ಅನಂತಪುರ ಹಂಡೆ ಪಾಳೆಗಾರರು

ಶ್ರೀ . ಟಿ . ಹೆಚ್ . ಎಂ . ಸದಾಶಿವಯ್ಯ

(ಗ್ರಂಥ ಋಣ ಹಂಡೆ ಪಾಳೆಯಗಾರರ ಇತಿಹಾಸ ಮತ್ತು ಪರಂಪರೆ ಸಂ.ಶ್ರೀ ಪ್ರೊ.ಎಸ್.ಸಿ.ಪಾಟೀಲ್‌ 

ಗ್ರಂಥ ಸೌಜನ್ಯ ಶ್ರೀ ಜಿ.ಎನ್.ಪಾಟೀಲ್‌ ಬಾಗಲಕೋಟೆ)

(ವೀರಶೈವ-ಲಿಂಗಾಯತ ಹಂಡೆ ವಜೀರ. ಮನೆತನದ ರಾಜಗುರುಗಳು ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ.ಕೊಟ್ಟೂರ ಪೀಠಕ್ಕೂ ಹಂಡೆವಜೀರ ಸಮಾಜಕ್ಕೂ ಇತಿಹಾಸ ದಾಖಲೆ ಸಹಿತ ಅನ್ಯೋನ್ಯ ಅವಿನಾಭಾವ ಸಂಬಂಧವಿದೆ ).

 ಬಳ್ಳಾರಿಜಿಲ್ಲೆ , ಅನಂತಪುರಜಿಲ್ಲೆ ಮತ್ತು ಕರ್ನೂಲು ಜಿಲ್ಲೆಯ ಒಂದು ಭಾಗ ಇವುಗಳು ಒಂದು ಪ್ರಾಂತವಾಗಿ ಹುಟ್ಟಿದ್ದು ಈ ಪ್ರಾಂತದ ದೊರೆತನವು ೧೬ ನೇಯ ಶತಮಾನದ ಪ್ರಾರಂಭದಿಂದ ೧೯ ನೇಯ ಶತಮಾನದ ಪ್ರಾರಂಭದವರೆಗೂ ಕನ್ನಡಿಗರಾದ ಮಾಂಡಲಿಕರ ಪರಿಪಾಲನೆಯಲ್ಲಿದ್ದಿತು . ಹಂಡೆ ಅನಂತಪುರದ ಕೈಫಿಯತ್ತು ಗಳಿಂದ ತಿಳಿದುಬರುವ ಹಂಡೆ ವಂಶದ ಪಾಳೆಗಾರರ ಚರಿತ್ರೆಯು ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಮಹತ್ವ ಸ್ಥಾನವನ್ನು ಪಡೆದಿದೆ . ಈ ಪಾಳೆಯಗಾರರ ಮುಖ್ಯ ಪಟ್ಟಣವು ಅನಂತಪುರ ಜಿಲ್ಲೆಯ ಕೇಂದ್ರ ಸ್ಥಾನವಾದ ಅನಂತಪುರವು . ಚರಿತ್ರೆಯಲ್ಲಿ ಈ ಪಟ್ಟಣವು ಹಂಡೆ ಅನಂತಪುರವೆಂದು ಪ್ರಸಿದ್ಧವಾಗಿದೆ . ಇದರ ಸೂತ್ವದ ಹೆಸರು ಅನಂತಸಾಗರವು . ಕ್ರಿ.ಶ .೧೩೬೪ ರಲ್ಲಿ ವಿಜಯನಗರದ ಬುಕ್ಕರಾಯನ ದಿವಾನನಾದ ಚಿಕ್ಕಪ್ಪ ಒಡೆಯರು ಇಲ್ಲಿ ಒಂದು ದೊಡ್ಡ ತಟಾಕವನ್ನು ನಿರ್ಮಿಸಿ ಅದರ ಎಡಬಲಗಳಲ್ಲಿ ಬುಕ್ಕರಾಯನ ಹೆಸರಿನಲ್ಲಿ ಬುಕ್ಕರಾಯ ಸಮುದ್ರವನ್ನೂ ಆತನ ಹೆಂಡತಿಯಾದ ಅನಂತಮ್ಮನ ಹೆಸರಿನಲ್ಲಿ ಅನಂತಸಾಗರವನ್ನೂ ನಿರ್ಮಿಸಿದನೆಂದು ಈ ಕೆರೆಯ ಬಳಿ ಇರುವ ದೇವರಕೊಂಡ ಎಂಬ ಗುಡ್ಡದ ಮೇಲಿರುವ ದೇವಾಲಯದ ಒಂದು ಶಾಸನದಿಂದ ತಿಳಿದು ಬರುತ್ತದೆ . ಈ ಶಾಸನದ ಕಾಲವು ಶಕೆ ೧೨೪೬ ಕ್ರೋಧಿ ಸಂ ಕಾರ್ತಿಕ ಬ .೫ ಗುರುವಾರ , ಅಳಿಯ ರಾಮರಾಯನ ಕಾಲದಲ್ಲಿ ಈ ಗ್ರಾಮಗಳು ಹಂಡೆ ವಂಶದವರ ವಶವಾದವು . ಹಂಡೆವಂಶದ ಮೂಲಪುರುಷನಾದ ಹನಮಪ್ಪರಾಯನು ಶುದ್ಧ ಕನ್ನಡಿಗನು . ಸೊನ್ನಲಾಪುರ ( ಈಗಿನ ಸೊಲ್ಲಾಪೂರ ) ವು ಈತನ ಮೂಲ ಸ್ಥಾನವು . ಜಾತಿಯಲ್ಲಿ ಲಿಂಗವಂತನು . ಈತನ ವಂಶದ ವಿಷಯವಾಗಿ ಹಂಡೆ ಅನಂತಪುರದ ಚರಿತ್ರೆಯಲ್ಲಿ ಈ ರೀತಿ ಹೇಳಿದೆ : – “ ಈ ಹಂಡೆ ವಂಶದವರು ಶಿವಭಕ್ತರು , ಲಿಂಗವಂತರು , ಇವರ ಕುಲದೈವವೂ ಆದ ವಿಜಾಪೂರ ಸೀಮೆಯಲ್ಲಿರುವ ಸೊನ್ನಲಾಪುರದ ಸಿದ್ಧರಾಮೇಶ್ವರನ ವಿನಃ ಇತರ ದೈವಗಳನ್ನು ಇವರು ಪೂಜಿಸುವುದಿಲ್ಲ . ಶಿವಪೂಜೆ ಮಾಡದೆ ನೀರನ್ನು ಸಹ ಕುಡಿಯುವುದಿಲ್ಲ . ಮಧ್ಯ ಸೇವಿಸುವುದಿಲ್ಲ . ಮಾಂಸ ಭಕ್ಷಣೆಯನ್ನು ಮಾಡುವದಿಲ್ಲ . ರಜಸ್ವಲೆಯಾದ ಹೆಣ್ಣನ್ನು ಮದುವೆ ಮಾಡಿಕೊಳ್ಳುವುದಿಲ್ಲ . ಸತ್ತವರನ್ನು ವೀರಶೈವಾಚಾರ ಪದ್ಧತಿ ಪ್ರಕಾರ ಸಮಾಧಿ ಮಾಡುವರು .

 ಹಂಡೆ ಹನುಮಪ್ಪ ರಾಯನು

 ಆಗಿನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ದೊಡ್ಡದೊಂದು ಗಂಡಾಂತರದಿಂದ ಪಾರು ಮಾಡಿದ ವೀರನು . ವಿಜಯನಗರದ ಕೋಶಾಧಿಪತಿಯಾದ ಬೊಕ್ಕಸಂ ತಿಮ್ಮಯ್ಯನೆಂಬವನು ಸಾಮ್ರಾಜ್ಯದ ಚತುರಂಗ ಬಲವನ್ನು ತನ್ನ ಸ್ವಾಧೀನ ಪಡಿಸಿಕೊಂಡು ಅಳಿಯ ರಾಮರಾಯನನ್ನು ಸೆರೆಯಲ್ಲಿಡಬೇಕೆಂದು ಪ್ರಯತ್ನಿಸಿದ್ದನು . ವಿಜಯನಗರ ಸಾಮ್ರಾಜ್ಯವನ್ನು ಆಹುತಿಗೊಳ್ಳಬೇಕೆಂದು ಹಾತೊರೆಯುತ್ತಿದ್ದ ನಿಜಾಂಷಾಹಾ , ಪರೀದುಷಹಾ , ಅಲಿಆದಿಲ್‌ಷಹಾ ಮುಂತಾದ ಮುಸಲ್ಮಾನ ನವಾಬರಿಗೇ ಇಡೀ ಸಾಮ್ರಾಜ್ಯವನ್ನೇ ವಶಪಡಿಸುವುದರಲ್ಲಿದ್ದನು . ಅವನ ಪಿತೂರಿಯ ಪರಿಣಾಮವಾಗಿ ಆ ನವಾಬರು ವಿಜಯನಗರದ ಮೇಲೆ ದಂಡೆತ್ತಿ ಬಂದರು . ಆ ಸಂದರ್ಭದಲ್ಲಿ ವಿಪನ್ನಾವಸ್ಥೆಯಲ್ಲಿದ್ದ ಅಳಿಯ ರಾಮರಾಯನು ವಿಜಾಪುರ ಪ್ರಾಂತದಲ್ಲಿದ್ದ ಹಂಡೆ ಹನುಪ್ಪರಾಯನ ಸಹಾಯವನ್ನು ಬೇಡಿದನು . ಅವನ ಸಹಾಯದಿಂದ ತಿಮ್ಮಯ್ಯನ ಬಂಡಾಯವನ್ನು ಮುರಿದು ವಿಜಯನಗರವನ್ನು ಸ್ವಾಧೀನ ಪಡಿಸಿಕೊಂಡನು . ತರುವಾಯ ಹನುಮಪ್ಪರಾಯನು ನಿಜಾಂ ನವಾಬರನ್ನು ಕೈಸೆರೆಮಾಡಿ ತಂದು ರಾಮರಾಯನಿಗೆ ಕಾಣಿಕೆಯಾಗಿ ಒಪ್ಪಿಸಿದನು . ಅವನ ಧೈರ್ಯ ಸಾಹಸಾದಿಗಳಿಗೆ ಮೆಚ್ಚಿ ರಾಮರಾಯನು ಅವನಿಗೆ ಪೂರ್ವಭಾಗದಲ್ಲಿ ನಂದ್ಯಾಲ , ಬುಕ್ಕರಾಯಸಮುದ್ರ , ಧರ್ಮವರ ಮತ್ತು ಕಣೇಕಲ್ಲು ಗ್ರಾಮಗಳನ್ನು ಮತ್ತು ಪಶ್ಚಿಮ ಭಾಗದಲ್ಲಿ ಬಳ್ಳಾರಿ ಮತ್ತು ಕುರಗೋಡು ಗ್ರಾಮಗಳನ್ನೂ ಉಂಬಳಿ ಹಾಕಿಕೊಟ್ಟನು . ಹನಮಪ್ಪರಾಯನು ಬುಕ್ಕರಾಯಸಮುದ್ರದಲ್ಲಿ ಬಲವಾದ ಕೋಟೆಯನ್ನು ಕಟ್ಟಿ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು . ಆತನ ಮಗನಾದ ಇಮ್ಮಡಿ ಹಂಪರಾಯನು

