ಸಮಾಜ ಸಂಸ್ಕರಣ, ಸಂಸ್ಕೃತಿ ಸಂರಕ್ಷಣ

ಜ.ಚ.ನಿ

 

ವೀರಶೈವ ಮಹಾಸಭೆಯ ಸ್ಥಾಪನೆಯಿಂದ ಅದರ ಸೇವೆಯಿಂದ ಸ್ವಾಮಿಗಳವರಿಗೆ ಸಂತೃಪ್ತಿಯಾಗಲಿಲ್ಲ. ಸಮಾಜದೇಳ್ಗೆಯ ಕಾರ್ಯವು ಎಷ್ಟು ಮುಖಗಳಿಂದ ನಡೆದರೂ ಇನ್ನೂ ಹಲವು ಮುಖಗಳಿಂದ ನಡೆಯಬೇಕೆಂಬ ಒತ್ತಾಸೆ ಸ್ವಾಮಿಗಳವರದು. ಸಮಾಜದಲ್ಲಿರುವ ಇನ್ನಿತರ ಕೊರತೆಗಳಿಗಾಗಿ ಸ್ವಾಮಿಗಳವರು ಹಗಲಿರುಳು ಕನವರಿಸುತ್ತಿದ್ದರು. ಸಮಾಜದ ಪ್ರತಿಯೊಂದು ವಿಷಯ ಹೇಗೆ ಮುಂದಕ್ಕೆ ಬರುವದೆಂದು ಸದಾ ಯೋಚಿಸುತ್ತಿದ್ದರು. ಸಮಾಜದ ಸರ್ವಾಂಗದೇಳ್ಗೆಯ ಆಸಕ್ತಿಯು ಅವರ ರಕ್ತದ

ಪ್ರತಿಕಣದಲ್ಲಿಯು ಬೆರೆತಿದ್ದಿತು. ಅದಕ್ಕಾಗಿ ಅವರು ಪಟ್ಟ ಪರಿಶ್ರಮವನ್ನು ಊಹಿಸುವುದೆ ಅಸಾಧ್ಯ. ಸಮಾಜದಲ್ಲಿರುವ ಕಸವನ್ನೆಲ್ಲ ರಸವನ್ನಾಗಿ ಮಾಡಲು ಪ್ರಯತ್ನಪಟ್ಟರು. ಆ ಸಮಯದಲ್ಲಿ ತಮ್ಮ ಶರೀರದ ಸೌಖ್ಯವನ್ನು ಶ್ರಮವನ್ನು ಗಣಿಸಲಿಲ್ಲ. ಆ ಕಾರ್ಯದಲ್ಲಿ ಪ್ರವೃತ್ತರಾದಾಗ ಅವರಿಗೆ ಬಿಸಿಲು ಬೆಳದಿಂಗಳಾಗಿಯು ಉಪವಾಸವು ಊಟದಂತೆಯು ಯೋಚನೆಯು ಜಪವಾಗಿಯು ಪರಿಣಮಿಸಿದವು. ಪರಳಿಯ ಪ್ರಕರಣದಲ್ಲಿ ಪ್ರಬಲವಾಗಿ ಹೋರಾಡಿ ಗಳಿಸಿದ ಜಯಕ್ಕೆ ಶ್ರೀಗಳು ಬಹುಮಟ್ಟಿಗೆ ಕಾರಣರಾದ ವಿಷಯ ಚಿರಸ್ಮರಣೀಯವಾಗಿದೆ. ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ ಫಂಡಿನಂತೆ ಆಗುವದರ ಸಲುವಾಗಿ ಸ್ವಾಮಿಗಳವರು ಹೇರಳ ಹಣವನ್ನು ಕೂಡಿಸಿ ಕೊಟ್ಟುದಲ್ಲದೆ ಹೇಳತೀರದಷ್ಟು ಅಹೋರಾತ್ರಿ ಅವಿಶ್ರಾಂತ ಶ್ರಮವಹಿಸಿ ಕೆಲಸಮಾಡಿದ್ದನ್ನು ವೀರಶೈವ ಸಮಾಜವು ಎಂದಿಗೂ ಮರೆಯುವಂತಿಲ್ಲ.   ಕಲಘಟಗಿ, ಸಿದ್ದಾಪುರ ಮೊದಲಾದ ಕಡೆಗಳಲ್ಲಿ ಹೋಗಿ ಅಲ್ಲಿರುವ ಜನಗಳ ವಾಗದ್ವೈತದ ಹುಚ್ಚನ್ನು ಬಿಡಿಸಿ ಲಿಂಗಯೋಗದ ತತ್ವವನ್ನು ಬೀರಿದರು. ‘ಹಾನಗಲ್ಲ ಶ್ರೀಗಳವರ ಸಿದ್ದಾಪುರದ ಸಾಧು ನಿರಸನ’ ಎಂಬ ತಲೆಬರಹದ ಲೇಖನವನ್ನು ‘ಮೈಸೂರು ಸ್ಟಾರ್‌’ ಪತ್ರಿಕೆಯಲ್ಲಿ ಓದಿದ್ದು ನೆನವಿನಲ್ಲಿದೆ. ಜನರ ಸಣ್ಣ ಪುಟ್ಟ ವ್ಯಾಜ್ಯಗಳನ್ನು ತಮ್ಮ ಬುದ್ಧಿಬಲದಿಂದ ಬಗೆಹರಿಸಿ ಕೋರ್ಟು ಕಚೇರಿಗಳಿಗೆ ದುಡ್ಡು ಸುರಿಯದಂತೆ ಮಾಡುತ್ತಿದ್ದರು. ವಿವಾಹ ಕಾರ್ಯಗಳಲ್ಲಿ ಮದ್ದು ಮೆರವಣೆಗೆಗಳಿಗೆ ಮತ್ತಿತರ ಮೂಢಕಾರ್ಯಗಳಿಗೆ ಮಾಡುತ್ತಿದ್ದ ಅತಿವ್ಯಯವನ್ನು ಎಷ್ಟೋ ಕಡೆಗಳಲ್ಲಿ ಕಡಿಮೆಮಾಡಿಸಿದರು. ‘ಕಾಯಕವೆ ಕೈಲಾಸ’ ಎಂಬ ಶಿವಶರಣರ ದಿವ್ಯ ಬೋಧೆಯನ್ನು ಸಾರಿದರು. ಪ್ರತಿಕ್ಷಣದಲ್ಲಿಯು ಜನಜೀವನದಲ್ಲಿ ಬೆರೆದು ಬೋಧಿಸಿದರು. ಪ್ರತಿಯೊಂದು ಸಣ್ಣಪುಟ್ಟ ದೋಷವನ್ನು ತಿದ್ದಿದರು. ಪ್ರತಿಯೊಂದು ಕಣವನ್ನು ಅನ್ಯಾಯಕ್ಕೆ ವ್ಯಯಮಾಡದಂತೆ ಪ್ರತಿಪಾದಿಸಿದರು.   ಎರಡನೆಯದಾಗಿ ಅವರಿಗೆ ಸಂಸ್ಕೃತಿಯಲ್ಲಿ ಅಪಾರವಾದ ಅಭಿಮಾನವಿತ್ತು. ಅದಕ್ಕಾಗಿ ಅವರು ತಮ್ಮ ತ್ರಿಕರಣಗಳನ್ನು ಸವೆಸಿದರು. ಅಲ್ಲಲ್ಲಿ ಸಭೆಗಳನ್ನು ಕರೆಯುತ್ತ ಸದ್ಬೋಧೆಯನ್ನು ಬೀರುತ್ತ ಸಂಚರಿಸುವಾಗ ಹಲವು ಕಡೆ ‘ಫಂಡುʼ ಮಾಡಿ ಪಾಠಶಾಲೆಗಳನ್ನು ಸ್ಥಾಪಿಸಿದರು. ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ಅಕ್ಕಿ ಆಲೂರ, ರೋಣ, ಇಳಕಲ್ಲ, ನೀರಡಗುಂಬ, ಅನಂತಪುರ, ಕೆಳದಿ, ಚಿತಾಪುರ ಮುಂತಾದ ಊರುಗಳಲ್ಲಿ ಕೆಲವು ಸ್ವಂತ ಪ್ರಯತ್ನದಿಂದ, ಕೆಲವು ಪ್ರೇರಣೆ ಪ್ರೋತ್ಸಾಹಗಳಿಂದ ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ಈಗ ಕೆಲವು ನಡೆಯುತ್ತಿವೆ. ಕೆಲವು ನಿಂತು ಹೋಗಿವೆ. ಮೊತ್ತಮೊದಲು ಸ್ವಾಮಿಗಳವರ ಉಪದೇಶದಿಂದಲೆ ವೀರಶೈವರಲ್ಲಿ ವಾಚನಮಂದಿರಗಳು ಸ್ಥಾಪಿತವಾದವು. ಪ್ರಾಚೀನ ಗ್ರಂಥಗಳ ಸಂಶೋಧನವನ್ನು ಮಾಡಲಿಕ್ಕೆ ಒಂದು ಮಂಡಳವನ್ನು ಏರ್ಪಡಿಸಲು ಸ್ವಾಮಿಗಳವರು ಪ್ರಯತ್ನಪಟ್ಟರು. ಜನಧನ ಸಹಾಯವು ಸಾಕಷ್ಟಾಗದೆ ಅದು ಸಂಪೂರ್ಣ ಸಿದ್ದಿಗೆ ನಿಲುಕಲಿಲ್ಲ. ಆದರೂ ಶ್ರೀಗಳವರು ಕೆಲವು ಮಂದಿ ಪಂಡಿತರನ್ನು