ವೈರಾಗ್ಯದ ಮಲ್ಲಣಾರ‍್ಯರು

ಸಂಗ್ರಹ : ಎ. ಎಸ್. ಪಾವಟೆ, ವಿಶ್ರಾಂತ ಪ್ರಾಚಾರ್ಯರು, ಬಾಗಲಕೋಟ

ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯು ಅನೇಕ ಐತಿಹಾಸಿಕ, ನೈಸರ್ಗಿಕ, ಸಾಂಸ್ಕೃತಿಕ ತಾಣಗಳಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಬಾಗಲಕೋಟ ಜಿಲ್ಲೆಯ ಬಾದಾಮಿ  ತಾಲೂಕು ಅನೇಕ ವೈಶಿಷ್ಠತೆಯಗಳನ್ನು ಹೊಂದಿದೆ. ಚಾಲುಕ್ಯರ ರಾಜಧಾನಿಯಾಗಿ ಮೆರೆದ ಬಾದಾಮಿಯ ಪರಿಸರ ಅನೇಕ ಕೋಟೆ ಕೊತ್ತಳಗಳು, ಸುಂದರ ಶಿಲ್ಪದಿಂದ ಕೂಡಿದ ದೇವಾಲಯಗಳು, ಶಿಲ್ಪ ಕಲೆಗಾಗಿಯೇ ಪ್ರಸಿದ್ಧವಾದ ‘ಮೇಣ ಬಸದಿ’ ಎಂಬ ತೆರೆದ ಶಿಲ್ಪಕಲಾ ವಸ್ತು ಪ್ರದರ್ಶನದಂತಿರುವ ಗುಹೆಗಳಿಂದ ಕಂಗೊಳಿಸುತ್ತಿದೆ.

 

ಚಿತ್ರ ಸಂಖೈ ೧ : ಬದಾಮಿಯ ಗುಹೆಗಳು (ಮೇಣ ಬಸದಿಗಳು)

ಬಾದಾಮಿಯಿಂದ ನಾಲ್ಕು ಕಿಲೋ ಮೀಟರ್ ಅಂತರದಲ್ಲಿರುವ-‘ಬನಶಂಕರಿ’- ಶ್ರೀ ಬನಶಂಕರಿ ದೇವಿಯ ಮಂದಿರ, ಜುಳು ಜುಳು ಹರಿಯುವ ಸರಸ್ವತಿ ಹಳ್ಳ, ದೇವಾಲಯದ ಎದುರಿಗಿರುವ ಬೃಹದಾಕಾರದ ಕಲ್ಯಾಣಿ, ಸುತ್ತಲೂ ತೋಟಗಳಿಂದ ತುಂಬಿದ ವನಸಿರಿ ಇದೆಲ್ಲ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಸಂದೇಹವಿಲ್ಲ.

ಎಡ ಬಲದಲ್ಲಿ ತೋಟಪಟ್ಟಿಗಳಿಂದ ಸುತ್ತುವರಿದ ಮಲಪ್ರಭಾ ನದಿಯ ಪರಿಸರ ಸದಾ ಹಸಿರಿನಿಂದ ತುಂಬಿದ ಐಸಿರಿ,  ಇಂಥ ಪರಿಸರದ ಮಧ್ಯದಲ್ಲಿ ಅಲ್ಲಲ್ಲಿ ಈ ಪರಿಸರವನ್ನು ತಮ್ಮ ಕೃಷಿಯಿಂದಾಗಿ ಇನ್ನೂ ಸುಂದರಗೊಳಿಸುವ ನೇಗಿಲ-ಯೋಗಿಗಳಿಂದ ತುಂಬಿದ ಗ್ರಾಮಗಳು.

ಪೂರ್ವಕ್ಕೆ ಹನ್ನೆರಡು ಕಿ.ಮೀ. ಅಂತರದಲ್ಲಿ ‘ಪಟ್ಟದಕಲ್ಲು’-ಪ್ರಸಿದ್ಧ ಶಿಲ್ಪಕಲಾ ದೇಗುಲಗಳ ಕೇಂದ್ರ ಸ್ಥಾನ. ಇಂಥ ಸುಂದರ ಪರಿಸರದಲ್ಲಿ ಒಂದು ಸಣ್ಣ ಗ್ರಾಮ-“ಭದ್ರನಾಯಕನ ಜಾಲಿಹಾಳ”. ಅದು ಜನಪದರ ಬಾಯಲ್ಲಿ ‘ಬಾದನಾಕ ಜ್ಯಾಲ್ಯಾಳ’ ಎಂದಾಗಿದೆ.

ಈ ಭದ್ರನಾಯಕನ ಜಾಲಿಹಾಳದಲ್ಲಿ ‘ಮಡ್ಡೇನವರ’ ಎಂಬ ಕುಟುಂಬ. ಈ ಮನೆತನದ ಮರಿಬಸಪ್ಪ ಮತ್ತು ರುದ್ರವ್ವ ದಂಪತಿಗಳ ಮಗನಾಗಿ ಜನಿಸಿದವನೇ ‘ಮಲ್ಲಣ್ಣ’-‘ಮಲ್ಲಣಾರ‍್ಯ’.

ಚಿಕ್ಕದೊಂದು ಒಣಬೇಸಾಯದ ಭೂಮಿ ಇದ್ದರೂ ಅಲ್ಪ ಸ್ವಲ್ಪ ಕಾಳು-ಕಡಿ ಬರುತ್ತಿದ್ದವು ಅದರಿಂದಲೇ ಉಪಜೀವನ ಸಾಗುತ್ತಿತ್ತು  ಪರಿಸ್ಥಿತಿ ಹದಗೆಟ್ಟಿದ್ದರಿಂದ ಇದ್ದ ಒಂದು ಹೊಲ ಮಾರಿದ-ಮರಿಬಸಪ್ಪ. ಬೇರೆಯವರ ಹೊಲದಲ್ಲಿ ಕೂಲಿಕುಂಬಳಿ ಮಾಡಿ ಜೀವನ ಸಾಗುತ್ತಿದ್ದರು.

ಇಂಥ ಬಡತನದ ಪರಿಸ್ಥಿತಿಯಲ್ಲಿಯೇ ಮರಿಬಸಪ್ಪ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ತೀರಿಕೊಂಡ. ರುದ್ರವ್ವ ಹೌಹಾರಿದಳು. ಮಗನಿಗಾಗಿ ಬದುಕಬೇಕಿತ್ತು, ಸಾವಿರ ನೋವನುಂಡು, ಮಗನನ್ನು ಸಲಹುವಲ್ಲಿ ಹೆಣಗಾಡ ತೊಡಗಿದಳು.

ಇದೇ ಸಮಯಕ್ಕೆ ಬರಗಾಲ ಕಾಣಿಸಿಕೊಂಡಿತು. ಮಳೆ ಬರಲಿಲ್ಲ, ನದೀ ಜಲಾಶಯಗಳು ಬತ್ತಿದವು, ಕುಡಿಯಲು ನೀರಿಲ್ಲ, ಹೊಲಗಳಲ್ಲಿ ಬೆಳೆಯಿಲ್ಲ, ತಿನ್ನಲು ಅನ್ನವಿಲ್ಲ, ಬದುಕು ದುರ್ಭರವಾಯಿತು. ಕಣ್ಣಿರೇ ಗತಿ. ಹಸಿವಿನಿಂದ ಜನ ದಾರಿ ದಾರಿಯಲ್ಲಿ ಸತ್ತರು. ಹೂಳುವವರಿಲ್ಲದೇ ಹೆಣಗಳು ಎಲ್ಲಿ ಬೇಕೆಂದರಲ್ಲಿ ಬಿದ್ದವು, ಪ್ರಾಣಿ ಪಕ್ಷಿಗಳು ದೇಹಗಳನ್ನು ತಿಂದು, ತಲೆಬುರುಡೆ ಎಲ್ಲೆಲ್ಲಿಯೂ ಕಂಡದ್ದರಿಂದ ಇದನ್ನು ‘ಡೋಗಿ ಬರ’ ಎಂದರು.

ಬಾಗಲಕೋಟೆ ನಗರದಲ್ಲಿ ಬರಗಾಲದ ಕಾಮಗಿರಿ ನಡೆದಿದ್ದವು, ರುದ್ರವ್ವ ಸಹ ಗುಳೇ ಹೋಗುವವರೊಂದಿಗೆ ಬಾಗಲಕೋಟೆಗೆ ಬಂದು ಡಾಂಬರ ರಸ್ತೆ ಮಾಡುವಲ್ಲಿ ಕೂಲಿ ಮಾಡ ಹತ್ತಿದಳು. ಜೊತೆಗೆ ಮಗ ಮಲ್ಲಣ್ಣ.

ಶ್ರಾವಣಮಾಸ ಬಂದಿತ್ತು. ಜನರು ಬಾಗಲಕೋಟೆಯ ಸಮೀಪದಲ್ಲಿರುವ ‘ಗುಡ್ಡದ ಮಲ್ಲಯ್ಯʼನ ದರ್ಶನಕ್ಕೆ ನಾಲ್ಕೂ ಸೋಮವಾರ ನಡೆಯುತ್ತ ಹೋಗಿ ದರ್ಶನ ಪಡೆವ ಪ್ರತೀತಿ ಇದೆ.

ಚಿತ್ರ ಸಂಖ್ಯೆ ೨ ಬಾಗಲಕೋಟೆಯ ಸಮೀಪದಲ್ಲಿರುವ ‘ಗುಡ್ಡದ ಮಲ್ಲಯ್ಯ       

ಚಿತ್ರ ಸಂಖ್ಯೆ ೩ ಬಾಗಲಕೋಟೆಯ ಸಮೀಪದಲ್ಲಿರುವ ‘ಗುಡ್ಡದ ಮಲ್ಲಯ್ಯ ದೇವಸ್ಥಾನ

ಒಂದು ಸೋಮವಾರ ದಿನ ರುದ್ರವ್ವ ಮಗನೊಂದಿಗೆ ಮಲ್ಲಯ್ಯನ ಗುಡ್ಡ ಹತ್ತಿದಳು. ಹಸಿವಿನಿಂದ ಬಳಲಿ ಬೆಂಡಾದ ರುದ್ರವ್ವನಿಗೆ ಪೂಜಾರಿ ನೀಡಿದ ಎರಡು ಬಾಳೆಹಣ್ಣುಗಳು ಹೊಟ್ಟೆಗೆ ಶಾಂತಿ ನೀಡಿದವು. ಮಗನಿಗೆ ಬದುಕು ನೀಡೆಂದು ಗುಡ್ಡದ ಮಲ್ಲಯ್ಯನಲ್ಲಿ  ಬೇಡಿಕೊಂಡಳು.

 ಇಳಿ ಹೊತ್ತಾಗಿತ್ತು ಆ ಕಡೆಯಿಂದ ಒಬ್ಬ ಯಜಮಾನರು ತನ್ನ ಇಬ್ಬರು ಹೆಂಡಂದಿರೊಂದಿಗೆ ಬಂದು, ಮಲ್ಲಯ್ಯನ ದರ್ಶನಾಶೀರ್ವಾದ ಪಡೆದು, ದೇವಾಲಯದ ಹೊರಗಿದ್ದ ಕಲ್ಲು ಬಂಡೆಗಳ ಮೇಲೆ ಕುಳಿತು ತಂದ ಫಲಹಾರ ಸೇವನೆಗೆ ಮುಂದಾದಾಗ, ಈ ಮಗು ಮಲ್ಲಣ್ಣನು ಕಣ್ಣಿಗೆ ಬಿದ್ದ.

ಮಗುವನ್ನು ನೋಡಿ ಮನ ಮಿಡಿಯಿತು. ‘ಬಾ ಮಗು’ ಎಂದು ಕರೆದು ಮುದ್ದಾಡಿದರು. ಆ ಯಜಮಾನ ಸಾಲಿ ವಿರುಪಾಕ್ಷಯ್ಯನವರು, ಮನಗೂಳಿ. ಈರವ್ವ, ಮತ್ತು ಹುಚ್ಚವ್ವ ಅವರ ಇಬ್ಬರ ಹೆಂಡಂದಿರು. ಮಕ್ಕಳಾಗಿರಲಿಲ್ಲ ಮಗುವಿನ ಹಂಬಲ ಮೂವರನ್ನೂ ಕಾಡುತ್ತಿತ್ತು. ಈ ಮಗು ಮಲ್ಲಣ್ಣ ಅವರ ಮನಸೆಳೆದ.

ವಿರುಪಾಕ್ಷಯ್ಯನವರು ಮಗುವನ್ನು ತಮಗೆ ನೀಡಿದಲ್ಲಿ ಮಗನನ್ನಾಗಿ ಮಾಡಿಕೊಳ್ಳುತ್ತೇವೆ ಎಂದಾಗ, ತಾಯಿ ರುದ್ರಮ್ಮ ಅಳುತ್ತಲೇ ಮನಸಿಲ್ಲದ ಮನಸ್ಸಿನಿಂದ ಮಗನನ್ನು ಒಪ್ಪಿಸಿದಳು. ವಿರೂಪಾಕ್ಷಯ್ಯ ನೀಡಿದ ಎರಡು ರೂಪಾಯಿ ತೆಗೆದುಕೊಂಡು ಕಣ್ಣೀರಿಡುತ್ತ ರುದ್ರವ್ವ ಹೊರಟು ಹೋದಳು. ಗುಡ್ಡದ  ಮಲ್ಲಯ್ಯನೇ ಕರುಣಿಸಿದ ಮಗು ಮಲ್ಲಣ್ಣನನ್ನು ವಿರೂಪಾಕ್ಷಯ್ಯ ಹಾಗೂ ದಂಪತಿಗಳು ಮಗನಾಗಿ ಪಡೆದುಕೊಂಡು, ಸಾಕಿ ಸಲುಹಿದರು.

ಚಿತ್ರ ಸಂಖ್ಯೆ ೪: ಬಾಗಲಕೋಟೆ ಯಲ್ಲಿನ ಬೆಳೆದು ಬಾಳಿದ  ಶ್ರೀ ಮಲ್ಲಣರ‍್ಯರ ಮನೆ ಇಂದು ಬೇರೆಯವರ ಆಧೀನದಲ್ಲಿ ನವೀಕರಣಗೊಂಡಿದೆ

ಮಲ್ಲಣ್ಣ ಜಾಣನಾಗಿದ್ದ. ಶಾಲಾ ಶಿಕ್ಷಣವಲ್ಲದೇ ಆತನಿಗೆ ಸಂಗೀತದಲ್ಲಿ ಆಸಕ್ತಿ ಇತ್ತು. ಬಹಳ ಸುಂದರವಾದ ಕಂಠಸಿರಿಯಿತ್ತು. ವಿಭೂತಿ ಧರಿಸಿಕೊಂಡು ಹಾಡಲು ಶುರುಮಾಡಿದರೆ ಎಲ್ಲರೂ ಮನಸೋಲುವ ಗಾನ. ಮಲ್ಲಣ್ಣನು ಏಳನೇ ವರ್ಗವನ್ನು ಹೆಚ್ಚು ಅಂಕಗಳಿಸಿ ತೇರ್ಗಡೆಯಾದ  ಕನ್ನಡ, ಸಂಸ್ಕೃತ ಎರಡೂ ಭಾಷೆಗಳು ಚೆನ್ನಾಗಿ ಬರುತ್ತಿದ್ದವು.