ಕ್ರಿ.ಶ. ೧೫೮೩ ರಿಂದ ೧೨ ವರ್ಷಗಳು ರಾಜ್ಯವಾಳಿ ಬುಕ್ಕರಾಯಸಮುದ್ರದಲ್ಲಿ ಗತಿಸಿದನು . ಈತನ ಮಗನಾದ ಮಲಕಪ್ಪರಾಯನು ಈತನ ಆನಂತರ ಪಟ್ಟವನ್ನೇರಿ ಮುಸಲ್ಮಾನರ ಯುದ್ಧದಲ್ಲಿ ವಿಜಯನಗರ ಸಾಮ್ರಾಟರಿಗೆ ಬಹು ವಿಧವಾಗಿ ಸಹಾಯ ಮಾಡಿದನು . ತಾಳಿಕೋಟೆ ಯುದ್ಧದಲ್ಲಿ ಭಾಗವಹಿಸಿದ್ದನು . ವಿಜಯನಗರ ಸಾಮ್ರಾಜ್ಯದ ಪತನದ ನಂತರ ಗೋಲ್ಗೊಂಡದ ನವಾಬನ ಆಶ್ರಯದಲ್ಲಿ ಸೇರಿಕೊಂಡು ತನ್ನ ರಾಜ್ಯವನ್ನು ಭದ್ರಪಡಿಸಿಕೊಂಡದ್ದಲ್ಲದೆ ಬುಕ್ಕಪಟ್ಟಣದವರೆಗೂ ಇದ್ದ ದಕ್ಷಿಣ ಪ್ರಾಂತವನ್ನು ಪಡೆದುಕೊಂಡನು . ನವಾಬನು ಇವನಿಗೆ “ ಬಾದುಷಾ ವಜೀರನೆಂಬ ಬಿರುದನ್ನು ಕೊಟ್ಟನು . ಅನಂತಪುರದಲ್ಲಿ ಒಂದು ಅರಮನೆಯನ್ನು ಕಟ್ಟಿಸಿ ಅದನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು . ಸಿದ್ಧರಾಮಮ್ಮ ನೆಂಬ ಈತನ ಪಟ್ಟದ ಹೆಂಡತಿಯಿಂದ ಈತನಿಗೆ ( ೧ ) ದೇವಪ್ಪರಾಯ ( ೨ ) ಸಣ್ಣರಾಮಪ್ಪರಾಯ ( ೩ ) ಲಿಂಗಪ್ಪರಾಯ ಮತ್ತು ( ೪ ) ಹಂಪರಾಯ ಎಂಬ ನಾಲ್ಕು ಜನರು ಮಕ್ಕಳಿದ್ದರು . ಅವರಿಗೆ ಈ ಕೆಳಕಂಡಂತೆ ತನ್ನ ರಾಜ್ಯವನ್ನು ಹಂಚಿಕೊಟ್ಟನು : ೧. ದೇವಪ್ಪರಾಯನಿಗೆ ನಂದ್ಯಾಲಸೀಮೆ ( ತಾಡಪತ್ರಿ , ಮೊದ್ದಟೂರು ಮುಂತಾದವು ೨. ಸಣ್ಣರಾಮಪ್ಪರಾಯನಿಗೆ ಬಳ್ಳಾರಿ , ಕುರಗೋಡು , ಮತ್ತು ಸುತ್ತ ಮುತ್ತಣ ಪ್ರಾಂತಗಳು ೩. ಲಿಂಗಪ್ಪರಾಯನಿಗೆ ಕಂದುರ್ಪಿ , ಕಣೇಕಲು ಸೀಮೆ ( ರಾಯದುರ್ಗ ಧರ್ಮವರ ತಾಲೂಕು ) . ೪. ಹಂಪರಾಯನಿಗೆ ಅನಂತಪುರ , ಬುಕ್ಕಪಟ್ಟಣ ಮತ್ತು ಧರ್ಮವರ ಸೀಮೆ . ಮಲಕಪ್ಪರಾಯನ ಕಾಲದಲ್ಲಿ ಬಳ್ಳಾರಿ ಅನಂತಪುರ ಮಂಡಲದ ಅರ್ಧ ಭಾಗವು ಹಂಡೆ ವಂಶದವರ ಸ್ವಾಧೀನದಲ್ಲಿದ್ದಿತೆಂದು ಮೇಲ್ಕಂಡ ವಿಭಾಗದಿಂದ ಗೊತ್ತಾಗುತ್ತದೆ . ಮನೋ ಸಾಹೇಬರ ಅಂದಾಜಿನ ಮೇರೆಗೆ ಈ ಭಾಗದ ಭೂಕಂದಾಯವು ರೂ ೧೩೭೩೧೬ ಇದ್ದಿತು . ಮಲಕಪ್ಪನ ಅನಂತರ ಹಂಪರಾಯನು ( ಕ್ರಿ.ಶ. ೧೬೧೯-೧೬೩೧ ) ಮತ್ತು ಸಿದ್ದರಾಯನು ( ಕ್ರಿ.ಶ.೧೬೩೧-೧೬೫೯ ) ಅಳಿದರು . ಇವರ ಅನಂತರ ಪಟ್ಟಕ್ಕೆ ಬಂದ

 ಪವಾಡಪ್ಪರಾಯನ ( ಕ್ರಿ.ಶ. ೧೬೫೯-೧೬೭೧ ) ಕಾಲದಲ್ಲಿ ರಾಯದುರ್ಗದ ಪಾಳ್ಯಗಾರನು ಧರ್ಮವರವನ್ನು ಅಕ್ರಮಿಸಿಕೊಂಡನು . ಪವಾಡಪ್ಪನು ಅಕಸ್ಮಿಕವಾಗಿ ಗತಿಸಲು ಅತನ ಹೆಂಡತಿ ಸಿದ್ಧರಾಮಕ್ಕ ತನ್ನ ಅಲ್ಪವಯಿ ಮಗನಾದ ಸಿದ್ಧರಾಯನ ಹೆಸರಿನಲ್ಲಿ ಕೆಲಕಾಲ ರಾಜ್ಯವಾಳಿದಳು . ಸಿದ್ದಪ್ಪರಾಯನ ಮಗ ಪ್ರಸನ್ನಪ್ಪನು ರಾಯದುರ್ಗದ ಪಾಳೆಯಗಾರನೊಡನೆ ಯುದ್ಧವಾಡಿ ಧರ್ಮವರ ಪ್ರಾಂತವನ್ನು ಮರಳಿ ಪಡೆದುಕೊಂಡನು . ಈತನು ವಸಂತಮ್ಮನೆಂಬವಳಿಂದ ಕ್ರಿ.ಶ. ೧೭೧೯ ರಲ್ಲಿ ದುರ್ಮರಣಕ್ಕೆ ಗುರಿಯಾಗಲು ಇವನ ತಮ್ಮನಾದ ಇಮ್ಮಡಿ ಪವಾಡಪ್ಪರಾಯನು ಗಾದಿಯನ್ನೇರಿದನು . ಇವನು ಕಡುಗಲಿಯು ಕಡಪೆ ನವಾಬನಿಗೆ ಕಪ್ಪ ಕೊಡಲು ನಿರಾಕರಿಸಿದನು . ನವಾಬನ ಕಡೆಯವರು ಈತನನ್ನು ಅರಮನೆಯಲ್ಲಿ ಈ ರಾಜಮನೆತನದ ಗುರುಗಳಾಗಿದ್ದ ಶ್ರೀ ನಿಡುಮಾಮಿಡಿ ಕರಿಬಸವ ಸ್ವಾಮಿಗಳು ಬಂದಿಯನ್ನಾಗಿಟ್ಟು ಕಡಪೆಗೆ ಕೊಂಡೊಯ್ಯುವುದರಲ್ಲಿದ್ದರು . ಈ ದುರ್ಘಟ ಪ್ರಸಂಗದಲ್ಲಿ ತಮ್ಮ ಶಿಷ್ಯಪರಿವಾರದೊಡನೆ ಅನಂತಪುರಕ್ಕೆ ಬಂದು ಅಲ್ಲಿ ಚನ್ನಬಸಪ್ಪನೆಂಬ ರಾಜ ಬಂಧುವಿಗೆ ನೆರವಾಗಿ ನಿಂತು ರಾಯನನ್ನು ಸೆರೆಯಿಂದ ಬಿಡಿಸಿದರು .

