ಲೇಖಕರು ಶ್ರೀ ಶಿರೀಷ ಜೋಶಿ, ಬೆಳಗಾವಿ ಸೌಜನ್ಯ : ಸುಕುಮಾರ ದೀಪ್ತಿ ಸಂಪಾದಕರು : ಪೂಜ್ಯ ಶ್ರೀ ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ
ಕಾಡಶೆಟ್ಟಿಹಳ್ಳಿ ಹಾವೇರಿ ಜಿಲ್ಲೆಯಲ್ಲಿರುವ ಚಿಕ್ಕ ಹಳ್ಳಿ ಈ ಊರಿನ ಬಡ ದಂಪತಿಗಳು ಗುರುಪಾದಯ್ಯ – ನೀಲಮ್ಮನವರು,ಇವರಿಗೆ ಜನಿಸಿದ ಮಗು (2ನೆಯ ಫೆಬ್ರುವರಿ, 1892) ಹುಟ್ಟಿನಿಂದಲೆ ಕುರುಡು ಇವರಿಗೆ ಜನಿಸಿದ ಮೊದಲ ಮಗ ಗುರುಬಸವಯ್ಯನಿಗೂ ಹುಟ್ಟುಕುರುಡು ದಂಪತಿಗಳಿಗೆ ಎರಡನೆಯ ಮಗನೂ ಕುರುಡಾಗಿರುವುದು ತೀವ್ರ ನಿರಾಸೆಯನ್ನು ತಂದಿತು. ಮಗುವಿಗೆ ಗದಿಗೆಯ್ಯನೆಂದು ಹೆಸರಿಟ್ಟರು. ಮಗುವಿಗೆ ಬಾಲ್ಯದಿಂದಲೇ ಸಂಗೀತವೆಂದರೆ ಪ್ರಾಣ. ಎಲ್ಲರ ಅನುಕಂಪವನ್ನು ಉಂಡು ಬೆಳೆಯುತ್ತಿದ್ದ ಗದಿಗೆಯ್ಯ ಸಂಗೀತದಲ್ಲಿ ತನ್ನ ಪ್ರಾಣವನ್ನೇ ಇಟ್ಟುಕೊಂಡವನು. ಗುರಬಸವಯ್ಯ ಹಾಗೂ ಗದಿಗೆಯ್ಯ ಒಟ್ಟಿಗೆ ಹಾಡುತ್ತಿದ್ದರೆ ಅದನ್ನು ಕೇಳಿ ಊರ ಜನ ಸಂತೋಷ ಪಡುತ್ತಿದ್ದರು.
ಇದೇ ಸುಮಾರಿಗೆ ಹಾನಗಲ್ಲ ಕುಮಾರಸ್ವಾಮಿಗಳು ಊರೂರಿಗೆ ಸಂಚರಿಸಿ ವೀರಶೈವ ಧರ್ಮದ ಪ್ರಚಾರ ಕಾರ್ಯ ಹಾಗೂ ಜನರಲ್ಲಿ ಸಾಮಾಜಿಕ ಜಾಗೃತಿಯನ್ನುಂಟು ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಅವರು ಕಾಡಶೆಟ್ಟಿಹಳ್ಳಿಗೆ ಹೆಕ್ಕಲು ಬಸವೇಶ್ವರ ಜಾತ್ರೆಗೆ ಬಿಜಯಂಗೈಯಲಿರುವ ಸುದ್ದಿ ಪ್ರಾಪ್ತವಾಯಿತು. ಹಳ್ಳಿ ಜಾತ್ರೆಯ ನಿರೀಕ್ಷೆಯಲ್ಲಿ ಸಡಗರದಿಂದ ತುಂಬಿತ್ತು. ಸ್ವಾಮಿಗಳ ಆಗಮನದ ವಾರ್ತೆ ಆ ಸಡಗರವನ್ನು ಇಮ್ಮಡಿಸಿತು. ಊರು ತನ್ನಷ್ಟಕ್ಕೆ ತಾನೇ ಶೃಂಗಾರಗೊಂಡಿತು. ಸ್ವಾಮಿಗಳು ದಯಮಾಡಿಸಿದರು. ಅವರ ಸ್ವಾಗತಕ್ಕೆ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಗುರುಬಸವಯ್ಯ ಹಾಗೂ ಗದಿಗೆಯ್ಯ ಉತ್ತಮವಾಗಿ ಹಾಡಿ ಸ್ವಾಮಿಗಳ ಮನಸೆಳೆದರು!
ಬಾಲಕರೀರ್ವರ ಸಂಗೀತಾಸಕ್ತಿಯನ್ನು ಕಂಠಸಿರಿಯನ್ನು ಭಾವಪರವಶತೆಯನ್ನು ಗಮನಿಸಿದ ಶ್ರೀಗಳು ಮಕ್ಕಳ ಬಗೆಗೆ ವಿಚಾರಿಸಿ ವಿಷಯವನ್ನರಿತರು. ತಂದೆ ತಾಯಿಗಳನ್ನು ಕರೆಸಿ ಹೇಳಿದರು-
‘ಈ ಮಕ್ಕಳನ್ನು ನಮಗೆ ಕೊಡಿ. ಅವರ ಭವಿಷ್ಯವನ್ನು ನಾವು ರೂಪಿಸುತ್ತೇವೆ
ಹೆತ್ತ ಕರುಳು ಚುರ್ರೆಂದಿತು. ಗುರುಪಾದಯ್ಯನವರು ಧೈರ್ಯದಿಂದ ಮಕ್ಕಳನ್ನು ಶ್ರೀಗಳ ಉಡಿಯಲ್ಲಿ ಹಾಕುವ ನಿರ್ಧಾರ ಕೈಕೊಂಡರು. ಈಗಾಗಲೇ ಗುರುಬಸವಯ್ಯನಿಗೆ ಬಾಲ್ಯ ವಿವಾಹವಾಗಿರುವುದನ್ನು ಅರಿತ ಶ್ರೀಗಳು ಅವನನ್ನು ತಿರುಗಿ ಕಳುಹಿಸುವುದಾಗಿ ಹೇಳಿ ಮಕ್ಕಳನ್ನು ಶಿವಯೋಗಮಂದಿರಕ್ಕೆ ಕರೆದೊಯ್ದರು.
ಹಾನಗಲ್ಲಿನ ಶಿವಯೋಗ ಮಂದಿರದ ಕಟ್ಟುನಿಟ್ಟಿನ ಜೀವನಕ್ಕೆ ಹೊಂದಿಕೊಳ್ಳುವುದು ಬಾಲಕರೀರ್ವರಿಗೂ ಮೊದಮೊದಲು ತೊಂದರೆದಾಯಕವೆನಿಸಿತು. ಮಂದಿರದ ತ್ರಿಕಾಲ ಪೂಜಾ ಸಮಯದಲ್ಲಿ ಸಂಗೀತ ಸೇವೆ ಸಲ್ಲಿಸುವ ಭಾಗ್ಯ ಇಬ್ಬರಿಗೂ ದೊರಕಿತು.ಕುಮಾರ ಸ್ವಾಮಿಗಳ ಉದ್ದೇಶ ಬೇರೆಯೇ ಆಗಿತ್ತು. ಇಬ್ಬರೂ ಸಹೋದರರು ಒಳ್ಳೆಯ ಶರೀರವನ್ನು ಹೊಂದಿದ ಪ್ರಯುಕ್ತ ಅವರು ಸಂಗೀತಗಾರರಾಗಿ ರೂಪುಗೊಳ್ಳಬೇಕೆಂದು ಅಪೇಕ್ಷಿಸಿದರು. ಇದೇ ಸಮಯಕ್ಕೆ ತಂಜಾವೂರಿನಲ್ಲಿ ಸಂಗೀತ ಕಲಿತ ಗವಾಯಿಗಳೊಬ್ಬರು ಅಕಸ್ಮಾತ್ತಾಗಿ ಹಾನಗಲ್ಲಿಗೆ ಆಗಮಿಸಿದರು. ತಂಜಾವೂರಿನ ಗವಾಯಿಗಳು ಒಳ್ಳೆಯ ಸಂಗೀತಗಾರರಾಗಿದ್ದಂತೆ ಉತ್ತಮ ಶಿಕ್ಷಕರೂ ಆಗಿದ್ದರು. ಅವರು ಬಾಲಕದ್ವಯರಿಗೆ ಕರ್ನಾಟಕಿ ಸಂಗೀತವನ್ನು ಹೇಳಿಕೊಡಲಾರಂಭಿಸಿದರು.
