ಸ್ತುತಿ-ನಿಂದೆ

ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯಸಂಸ್ಥಾನಮಠ ಗದಗ.

ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಸ್ತುತಿ ನಿಂದೆಗಳಿಗೆ ಗುರಿಯಾಗುತ್ತಾನೆ. ಹಾಗೆಯೇ ಇನ್ನೊಬ್ಬರ ಸ್ತುತಿ ನಿಂದೆಗಳಿಗೂ ಕಾರಣನಾಗುತ್ತಾನೆ. ಯಾರಾದರು ತನ್ನನ್ನು ಸ್ತುತಿಸಿದರೆ ಸಹಜವಾಗಿಯೇ ಸಂತಸ ಪಡುತ್ತಾನೆ. ನಿಂದಿಸಿದರೆ ವ್ಯಥೆ ಪಡುತ್ತಾನೆ ಮತ್ತು ನಿಂದಿಸಿದವರೊಡನೆ ದ್ವೇಷ ಸಾಧಿಸುತ್ತಾನೆ. ತಾನು ಇನ್ನೊಬ್ಬರನ್ನು ನಿಂದಿಸಿದಾಗ ಅವರಲ್ಲಿಯೂ ತನ್ನ ಹಾಗೆ ದ್ವೇಷ ಹುಟ್ಟಬಹುದೆಂಬ ಅಥವಾ ಅವರ ದುಃಖಿಸುವರೆಂಬ ಅರಿವು ಆ ವ್ಯಕ್ತಿಗಿರುವುದಿಲ್ಲ. ಇದೇ ಮನುಷ್ಯರ ದೌರ್ಬಲ್ಯ.

ಯಾವುದೇ ಒಬ್ಬ ವ್ಯಕ್ತಿ ಆತ್ಮಸ್ತುತಿ ಮಾಡಿಕೊಳ್ಳುವುದಾಗಲಿ ಅಥವಾ ಎಲ್ಲರೂ ತನ್ನನ್ನು ಹೊಗಳುತ್ತಿರಲಿ ಎಂದು ಬಯಸುವದಾಗಲಿ ತೀರ ಆಘಾತಕಾರಿ. ಬದುಕಿನಲ್ಲಿ ಲೋಕಹಿತ ಕಾರ್ಯಗಳನ್ನು ಜರುಗಿಸಿದಾಗ, ಆದರ್ಶಯುತವಾದ ಬದುಕನ್ನು ಬದುಕಿದಾಗ ಲೋಕದ ಜನ ಅನೇಕ ರೀತಿಯಲ್ಲಿ ಹೊಗಳುತ್ತಾರೆ, ಗೌರವಿಸುತ್ತಾರೆ. ಆದರೆ ಜನರು ಹೊಗಳಲಿ, ಗೌರವಿಸಲಿ ಎಂಬ ಭಾವನೆಯಿಂದ ಲೋಕಹಿತ ಕಾರ್ಯಗಳನ್ನು ಮಾಡಬಾರದು. ಒಮ್ಮೊಮ್ಮೆ ತಮ್ಮ ಕಾರ್ಯಸಾಧನೆಗಾಗಿ ಹೊಗಳುಭಟ್ಟರು ವ್ಯಕ್ತಿಯನ್ನು ಹೊಗಳುತ್ತಾರೆ. ಆ ಹೊಗಳಿಕೆಯ ಹಿಂದಿನ ಉದ್ದೇಶವನ್ನರಿತು ಅಂಥ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದು. ಹೊಗಳಿಕೆ ಅಥವಾ ಸ್ತುತಿಯಿಂದ ವ್ಯಕ್ತಿ ಮದೋನ್ಮತ್ತನಾಗಿ ಅಧಃಪತನ ಹೊಂದುವ ಸಾಧ್ಯತೆಯೂ ಇದೆ. ‘ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ…. ನೀನು ಒಳ್ಳಿದನಾದರೆ ಎನ್ನ ಹೊಗಳಿಕೆಗೆ ಅಡ್ಡಬಾರಾ ಧರ್ಮಿ’ ಎಂದು ಬಸವಣ್ಣನವರು ದೇವರಲ್ಲಿ ಪ್ರಾರ್ಥಿಸುವುದನ್ನು ಗಮನಿಸಿದರೆ ಈ ಮಾತು ಅತ್ಯಂತ ಸ್ಪಷ್ಟವೆನಿಸುತ್ತದೆ. ಆತ್ಮಸ್ತುತಿಯೂ ಒಂದು ದುರ್ಗುಣ. ವ್ಯಕ್ತಿಯ ಅಂತರಂಗ ಹಾಗು ಬಹಿರಂಗ ಶುದ್ಧಿಗೆ ಮಾರಕವಾಗುವ ಏಳು ದುರ್ಗುಣಗಳಲ್ಲಿ ಇದೂ ಒಂದು. ಅಂತೆಯೇ ‘ತನ್ನ ಬಣ್ಣಿಸಬೇಡ’ ಎಂದು ಬಸವಣ್ಣ ಎಚ್ಚರಿಸುತ್ತಾನೆ.