ಈತನು ೧೭೩೭ ರಲ್ಲಿ ನಿಡಿಮಾಮಿಡಿ ಮಠದಲ್ಲಿ ಗತಿಸಿದರು . ಈತನ ಅನಂತರ ರಾಜ ಕುಟುಂಬದಲ್ಲಿ ಅಂತಃಕಲಹವು ಹುಟ್ಟಿ ಸಂಸ್ಥಾನದ ಪತನಕ್ಕೆ ಕಾರಣವಾಯಿತು . ಒಂದು ಪಕ್ಷದವರು ಪ್ರಸನ್ನಪ್ಪನ ಮಗನಾದ ರಾಮಪ್ಪನನ್ನು ಪಟ್ಟಕ್ಕೆ ತರಬೇಕೆಂದು ಪ್ರಯತ್ನಿಸಿದರು . ಗುತ್ತಿ ದುರ್ಗದ ನಾಯಕನಾಗಿದ್ದ ಮುರಾರಿರಾಯನು ರಾಮಪ್ಪನ ಪಕ್ಷವನ್ನು ಸೇರಿ ಅವನನ್ನು ಪಟ್ಟಕ್ಕೇರಿಸಿದನು . ರಾಮಪ್ಪನ ಪ್ರತಿಕಕ್ಷಿಯಾಗಿದ್ದ ಸಿದ್ದಪ್ಪನು ಸೆರೆಮನೆಯಲ್ಲಿ ಗತಿಸಲು ಅವನ ಹೆಂಡತಿ ಭದ್ರಮ್ಮ ಬಳ್ಳಾರಿಗೆ ಹೋಗಿ ಆ ಸೀಮೆಯನ್ನು ಆಳುತ್ತಿದ್ದ ಇದೇ ವಂಶದ ಬಳ್ಳಾರಿ ರಾಮಪ್ಪನನ್ನು ಅಶ್ರಯಿಸಿದಳು .

 ಅನಂತಪುರದ ರಾಮಪ್ಪ ( ಕ್ರಿ.ಶ. ೧೭೪೦-೧೭೪೫ )

 ಈತನು ಬಹು ಶೂರನೆಂದು ಹೆಸರುಗೊಂಡಿರುವನು . ಇವನ ಕಾಲದಲ್ಲಿ ರಾಯದುರ್ಗ ಕೋನೇಟರಾಯನು ಬುಕ್ಕಪಟ್ಟಣ್ಣದ ಮೇಲೆ ದಂಡೆತ್ತಿ ಬಂದನು . ರಾಮಪ್ಪನು ಅವನನ್ನು ಓಡಿಸಿ ಕೊನೆಗೆ ಮುಕ್ತಾಪುರದ ಹತ್ತಿರ ಸಂಪೂರ್ಣವಾಗಿ ಸೋಲಿಸಿದನು . ಬಳ್ಳಾರಿಯನ್ನು ಸೇರಿದ್ದ ಭದ್ರಮ್ಮ ಅನಂತಪುರದ ರಾಮಪ್ಪನ ಮೇಲೆ ಸೇಡುತೀರಿಸಿಕೊಳ್ಳಲು ಕಾರಸ್ಥಾನವನ್ನು ನಡೆಸಿದಳು . ಬಳ್ಳಾರಿ ರಾಮಪ್ಪನು ಅನಂತಪುರದ ರಾಮಪ್ಪನ ಮಗನನ್ನು ದತ್ತಕ ತೆಗೆದುಕೊಳ್ಳುವಂತೆ ಮಾಡಿದಳು . ಬಳ್ಳಾರಿ ರಾಮಪ್ಪನು ಅನಂತಪುರಕ್ಕೆ ಹೋಗಿ ಮೋಸ ರೀತಿಯಿಂದ ಅರಮನೆಯಲ್ಲೇ ಅನಂತಪುರದ ರಾಮಪ್ಪನನ್ನು ಕೊಲ್ಲಿಸಿ ಅನಂತಪುರ ರಾಜ್ಯವನ್ನು ತನ್ನ ಬಳ್ಳಾರಿ ರಾಜ್ಯಕ್ಕೆ ಸೇರಿಸಿಕೊಂಡನು .

ಅನಂತಪುರ ರಾಮಪ್ಪನ ಮಗನಾದ ಸಿದ್ಧರಾಮನನ್ನು ಸೆರೆಹಿಡಿದು ಬಳ್ಳಾರಿ ಕೋಟಿಯಲ್ಲಿಟ್ಟನು . ಸಿದ್ಧರಾಮಪ್ಪನು ತನ್ನ ಭಾವನಾದ ಬಸಪ್ಪನ ಸಹಾಯದಿಂದ ಸೆರೆಮನೆಯಿಂದ ತಪ್ಪಿಸಿಕೊಂಡು ಹಿರೇಹಾಳನ್ನು ಸೇರಿದನು . ಸ್ವಾಮಿ ಭಕ್ತ ಬಸಪ್ಪನ ಭಗೀರಥ ಪ್ರಯತ್ನದ ಫಲವಾಗಿ ಸಿದ್ಧರಾಮಪ್ಪನು ಕ್ರಿ.ಶ .೧೭೨೩ ರಲ್ಲಿ ಅನಂತಮರದ ಸಿಂಹಾಸನವನ್ನೇರಿದನು . ಬಸಪ್ಪನು ಅವನಿಗೆ ಮಂತ್ರಿಯಾಗಿದ್ದು  ತಾಡಪತ್ರಿರೊದ್ದ , ಎಲ್ಲುಲ್ಲ ಮುಂತಾದ ಸ್ಥಳಗಳನ್ನು ಜಯಸಿ ಅನಂತಪುರ ರಾಜ್ಯಕ್ಕೆ ಸೇರಿಸಿದನು . ಈ ವೀರ ಸರದಾರನು ಬುಕ್ಕಪಟ್ಟಣದ ಕೆರೆಯ ದಂಡೆಯನ್ನು ದುರಸ್ತು ಮಾಡಿಸುವ ಕೆಲಸದಲ್ಲಿ ಅವಿಶ್ರಾಂತ ಶ್ರಮ ಪಟ್ಟು ಕ್ರಿ.ಶ .೧೭೭೨ ರಲ್ಲಿ ಗತಿಸಿದನು .

 ಹೈದರಲ್ಲಿ

 ಇದೇ ಕಾಲದಲ್ಲಿ ಬಾಷಾಲಾಲ ಜಂಗವೆಂಬುವನು ಬಳ್ಳಾರಿಕೋಟೆಗೆ ಮುತ್ತಿಗೆ ಹಾಕಿದ್ದು ಹಂಡೆವಂಶದ ದೊಡ್ಡಯ್ಯನೆಂಬ ಪಾಳೆಯಗಾರನು ಮೈಸೂರಿನ ಹೈದರಲ್ಲಿಯ ಸಹಾಯದಿಂದ ಅವನನ್ನು ಓಡಿಸಿದನು . ಆದರೆ ಸಹಾಯಕ್ಕೆಂದು ಬಂದಿದ್ದ ಹೈದರಲಿಯು ಬಳ್ಳಾರಿಯನ್ನು ತಾನೇ ವಶಪಡಿಸಿಕೊಂಡು ಅಮೇಲೆ ಗುತ್ತಿಯನ್ನು ಅಕ್ರಮಿಸಿ ಅನಂತಪುರದ ಮೇಲೆ ಕಪ್ಪವನ್ನು ವಿಧಿಸಿದನು . ಕಪ್ಪದ ಬಾಕಿಯನ್ನು ವಸೂಲ ಮಾಡುವ ನೆಪದಿಂದ ಅನಂತಪುರದ ಸಿದ್ಧರಾಮಪ್ಪನನ್ನು ಸೆರೆಹಿಡಿದು ಅನಂಪುರವನ್ನು ಸಹ ಸ್ವಾಧೀನ ಪಡಿಸಿಕೊಂಡನು . ಸಿದ್ಧರಾಮಪ್ಪನ ಇಬ್ಬರು ಮಕ್ಕಳು ಹೈದರಲ್ಲಿಯ ದಂಡಿನಲ್ಲಿ ಸೇರಿದರು . ಮೂರನೇಯ ಮಗ ಸಿದ್ಧಪ್ಪನು ಶ್ರೀರಂಗಪಟ್ಟಣಕ್ಕೆ ಕಳುಹಿಸಲ್ಪಟ್ಟನು . ಸಿದ್ಧರಾಮಪ್ಪನು ೧೭೮೮ ರಲ್ಲಿ ಗತಿಸಿದನು . ಹೈದರಲ್ಲಿಯ ಅನಂತರ ಬಂದ ಟಿಪ್ಪುಸುಲ್ತಾನನು ಈ ದುರ್ದೈವಿ ವಂಶದ ಗಂಡು ಸಂತತಿಯನ್ನು ನಿರ್ಮೂಲಗೊಳಿಸಿದನು . ಶ್ರೀರಂಗ ಪಟ್ಟಣದ ಸೆರೆಮೆನೆಯಲ್ಲಿದ್ದ ಸಿದ್ಧಪ್ಪನು ಹೇಗೋ ಸೆರೆ ತಪ್ಪಿಸಿಕೊಂಡು ಕಾಳಹಸ್ತಿ ರಾಜನ ಮೊರೆಹೊಕ್ಕನು . ಶ್ರೀರಂಗ ಪಟ್ಟಣವು ಪತನವಾಗಿ ಟೀಪು ಸುಲ್ತಾನನು ಕೊಲ್ಲಲ್ಪಟ್ಟ ನಂತರ ಈತನು ಪುನಃ ಅನಂತಪುರವನ್ನು ಸ್ವಾಧೀನ ಪಡಿಸಿಕೊಂಡನು . ನಿಜಾಮನ ಅಶ್ರಯದಲ್ಲಿ ಕೆಲಕಾಲ ಅಳಿದನು . ನಿಜಾಮನು ಈತನಿಗೆ ಸಿದ್ಧರಾಮಪುರವನ್ನು ಉಂಬಳಿಹಾಕಿಕೊಟ್ಟನು . ೧೮೦೧ ರಲ್ಲಿ ಈತನು ಗತಿಸಿದ ನಂತರ ಈ ಹಂಡೆ ಸಂಸ್ಥಾನವು ನಿಶೇಷವಾಯಿತು .

