ಪೂಜ್ಯ ಲಿಂ. ಶಿವಬಸವ ಮಹಾಸ್ವಾಮಿಗಳು ನಾಗನೂರ – ಬೆಳಗಾವಿ.
ಮನುಷ್ಯರೊಳ್ ನಿರುಪಮ ಲಿಂಗ ಶಿವಯೋಗಿ
ಮಹಾ ಹಿರಿಯಂ ಗುರುಶಂಕರೇಶ್ವರಾ
ಶಂಕರದೇವಕವಿಯ ಈ ಉಕ್ತಿ ಜೀವಭಾವವಳಿದು ಶಿವಭಾವವಾಗಿ ಪರಿಣಮಿಸಿ ಲಿಂಗಭೋಗೋಪಭೋಗಿಯಾಗಿರುವ ಶಿವಯೋಗಿಯ ಮಹತಿಯನ್ನು ಸಾರಿ ಹೇಳುತ್ತದೆ. ಭಾರತೀಯ ಯೋಗಪರಂಪರೆಯಲ್ಲಿ ಶಿವಯೋಗಕ್ಕೆ ಅಗ್ರಪಟ್ಟ. ಇದು ಮಂತ್ರ, ಲಯ,. ಹಠ ಮತ್ತು ರಾಜಯೋಗಗಳಿಗಿಂತಲೂ ಅತ್ಯಂತ ಪ್ರಗತಿಪರ. ಸಂಸಾರಿಗಳಿಗೂ ಸುಲಭಸಾಧ್ಯ. ಈ ಅಪೂರ್ವ ಯೋಗವನ್ನು ಉಳಿಸಿ ಬೆಳಿಸಿಕೊಂಡು ಬಂದವರು ನಾಡಿನ ಹಲವಾರು ಶರಣರು ಹಾಗೂ ಶಿವಯೋಗಿಗಳು. ಶಿವಯೋಗ ಸಾಧನೆಗಾಗಿ ಶಿವಯೋಗಮಂದಿರವನ್ನು ಸ್ಥಾಪಿಸಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಅವರಲ್ಲಿ ಅಗ್ರಗಣ್ಯರು. ಶಿವಯೋಗವನ್ನಾಚರಿಸಿ ಶಿವಸ್ವರೂಪಿಗಳಾದವರು. ಶಿವಯೋಗದ ತುತ್ತತುದಿಯನ್ನೇರಿ ನಿಜಾನಂದಲೋಲರಾಗಿಯೂ ಸಮಾಜದತ್ತ ಲಕ್ಷ್ಯ ಪೂರೈಸಿ ಅದರ ಶ್ರೇಯೋಭಿವೃದ್ದಿಗೆ ನಿರಂತರ ಪರಿಶ್ರಮಿಸಿದ ಪುಣ್ಯಪುರುಷರು. ಇಂಥ ಮಹಾನ್ ಶಿವಯೋಗಿಯ ಆದರ್ಶ ಕ್ರಿಯಾಶೀಲತೆಯಲ್ಲಿ ಭಾಗವಹಿಸುತ್ತ ತಮ್ಮದೇ ಆದ ಸ್ವಂತ ವ್ಯಕ್ತಿತ್ವದಿಂದ ಬಾಳಿಬೆಳಗಿದ ವಿರಳ ಸ್ವಾಮಿಗಳಲ್ಲಿ ಹಾಲಕೆರೆಯ ಪೂಜ್ಯ ಶ್ರೀ ಅನ್ನದಾನ ಮಹಾಸ್ವಾಮಿಗಳವರೂ ಒಬ್ಬರು.