ತ್ರಾವಣಕೋರ, ತಂಜಾವರ, ಮದ್ರಾಸ್  (ಈಗಿನ ಚನ್ನೈ) ಮೊದಲಾದ ಸ್ಥಳಗಳಿಗೆ ಕಳುಹಿಸಿ ಕೆಲವು ಮಹತ್ವದ ಮತಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಸಂಶೋಧನವನ್ನು ಮಾಡಿಸಿರುವರು. ಶಿವಯೋಗ ಮಂದಿರದಲ್ಲಿ  ವೀರಶೈವ ಶಿಕ್ಷಣ ಸಮ್ಮೇಲನವನ್ನು ಸ್ಥಾಪಿಸಿದ್ದರು. ಅದು ಒಂದು ವರ್ಷ ಮಾತ್ರ ನಡೆಯಿತು. ಇದಲ್ಲದೆ ಕೈ. ವೀರಬಸವ ಶ್ರೇಷ್ಠಿ ಬಿ.ಎ. ಅವರನ್ನು ಪಾಶ್ಚಾತ್ಯ ದೇಶಗಳಿಗೆ ಉಪದೇಶಕ್ಕೆ ಕಳಿಸಿ ಸಂಸ್ಕೃತಿಯ ಪ್ರಚಾರ ಮಾಡಬೇಕೆಂಬ ಮಹತ್ವಾಕಾಂಕ್ಷೆ ಶ್ರೀಗಳವರಲ್ಲಿತ್ತು. ಅದರಂತೆ ಒಮ್ಮೆ ಸಾಹಸ ಮಾಡಿದರು. ಕಾರಣಾಂತರಗಳಿಂದ ಕಾರ್ಯ ಕೊನೆಗಾಣಲಿಲ್ಲ. ಶ್ರೀಗಳವರ ಪ್ರಯತ್ನ ವಿಶೇಷದಿಂದಲೆ ಪರಿಶೋಧ ಪರಿಶ್ರಮದಿಂದಲೆ ಹುಳದ ಬಾಯಿಗೆ ಬಿದ್ದು ಹಾಳಾಗಿ ಹೋಗುತ್ತಿದ್ದ ಎಷ್ಟೋ ವಾಙ್ಮಯವು ಬದುಕಿ ಬೆಳಕಿಗೆ

ಬಂದಿತು. ಹೊಸ ಗ್ರಂಥಗಳಿಗೆ ಶ್ರೀಗಳವರು ಮುಕ್ತಹಸ್ತದಿಂದ ಸಹಾಯ ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಓದುವವರಿಗೆ ಹಲವು ವಿಧವಾಗಿ ಸಹಾಯ ಮಾಡಿದರು. ಮೊದಲು ಕಾಶಿಯಲ್ಲಿ ಸಂಸ್ಕೃತಾಭ್ಯಾಸ ಮಾಡುತ್ತಿದ್ದ ಶ್ರೀ ಮ. ನಿ. ಜಗದ್ಗುರು ಜಯದೇವ ಮುರಘರಾಜೇಂದ್ರ ಸ್ವಾಮಿಗಳವರಿಗು, ಶ್ರೀ ಬಾಳೇಹಳ್ಳಿ ವೀರಸಿಂಹಾಸನಾಧೀಶ್ವರ ಜಗದ್ಗುರು ಶಿವಾನಂದ ಸ್ವಾಮಿಗಳವರಿಗು ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಧನಸಹಾಯ ಮಾಡಿದ್ದಾರೆ. ಅವರಿಂದ ಸಹಾಯ ಪಡೆದ ಉಳಿದ ಜನರನ್ನು ಹೆಸರಿಸಲು ಸಾಧ್ಯವೇ ಇಲ್ಲ. ‘ಧರ್ಮ ತರಂಗಿಣಿ’ ‘ಶಿವಪ್ರತಾಪ’ ಮೊದಲಾದ ಮಾಸಪತ್ರಿಕೆ ವಾರಪತ್ರಿಕೆಗಳು ಶ್ರೀಗಳ ಕೃಪೆಯಿಂದಲೆ ಹೊರಡುತ್ತಿದ್ದವು. ಹೀಗೆ ಒಂದಲ್ಲ ಎರಡಲ್ಲ ಹಲವು ವಿಧವಾಗಿ ಸ್ವಾಮಿಗಳವರು ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡಿದರು.