ಪರರ ದೋಷಗಳನ್ನೆಣಿಸುವುದು ಒಳ್ಳೆಯದಲ್ಲ. ದೋಷೈಕ ದೃಷ್ಟಿ ಅಹಂಭಾವದ ಪ್ರತೀಕ. ಅದು ಪರನಿಂದೆಗೆ ದಾರಿ ಮಾಡಿಕೊಡುತ್ತದೆ. ಪರನಿಂದೆಯಂತಹ ದೊಡ್ಡ ದೋಷ ಇನ್ನೊಂದಿಲ್ಲ. ನಿಂದಕನಿಗಿಂತ ನೀಚ ಮತ್ತೊಬ್ಬನಿಲ್ಲ. ಅವನ ಮೈ, ಮನ,

ಮಾತುಗಳೆಲ್ಲವೂ ದೋಷಯುಕ್ತವಾಗಿರುವ ಕಾರಣ ಇನ್ನೊಬ್ಬರಲ್ಲಿ ದೋಷಗಳನ್ನೆಣಿಸುವದು ಮತ್ತು ಅವರನ್ನು ನಿಂದಿಸುವುದು ಅವನ ಸಹಜ ಗುಣವಾಗಿರುತ್ತದೆ.ಭಕ್ತಕವಿ ತುಳಸೀದಾಸರು ನಿಂದಕರನ್ನು ಕುರಿತು ‘ಸಬಕರ ನಿಂದಾ ಜೋ ನರ ಕರಯಿ |ಸೋ ಚಮಗಾದರ ಹೋ ಅವತರಯಿ||’ ಅಂದರೆ ‘ವಿನಾಕಾರಣ ಎಲ್ಲರನ್ನು ನಿಂದಿಸುವ  ಮನುಷ್ಯ ಮುಂದಿನ ಜನ್ಮದಲ್ಲಿ ಬಾವಲಿಯಾಗಿ ಹುಟ್ಟುತ್ತಾನೆ.’ ಎಂದು ಹೇಳುತ್ತಾರೆ. ಬಾವಲಿಯು ಆಹಾರವನ್ನು ಸ್ವೀಕರಿಸಿದ ಬಾಯಿಯಿಂದಲೇ ಮಲವಿಸರ್ಜನೆಯನ್ನೂ ಮಾಡುವುದರಿಂದ ಅದೊಂದು ಕೀಳು ಪ್ರಾಣಿ ಎಂಬ ನಂಬಿಕೆ ಇದೆ. ನಿಂದೆಯಂತಹ ದುರಿತ ಕರ್ಮ ಬೇರೊಂದಿಲ್ಲ ಎಂದು ಹೇಳಿರುವುದು ಈ ಕಾರಣಕ್ಕಾಗಿಯೇ