ಎತ್ತರದ ನಿಲವಿನ, ಭಸ್ಮಭರಿತ ನಗೆಮುಖದ, ಪ್ರಸನ್ನ ಹೃದಯದ ಪರಮ ಪೂಜ್ಯ ಅನ್ನದಾನಶಿವಯೋಗಿಗಳು ಪರಿಶುದ್ದಶೀಲದ ಘನವಿರಕ್ತರು. ಅವರ ಹಸ್ತ, ನೇತ್ರ, ವಾಕ್‌ಗಳೆಲ್ಲವೂ ಪರುಷಮಯ. ಅವರು ನಡೆದರೆ ಭೂಮಿ ಪಾವನ; ಸಹಜವಾಗಿ ನುಡಿದರೆ ಸರ್ವಜೀವಿಗಳ ದುಃಖನಿವಾರಣ. ಕಣ್ತೆರೆದು ನೋಡಿದರೆ ಜನಮನ ಬೆಳಗುವ ಶಿವಬೆಳಕೇ ಹೊರಸೂಸಿದಂತಾಗುತ್ತಿತ್ತು. ಪೂಜೆ, ಜಪ-ತಪಾದಿಗಳಲ್ಲಿ ಅವರಿಗೆ ಅಚಲವಾದ ನಿಷ್ಠೆ. ಅನವರತ ಸಾಧನೆಯಿಂದ ದೇವಮಾನವರಾಗಿ ನಾಡವರನ್ನುದ್ಧರಿಸಿದ ಅವರು ಆಚಾರ-ವಿಚಾರಗಳ ಸಮನ್ವಯಮೂರ್ತಿ. ಶಿವಯೋಗ ಸಾಧನೆಯಿಂದ ಸಿದ್ಧಿಸಿದ ಆತ್ಮಶಕ್ತಿಯೇ ಅವರಲ್ಲಿತ್ತು, ತಮ್ಮ ಜೀವನದುದ್ದಕ್ಕೂ ಆತ್ಮವಿಕಾಸದ ಜೊತೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಮುಂದುವರೆಸಿ ಲೋಕಕಲ್ಯಾಣಗೈದವರು. ಸಮಸ್ತ ಮಾನವ ಜನಾಂಗದ ತಾತ್ವಿಕ ಮತ್ತು ನೈತಿಕಮಟ್ಟವನ್ನು ಮೇಲೆತ್ತಲು ಜೀವವನ್ನೇ ಸವೆಸಿದ ಅಪೂರ್ವ ತ್ಯಾಗಿಗಳು. ಅವರ ದಿವ್ಯ ಸಂರ್ಪಕದಿಂದ ತಮ್ಮ ಬಾಳು ಬೆಳಗಿಸಿಕೊಂಡವರು ಸಾವಿರಾರು ಜನ. ಆದ್ಯಾತ್ಮೀಕ ರಂಗದಲ್ಲಿ ವ್ಯಕ್ತಿಯೊಬ್ಬರ ಸಾಧನೆ ಎಂತಹ ಲೋಕಜಾಗೃತಿಯನ್ನು ಸಾಧಿಸಬಹುದೆಂದುದಕ್ಕೆ ಪರಮಪೂಜ್ಯರ ಜೀವನವೇ ಒಂದು ನಿದರ್ಶನ. ಅಹಂಕಾರದ ಲವಲೇಶವೂ ಇಲ್ಲದ ಅವರ ಸರಳ ನಡೆ, ಸರಳ ನುಡಿ, ನಿರಾಡಂಬರ ಜೀವನ ನಿಜಕ್ಕೂ ಅನುಕರಣೀಯವಾದುದು.