ವಿರುಪಾಕ್ಷಯ್ಯನವರು ಜಂಗಮ ದೀಕ್ಷೆ ಕೊಡಿಸಿ ಮಲ್ಲಣ್ಣನನ್ನು ಮಲ್ಲಯ್ಯನವರನ್ನಾಗಿ ಮಾಡಿದರು. ಬಸವ ಪುರಾಣ ಓದಿಕೊಂಡ ಮಲ್ಲಯ್ಯನವರಲ್ಲಿ ಹೊಸ ವಿಚಾರ ಕ್ರಾಂತಿಯಾಯಿತು. ವಚನಗಳನ್ನು ಸುಂದರವಾಗಿ ಹಾಡುತ್ತಿದ್ದರು. ಇದನ್ನರಿತು ವಿರುಪಾಕ್ಷಯ್ಯನವರ ಗೊತ್ತಿನವರೊಬ್ಬರು ಸಂಗೀತ ಕಲಿಯಲು ಅವರನ್ನ್ನು ಮೈಸೂರಿಗೆ ಕಳುಹಿಸಿದರು. ಅಲ್ಲಿ ಎರಡು ವರ್ಷ ಸಂಗೀತ ಅಭ್ಯಾಸವಾಯಿತು. ಅವರು ಬಸವ ಪುರಾಣ ಹೇಳುವ ಶೈಲಿಗೆ ಒಂದು ಹೊಸ ಮೆರಗು ಬಂತು.

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ  ವಿರುಪಾಕ್ಷಯ್ಯ ಸಾಲಿ, ಮನಗೂಳಿ ಸೇವೆಯಿಂದ ನಿವೃತ್ತರಾದರು. ಅವರ ಸ್ಥಾನದಲ್ಲಿಯೇ ಮಲ್ಲಿಕಾರ್ಜುನಯ್ಯ ವಿರುಪಾಕ್ಷಯ್ಯ ಮನಗೂಳಿ ಅವರಿಗೆ ಶಿಕ್ಷಕ ಹುದ್ದೆ ದೊರೆಯಿತು. ಹಿಂದುಸ್ತಾನಿ ಶಾಲೆಯಲ್ಲಿ ೨೧-೧೦-೧೮೯೩ ರಂದು ೭=೦೦ ರೂಪಾಯಿಗಳ ಪಗಾರದ ಮೇಲೆ ಶಿಕ್ಷಕರಾದರು. ಅಲ್ಲಿಯ ಉರ್ದು ಸಹ-ಶಿಕ್ಷಕರ ಸ್ನೇಹದಿಂದ ಉರ್ದು ಭಾಷೆಯನ್ನೂ ಕಲಿತುಕೊಂಡರು.

ತರುಣ ಮಲ್ಲಯ್ಯ ಎಲ್ಲರ ಮನ ಸೆಳೆವ ವ್ಯಕ್ತಿತ್ವ ಹೊಂದಿದ್ದರು. ಸಂಗೀತವನ್ನು ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸುವ ಹಂಬಲವಿತ್ತು. ಅಂಥ ಸಮಯದಲ್ಲಿ ಶ್ರೀಮಂತರೊಬ್ಬರು ಮಲ್ಲಯ್ಯ ಮಾಸ್ತರನನ್ನು ಕರೆದುಕೊಂಡು ಹೋಗಿ ಒಬ್ಬ ವಿದ್ಯಾರ್ಥಿನಿಯನ್ನು ಪರಿಚಯಿಸಿದರು. ಅವಳು ವೇಶ್ಯೆಯಾಗಿದ್ದಳು ಆದರೆ ಸಂಗೀತ ಕಲಿಯುವ ಹಂಬಲ ಬಲವಾಗಿತ್ತು. ಮಲ್ಲಿಕಾರ್ಜುನಯ್ಯನವರು ಯಾವ ಸಂಕೋಚವಿಲ್ಲದೆ ಗುರುಸ್ಥಾನದಲ್ಲಿ ನಿಂತು ಅವಳಿಗೆ ಸಂಗೀತ ಹೇಳಿದರು. ತಮ್ಮ ಮಗ ವಾರಾಂಗನೆಗೆ ಸಂಗೀತ ಹೇಳುವದು ವೃಧ್ಧ ತಂದೆ-ತಾಯಿಗಳಿಗೆ ನೋವನ್ನುಂಟುಮಾಡಿತು. ಹರೆಯದ ತರುಣ ಹರೆಯದ ಒಬ್ಬ ವೇಶ್ಯೆಗೆ ಸಂಗೀತ ಹೇಳಿಕೊಡುವ ಸಂಗತಿ ಯಾರಿಗೂ ಒಪ್ಪಿತವಾಗಿರಲಿಲ್ಲ. ಅದು ಚಿಂತೆಯ ವಿಷಯವೇ ಸರಿ.

ವಿರುಪಾಕ್ಷಯ್ಯನವರ ಆರೋಗ್ಯ ಹದಗೆಟ್ಟಿತು. ಮನೆಯಲ್ಲಿ ಮಲ್ಲಯ್ಯನವರ ವಿವಾಹ ಪ್ರಸ್ತಾಪವಾಯಿತು. ಮಲ್ಲಿಕಾರ್ಜುನಯ್ಯ ಅದಕ್ಕೆ ಕಿವಿಗೊಡದಾದರು. ತನಗೆ ವಿವಾಹ ಬೇಡ ಎಂದರು. ಜಡ್ಡು ಉಲ್ಬಣಿಸಿದ್ದ ವಿರುಪಾಕ್ಷಯ್ಯನವರು ಊರಿನ ಹಿರಿಯರೂ ಅಧ್ಯಾತ್ಮ ಜೀವಿಗಳೂ ಆಗಿದ್ದ ಶ್ರೀ ಕಿಣಗಿ ಬಸಲಿಂಪ್ಪನವರು ಮತ್ತು ಶ್ರೀ ಗುಡ್ಡದ ವೀರಸಂಗಪ್ಪನವರನ್ನು ಕರೆಸಿ ಲಗ್ನವಾಗುವಂತೆ ಬುದ್ಧಿ ಹೇಳಿಸಿದರೂ ಪ್ರಯೋಜನವಾಗಲಿಲ್ಲ. ‘ನನ್ನನ್ನು ಕ್ಷಮಿಸಿ, ನನ್ನ ಒಳದನಿ ಲಗ್ನವಾಗಲು ಒಪ್ಪುತ್ತಿಲ್ಲ’ ಎಂದು ಹೇಳಿದ ಮೇಲೆ ವಿರುಪಾಕ್ಷಯ್ಯನವರು ಆ ಮಾತುಗಳನ್ನು ಕೇಳಿ ಕೊನೆಯುಸಿರೆಳೆದರು.

ಅವರ ಸಂಸಾರ ಛಿದ್ರವಾಯಿತು. ಇಬ್ಬರೂ ತಾಯಂದಿರು ಬೇರೆ ಬೇರೆ ಇರಹತ್ತಿದರು. ಮಲ್ಲಿಕಾರ್ಜುನಯ್ಯನವರು ಮನೆಬಿಟ್ಟು ಬಾಗಲಕೋಟೆಯ ಬಸವಂತರಾಯ ಸಾಸನೂರ ಇವರ ವಖಾರದಲ್ಲಿಯೇ ಇರುತ್ತಿದ್ದರು. ಒಂದು ದಿನ ಇದ್ದ ನೌಕರಿಯನ್ನು ಬಿಟ್ಟರು.