ಸ್ವಾಮಿಗಳವರು ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆದರ್ಶ ಪುರುಷರು; ಧಾರ್ಮಿಕ ಹೃದಯರು. ಅವರು ಅರ್ಚನಾನುಭವ ಜೀವಿಗಳು, ವೀರವಿರಾಗಿಯಾಗಿ ಯುಕ್ತಯೋಗಿಯಾಗಿ ಸತ್ಯಸ್ವಾಮಿಯಾಗಿ ಬಾಳಿದರು. ಜನಾನುರಾಗಿಗಳಾಗಿ ಜೀವನ್ಮುಕ್ತರಾಗಿ ಜಸ ಪಡೆದರು. ಅವರು ಸಮಾಜ ವಿರಾಜಮಾನವಾಗಿ ಮಾಡಿದ  ದಿವ್ಯಜ್ಯೋತಿ ಸಂಗೀತ ಸಾಹಿತ್ಯ ವೈದ್ಯ ಉದ್ಯೋಗಗಳ ಸಂರಕ್ಷಿಸಿ ಸಾಂಸ್ಕೃತಿಕ ಸಿದ್ಧಮೂರ್ತಿ ,ವಿದ್ಯೆ, ವಿಜ್ಞಾನಗಳ ಅಭಿವೃದ್ಧಿಗೊಳಿಸಿದ ವಿದ್ಯಾಭಿಮಾನಿ,  ಪುರಾಣ, ಪ್ರವಚನ,ಕೀರ್ತನ ಭಾಷಣ ಕಲಾಶಿಕ್ಷಣಾಚಾರ್ಯ, ನೀತಿ ಭಕ್ತಿ ನಡೆ ನುಡಿ ಸ್ತ್ರೀ ಸುಧಾರಣೆ ಕಲಿಸಿದ ಪ್ರಥಮಪುಂಗವ. ದೀನರನ್ನು ದರಿದ್ರರನ್ನು ದುರ್ಮಾರ್ಗಿಗಳನ್ನು ಉದ್ದರಿಸಿದ ಉದಾರಚರಿತ . ತನ್ನ ನಡೆನುಡಿಯಿಂದ ಲೋಕದ ಬಾಳನ್ನು ತಿದ್ದಿ ಸಚೇತನಗೊಳಿಸಿದ ಸಂತ. ತನ್ನ ಆಯುಷ್ಯವನ್ನು ಆರೋಗ್ಯವನ್ನು ಲೋಕೋದ್ಧಾರಕ್ಕಾಗಿಯ ಧಾರೆಯರದ ಮಹಾತ್ಮ ಪುರಾತರ ಪ್ರಮಥರ ಆಚಾರ್ಯರ ಹೊಣೆಯನ್ನು ಹೊತ್ತು ನಿತ್ತರಿಸಿದ ಆರ್ಯ.

