ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )
ಅಗಸ್ಟ ೨೦೨೧ ರ ಸಂಚಿಕೆ
೪. ಗುರು ಕೃಪೆಯ ಅವಶ್ಯಕತೆ
ಘಂಟೆಯನು ಪಿಡಿದೋರ್ವ | ಟೆಂಟೆಣಿಸಲು ನಾದ
ಮುಂಟಲ್ಲದುಳಿದು ತಾನಾಗಿಯೇ ನುಡಿಯುವ
ದುಂಟೆ ಶ್ರೀ ಗುರುವೆ ಕೃಪೆಯಾಗು || ೧೧ ||
ಗುರುಮಹತ್ವವನ್ನು ಗುರುಪಾದಪದ್ಮ ಸನ್ನಿಧಿಯ ಮಹಿಮೆಯನ್ನು ಅರಿತ ಮೇಲೆ, ಗುರುಕೃಪೆಯ ಅವಶ್ಯಕತೆಯು ಸ್ಪಷ್ಟವಾಗುತ್ತದೆ. ಜೀವನು ಸ್ವತಂತ್ರನಲ್ಲ.ಒಂದಿಲ್ಲೊಂದು ರೀತಿಯ ಅಪ್ಪಣೆಯನ್ನು ಪಾಲಿಸಲೇ ಬೇಕಾಗುವದು. ಗೃಹಸ್ಥನಾದವನು ಗುರು-ಹಿರಿಯರ ಮಾತನ್ನು ಕೇಳಬೇಕು. ಹೆಂಡತಿಯಾದವಳು ಪತಿಯಿಚ್ಛೆಯಂತೆ ನಡೆಯಬೇಕು. ಪುತ್ರನಾದವನು ಮಾತಾ-ಪಿತೃಗಳ ಅನುಜ್ಞೆಯನ್ನು ಪಾಲಿಸಬೇಕು. ‘ತೇನ ವಿನಾ ತೃಣಮಪಿ ನ ಚಲತಿ” ಪರಮಾತ್ಮನ ಅಪ್ಪಣೆಯಿಲ್ಲದೆ ಒಂದು ಹುಲ್ಲು ಕಡ್ಡಿಯಾದರೂ ಅಲುಗಾಡದೆಂಬ ಉಪನಿಷದ್ವಾಕ್ಯವು ಮಹತ್ವಪೂರ್ಣವಾಗಿದೆ. ಯಾವುದಕ್ಕಾದರೂ ಪ್ರೇರಣೆ ಅವಶ್ಯಬೇಕು.
ದೇವರ ದರ್ಶನಕ್ಕಾಗಿ ಬಂದ ಭಕ್ತನು ಘಂಟೆಯನ್ನು ಬಾರಿಸುತ್ತಿರಲು ಅದು ನಾದಗೈಯುತ್ತಿದೆ. ಘಂಟೆಯನ್ನು ಟೆಂಟೆಣಿಸದೆ ಇದ್ದರೆ ನಾದ ಹೊರ ಹೊಮ್ಮದು. ತಾನಾಗಿ ಅದು ಎಂದೂ ನುಡಿಯುವದಿಲ್ಲ. ಘಂಟೆಗೊಬ್ಬ ಪ್ರೇರಕ ಬೇಕೇ ಬೇಕು.ಪ್ರೇರಕನಿಲ್ಲದೆ ಘಂಟೆ ಸಾರ್ಥಕವಾಗದು. ಅದರಂತೆ ಈ ದೇಹವೆಂಬುದೊಂದು ಘಂಟೆ. ಇದರಲ್ಲಿ ನಾದವುಂಟಾದರೂ ಸ್ವತಃ ನುಡಿಯದು, ನುಡಿಸುವ ಕರ್ತನು ಬೇಕು.ಅವನೇ ಸದ್ಗುರು. ಗುರುನಾಥನು ಸಂಸ್ಕಾರಮಾಡಿ ಕರುಣೆಯಿಂದ ಮಂತ್ರೋಪದೇಶ ಮಾಡಿದಲ್ಲದೆ ಪ್ರಣವನಾದವು ಹೊರಹೊಮ್ಮದು. ಗುರೂಪದೇಶ ಮಾಡಿದ ಮಂತ್ರವು ಜಪಕ್ಕೆ ಯೋಗ್ಯವಾಗುವದು. ಅಂದಮೇಲೆ ಗುರುಕೃಪೆ ಅವಶ್ಯವಾಗಿಬೇಕು.