ಶ್ರೀ ಕಿಣಗಿ ಬಸಲಿಂಗಪ್ಪನವರು ಮತ್ತು ಶ್ರೀ ಗುಡ್ಡದ ವೀರಸಂಗಪ್ಪನವರ ಹತ್ತಿರ ಅಧ್ಯಾತ್ಮಿಕ ಚರ್ಚೆ ಮಾಡುವಲ್ಲಿಯೇ ಹೆಚ್ಚು ಕಾಲ ಕಳೆದುಹೋಗುತ್ತಿತ್ತು.

ಶ್ರಾವಣಮಾಸದ ನಿಮಿತ್ಯ ಪುರಾಣ ಕೇಳುವ ಸಂಪ್ರದಾಯ ಬಾಗಲಕೋಟಯಲ್ಲಿ ಬಹುದಿನಗಳಿಂದ ಇದೆ. ಆ ವರ್ಷದಲ್ಲಿ ಹುನಗುಂದದ ಬಳಿಯಿರುವ ಕೊಡಗಲಿಯ ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳಿಂದ ಶ್ರೀ ಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಪುರಾಣ ಪ್ರಾರಂಭವಾಗಿತ್ತು.

ಮಲ್ಲಿಕಾರ್ಜುನಯ್ಯನವರನ್ನು ನೋಡಿದ ಕೊಡಗಲಿ ಶ್ರೀಗಳು ‘ಧರ್ಮಕಾರ್ಯಕ್ಕಾಗಿ ಹುಟ್ಟಿ ಬಂದು, ವಾರಾಂಗನೆಯರಿಗೆ ಸಂಗೀತ ಹೇಳಿಕೊಡುತ್ತ ಕಾಲಹರಣ ಮಾಡುವದು ಸರಿಯಲ್ಲ’ ಎಂದರು. ಅವರ ಅಧ್ಯಾತ್ಮಿಕ ವಿಚಾರಗಳಿಂದ ಪ್ರೇರಿತನಾದ ಮಲ್ಲಿಕಾರ್ಜುನಯ್ಯನವರು ತಮ್ಮ ಬೆಲೆಬಾಳುವ ವಸ್ತು ಒಡವೆಗಳನ್ನು ಸುಟ್ಟು ಹಾಕಿ, ಕೌಪೀನ ಧರಿಸಿ, ಅವರಿಂದಲೇ ಜಂಗಮದೀಕ್ಷೆಯನ್ನು ಪಡೆದುಕೊಂಡು, ಕಪನಿ. ಬೆತ್ತ, ಜೋಳಿಗೆ, ತಂಬಿಗೆ ಹಿಡಿದುಕೊಂಡು ಜಂಗಮನಾಗಿ ಪರಿವರ್ತಿತರಾದರು. ಮಲ್ಲಿಕಾರ್ಜುನಯ್ಯನವರು “ಮಲ್ಲಣಾರ್ಯರಾಗಿ, ಸಂಗೀತಮಯ ಬಸವಪುರಾಣ ಹೇಳುತ್ತ ಧರ್ಮ ಜಾಗೃತಿಯ ಕಾರ್ಯದಲ್ಲಿ ತೊಡಗಿದರು.

ಇಲಕಲ್ಲಿನ ಪೂಜ್ಯ ಶ್ರೀ ಮಹಾಂತಪ್ಪಗಳಿಗೆ ಬಸವೇಶ್ವರರ ವಚನಗಳೆಂದರೆ ಎಲ್ಲಿಲ್ಲದ ಪ್ರೀತಿ. ‘ಅಪ್ಪನವರ ವಚನಗಳು’ ಎಂದು ಗೌರವದಿಂದ ಕರೆಯುತ್ತಿದ್ದರು. ತಮ್ಮಲ್ಲಿಗೆ ಬಂದ ಮಲ್ಲಣಾರ್ಯರಿಗೆ ವಚನಗಳನ್ನು ಹಾಡಲು ಮತ್ತು ವಿವರಿಸಲು ಶ್ರೀಗಳು ಕೇಳಿಕೊಂಡಾಗ ಅವರ ವೈಖರಿಯನ್ನು ಕಂಡ ಜನರೆಲ್ಲ ಬೆರಗಾದರು.  ವೈರಾಗ್ಯದ ನಡೆ-ನುಡಿಗಳು ಜನಮನ ಸೂರೆಗೊಂಡವು.

ಪೂಜ್ಯ ಶ್ರೀ ವಿಜಯ ಮಹಾಂತೇಶ್ವರ ಸ್ವಾಮಿಗಳ ಅಪ್ಪಣೆಯಂತೆ ಮೂರು ತಿಂಗಳುಗಳ ಕಾಲ ಚಿತ್ತರಗಿಯಲ್ಲಿ ಬಸವ ಪುರಾಣ ನಡೆಯಿತು. ಮುಕ್ತಾಯ ಸಮಾರಂಭಕ್ಕೆ ಶ್ರೀ ವಿಜಯಮಹಾಂತೇಶ್ವರರು, ಶ್ರೀ ಘನಮಠದ ನಾಗಭೂಷಣ ಶಿವಯೋಗಿಗಳು ಮತ್ತು ಮಲ್ಲಣಾರ್ಯರು ಸಂಗಮಿಸಿ, ಮುಕ್ತಾಯ ಸಮಾರಂಭದ ನಂತರ ಹುನಗುಂದದಲ್ಲಿ ಶ್ರೀ ನಾಗರಾಳ ದೊಡ್ಡಪ್ಪನವರನ್ನು ಕಂಡು ಆಶೀರ್ವದಿಸಿದರು.

‘ಬಸವ ಪುರಾಣ ಕೇಳುವದಾದರೆ ಮಲ್ಲಣಾರ್ಯರರಿಂದಲೇ ಕೇಳಬೇಕು’ ಎಂಬ ಮಾತು ಜನಜನಿತವಾಯಿತು.

ವಿದ್ವಾಂಸರು, ಪಂಡಿತರು ಮಲ್ಲಣಾರ್ಯರ ಬೋಧನೆಗಳನ್ನು ಕೇಳಿ, ಅವರ ವೈರಾಗ್ಯದ ನಡೆನುಡಿಗಳನ್ನು ಕಂಡು ಬೆರಗಾದರು.

ಇಂಥ ವೈರಾಗ್ಯನಿಧಿ, ಸಾಮಾಜಿಕ ಕಳಕಳಿಯುಳ್ಳ ಮಲ್ಲಣಾರ್ಯರು ಹಾನಗಲ್ಲ ಮಠಕ್ಕೆ ಬಂದರು.

ಚಿತ್ರ ಸಂಖ್ಯೆ ೫:  ಶ್ರೀ ಮಲ್ಲಣಾರ‍್ಯರು ಮತ್ತು ಪೂಜ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿ ಗಳ ಭೇಟಿಯಾದ  ತೈಲ ಚಿತ್ರ ಕಲಾವಿದರು ನಾಡೋಜ ಶ್ರೀ ವಿ.ಟಿ.ಕಾಳೆ ಶಿವಯೋಗಮಂದಿರ ಚಿತ್ರ ಸಂಗ್ರಹಾಲಯ.

