-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯರಿಗೆ ನನ್ನ ನಮಸ್ಕಾರಗಳು.
ಈ ತಿಂಗಳು ವಿಶೇಷ ವಾದುದು. ಸಪ್ಟೆಂಬರ್ ೧೧ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ೧೫೪ ನೇಯ ಜಯಂತಿ ಮಹೋತ್ಸವ !. ಪೂಜ್ಯರು ಸ್ಥಾಪಿಸಿದ ಶ್ರೀ ಶಿವಯೋಗಮಂದಿರದ ಪರಿಸರದಲ್ಲಿ ಪೂಜ್ಯ ವಟುಗಳ ಬರಿಗಾಲಿನಲ್ಲಿ ನಡೆದುಹೋಗುವ ಚಿತ್ರವೊಂದು ಕೆಳಗಿನ ಸಾಲುಗಳನ್ನು ಬರೆಯಲು ಪ್ರೇರೆಪಿಸಿದವು.

ಪುಟ್ಟ ಪುಟ್ಟ ಹೆಜ್ಜೆಗಳು
ಶಿವ ನಡೆದ ದಾರಿ
ಯೋಗ ಪಡೆದ ಪರಿ
ಗುರು ನೀಡಿದ ಗುರಿ-
-ಯ ಕಡೆಗೆ
ಮನೆಯಿಲ್ಲ -ಮನವುಂಟು
ಮಠವಿಲ್ಲ- ಘಟ ವುಂಟು.
ಮಳೆಯುಂಟು-ಛತ್ರಿಗಳಿಲ್ಲ
ಛಳಿಯುಂಟು -ಕಂಬಳಿಗಳಿಲ್ಲ
ಕಣ್ಣರಿಯದಿದ್ದರೂ ಕರುಳರಿತ ಭಾವ……!!!
ಆ ಮಾರ್ಗ -ಪೂಜ್ಯರು ಸ್ವತಃ ಬದುಕಿದ ಮಾರ್ಗ , ಅಂತ್ಯ ಕಂಡಿದ್ದ ಸಮಾಜವನ್ನು ಹೊಡೆದೆಬ್ಬಿಸಿದ ಮಾರ್ಗ , ಅದು ತ್ಯಾಗ ಮತ್ತು ಸೇವೆ ಗಳ ಮಾರ್ಗ.
ಈ ವಿಶೇಷ ಸಂಚಿಕೆಗೆ ಸಂಗ್ರಹಿಸಿದ ಒಂದು ಲೇಖನ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಒಂದು ಮಹತ್ಕಾರ್ಯ ಇತಿಹಾಸದಮೇಲೆ ಬೆಳಕು ಚಲ್ಲುತ್ತದೆ. ಪೂಜ್ಯ ಶ್ರೀಕುಮಾರ ಶಿವಯೋಗಿಗಳನ್ನು ಅತ್ಯಂತ ಹತ್ತಿರದಿಂದ ನೋಡಿದ ಪೂಜ್ಯ ನವಲಗುಂದದ ಲಿಂ.ಬಸವಲಿಂಗ ಸ್ವಾಮಿಗಳು “ನುಡಿಲಿಂಗ” ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ
“ ಶ್ರೀಗಳವರು ಲಿಂಗಾಯತ ಸಮಾಜದ ಒಳಬೇನೆಯನ್ನರಿತು, ಅದರ ನಿವಾರಣೆಗೆ ಗುರು ಜ೦ಗಮರ ಸುಧಾರಣೆಯ ಜೀವನವೇ ಮುಖ್ಯವಾದದ್ದೆಂದು ಗ್ರಹಿಸಿದರು. ಕೇವಲ ಪುರುಷರಲ್ಲಿ ಧರ್ಮಜಾಗ್ರತೆಯಾದರೆ ಸಾಲದು, ಸ್ತ್ರೀ ವರ್ಗದಲ್ಲಿಯೂ ಕರ್ತವ್ಯಜ್ಞಾನದ ಉದಯವಾಗಲೆಂದು ಹಾರೈಸಿದರು, ಇಷ್ಟಲ್ಲದೆ, ಆಗಿನ ಕಾಲಕ್ಕೆ ಅಗತ್ಯವೆನಿಸಿಕೊಂಡ ಅಸ್ಪೃಶ್ಯರ ಶಿಕ್ಷಣದ ಕಡೆಗೆ ಅವರ ಲಕ್ಷ್ಯ ಹರಿದಿತ್ತು.
ಚಲವಾದಿಗಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸಿ, ಸರಿಯಾದ ಶಿಕ್ಷಣ ಕೊಟ್ಟರು; ಅವರಿಂದಲೂ ಸಮಾಜ ಸುಧಾರಣೆಯಾಗಲಿದೆಯೆಂದು ಮೇಲಿಂದ ಮೇಲೆ ಕೇಳುತ್ತಿದ್ದರು, ಪ್ರಯತ್ನವೇ ಅವರಿಗೆ ಸಹಜಗುಣವಾಗಿತ್ತು.
ಅಡಿಯ ಮಂದಿಗೆ ಸ್ವರ್ಗ | ಅಡಿಯ ಹಿಂದಿಡೆ ನರಕ
ಅಡಿಗಶ್ವಮೇಧಘಲವಕ್ಕು ಸ್ವಾಮಿ ಕಾರ್ಯಕ್ಕೆ
ದುಡಿಯಲೆ ಬೇಕು ಸರ್ವಜ್ಞ
ಈ ಪದ್ಯದ ಭಾವ ಅವರ ಜೀವನದ ಉಸಿರಾಗಿತ್ತು, ಪ್ರಯತ್ನದಲ್ಲಿ ಸೋತರೂ ಅವರಿಗೊಂದು ಹೆಮ್ಮೆ ಮಹತ್ಕಾರ್ಯಕ್ಕಾಗಿ, ಲೋಕಸೇವೆಗಾಗಿ ಸಮಸ್ತ ಜೀವಮಾನವನ್ನೇ ತೇದು, ತುದಿಯಲ್ಲಿ ಸಿರಿಗೊಬಗಿಲ್ಲದೆ ಒಣಗಿಹೋಗುವುದರಲ್ಲಿಯೂ ಒಂದು ಆನಂದವನ್ನು ಶ್ರೀಗಳವರು ಅನುಭವಿಸುತ್ತಿದ್ದರು, ಈ ರೀತಿಯಿಂದ ಬಹುಮುಖ ಪ್ರಯತ್ನ ಮಾಡಿ, ಲಿಂಗಾಯತ ಸಮಾಜದ ಎಳ್ಗೆಗಾಗಿ ದುಡಿದರು; ಸಮಾಜ ಬಂಧುಗಳಲ್ಲಿ ನವಜಾಗೃತಿಯನ್ನುಂಟು ಮಾಡಿದರು “
ಈ ಸಾಲುಗಳು ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಘನವ್ಯಕ್ತಿತ್ವ ವನ್ನು ಮತ್ತು ಸ್ವಾಭಿಮಾನವನ್ನು ಪ್ರತಿಬಿಂಭಿಸುತ್ತವೆ.
ಈ ವಿಶೇಷಾಂಕದ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಅಪೂರ್ವ ಲೇಖನಗಳ ವಿವರ
- ಕಾವ್ಯ :”ಶಂಕರ ಕಾಯೊ ಸದಾ ಕಿಂಕರನು | “ ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೫ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
ವಿಶೇಷ ಲೇಖನಗಳು:
- ಜನಮಾನ್ಯ ಗುರುದೇವ: ಪೂಜ್ಯ ಶ್ರೀ ಲಿಂ. ಡಾ. ಶಿವಬಸವ ಸ್ವಾಮಿಗಳು,ರುದ್ರಾಕ್ಷಿಮಠ ನಾಗನೂರ
- ಹಾನಗಲ್ಲ ಶ್ರೀಗಳವರ ವ್ಯಕ್ತಿತ್ವ : ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ
- ದಾಸೋಹ ಮೂರ್ತಿ ಶ್ರೀ ಕುಮಾರ ಶಿವಯೋಗಿ : ಲೇಖಕರು :ಪೂಜ್ಯ ವಿಜಯಪ್ರಭು ದೇವರು ಬೂದಗುಂಪ
- ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು. ಲಿಂ. ಡಾ , ಫ . ಗು . ಹಳಕಟ್ಟಿ : ಬಿ.ಎ.ಎಲ್.ಎಲ್.ಬಿ ; ಡಿ.ಲಿಟ್ . ಸೌಜನ್ಯ ಶಿವಾನುಭವ ಮಾಸಪತ್ರಿಕೆ ಸಂಪುಟ ೪ ಸಂಚಿಕೆ ೧೧ ಫೆಬ್ರುವರಿ ೧೯೩೦
ಸಂಗ್ರಹ ಸಹಕಾರ: ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,
ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
- ಕ್ರಾಂತಿಕಾರಿ ಶ್ರೀ ಕುಮಾರಯೋಗಿ : ಲೇಖಕರು : ಆಸ್ಥಾನ ವಿದ್ವಾನ್, ಪಂಡಿತರತ್ನ ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳು
- ದಾರ್ಶನಿಕ ಕಂಡ ನಾಡಿನಲ್ಲಿ : ಡಾ. ಹಿರೇಮಲ್ಲೂರ ಈಶ್ವರನ್
- ವಿರಾಗವಿಭು ಹಾನಗಲ್ಲ ಕುಮಾರ ಸ್ವಾಮಿಗಳು : ಡಾ. ಸಿದ್ಧಯ್ಯ ಪುರಾಣಿಕ
- ಕಾರಣಪುರುಷ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು : ಲೇಖಕರು : ಶ್ರೀ ಡಾ. ಜಿ.ವೆಂಕಟೇಶ ಮಲ್ಲೇಪುರಂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು
- ಕ್ರಾಂತದರ್ಶಿ ಕುಮಾರಯೋಗಿ : ಡಾ.ಜಿ.ಕೆ.ಹಿರೇಮಠ.
- ಕವನ: ಸದ್ಧರ್ಮದ ಮಾಣಿಕ್ಯ, ಕುಮಾರೇಶ : ಶ್ರೀ ರೇವಣಸಿದ್ದಯ್ಯ ಹಿರೇಮಠ.ಆಕಾಶವಾಣಿ ಕಲಾವಿದರು ಚಿಂಚೋಳಿ
ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರೆ ಮತ್ತು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