ಡಾ.ಗುರುಬಸವ.ಹಿರೇಮಠ.ಬೆಂಗಳೂರು
(ಮೊಗ್ಗೆ ಮಾಯಿದೇವ ಕ್ರಿ.ಶ. ೧೪೩೦ ಹುಟ್ಟಿದ ಊರು: ಮಲಪ್ರಭಾ ನದಿ ದಂಡೆಯ ಐಪುರ ಕ್ಷೇತ್ರ[ಹುನಗುಂದ ತಾಲೂಕಿನ ಹಿರೇಮಾಗಿ (ಮಗ್ಗೆ)] ,ತಂದೆ: ಸಂಗಮೇಶ್ವರ.ಐಒಳೆ (ಐಪುರಿ) ಯ ಶ್ರೀ ಸಂಗಮೇಶ್ವರ ಗುರುವಿನಲ್ಲಿ ಇವರ ಅಧ್ಯಯನ .ವಿಜಯನಗರ ಇವರ ಕಾರ್ಯ ಭೂಮಿಯಾಯಿತು. ಅನುಭವ ಸೂತ್ರ, ಶಿವ ಸೂತ್ರ -ಇವರ ಸಂಸ್ಕೃತ ಗ್ರಂಥಗಳು.
ಶಿವಾಧವ ಶತಕ, ಶಿವಾವಲ್ಲಭ ಶತಕ, ಐಪುರೀಶ್ವರ ಶತಕ -ಈ ಮೂರು ಶತಕಗಳು ಲಭ್ಯವಾಗಿವೆ. ಪ್ರಭುನೀತಿ, ಏಕೋತ್ತರ ಶತಸ್ಥಲ ಷಟ್ಪದಿ, ಷಟ್ಸ್ಥಲ ಗದ್ಯ, ಶತಕತ್ರಯ -ಈ ಕೃತಿಗಳು ಲಭ್ಯವಾಗಿಲ್ಲ.
ಬಸವ ಯುಗದಲ್ಲಿ ಹೆದ್ದೊರೆಯಾಗಿ ಹರಿದಿದ್ದ ತತ್ವಸಿದ್ಧಾಂತದ ವಚನ ವಾಹಿನಿ ಕೆಲಕಾಲ ಗುಪ್ತಗಾಮಿನಿಯಾಗಿ ಪ್ರವಹಿಸಿ ವಿಜಯನಗರದ ಇಮ್ಮಡಿ ಪ್ರೌಢರಾಯನ ಕಾಲದಲ್ಲಿ ಮತ್ತೆ ಬೃಹದ್ರೂಪ ತಾಳಿ ಹೊರಹೊಮ್ಮಿತು. ವೀರಶೈವ ಸಾಹಿತ್ಯದ ವಸಂತಕಾಲ ಮತ್ತೆ ಮೂಡಿ ಬಂದಿತು. ನೂರೊಂದು ವಿರಕ್ತರು ಕಾಣಿಸಿಕೊಂಡರು. ಅವರೆಲ್ಲ ಅನುಭಾವಿಗಳು ನಿಜ. ಆದರೆ ಎಲ್ಲರೂ ಸಾಹಿತ್ಯ ಸೃಷ್ಟಿಸಿದವರಲ್ಲ. ಸಾಹಿತ್ಯ ಸೃಷ್ಟಿಸಿದ ಪ್ರಮುಖರಲ್ಲಿ ಒಬ್ಬ ಮೊಗ್ಗೆಯ ಮಾಯಿದೇವ ).
