತು. ತಮ್ಮ ಸುತ್ತಮುತ್ತ ಇದ್ದವರಿಗೆ ಈ ವಚನ ತೋರಿಸಿ ಎಂಥ ವಿರಕ್ತ ಜಂಗಮನೀತನೆಂದು ಕೊಂಡಾಡಿದ್ದರು. ಇದು ಬೇರಾರು ಅಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಎಂದಾಗ ಶ್ರೀಗಳು ಮುದಡಿಕೊಂಡಿದ್ದರು. ಆತ್ಮಸ್ತುತಿಗೆ ತಮ್ಮ ಜೀವಿತಾವದಿಯಲ್ಲಿ ಎಂದೂ ಅನುಗೊಡದ ಶ್ರೀ ಕುಮಾರ ಮಹಾಸ್ವಾಮಿಗಳಿಗೆ ತಮ್ಮ ಬಗ್ಗೆ ಯಾರಾದರೂ ಬರೆದಿದ್ದು ತಿಳಿದರೆ ಅದನ್ನು ಹರಿದು ಹಾಕುತ್ತಿದ್ದರು. ‘ಬರೆಯುವುದಾದರೆ ಬಸವಾದಿ ಪ್ರಮಥರನ್ನು, ಬಿದರಿ ಕುಮಾರ ಶಿವಯೋಗಿಗಳನ್ನು, ಅಥಣಿ ಶಿವಯೋಗಿಗಳನ್ನು ಕುರಿತು ಬರೆಯಿರಿ’ ಎನ್ನುತ್ತಿದ್ದರಂತೆ. ಇಂಥ ಮಹಾಮಹಿಮರಿಂದ ಸ್ಥಾಪನೆಗೊಂಡ ಶಿವಯೋಗ ಮಂದಿರ ೧೦೦ ಸಂವತ್ಸರಗಳನ್ನು ಪೂರೈಸಿದೆ. ಕಾಲದ ಪರೀಕ್ಷೆಯಲ್ಲಿ ಶಿವಯೋಗದ ಅಂತಃ ಸತ್ವವನ್ನು ಗುಪ್ತವಾಗಿರಿಸಿಕೊಂಡ ೧೧೧ರ ಬೆಳಗನ್ನು
ಜಗತ್ತಿಗೆ ಬೆಳಗುತ್ತಿದೆ. ನಾಡಿನ ಹಲವೆಡೆ ಹಲವಾರು ಸಂಘ ಸಂಸ್ಥೆಗಳು ಸ್ಥಾಪನೆಗೊಳ್ಳುತ್ತವೆ. ಕೆಲವು ಅಲ್ಪಾವದಿಯಲ್ಲಿಯೆ ಅಳಿಯುತ್ತವೆ ಆದರೆ ಶ್ರೀ ಕುಮಾರ ಮಹಾಸ್ವಾಮಿಗಳು ಸ್ಥಾಪಿಸಿದ ಶ್ರೀ ಶಿವಯೋಗ ಮಂದಿರ ಸಂಸ್ಥೆ ಶತಮಾನದಾಟಿ ಮತ್ತೊಂದು ಶತಮಾನ ಉರುಳಿಸಲು ಹೆಜ್ಜೆ ಇರಿಸಿದೆ. ಈ ಶಿವಯೋಗ ಮಂದಿರ ಪರಂಪರೆಯಲ್ಲಿ ಈ ಹಿಂದೆ ಶಿವಶರಣರ ಕಾಲಕ್ಕೆ ಶ್ರೀಶೈಲ, ಕೊಟ್ಟೂರು, ಲಿಂಗನಾಯಕನಹಳ್ಳಿ, ಬಳ್ಳಾರಿಯಲ್ಲಿ ಇಂಥ ಶಿವಯೋಗ ಶಿಕ್ಷಣ ಕೇಂದ್ರಗಳು ಇದ್ದ ದಾಖಲೆಗಳಿವೆ. ಆದರೆ ಇಷ್ಟುವರ್ಷದ ಪ್ರಮಾಣದಲ್ಲಿ ಶಿವಯೋಗದ ಬೆಳಗನ್ನು ಲೋಕಕ್ಕೆ ತೋರಿದ ತೋರುತ್ತಿರುವ ಶ್ರೇಯಸ್ಸು ಶಿವಯೋಗಮಂದಿರ ಸಂಸ್ಥೆಗೆ ಮಾತ್ರ ಸಲ್ಲುವಂತೆ ನಮ್ಮ ಕಣ್ಣೆದುರಿಗೆ ಚರಿತ್ರೆ ನಿರ್ಮಿಸಿದೆ. ಈ ಸಂಸ್ಥೆಯಿಂದ ಹೊರಹೊಮ್ಮಿದವರಲ್ಲಿ ಕಪನಳ್ಳಿಯ ರುದ್ರಮುನಿ ಶಿವಯೋಗಿಗಳಂಥ ಕಾಯಕ ಯೋಗಿಗಳಾಗಿದ್ದಾರೆ, ಶ್ರೀ ಜಚನಿಯವರಂಥ ವಿದ್ವತ್ ಕಲೆಮೆಳೈಸಿದವರಿದ್ದಾರೆ, ನಿಡಗುಂದಿಕೊಪ್ಪದ ಚನ್ನವೀರಸ್ವಾಮಿಗಳಂಥ ದೇಸಿ ಚಿಕಿತ್ಸಾಯೋಗಿಗಳದ್ದಾರೆ, ಗಡಿನಾಡಿನಲ್ಲಿ ಸಾಹಿತ್ಯ ಸಂಸ್ಕೃತಿಗಾಗಿ ನಾಗನೂರಿನ ಶ್ರೀ ಶಿವಬಸವ ಸ್ವಾಮಿಗಳು ಭಾಲ್ಕಿಯ ಚನ್ನಬಸವ ಪಟ್ಟಾಧ್ಯಕ್ಷರು ಹಾಗೂ ಪ್ರಬುಕುಮಾರ ಪಟ್ಟಾಧ್ಯಕ್ಷರಂಥ ಯೋಗಿಗಳಾಗಿದ್ದಾರೆ. ಇವರೆಲ್ಲರು ಶಿವಯೋಗ ಮಂದಿರ ಸಂಸ್ಥೆಯಲ್ಲಿ ತಮ್ಮ ವೈಶಿಷ್ಟತೆ ಮೆರೆಯುವ ಹಾದಿಹಿಡಿದರು. ಶ್ರೀ ಪಂ ಪಂಚಾಕ್ಷರಗವಾಯಿಗಳು ಪುಟ್ಟರಾಜಗವಾಯಿಗಳಂಥವರು ಅಪರೂಪದ ಸಂಗೀತ ಪ್ರತಿಭೆ ಮೆರೆಯಲು ಶ್ರೀ ಕುಮಾರ ಮಹಾ ಸ್ವಾಮಿಗಳವರ ಕೃಪಾಶಿರ್ವಾದವೇ ಮೂಲವಾಗಿದೆ.
ಈ ಮೇಲಿನ ಪರಮ ಪೂಜ್ಯರೆಲ್ಲಾ ಶ್ರೀಕುಮಾರಸ್ವಾಮಿಗಳವರ ಒಡನಾಟದಲ್ಲಿದ್ದು ತಮ್ಮ ಪ್ರತಿಭೆ ಮೆರೆದಿರುವಂತವರು. ಶ್ರೀ ಕುಮಾರಮಹಾಸ್ವಾಮಿಗಳವರ ಲಿಂಗೈಕ್ಯವಾದನಂತರ ಅವರ ಕಾರ್ಯವನ್ನು ಹಲವರು ಮುನ್ನೆಡೆಸುತ್ತ ಪ್ರಸಿದ್ದರಾಗಿದ್ದಾರೆ.ಅಂತವರಲ್ಲಿ ಹೊಸಪೇಟೆ, ಹಾಲಕೆರೆ ಪೀಠದ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಶ್ರೀಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ಎರಡು ದಶಕದಿಂದ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾವಯವ ಕೃಷಿಯಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ತಮ್ಮ ಮಠಗಳಲ್ಲಿ ಹಾಗೂ ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯಲ್ಲಿ ಮಾಡಿ; ಮಾಡುತ್ತಲಿದ್ದಾರೆ. ಮುಂಡರಗಿ ಜಗದ್ಗುರುಗಳು,
ಮೂರುಸಾವಿರಮಠದ ಲಿಂ.ಮೂಜಗಂ ಮೊದಲು ಮಾಡಿ ಅನೇಕರಿರುವರು. ಶ್ರೀ ಕುಮಾರ ಶಿವಯೋಗಿಗಳ ಮಹಾ ಚೇತನ ಸಮಾಜಕ್ಕೆ ಹೇಗೆ ಅಂತಃಶಕ್ತಿ ತುಂಬುತ್ತಿದೆ ಎಂಬುದನ್ನು ಅವಲೋಕಿಸಿದರೆ ಅವರ ಕಾರಣಿಕತನ ಗೋಚರಿಸುತ್ತದೆ.