ಸಾಯಂಕಾಲದ ಸಮಯ, ಶ್ರೀ ಗುರು ಕುಮಾರ ಶಿವಯೋಗಿಗಳು ಮಠದಲ್ಲಿ ತೂಗು ಮಂಚದ ಮೇಲೆಕುಳಿತಿದ್ದರು. ಅದನ್ನು ಕಂಡ ಮಲ್ಲಣಾರ್ಯರು ಅಲ್ಲಿಯ ಸೇವಕನನ್ನು ಕುರಿತು, ಸ್ವಾಮಿಗಳಿಗೆ ಕೇಳಿಸುವಂತೆ ಉದ್ದೇಶ ಪೂರ್ವಕವಾಗಿ ‘ಇಲ್ಲಿ ಮಠದ ಸ್ವಾಮಿ ಯಾರಿದ್ದಾರೆ?’ ಎಂದು ಏರು ಧ್ವನಿಯಲ್ಲಿ ಕೇಳಿದರು. ಅದಕ್ಕೆ ಸೇವಕ ‘ಇಲ್ಲಿ ಕುಳಿತಿರುವವರೇ ಸ್ವಾಮಿಗಳು’ ಎಂದು ಮೆಲುದನಿಯಲ್ಲಿ ಹೇಳಿದ. ಮಲ್ಲಣಾರ್ಯ ‘ನೀವೇ ಏನು ಮಠದ ಸ್ವಾಮಿಗಳು?’ ಎಂದು ವಕ್ರವಾಗಿ ಕೇಳಿದಾಗ ‘ಜನ ಎನ್ನುತ್ತಾರೆ’ ಎಂದರು ಶ್ರೀಗಳು. ‘ಅವರು ಮೂರ್ಖರು, ಸಮಾಜ ಸೇವೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, ತನ್ನನ್ನು ತಾನು ಸಮಾಜಕ್ಕಾಗಿ ತೇದುಕೊಳ್ಳುವವನೇ ನಿಜವಾದ ಸ್ವಾಮಿ. ಮೃಷ್ಟಾನ್ನ ಭೋಜನ ಗೈದು ತೂಗು ಮಂಚದ ಮೇಲೆ ಕುಳಿತುಕೊಳ್ಳುವವರು ಸ್ವಾಮಿಗಳಲ್ಲ, ಎಂದು ಬಿರುಮಾತುಗಳನ್ನಾಡಿದಾಗ, ಹಾನಗಲ್ಲ ಕುಮಾರ ಶ್ರೀಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಯಿತು. ಅವರು ಮಲ್ಲಣಾರ್ಯರ ಮಾತಿಗೆ ಕೋಪಗೊಳ್ಳದೇ ಸತ್ಯ ಯಾವಾಗಲೂ ಕಠೋರ ಎಂಬುದನ್ನು ಅರ್ಥಮಾಡಿಕೊಂಡು, ಎದ್ದು ಬಂದು ಆ ಜಂಗಮ ಮೂರ್ತಿಯನ್ನು ಸಮಾಧಾನಪಡಿಸುತ್ತ, ‘ಇದಕ್ಕಾಗಿ ಮಠಾಧೀಶರು ಏನು ಮಾಡಬೇಕಾಗಿದೆ?’ ಎಂದು ಕೇಳಲಾಗಿ, ಮಲ್ಲಣಾರ್ಯರು ‘ಇಂದು ಸಮಾಜ ಇಂಗ್ಲೀಷ ಪ್ರಭಾವಕ್ಕೆ ಒಳಗಾಗಿ ತಮ್ಮ ಧರ್ಮವನ್ನು ಮರೆಯುತ್ತದೆ. ಇದರಿಂದಾಗಿ ಸಮಾಜ ಅಧೋಗತಿಗೆ ಇಳಿದಿದೆ. ಸಮಾಜ ತಿದ್ದುವದಕ್ಕಾಗಿ ಇಂದು ಸ್ವಾಮಿಗಳು ಮಠದಿಂದ ಹೊರಬರಬೇಕಾಗಿದೆ, ಬಸವಾದಿ ಪ್ರಮಥರು ಹಾಕಿಕೊಟ್ಟ ಮಾರ್ಗವನ್ನು ನೆನಪಿಸಿಕೊಡಬೇಕಾಗಿದೆ’ ಎಂದು ಆವೇಶದಿಂದ ಮಾತನಾಡಿದರು. ಇದರಿಂದ ಹಾನಗಲ್ಲ ಶ್ರೀಗಳು ಜಾಗೃತರಾದರು.

ಸಮಾಜಕ್ಕಾಗಿ ಜಂಗಮರನ್ನು, ಗುರುಗಳನ್ನು ಸಿದ್ಧಪಡಿಸುವ ಒಂದು ಧಾರ್ಮಿಕ ವಿದ್ಯಾಸಂಸ್ಥೆಯ ಅವಶ್ಯಕತೆಯಿದೆ, ಅಂಥ ಒಂದು ಸಂಸ್ಥೆಯನ್ನು ತೆರೆಯಬೇಕು ಎಂಬ ಮಾತನ್ನು ಹೇಳಿ ಹಾನಗಲ್ಲಿನಿಂದ ಮಲ್ಲಣಾರ್ಯರು ನಿರ್ಗಮಿಸಿದರು. ಈ ಮಾತುಗಳ ಪ್ರಭಾವ ಶ್ರೀ ಕುಮಾರ ಶಿವಯೋಗಿಗಳ ಮನದಲ್ಲಿ ಅಚ್ಚಳಿಯದೆ ಮೂಡಿನಿಂತಿತು.. ಈ ಮಹತ್ವದ ವಿಚಾರವೇ ನಂತರ ಬಾಗಲಕೋಟ ಜಿಲ್ಲೆಯ, ಬಾದಾಮಿ ತಾಲೂಕಿನಲ್ಲಿ ಶಿವಯೋಗ ಸಾಧಕರನ್ನು ತರಬೇತಿಗೊಳಿಸುವ ‘ಶಿವಯೋಗ ಮಂದಿರ’ದ ಸ್ಥಾಪನೆಗೆ ಕಾರಣವಾಯಿತು. ವೀರಶೈವ-ಲಿಂಗಾಯತ ಧರ್ಮದ ಬೀಜ-ರೂಪದ ಸಂಸ್ಥೆಯಾಯಿತು.

ಮಲ್ಲಣಾರ್ಯರು ಜಂಗಮನಾಗಿ ಬಿರುಗಾಳಿಯಂತೆ ನಾಡತುಂಬೆಲ ಸಂಚರಿಸುತ್ತ ಬಸವ ಪ್ರವಚನಗಳನ್ನು ನೀಡುತ್ತ ಜನಮನ ಶುದ್ಧೀಕರಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಮಲ್ಲಣಾರ್ಯರು ಯಾವುದೇ ಮಠದಲ್ಲಿ ವಾಸವಿದ್ದರೂ ಆ ಮಠದಲ್ಲಿ ಸಿದ್ಧಪಡಿಸಿದ ಪ್ರಸಾದವನ್ನು ಸ್ವೀಕಾರ ಮಾಡುತ್ತಿರಲಿಲ್ಲ. ಬೆಳಿಗ್ಗೆ ಸ್ನಾನ, ಲಿಂಗ ಪೂಜೆಗಳನ್ನು ಮುಗಿಸಿಕೊಂಡು, ಐದು ಮನೆ ಭಿಕ್ಷೆಗೆ ಹೋಗುತ್ತಿದ್ದರು. ಭಿಕ್ಷೆಗೆಂದು ಬಾಗಿಲಿಗೆ ಬಂದು ನಿಂತ ತಕ್ಷಣ ಭಕ್ತರು ಭಿಕ್ಷೆ ಹಾಕಬೇಕು, ತಡಮಾಡಿದರೆ ಮುಂದೆ ಹೊರಡುತ್ತಿದ್ದರು. ಇಂಥ ಕಠಿಣ ಜಂಗಮ ವೃತ್ತಿ ಪಾಲಿಸಿದವರು. ಭಿಕ್ಷೆ ಬೇಡಿ ತಂದುದನ್ನು ಮಾತ್ರ ಪ್ರಸಾದವಾಗಿ ಸೇವಿಸುತ್ತಿದ್ದರು ಇದು ಜಂಗಮ ವೃತ್ತಿಯ ಮಾದರಿ.