ಭಾರತೀಯ ದರ್ಶನಗಳಲ್ಲಿ ಬೆಳಕಿದೆ, ಬದುಕಿದೆ, ಭರವಸೆಯ ಅತ್ಯಂತಿಕ ಸತ್ಯದ ಸುವಿಧಾನವಿದೆ. ಅವುಗಳಲ್ಲಿ ವೀರಶೈವ ಷಟ್ ಸ್ಥಲ ಸಿದ್ಧಾಂತವು ಒಂದು, ಇದು ಮಾಯಿದೇವರ ಕೃತಿಗಳಲ್ಲಿ ಮಹಾ ಚೇತನವಾಗಿ ಸಾಧಕರಿಗೆ ಬೆಳಕು ಚೆಲ್ಲಿದೆ. ಧರ್ಮನಿಷ್ಠೆ, ದಾರ್ಶನಿಕ ಸಿದ್ಧಾಂತದ ನಿಲುವು, ಅಪರಿಮಿತ ಅನುಭವ ಹೇಗೆ ಕರ್ತೃವಿನ ಶಕ್ತಿ ಅಪಾರ. ವೀರಶೈವ ಸಾಹಿತ್ಯ ಚರಿತ್ರೆಯಲ್ಲಿ ೧೫ನೇ ಶತಮಾನ ಒಂದು ಸುವರ್ಣಯುಗ. ತೋಂಟದ ಸಿದ್ಧಲಿಂಗ ಯತಿಗಳು ಸಮಾಜೋಧಾರ್ಮಿಕಮಣಿಹದಲ್ಲಿ ತೊಡಗಿದ್ದರು. ಪುಲಿಗೆರೆ ಸೋಮನಾಥ, ಶಂಕರದೇವ, ಶಾಂತ ವೃಷಭೇಶ, ವಿರಕ್ತ ತೋಂಟದಾರ್ಯ ಯೋಗಾನಂದ, ನಿಜಲಿಂಗಾರಾಧ್ಯ, ಶಾಂತಾಚಾರ್ಯ, ಹರಿಹರದೇವ ಈ ಪುಣ್ಯ ಪಂಕ್ತಿಯಲ್ಲಿ ಎದ್ದು ತೋರುವ ಶಿವಶಕ್ತಿ ಅದುವೇ ಮೊಗ್ಗೆಯ ಮಾಯಿದೇವ.
ಶ್ರೀ ಗುರುವೇ ಮಹಾಗುರುವೆ ಶಾಂತಿಕಳಾಗುರುವೇ ಶಿವಾತ್ಮವಿದ್ಯಾ
ಗುರುವೇ ಪುರಾಗುರುವೇ ವಿಶ್ವಜಗದ್ಗುರುವೇ ವಿಶುದ್ಧ ಚೆಷ್ಟಾಗುರುವೇ
ಸುಧೀಗುರುವೆ ಭಕ್ತಿ ಯಶೋಗುರುವೇ ಪ್ರಸಾದ ತೇಜೋ
ಗುರುವೇ ಕೃಪಾಗುರುವೇ ಮದ್ಗುರುವೇ ಗುರುವೇ ಶಿವಾಧವಾ!!
ಇದು ಶತಕತ್ರಯದ ಮೊದಲ ನುಡಿ. ಪ್ರಥಮದಲ್ಲಿ ಶ್ರೀಗುರುವನ್ನು ಸ್ತುತಿಸಿ ಷಟ್ ಸ್ಥಲ ಸಂಪತ್ತಿಗೆ ಮಹತ್ತಿಗೆ ಶಾಂತಿ ಕಳೆಗೆ ಶಿವಾತ್ಮ ವಿದ್ಯೆಗೆ ಪುರಾತನತೆಗೆ ವಿಶಾಲ ಜಗತ್ತಿಗೆ ವಿಶುದ್ಧ ಚರಿತ್ರೆಗೆ ಉತ್ತಮ ಬುದ್ಧಿವಂತಿಕೆಗೆ ಭಕ್ತಿ ಕೀರ್ತಿಗೆ ಪ್ರಸಾದ ತೇಜಸ್ಸಿಗೆ ಕೃಪೆಗೆ ಎನಗೆ ಶ್ರೀ ಗುರುವಾದವರಿಗೆ ಅನಂತ ಶರಣಾರ್ಥಿ. ಕನ್ನಡ ಶತಕ ಸಾಹಿತ್ಯದಲ್ಲಿ ಶತಕತ್ರಯಕ್ಕೆ ಉನ್ನತ ಸ್ಥಾನ ಮೀಸಲಾಗಿದೆ ಮಾಯಿದೇವರು ಪಟ್ಟಾಧ್ಯಕ್ಷರಾದರೂ ಪಟ್ಟದಲ್ಲಿ ಕೂಡಲಿಲ್ಲ, ಅವರ ಶಿವಯೋಗದ ನಿಲುವು ನೀಳಾಗಿದೆ. ಇವರು ತಮ್ಮ ಶತಕತ್ರಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಹಂತ ಹಂತವಾಗಿ ಸಾಧನ ಕ್ರಮವನ್ನು ಎಲ್ಲಾ ಮತಿಗಳಿಗೂ ಮಥನವಾಗುವಂತಹ ಸರಳ ಸಾಹಿತ್ಯ.