ಕಾರಣಿಕ ದಿವ್ಯಪುರುಷ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳೆಂದರೆ ಪೂಜ್ಯ ಶ್ರೀ ಅನ್ನದಾನಸ್ವಾಮಿಗಳವರಿಗೆ ಎಲ್ಲಿಲ್ಲದ ಭಕ್ತಿ. ಅವರ ಪಡಿನೆಳಲಾಗಿ ಲಿಂಗಾನು ಸಂಧಾನ ಸಾಧಕರಾಗಿ ಜೀವನ ಸಾಗಿಸುತ್ತಿದ್ದರು. ಒಮ್ಮೆ ಶ್ರೀ ಕುಮಾರಶಿವಯೋಗಿಗಳು ಪ್ರೀತಿಯಿಂದ ಶ್ರೀಗಳ ಮೈದಡವಿ ತೆಲೆಯಮೇಲೆ ಹಸ್ತವನ್ನಿಟ್ಟು ಆತ್ಮೀಯವಾಗಿ ಆಶೀರ್ವದಿಸುತ್ತ ಮೂರು ವರ್ಷಗಳವರೆಗೆ ಅನುಷ್ಠಾನಗೈಯಲು ಅಪ್ಪಣೆ ಕೊಡಿಸಿದರು. ಅನ್ನದಾನಶ್ರೀಗಳು ಅವರ ಕೃಪಾಶೀರ್ವಾದವನ್ನೇ ಶಿರೋಧಾರ್ಯವಾಗಿಸಿ ಕೊಂಡು ನರೇಗಲ್ಲದಲ್ಲಿ ಮೂರು ವರ್ಷಗಳವರೆಗೆ ಕಠಿಣ ತಪವನ್ನಾಚರಿಸಿದರು. ಪೂಜ್ಯರ ಜೊತೆಗಿರಲು ಹಾನಗಲ್ಲ ಶ್ರೀಗಳು ನಮ್ಮನ್ನೇ ಕಳುಹಿಸಿದ್ದರು. ಮತ್ತು ತಾವು ಸ್ವತಃ ಆಗಾಗ್ಗೆ ನರೇಗಲ್ಲಿಗೆ ದಯಮಾಡಿಸಿ ಅನುಷ್ಠಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಹಾಗೆಯೇ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಅನ್ನದಾನ ಶ್ರೀಗಳು ಅವರ ಅಪ್ಪಣೆಯನ್ನು ಎಳ್ಳಷ್ಟೂ ಅತಿಕ್ರಮಿಸುವವರಲ್ಲ. ಅವರು ವಿಧಿಸಿದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಅವರ ಆಜ್ಞೆಯನ್ನು ಮೈಮನಗಳಲ್ಲಿ ತುಂಬಿಕೊಂಡು ಜೀವನ ಸಾಧನೆ ಮಾಡುತ್ತಿದ್ದ ಶ್ರೀಗಳ ಶ್ರದ್ಧೆ ಅಪೂರ್ವವಾದುದು. ಮನೋನಿಗ್ರಹ, ಸಂಯಮನ ಶಕ್ತಿಗಳಿಂದೊಡಗೂಡಿದ ಪೂಜ್ಯ ಅನ್ನದಾನಶ್ರೀಗಳ ತಪೋಜೀವನ ಅದ್ಭುತವಾಗಿತ್ತು. ಇವರ ಶುದ್ಧ ಮನಸ್ಕತೆ, ಸತ್‌ಸಂಕಲ್ಪ, ಶ್ರಧ್ಧಾನ್ವಿತ ಜೀವನವನ್ನು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರು ಬಹುವಾಗಿ ಮೆಚ್ಚಿ ಕೊಂಡಿದ್ದರು. ಹಾನಗಲ್ಲ ಶ್ರೀಗಳ ಮೆಚ್ಚುಗೆಯನ್ನು ಪಡೆಯುವುದು ಎಲ್ಲರಿಗೂ ಸಾಧ್ಯವಿರಲಿಲ್ಲ ಎಂಬುದು ಅವರ ಸಮಕಾಲೀನರಿಗೆಲ್ಲಾ ಗೊತ್ತು ಅವರ ಪ್ರೇರಣೆ ಯಂತೆಯೇ ಈಗಿರುವ ಹಾಲಕೆರೆಯ ಮಠವನ್ನು ಪೂಜ್ಯ ಶ್ರೀಗಳು ಕಟ್ಟಿಸಿ ಆಧ್ಯಾತ್ಮ ಕೇಂದ್ರವನ್ನಾಗಿಸಿದರು. ಪೂಜ್ಯರ ಪವಿತ್ರ ಪಾದಸ್ಪರ್ಶದಿಂದ ಹಾಳಕೇರಿಯೊಂದು ಹಾಲಕರೆಯಾಗಿ ಪರಿವರ್ತಿತವಾದುದು ಅದ್ಭುತ ಪವಾಡವೇ ಸರಿ. ಸಾರ್ವಜನಿಕರ ಪ್ರೀತಿ-ವಿಶ್ವಾಸ, ಸಹಾಯ- ಸಹಕಾರಗಳನ್ನು ಪಡೆದು ಉಚಿತ ಪ್ರಸಾದನಿಲಯ, ಶಾಲೆ – ಕಾಲೇಜುಗಳನ್ನು ಸ್ಥಾಪಿಸಿ ಶೈಕ್ಷಣಿಕ ರಂಗದಲ್ಲಿ ಅಪೂರ್ವ ಸೇವೆ ಸಲ್ಲಿಸಿದರು; ಸಾವಿರಾರು ಬಡ ಮಕ್ಕಳಿಗೆ ತಾಯಿ ತಂದೆಯಾದರು.