ದೇವಾಲಯದೊಳಗಿನ ಘಂಟೆಯನ್ನು ದೇವರು ನುಡಿಸಲಾರ. ನುಡಿಸಿದರೆ ಮಾತ್ರ ನಾದವನ್ನು ಕೇಳಬಲ್ಲ, ಹಾಗೇ ಶ್ರೀ ಗುರುವೆ ! ನೀನು ಶರಣಕರ್ತನು. ನನ್ನ ದೇಹ ಘಂಟೆಯನ್ನು ನುಡಿಯುವಂತೆ ಮಾಡು. ಯಾಕೆಂದರೆ ಅದು ತಾನಾಗಿಯೇ ನುಡಿಯ ಲಾರದು. ನುಡಿಸುವದು ನಿನ್ನ ಧರ್ಮ. ನೀನುಡಿಸಿದಂತೆ ನುಡಿಯುವದು ನನ್ನ ಧರ್ಮ,ಈ ವಿಚಾರವನ್ನೇ ಇನ್ನೂ ನಾಲ್ಕು ನುಡಿಗಳಿಂದ ವಿಸ್ತಾರಗೊಳಿಸಿದ್ದಾನೆ. ಸಮಂಜಸವಾದ ಉದಾಹರಣೆಗಳಿಂದ ತನ್ನ ವಾದವನ್ನು ಸಮರ್ಥನಗೊಳಿಸುತ್ತಾನೆ.
ವೀಣಾನೂತನ ಶಬ್ದ | ಪಾಣಿಯಿಂದೊಗೆವಂತೆ
ಜಾಣ ಶ್ರೀ ಗುರುವೆ ನೀಂ ನುಡಿಸಿದಂತೆ ನಾಂ
ಮಾಣದಲೆ ನುಡಿವೆ ಕೃಪೆಯಾಗು || ೧೨ ||
ಸಜ್ಜುಗೊಳಿಸಿದ ವೀಣೆಯನ್ನು ಬೆರಳಿನಿಂದ ಮಿಡಿದರೆ ತಂತಿಯ ಇಂಚರ ಇಂಪುಗೊಡುವದು. ವೀಣೆಯನ್ನು ನುಡಿಸಲು ಎಲ್ಲರಿಗೂ ಬಾರದು. ಜಾಣನು ಮಾತ್ರ ವೀಣೆಯನ್ನು ತಕ್ಕಂತೆ ನಿನದಿಸಬಲ್ಲ. ವೀಣೆಯು ಸ್ವಂತವಾಗಿ ನುಡಿಯುವದಿಲ್ಲ.ವೀಣಾವಾದಕನಿಂದಲೇ ವೀಣೆಯ ಯೋಗ್ಯತೆ ವ್ಯಕ್ತವಾಗುವದು. ಕಾಯವೆಂಬುದೊಂದು ವೀಣೆ. ಇದು ಜೀವಂತ ತಂಬೂರಿ. ಇದನ್ನು ಶೃತಿ ಗೊಳಿಸಬಲ್ಲ ಜಾಣನು ಗುರುದೇವನೇ, ಸದ್ಗುರುನಾಥನು ಕೆಡುವ ಕಾಯವನ್ನು ಸಂಸ್ಕಾರದಿಂದ ಕಾಯಕಲ್ಪ ಮಾಡಬಲ್ಲನು, ನಾದವನ್ನು ಹೊರಡಿಸಬಲ್ಲನು. ಶರಣಕವಿಯು ಕುಪಿತನಾದ ಗುರುನಾಥನನ್ನು ‘ಜಾಣಶ್ರೀಗುರುವೆ’ಯೆಂದು ನುಡಿಸಿ ಪ್ರಸನ್ನಗೊಳಿಸಲು ಪ್ರಯತ್ನಿಸಿದ್ದು ಧ್ವನಿತವಾಗುತ್ತದೆ. ಹೇ ಗುರುವೆ ! ನೀನು ಸಮರ್ಥನು ಮತ್ತು