ಆಂಗ್ಲರ ಪ್ರಭುತ್ವ

ಕ್ರಿ.ಶ .೧೮೦೦ ರಲ್ಲಿ ಬಳ್ಳಾರಿ , ಅನಂತಪುರ , ಕಡಪ , ಕರೂಲ ಜಿಲ್ಲೆಗಳು ನಿಜಾಮನಿಂದ ಇಂಗ್ಲಿಷರಿಗೆ ಕೊಡಲ್ಪಟ್ಟ ಅಂದಿನಿಂದ ದತ್ತಮಂಡಳಗಳೆಂದು ವ್ಯವಹರಿಸಲ್ಪಡುತ್ತದ್ದ ಮದ್ರಾಸು ಪ್ರಾಂತಕ್ಕೆ ಸೇರಿಸಲ್ಪಟ್ಟವು . ಇಂಗ್ಲಿಷ್ ಸರಕಾರದ ಪ್ರತಿನಿಧಿಯಾಗಿದ್ದ ಮನೋ ದೊರೆಯು ಅನಂತಪುರವನ್ನು ತನ್ನ ಕೇಂದ್ರ ಸ್ಥಾನವಾಗಿ ಮಾಡಿಕೊಂಡು ಈ ಮಂಡಲವನ್ನು ಸುವ್ಯವಸ್ಥೆಗೊಳಿಸಿದನು . ಹಂಡೆ ವಂಶದವರು ೧೮೬೦ ರ ವರಿವಿಗೂ ಇಂಗ್ಲಿಷ್ ಸರಕಾರದಿಂದ ಜೀವನಾಂಶ ಪಡೆಯುತ್ತ ಬಂದರು . ಈ ವಂಶದ ಪುರುಷ ಸಂತತಿಯಲ್ಲಿ ಕೊನೆಯವನಾದ ವಸಂತರಾಯನು ತೀರಿದ ಮೇಲೆ ಈತನ ಹೆಂಡತಿ ಕಲ್ಯಾಣಮ್ಮ ದತ್ತು ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ವಂಶದ ವಾರಸುದಾರರು ಎಲ್ಲೆಲ್ಲಿರುವರೆಂಬ ಬಗ್ಗೆ ಮನೋ ದೊರೆಯಿಂದ ವಿಚಾರಣೆ ನಡೆಸಲ್ಪಟ್ಟಿತು . ಈ ವಿಚಾರಣೆಯಲ್ಲಿ ಈ ವಂಶದ ಮೂಲಪುರುಷನು ವಿಜಾಪುರ ತಾಲೂಕ ಬಾಗೇವಾಡಿ ಪರಗಣೆಯ ಮುತ್ತಿಗೆ , ವಡವಡಿಗೆ , ಗ್ರಾಮಗಳ ನಾಯಕನಾದ ಲಕ್ಕರಾಯನೆಂಬುವನೆಂದೂ , ಅತನ ಹಿರೇ ಮಗನಾದ ಬಲದ ಹನಮಪ್ಪರಾಯನು ಅನಂತಪುರ – ಬಳ್ಳಾರಿ ಪ್ರಾಂತಕ್ಕೆ ಬಂದು ಅಲ್ಲಿ ನೆಲೆಸಿದನೆಂದೂ ಕಿರಿಯ ಮಗ ಬಳಗಾನಾಯಕನ ಸಂತತಿಯವರು ವಿಜಾಪುರ ಪ್ರಾಂತದಲ್ಲಿರುವರೆಂದೂ ತಿಳಿದು ಬರಲು ಸದರಿ ಬಳಗಾನಾಯಕನ ಸಂತತಿಯವನಾದ ಸಿದ್ಧರಾಮಪ್ಪನೆಂಬ ಹುಡುಗನನ್ನು ಕಲ್ಯಾಣಮ್ಮನು ದತ್ತಕ ತೆಗೆದುಕೊಳ್ಳಲಿಕ್ಕೆ ಮನ್ನೋ ದೊರೆಯು ಅಪ್ಪಣೆಕೊಟ್ಟನು . ಈ ರೀತಿ ಬಳ್ಳಾರಿ – ಅನಂತಪುರ ಜಿಲ್ಲೆಗಳ ದೊರೆತನವು ಸುಮಾರು ಇನ್ನೂರು ವರ್ಷಗಳ ವರವಿಗೂ ವಿಜಾಪುರ ಪ್ರಾಂತದ ಶುದ್ಧ ಕನ್ನಡಿಗರೂ ಸೊಲ್ಲಾಪುರದ ಸಿದ್ಧರಾಮ ಶಿವಯೋಗಿಯ ಸಾಂಪ್ರದಾಯಕರೂ , ವೀರಶೈವಾಚಾರ ಸಂಪನ್ನರೂ ಅದ ಅರಸರುಗಳಾಗಿದ್ದರು . ಈಗಲೂ ಈ ಪ್ರಾಂತದಲ್ಲಿ ವೀರಶೈವ ಗತವೈಭವ ಮತ್ತು ಸಿದ್ಧರಾಮೇಶ್ವರ ಸಾಂಪ್ರದಾಯದ ಚಿಹ್ನೆಗಳು ಕಂಡುಬರುವವು . ಶ್ರೀ ನಿಡುಮಾಮಿಡಿ ಮಠದ ಸ್ವಾಮಿಗಳೇ ಈ ರಾಜ ಮನೆತನದ ಗುರುಗಳಾಗಿದ್ದರು . ಈ ಪೀಠದ ಮಠಗಳು ಕೋಲಾರ ಜಿಲ್ಲೆಯ ಗೂಳೂರು , ಅನಂತಪುರ ಜಿಲ್ಲೆಯ ನಿಡುಮಾಮಿಡಿ , ಪೆನುಕೊಂಡ , ಬುಕ್ಕಪಟ್ಟಣ್ಣ ಮುಂತಾದ ಗ್ರಾಮಗಳಲ್ಲಿರುವವು . ಸಿದ್ಧರಾಮೇಶನ ಮಂದಿರಗಳೂ , ಮಠಗಳು , ಆತನ ಹೆಸರಿನ ಗ್ರಾಮಗಳು ಅಲ್ಲಲ್ಲಿ ಕಂಡುಬರುವವು .

ಸಿದ್ಧರಾಮಪುರ

ಅನಂತಪುರದ ಹಂಡೆವಂಶದವರು ವಿಜಾಪುರದ ಸೀಮೆಯವರೆಂದೂ ಅವರ ಇಷ್ಟ ದೈವವು ಸೊನ್ನಲಾಪುರದ ( ಸೊಲ್ಲಾಪರ ) ಸಿದ್ಧರಾಮಶಿವಯೋಗಿಯೆಂದೂ “ ಅನಂತಪುರದ ಕೈಫಿಯತ್ತುಗಳಲ್ಲಿ ಹೇಳಿದೆ . ಸಿದ್ಧರಾಮೇಶ್ವರ ಸ್ಮಾರಕಾರ್ಥವಾಗಿ ನಿರ್ಮಿಸಲ್ಪಟ್ಟ ಈ ಗ್ರಾಮವು ೧೨ ನೇಯ ಶತಮಾನದ ಕಲ್ಯಾಣದ ಶರಣರ ಯುಗಕ್ಕೂ ಈ ಪ್ರಾಂತಕ್ಕೂ ನಿಕಟವಾದ ಸಂಬಂಧವನ್ನು ಕಲ್ಪಿಸುತ್ತದೆ .

 ಈ ಪ್ರಾಂತದಲ್ಲಿ ಸಿದ್ದಪ್ಪ , ರಾಮಪ್ಪ , ಸಿದ್ಧರಾಮಪ್ಪ ಮುಂತಾದ ಹೆಸರುಗಳುಳ್ಳ ಜನರು ವಿಶೇಷವಾಗಿರುವರು . ಬಳ್ಳಾರಿಯ ಮುಖ್ಯ ಸ್ಥಳಗಳಲ್ಲಿ ಬಲದ ಹನಮಪ್ಪ ನಾಯಕನ ೬ ಜನ ಸಹೋದರಿಯರು ಕಟ್ಟಿಸಿದ ಬಾವಿಗಳು ಈಗಲೂ ಇರುವವು . ಹಂಡೆ ರಾಮಪ್ಪನಾಯಕನ ಕಾಲದಲ್ಲಿ ಬಳ್ಳಾರಿಯು ವೈಭವ ಪೂರ್ಣವಾದ ಪಟ್ಟಣವಾಗಿದ್ದಿತು . ಅಂತೆಯೇ ಕೋಳೂರು ಶಂಕ್ರಪ್ಪನೆಂಬ ಕವಿಯು “ ಭಳಿಗೆ ಭಾಪುರೆ , ಬಳ್ಳಾರಿ ! ಭಳೆರೆ ಬಳ್ಳಾರಿಯ ವಿಜಯಲಕ್ಷ್ಮೀ ಇಳೆಯೊಳು ನಿನ್ನಂಥ ಕಳೆಯ ಕಾಂತೆಯರ ಕಾಣೆ ” ಎಂದು ಹಾಡಿರುವನು . ಈ ರಾಮಪ್ಪನ ಕಾಲದಲ್ಲಿ ಕುರುಗೋಡಿನ ನೀಲಮ್ಮನವರ ಮಠವೂ , ದೊಡ್ಡ ಬಸವೇಶ್ವರನ ದೇವಸ್ಥಾವವೂ ಪ್ರಸಿದ್ಧಿಗೆ ಬಂದವು . ಈ ಹಂಡೆಯವರ ತಾಯ್ತುಡಿಯು ಅಚ್ಚ ಕನ್ನಡವೇ ಆಗಿದ್ದಿತೆಂದು ಬೇರೆ ಹೇಳಬೇಕಾಗಿಲ್ಲ .