ಪಂಚಾಕ್ಷರಿ ಗವಯಿಗಳು ಕಲಿಯುವ ಸಮಯದಲ್ಲಿ ಉತ್ತರಕರ್ನಾಟಕವೂ ಕರ್ನಾಟಕಿ ಸಂಗೀತದ ಕಂಪನ್ನೇ ಹೊಂದಿತ್ತು. ಇಲ್ಲಿ ಹಿಂದುಸ್ತಾನಿ ಸಂಗೀತ ಅದೇ ತಾನೆ ಕಾಲಿಡುತ್ತಿದ್ದರಿಂದ ಮತ್ತು ಆ ಕಾಲಕ್ಕೆ ಅದರ ವ್ಯಾಪ್ತಿ ಕೇವಲ ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿಗಳಿಗೆ ಸೀಮಿತವಾದ್ದರಿಂದ ಹಾನಗಲ್‌ಗಳಂಥ ಊರುಗಳಲ್ಲಿ ಹಿಂದುಸ್ತಾನಿ ಸಂಗೀತ ಇನ್ನೂ ಪ್ರವೇಶ ಮಾಡಿರಲಿಲ್ಲ!. ನಲ್ವಡಿ ಕೃಷ್ಣರಾಜ ಒಡೆಯರರಿಗೆ ಹಿಂದುಸ್ತಾನಿ ಸಂಗೀತದಲ್ಲಿ ಆಸಕ್ತಿಯಿದ್ದ ಕಾರಣವಾಗಿ ಉತ್ತರ ಭಾರತದಿಂದ ಅಥವಾ ಪುಣೆ ಮುಂಬಯಿಗಳಿಂದ ಮೈಸೂರಿಗೆ ಹೋಗುತ್ತಿದ್ದ ಗವಾಯಿಗಳು ಹುಬ್ಬಳ್ಳಿ ಧಾರವಾಡ ಬೆಳಗಾವಿಗಳಲ್ಲಿ ಕೆಲವು ಕಾಲ ತಂಗಿ, ಇಲ್ಲಿ ತಮ್ಮ ಕಚೇರಿಗಳನ್ನು ನೀಡಿ ಮುಂದೆ ಸಾಗುತ್ತಿದ್ದರು. ಹೀಗಾಗಿ ಈ ಭಾಗದ ಜನರಿಗೆ ಹಿಂದುಸ್ತಾನಿ ಸಂಗೀತ ಪ್ರಿಯವಾಗತೊಡಗಿತು. ಪಿತ್ರೆ ವಕೀಲರಂಥ ಕೆಲವು ಉತ್ಸಾಹಿ ಯುವಕರು ಕಲಿಯಲು ಸನ್ನದ್ಧರಾದರು. ಹೀಗೆ ಹಿಂದುಸ್ತಾನಿ ಸಂಗೀತ ಉತ್ತರಕರ್ನಾಟಕದಲ್ಲಿ ಪ್ರವೇಶ ಪಡೆಯಿತು. ಇತರ ಅನೇಕ ವಿದ್ವಾಂಸರು, ಗವಾಯಿಗಳು ಈ ಭಾಗದಲ್ಲಿ ಹಿಂದುಸ್ತಾನಿ ಸಂಗೀತ ಬೆಳೆಯಲು ಕಾರಣರಾದರು. ನತ್ಥನಖಾನ ಭಾಸ್ಕರ ಭುವಾ ,ಬಖಲೆ, ಉಸ್ತಾದ ಅಬ್ದುಲ್ ಕರೀಂಖಾನ, ಸಿತಾರಿಯಾ ರೆಹಮತ್‌ಖಾನ್ ಮೊದಲಾದವರು ಈ ಕಾರ್ಯವನ್ನು ಸಮರ್ಗವಾಗಿ ಮಾಡಿದರು. ಮುಂದೆ ಸವಾಯಿಗಂಧರ್ವರಂಥ ಅನೇಕ ಪಭೃತಿಗಳು ಅದನ್ನು ಬೆಳೆಸಿದರು.
ಆ ಕಾಲದಲ್ಲಿ ಕೆಲವು ಸಂಸ್ಥೆಗಳೂ ಉತ್ತರಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ನೆಲೆಗೊಳ್ಳಲು ಕಾರಣವಾದವು. ಉತ್ತರಕರ್ನಾಟಕದಲ್ಲಿ ಸಂಚರಿಸುತ್ತಿದ್ದ ಮರಾಠಿ ನಾಟಕ ಕಂಪನಿಗಳು, ಇಲ್ಲಿಯ ಹುಟ್ಟಿ ಬೆಳೆದ ಕನ್ನಡ ನಾಟಕ ಕಂಪನಿಗಳು ತಮ್ಮ ರಂಗಗೀತೆಗಳ ಮುಖಾಂತರ ಇಲ್ಲಿನ ಜನರಲ್ಲಿ ಹಿಂದುಸ್ತಾನಿ ಸಂಗೀತದ ಅಭಿರುಚಿಯನ್ನೂ ಆಸಕ್ತಿಯನ್ನೂ ಬೆಳೆಸಿದುವು. ಪಂ.ಭಾಸ್ಕರ್ ಬುವಾ ಬಖಲೆಯವಗೆ ಎಂಟು ವರ್ಷಗಳ ಕಾಲ ಆಶ್ರಯ ನೀಡಿದ ಧಾರವಾಡದ ಟ್ರೈನಿಂಗ್ ಕಾಲೇಜು ಹಾಗೂ ಭೂಗಂಧರ್ವ ರೆಹಮತ್‌ಖಾನ್ ಮತ್ತು ಕಬೀರದಾಸರಿಗೆ ಆಶ್ರಯ ನೀಡಿದ ಸಿದ್ದಾರೂಢ ಶ್ರೀಮಠಗಳೂ ಹಿಂದುಸ್ತಾನಿ ಸಂಗೀತ ಇಲ್ಲಿ ಬೆಳೆಯಲು ಕಾರಣವಾದವು.
ಪಂಚಾಕ್ಷರಿಗವಾಯಿಗಳು ಕಲಿಯುವ ಸಮಯದಲ್ಲಿ ಹಿಂದುಸ್ತಾನಿ ಸಂಗೀತ ಹಾನಗಲ್ಲನ್ನು ಪ್ರವೇಶಿಸಿರಲಿಲ್ಲವಾಗಿ ಮತ್ತು ಅದನ್ನು ಕಲಿಸುವವರು ದುರ್ಮಿಳರಾದ್ದರಿಂದ ಅವರು ತಂಜಾವೂರಿನ ಗವಾಯಿಗಳಲ್ಲಿ ಕರ್ನಾಟಕ ಸಂಗೀತವನ್ನು ಕಲಿಯುವುದು ಅನಿವಾರ್ಯವಾಗಿತ್ತು,ಅವರು ಬಾಲಕರಿಗೆ ಮೊದಲು ಶೃತಿ ಪರಿಚಯವನ್ನು ಮಾಡಿಕೊಟ್ಟರು. ಸ್ವರ ಲಯಗಳ ಬಗೆಗೆ ತಿಳಿಸಿದರು. ಕರ್ನಾಟಕಿ ಸಂಗೀತವು ತಾಲ ಪ್ರಧಾನವಾದ್ದರಿಂದ ತಾಲ ಜ್ಞಾನ ಅತ್ಯಂತ ಮಹತ್ವದ ಸಂಗತಿಯಾಗಿದೆ. ತಾಲ ಬದ್ಧವಾಗಿ ಹಾಡುವುದು ಅಲ್ಲಿ ಅತ್ಯಂತ ಮುಖ್ಯವಾಗುತ್ತದೆ.ಮಕ್ಕಳಿಬ್ಬರೂ ತೊಡೆ ತಟ್ಟಿಕೊಂಡು ಚಪ್ಪಾಳೆ ತಟ್ಟಿಕೊಂಡು ತಾಲ ಬದ್ಧವಾಗಿ ಹಾಡುವುದನ್ನು ಮೊದಲು ಕಲಿತರು. ನಂತರ ಪ್ರಾರಂಭವಾದದ್ದು ಜಂಟಿ ಸ್ವರಗಳನ್ನು ಹೇಳುವುದು. ಅವುಗಳನ್ನು ತಾಲಬದ್ಧವಾಗಿ ಪ್ರಸ್ತುತ ಪಡಿಸುವುದನ್ನು ರೂಢಿಸಿಕೊಂಡರು. ಈಗಲೂ ಜಂಟಿ ಸ್ವರಗಳನ್ನು ಹೇಳುವುದು ಅತ್ಯಂತ ಕಠಿಣವೆಂದೇ ಭಾವಿಸಲಾಗುತ್ತದೆ. ಅಂಥದನ್ನು ಬಾಲಕರಿಬ್ಬರೂ ಸುಲಭವಾಗಿ ಕಲಿತರು. ಸ್ವರ, ಸಂಗತಿ,ಜಟಿಲ ತಾಳ, ಲಯಗಳ ಗತಿ, ಗಮನಗಳನ್ನು ಆತ್ಮಸಾತ್ ಮಾಡಿಕೊಂಡರು. ತಂಜಾವೂರಿನ ಗವಾಯಗಳು ಗದಿಗೆಯ್ಯ ಹಾಗೂ ಗುರುಬಸವಯ್ಯನವರಿಗೆ ಕರ್ನಾಟಕ ಸಂಗೀತದ ಭದ್ರ ಬುನಾದಿಯನ್ನು ಹಾಕಿದರು. ಅವರ ಕಲಿಕೆ ಎಷ್ಟು ಕ್ಷಿಪ್ರವಾಗಿತ್ತೆಂದರೆ ಒಂದೆರಡು ವರ್ಷಗಳಲ್ಲಿ ಕಲಿಯಬೇಕಾದುದನ್ನು ಕೇವಲ ಆರು ತಿಂಗಳಲ್ಲಿ ಮುಗಿಸಿದರು. ಮುಂದೆ ಕೆಲವು ದಿನಗಳ ತರುವಾಯ ಅನಿವಾರ್ಯ ಕಾರಣಗಳಿಂದ ತಂಜಾವೂರಿನ ಗವಾಯಿಗಳು ಮರಳಿದರು. ಇವರ ಪ್ರಗತಿಯನ್ನು ಗಮನಿಸುತ್ತಿದ್ದ ಹಾನಗಲ್ ಕುಮಾರಸ್ವಾಮಿಗಳಿಗೆ ಸಂತೃಪ್ತಿಯಾಗಿತ್ತು. ಬಾಲಕರ ಸಂಗೀತ ಶಿಕ್ಷಣ ಮುಂದುವರಿಯಬೇಕೆಂದು ಅವರು ಅಪೇಕ್ಷಿಸಿದರು.
ಹೊಸಪೇಟೆಯಲ್ಲಿ ಒಬ್ಬ ಗವಾಯಿ ಇರುವುದು ಕುಮಾರಸ್ವಾಮಿಗಳಿಗೆ ತಿಳಿಯಿತು. ಹೊಸಪೇಟೆಯ ಗವಾಯಿ ಭೀಮರಾಯರನ್ನುಹಾನಗಲ್ಲಿಗೆ ಬರಮಾಡಿಕೊಂಡು ಅವರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿ ಮಕ್ಕಳಿಗೆ ಸಂಗೀತ ಕಲಿಸುವಂತೆ ಸೂಚಿಸಿದರು. ಬಾಲಕರಿಬ್ಬರ ಸಂಗೀತ ಶಿಕ್ಷಣ ಮತ್ತೆ ಮುಂದಡಿಯಿಟ್ಟಿತು. ಭೀಮರಾಯರು ಮಕ್ಕಳ ಪ್ರತಿಭೆಯನ್ನು ಕಂಡು ಸಂತಸ ಪಟ್ಟರು. ಆತ್ಮೀಯತೆಯಿಂದ ಅವರಿಗೆ ಸಂಗೀತವನ್ನು ಹೇಳಿಕೊಡಲು ಉಪಕ್ರಮಿಸಿದರು. ಆದರೆ, ಇವರಿಗೂ ಬಹುಕಾಲ ಕಲಿಸುವ ಯೋಗವಿರಲಿಲ್ಲ, ಹಾನಗಲ್ಲಿನ ಹವೆಯು ಆಗಿ ಬರದ ಕಾರಣದಿಂದ ಭೀಮರಾಯರು ಹೊಸಪೇಟೆಗೆ ಮರಳಿದರು.