ಜಾಣನು. ನಾನು ತಪ್ಪಿರಬಹುದು. ಇನ್ನು ಮುಂದೆ ನೀನು ನುಡಿಸಿದಂತೆ ನಾನು ತಪ್ಪದಲೆ ನುಡಿಯುವೆನೆಂದು ಕೃಪೆ ಕೇಳಿದ್ದಾನೆ. ಕಾಯವನ್ನು ದಂಡಿಗೆಯನ್ನಾಗಿಸಿ ನರಗಳನ್ನು ತಂತಿಯನ್ನು ಮಾಡಿ ಓಂಕಾರ ನಾದವನ್ನು ಝೇಂಕರಿಸುವಂತೆ ಪ್ರಾರ್ಥಿಸಿದ್ದಾನೆ.
ಅಣ್ಣ ಬಸವಣ್ಣನವರು ತಮ್ಮ ವಚನದಲ್ಲಿ –
ಎನ್ನ ಕಾಯವ ದಂಡಿಗೆಯ ಮಾಡಯ್ಯಾ !
ಎನ್ನ ಶಿರವ ಸೋರೆಯ ಮಾಡಯ್ಯಾ |
ಎನ್ನ ನರವ ತಂತಿಯ ಮಾಡಯ್ಯ
ಎನ್ನ ಬೆರಳ ಕಡ್ಡಿಯ ಮಾಡಯ್ಯಾ
ಬತ್ತೀಸ ರಾಗವ ಹಾಡಯ್ಯಾ
ಉರದಲೊತ್ತಿಬಾರಿಸು ಕೂಡಲ ಸಂಗಮದೇವಾ (೪೯೮)
ಎಂದು ಅನನ್ಯವಾಗಿ ಬೇಡಿಕೊಂಡಿದ್ದಾರೆ. ಭಕ್ತಶಿರೋಮಣಿ ರಾವಣನು ಈ ರೀತಿ ಮಾಡಿ ಪರಮಾತ್ಮನ ಕೃಪೆ ಪಡೆದು ಆತ್ಮಲಿಂಗವನ್ನು ಪಡೆದ ವೃತ್ತಾಂತ ಪುರಾಣ ಗಳಿಂದ ವೇದ್ಯವಾಗುತ್ತದೆ.
ಗುಡಿಮಾತಿಗೊಮ್ಮೆ ಮಾ | ರ್ನುಡಿಯ ತಾ ಕೊಡುವಂತೆ
ಒಡೆಯ ನೀ ಹೊಕ್ಕು ನುಡಿಗೊಟ್ಟ ಪರಿಯೊಳಾಂ
ನುಡಿವೆನೈ ಗುರುವೆ ಕೃಪೆಯಾಗು || ೧೩ ||
ಗುಡಿ-ಗುಂಡಾರಗಳು ಬಂದ ಭಕ್ತರ ಮಾತು ಮಾತಿಗೊಮ್ಮೆ ಮರುಧ್ವನಿಯನ್ನು ಮಾಡುತ್ತವೆ. ಮಾತನಾಡದಿದ್ದರೆ ಪ್ರತಿಧ್ವನಿ ಕೇಳಿಸಲಾರದು. ಗುಡಿಗೆ ಯಾರೂ ಬಾರದಿದ್ದಾಗ ದೇವಮಂದಿರವು ಶಾಂತವಾಗಿರುತ್ತದೆ. ಸಾಮಾನ್ಯವಾಗಿ ದೇವಮಂದಿರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಗಳು ಪ್ರತಿಧ್ವನಿಸುವಂತೆ; ಮಣ್ಣಿನ ಮನೆಗಳಾಗಲಿ, ಗುಡಿಸಲಗಳಾಗಲಿ, ಮರುಧ್ವನಿ ಯನ್ನು ಕೊಡಲಾರವು. ಪ್ರತಿಧ್ವನಿಸುವದಕ್ಕೂ ಯೋಗ್ಯತೆಬೇಕು.