ಅತ್ಯಂತ ವೈಭವಯುಕ್ತವಾದ ಹಾನಗಲ್ಲ ವಿರಕ್ತಮಠವನ್ನು ಹಿಡಿದು ಪಲ್ಲಕ್ಕಿಯನೇರಿ ಮರೆಯಬಹುದಿತ್ತು. ಅದಕ್ಕೆ ಅವರು ಮನಸ್ಸು ಮಾಡಲಿಲ್ಲ. ಆಗಾಗ ಅನೇಕರು ಅನೇಕ ಕಡೆಗಳಲ್ಲಿ ಅಂದಣವನೇರಲು ಬಲವಂತಿಸಿದರು. ಎಳ್ಳಷ್ಟು ಮನಸ್ಸು ಮಾಡದೆ ಮತ್ತೊಬ್ಬರಿಗೆ ಆ ಉತ್ಸವದ ಭಾಗ್ಯವನ್ನು ಧಾರೆಯೆರೆಯುತ್ತಿದ್ದರು. ಅದು ವೈಭವವೆಂದು ವೈಶಿಷ್ಟ್ಯವೆಂದು ಅವರು ಭಾವಿಸಲಿಲ್ಲ. ಭ್ರಮಿಸಲಿಲ್ಲ. ಜನತಾರೂಪಿ ಜನಾರ್ದನನ ಸೇವೆಗೆ ಮರಸ್ಸು ಮಾಡಿದರು. ಮೈದುಡಿಸಿದರು. ಹಗಲಿರುಳೆನ್ನದೆ ನಾಡ ಸುತ್ತಿದರು; ಕಡಸುತ್ತಿದರು. ನಿಂತಲ್ಲಿಯ ಧಾರ್ಮಿಕ ಜಾಗ್ರತಿ ಮಾಡಿದರು. ಕುಂತಲ್ಲಿಯೆ ದೇವ ಚಿಂತನೆಗೈದರು. ಆತ್ಮಪೂಜೆಯನೆಸಗಿದರು. ಅವರಲ್ಲಿ ಅದ್ಭುತವಾದ ಜನಾಕರ್ಷಣ ಶಕ್ತಿಯಿತ್ತು, ಅನುಪಮವಾದ ಬೋಧನಾಸಕ್ತಿಯಿತ್ತು. ಅನುವಾದ ಅಲ್ಪಕಾಲದಲ್ಲಿಯೆ ಭಕ್ತಿಪ್ರ ಪತ್ತಿಯಿಂದ ಶಿವಪೂಜೆ ಮಾಡುತ್ತಿದ್ದರು. ಭಾವಪ್ರಪೂರ್ತಿಯಿಂದ ಶಿವಾನುಭವ ಜರುಗಿಸುತ್ತಿದ್ದರು. ಸಾಮಾನ್ಯ ಜನರು ದರ್ಶನಕ್ಕೆ ಬಂದರೆ ಅವರ ಉನ್ನತಿಯ ಉಪದೇಶ. ಸಮಾಜ ಪ್ರಮುಖರು ಬಂದರೆ ಅವರೊಡನೆ ಸಮಾಜೋನ್ನತಿಯ ಸಮಾಲೋಚನೆ. ತಮ್ಮ ಬಳಿಯಲ್ಲಿರುವ ಶಿಷ್ಯರು ಬಂದರೆ ಪಾಠಪ್ರವಚನ, ಯಾರೂ ಇಲ್ಲದಿದ್ದರೆ ಆತ್ಮಚಿಂತನ. ಹೀಗೆ ಯಾವಜ್ಜೀವನವು ಕ್ಷಣಕಾಲ ವೃಥಾಕಳೆಯದೆ ಸಮಾಜ ಸಂಸ್ಕೃತಿ ಆತ್ಮಕಲ್ಯಾಣ ಸಾಧನೆಯಲ್ಲಿಯ ನಿರತರಾಗಿದ್ದರು. ಪರೋಪಕಾರಕ್ಕಾಗಿ ದೇಹವನ್ನು ದಣಿಸಿದರು. ಪರಮಾತ್ಮಧ್ಯಾನ ಧಾರಣ ಸಮಾಧಿಗಳಲ್ಲಿ ಮನವನ್ನು ತಣಿಸಿದರು. ಶ್ರೀಗಳು ಲೋಕಚರಿತರು; ಲೋಕೋತ್ತರ ಚರಿತರು.