ಶಿರಾಳಕೊಪ್ಪದಲ್ಲಿ ಗದಿಗೆಯ್ಯನೆಂಬ ಸಂಗೀತಗಾರರಿದ್ಧ ವಾರ್ತೆ ತಿಳಿಯುತ್ತಲೇ ಅಲ್ಲಿಗೆ ಧಾವಿಸಿದ ಕುಮಾರಸ್ವಾಮಿಗಳು ಮಕ್ಕಳಿಗೆ ಸಂಗೀತ ಹೇಳಿಕೊಡಲು ಅವರನ್ನು ಒಪ್ಪಿಸಿದರು. ಮಕ್ಕಳಿಬ್ಬರೂ ಶಿರಾಳಕೊಪ್ಪದಲ್ಲಿಯೇ ಉಳಿಯಲು ವಸತಿಯ ಹಾಗೂ ಊಟದ ವ್ಯವಸ್ಥೆ ಮಾಡಿದರು. ಗದಿಗೆಯ್ಯನವರು ಮಕ್ಕಳಿಗೆ ಎಂಟು ವರ್ಷಗಳ ಕಾಲ ಸಂಗೀತವನ್ನು ಕಲಿಸಿದರು. ತಮ್ಮಲ್ಲಿದ್ದ ವಿದ್ಯೆಯನ್ನೆಲ್ಲ ಮಕ್ಕಳಿಗೆ ನಿರ್ವಂಚನೆಯಿಂದ ಧಾರೆ ಎರೆದರು. ಎಂಟು ವರ್ಷಗಳ ಅವಧಿಯಲ್ಲಿ ಮಕ್ಕಳಿಬ್ಬರೂ ಸಾಕಷ್ಟು ಸಾಧನೆಯನ್ನು ಮಾಡಿದರು.ಸ್ವತಂತ್ರವಾಗಿ ಕಚೇರಿಗಳನ್ನು ಮಾಡುವಷ್ಟು ಸಂಗೀತವನ್ನು ಸಿದ್ಧಿಸಿಕೊಂಡರು.ಗದಿಗೆಯ್ಯನವರು ಪ್ರಾಮಾಣಿಕವಾಗಿ ಒಂದು ಅಭಿಪ್ರಾಯವನ್ನು ಕುಮಾರಸ್ವಾಮಿಗಳ ಮುಂದಿಟ್ಟರು. ಅವರೆಂದರು, ‘ಬುದ್ಧಿ ನಾನು ಕಲಿಸುವುದೆಲ್ಲವೂ ಮುಗಿದಿದೆ. ಮಕ್ಕಳ ಬುದ್ದಿ ಎಂದಿಗೂ ತುಂಬಲಾರದ ಇಂಗು ಭೂಮಿ. ನಾನು ಹಾಕಿದ್ದೆಲ್ಲವನ್ನೂ ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ. ಅವರ ಜ್ಞಾನ ತೃಷೆ ಹಿಂಗಲಾರದು. ಅವರನ್ನು ಹೆಚ್ಚಿನ ಅಧ್ಯಯನಕ್ಕಾಗಿ ಮೈಸೂರಿಗೆ ಕಳಿಸುವುದು ವಾಸಿ, ನಾನು ಮಕ್ಕಳನ್ನು ಮರಳಿ ತಮ್ಮ ಸಾನಿಧ್ಯಕ್ಕೆ ಒಪ್ಪಿಸುತ್ತಿದ್ದೇನೆ’ ಕುಮಾರಸ್ವಾಮಿಗಳು ಮಕ್ಕಳನ್ನು ಮೈಸೂರಿಗೆ ಕಳಿಸುವಲ್ಲಿ ಕೆಲವು ಕಾಲಾವಕಾಶ ಬೇಕಾಗುತ್ತದೆ ಎಂದು ಯೋಚಿಸಿ ಅವರನ್ನು ನೆಲವಿಗಿಹಳ್ಳಿಗೆ ಕಳುಹಿದರು. ಅಲ್ಲಿ ಕಾಲರಾ ಬೇನೆಗೆ ತುತ್ತಾದ ಗುರುಬಸವಯ್ಯ ಕೊನೆಯುಸಿರೆಳೆದರು. ಇದರಿಂದ ಗದಿಗಯ್ಯನಿಗೆ ಬಹು ದುಃಖವಾಯಿತು. ಶ್ರೀಗಳು ಬಂದು ಸಾಂತ್ವನವನ್ನು ಕೇಳಿದರು.
ಮುಂದೆ ಕೆಲವೇ ದಿನಗಳಲ್ಲಿ ಗದಿಗೆಯ್ಯನನ್ನು ಮೈಸೂರಿಗೆ ಉನ್ನತ ಸಂಗೀತ ಶಿಕ್ಷಣಕ್ಕಾಗಿ ಕಳುಹಿಸುವ ಏರ್ಪಾಟು ಮಾಡಿದರು.ಮೈಸೂರಿನಲ್ಲಿ ಗದಿಗಯ್ಯನ ಜೀವನ ಸುಖದ ಸುಪ್ಪತ್ತಿಗೆಯನೂ ಆಗಿರಲಿಲ್ಲ, ಮನಿಪ್ತ ಗೌರಿಶಂಕರ ಸ್ವಾಮಿಗಳಲ್ಲಿ ಉಳಿದುಕೊಂಡು ಸಂಗೀತ ಕಲಿಯುತ್ತಿದ್ದರೂ ಅವರಿಗೆ ಭಾರವಾಗದೆಂಬ ಕಾರಣದಿಂದ ತಂಬೂರಿ ಸಾಥಿ ಮಾಡಿ, ಭಜನೆಗಳನ್ನು ಹಾಡಿ, ಕೀರ್ತನೆಗಳನ್ನುಹೇಳಿ ಚರಿತಾರ್ಥದ ವ್ಯವಸ್ಥೆ ಮಾಡಿಕೊಂಡರು.
ಶ್ರೀ.ಮ.ನಿ.ಪ್ರ. ಗೌರಿಶಂಕರ ಸ್ವಾಮಿಗಳು ಗದಿಗೆಯ್ಯನ ವ್ಯಕ್ತಿತ್ವದಿಂದ ತುಂಬ ಪ್ರಭಾವಿತರಾದರು. ಆತನ ನಡೆ, ನುಡಿ, ಚಿತ್ತಾಕರ್ಷಕ ವ್ಯಕ್ತಿತ್ವ ಮನೋಭೂಮಿಕೆ, ಸಾತ್ವಿಕತೆ ಇವೆಲ್ಲವೂ ಅವರ ಮೇಲೆ ಪ್ರಭಾವ ಬೀರಿದವು. ಅವನ ಮೇಲೆ ಇನ್ನಿಲ್ಲದ ವಾತ್ಸಲ್ಯ ಮೂಡಿತು.ಸಂಗೀತದಲ್ಲಿ ಸಿದ್ಧಿ ಪಡೆಯಲು ಬಂದಿರುವ ಈತನಿಗೆ ಗದಿಗೆಯ್ಯನೆಂಬ ಅಭಿಧಾನ ಸಲ್ಲದು, ಶಿವನು ಸಂಗೀತ ಪ್ರಿಯನಾದ್ದರಿಂದ ಶಿವನ ಹೆಸರೇ ಇವನಿಗೆ ಯೋಗ್ಯವೆಂದು ಭಾವಿಸಿ `ಪಂಚಾಕ್ಷರಿ’ ಎಂದು ಕರೆದರು. ಮೊದಲ ಸಲ ಗದಿಗೆಯ್ಯನನ್ನು ಹಾಗೆ ಕರೆದಾಗ ಅವನಿಗೂ ಅರ್ಥವಾಗಲಿಲ್ಲ. ನಂತರ, ಶ್ರೀಗಳೇ ತಿಳಿಸಿ ಹೇಳಿದಾಗ ಆತ ಅನಂದಗೊಂಡ. ಅಂದಿನಿಂದ ಗದಿಗೆಯ್ಯ ಎಂಬುದು ಮರೆಯಾಗಿ ಪಂಚಾಕ್ಷರಿ’ ಎಂಬುದು ಹೆಸರಾಯಿತು.