ಮಾಯಿದೇವರ ಶತಕ ವೀರಶೈವರ ಸಿದ್ಧಾಂತಗಳಾದ ಅಷ್ಟಾವರಣ, ಷಟ್ ಸ್ಥಲ ಮತ್ತು ಪಂಚಾಚಾರದ ತತ್ವವನ್ನು ಎಲ್ಲರಿಗೂ ತಿಳಿಯುವಂತೆ ತಿಳಿಹೇಳುವ ಪರಿ ಅಮೋಘ. ವೀರಶೈವ ತತ್ವಗೀತೆಗೆ ಶತಕತ್ರಯ ಹೊರಹೊಮ್ಮಿದೆ ಕರ್ತೃಗಳು ವ್ಯಕ್ತಿ ಪ್ರತಿಪಾದನೆಗಿಂತ ತತ್ವ ಪ್ರತಿಪಾದನೆ ಬಹಳ ಚೆನ್ನಾಗಿ ಕುಸುಮಗಳಂತೆ ಅರಳಿ ನಿಂತಿವೆ. ಅವರ ಪ್ರಾಸ ಬದ್ಧ ನುಡಿಗಳು ಸಾಧಕನನ್ನು ಪ್ರಯಾಸಗೊಳಿಸದೆ ಪ್ರಬುದ್ಧ ಗೊಳಿಸುತ್ತವೆ.
ಮಾಯಿ ದೇವರ ಶತಕ ಮೂರು ವಿಷಯಾನುಸಾರ ವಿಭಾಗಗೊಂಡಿದೇ.
೧. ಭಕ್ತಿ ಪ್ರತಿಪಾದಕ
೨. ಜ್ಞಾನ ಪ್ರತಿಪಾದಕ
೩. ವೈರಾಗ್ಯ ಬೋಧಕ
ವೀರಶೈವ ತತ್ತ್ವಗಳಾದ ಭಕ್ತಿ – ಜ್ಞಾನ – ವೈರಾಗ್ಯಗಳನ್ನು ಘನವಾಗಿ ಭಾವಪೂರ್ಣವಾಗಿ ಕನ್ನಡದಲ್ಲಿ ಬೆಡಗಿನ ರೂಪದಲ್ಲಿ ಬಿತ್ತರಿಸಿವೆ. ಮತ್ತೊಂದು ವಿಶೇಷವೆಂದರೆ ಮೂರು ವಿಭಾಗಗಳಲ್ಲಿಯೂ ಬೇರೆ ಬೇರೆ ಅಂಕಿತನಾಮ ಇದೊಂದು ಮಾಯಿದೇವರ ವಿಶಿಷ್ಟ.೧೫ನೆಯ ಶತಮಾನದ ಪೂರ್ವಾರ್ಧ ಮೊಗ್ಗೆಯಲ್ಲಿ ಜನಿಸಿ, ಐತಿಹಾಸಿಕ ನಗರಿ ಐಹೊಳೆಯಲ್ಲಿ ಅಧ್ಯಯನ ಪೂರೈಸಿ ಚರ ಜಂಗಮರಾಗಿ ಸಾಹಿತ್ಯ ಸಂಪಾದಿಸಿ ಹಂಪೆಯ ಶಿವನೊಂಪಿಯೊಳಗೆ ಶತಕ ಕಾವ್ಯ ಶರಣ ಸಂಪದ ರಚಿಸಿ ಸಾರ್ಥಕ ಶಿವಯೋಗಿಗಳೆನಿಸಿದರು.