ಮಲ್ಲಣಾರ್ಯರ  ಈ ಬಗೆಯ ಧರ್ಮ ಸುಧಾರಣಾ ಕಾರ್ಯಕ್ಕೆ ಬೆಂಬಲವಾಗಿ ನಿಂತವರು- ಇಲಕಲ್ಲಿನ ಶ್ರೀ ವಿಜಯ ಮಹಾಂತ ಸ್ವಾಮಿಗಳು ಮತ್ತು ಹಾಲಕೆರೆಯ ಶ್ರೀ ಅನ್ನದಾನಿ ಮಹಾಸ್ವಾಮಿಗಳವರು.

ಗಜೇಂದ್ರಗಡದ ವಿರಕ್ತಮಠಕ್ಕೆ ಮಲ್ಲಣಾರ್ಯ ಬಂದಾಗ ಅಲ್ಲಿಯ ಸ್ವಾಮಿಗಳು ಚಿಂತೆಗೊಳಗಾಗಿದ್ದರು. ಕಾರಣ ಕೇಳಿದಾಗ ಆ ಶ್ರೀಗಳು ತಮಗೆ ಶ್ರೀಮಂತ ಭಕ್ತರೊಬ್ಬರು ಸಾವಿರಾರು ರೂಪಾಯಿ ಬೆಲೆ ಬಾಳುವ ಬೆಳ್ಳಿಯ ಬಟ್ಟಲು  ಚೆರಿಗೆ ಮತ್ತು ವಾಟೆ ಕೊಟ್ಟಿದ್ದರು, ಅವುಗಳನ್ನು ಕಳ್ಳರು ತುಡುಗು ಮಾಡಿದ್ದಾರೆ ಎಂದು ಹೇಳಿದರು. ಮಲ್ಲಣಾರ್ಯರು ಇದನ್ನು ಕೇಳಿ ‘ಸ್ವಾಮಿಗಳೇ, ಅದು ತಾವೇನೂ ದುಡಿದು ತಂದದ್ದಲ್ಲ, ಇದ್ದವರು ಕೊಟ್ಟರು, ಇಲ್ಲದವರು ಒಯ್ದರು ಅದಕ್ಕೆ ನಿಮಗೇಕೆ ಚಿಂತೆ?’ ಎಂದು ತಿಳಿಹೇಳಿ, ಅವರು ಹೊಸ ವಿಚಾರಕ್ಕೆ ಬರುವಂತೆ ಮಾಡಲು ಬಸವೇಶ್ವರರ ಮನೆಗೆ ಕಳ್ಳ ಬಂದಾಗ ಬಸವಣ್ಣ ನಡೆದುಕೊಂಡ ರೀತಿಯನ್ನು ಹೇಳಿದಾಗ, ಅದನ್ನು ಕೇಳಿದ ಸ್ವಾಮಿಗಳ ಮನಸ್ಸು ನಿರ್ಮಲವಾಯಿತು.

ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು ಲಿಂಗ ಪೂಜಾ ನಿಷ್ಠರಾಗಿ, ಶಿವ ಸ್ವರೂಪಿಗಳಾಗಿದ್ದವರು. ಅಲ್ಲಿಗೆ ಮಲ್ಲಣಾರ್ಯರು ಬಂದು ‘ಬಸವ ಪ್ರವಚನ’ ಗೈದು ಶಿವಯೋಗಿಗಳಿಗೆ ಆನಂದ ನೀಡಿದರು. ಅವರ ವೈರಾಗ್ಯದ ಮಾತುಗಳು, ಧಾರ್ಮಿಕ ನಡೆ-ನುಡಿಯ ಸತ್ಯತೆಗಳು ಜನ ಮನವನ್ನು ಪರಿವರ್ತಿಸಿದವು. ಮುರುಘೇಂದ್ರ ಶಿವಯೋಗಿ ಗಳು ಮಲ್ಲಣಾರ್ಯರ ಬರುವನ್ನು ಯಾವಾಗಲೂ ಎದುರು ನೋಡುತ್ತಿದ್ದರು.

ಮಲ್ಲಣಾರ್ಯರ ಮಾತುಗಳಲ್ಲಿ ಹೇಳುವದಾದರೆ “ಅಥಣಿ ನನಗೆ ಕಾಶೀ, ಹಾಲಕೆರೆ ರಾಮೇಶ್ವರ, ಇವುಗಳ ದರ್ಶನವಿಲ್ಲದೆ ನನಗೆ ಬದುಕಿಲ್ಲ” ಎನ್ನುತ್ತಿದ್ದರು

ಬಾಗಲಕೋಟೆಯ ಟೀಕಿನಮಠದಲ್ಲಿ ಪ್ರವಚನ ನಡೆದಾಗ ಮಲ್ಲಣಾರ್ಯರು ಅಲ್ಲಿಗೆ ಬಂದರು. ಅಲ್ಲಿ ಅನೇಕ ಹರ ಗುರು ಚರಮೂರ್ತಿಗಳು ವಿರಾಜಮಾನರಾಗಿದ್ದರು. ಮಹಾ ವೈರಾಗ್ಯ ಮೂರ್ತಿಗಳಾಗಿದ್ದ ಬೀಳೂರ ಪೂಜ್ಯ ಶ್ರೀ ನಿ. ಪ್ರ. ಗುರುಬಸವ ಮಹಾಸ್ವಾಮಿಗಳೂ ಅವರ ಮಧ್ಯದಲ್ಲಿದ್ದರು. ‘ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ, ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆ ಮಾಯೆ ಎಂಬ ವಚನವನ್ನು ಪ್ರವಚನಕಾರರು ವಿವರಿಸಿದರು. ಪ್ರವಚನದ ನಂತರ ಮಾತನಾಡಿದ ಮಲ್ಲಣಾರ್ಯರು ಎದ್ದು ಮಾತನಾಡುತ್ತ, ‘ಬೀಳೂರಪ್ಪನವರು ಹೆಣ್ಣಿನ ಮೋಹ ಬಿಟ್ಟರೆ ಹೊರತು, ಮಣ್ಣಿನ ಮೋಹ ಅವರನ್ನು ಬಿಡಲಿಲ್ಲ ಎಂದರುʼ. ಅದಕ್ಕೆ ಶ್ರೀ ಬೀಳೂರ ಗುರುಬಸವ ಮಹಾಸ್ವಾಮಿಗಳು ಕೋಪಗೊಳ್ಳದೆ, ‘ಅದು ನಿಜ, ಆದರೆ ಸಮಾಜದ ಹಿತಕ್ಕಾಗಿ ಕಟ್ಟಡ ಕಾರ್ಯ ಅನಿವಾರ್ಯ’ ಎಂಬ ಮಾತನ್ನು ಹೇಳಿದಾಗ, ಮಲ್ಲಣಾರ್ಯರೂ ತಲೆ ದೂಗಿದರು, ಅವರ ಸಮಾಜ ಪ್ರೇಮವನ್ನು ಕೊಂಡಾಡಿದರು. ಹೀಗೆ ವೈರಾಗ್ಯವೇ ಮೈವೆತ್ತಿ ಬಂದಂತಿದ್ದರು-ಮಲ್ಲಣಾರ್ಯರು. ಜಂಗಮ ಪದಕ್ಕೆ ವ್ಯಾಖ್ಯೆ ಬರೆದಂತಿದ್ದಿತು ಅವರ ನಡೆ-ನುಡಿ, ದಿನಚರಿ,