ಹೊಟ್ಟೆಯ ಹಸಿವು ಪಂಚಾಕ್ಷರಿಯನ್ನು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಆದರೆ ಸಂಗೀತದ ಹಸಿವು ಮಾತ್ರ ತಡೆಯಲಾರದಂತಿತ್ತು,ಪಂಚಾಕ್ಷರಿಯ ವ್ಯಕ್ತಿತ್ವದಿಂದ, ಹಾಡುಗಾರಿಕೆಯಿಂದ ಪ್ರಭಾವಿತರಾದ ಬಿಡಾರಂ ಕೃಷ್ಣಪ್ಪನವರು ಸಂಗೀತ ಕಲಿಸಲು ಒಪ್ಪಿಕೊಂಡರು.ಕಲವು ಕಾಲ ಅವರಲ್ಲಿ ಸಂಗೀತದ ಅಧ್ಯಯನ ನಡೆಯಿತಾದರೂ ಅವರಿಗೆ ಬಂದ ಕೌಟುಂಬಿಕ ತೊಂದರೆಗಳಿಂದಾಗಿ ಪಿಟೀಲು ವೆಂಕಟರಮಣಯ್ಯನವರಲ್ಲಿ ಪಂಚಾಕ್ಷರಿಯ ಸಂಗೀತದ ತಾಲೀಮು ಮುಂದುವರಿಯಿತು. ಸ್ವತಃ ಬಿಡಾರಂ ಕೃಷ್ಣಪ್ಪನವರು ಮುಂದೆ ನಿಂತು ಪಂಚಾಕ್ಷರಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿದರು. ವೆಂಕಟರಮಣಯ್ಯನವರು ಅತ್ಯಂತ ಮುತುವರ್ಜಿಯಿಂದ ಸಂಗೀತ ಶಿಕ್ಷಣ ನೀಡಿದರು. ವೆಂಕಟರಮಣಯ್ಯನವರಲ್ಲಿ ಕಲಿಯಲಾರಂಭಿಸಿದ ನಂತರ ಪಂಚಾಕ್ಷರಿಗೆ ಕರ್ನಾಟಕಿ ಸಂಗೀತದ ಉನ್ನತ ಮಟ್ಟದ ಜ್ಞಾನವು ಪ್ರಾಪ್ತಿಯಾಯಿತು. ಪಂಚಾಕ್ಷರಿ ಶ್ರಮ ವಹಿಸಿ ಕಲಿತನು. ಮೈಸೂರಿನಲ್ಲಿದ್ದ ನಾಲ್ಕು ವರ್ಷಗಳ ಕಾಲ ತಪಸ್ಸಿನಂತೆ ಕಳೆದು ಸಂಗೀತದಲ್ಲಿ ಸ್ವತಃ ಉನ್ನತ ಮಟ್ಟವನ್ನು ತಲುಪಿದ್ದು ಸಾಮಾನ್ಯ ಸಾಧನೆಯೇನಲ್ಲ
ಈ ನಾಲ್ಕು ವರ್ಷಗಳು ಪಂಚಾಕ್ಷರಿಯ ಜೀವನದಲ್ಲಿ ಸಂಗೀತದ ಸಾಧನೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾಲ ಘಟ್ಟ.ಈ ಕಾಲಾವಧಿಯಲ್ಲಿ ಗುರುವಿನ ಮುಖದಿಂದ ನೇರವಾಗಿ ಸಂಗೀತವನ್ನು ಕಲಿತದ್ದು ಒಂದು ಭಾಗ, ಇನ್ನೊಂದು ಮಹತ್ವದ ಭಾಗವೆಂದರೆ, ಮೈಸೂರಿನಲ್ಲಿ ಇರುವಷ್ಟು ಕಾಲವೂ ಉನ್ನತ ಮಟ್ಟದ ಅನೇಕ ಕಲಾವಿದರ ಸಂಗೀತವನ್ನು ಕೇಳುವ ಸದಾವಕಾಶ ಪಂಚಾಕ್ಷರಿಗೆ ಲಭ್ಯವಾಯಿತು. ಇದರಿಂದಾಗಿ ಅವನ ಸಂಗೀತಕ್ಕೆ ಒಂದು ಹೊಸ ಆಯಾಮ, ಮೆರಗು ಬಂದಿತು. ಕರ್ನಾಟಕಿ ಸಂಗೀತದ ಅನೇಕ ಮಹತ್ವದ ಸೂಕ್ಷ್ಮ ಸಂಗತಿಗಳು ಹೊಳೆದುದು ಇದೇ ಅವಧಿಯಲ್ಲಿ ವಿವಿಧ ಕಲಾವಿದರಿಂದ ಅನೇಕ ಮಹತ್ವದ ಕೀರ್ತನೆಗಳನ್ನು ಸಂಗ್ರಹಿಸಿದ್ದಲ್ಲದೇ ಹಾಡುಗಾರಿಕೆಯ ಮರ್ಮವನ್ನು ತಿಳಿಯಲು ಸಾಧ್ಯವಾಯಿತು.
ಮೈಸೂರಿನಲ್ಲಿರುವಾಗ ಅನೇಕ ಕಡೆಗಳಲ್ಲಿ ಸಂಗೀತ ಕಚೇರಿಗಳನ್ನು ಮಾಡುವ ಅವಕಾಶ ಪಂಚಾಕ್ಷರಿಗೆ ಲಭಿಸಿತು. ಹೀಗೆ ಅವಕಾಶ ದೊರೆತ ಎಲ್ಲ ಸಂದರ್ಭಗಳಲ್ಲೂ ತಾನೊಬ್ಬ ಪ್ರಬುದ್ಧ ಕಲಾವಿದನೆಂಬುದನ್ನು ಸಾಬೀತುಪಡಿಸಿದ. ಮೈಸೂರಿನ ಜನತೆ ಪಂಚಾಕ್ಷರಿಯನ್ನು ಸಂಗೀತದ ಘನ ವಿದ್ವಾಂಸನೆಂದು ಮನ್ನಿಸಿತು. ವಿದ್ಯಾರ್ಥಿಯಾಗಿ ಮೈಸೂರು ನಗರಕ್ಕೆ ಕಾಲಿಟ್ಟ ಗದಿಗೆಯ್ಯ ಪಂಚಾಕ್ಷರಿ ಎನಿಸಿಕೊಂಡು,ವಿದ್ವಾಂಸನಾಗಿ ರೂಪುಗೊಂಡ
ಉಸ್ತಾದ ವಹೀದಖಾನರು ಕಿರಾಣಾ ಘರಾಣೆಯವರು. ಉಸ್ತಾದ ಅಬ್ದುಲ್ ಕರೀಂಖಾನರ ನಂತರ ಮೇರುಖಂಡದ ಗಾಯಕರು ಎಂದು ಹೆಸರುವಾಸಿಯಾದವರು. ಇವರ ಶಿಷ್ಯ ಉಸ್ತಾದ ಅಮೀರಖಾನರು ಸಹ ಅದೇ ಖ್ಯಾತಿಯನ್ನು ಪಡೆದರು. ಇವರ ಶಿಷ್ಯರಲ್ಲಿ ಹೀರಾಬಾಯಿ ಬಡೋದೇಕರ್, ಶ್ರೀಮತಿ ಬೇಗಂ ಆಖೈರಿ, ಮುನ್ನಿಭಾಯಿ, ಹಾಗೂ ಪ. ಬಸವರಾಜ ರಾಜಗುರು ಪ್ರಸಿದ್ಧರಾಗಿದ್ದಾರೆ. ಇಂಥ ಶ್ರೇಷ್ಠ ತರಗತಿಯ ಗವಾಯಿಯನ್ನು ಹುಡುಕಿ ಹಾನಗಲ್ ಕುಮಾರಸ್ವಾಮಿಗಳು ಶಿವಯೋಗಮಂದಿರಕ್ಕೆ ಬರಮಾಡಿಕೊಂಡರು. ಅವರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಕುಮಾರಸ್ವಾಮಿಗಳು ಉಸ್ತಾದ ವಹೀದಖಾನರು ಸದಾಕಾಲ ಹರ್ಷಚಿತ್ತರಾಗಿರುವಂತೆ ನಿಗಾ ವಹಿಸಿದರು. ಅವರಿಗೆ ಬೇಕಾದ ಎಲ್ಲ ಅನುಕೂಲತೆಗಳನ್ನೂ ಒದಗಿಸಿದರು. ಅವರಿಗೆ ಪ್ರತಿತಿಂಗಳೂ ನೂರೈವತ್ತು ರೂಪಾಯಿಗಳ ಸಂಬಳ ನಿಗದಿಯಾಯಿತು.
ಒಂದು ಶುಭದಿನ ಉಸ್ತಾದ ವಹೀದಖಾನರು ಪಂಚಾಕ್ಷರಿಗವಯಿಗಳಿಗೆ ಸಂಗೀತದ ತಾಲೀಂನ್ನು ಪ್ರಾರಂಭಿಸಿದರು. ಈಗಾಗಲೇ ಹಿಂದುಸ್ತಾನಿ ಸಂಗೀತದಲ್ಲಿ ಸ್ವಪ್ರಯತ್ನದಿಂದ ಒಂದಿಷ್ಟು ಕೃಷಿ ಮಾಡಿಕೊಂಡಿದ್ದ ಪಂಚಾಕ್ಷರಿಗಮಯಿಗಳಿಗೆ ಕಲಿಸುವ ವಹೀದಖಾನರಿಗೆ ಯಾವ ತೊಂದರೆಯೂ ಆಗಲಿಲ್ಲ. ಪಂಚಾಕ್ಷರಿಗವಾಯಿಗಳು ಸೂಕ್ಷ್ಮ ಗ್ರಾಹಿಗಳು. ಗುರುವಿನ ಮುಖೇನ ಪ್ರಾಪ್ತವಾದ ಸಂಗೀತದ ಸುಧಾರಸವನ್ನು ಆನಂದದಿಂದ ಸ್ವೀಕರಿಸಿದರು. ನಾಲ್ಕುವರುಷಗಳ ಅವಿರತ ತಾಲೀಮಿನಲ್ಲಿ ಅವರೊಬ್ಬ ಪ್ರಬುದ್ಧ ಹಿಂದುಸ್ತಾನಿ ಗಾಯಕರಾಗಿ ರೂಪುಗೊಂಡರು.