ಮೊಗ್ಗೆ ಮಾಯಿದೇವ ಶಿವಾಚಾರ್ಯರು, ಉಪಮನ್ಯು ಶಿವಾಚಾರ್ಯರ ಪರಂಪರೆಯವರೆಂದು ತಿಳಿದು ಬರುತ್ತದೆ. ಐಪುರಿ ಸೋಮನಾಥನಲ್ಲಿ ಶ್ರದ್ಧೆಯುಳ್ಳವರು ಇವರ ಕೈಯಿಂದ
೧. ಶಿವಾನುಭವ ಸೂತ್ರo (ಸಂಸ್ಕೃತ)
೨. ವಿಶೇಷಾರ್ಥ ಪ್ರಕಾಶಿಕಾ (ಸಂಸ್ಕೃತ)
೩. ಶತಕತ್ರಯ ಪ್ರಕಾಶಿಕಾ(ಸಂಸ್ಕೃತ)
೪. ಷಟ್ ಸ್ಥಲ ಗದ್ಯ
೫. ಸ್ವರವಚನಗಳು
೬. ಪದ್ಯಕೊತ್ತರ ಶತಸ್ಥಲ
೭.ಪ್ರಭುಗೀತ ಹೀಗೆ ಇನ್ನೂ ಅನೇಕ.
ಇವರು ವಿಜಯನಗರದ ಪ್ರೌಢರಾಯರಿಂದ ಗೌರವ ಪಡೆದವರು. ಮಾಯಿದೇವರು ಬಹುಭಾಷಾ ಪಂಡಿತರು. ಶಿವಾಚಾರ್ಯರಾಗಿ ನಾಡೆಲ್ಲಾ ಸಂಚರಿಸಿ ಶಿವತತ್ವವನ್ನು ಪ್ರಸಾರ ಮಾಡಿದ್ದಾರೆ ತಮ್ಮ ಹೆಸರಿನೊಂದಿಗೆ ವಿಭೂ- ಮಹಾತ್ಮ – ಶ್ರೀಮಾನ್ ಎಂಬ ಬಿರುದುಗಳನ್ನು ಸೇರಿಸಿಕೊಳ್ಳದ ನಿರಾಭಾರಿತ್ವ ಅವರದು. ಇಷ್ಟದೈವ, ಮಹಾದೈವಪುರಿಶ್ವರ, ಆರಾಧ್ಯ ಗುರುಗಳು ಉಪಮನ್ಯು ಶಿವಾಚಾರ್ಯರು, ಭೀಮನಾಥಪ್ರಭು, ಕಲ್ಮೈಶ್ವರ, ಬೊಪ್ಪನಾಥಗುರು, ಶ್ರೀನಾಕರಾಜ, ಶ್ರೀ ಸಂಗಮೇಶ್ವರ ಇಂತಹ ಮಹಾ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದ ಈ ಸಾಧಕ ಗುರುದೇವರ ಕುರಿತು ಭಕ್ತಿ ಪ್ರತಿಪಾದಕ ಶಿವಾಧವಾ ಮೊದಲ ಶತಕ.
ಸಂಸ್ಕೃತ ಮತ್ತು ಕನ್ನಡದ ಪ್ರಕಾಂಡ ಪಂಡಿತರಾದ ಮಾಯಿದೇವರು ತಮ್ಮ ಕೃತಿಗಳಲ್ಲಿ ಧರ್ಮ ಸಿದ್ಧಾಂತಗಳನ್ನು ಎಳೆ ಎಳೆಯಾಗಿ ಹೇಳಿದ್ದಾರೆ. ಶತಕತ್ರಯಗಳಲ್ಲಿ ಮೊದಲು ಭಕ್ತಿಪ್ರತಿಪಾದಕವಾಗಿ ಶಿವಾಧವ ಎಂಬ ಅಂಕಿತದೊಂದಿಗೆ ಮುಂದಿನ ಭಾಗದಲ್ಲಿ ಜ್ಞಾನ ನಿರೂಪಕವಾಗಿ ಶತಕವನ್ನು ಶಿವಾವಲ್ಲಭ ಎಂಬ ಅಂಕಿತದೊಂದಿಗೆ ಕೊನೆಯದಾಗಿ ವೈರಾಗ್ಯ ಭೋದಕವಾಗಿ ಮಹದೈಪುರೀಶ್ವರಾ.