 ೧೬ ನೇಯ ಶತಮಾನದಿಂದ ೧೯ ನೇಯ ಶತಮಾನದವರೆಗೆ ಧರ್ಮವರ ಪ್ರಾಂತವು ಹಂಡೆ ಅರಸುಗಳ ಆಳಿಕೆಯಲ್ಲಿದ್ದರು . ಧರ್ಮವರದಲ್ಲಿ ಹಂಡೆ ಅರಸುಗಳ ರಾಜಗುರುಗಳಾದ ನಿಡುಮಾಮಿಡಿ ಸ್ವಾಮಿಗಳ ಶಾಖಾಮಠವೊಂದು ಇರುವುದು . ಹಂಡೆ ಪವಾಡಪ್ಪ ರಾಯನ ಕಾಲದಲ್ಲಿ ರಾಯದುರ್ಗ ಪಾಳೆಯಗಾರನೊಬ್ಬನು ಧರ್ಮವರವನ್ನು ಅಕ್ರಮಿಸಿಕೊಂಡಿದ್ದನು . ಅಂದಿನಿಂದ ರಾಯದುರ್ಗದ ಪಾಳೆಯಗಾರರಿಗೂ ಹಂಡೆವಂಶದವರಿಗೂ ಮೇಲಿಂದ ಮೇಲೆ ಸಂಘರ್ಷಣಗಳೂ ಜರುಗುತ್ತಿದ್ದವು . ಕೊನೆಗೆ ಹೈದರಲ್ಲಿ ಟೀಪುಸುಲ್ತಾನರ ಕಾಲದಲ್ಲಿ ಈ ಪ್ರಾಂತವೆಲ್ಲವೂ ಮೈಸೂರು ರಾಜ್ಯದಲ್ಲಿ ಸೇರ್ಪಡೆಯಾಯಿತು . ನಿಡುಮಾಮಿಡಿ ಪೆನುಗೊಂಡೆಗೆ ಸುಮಾರು ೭ ಮೈಲುಗಳ ದೂರದಲ್ಲಿರುವ ಈ ಗ್ರಾಮವು ಒಂದು ಮನೋಹರವಾದ ತಪೋವನದಂತೆ ಕಂಗೊಳಿಸುತ್ತಿರುವುದು . ಸುತ್ತಲೂ ಗುಡ್ಡಗಳು , ಸಾಂದ್ರವಾದ ವನ್ಯ ಪ್ರದೇಶ , ಸಮೀಪದಲ್ಲೇ ಸ್ವರ್ಣಮುಖಿ ತೊರೆ . ಅದರ ಎಡಬಲಗಳಲ್ಲಿ ಗದ್ದೆಗಳು ತೋಟಗಳೂ ಇಲ್ಲಿಯನಿಡುಮಾಮಿಡಿ ಮಠವು ನಿರ್ಜನ ಪ್ರದೇಶದಲ್ಲಿರುತ್ತದೆ . ಮಠದಲ್ಲಿ ಶ್ರೀ ಇಮ್ಮಡಿ ಕರಿಬಸವ ಸ್ವಾಮಿಗಳವರ ಮತ್ತು ಈ ಪೀಠ ಪರಂಪರೆಗೆ ಸೇರಿದ ಮತ್ತೋರ್ವ ಪೂಜ್ಯ ಪಾದರುಗಳ ಗದ್ದುಗೆಗಳೂ ಒಂದು ಶಿವಲಿಂಗಮೂರ್ತಿ ಮತ್ತು ವೀರಭದ್ರ ಸ್ಮಾಮಿಯ ಭವ್ಯವಾದ ಮೂರ್ತಿ ಇರುತ್ತವೆ . ಮುಖ ಮಂಟಪದ ಒಂದು ಶಿಲಾಸ್ತಂಭದ ಮೇಲೆ ತೆಂಗಿನಮರವೊಂದು ಬಾಗಿ ಶಿವಯೋಗಿಗಳಿಗೆ ಫಲಭಿಕ್ಷೆಯನ್ನು ನೀಡುವ ದೃಶ್ಯವು ಚಿತ್ರಿಸಲ್ಪಟ್ಟಿರುವುದು . ಅಚ್ಯುತ ದೇವರಾಯನು ಒಂದುಬಾರಿ ಪಾದಚಾರಿಯಾಗಿ ನಿಡುಮಾಮಿಡಿ ಮಠದಲ್ಲಿ ನೆಲೆಸಿದ್ದ ಶ್ರೀ ಇಮ್ಮಡಿ ಕರಿಬಸವ ಸ್ವಾಮಿಗಳನ್ನು ದರ್ಶಿಸಿ ಅವರಿಂದ ಒಣಗಿದ ಮಾವಿನ ಮರದ ಫಲವನ್ನು ಪಡೆದು ಅವರ ತಪೋಭೂಮಿಯಲ್ಲಿ ನಿಡುಮಾಮಿಡಿ ಮಠವನ್ನೂ ಪೆನುಕೊಂಡದಲ್ಲಿ ಘನಗಿರಿ ಮಠವನ್ನು ಕಟ್ಟಿಸಿದನು . ಈ ಮಠದ ಸ್ವಾಮಿಗಳು ಮುಂದೆ ಅನಂತಪುರ ರಾಜ್ಯದ ಪ್ರಭುಗಳಾದ ಹಂಡೆ ಅರಸರ ರಾಜಗುರುಗಳಾಗಿದ್ದು ರಾಜ್ಯಪರಿಪಾಲನೆಯಲ್ಲಿ ಅವರಿಗೆ ನೆರವಾಗಿದ್ದರು . ಆ ಅರಸುಗಳನ್ನು ಹಲವು ದುರಂತಗಳಿಂದ ಪಾರುಮಾಡಿದ ಸಂಗತಿಗಳು “ ಹಂಡೆ ಅನಂತಪುರದ ಕೈಫಿಯತ್ತು ” ಗಳಿಂದ ತಿಳಿದು ಬರುತ್ತದೆ . ಹಂಡೆನಾಯಕರ ಪೈಕಿ ಒಬ್ಬನ ಸಮಾಧಿಯು ನಿಡುಮಾಮಿಡಿಯಲ್ಲೂ ಮತ್ತೊಬ್ಬನದು ಹೊಸಕೆರೆಯ ವೀರಭದ್ರ ದೇವಾಲಯದ ಪ್ರಾಂಗಣದಲ್ಲಿಯೂ ಇರುವವು . ಸಾಮ್ರಾಜ್ಯದ ರಾಜಧಾನಿ ಪೆನಗೊಂಡ ಕ್ರಿ.ಶ .೧೫೬೫ ರಲ್ಲಿ ತಾಳಿಕೋಟೆ ಯುದ್ಧದ ಪರಿಣಾಮವಾಗಿ ವಿಜಯನಗರವು ವಿಧ್ವಂಸವಾಗಲು ಅಳಿಯ ರಾಮರಾಯನ ತಮ್ಮನಾದ ತಿರುಮಲದೇವನು ವಿಜಯನಗರದಲ್ಲಿದ್ದ ಕರ್ನಾಟಕ ರತ್ನ ಸಿಂಹಾಸನವನ್ನು ಪೆನುಗೊಂಡೆಗೆ ಸಾಗಿಸಿ ಅ ದುರ್ಗವನ್ನು ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡನು . ಇವನ ಪಟ್ಟಾಭಿಷೇಕವು ಕ್ರಿ.ಶ .