ಇಷ್ಟೆಲ್ಲ ಉನ್ನತಿಗೇರಿದ್ದರೂ ಪಂಚಾಕ್ಷರಿಗವಯಿಗಳಿಗೆ ಮಾತ್ರ ಹಿಂದುಸ್ತಾನಿ ಸಂಗೀತದಲ್ಲಿ ತಾವು ಸಾಧಿಸಬೇಕಾದುದು ಇನ್ನೂ ಇದೆ ಎಂದೇ ಅನ್ನಿಸತೊಡಗಿತು. ಹೀಗಾಗಿ ಕೆಲವು ಕಾಲ ಬೆಳಗಾವಿಗೆ ಆಗಮಿಸಿದರು. ಬೆಳಗಾವಿ ಆಗ ಸಂಗೀತಗಾರರಿಂದ ತುಂಬಿ ತುಳುಕುತ್ತಿತ್ತು. ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಅನೇಕ ಸಂಗೀತಗಾರರು ಇಲ್ಲಿ ನೆಲೆಸಿದ್ದರು. ಸವಾಯಿಗಂಧರ್ವರ ಶಿಷ್ಯ ಕಾಗಲಕರಬುವಾ, ಗಾಯಕರಾದ ಉಮಾಮಹೇಶ್ವರಬುವಾ, ಉತ್ತರಕರಬುವಾ, ಬಾಬೂರಾವ ರಾಣೆ, ಹಾರ್ಮೋನಿಯಂ ಶಿಕ್ಷಕರಾದ ರಾಜವಾಡೆಬುವಾ, ಗೋವಿಂದರಾವ ಗಾಯಕವಾಡ, ವಿಟ್ಠಲರಾವ ಕೋರಗಾಂವಕರ ಮೊದಲಾದವರಿದ್ದರು. ಶಿವರಾಮಬುವಾ ವಝೆ ಎಂಬ ಅಪ್ರತಿಮ ಗಾಯಕ ಕೂಡ ಆಗ ಬೆಳಗಾವಿಯಲ್ಲಿಯೇ ನೆಲೆಸಿದ್ದರು. ಇವರೆಲ್ಲರಿಗೂ ಕಳಶಪ್ರಾಯರಾಗಿ ರಾಮಕೃಷ್ಣಬುವಾ ವಝೆ ಬೆಳಗಾವಿಯಲ್ಲಿದ್ದರು. ಇಂಥ ನಗರಕ್ಕೆ ಪಂಚಾಕ್ಷರಿ ಗವಾಯಿಗಳು ಕಲಿಯಲು ಬರುವ ವ್ಯವಸ್ಥೆ ಆಯಿತು. ನಾಗನೂರು ಶಿವಬಸವಸ್ವಾಮಿಗಳ ಶ್ರೀಮಠದಲ್ಲಿ ಪಂಚಾಕ್ಷರಿಗವಾಯಿಗಳ ವಾಸ್ತವ್ಯದ ವ್ಯವಸ್ಥೆಯಾಯಿತು. ಗ್ವಾಲಿಯರ್ ಘರಾಣೆಯ ಅಧ್ವರ್ಯು ಎನಿಸಿದ ಪಂ.ರಾಮಕೃಷ್ಣಬುವಾ ವಝೆಯವರಲ್ಲಿ ಹಾಗೂ ಪ್ರೌಢ ದರ್ಜೆಯ ಗಾಯಕರೆನಿಸಿದ ಬಾಬೂರಾವ ರಾಣೆಯವರಲ್ಲಿ ಪಂಚಾಕ್ಷರಿಗವಾಯಿಗಳು ಕೆಲವು ಕಾಲ ಸಂಗೀತಾಧ್ಯಯನ ಮಾಡಿದರು.
ಪಂಚಾಕ್ಷರಿಗವಾಯಿಗಳ ಜೀವನವೇ ಸಂಗೀತ ಕಲಿಯುವುದಕ್ಕಾಗಿ ಮೀಸಲಾಯಿತು. ಒಂದು ಜನ್ಮದಲ್ಲಿ ಯಾರೂ ಪೂರ್ತಿಯಾಗಿ ಸಂಗೀತ ಕಲಿಯುವುದು ಸಾಧ್ಯವಿಲ್ಲವೆಂದು ಅವರು ಧೃಡವಾಗಿ ನಂಬಿದ್ದರು. ಈ ಜನ್ಮದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನೂ ಪೂರ್ತಿಕಲಿತು ಬಿಡಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿತ್ತು. ಹೀಗಾಗಿ ಅವರು ಸುರೇಶಬಾಬು ಮಾನೆಯವರಲ್ಲಿಯೂ ಸಂಗೀತ ಕಲಿತರು.ಇದಿಷ್ಟೇ ಸಾಲದೆಂಬಂತೆ ವಾದನಗಳ ಕಡೆಗೂ ವಾಲಿದರು. ಬಳ್ಳಾರಿ ರಾಘವಾಚಾರ್ಯರಲ್ಲಿ ಪಿಟೀಲು ನುಡಿಸುವದನ್ನು ಕಲಿತರು.
ವಾದನವನ್ನು ಕಲಿಯಲು ಪಂಚಾಕ್ಷರಿಗವಾಯಿಗಳಿಗೆ ಸೂಚಿಸಿದವರು ಹಾನಗಲ್ಲ ಕುಮಾರಸ್ವಾಮಿಗಳೇ! ಒಮ್ಮೆ ಅವರು ಹೇಳಿದರು-ನೀನು ಈಗಾಗಲೇ ಉಭಯಗಾನ ವಿಶಾರದನೆನಿಸಿರುವೆ. ಇವುಗಳ ಜೊತೆಗೆ ವಾದನದಲ್ಲಿಯೂ ಒಂದಿಷ್ಟು ಸಾಧಿಸು.’ ಅಂದಿನಿಂದ ಅವರು ವಾದನಕಲೆಯತ್ತಲೂ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಪಿಟೀಲು, ಹಾರ್ಮೋನಿಯಂ, ತಬಲಾ ನುಡಿಸುವುದನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸತೊಡಗಿದರು. ತಬಲಾ ಕಲಿಯುವ ಬಗೆಗೆ ಅವರಿಗೆ ಅಪಾರವಾದ ಆಸಕ್ತಿಯಿತ್ತು. ಆದರೆ ತಬಲಾವಾದನವನ್ನು ಕಲಿಸುವ ಗುರು ದೊರೆಯಬೇಕಲ್ಲ! ಆಗ ಬೆಳಗಾವಿಯಲ್ಲಿ ಶಹಾಪೂರ ಮಲ್ಲೇಶಪ್ಪನೆಂಬುವವರು ಶ್ರೇಷ್ಠ ತಬಲಾವಾದಕರೆಂದು ಹೆಸರುವಾಸಿಯಾಗಿದ್ದರು. ತಮ್ಮ ದಿನನಿತ್ಯದ ಸಂಗೀತ ಪಾಠ ನಡೆಯುವಾಗ ಗವಾಯಿಗಳ ಶಿಷ್ಯರಲ್ಲಿ ಒಬ್ಬರಾದ ಶ್ರೀ ಶಿವಯ್ಯನವರು ತಬಲಾ ಸಾಥಿ ನೀಡುತ್ತಿದ್ದರು. ಗವಾಯಿಗಳು ಅವರನ್ನೇ ಬೆಳಗಾವಿಗೆ ಕಳುಹಿಸಿ ಶಹಾಪುರದ ಮಲ್ಲೇಶಪ್ಪನವರಲ್ಲಿ ತಬಲಾವಾದನ ಕಲಿಯುವಂತೆ ಕಳುಹಿಸಿದರು. ಜೇಕಿನಕಟ್ಟೆಯ ಶಿವಯ್ಯನವರು ವ್ಯವಸ್ಥಿತವಾಗಿ ತಬಲಾ ಕಲಿತುಬಂದ ನಂತರ ಪಂಚಾಕ್ಷರಿಗವಯಿಗಳು ಅವನನ್ನ ತಮ್ಮ ಗುರುವೆಂದು ಭಾವಿಸಿ ತಬಲಾವಾದನವನ್ನು ಅಧ್ಯಯನ ಮಾಡಿದರು. ತಮ್ಮ ಶಿಷ್ಯನನ್ನೇ ಗುರುವೆಂದು ಭಾವಿಸುವ ಹೃದಯವಂತಿಕೆ ಸಂಗೀತಗಾರರಲ್ಲಿ ಕಂಡು ಬರುವುದು ವಿರಳವೇ ಸರಿ!
ಪಂಚಾಕ್ಷರಿಗಳು ತಮ್ಮ ತಬಲಾವಾದನದಲ್ಲಿಯೂ ವಿಶಿಷ್ಟತೆಯನ್ನು ಮೆರೆಯುತ್ತಿದ್ದು, ಎಲ್ಲರೂ ಬಲಗೈಯಿಂದ ತಬಲಾ ನುಡಿಸಿದರೆ,ಇವರು ಎಡಗೈಯಿಂದ ನುಡಿಸುತ್ತಿದ್ದರು. ಬಲಗೈ ಡಗ್ಗಾ ನುಡಿಸುತ್ತಿತ್ತು. ಸಾಮಾನ್ಯವಾಗಿ ಬಲಗೈಯನ್ನು ಸಂಗೀತಗಾರರು ಜತನವಾಗಿರಿಸಿ ಕೊಳ್ಳುತ್ತಾರೆ. ಆ ಕೈ ತಂಬೂರಿ ಮೀಟಲು, ಹಾರ್ಮೋನಿಯಂನ ಸ್ವರಗಳನ್ನು ನುಡಿಸಲು, ಪಿಟೀಲಿನ ಕಮಾನು ತೀಡಲು ಪ್ರಯೋಜನ ಕಾರಿಯಾಗುತ್ತದೆ. ಆದರೆ, ತಬಲಾವಾದನದಲ್ಲಿಯೂ ಬಲಗೈಯನ್ನೇ ಪ್ರಧಾನವಾಗಿ ಬಳಸಿದರೆ, ತಬಲಾವಾದನದಲ್ಲಿ ಹೆಚ್ಚಿನ ಮಾತ್ರೆಗಳು ತಬಲಾದ ಮೇಲೆಯೇ ನುಡಿಸಲ್ಪಡುವುದರಿಂದ ಅದಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗಾಗಿ ಪಂಚಾಕ್ಷರಿಗವಾಯಿಗಳು ಎಡಗೈಯಿಂದ ತಬಲಾ ನುಡಿಸುವುದನ್ನು ರೂಢಿಸಿಕೊಂಡರು. ಪಂಚಾಕ್ಷರಿಗವಾಯಿಗಳ ಸಾಧನ ಎಂಥಹದ್ದೆಂದರೆ, ಅವರು ಕೆಲವೇ ದಿನಗಳಲ್ಲಿ ತಬಲಾ,ಪಿಟೀಲು, ಹಾರ್ಮೊನಿಯಂ, ಪಖಾವಜ್, ಸಾರಂಗಿ, ದಿಲ್‌ರುಬಾ, ಕೊಳಲು, ಹಾಯಿವಾದನಗಳನ್ನು ನುಡಿಸುವಲ್ಲಿ ನಿಷ್ಣಾತರೆನಿಸಿದರು.