ಸಂಸಾರಿಯಾಗಲಿ ಸನ್ಯಾಸಿಯಾಗಲಿ ಸ್ವಾರ್ಥವಿಲ್ಲದೆ ಸಮಾಜ ಸಂಸ್ಕೃತಿಗಳ ಸೇವೆ ಮಾಡಬೇಕೆಂಬುದೆ ಅವರ ಮನೀಷೆ;, ಅದನ್ನೇ ಅವರು ಬೋಧಿಸುತ್ತಿದ್ದರು, ಸಾಧಿಸುತ್ತಿದ್ದರು. ಬೋಧನೆಗೆ ಸಾಧನೆಗೆ ಸಿದ್ಧರಾಗಿರುವವರನ್ನು ಅವರು ಮನಸಾರೆ ಮನ್ನಿಸುತ್ತಿದ್ದರು. ಹೃದಯಾರೆ ಹರಸುತ್ತಿದ್ದರು. ಆದರೆ ಅಂಥವರ ಸಂಖ್ಯೆ ತೀರ ಕಮ್ಮಿಯಿತ್ತು. ಸಮಾಜದ ವಿಸ್ತಾರ ದೃಷ್ಟಿಯಲ್ಲಿ ಅಲ್ಲಲ್ಲಿ ಒಬ್ಬಿಬ್ಬರಿರುವ ಸಣ್ಣ ಸಂಖ್ಯೆ ಯಾತಕ್ಕು ನಿಲುಕದಾಗಿತ್ತು. ಸಮಾಜ ಸಂಸ್ಕೃತಿ ಸೇವಕರ ಗುಂಪಿನ ಅವಶ್ಯಕತೆ ಸ್ವಾಮಿಗಳವರ ಮನಸ್ಸಿನಲ್ಲಿ ಮುಮ್ಮೂಡಿನಿಂತಿತು. ಸ್ವಾಮಿಗಳವರ   ಪ್ರವೃತ್ತಿಧರ್ಮವಿವೇಚನೆಯ ಮೇಲೆ ವಿಶೇಷವಾಗಿತ್ತು. ಈ ಅವರ ಬಯಕೆ ಈಚೆಗೆ ವೀರಶೈವ ಮಹಾಸಭೆಯಲ್ಲಿ ನೆರವೇರಲು ಆತಂಕವಾಯಿತು. ಆಂಗ್ಲ ವಿದ್ಯೆಯ ಪದವೀಧರರು ಹೆಚ್ಚಾಗಿ ಸಭೆಯಲ್ಲಿ ಸೇರಿ ಧಾರ್ಮಿಕ ವಿಚಾರಕ್ಕೆ ಕ್ರಮವಾಗಿ ಕೊಡಲಿ ಪೆಟ್ಟು ಬಿದ್ದಿತು. ಅದರಿಂದಾಗಿ ಸ್ವಾಮಿಗಳವರು ಕ್ರಿ.ಶ. ೧೯೦೯ರಲ್ಲಿ ಧರ್ಮೋತ್ತೇಜಕ ನಾಮಾಂಕಿತ ಸಭೆಯೊಂದನ್ನು ಬಂಕಾಪುರದಲ್ಲಿ ಹುಬ್ಬಳ್ಳಿ ಶ್ರೀ ಜಗದ್ಗುರು ಶ್ರೀ ಗಂಗಾಧರ ಸ್ವಾಮಿಗಳವರು ಮೂರುಸಾವಿರಮಠ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಿದರು. ಅದನ್ನು ಮೂರುನಾಲ್ಕು ವರುಷ ಪ್ರತ್ಯೇಕವಾಗಿ ನಡೆಯಿಸಿ ಧರ್ಮ ಪ್ರಸಾರ ಮಾಡಿದರು. ಅದರಿಂದಲು ಅವರ ಸಮಾಜ ಸಂಸ್ಕೃತಿಯ ಉತ್ಕೃಮಣ ಸೇವೆ ಸಾಕಷ್ಟು ಸಾಗಲಿಲ್ಲ. ಆ ದಿಸೆಯಲ್ಲಿಯೂ ಅವರಿಗೆ ಸಮಾಜ ಸೇವಕರ ಬೋಧಕರ ಅಭಾವ ಹೆಜ್ಜೆ ಹೆಜ್ಜೆಗೂ ತೋರಿತು; ಹೆಚ್ಚು ಹೆಚ್ಚಾಗಿ ನಿರಾಶೆ ಬೀರಿತು.

ಸಮಾಜದ ಪ್ರತಿ ವ್ಯಕ್ತಿಯನ್ನು ಪ್ರತಿಕಲೆಯನ್ನು ಸುಧಾರಿಸುವ ಕಡೆಯಿಲ್ಲದ ಕುತೂಹಲ ಸ್ವಾಮಿಗಳವರದು. ಸಮಾಜ ಸಂಸ್ಕೃತಿಗಳ ಸೇವೆಯೊಂದಿದ್ದರೆ ಅವರಿಗೆ ಮೋಕ್ಷ ಬಂದರು ಅದು ಬೇಕಿರಲಿಲ್ಲ. ಆದ್ದರಿಂದ ಸಮಾಜದ ವಿಶಿಷ್ಟವರ್ಗವನ್ನು ಸುಧಾರಿಸುವ ಒಂದು ಸಂಸ್ಥೆಯನ್ನು ನಿರ್ಮಿಸುವ ಬಯಕೆ ಮೂಡಿ ಬಂದಿತು. ಗುರುವಿನ ಆದೇಶವು ಅದಾಗಿತ್ತು.

Related Posts