೧೫೬೯ ರಲ್ಲಿ ಪೆನುಗೊಂಡೆಯಲ್ಲಿ ಜರುಗಿತು . ಈತನ ಕಾಲದಲ್ಲಿ ಸಾಮ್ರಾಜ್ಯವು ಅಂಧ್ರ ಮಂಡಲ , ಕರ್ನಾಟಕಮಂಡಲ , ತಮಿಳುಮಂಡಲಗಳೆಂದು ಮೂರುಭಾಗಗಳಾಗಿ ವಿಭಜಿಸಲ್ಪಟ್ಟಿತು . ಸಾಮ್ರಾಜ್ಯದ ಉತ್ತರಭಾಗವು ಅಂಧ್ರಮಂಡಲವೆನಿಸಿತು . ಉದಯಗಿರಿಯು ಈ ಮಂಡಲದ ರಾಜಧಾನಿ . ಇದು ತಿರುಮಲರಾಯನ ಹಿರಿಯಮಗನಾದ ಶ್ರೀ ರಂಗರಾಯನ ಆಳ್ವಿಕೆಯಲ್ಲಿದ್ದಿತು . ತಮಿಳುಮಂಡಲದಲ್ಲಿ ತುಂಡೀರ ಚೋಳ ಪಾಂಡ್ಯರಾಜ್ಯಗಳು ಸೇರಿದ್ದವು . ಇದನ್ನು ತಿರುಮಲರಾಯನ ನಾಲ್ಕನೇಯ ಮಗನು ಚಂದ್ರಗಿರಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದನು . ಇನ್ನುಳಿದ ಸಾಮ್ರಾಜ್ಯದ ಭಾಗವು ಕರ್ನಾಟಕ ಮಂಡಲವಾಗಿದ್ದಿತು . ತಿರುಮಲನ ಮೂರನೇಯ ಮಗನಾದ ರಾಮರಾಜನ ಪ್ರಭುತ್ವಕ್ಕೆ ಒಳಗಾಗಿದ್ದಿತು . ಇವನೇ ಪೆನುಕೊಂಡೆಯಲ್ಲಿ ಸತ್ಯಬೋಧರಾಯ ಸ್ವಾಮಿಯ ಮಠವನ್ನು ಕಟ್ಟಿಸಿದವನು . ತಿರುಮಲದೇವನ ಆನಂತರ ಪಟ್ಟಕ್ಕೆ ಬಂದ ಶ್ರೀರಂಗದೇವರಾಯನು ಕ್ರಿಶ . ೧೫೬೯ ರಿಂದ ೧೫೮೫ ರ ವರಿವಿಗೂ ರಾಜ್ಯವಾಳಿದನು . ಇವನ ಕಾಲದಲ್ಲೇ ರಾಜಧಾನಿಯು ಪೆನುಕೊಂಡದಿಂದ ಚಂದ್ರಗಿರಿಗೆ ವರ್ಗಾಯಿಸಲ್ಪಟ್ಟಿತೆಂದು ಅನಂತಪುರ ಜಿಲ್ಲಾ ಗೆಜಿಟಿಯರದಲ್ಲಿ ಹೇಳಿದೆ . ಅದರ “ ಕರ್ನಾಟಕ ಶಾಸನ ಸಂಗ್ರಹ ” ದ ೧೨ ನೇಯ ಸಂಚಿಕೆಯಲ್ಲಿರುವ ಶಾಸನಗಳಿಂದ ಇವನು ಗತಿಸುವವರಿವಿಗೂ ( ಕ್ರಿ.ಶ. ೧೫೮೫ ) ಪೆನುಕೊಂಡದಲ್ಲೇ ರಾಜ್ಯ ಪರಿಪಾಲನೆ ಮಾಡಿದನೆಂದು ಗೊತ್ತಾಗುತ್ತದೆ . ಕ್ರಿ.ಶ. ೧೫೭೬ ರಲ್ಲಿ ವಿಜಾಪುರದ ನವಾಬನಾದ ಅಲೀ ಅದಿಲ್‌ಷಾನು ಶ್ರೀರಂಗರಾಯನನ್ನು ಯುದ್ಧದಲ್ಲಿ ಸೋಲಿಸಿ ಪೆನುಕೊಂಡದ ಉತ್ತರ ಭಾಗದ ಸಾಮ್ರಾಜ್ಯವನ್ನೆಲ್ಲ ವಶಪಡಿಸಿಕೊಂಡನು . ಈ ಕಾಲದಲ್ಲೇ ಅನಂತಪುರ ರಾಜ್ಯವನ್ನು ಆಳುತ್ತಿದ್ದ ಹಂಡೆ ಮಲಕಪ್ಪನಾಯಕನು ವಿಜಾಪುರ ನವಾಬನಿಗೆ ಅಂಕಿತನಾಗಿ ಅವನಿಂದ “ ಬಾದುಷಾವಜೀರ ” ಎಂಬ ಪದವಿಯನ್ನು ಪಡೆದುಕೊಂಡು ಬುಕ್ಕಪಟ್ಟಣ ಅನಂತಸಾಗರ ಮುಂತಾದ ಗ್ರಾಮಗಳನ್ನು ಮರಳಿ ಸಂಪಾದಿಸಿಕೊಂಡನು . ಅಂದಿನಿಂದ ವಿಜಯನಗರ ಸಾಮ್ರಾಟರಿಗೂ ಕರ್ನಾಟಕಕ್ಕೂ ಇದ್ದ ಸಂಬಂಧವು ಸಡಲಿತಾದರೂ ಸಾಮ್ರಾಜ್ಯವು ಕೊನೆಯವರೆಗೂ ಕರ್ನಾಟಕ ಸಾಮ್ರಾಜ್ಯವೆಂದೇ ಕರೆಯಲ್ಪಡುತ್ತಿದ್ದಿತು . ವೆಂಕಟಪತಿ ದೇವರಾಯನ ಕಾಲದಲ್ಲಿ ಗೋಲ್ಗೊಂಡ , ವಿಜಾಪೂರ ನವಾಬರು ಪೆನುಕೊಂಡ ದುರ್ಗದ ಮೇಲೆ ದಂಡೆತ್ತಿ ಬಂದರು . ಆದರೆ ಅನಂತಪುರದ ಹಂಡೆನಾಯಕರು ಈ ದಂಡಯಾತ್ರೆಗಳಲ್ಲಿ ವಿಜಯನಗರದವರಿಗೆ ಸಹಾಯ ಮಾಡಿದಕಾರಣ ಅವರ ಪ್ರಯತ್ನಗಳು ನಿಷ್ಪಲವಾದವು . ಕೊನೆಗೆ ವೆಂಕಟಪತಿರಾಯನು ಕ್ರಿಶ . ೧೬೦೬ ರಲ್ಲಿ ರಾಜಧಾನಿಯನ್ನು ಚಂದ್ರಗಿರಿಯಿಂದ ವೇಲೂರಿಗೆ ವರ್ಗಾಯಿಸಿ ಕ್ರಿ.ಶ. ೧೬೧೪ ರಲ್ಲಿ ವೇಲೂರಲ್ಲಿ ಗತಿಸಿದನು . ಧರ್ಮಾವರ ತಾಲೂಕು ೧೬ ನೆಯ ಶತಮಾನದಿಂದ ೧೯ ನೆಯ ಶತಮಾನದವರೆಗೆ ಧರ್ಮವರ ಪ್ರಾಂತವು ಹಂಡೆ ಅರಸುಗಳ ಆಳ್ವಿಕೆಯಲ್ಲಿದ್ದರು . ಧರ್ಮವರದಲ್ಲಿ ಹಂಡೆ ಅರಸುಗಳ ರಾಜಗುರುಗಳಾದ ನಿಡುಮಾಮಿಡಿ ಸ್ವಾಮಿಗಳ ಶಾಖಾಮಠವೊಂದು ಇರುವುದು . ಹಂಡೆ ಪವಾಡಪ್ಪ ರಾಯನ ಕಾಲದಲ್ಲಿ ರಾಯದುರ್ಗ ಪಾಳೆಯಗಾರನೊಬ್ಬನು ಧರ್ಮವರವನ್ನು ಆಕ್ರಮಿಸಿಕೊಂಡಿದ್ದನು . ಅಂದಿನಿಂದ ರಾಯದುರ್ಗದ ಪಾಳೆಯಗಾರರಿಗೂ ಹಂಡೆವಂಶದವರಿಗೂ ಮೇಲಿಂದ ಮೇಲೆ ಸಂಘರ್ಷಗಳೂ ಜರುಗುತ್ತಿದ್ದವು . ಕೊನೆಗೆ ಹೈದರಲ್ಲಿ ಟೀಪುಸುಲ್ತಾನರ ಕಾಲದಲ್ಲಿ ಈ ಪ್ರಾಂತವೆಲ್ಲವೂ ಮೈಸೂರು ರಾಜ್ಯದಲ್ಲಿ ಸೇರ್ಪಡೆಯಾಯಿತು .

ಬುಕ್ಕಪಟ್ಟಣ ಅನಂತಸಾಗರ ಈ ಎರಡು ಗ್ರಾಮಗಳಿರುವ ಪ್ರದೇಶವು ಪೆನುಕೊಂಡದಂತೆ ಗುಡ್ಡಗಾಡು ಪ್ರದೇಶವು . ಇಲ್ಲಿ ಎರಡು ಗುಡ್ಡಗಳ ನಡುವೆ ಚಿತ್ರಾವತಿ ನದಿಗೆ ಆಣೆಕಟ್ಟು ಕಟ್ಟಲ್ಪಟ್ಟಿರುವುದರಿಂದ ಒಂದು ವಿಶಾಲವಾದ ತಟಾಕವು ಏರ್ಪಟ್ಟಾಗಿದೆ . ಅ ತಟಾಕದ ಒಂದು ಪಾರ್ಶ್ವದಲ್ಲಿ ಬುಕ್ಕರಾಯನ ಹೆಸರಿನಲ್ಲಿ ಬುಕ್ಕಪಟ್ಟಣವೂ ಆತನ ಹೆಂಡತಿಯಾದ ಅನಂತಮ್ಮನ ಹೆಸರಿನಲ್ಲಿ ಅನಂತಸಾಗರವೂ ಕಟ್ಟಲ್ಪಟ್ಟಿವೆ . ಅನಂತಸಾಗರವು ಈಗ ಹೊಸಕೆರೆ . ( ಕೊತ್ತಚೆರುವು ) ಎಂದು ಕರೆಯಲ್ಪಡುತ್ತದೆ . ಈ ಕೆರೆಯನ್ನೂ ಇವೆರಡು ಗ್ರಾಮಗಳನ್ನೂ ಬುಕ್ಕರಾಯನ ಪ್ರಧಾನಿಗಳಲ್ಲಿ ಒಬ್ಬನಾದ ಚಿಕ್ಕಪ್ಪ ಒಡೆಯರು ಕ್ರಿ.ಶ. ೧೩೬೪ ರ ಪ್ರಾಂತದಲ್ಲಿ ಕಟ್ಟಿಸಿದನೆಂದು “ ಅನಂತಪರ ಕೈಫಿಯತ್ತುಗಳಿಂದ ತಿಳಿದು ಬರುತ್ತದೆ . ಈ ಎರಡು ಗ್ರಾಮಗಳು ಅನಂತಪುರದ ಹಂಡೆ ಅರಸರುಗಳ ಆಳ್ವಿಕೆಗೆ ಒಳಗಾಗಿದ್ದು ಬುಕ್ಕಪಟ್ಟಣದ ಕೆರೆಯು ಹಂಡೆ ಅರಸರುಗಳಿಂದ ವಿಸ್ತೀರ್ಣಗೊಳಿಸಲ್ಪಟ್ಟು ಅನಂತಸಾಗರವು ಹೊಸಕೆರೆ ( ಕೊತ್ತುಚೆರುವು ) ಯಾಗಿ ಮಾರ್ಪಟ್ಟಿತು . ಈ ಕೆರೆಯ ಕೆಳಭಗದಲ್ಲಿ ಒಂದು ಪುರಾತನ ಮಠವೂ ವೀರಭದ್ರದೇವಾಲಯವೂ ಇರುತ್ತದೆ . ಅದರ ಪ್ರಾಂಗಣದಲ್ಲಿ ನಿಡುಮಾಮಿಡಿ ಸ್ವಾಮಿಗಳ ಗದ್ದುಗೆಯೂ ಇರುತ್ತವೆ . ಕನ್ನಡ ದೇಸಾಯಿಗಳು ಗುತ್ತಿ ತಾಲೂಕಿನ ನಿಡುಪನಕಲ್ಲು ಮತ್ತು ಗಡೇಹೋತೂರುಗಳಲ್ಲಿ ಎರಡು ಕನ್ನಡ ದೇಸಾಯಿ ವಂಶಗಳಿರುವುವು . ಈ ವಂಶದವರ ಪೂರ್ವಜರು ಉತ್ತರ ಕರ್ನಾಟಕ ಪ್ರಾಂತದವರಿದ್ದು ಹಂಡೆ ಹನುಮಪ್ಪನಾಯಕನ ಕಾಲದಲ್ಲೋ ತದನಂತರವೋ ಈ ಪ್ರಾಂತಕ್ಕೆ ಬಂದಿರಬಹುದಾಗಿ ತೋರುತ್ತದೆ . ಈ ಎರಡು ಗ್ರಾಮಗಳಲ್ಲೂ ಉರವಕೊಂಡ ಸಂಸ್ಥಾನದ ಮಠಗಳಿರುತ್ತವೆ . ಹಂಡೆ ಅನಂತಮರ – ಜಿಲ್ಲೆಗೆ ಕೇಂದ್ರಸ್ಥಾನವಾದ ಈ ಪುರವು ದೇವರಕೊಂಡ ಎಂಬ ಗುಡ್ಡದ ಬಳಿಯಿರುತ್ತದೆ . ಆ ಗುಡ್ಡದ ಬದಿಯಲ್ಲಿ ಪ್ರವಹಿಸುವ ಪಾಂಡು ನದಿಯು ಅಡ್ಡಕಟ್ಟಲ್ಪಟ್ಟು ಒಂದು ದೊಡ್ಡ ಕೆರೆಯು ಏಪ್ಪಟ್ಟಿದೆ . ಈ ಕೆರೆಯು ಬುಕ್ಕರಾಯಸಮುದ್ರವೆಂದು ಕರೆಯಲ್ಪಡುತ್ತದೆ . ಅದೇ ಹೆಸರಿನ ಒಂದು ಹಳ್ಳಿಯು ಕೆರೆಯ ಮತ್ತೊಂದು ತುಂಬಿನ ಕೆಳಗೆಯಿದೆ . ಈ ಕೆರೆಯು ವಿಜಯನಗರ ಸಾಮ್ರಜ್ಯದ ನಿರ್ಮಾಪಕರಲ್ಲಿ ಒಬ್ಬನಾದ ಮತ್ತು ಕ್ರಿ.ಶ. ೧೩೫೫ ರಿಂದ ೧೩೭೭ ರ ವರಿಗೆ ಹೊಯ್ಸಳರ ಸಾಮಂತನಾಗಿ ವಿಜಯನಗರ ರಾಜ್ಯವನ್ನು ಅಳಿದ ಮೊದಲನೇಯ ಬುಕ್ಕರಾಯನ ಕಾಲದಲ್ಲಿ ಕಟ್ಟಲ್ಪಟ್ಟಿದ್ದು ದೇವರಕೊಂಡದ ಮೇಲೆ ಶಂಕರೇಶ್ವರ ದೇವರ ಗುಡಿ ಎಂಬ ದೇವಾಲಯವಿದ್ದು , ಅದರಲ್ಲಿ ಶಾ.ಶ .೧೨೮೬ ( ಕ್ರಿ.ಶ .೧೩೬೪ ) ಕ್ರೋಧಿ ಸಂ ಕಾರ್ತಿಕ ಬ .೫ ಯ ಕಾಲದ ಒಂದು ಶಾಸನವಿದ್ದು , ಆ ಶಾಸನದ ಪ್ರಕಾರ ಚಿಕ್ಕಪ್ಪ ಒಡೆಯರೆಂಬ ಬುಕ್ಕರಾಯನ ಪ್ರಧಾನಿಯೊಬ್ಬನು ಈ ಕೆರೆಯನ್ನು ನಿರ್ಮಾಣಮಾಡಿ ಅದರ ಎರಡು ತುಂಬುಗಳ ಬಳಿ ತನ್ನ ಪ್ರಭುವಿನ ಹೆಸರಿನಲ್ಲಿ “ ಬುಕ್ಕರಾಯನಸಮುದ್ರ ” ವೆಂಬ ಹಳ್ಳಿಯನ್ನೂ ಪ್ರಭುವಿನ ಪಟ್ಟದ ರಾಣಿಯಾದ ಅನಂತಮ್ಮನ ಹೆಸರಿನಲ್ಲಿ ಅನಂತಸಾಗರವೆಂಬ ಗ್ರಾಮವನ್ನೂ ಸ್ಥಾಪಿಸಿದನೆಂದು ತಿಳಿದು ಬರುತ್ತದೆ . ನಾಗಸಮುದ್ರ ಮತ್ತು ಬುಕ್ಕಪಟ್ಟಣ ಕೆರೆಗಳು ಸಹ ಇವನಿಂದಲೇ ನಿರ್ಮಿಸಲ್ಪಟ್ಟವಂತೆ . ಮೆಕೆಂಜಿಯವರ ಸಂಗ್ರಹದ “ ಕೈಪಿಯತ್ತಿ ” ನಲ್ಲಿ ಈ ಅಂಶವು ದೃಢಪಡಿಸಲ್ಪಟ್ಟಿದೆ . ಶಂಕರೇಶ್ವರ ಗುಡಿಯ ಬಳಿಯಿರುವ ಚೌಡೇಶ್ವರಿ ದೇವಾಲಯ , ವಿಶ್ವೇಶ್ವರ ದೇವಾಲಯಗಳೂ ಮತ್ತು ಬುಕ್ಕರಾಯಸಮುದ್ರದಲ್ಲಿರುವ ಲಕ್ಷ್ಮೀ ನಾರಾಯಣಸ್ವಾಮಿ , ಅಂಜನೇಯಸ್ವಾಮಿ ದೇವಾಲಯಗಳೂ ಈ ಚಿಕ್ಕಪ್ಪನಿಂದಲೇ ಕಟ್ಟಲ್ಪಟ್ಟವಂತೆ , ಆ ಕಾಲದಲ್ಲಿ ದೇವರಕೊಂಡ ಪ್ರಾಂತವು ನಂದೇಲ ನಾಡಿಗೂ , ಬುಕ್ಕಪಟ್ಟಣ ಪ್ರಾಂತವು ಎಲಮಂಚಿ ನಾಡಿಗೂ ಸೇರಿದ್ದವೆಂದು ಈ ಕೈಫಿಯತ್ತಿನಿಂದ ತಿಳಿದು ಬರುತ್ತದೆ . ಬುಕ್ಕರಾಯನ ಶಾಸನಗಳ ರೀತ್ಯಾ ಅವನ ಆಸ್ಥಾನದಲ್ಲಿ ಮಾಧವ ಮಂತ್ರಿ ಅನಂತಸಾಗರ , ಬಚ್ಚರಾಜರೆಂಬ ಮೂವರು ಪ್ರಸಿದ್ಧ ಮಂತ್ರಿಗಳಿದ್ದರು . ವೀರಸಂತಮಾಧವ , ಮಾದಿರಾಜ , ಮಾಧವಾಂಕ ಮುಂತಾದ ನಾಮಾಂತರಗಳುಳ್ಳ ಮಾಧವ ಮಂಂತ್ರಿಯು ಕಾಶೀವಿಲಾಸಕ್ರಿಯಾಶಕ್ತಿ ಪಂಡಿತನ ಶಿಷ್ಯನು , ಇವನು ರಾಯನ ಪ್ರತಿನಿಧಿಯಾಗಿ ಬನವಾಸಿನಾಡನ್ನು ಅಳುತ್ತಿದ್ದನೆಂದೂ , ಗೋವಾ ಪಟ್ಟಣವನ್ನು ಜಯಿಸಿ ಸಾಮ್ರಾಜ್ಯಕ್ಕೆ ಸೇರಿಸಿದನೆಂದೂ ಶಾಸನಗಳಿಂದ ತಿಳಿದು ಬರುತ್ತದೆ . ಅನಂತಸಾಗರನು