ಆಗ ಪಂಚಾಕ್ಷರಿ ಗವಾಯಿಗಳಿಗೆ ಸುಮಾರು ಐವತ್ತು ಜನ ಶಿಷ್ಯರಿದ್ದರು. ಅವರಲ್ಲಿ ಕೆಲವರು ಸಂಸಾರಿಯಾಗುವ ತಯಾರಿಯಲ್ಲಿದ್ದವರು.ಮತ್ತು ಇನ್ನು ಕೆಲವರು ಆಗಲೇ ಸಂಸಾರಿಯಾದವರು. ಶಿವಯೋಗಮಂದಿರವು ವೀರಶೈವ ಮಠಾಧೀಶರಾಗುವವರಿಗೆ ಯೋಗ್ಯ ಶಿಕ್ಷಣ ನೀಡುವ ಕೇಂದ್ರವಾದ್ದರಿಂದ ಅಲ್ಲಿ ಸಂಸಾರಸ್ಥರಿಗೆ ತಂಗಲು ಅವಕಾಶವಿರಲಿಲ್ಲ. ಅಲ್ಲದೆ ಶಿವಯೋಗಮಂದಿರದಲ್ಲಿದ್ದು ಪಂಚಾಕ್ಷರಿಗವಾಯಿಗಳು ಸಂಗೀತಪಾಠ ಮಾಡುವುದು ಕೆಲವರಿಗೆ ಸರಿ ಬರಲಿಲ್ಲ.ಕೆಲವರು ಹಾನಗಲ್ಲ ಕುಮಾರಸ್ವಾಮಿಗಳವರೆಗೂ ದೂರನ್ನು ಒಯ್ದರು. ಈ ಸಂಗತಿ ಅವರನ್ನು ಚಿಂತೆಗೀಡುಮಾಡಿತು. ಇದುವರೆಗೂ ಮಗನಂತೆ ಜೋಪಾನ ಮಾಡಿದ ಪೂಚಾಕ್ಷರಿಯನ್ನು ಇದ್ದಕ್ಕಿದ್ದ ಹಾಗೆ ಶಿವಯೋಗಮಂದಿರದಿಂದ ಹೊರಗೆ ಕಳಿಸುವುದು ಮಾನಸಿಕವಾಗಿ ಸಹಿಸಲಸಾಧ್ಯವಾದ ವಿಷಯವಾಗಿತ್ತು. ಆದರೆ, ಶಿವಯೋಗಮಂದಿರದ ವಟುಗಳು ನೀಡಿದ ದೂರಿನಲ್ಲಿಯೂ ತಥ್ಯವಿತ್ತು. ಇದು ಹಾನಗಲ್ಲ ಕುಮಾರಸ್ವಾಮಿಗಳಿಗೆ ಧರ್ಮಸಂಕಟದ ವಿಷಯವಾಗಿತ್ತು. ಕೊನೆಗೆ ಅವರು ಪಂಚಾಕ್ಷರಿಗವಾಯಿಗಳನ್ನು ಹಾರೈಸಿ ಬೀಳ್ಕೊಡುವ ನಿರ್ಧಾರಕ್ಕೆ ಬಂದರು. ಒಂದು ದಿನ ಪಂಚಾಕ್ಷರಿಗವಾಯಿಗಳನ್ನು ಕರೆದು ಹೇಳಿದರು- ‘ಪಂಚಾಕ್ಷರಿ, ನೀನು ಕೇವಲ ಕೆಲವರಿಗೆ ಸೀಮಿತವಾಗಬಾರದು. ನಿನ್ನ ಸಂಗೀತ ಲೋಕಾರ್ಪಣವಾಗಬೇಕು. ನೀನು ಸಮಾಜದ ಮಗನಾದ್ದರಿಂದ ಸಮಸ್ತ ಸಮಾಜಕ್ಕೂ ನಿನ್ನ ಸಂಗೀತ ಸಲ್ಲತಕ್ಕದ್ದು. ಆದ್ದರಿಂದ ನೀನು ನಿನ್ನ ಶಿಷ್ಯರೊಂದಿಗೆ ಸಂಗೀತ ಯಾತ್ರೆಯನ್ನು ಪ್ರಾರಂಭಿಸು. ಯಾವುದಕ್ಕೂ ಧೃತಿಗೆಡುವ ಕಾರಣವಿಲ್ಲ. ನಿನ್ನ ಬೆಂಬಲಕ್ಕೆ ನಾವಿದ್ದೇವೆ.’
ಓರ್ವ ಅಂಧ ಕಲಾವಿದ, ಜಗತ್ತನ್ನೇ ನೋಡದೆ, ಕುಮಾರಸ್ವಾಮಿಗಳ ಅಕ್ಕರೆಯಲ್ಲಿ ಬೆಳೆದ ಕೂಸು. ಇದ್ದಕ್ಕಿದ್ದ ಹಾಗೆ ಸಮಾಜದ ದಾರುಣ ಹೊಡೆತಕ್ಕೆ ತೆರೆದುಕೊಳ್ಳುವುದು ಕಲ್ಪಿಸಿಕೊಳ್ಳಲಾರದ ಸಂಗತಿಯಾಗಿತ್ತು. ಶಿವಯೋಗಮಂದಿರದಲ್ಲಿಯೇ ಉಳಿಸಿಕೊಳ್ಳುವಂತೆ ಗುರುಗಳನ್ನು ಪರಿಪರಿಯಾಗಿ ವಿನಂತಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಆದರೆ, ಅದು ಅನಿವಾರ್ಯವೂ ಆಗಿತ್ತು, ಪಂಚಾಕ್ಷರಿಗವಾಯಿಗಳು ಕುಮಾರಸ್ವಾಮಿಗಳ ಆಶೀರ್ವಾದದ ಅಕ್ಷಯನಿಧಿಯೊಂದಿಗೆ ತಮ್ಮ ಶಿಷ್ಯರನ್ನು ಕಟ್ಟಿಕೊಂಡು ಶಿವಯೋಗಮಂದಿರದಿಂದ ಹೊರಬಿದ್ದರು.
ಹಾನಗಲ್ ಕುಮಾರಸ್ವಾಮಿಗಳು ಪಂಚಾಕ್ಷರಿ ಗವಾಯಿಯನ್ನು ಬೀಳ್ಕೊಡುವಾಗ ಮಾರ್ಗದರ್ಶನ ಪರವಾದ ಕೆಲವು ಮಾತುಗಳನ್ನು ಹೇಳಿದರು. ಸಂಗೀತವನ್ನು ಸಮಾಜ ಸೇವೆಯ ಮಂತ್ರವನ್ನಾಗಿ ಉಪಯೋಗಿಸುವಂತೆಯೂ, ಸರ್ವಧರ್ಮದ ವಿದ್ಯಾರ್ಥಿಗಳಿಗೆ ಅದರಲ್ಲೂ ಅಂಧ ಮತ್ತು ವಿಕಲಾಂಗ ಮಕ್ಕಳಿಗೆ ಅಕ್ಕರತೆಯಿಂದ ಸಂಗೀತವನ್ನು ಕಲಿಸುವಂತೆಯೂ ಉಪದೇಶಿಸಿದರು. ಸಮಾಜಕಲ್ಯಾಣಕ್ಕಾಗಿ ಆಯೋಜಿಸಲ್ಪಟ್ಟ ಕಾರ್ಯಕ್ರಮಗಳಿಗೆ ಹಣ ಕೇಳದಿರುವಂತೆ ಸೂಚಿಸಿದರು. ‘ಇಷ್ಟೇ ಹಣವನ್ನು ಕೊಡಬೇಕೆಂದು ಕರಾರು ಹಾಕಬೇಡ, ನಿನಗೆ ಹಣದ ಅಡಚಣೆಯಿದ್ದಾಗ ನನ್ನನ್ನು ನೆನಪಿಸಿಕೋ. ನಿನ್ನ ಸದ್ಭಕ್ತರ ನೆರವಿನಿಂದ, ಅವರ ಸಹಾಯ ಸಹಕಾರದಿಂದ ಸಂಗೀತ ಶಾಲೆಯನ್ನು ನಡೆಸು ಕುಮಾರಸ್ವಾಮಿಗಳ ಈ ಮಾತಿಗೆ ಪಂಚಾಕ್ಷರಿಗವಾಯಿಗಳು ಪ್ರತಿಯಾಗಿ ಏನನ್ನೂ ಹೇಳದೇ, ಅವರ ಅಪ್ಪಣೆಯನ್ನು ಶಿರಸಾವಹಿಸಿ ಪಾಲಿಸುವುದಾಗಿ ವಚನವಿತ್ತರು. ಮತ್ತು ತಾವಿತ್ತ ವಚನದಂತೆ ನಡೆದುಕೊಂಡರು.
ಪಂಚಾಕ್ಷರಿ ಗವಾಯಿಗಳು ಮೊದಲಿನಿಂದಲೂ ರಂಗಭೂಮಿಯೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡವರು, ನಾಟಕಗಳ ಬಗೆಗೆ ವಿಶೇಷ ಪ್ರೀತಿಯಿದ್ದವರು, ನಾಟಕಗಳ ಮೂಲಕವೇ ಹಿಂದುಸ್ತಾನಿ ಸಂಗೀತದ ಒಳತಿರುಳನ್ನು ಅರಿಯಲು ಪ್ರಯತ್ನಿಸಿದವರು. ಲಿಂಗದಳ್ಳಿಯಲ್ಲಿ ಗವಾಯಿಗಳ ಸಂಗೀತಶಾಲೆ ಬೀಡು ಬಿಟ್ಟಾಗ ನಾಟಕ ಕಂಪನಿಯೊಂದನ್ನು ಪ್ರಾರಂಭಿಸುವ ವಿಚಾರ ಸುಳಿಯಿತು. ಲಿಂಗದಳ್ಳಿಯ ಭಕ್ತರು. ಕಲಾಪ್ರೇಮಿಗಳು, ಎಲ್ಲ ಬಗೆಯ ಸಹಾಯವನ್ನೂ ನೀಡಲು ಸಿದ್ಧರಾದರು. ಇದಕ್ಕೆ ಹಾನಗಲ್ಲ ಕುಮಾರಸ್ವಾಮಿಗಳ ಕೃಪಾಶೀರ್ವಾದವೂ ದೊರೆಯಿತು. ಹೀಗೆ ಪಂಚಾಕ್ಷರಿಗವಯಿಗಳ ನೇತೃತ್ವದಲ್ಲಿ ‘ಶ್ರೀ ಮಳೇಮಲ್ಲೇಶ್ವರ ಸಂಗೀತ ನಾಟಕ ಮಂಡಳಿ’ ಉದಯಿಸಿತು.