ನುಡಿವೆಡೆಯಲ್ಲಿ ನೋಡುವೆಡೆಯಲ್ಲಿ ರಮಿಪ್ಪೆಡೆಯಲ್ಲಿ ವಸ್ತುವಂ
ಪಿಡಿವೆಡೆಯಲ್ಲಿ ಭೋಗಿಪೆಡೆಯಲ್ಲಿ ಸುಖಂಬಡೆವಲ್ಲಿ ದೇಹಮಂ
ಬಿಡುವೆಡೆಯಲ್ಲಿ ಲಿಂಗಕಳೆ ಲಿಂಗಗುಣಂ ಘನಲಿಂಗಯೋಗಮಾದೊಡೆ
ಬಳಿಕಾ ಮಹಾತ್ಮನನದೇನೆನ ಬರ್ಪುದದಂ ಶಿವಾಧವಾ||
ಆಡುವಾಗ ನೋಡುವಾಗ ಕ್ರೀಡಿಸುವಾಗ ಪಡಿ ಪದಾರ್ಥವನ್ನು ಹಿಡಿಯುವಾಗ ವಿಷಯವನ್ನು ಭೋಗಿಸುವಾಗ ಸುಖಾನುಭವದಲ್ಲಿರುವಾಗ ಮೈದೆಗೆಯುವಾಗ ಸ್ವಾರ್ಥವಾಸನೆಯಿಲ್ಲದೆ ಲಿಂಗ ಕಳೆ, ಲಿಂಗ ಗುಣ ಲಿಂಗಯೋಗಗಳಲ್ಲಿ ನಿಬ್ಬೆರಗಾದ ಆ ಮಹಾನುಭಾವನನ್ನು ಬಣ್ಣಿಸಲು ಸಾಧ್ಯವಿಲ್ಲ
ಶ್ರೀ ಮಚ್ಛಾಂಭವ ಭಕ್ತಿಯೋಗ ವಿಲಸನ್ನಿರ್ವಾಣ ನಿತ್ಯೋತ್ಸವ
ಪ್ರೇಮಾನಂದರಸಾಬ್ಧಿವರ್ಧನ ಸದಾಚಾರಕ್ರಿಯಾಕೌಶಲಾ
ರಾಮೋದ್ಧಾಮ ಗುಣಪ್ರಭೂತ ಮಹದೈಶ್ವರ್ಯಾನುಭೊತಿ ಪ್ರಭಾ
ಧಾಮಂ ತತ್ಪರಮಂ ಪದಂ ಗುರುಪದಂ ವಂದೇ ಶಿವಾವಲ್ಲಭಾ||
ಪರಮಪದ ಗುರುಪದ; ಎಂದು ಹೆಸರಾಂತ ಅದಕ್ಕೆ ಪೊಡಮಡುವೆ. ಶ್ರೀಮಂತವಾದುದು ಶಾಂಭವಭಕ್ತಿಯೋಗ; ಅದನ್ನು ವಿಕಾಸಗೊಳಿಸುವುದು ಗುರುಚರಣ. ಆ ಭಕ್ತಿಕುಸುಮದ ಮಕರಂದ ಮುಕ್ತಿ; ಅದರಲ್ಲಿ ಅಚ್ಚಳಿಯದ ಉಲ್ಲಾಸವನ್ನು ಉಂಟುಮಾಡುವುದು ಗುರುಚರಣ ಮತ್ತು ಪ್ರೇಮಾನಂದ ರಸಾಬ್ಧಿಯನ್ನು ವರ್ಧಿಸುತ್ತದೆ; ಎಂದಿಗೂ ಕ್ರಿಯಾಚಾರ ಕುಶಲತೆಯಿಂದೊಪ್ಪುತ್ತದೆ; ಉದ್ದಾಮ ಗುಣ, ಪ್ರಭೂತ ಐಶ್ವರ್ಯ, ಅನುಭೂತಿ ಪ್ರತಿಭೆಗಳಿಗೆ ನೆಲೆಯಾಗಿದೆ ಗುರುಚರಣ.