ಪೆನುಕೊಂಡದ ದುರ್ಗವನ್ನು ಬಲಪಡಿಸಿದನು . ಬುಕ್ಕರಾಯನ ಏಳನೇಯ ಮಗನಾದ ಭಾಸ್ಕರರಾಯನು ಇವನ ಹೆಸರಿನಲ್ಲಿ “ ಅನಂತಸಾಗರವೆಂಬ ” ಕೆರೆಯನ್ನು ಕಟ್ಟಿಸಿದನೆಂದು ಒಂದು ಶಾಸನವು ಹೇಳುತ್ತದೆ . ಮತ್ತೊಂದು ಹೇಳಿಕೆಯ ಪ್ರಕಾರ ಬುಕ್ಕರಾಯಸಮುದ್ರ , ಕೀರ್ತಿಸಮುದ್ರ ಬಚ್ಚಪ್ಪನ ಕೆರೆ ಮುಂತಾದ ಕೆರೆಗಳು ಬಚ್ಚರಾಜನಿಂದ ನಿರ್ಮಿಸಲ್ಪಟ್ಟವೆಂದು ತಿಳಿದು ಬರುತ್ತದೆ . ಅನಂತಪುರ , ಬುಕ್ಕರಾಯ , ಪಟ್ಟಣಗಳು ೧೪ ನೇಯ ಶತಮಾನದಲ್ಲಿ ಬುಕ್ಕರಾಯನ ಕಾಲದಲ್ಲಿ ಹುಟ್ಟಿದವೆಂಬುದನ್ನು ಮಾತ್ರ ತಿಳಿದು ಕೊಂಡರೆ ಸಾಕು , ಸಂಗಮ , ಸಾಳುವ , ತುಳುವಂಶದವರ ಕಾಲದಲ್ಲಿ ಈ ಪ್ರಾಂತವು ಪೆನುಕೊಂಡ ರಾಜ್ಯಕ್ಕೆ ಸೇರಿರಬಹುದಾಗಿ ಊಹಿಸಬಹುದು . ಈ ಕಾಲದಲ್ಲಿ ಇದರ ರಾಮರಾಯನ ಕಾಲದಿಂದ ಈ ಭಾಗವು ಹಂಡೆ ಅನಂತಪುರ ರಾಜ್ಯ ವೆಂಬ ಇತಿಹಾಸವೇನಿದ್ದಿತೆಂಬುದನ್ನು ತಿಳಿದುಕೊಳ್ಳಲು ಸಲಕರಣೆಗಳು ದೊರೆತಿಲ್ಲ . ಅಳಿಯ ಹೆಸರನ್ನು ಪಡೆದು ಸೊನ್ನಲಾಪುರ ( ಸೊಲ್ಲಾಪುರ ) ದ “ ಹಂಡೆ ವಂಶದ ” ವರಾದ ಕನ್ನಡಿಗರಿಂದ ೩೫೦ ವರ್ಷಗಳ ಮೇಲ್ಪಟ್ಟು ಆಳಲ್ಪಟ್ಟಿತು . ಈ ಹಂಡೆವಂಶದ ಮೂಲ ಪುರುಷನಾದ ” ಹನುಮಪ್ಪ ನಾಯಕನು ” ವಿಜಯನಗರ ಸಾಮ್ರಾಜ್ಯವು ಮುಸಲ್ಮಾನರ ವಶವಾಗದಂತೆ ರಕ್ಷಿಸಿ ಅಜರಾಮರವಾದ ಕೀರ್ತಿಯನ್ನು ಸಂಪಾದಿಸಿದನು . ಅಚ್ಯುತದೇವರಾಯನ ಅನಂತರ ವಿಜಯನಗರದ ರಾಜಕುಂಟುಬದಲ್ಲಿ ಅಂತಃಕಲಹಾಗ್ನಿಯು ಹುಟ್ಟಿ ಬೊಕ್ಕಸದ ತಿಮ್ಮಯ್ಯನು ಇಡೀ ಸಾಮ್ರಾಜ್ಯವನ್ನೇ ಮುಸಲ್ಮಾನ ನವಾಬರಿಗೆ ಮಾರುವದರಲ್ಲಿದ್ದನು . ತಿಮ್ಮಯ್ಯನ ಪ್ರತಿಸ್ಪರ್ಧಿಯಾದ ಅಳಿಯ ರಾಮರಯನು ಹನುಮಪ್ಪನಾಯಕನ ಅಮೌಲ್ಯವಾದ ಸಹಾಯದಿಂದ ಈ ದುರ್ಘಟ ಪ್ರಸಂಗವನ್ನು ತಪ್ಪಿಸಿ ಸಾಮ್ರಾಜ್ಯದ ಸೂತ್ರವನ್ನು ತಾನೇ ವಹಿಸಿ , ಹನುಮಪ್ಪ ನಾಯಕನಿಗೆ ಅವನ ಸಹಾಯದ ಪ್ರತಿಫಲವಾಗಿ ನಂದೇಲ , ಧರ್ಮವರ , ಕಣೇಕಲ್ಲು , ಬಳ್ಳಾರಿ , ಕುರುಗೋಡುಗಳನ್ನು ಪಾರಿತೋಷಕವಾಗಿ ಕೊಟ್ಟನು . ಹನುಮಪ್ಪನು ಬುಕ್ಕರಾಯಸಮುದ್ರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಕ್ರಿ.ಶ .೧೫೮೨ ರ ವರಿವಿಗೂ ಅಳಿದನು . ಇವನ ಮೊಮ್ಮಗನಾದ ಮಲಕಪ್ಪನಾಯಕನ ಕಾಲದಲ್ಲಿ ಹಂಡೆರಾಜ್ಯವು ಪೂರ್ವದಿಕ್ಕಿಗೆ ತಾಡವರಿ , ಪ್ರೊದ್ದಟೂರು ವರಿವಿಗೂ ದಕ್ಷಿಣದಲ್ಲಿ ಬುಕ್ಕಪಟ್ಟಣದ ವರಿವಿಗೂ ವ್ಯಾಪಿಸಿತು . ತಾಳೀಕೋಟೆ ಯುದ್ಧದ ನಂತರ ವಿಜಯನಗರವು ಮುಸಲ್ಮಾನರ ಸ್ವಾಧೀನವಾಗಲು ಮಲಕಪ್ಪನಾಯಕನು ಗೊಲ್ಗೊಂಡ ನವಾಬನಿಗೆ ಅಂಕಿತನಾಗಿ ತನ್ನ ರಾಜ್ಯವನ್ನು ವಿಸ್ತಾರಗೊಳಿಸಿ ರಾಜಧಾನಿಯನ್ನು ಬುಕ್ಕಪಟ್ಟಣದಿಂದ ಅನಂತಪುರಕ್ಕೆ ಮಾರ್ಪಡಿಸಿದನು . ಹಂಡೆಯವರು ಪ್ರಭಲರಾಗಿದ್ದು ಮುಸಲ್ಮಾನರು ತಮ್ಮ ವಿಜಯದ ಅನಂತರ ದಕ್ಷಿಣಕ್ಕೆ ಸಾಗುವುದನ್ನು ತಡೆಗಟ್ಟಿದ್ದರಿಂದ ಕರ್ನಾಟಕ ಸಾಮ್ರಾಜ್ಯವು ಪೆನುಕೊಂಡೆಯಲ್ಲಿ ತಲೆಯೆತ್ತಿ ಕೆಲವು ಕಾಲವಾದರೂ ಬಾಳಲು ಸಾಧ್ಯವಾಯಿತು . ಇಲ್ಲವಾದರೆ ತಾಳೀಕೋಟೆಯೇ ಸಾಮ್ರಾಜ್ಯದ ಸಮಾಧಿಯಾಗಿ ಪರಿಣಮಿಸುತ್ತಲಿದ್ದಿತು . ದಕ್ಷಿಣ ಹಿಂದೂ ದೇಶದ ಚರಿತ್ರೆಯೇ ಬೇರೊಂದು ಹಾದಿಯನ್ನು ಹಿಡಿಯುತ್ತಿದ್ದಿತು . ಮುಸಲ್ಮಾನರು ಅನೇಕ ಸಲ ಪೆನುಕೊಂಡೆಯ ದಂಡೆತ್ತಿದರಾಗಲಿ ಹಂಡೆವಂಶದವರು ಪ್ರಬಲರಾಗಿರುವವರಿಗೂ ಅವರ ಆಟವು ಸಾಗಲಿಲ್ಲ . ೧೮ ನೇಯ ಶತಮಾನದ ಕೊನೆಯ ಭಾಗದಲ್ಲಿ ಹೈದರಲ್ಲಿ ಟಿಪ್ಪುಸುಲ್ತಾನರ ಕಾಲದಲ್ಲಿ ಈ ವಂಶದ ಪತನವಾಗಿ ೧೮೦೦ ರಲ್ಲಿ ಬ್ರಿಟಿಶರ ಆಳ್ವಿಕೆಯ ಕೆಳಗೆ ಬಂದಿತು . ಮನೋಸಾಹೇಬನು ೧೮೦೦ ರಲ್ಲಿ ಯಾವತ್ತೂ ದತ್ತ ಮಂಡಳಗಳಿಗೆ ಅನಂತಪುರವನ್ನೇ ಕೇಂದ್ರಸ್ಥಾನವಾಗಿ ಮಾಡಿಕೊಂಡಿದ್ದನು . ಅವನ ಅನಂತರ ಕ್ಯಾಂಬೆಲ್ ದೊರೆಯ ಕಾಲದಲ್ಲಿ ಈಗಿನ ಬಳ್ಳಾರಿ ಜಿಲ್ಲೆಯ ಎಂಟು ತಾಲೂಕುಗಳೂ ಅನಂತಪುರ ಜಿಲ್ಲೆಯ ಏಳು ತಾಲೂಕುಗಳೂ ಒಂದು ಮಂಡಳ ( ಬಳ್ಳಾರಿ ಜಿಲ್ಲೆ ) ವಾಗಿ ಏರ್ಪಟ್ಟು ೧೮೨೨ ರಲ್ಲಿ ಬಳ್ಳಾರಿ ಪಟ್ಟಣವೇ ಆ ಮಂಡಲದ ಪ್ರಧಾನ ಸ್ಥಾನವಾಗಿದ್ದಿತು . ಗುತ್ತಿಯಿಂದ ಅನಂತಪುರಕ್ಕೆ ಗೆರೆಯನ್ನು ಗೀಚಿದರೆ ಆ ಗೆರೆಯ ಪಶ್ಚಿಮ ಭಾಗವೆಲ್ಲವೂ ಕನ್ನಡವೆಂದು ವಿರು ಹೇಳಿರುವರು . ಅದೇ ರೀತಿ ಅನಂತಪುರದಿಂದ ಪೆನುಗೊಂಡಕ್ಕೆ ಆ ವಿಲ್ಸರ ಗೆರೆಯನ್ನು ಮುಂದುವರಿಸಿದರೆ ಅನಂತಪುರ ಜಿಲ್ಲೆಯ ಪಶ್ಚಿಮ ಭಾಗವೆಲ್ಲ ಕನ್ನಡ ದೇಶವೆನಿಸುವುದು . ಈ ತಾಲೂಕಿನಲ್ಲಿ ಕನ್ನಡ ಬಾರದವರು ವಿರಳ

Related Posts