ಸಾಮಾಜಿಕ, ಧಾರ್ಮಿಕ ಕಳಕಳಿಯ ಚಿಂತಕ ಮಲ್ಲಣಾರ್ಯರು, ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಲ್ಲಿಗೆ ಬಂದು ಹೊಸ ವಿಚಾರ ಸಾದರಪಡಿಸಿದರು. ಹಾನಗಲ್ಲಿನಲ್ಲಿ ಮತ್ತು ಅಬ್ಬಿಗೇರಿಯಲ್ಲಿ ಒಂದು ಸಂಸ್ಕೃತ ಪಾಠಶಾಲೆ ತೆಗೆಯುವ ವಿಚಾರವನ್ನು ಹೇಳಿ ಇಂದು ಜ್ಞಾನ ಕೆಲವೇ ಜನರ ಸೊತ್ತಾಗಿದೆ. ನಮ್ಮವರು ಜ್ಞಾನವಂತರಾಗುವ ಅವಶ್ಯಕತೆಯಿದೆ ಎಂಬ ವಿಚಾರ ತಿಳಿಸಿ, ಶ್ರೀಗಳನ್ನು ಕರೆದುಕೊಂಡು ಅಬ್ಬಿಗೇರಿಗೆ ಬಂದು, ಅಲ್ಲಿಯ ಊರಪ್ರಮುಖರ ಮುಂದೆ ವಿಚಾರವಿಟ್ಟಾಗ ಜನರು ಸಂತಸದಿಂದ ಭೂಮಿ ದಾನ, ಧನದಾನ ಮಾಡಿದರು. ಅಲ್ಲಿ ಸಂಸ್ಕೃತ ಪಾಠಶಾಲೆ ಪ್ರಾರಂಭಗೊಂಡು ೧೯೩೦ ರ ವರೆಗೆ ಉತ್ಕೃಷ್ಟವಾಗಿ ಕಾರ್ಯ ನಿರ್ವಹಿಸಿತು. ಶ್ರೀ ರಂಭಾಪುರಿ ಜಗದ್ಗುರುಗಳು, ಕೊಪ್ಪಳದ ಗವಿಸಿದ್ಧೇಶ್ವರರು, ಕೋಡಿಕೊಪ್ಪದ ಸ್ವಾಮಿಗಳು ಹೀಗೆ ಅನೇಕ ಶ್ರೀಗಳು ಅಬ್ಬಿಗೇರಿಯ ಸಂಸ್ಕೃತ ಪಾಠಶಾಲೆಯಲ್ಲಿಯೇ ಓದಿದವರು. ಹೀಗೆ ಮಲ್ಲಣಾರ್ಯ ಶುಷ್ಕ ಪ್ರವಚನಕಾರನಾಗಿರದೇ, ಕ್ರಿಯಾಶಿಲ ಜಂಗಮನಾಗಿದ್ದರು.

ಮಲ್ಲಣಾರ್ಯರು ನಿರ್ಭಿಡೆಯಿಂದ ಮಾತನಾಡುವ ವ್ಯಕ್ತಿ. ಇಂಥ ಮಾತುಗಳು ಅವರಿಗೆ ಅನೇಕ ಸಲ ಮುಳುವಾಗಿದ್ದುಂಟು. ಮುಂಡರಗಿಯಲ್ಲಿ ಪ್ರವಚನಗೈಯುತ್ತ, ಸ್ವಾಮಿಗಳು ಸಂಪತ್ತಿನ ಬೆನ್ನ ಹಿಂದೆ ಹೋಗಬಾರದು, ಆಡಂಬರದ ಬೆನ್ನು ಹತ್ತಬಾರದು ಎಂಬ ವಿಷಯವಾಗಿ ಬಿರುಸಿನ ಮಾತನಾಡಿದಾಗ ಅನೇಕ ಬಿಸಿ ರಕ್ತದ ಸ್ವಾಮಿಗಳು ಅವರನ್ನು ಥಳಿಸಿದರು, ಇದೇ ಸ್ಥಿತಿ ಅವರು ಗದುಗಿನದಲ್ಲಿಯೂ ಎದುರಿಸಬೇಕಾಯಿತು. ಅದಕ್ಕೆ ಅವರು ಹೆದರುತ್ತಿರಲಿಲ್ಲ, “ಕ್ವಾಟಿ ಮಲ್ಲ ಹಿಂಗ ಇದು, ಬಾಯಿಗೆ ಬಂದದ್ದನ್ನ ಬೊಗಳತೈತಿ, ಚೊಲೋತಂಗ ಹೊಡಿರಿ” ಎನ್ನುತ್ತಿದ್ದರು. ಆದರೆ ತನ್ನ ನಿಷ್ಠುರತನವನ್ನು ಎಂದೂ ಬಿಡಲಿಲ್ಲ. ‘ನ್ಯಾಯನಿಷ್ಠುರಿ ; ದಾಕ್ಷೀಣ್ಯಪರ ನಾನಲ್ಲ’ ಎಂಬ ದೃಢ ಭಾವ!

ತಮ್ಮ ಕಟು ಮಾತುಗಳನ್ನು ತುಂಬಿದ ಸಭೆಯಲ್ಲಿ ಅಂಜಿಕೆಯಿಲ್ಲದೇ ಆಡುತ್ತಿದ್ದರು. ಇದರಿಂದ ಅನೇಕ ಪರಿವರ್ತನೆಗಳೂ ಆದವು. ಲಂಚಕೋರ ತಹಶಿಲ್ದಾರನೊಬ್ಬ ಇವರ ಪ್ರವಚನ ಕೇಳುತ್ತ ಕೇಳುತ್ತ, ಎಲ್ಲರೆದುರಿಗೆ ಪರಿವರ್ತಿತನಾಗಿ, ಇನ್ನು ಲಂಚ ಸ್ವೀಕರಿಸುವದಿಲ್ಲ ಎಂದು ಪ್ರತಿಜ್ಞೆಗೈದ ಘಟನೆಯೂ ಇದೆ.

ಕಾಯಾ ವಾಚಾ ಮನಸಾ ಪರಿಶುದ್ಧರಾಗಿದ್ದ ಮಲ್ಲಣಾರ್ಯರಿಗೆ ಪಂಚಪರುಷ ಸಿದ್ಧಿ ತಾನಾಗಿಯೇ ಲಭಿಸಿತ್ತು. ಅಬ್ಬಿಗೇರಿಯಲ್ಲಿ ಒಬ್ಬ ಮುದುಕಿ ತನಗೆಲ್ಲ ಸಂತಸದ ಬದುಕಿದೆ,  ಇನ್ನು ದೇವರಪಾದ ಸೇರಬೇಕಾಗಿದೆ, ಕರುಣಿಸು ಎಂದಾಗ , ಮಲ್ಲಣಾರ್ಯರು “ಮುಂದಿನ ಸೋಮವಾರ ಚೆನ್ನಾಗಿದೆ” ಎಂದರು. ಆ ಮುದುಕಿಗೆ ಹೇಳಿದ ಸೋಮವಾರದಿನದಂದು ಮುಕ್ತಿಯಾದ ಉದಾಹರಣೆಯಿದೆ.

ಹುಬ್ಬಳ್ಳಿಯ ಶ್ರೀ ಸಿದ್ಧರೂಢರು ಮತ್ತು ಎಮ್ಮಿಗನೂರ ಶ್ರೀ ಜಡೆ ಸಿದ್ಧೇಶ್ವರರೊಂದಿಗೆ ದ್ವೈತ ಅದ್ವೈತ ವಿಚಾರವಾಗಿ ವಾದ ಮಾಡಿದ್ದುಂಟು. ಬಸವಮಾರ್ಗಾನುಯಾಯಿಯಾಗಿದ್ದ ಮಲ್ಲಣಾರ್ಯರಿಗೆ ಎಲ್ಲ ವಾದ ಪ್ರತಿವಾದಗಳಲ್ಲಿ ಹುರುಳಿಲ್ಲ ಎನ್ನಿಸಿದ್ದು ಅಚ್ಚರಿಯೇನಲ್ಲ.