ದೇಹ ದೇಗುಲವಾಗಬೇಕು. ದೇಗುಲದಲ್ಲಿ ದೇವನ ಪ್ರತಿಷ್ಠೆಯಾಗಬೇಕು. ಅಲ್ಲಿ ಮಾರ್ನುಡಿ ಕೇಳಬರುತ್ತದೆ. ದೇಹವು ದೇಗುಲವಾಗದಿದ್ದರೆ ಮಾರ್ನುಡಿಗೆ ಅವಕಾಶವಿಲ್ಲ.ಗುಡಿಯಲ್ಲಿ ಒಡೆಯನ ವಾಸವಿರದಿದ್ದರೆ ಮಾರ್ನುಡಿಯ ಮಹತ್ವ ವೆನಿಸಲಾರದು.ಹೊರಗಿನ ಗುಡಿ ನಿರ್ಜಿವವಾದುದು, ಜಡವಾದುದು. ಆದರೂ ಅದು ಪ್ರತಿಧ್ವನಿ ಸುತ್ತದೆ. ಈ ದೇಹ ಗುಡಿ ಸಜೀವವಾದುದು, ಅದು ನಿನ್ನಿಂದ ಮಾತ್ರ ಸಾಧ್ಯ. ಗುರು ಕೃಪೆಯಿಂದಲೇ ದೇಹವು ಸಜೀವವಾಗುವದು. ಲಿಂಗಸಂಸ್ಕಾರದಿಂದ ದೇಹದ ಜಡತ್ವವು ದೂರವಾಗುವದು. ಅಂಗವೆನಿಸಿ ಲಿಂಗವಾಗಲು ಯೋಗ್ಯವಾಗುವದು. ಗುರುಕೃಪೆಯ ಬಲದಿಂದ ಬಂದ ಲಿಂಗವು ಗುರುರೂಪಲ್ಲದೆ ಬೇರಲ್ಲ. ಪುತ್ರನಲ್ಲಿ ಪಿತನ ಪ್ರತಿರೂಪವಿರುವಂತೆ ಲಿಂಗದಲ್ಲಿ ಗುರುವಿನ ಶಕ್ತಿ ಅಡಕವಾಗಿರುತ್ತದೆ. ಅಂಗಕ್ಕೂ ಮತ್ತು ಲಿಂಗಕ್ಕೂ ಒಡೆಯನು ಸದ್ಗುರುವು. ಓ ಗುರುವೆ ! ಒಡೆಯನೆ ನನ್ನ ದೇಹಗುಡಿಯಲ್ಲಿ ನೀನು ವಾಸವಾಗಿ ಶಿವಧ್ಯಾನವನ್ನು ಪ್ರತಿಧ್ವನಿಸುವಂತೆ ಮಾಡು. ನೀನು ನುಡಿದಂತೆ ನಾನು ಅವಶ್ಯವಾಗಿ ಪಡಿನುಡಿಯುವೆ; ಕೃಪೆಮಾಡು.