ಪ್ರಾರಂಭದಲ್ಲಿ ನಾಟಕ ಕಂಪನಿಗೆ ಒಳ್ಳೆಯ ಉತ್ತೇಜನ ದೊರೆಯಿತು. ಆಗಿನ ನಾಟಕಗಳಲ್ಲಿ ಸಂಗೀತಕ್ಕೆ ಒಳ್ಳೆಯ ಮಹತ್ವವಿದ್ದುದರಿಂದ, ಗವಾಯಿಗಳ ಕಂಪನಿಯಲ್ಲಿ ಒಳ್ಳೆಯ ಸಂಗೀತಗಾರರಿದ್ದುದರಿಂದ ನಾಟಕಗಳು ಆರ್ಥಿಕವಾಗಿಯೂ ಯಶಸ್ವಿಯಾದುವು.ಗವಾಯಿಗಳ ಕಂಪನಿಯು ಡಾ.ಪುಟ್ಟರಾಜ ಗವಯಿಗಳು ರಚಿಸಿದ ನಾಟಕಗಳನ್ನೇ ಹೆಚ್ಚಾಗಿ ಆಡುತ್ತಿತ್ತು. ಗವಾಯಿಗಳ ಕಂಪನಿಯು ಅಧ್ಯಾತ್ಮಿಕ ಮಹತ್ವವುಳ್ಳ ನಾಟಕಗಳೆಡೆಗೆ ಹೆಚ್ಚಿನ ಮಹತ್ವ ನೀಡಿತು. ಗವಾಯಿಗಳ ಕಂಪನಿಯಲ್ಲಿ ಸ್ತ್ರೀಯರಿಗೆ ಅವಕಾಶವಿರಲಿಲ್ಲ, ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದರು. ಕಂಪನಿಗೆ ಪ್ರಾರಂಭದಲ್ಲಿ ಒಳ್ಳೆಯ ಆದಾಯ ಪ್ರಾಪ್ತವಾದರೂ ಕುರವತ್ತಿ ಕ್ಯಾಂಪಿನಲ್ಲಿರುವಾಗ ಪರಿಕರಗಳನ್ನು ಒತ್ತೆಯಿಡುವ ಪ್ರಸಂಗ ಬಂತು. ಬೇರೆ ಕಂಪನಿಗಳು ಭರ್ಜರಿ ಸೆಟ್ಟುಗಳೊಂದಿಗೆ ನಾಟಕಗಳನ್ನು ಪ್ರದರ್ಶಿಸುತ್ತಿರುವಾಗ ಅವುಗಳೆಡಗೆ ಜನತೆ ಆಕರ್ಷಿತವಾಗುವುದು ಸಾಮಾನ್ಯವಾಗಿತ್ತು. ಗವಾಯಿಗಳ ಕಂಪನಿಯಲ್ಲಿ ಅಭಿನಯ ಹಾಗೂ ಸಂಗೀತವೇ ಪ್ರಧಾನವಾದ ಕಾರಣದಿಂದ ಭರ್ಜರಿ ಸೆಟ್ಟುಗಳಿಗೆ ಮಹತ್ವವಿರಲಿಲ್ಲ. ಕಂಪನಿಗಾದ ನಷ್ಟವನ್ನು ಗವಾಯಿಗಳು ಸಂಗೀತ ಕಚೇರಿಗಳಲ್ಲಿ ಹಾಡಿ ತುಂಬಿಕೊಟ್ಟರು. ಒತ್ತೆಯಿಟ್ಟ ಪರಿಕರಗಳನ್ನು ಬಿಡಿಸಿಕೊಂಡರು. ಅಲ್ಲಿಂದ ಮುಂದೆ ಅವರು ನಾಟಕದ ಉಸಾಬರಿ ಸಾಕೆಂದು ಬಿಟ್ಟುಬಿಟ್ಟರು. ಮತ್ತೆ ತಮ್ಮ ಸಾಧನೆಯನ್ನು ಸಂಗೀತದಲ್ಲಿಯೇ ಕೇಂದ್ರೀಕರಿಸಿದರು.
ನರಗುಂದದ ನಾಗರಿಕರು ಗವಾಯಿಗಳಿಗೆ ಮತ್ತೊಮ್ಮೆ ನಾಟಕ ಕಂಪನಿಯನ್ನು ಸ್ಥಾಪಿಸುವಂತೆ ಒತ್ತಾಯಿಸತೊಡಗಿದರು. ಗವಾಯಿಗಳಿಗೆ ನಾಟಕ ಕಂಪನಿ ಸ್ಥಾಪಿಸುವ ಮನಸ್ಸು ಎಳ್ಳಷ್ಟೂ ಇರಲಿಲ್ಲ. ಆದರೆ, ನರಗುಂದದ ಜನರ ಒತ್ತಾಯಕ್ಕೆ ಅವರು ಮಣಿಯಲೇಬೇಕಾಯಿತು.ಈ ಕಂಪನಿಯ ಸ್ಥಾಪನೆಯಲ್ಲಿ ನರಗುಂದದ ನಾಗಭೂಷಣ ಶ್ರೀಗಳು ಮಹತ್ತರ ಪಾತ್ರವನ್ನು ವಹಿಸಿದರು. ಕಂಪನಿಯ ಮೊದಲ ನಾಟಕವಾಗಿ ಪುಟ್ಟರಾಜ ಗವಾಯಿಗಳು ಬರೆದ ‘ಶ್ರೀ ಸಿದ್ಧರಾಮೇಶ್ವರ’ ನಾಟಕವನ್ನು 1940ರ ವಿಜಯ ದಶಮಿಯಂದು ಪ್ರಯೋಗಿಸಲಾಯಿತು.
ಪಂಚಾಕ್ಷರಿಗವಾಯಿಗಳ ಕಂಪನಿಯಲ್ಲಿ ಗದಿಗೆಯ್ಯ ಬೀಳಗಿ, ಬಸವರಾಜ ರಾಜಗುರು, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ದೊಡ್ಡಬಸವಾರ್ಯ ಆರಿಬೆಂಚಿ, ಚೆನ್ನಬಸವಯ್ಯ ನರೇಗಲ್ ಮೊದಲಾದವರು ತಮ್ಮ ಸಮರ್ಥ ಅಭಿನಯ ಹಾಗೂ ಸುಮಧುರ ಸಂಗೀತದಿಂದ ನಾಟಕದ ಯಶಸ್ಸಿಗೆ ಕಾರಣರಾದರು. ಸ್ವತಃ ಪಂಚಾಕ್ಷರಿ ಗವಾಯಿಗಳು ತಬಲಾ ಹಾಗೂ ಪುಟ್ಟರಾಜ ಗವಾಯಿಗಳು ಹಾರ್ಮೋನಿಯಂ ನುಡಿಸಿ ಹೆಚ್ಚಿನ ಮೆರಗು ತುಂಬುತ್ತಿದ್ದರು. ನಾಟಕ ಎಷ್ಟು ಸೊಗಸಾಗಿತ್ತೆಂದರೆ, ಜನ ಮತ್ತೆ ಮತ್ತೆ ನಾಟಕ ನೋಡಿದರು. ನಾಟಕ ಕಂಪನಿಯಿಂದಾಗಿ ಗವಾಯಿಗಳು ಋಣ ಮುಕ್ತರಾದರು.
ಪಂಚಾಕ್ಷರಿ ಗವಾಯಿಗಳ ವಿದ್ವತ್ತನ್ನು ಮನ್ನಿಸಿ ಅನೇಕರು ಅವರಿಗೆ ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. ‘ಉಭಯಗಾನ ವಿಶಾರದ’ ಎಂಬುದು ಅವರ ಜನಪ್ರಿಯ ಬಿರುದು. ಈ ಬಿರುದನ್ನು ಹಾನಗಲ್ ಕುಮಾರಸ್ವಾಮಿಗಳೇ ಪಂಚಾಕ್ಷರಿ ಗವಾಯಿಗಳಿಗೆ ಕರುಣಿಸಿದರು. ಈ ಬಿರುದನ್ನು ದಯಪಾಲಿಸಿದ್ದರ ಹಿಂದೆ ಒಂದು ಕತೆಯಿದೆ. ಕೆಲವರು ಗವಯಗಳ ವಿಷಯದಲ್ಲಿ ವಿನಾಕಾರಣ ಮಾತ್ಸರ್ಯವನ್ನು ತಾಳಿದ್ದರು. ಅವರಿಗೆ ದೊರೆಯುತ್ತಿದ್ದ ಮನ್ನಣೆ, ಗೌರವಗಳನ್ನು ಕಂಡು ಸಹಿಸದ ಕೆಲವರು ಇಲ್ಲಸಲ್ಲದ ಟೀಕೆಗಳನ್ನು ಪ್ರಾರಂಭಿಸಿದರು.
ಇದನ್ನು ತೊಡೆಯುವುದಕ್ಕಾಗಿ ಹಾನಗಲ್ ಕುಮಾರಸ್ವಾಮಿಗಳು 1915ರಲ್ಲಿ ಒಂದು ಸಂಗೀತ ವಿದ್ವದ್ ಗೋಷ್ಠಿಯನ್ನು ಕರೆದರು. ಇದಕ್ಕಾಗಿ ನಾಡಿನ ಶ್ರೇಷ್ಠ ಸಂಗೀತಗಾರರೆಲ್ಲ ಆಮಂತ್ರಿತರಾದರು. ಮೂರುದಿನಗಳ ಕಾಲ ನಡೆದ ಈ ಗೋಷ್ಠಿಯಲ್ಲಿ ಸಂಗೀತದ ಅತ್ಯಂತ ಜಟಿಲ ವಿಷಯಗಳನ್ನು ಚರ್ಚಿಸಲಾಯಿತು. ಎಲ್ಲದಕ್ಕೂ ಗವಾಯಿಗಳು ಸಮರ್ಥ ಉತ್ತರಗಳನ್ನು ದಯಪಾಲಿಸಿದರು. ಗೋಷ್ಠಿಯ ಕೊನೆಗೆ ಗವಾಯಿಗಳು ಸಂಗೀತದ ಅತ್ಯಂತ ಕ್ಲಿಷ್ಟಕರ ರಾಗಗಳನ್ನು, ಸ್ವರಮಾಲಿಕೆಗಳನ್ನು ಮೂರುದಿನವೂ ಪ್ರಸ್ತುತ ಪಡಿಸಿದರು. ಗೋಷ್ಠಿಯ ಕೊನೆಗೆ ಎಲ್ಲರೂ ಗವಾಯಿಗಳ ಪಾಂಡಿತ್ಯವನ್ನು ಹೊಗಳಿದರು. ಮತ್ಸರ ಪಟ್ಟು ಅಪಪ್ರಚಾರ ಮಾಡುತ್ತಿದ್ದವರಿಗೆ ಮುಖಭಂಗವಾಯಿತು. ಇದೇ ಸಂದರ್ಭದಲ್ಲಿ ಅವರಿಗೆ ‘ ಉಭಯಗಾನ ವಿಶಾರದ’ ಎಂಬ ಬಿರುದನ್ನು ದಯಪಾಲಿಸಲಾಯಿತು. ‘ಸಂಗೀತ ರತ್ನ’, ‘ಸಂಗೀತ ಸಾಮ್ರಾಟ’, ‘ಗಾನಯೋಗಿ’ ಭೂ ಗಂಧರ್ವಚಂದ್ರ’ ಮೊದಲಾದ ಬಿರುದುಗಳಿಂದ ಗವಾಯಿಗಳು ಅಲಂಕೃತರಾದರು.