ಮಲ್ಲಣಾರ್ಯರಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಹಾನಗಲ್ಲಿಗೆ ಹೋದಾಗ ಶ್ರೀ ಕುಮಾರ ಶಿವಯೋಗಿಗಳಿಗೆ ಇದು ಕೊನೆಯ ಭೇಟಿ ಎಂದು ಹೇಳಿದಾಗ, ಶ್ರೀಗಳ ಕಣ್ಣಂಚಲ್ಲಿ ನೀರು ಹನಿಯಿತು. ಅದೇ ರೀತಿಯಾಗಿ ಕೊನೆಯ ಬಾರಿಗೆ ಎಂಬಂತೆ ಅಥಣಿಯ ಮಠದಲ್ಲಿ ಬಸವ ಪುರಾಣ ಪ್ರವಚನ ಮಾಡಿ, ಇದು ಕೊನೆಯ ಭೇಟಿ ಎಂದು ಶಿವಯೋಗಿಗಳ ಅಪ್ಪಣೆಯನ್ನೂ ಪಡೆದರು.

ಚಿತ್ರ ಸಂಖೈ ೬ : ಪೂಜ್ಯ ಲಿಂ.ಅನ್ನದಾನೇಶ್ವರ ಮಹಾಸ್ಡಾಮಿಗಳು ಹಾಲಕೆರಿ

ಬಾಗಲಕೋಟೆಗೆ ಬಂದ ನಂತರ ಅವರ ಆರೋಗ್ಯ ಸ್ಥಿತಿ ಇನ್ನೂ ಹದಗೆಟ್ಟಿತು. ರಾಚಪ್ಪ ಬಣಗಾರ ಇವರ ವಖಾರದಲ್ಲಿ ಮಲಗಿಕೊಂಡಿದ್ದರು. ಅವರನ್ನು ಭೇಟಿಯಾಗಲು, ಕಿಣಗಿ ಬಸಲಿಂಗಪ್ಪನವರು, ಗುಡ್ಡದ ವೀರಸಂಗಪ್ಪನವರು, ಬಸವಂತಪ್ಪನವರು ಸಾಸನೂರ, ರಾಜಪ್ಪ ರಾಜೂರ, ನಾಶಿ ವೀರಯ್ಯ, ಮೊದಲಾದ ಅನೇಕ ಗಣ್ಯರು ಸೇರಿದ್ದರು. “ಶ್ರೀ ಹಾಲಕೆರೆ ಅನ್ನದಾನೇಶ್ವರ ಸ್ವಾಮಿಗಳ ಪದತಲದಲ್ಲಿ ಪ್ರಾಣಾರ್ಪಣೆಯಾಗಿ, ಮುಕ್ತಿ ಪಡೆಯಬೇಕೆಂಬುದು ಅವರ ಕೊನೆ ಆಶಯವಾಗಿತ್ತು ಅದು ಅಸಾಧ್ಯವೆಂದು ಗಮನಿಸಿದ ಗುಡ್ಡದ ವೀರಸಂಗಪ್ಪನವರು ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿಯ ಸಹಾಯದಿಂದ ಪೂಜ್ಯ ಶ್ರೀ ಹಾಲಕೆರೆ ಅನ್ನದಾನೇಶ್ವರರನ್ನು ನೆನೆ ನೆನೆದು ತಾವು ಮುಕ್ತಾರಾಗಬಹುದೆಂಬ ಉಪಾಯ ಹೇಳಿದಾಗ ಮಲ್ಲಣಾರ್ಯರು ಒಪ್ಪಿ, ದಿನಾಂಕ : ೫-೧೦-೧೯೦೩, ಸೋಮವಾರ ಬೆಳಗಿನ ೫ ಗಂಟೆಗೆ ಲಿಂಗೈಕ್ಯರಾಗಿ ಬಯಲಲ್ಲಿ ಬಯಲಾದರು. ಬಸವ ಬೆಳಗಿನಲ್ಲಿ ಒಂದಾದರು.

ವೈರಾಗ್ಯನಿಧಿ ಮಲ್ಲಣಾರ್ಯರ ಅಂತಿಮ ಯಾತ್ರೆ ಜರುಗಿತು. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಕಣ್ಣೀರು ಗರೆದುದಲ್ಲದೆ ತಮ್ಮ ಪದ್ಯ ರೂಪದ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಅಂತಿಮಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಕೊನೆಗೆ ಬಾಗಲಕೋಟೆಯ ಹೊರಭಾಗದಲ್ಲಿ ಪಶ್ಚಿಮ ದಿಕ್ಕಿನಲ್ಲಿರುವ ಶ್ರೀ ಅಡವೀಸ್ವಾಮಿ ಮಠದ ಆವರಣದಲ್ಲಿ ಅವರ ಅಂತ್ಯಕ್ರಿಯೆ ಜರುಗಿತು. ನಂತರ ಗದ್ದುಗೆಯನ್ನು ನಿರ್ಮಾಣ ಮಾಡಲಾಯಿತು.

ಚಿತ್ರ ಸಂಖ್ಯೆ ೭ : ಶ್ರೀ ಮಲ್ಲಣಾರ್ಯರ ಗದ್ದುಗೆಯು ಅಡವಿಮಠ ಬಾಗಲಕೋಟೆ (ಸದ್ಯ ಮುಳುಗಡೆ ಪ್ರದೇಶದಲ್ಲಿದೆ)

ಮಲ್ಲಣಾರ್ಯರ ಗದ್ದುಗೆಯ ಪ್ರಭಾವಕಂಡವರು ಅನೇಕ ಜನರಿದ್ದಾರೆ. ಮಲ್ಲಣಾರ್ಯರ ಪ್ರಸ್ತಾಪವು ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಪುರಾಣ, ಹಾನಗಲ್ಲ ಗುರುಕುಮಾರ ಶಿವಯೋಗಿಗಳ ಪುರಾಣ, ಶ್ರೀ ಫಲಹಾರೇಶ್ವರ ಪುರಾಣ, ಪೂಜ್ಯ ಶ್ರೀ ಬಿದರಿ ಕುಮಾರ ಸ್ವಾಮಿಗಳ ಪುರಾಣಗಳಲ್ಲಿ, ಮತ್ತು ಶಿವಯೋಗ ಮಂದಿರ ಸ್ಥಾಪನಾ ವರದಿಯಲ್ಲಿ, ಅನೇಕ ಜಾನಪದ ಗೀತೆಗಳಲ್ಲಿ ಕಂಡುಬರುತ್ತದೆ.

ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು ಸಮಾಜೋಧಾರ್ಮಿಕ ಪರಿವರ್ತನೆಯಲ್ಲಿ ಮಹತ್ವದ ಪಾತ್ರವಾಡಿದ್ದು ಒಂದು ಐತಿಹಾಸಿಕ ದಾಖಲೆಯೇ ಸರಿ. ತಮ್ಮ ನಿಷ್ಠುರ ನಡೆ-ನುಡಿಗೆ ಹೆಸರಾದ ಜಂಗಮ ಪುಂಗವರಾಗಿ ಧ್ರುವ ನಕ್ಷತ್ರದಂತೆ ಚಿರಸ್ಥಾಯಿಯಾಗಿ ಎಂದಿಗೂ ವೀರಶೈವ-ಲಿಂಗಾಯತ ಧರ್ಮಾಕಾಶದಲ್ಲಿ ಮಿನುಗುತ್ತಿರುವರು.

(ಕೃಪೆ :  ಪಿ.ವಾಯ್. ಗಿರಿಸಾಗರ ವಿರಚಿತ ‘ಬಾಗಿಲುಕೋಟೆಯ ಮಲ್ಲಣಾರ‍್ಯರು’ ಪುಸ್ತಕ. ಅನಾಮಿಕ ಪ್ರಕಾಶನ, ಚರಂತಿಮಠ,  ಬಾಗಲಕೋಟೆ ೧೯೯೩ )

Related Posts