ಇಲ್ಲಿ ಶಿವಕವಿಯು ಶಿಷ್ಯನ ಅರ್ಹತೆಯನ್ನು ವ್ಯಕ್ತಮಾಡಿದ್ದಾನೆ. ನಾನು ನಿನ್ನ ಕೃಪೆಗೆ ಪಾತ್ರನಾಗಲು ಯೋಗ್ಯನಾಗಿದ್ದೇನೆಂಬುದನ್ನು ಅಭಿವ್ಯಂಜಿಸಿದ್ದಾನೆ. ನಿನ್ನ ಕೃಪಾ ಬಲದಿಂದ ನನ್ನ ದೇಹ ದೇವಾಲಯವಾಗಿದೆ. ಅಲ್ಲದೆ ನೀನು ನುಡಿದಂತೆ ಅನುಸರಿಸಬಲ್ಲೆನೆಂಬುದನ್ನು ತೋರಿಸಿಕೊಟ್ಟಿದ್ದಾನೆ.ಗುರು ಹೇಳಿಕೊಟ್ಟಿದ್ದನ್ನು ಗ್ರಹಿಸದ ಶಿಷ್ಯನು ಮುಂದುವರೆಯಲಾರನು. ಮುನ್ನಡೆಯದಿದ್ದರೆ ಗುರಿ ದೊರಕದು. ಗುರುವಾಕ್ಯವನ್ನು ಗ್ರಹಿಸುವ ಅಧಿಕಾರಿಯಾಗುವದು ಅವಶ್ಯವಿದೆ. ಗುರೂಪದೇಶವನ್ನು ಅರ್ಥೈಸಿಕೊಂಡು ಅನುಸರಿಸುವಲ್ಲಿಯೇ ಗುರುಕೃಪೆ ಇದೆ. ನಚಿಕೇತನಿಗೆ ಯಮನು ತಿಳಿಸಿದ ಈ ಮಾತು ಗಮನಾರ್ಹವಾಗಿದೆ. ಪರಮಾತ್ಮ ತತ್ವವನ್ನು ಹೇಳುವ ಗುರುಗಳು ದುರ್ಲಭ, ಹೇಳಿದರೂ ಕೇಳಿ ತಿಳಿದುಕೊಳ್ಳುವ ಶಿಷ್ಯರೂ ದುರ್ಲಭವೇ.” ಶಿಷ್ಯನ ಗ್ರಹಣ ಶಕ್ತಿ ಸ್ತುತ್ಯವಾಗಿದೆ.
ಯಂತ್ರವಾಹಕನ ಹ | ಸ್ತಾಂತ್ರಬೊಂಬೆಯದು ಪರ
ತಂತ್ರದಿಂದಾಡುವಂತೆನ್ನಾಡಿಸುವ ಸ್ವ-
ತಂತ್ರ ಶ್ರೀಗುರುವೆ ಕೃಪೆಯಾಗು || ೧೪||
ಜಗತ್ತಿನಲ್ಲಿ ಸ್ವತಂತ್ರವಾದುದು ಯಾವುದೂ ಇಲ್ಲವೆಂದು ಈಗಾಗಲೇ ನಿರೂಪಿಸ ಲಾಗಿದೆ. ಎಲ್ಲವೂ ಪರತಂತ್ರವನ್ನು ಹೊಂದಿದ್ದರೆ, ಗುರುದೇವನು ಮಾತ್ರ ಸರ್ವತಂತ್ರ ಸ್ವತಂತ್ರನಾಗಿದ್ದಾನೆ. ಗುರುವು ತನ್ನ ಶಿಷ್ಯರಿಗೆ ಚಾಲನೆ ಕೊಡಬಲ್ಲನು. ಕೈಯೊಳಗಿನ ಕೀಲುಗೊಂಬೆಯು ಯಂತ್ರವಾಹಕನ (ಚಾಲಕನ) ಅಧೀನದಲ್ಲಿ ಕುಣಿಯುವದು.ಅವನ ಚಾಲನೆಯಂತೆ ತನ್ನ ಆಟವನ್ನು ತೋರಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಬಲ್ಲುದು. ಯಂತ್ರವಾಹಕನಂತೆ ಗುರುದೇವನು ಶಿಷ್ಯರೆಂಬ ಗೊಂಬೆಗಳನ್ನು ಆಡಿಸುತಾನೆ. ಸದ್ಗುರುವಿನ ಸೂತ್ರವನ್ನು ಹೊಂದಿದವರು ತಮ್ಮ ಸಮೀಚೀನವಾದ ಆಟವನ್ನುಪ್ರದರ್ಶಿಸಿ ಪ್ರಶಂಸೆಯನ್ನು ಪಡೆಯಬಹುದು. ಇಹಲೋಕದಲ್ಲಿ ಸಲ್ಲಿ ಪರಲೋಕದಲ್ಲಿಯೂ ಮನ್ನಣೆ ಪಡೆಯಬಹುದು.
ಓ ಗುರುವೇ! ನೀನು ಸ್ವತಂತ್ರನು, ನಾನು ನಿನ್ನ ತಂತ್ರದಲ್ಲಿ ನಡೆಯುವವನು.ನಿನ್ನ ನುಡಿಯೇ ನನ್ನ ನುಡಿಯಾಗಬೇಕು. ನಿನ್ನ ನಡೆಯೇ ನನ್ನ ನಡೆಯಾಗಬೇಕು.“ಮಹಾಜನೋ ಯೇನ ಗತ: ಸಃ ಪಂಥಾಃ?” ಮಹಾತ್ಮರು ನಡೆದುಹೋದ ಬಟ್ಟೆಯೇ ನಮ್ಮದಾಗಬೇಕು.
ನೀತಿಕಾರರು –
ಅನುಗಂತುಂ ಸತಾಂ ವರ್ತ್ಮ
ಕೃತ್ಸ್ನಂ ಯದಿನ ಶಕ್ಯತೇ |
ಸ್ವಲ್ಪಮಪ್ಯನುಗಂತವ್ಯೋ
ಮಾರ್ಗಸ್ಥೋ ನಾವಸೀದತಿ ||
ಮಹಾತ್ಮರ ಸನ್ಮಾರ್ಗವನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಾಗದಿದ್ದರೆ ಸ್ವಲ್ಪಾದರೂ ಅನುಸರಿಸುವ ವ್ಯಕ್ತಿಯು ಮುಗ್ಗರಿಸಲಾರನು ಕ್ಲೇಶವನ್ನು ಹೊಂದುವದಿಲ್ಲವೆಂದು ಹೇಳಿದ್ದಾರೆ.
ಬಸವಲಿಂಗ ಶರಣರು ಮೊದಲಿನ ಪದ್ಯದಲ್ಲಿ ನುಡಿ ನಿರಹಂಕಾರವನ್ನು ನಿರ್ವಚಿಸಿ ಇಲ್ಲಿ ನಡೆಯ ನಿರಭಿಮಾನವನ್ನು ನಿರ್ವಚನ ಮಾಡಿದ್ದಾರೆ. ಶಿಷ್ಯನಾದವನು ಸದ್ಗುರುವಿನ ನುಡಿ-ನಡೆಯನ್ನು ಚಾಚೂ ತಪ್ಪದಂತೆ ಅನುಸರಿಸಬೇಕೆಂಬುದು ಸ್ಪಷ್ಟವಾಗುತ್ತಿದೆ. ಓ ಗುರುತಂದೆಯೇ ! ನಿನ್ನ ನುಡಿ-ನಡೆಯನ್ನು ಅನುಸರಿಸುವಂತೆ ಅನುಗ್ರಹಿಸು.