ಶ್ರೀ ಕುಮಾರ ಮಹಾಸ್ವಾಮಿಗಳು ನಮ್ಮ ಸಂಸ್ಕೃತಿಯೊಳಗಣ ಲೋಕಧರ್ಮಿಣಿ ಹಾಗೂ ಶಿವಧರ್ಮಿಣಿ ವಿದ್ಯೆಯ ಅರಿವುಳ್ಳವರು. ಲೋಕಧರ್ಮಿಣಿ ವಿದ್ಯೆ ಇಹಬಾಳಿನ ಸಾಫಲ್ಯಕಷ್ಟೇ, ಶಿವಧರ್ಮಿಣಿ ವಿದ್ಯೆ ಭವಚಕ್ರದಿಂದ ಪಾರುಗಾಣುವತ್ತಲೂ ಹಾದಿ ತೋರುವಂತಹದ್ದು. ಶಿವಧರ್ಮಿಣಿ ವಿದ್ಯೆ ಕಾಲ ಪ್ರವಾಹದಲ್ಲಿ ಕೊಚ್ಚಿಹೋಗುವಂತಹದ್ದಲ್ಲ. ಅಂತಃ ಶಿವಧರ್ಮಿಣಿ ವಿದ್ಯೆ ನೀಡುವುದು ಶಿವಯೋಗ ಮಂದಿರದ ಗುರಿಯಾಗಿದೆ. ಮಾನವ ಹುಟ್ಟಿನ ನಿಗೂಢ ಶಿವಧರ್ಮಿಣಿಯಲ್ಲಿ ಮಾತ್ರ ಗೋಚರಿಸುವಂತಹದ್ದು. ಶಿವಧರ್ಮಿಣಿಯ ಸರಳೀಕೃತ
ವಿಚಾರದಲ್ಲಿ ಆತ್ಮದ ನಂಬುಗೆಯಲ್ಲಿ ಬ್ರಹ್ಮಾಂಡದಾಚೆಗಿನ ರುದ್ರಾಂಡದಲ್ಲಿಯ ಅತೀತ ನಿಗೂಢಗಳತ್ತ ಸಾಗುವಂತಹದ್ದು .ಅಗೆದಷ್ಟು ನವನವೋನ್ಮೇಶಾಲಿನಿ ಯಾಗುತ್ತದೆ. ನೂರ ಹನ್ನೊಂದು ವರ್ಷಗಳ ದಾಟಿದ ಶ್ರೀಶಿವಯೋಗಮಂದಿರ ಸಂಸ್ಥೆಯಲ್ಲಿ ಈ ಶಿವಧರ್ಮಿಣಿ ಶಿಕ್ಷಣ, ವಿಭೂತಿ ನಿರ್ಮಾಣ, ಗೋಪಾಲನೆ, ದಾಸೋಹ, ಆಯುರ್ವೇದ ಚಿಕಿತ್ಸಾ ಕೇಂದ್ರ ಹಾಗೂ ಮುಂತಾದ ಧರ್ಮೋತ್ತೇಜಕ ಕಾರ್ಯಗಳು ಲೀಲಾತ್ಮಕವಾಗಿ ನಿರಂತರವಾಗಿ ನಡೆಯುತ್ತಲಿವೆ. ಅಂತಃಚಕ್ಷುವುಳ್ಳವರಿಗೆ ಶ್ರೀ ಕುಮಾರ ಶಿವಯೋಗಿಗಳ ಚಿನ್ಮಯ ನಿರಂಜನ ಜ್ಯೋತಿ ಅವರ ಗದ್ದುಗೆಯಲ್ಲಿ ದರ್ಶನಗೊಂಡೀತು. ಆ ಕಾರಣಿಕ ಶಿವಯೋಗಿಯ ಅನುಗ್ರಹ ಸರ್ವಜೀವರ ಆತ್ಮ ಆ ಶಿವಯೋಗಿ, ಶಿವಶರಣರ ಹಾದಿಯಲ್ಲಿ ಮುನ್ನಡೆಯಲಿ ಎಂದು ಆಶಿಸುವೆ.