ಲಿಂಗದೊಳಿಟ್ಟ ದೃಷ್ಟಿ ನಿಜದೃಷ್ಟಿಯೊಳಿರ್ದ ಮನಂ ಮನಸ್ಸಿನೊಳ್
ಪಿಂಗದ ನಿಂದ ಭಾವಮದರೊಳ್ ನೆ
ಲೆಗೊಂಡ ಶಿವಾತ್ಮ ಲಿಂಗವಾ
ಲಿಂಗದೊಳಿರ್ದು ನಿತ್ಯ ಸುಖಿಯಾಗಿ ವಿರಾಜಿಸುವಂಗೆ ಬಾಹ್ಯಕ
ರ್ಮಂಗಳವೇತಕ್ಕಯ್ಯ ಪರಮಪ್ರಭುವೇ ಮಹದೈಪುರೀಶ್ವರಾ||
ಕಲಾತ್ಮಕ ಲಿಂಗದಲ್ಲಿ ನೆಟ್ಟನೋಟ, ಆ ನೆಟ್ಟನೋಟದಲ್ಲಿ ನೆಲೆಸಿದ ಮನ, ಆ ಮನಸಿನಲ್ಲಿ ಬೆರೆಸಿದ ಭಾವ, ಆ ಭಾವದಲ್ಲಿ ನೆಲೆಗೊಂಡು ಪರಶಿವಲಿಂಗ, ಆ ಲಿಂಗದಲ್ಲಿ ಸಂಗಸಮರಸದಿಂದಿದ್ದು ನಿತ್ಯಸುಖಿಯಾಗಿ ವಿರಾಜಿಸುವವನಿಗೆ ಬಾಹ್ಯಜಡ ಕರ್ಮಗಳು ಬೇಕಿಲ್ಲ. ಇವುಗಳಿಂದ ಆತನಿಗೆ ಆಗಬೇಕಾದುದೂ ಏನೊಂದಿರುವುದಿಲ್ಲ.
ಶಿವಾನುಭವಸೂತ್ರಂ ಹಾಗೂ ವಿಶೇಷಾರ್ಥ ಪ್ರಕಾಶಿಕಾ ಎರಡು ಗ್ರಂಥಗಳು ಪೂರ್ವೋತ್ತರ ಭಾಗಗಳಿಂದ ಕೂಡಿದ ಗ್ರಂಥಗಳು. ಪೂರ್ವಭಾಗದ ಶಿವಾನುಭವ ಸೂತ್ರಂ ಗ್ರಂಥದಲ್ಲಿ ಷಟ್ ಸ್ಥಲ ವಿಷಯವನ್ನು ವಿಸ್ತಾರವಾಗಿ ಪ್ರತಿಪಾದಿಸಿರುವನು. ಮಾಯಿದೇವನು ಆ ಗ್ರಂಥದಲ್ಲಿ ಉಳಿದಿರುವ ವಿಶೇಷ ವಿಷಯದ ಪ್ರತಿಪಾದನೆಯನ್ನು ವಿಶೇಷಾರ್ಥ ಪ್ರಕಾಶಿಕೆಯಲ್ಲಿ ಮಾಡಿರುವುದರಿಂದ ಆ ಗ್ರಂಥಕ್ಕೆ ವಿಶೇಷಾರ್ಥ ಪ್ರಕಾಶಿಕಾ ಎಂದು ಕರೆದಿರುವನು. ಸ್ಥಳ ನಿರ್ದೇಶನ, ಲಿಂಗಸ್ಥಲ ನಿರೂಪಣ, ಅಂಗಸ್ಥಲ ಸ್ವರೂಪ, ಲಿಂಗಾಂಗ ಸಂಯೋಗವಿಧಿ, ಸರ್ವಾಂಗ ಲಿಂಗ ಸಾಹಿತ್ಯ, ಅರ್ಪಣಸದ್ಭಾವ, ಕ್ರಿಯಾವಿಶ್ರಾಂತಿ, ವೀರಶೈವ ವಿಧ್ಯುಕ್ತ ವಿಧಾನಗಳ ಪ್ರತಿಪಾದನೆ, ಬ್ರಹ್ಮೋಪದೇಶವಿಧಿ, ಷಟ್ ಸ್ಥಲ ಬ್ರಹ್ಮಪೂಜಾ, ಪ್ರಸಾದಸದ್ಭಾವ, ಷಟ್ ಸ್ಥಲ ಬ್ರಹ್ಮ ಪುರಶ್ಚರಣ, ದೇಹಾವಸಾನ ಈ ಎಲ್ಲಾ ವಿಷಯಗಳನ್ನು ಎರಡು ಗ್ರಂಥಗಳಲ್ಲಿ ಶಾಸ್ತ್ರೀಯವಾಗಿ ಪ್ರತಿಪಾದಿಸಿರುವನು. ಷಟ್ ಸ್ಥಲ ಗದ್ಯದಲ್ಲಿ ಆಯಾ ಸಾಧಕನ ಲಕ್ಷಣವನ್ನು ಸಂಕ್ಷಿಪ್ತವಾಗಿ ಪ್ರತಿಪಾದಿಸಿರುವನು. ವಾರ್ಧಕ ಷಟ್ಪದಿಯಲ್ಲಿ ರಚಿತವಾದ ಏಕೋತ್ತರ ಶತಸ್ಥಲದಲ್ಲಿ ನೂರೊಂದು ಸ್ಥಲಗಳ ಲಕ್ಷಣಗಳನ್ನು ಪ್ರತಿಪಾದಿಸಿರುವನು. ಆತನ ಉಪಲಬ್ಧ ಸ್ವರವಚನಗಳಲ್ಲಿ ಲಿಂಗಾಂಗ ಸಾಮರಸ್ಯದ ಸ್ವರೂಪವನ್ನು ಪ್ರತಿಪಾದಿಸಿರುವನು. ಹೀಗೆ ಮಾಯಿದೇವನ ಸಮಗ್ರ ಕೃತಿಗಳಲ್ಲಿ ಶಿವಾನುಭವ ವೀರಶೈವದ ತಾತ್ವಿಕ ನೆಲೆಗಟ್ಟಿನ ಹಿನ್ನಲೆಯಲ್ಲಿ ಮೂಡಿರುವುದು ಕರ್ತೃವಿನ ಅನುಭವದ ಮಹೋನ್ನತ ದ್ಯೋತಿಕವಾಗಿದೆ.”ಮಹಾತ್ಮನನದೇನೆನ ಬರ್ಪುದದಂ ಶಿವಾಧವಾ” ಈ ಧ್ಯೇಯವೇ ಮಗ್ಗೆಯ ಮಾಯಿದೇವನ ಹಂಬಲವಾಗಿತ್ತು, ಇದು ಸಾಧಕನ ಹಂಬಲವಾಗಿರಬೇಕು.
ಗ್ರಂಥಋಣ
೧. ಶತಕತ್ರಯ ಅರ್ಥ ವಿವರಿಸಿದವರು ಶ್ರೀ ಜ.ಚ.ನಿ.
೨. ಮೊಗ್ಗೆಯ ಮಾಯಿದೇವ: ಒಂದು ಅಧ್ಯಯನ ಡಾ. ಡಿ. ವಿ. ಪುರಾಣಿಕ
೩. ಮಹಾತ್ಮರ ಚರಿತಾಮೃತ: ಪ್ರಭು ಚನ್ನಬಸವ ಸ್ವಾಮೀಜಿ