ಸ್ವಾನುಭಾವದ ನೆಲೆಯ | ನಾನೇನ ಬಲ್ಲೆನೈ
ನೀನೆ ಒಳಪೊಕ್ಕು ಏನ ನುಡಿಸಿದೊಡದನೆ
ನಾ ನುಡಿವೆ ಗುರುವೆ ಕೃಪೆಯಾಗು || ೧೫ ||
ನುಡಿ ಮತ್ತು ನಡೆಯ ಸಮನ್ವಯವನ್ನು ಪ್ರತಿಪಾದಿಸುತ್ತಾರೆ. ಸಮನ್ವಯ ಸಿದ್ಧಾಂತವು ಸುಖದಾಯಕವಾಗಿರುತ್ತದೆ. ಬಸವಾದಿ ಪ್ರಮಥರು ತೋರಿದ ಸಿದ್ಧಾಂತ ಸಮನ್ವಯ ಪೂರಕವಾದುದು. “ನುಡಿದಂತೆ ನಡೆ; ಇದೇ ಜನ್ಮ ಕಡೆ” ಎಂದು ತಮ್ಮ ಸ್ವಾನುಭಾವದ ಸವಿಯನ್ನು ಸೂರೆಗೊಳಿಸಿದರು. ಉತ್ತಮ ತಿಳುವಳಿಕೆಯಂತೆ ಆಚರಿಸುವದೇ ಅನುಭವ. ತನ್ನ ಅರುವಿನಂತೆ ಆಚರಿಸಿ ಆನಂದಪಡುವದೇ ಸ್ವಾನುಭಾವ, ನಡೆನುಡಿಯೊಂದಾಗುವದೇ ಅಥವಾ ನುಡಿ-ನಡೆಯೊಂದಾಗುವದೇ ಸ್ವಾನುಭಾವ. ತನ್ನ ಸ್ವರೂಪವನ್ನು ಸತ್ಯ ಶಿವ-ಸ್ವರೂಪವಾಗಿ ತಿಳಿದು ಸುಂದರವಾಗಿ ನಡೆಯುವದೇ ಸ್ವಾನುಭವವೆಂದು ಹೇಳಬಹುದು.ನಿಜಗುಣಾರ್ಯರು ”ಶಾಂತರೊಸೆದಹುದೆಂದು ಬಣ್ಣಿಸುವ ವರ್ತನೆ” ಎಂಬುದಾಗಿ ಸ್ವಾನುಭವದ ವ್ಯಾಖ್ಯೆಯನ್ನು ಮಾಡಿರುವರು.
ಗುರುವೆ ! ಇಂಥ ಸ್ವಾನುಭವದ ನೆಲೆಯನ್ನು ನಾನರಿಯೆ. ಅರಿವು ಆಚರಣೆ ರೂಪ ಅನುಭವವೇ ನೀನಾಗಿರುವೆ, ಸ್ವಾನುಭವವೇ ನಿನ್ನ ನಿಜರೂಪ. ನಿನ್ನ ನುಡಿ ಮತ್ತು ನಡೆಯಲ್ಲಿ ಸಮನ್ವಯವಿದೆ. ಸಾಮಾನ್ಯ ಜೀವನಾದ ನನಗೆ ಅದು ಹೇಗೆ ಸಾಧ್ಯ ? ನೀನು ನನ್ನ ಒಳಹೊಕ್ಕು ಏನನ್ನಾದರೂ ನುಡಿಸು, ನುಡಿಸಿದಂತೆ ನುಡಿಯಬಲ್ಲೆ. ಗುರುವಚನದಿಂದಧಿಕ ಸುಧೆಯಿಲ್ಲ. ನಿನ್ನ ವಚನಾಮೃತದಲ್ಲಿ ಮಿಂದು ಮರಣ ವನ್ನು ಗೆಲ್ಲಬಲ್ಲೆ. ನಿನ್ನ ಆಶೀರ್ವಾಣಿ ಪರುಷಮಯವಾದುದು. ಸದ್ಗುರುವೆ ! ನಿನ್ನ ಶಕ್ತಿಪಾತವನ್ನುಂಟು ಮಾಡಿ ನನ್ನ ನಡೆ-ನುಡಿಗಳನ್ನು ಉತ್ತಮಗೊಳಿಸು ; ಸಮನ್ವಯ ಗೊಳಿಸುವಂತೆ ಕರುಣಿಸು.