ನಾಹಂ ಲೋಕೇ ನ ಲೋಕೋಹಂ ಲೋಕನಿಂದಾ ಕುತೋಮಮ

ಇತಿ ನಿಶ್ಚಯದ್ಭಾವಃ ಶಿವಜ್ಞಾನೀತಿ ಕಥ್ಯತೇ

ಶಿವಜ್ಞಾನಿಗಳಾದವರು ಲೋಕದಲ್ಲಿ ನಾನಿಲ್ಲ, ನಾನು ಲೋಕವಲ್ಲ, ಲೋಕನಿಂದೆಯೂ ನನ್ನದಲ್ಲ. ಎಂಬ ನಿಶ್ಚಯ ಭಾವ ಉಳ್ಳವರಾಗಿರುತ್ತಾರೆ. ಯಾರು ನಿಂದಿಸಿದರೂ ಅವರನ್ನು ಪ್ರತಿಯಾಗಿ ನಿಂದಿಸುವುದಿಲ್ಲ. ನಿಂದೆಗೆ ನಿಂದೆ ಒಳ್ಳೆಯದಲ್ಲ. ನಿಂದಿಸಿದವರನ್ನ ತಂದೆ-ತಾಯಿಗಳೆಂಬ ಭಾವ ಅವರದು. ಲೌಕಿಕ ಸ್ತುತಿ-ನಿಂದೆಗಳು ಅವರನ್ನೆಂದೂ ಅಲುಗಿಸವು, ‘ಆರೇನಂದರೂ ಓರಂತಿಪ್ಪುದೇ ಸಮತೆ, ಆರು ಜರಿದರೂ ಅವರೆನ್ನ ಕಾಳಿಕೆಯ ಕಳೆದರೆಂಬುದೇ ಸಮತೆ, ಆರು ಸ್ತೋತ್ರ ಮಾಡಿಹರೆನ್ನ ಜನ್ಮ ಹಗೆಗಳೆಂಬುದೇ ಸಮತೆ’ ಎಂಬಂತಹ ಚಿತ್ತಸಮತೆಯನ್ನು ಶಿವಜ್ಞಾನಿಗಳು ಹೊಂದಿರುತ್ತಾರೆ. ಸ್ತುತಿನಿಂದೆಗಳು ಬಂದರೆ ಸಮಾಧಾನಿಯಾಗಿರುವುದೇ ಅವರ ಲಕ್ಷಣ. ‘ದೂಷಣೆ ಮಾಡಲದೊಂದೆ ಜನರತಿ ಭೂಷಣ ಮಾಡಲದೊಂದೆ’ ಎಂದು ಘನಮಠದಾರ್ಯರ ಮಾತಿಗೆ ಅವರ ಬದುಕೊಂದು ನಿದರ್ಶನ.

ಜಗತ್ತಿನಲ್ಲಿ ಸ್ತುತಿಸುವವರು ಪುಣ್ಯದ ಫಲವನ್ನೂ, ನಿಂದಿಸುವವರು ಪಾಪದ ಫಲವನ್ನು ಅನುಭವಿಸುತ್ತಾರೆ. ಆದ್ದರಿಂದ ಯಾರನ್ನೂ ಯಾವ ಕಾಲಕ್ಕೂ ನಿಂದಿಸಬಾರದು. ವ್ಯಕ್ತಿಗಳಲ್ಲಿರುವ ದೋಷಗಳನ್ನೆಣಿಸಿ ನಿಂದಿಸುವುದೂ ಉಚಿತವಲ್ಲ. ಅವರ ದೋಷ ದುರ್ಗುಣಗಳನ್ನು ಮರೆತು ಆದರಿಸುವುದೇ ಸೂಕ್ತ. ಇದರಿಂದ ಆ ವ್ಯಕ್ತಿಗಳೂ ತಮ್ಮಲ್ಲಿರುವ ದೋಷಗಳನ್ನು ತಿದ್ದಿಕೊಳ್ಳುತ್ತಾರೆ. ಆಗ ರಾಗ-ದ್ವೇಷಗಳು ಅಳಿದು ಪರಸ್ಪರ ಪ್ರೀತಿ ವಿಶ್ವಾಸಗಳು ಹೆಚ್ಚಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯವಾಗುತ್ತದೆ.

Related Posts