ಶಿವಯೋಗಮಂದಿರ ಆದರ್ಶ ಧರ್ಮಗುರುಗಳನ್ನು ಸಮಾಜ ಸೇವೆಗೆ ಸಿದ್ದಗೊಳಿಸುವ ವಿನೂತನ ಸಂಸ್ಥೆ. ಅದೊಂದು ಶುದ್ಧ ಆಧ್ಯಾತ್ಮಿಕ ಕೇಂದ್ರ. ಭಕ್ತಜನಕೋಟಿಗೆ ಹಾನಗಲ್ಲ ಶ್ರೀಗಳು ದಯಪಾಲಿಸಿದ ಅನುಪಮ ಕಾಣಿಕೆ. ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ತನ್ಮೂಲಕ ನಾಡಿಗೆ ಸತ್ಪಲಗಳನ್ನು ನೀಡುವಂತಾಗಬೇಕೆಂದು ಪೂಜ್ಯ ಶ್ರೀ ಅನ್ನದಾನಶ್ರೀಗಳವರು ಸದಾ ಚಿಂತಿಸುತ್ತಿದ್ದರು. ಹಾವೇರಿಯ ಪೂಜ್ಯರಾದ ಶ್ರೀ ಶಿವಬಸವಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಅನಾಥವಾಗಿದ್ದ ಶಿವಯೋಗಮಂದಿರಕ್ಕೆ ಶ್ರೀರಕ್ಷೆಯನ್ನೊದಗಿಸಿದರು. ಮಂದಿರದ ವಟುಸಾಧಕರಿಗೆ ತಾಯಿಯಾಗಿ ನಿಂತರು. ವಾತ್ಸಲ್ಯವನ್ನು ಧಾರೆಯೆರೆದರು. ಅವರಿಗೆ ನಡೆ-ನುಡಿಗಳನ್ನು ಕಲಿಸಿದರು. ಅವರವರ ಕರ್ತವ್ಯಗಳ ಬಗ್ಗೆ ನಿಷ್ಠುರವಾಗಿ ತಿಳಿಹೇಳಿ ಅವರ ವ್ಯಕ್ತಿತ್ವ ವಿಕಾಸಕ್ಕೆ ಅನುವು ಮಾಡಿಕೊಡುತ್ತಿದ್ದರು. ಅಂತಃ ಕರುಣದಿಂದ ಬಂದ ಅವರ ಮಾತುಗಳು ವಟುಸಾಧಕರ ಹೃದಯಕ್ಕೆ ಸ್ಪಂದಿಸುತ್ತಿದ್ದವು. ಮಂದಿರದ ಸಾಧಕರು ತಮ್ಮೆಲ್ಲ ದೌರ್ಬಲ್ಯಗಳನ್ನು ಕಳೆದುಕೊಂಡು ಶಕ್ತಿಸಂಪನ್ನರಾಗಿ ತೇಜೋವಂತರಾಗಿ ಹೊರಬರಬೇಕು; ತಪೋನಿಷ್ಠರೂ ಜ್ಞಾನಿಗಳೂ ಆಗಿರಬೇಕು; ಅವರು ಅಲಂಕರಿಸುವ ಗುರುಪೀಠಗಳು ಪರಿಶುದ್ಧವಾಗಿರಬೇಕು; ತಪೋಭೂಮಿಗಳಾಗಿರಬೇಕು ಎಂಬುದು ಶ್ರೀ ಅನ್ನವಾನ ಶ್ರೀಗಳ ಮನೀಷೆಯಾಗಿತ್ತು ನೈತಿಕ ಅದಃಪತನದಿಂದ, ಜಾತೀಯ ಭಾವನೆಗಳಿಂದ, ಬಡತನ ಅನಕ್ಷರತೆಯ ರೋಗರುಜಿನಗಳಿಂದ ಪರಿತಪಿಸುತ್ತಿರುವ ಇಂದಿನ ಸಮಾಜಕ್ಕೆ ಮಂದಿರದ ಸಾಧಕರು ಹೊಸ ಚೇತನ, ಹೊಸ ಆಯಾಮಗಳನ್ನುಕಲ್ಲಿಸಿಕೊಡಬಲ್ಲರೆಂದು ಅವರ ದೃಢವಾದ ನಂಬಿಕೆಯಾಗಿತ್ತು, ಹಸಿದ, ಅಜ್ಞಾನದಲ್ಲಿ ಬಳಲುತ್ತಿರುವ ಜನರ ಸೇವೆಗೆ ವಟು-ಸಾಧಕರನ್ನು ಸಿದ್ಧಗೊಳಿಸಲು ಅವರಲ್ಲಿ ವೀರಚೇತನವನ್ನು ತುಂಬಿದರು. ಅವರ ಹೃದಯ ಮನಸ್ಸುಗಳನ್ನು ಹದಗೊಳಿಸಿ ಅಲ್ಲಿ ಹೊಂಬೆಳಕಿನ ಹಣತೆಯನ್ನು ಹೊತ್ತಿಸಿದರು. ಪೂಜ್ಯ ಶ್ರೀಗಳ ಉನ್ನತ ದೃಷ್ಟಿ, ವಿಶಾಲ ಮನೋಭಾವನೆ, ಕಠೋರ ಬ್ರಹ್ಮಚರ್ಯ, ಪರಿಶುದ್ಧ ಶೀಲಗಳೆಲ್ಲವೂ ಮಂದಿರದ ಸಾಧಕರಿಗೆ ಮಾರ್ಗದರ್ಶೀಯಾಗಿದ್ದವು. ಹಾನಗಲ್ಲ ಶ್ರೀಗುರುಕುಮಾರನ ಕೃಪೆ ಅನ್ನದಾನ ಶ್ರೀಗಳ ಮೂಲಕ ಮಂದಿರದ ಸೇವೆಗಾಗಿ ಹರಿದುಬರುತ್ತಿರುವಂತೆ ನಮಗೆಲ್ಲಾ ಅನಿಸುತ್ತಿತ್ತು. ಶಿವಯೋಗಮಂದಿರದ ಆರ್ಥಿಕ ದುಸ್ಥಿತಿಯಲ್ಲಿದ್ದಾಗ ಶ್ರೀಗಳೆಂದೂ ಕುಗ್ಗಲಿಲ್ಲ. ಅವರ ಜೀವನೋತ್ಸಾಹ ಕಡಿಮೆಯಾಗಲಿಲ್ಲ. ಬದಲಾಗಿ ಅದರ ಅಭ್ಯುದಯಕ್ಕಾಗಿ ಹಗಲಿರುಳೂ ಶ್ರಮಿಸಿದರು.ಶಿವಯೋಗಮಂದಿರದ ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯವುಂಟಾಗಿ ವ್ಯಾಜ್ಯ ಕೋರ್ಟಿಗೆ ಹೋದಾಗ ಶ್ರೀಗಳು ಮೂರುವರ್ಷ ಅಲ್ಲಿಗೆ ಹೋಗಲೇಯಿಲ್ಲ. ವ್ಯಾಜ್ಯ ಮುಗಿದ ನಂತರ ಶ್ರಾವಣ ಮಾಸದಲ್ಲಿ ಶಿವಯೋಗಮಂದಿರಕ್ಕೆ ದಯಮಾಡಿಸಿ ಪ್ರತಿನಿತ್ಯ ಗಣಾರಾಧನೆಯನ್ನು ನೆರವೇರಿಸಿದರು. ಜೋಳ, ಗೋಧಿ ಅಕ್ಕಿ, ಮೆಣಸಿನಕಾಯಿ ಮೊದಲಾದವುಗಳನ್ನೆಲ್ಲಾ ಭಿಕ್ಷೆ ಮಾಡಿ ಮಂದಿರಕ್ಕೆ ಕಳುಹಿಸಿಕೊಡುತ್ತಿದ್ದರು. ಮಂದಿರದಲ್ಲಿ ಶಿವಯೋಗ ಸಾಧಕರ, ಸಾರ್ವಜನಿಕರ ಅನುಕೂಲಕ್ಕಾಗಿ ಹಲವಾರು ಕಟ್ಟಡಗಳನ್ನು ನಿರ್ಮಿಸಿದರು. ಇನ್ನೂ ಹಲವಾರು ಕಟ್ಟಡಗಳನ್ನು ಕಟ್ಟಿಸುವ ಇಚ್ಛೆ ಅವರಿಗಿತ್ತು. ಆದರೆ ಅವರ ಕರ್ತೃತ್ವ ಶಕ್ತಿಗೆ ತಕ್ಕ ಪರಿಸರ ಅಲ್ಲಿ ಸಿಕ್ಕದೇ ಹೋದುದು ಸಮಾಜದ ದುರ್ದವ್ಯವೆಂದೇ ಹೇಳಬೇಕು.
ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ; “ಆತ್ಮನೋ ಮೋಕ್ಷಾರ್ಥಂ ಜಗದ್ದಿ ತಾಯ ಚ’’ ಎಂಬಂತೆ ಸರ್ವವನ್ನು ಲೋಕಕಲ್ಯಾಣಕ್ಕಾಗಿ ತ್ಯಾಗ ಮಾಡಿದ; ಧರ್ಮಾಚರಣೆ, ಸಾದಾ ಜೀವನ, ಉದಾತ್ತವಿಚಾರ ಸರಣಿಗಳನ್ನು ಮೈಗೂಡಿಸಿಕೊಂಡಿದ್ದ ಪೂಜ್ಯ ಅನ್ನದಾನ ಶ್ರೀಗಳಂತಹ ಜಗತ್ ಪೂಜ್ಯರು ಲೋಕದಲ್ಲಿ ಹುಟ್ಟುವುದು ತುಂಬಾ ವಿರಳ. ಮರ್ತ್ಯಲೋಕದ ಮಹಂತರಾಗಿ, ವಿಷಯ ವಿರಾಗಿಯಾಗಿ ಮಾನವತೆಯ ಮೇಲ್ಮೆಯನ್ನು ಮೆರೆದ ಶ್ರೀಗಳು ತಮ್ಮ ಜೀವಾನಾಂತ್ಯದವರೆಗೂ ಶಿವಯೋಗ ಮಂದಿರದ ಅಭ್ಯುದಯವನ್ನೇ ಬಯಸಿದರು. ಇಂದು ಮಂದಿರದ ಕಲ್ಲು ಕಂಬ, ಗಿಡ-ಮರ-ಬಳ್ಳಿಗಳೆಲ್ಲ ಅನ್ನದಾನ ಶ್ರೀಗಳ ಪ್ರಾಮಾಣಿಕ ಸೇವೆಯನ್ನು ಮಂದಿರದ ಏಳ್ಗೆಗಾಗಿ ಅವರು ವಹಿಸಿದ ಶ್ರಮವನ್ನು ಸುರಿಸಿದ ಬೆವರನ್ನು ಪಟ್ಟ ಪಾಡನ್ನು ಸಹೃದಯರಲ್ಲಿ ತೋಡಿಕೊಳ್ಳುತ್ತಿವೆ. ಅವು ತಮ್ಮ ತಂದೆ ನಿಜವಾದ ಅನ್ನದಾನಿ ಯಾವಾಗ ಬಂದಾನೆಂದು ಮಾರ್ಗನಿರೀಕ್ಷಣೆಯಲ್ಲಿದ್ದಂತೆ ಸಹೃದಯರಿಗೆ ಭಾಸವಾಗದೇ ಇರದು.