1929ರಲ್ಲಿ ವಿಜಾಪುರದ ಸಿದ್ದೇಶ್ವರ ಸಂಸ್ಥೆಯು ಗವಾಯಿಗಳಿಗೆ ‘ಗಾನಕಲಾನಿಧಿ’ ಎಂಬ ಬಿರುದನ್ನಿತ್ತು ಗೌರವಿಸಿತು. 1935ರಲ್ಲಿ ರಂಭಾಪುರಿ ಪೀಠಾಧೀಶ್ವರ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯರು ಸಂಗೀತ ಸಾಗರ’ ಎಂಬ ಬಿರುದನ್ನಿತ್ತು ಗೌರವಿಸಿದರು.1938ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಖಿಲಭಾರತ ವೀರೈವ ಮಹಾಸಮ್ಮೇಳನದಲ್ಲಿ ಗಾಯನಾಚಾರ್ಯ’ ಎಂಬ ಬಿರುದನ್ನಿತ್ತು ಗೌರವಿಸಲಾಯಿತು. 1939ರಲ್ಲಿ ಹೊಂಬಳದ ಜ್ಞಾನವರ್ಧಕ ವಾಚನಾಲಯ ಮಂಡಳಿಯು ಗವಾಯಿಗಳಿಗೆ ಸಂಗೀತ ಸುಧಾನಿಧಿ’ ಎಂಬ ಬಿರುದನ್ನಿತ್ತು ಗೌರವಿಸಿತು.
ಹೀಗೆ ಅನೇಕ ಮಾನಸಮ್ಮಾನಗಳನ್ನು ಪಡೆದ ಗವಾಯಿಗಳು ಸಂಗೀತ ಸಾಧನೆ ಮತ್ತು ಬೋಧನೆಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸಂಗೀತ ಅವರ ಜೀವನದ ಉಸಿರಾಗಿತ್ತು. ಈ ಪ್ರಸಂಗವನ್ನು ಗಮನಿಸಿ,ಗವಾಯಿಗಳಿಗೆ ನೆಚ್ಚಿನ ಕೆಲವು ವಸ್ತುಗಳಿದ್ದವು. ಅವುಗಳಲ್ಲಿ ದೊಡ್ಡ ಗಾತ್ರದ ತಾಮ್ರದ ತಂಬಿಗೆಯೂ ಒಂದು. ಅವರು ಸಂಚಾರ ದಲ್ಲಿದ್ದಾಗಲೂ ಕೂಡ ಅದವರ ಜೊತೆ ಇರಲೇ ಬೇಕಿತ್ತು. ಒಮ್ಮೆ ಯಾರದೋ ಅಚಾತುರ್ಯದಿಂದ ಈ ತಂಬಿಗೆ ಕಳೆದು ಹೋಯಿತು. ಗವಯಿಗಳು ತೀರ ಹಳಹಳಿಸಿದರು. ಅನೇಕ ವರ್ಷಗಳಿಂದ ಜೊತೆಗಿದ್ದ ತಂಬಿಗೆ ಇಲ್ಲವಾದುದು ಗವಾಯಿಗಳ ಮನಸ್ಸಿಗೆ ತೀವ್ರ ಬೇಸರವನ್ನುಂಟು ಮಾಡಿತು. ಗುರುಗಳ ಈ ಅವಸ್ಥೆಯನ್ನು ಕಂಡು ಶಿಷ್ಯರು ವಾರಪೂರ್ತಿ ಅದಕ್ಕಾಗಿ ಹುಡುಕಾಟ ನಡೆಸಿದರು. ತಂಬಿಗೆ ಪತ್ತೆಯಾಗಲಿಲ್ಲ. ಆದರೂ ಮನದ ಮೂಲೆಯೊಂದರಲ್ಲಿ ಅದಿಲ್ಲವೆಂಬ ಭಾವ ಮನೆಮಾಡಿಕೊಂಡೇ ಇತ್ತು.
ಕೆಲವು ದಿನಗಳ ತರುವಾಯ ಒಮ್ಮ ಗುರುಗಳು ತಮ್ಮ ಸಂಚಾರವನ್ನು ಮುಗಿಸಿಕೊಂಡು ಬರುವಾಗ ಇದ್ದಕ್ಕಿದ್ದ ಹಾಗೆ ಒಂದು ನಾದ ಅವರನ್ನು ತಡೆದು ನಿಲ್ಲಿಸಿತು. ಮತ್ತೊಮ್ಮೆ ಗಮನವಿಟ್ಟು ಆ ನಾದವನ್ನು ಆಲಿಸಿದರು. ಹೌದು ಅದು ತಮ್ಮ ತಂಬಿಗೆಯ ನಾದವೇ ಸಂಶಯವಿಲ್ಲ! ಕೂಡಲೇ ಶಿಷ್ಯರನ್ನು ಕರೆದು ಅದನ್ನು ತರುವಂತೆ ಹೇಳಿದರು. ಮನೆಯೊಂದರಲ್ಲಿ ಅಳುತ್ತಿದ್ದ ಮಗುವನ್ನು ರಮಿಸಲು ಓರ್ವ ಅಜ್ಜಿ ಗವಾಯಿಗಳ ತಂಬಿಗೆಯನ್ನು ಬಾರಿಸಿ ಆಟವಾಡಿಸುತ್ತಿದ್ದಳು. ಶಿಷ್ಯರು ಆ ತಂಬಿಗೆಯ ವಿಚಾರ ಹೇಳಲು ಅಜ್ಜಿ ಗವಾಯಿಗಳಲ್ಲಿಗೆ ಬಂದು ತಂಬಿಗೆಯನ್ನು ಒಪ್ಪಿಸಿ ಕ್ಷಮೆಯಾಚಿಸಿದಳು.
ಗವಾಯಿಗಳ ನಾದಗ್ರಹಣ ಶಕ್ತಿ ಇಷ್ಟೊಂದು ಸೂಕ್ಷ್ಮವಾಗಿತ್ತು.
ಸಂಗೀತವನ್ನೇ ಅವರು ಬದುಕಿದರು. ಬದುಕಿನ ಕೊನೆಯಕ್ಷಣದವರೆಗೂ ಸಂಗೀತಕ್ಕಾಗಿ ಅವರ ಜೀವನ ತುಡಿಯುತ್ತಲೇ ಇತ್ತು.1944ರಲ್ಲಿ ಮೃತ್ಯುಂಜಯ ಶ್ರೀಗಳ ಅಪ್ಪಣೆಯ ಮೇರೆಗೆ ಧಾರವಾಡ ಮುರುಘಾಮಠದಲ್ಲಿ ಶ್ರಾವಣ ಮಾಸದ ಸಂಗೀತ ಸೇವೆಯನ್ನು ಸಲ್ಲಿಸಿದರು. ಅಂದು ಮಿಯಾ ಮಲ್ದಾರ ರಾಗದಲ್ಲಿ ಕರೀಮ ನಾಮ ತೇರೋ’ ಬಡಾಖ್ಯಾಲ್ ಬಂದಿಶ್‌ನ್ನು ಹಾಗೂ ‘ಉಮಢಫುಮಢ ಘನ ಗರಜೆ’ ಬಂದಿಶ್ಯದಲ್ಲಿ ಛೋಟಾಖ್ಯಾಲ್‌ನ್ನು ಹಾಡಿದರು. ಅಲ್ಲಿಂದ ಬರುವಾಗ ಶ್ರೀಗಳಲ್ಲಿ ಅವರು ವಿನಂತಿಸಿ ಕೊಂಡರು ಈ ಜೀವನದಲ್ಲಿ ಇಷ್ಟು ಸಾಕು. ನನ್ನನ್ನು ತಮ್ಮ ಪಾದಗಳಲ್ಲಿ ಕರೆದುಕೊಳ್ಳಿ’ ಶ್ರೀಗಳು ಅವರ ಈ ಬೇಡಿಕೆಯಿಂದ ಗಂಭೀರರಾದರು ಮತ್ತು ಹೇಳಿದರು
‘ಗವಾಯಿಗಳೇ, ಕುಮಾರೇಶನ ಕರೆ ಇನ್ನೂ ಬಂದಿಲ್ಲ. ನೀವಿನ್ನೂ ಬಾಳಿ, ಸಂಗೀತವನ್ನು ಬೆಳಗಬೇಕಾದವರು
ಬಹುಶಃ ಅದೇ ಅವರ ಕೊನೆಯ ಸಂಗೀತ ಕಚೇರಿ,
ಗದುಗಿಗೆ ಬರುತ್ತಲೇ ನಾಟಕ ಕಂಪನಿಯೊಂದಿಗಿದ್ದ ಪುಟ್ಟರಾಜ ಗವಾಯಿಗಳನ್ನು ಕರೆಸಿದರು. ಅವರು ಬರುವುದರೊಳಗಾಗಿ ಮೃತ್ಯುಪತ್ರ ಸಿದ್ಧವಾಗಿತ್ತು. ವೀರೇಶ್ವರ ಪುಣ್ಯಾಶ್ರಮವನ್ನು ಪುಟ್ಟರಾಜ ಗವಾಯಿಗಳ ಹೆಸರಿಗೆ ವರ್ಗಾಯಿಸಿಯಾಗಿತ್ತು. ಎಲ್ಲವನ್ನೂ ಅವರಿಗೆ ತಿಳಿಸಿ ಹೇಳಿದರು.
ಗವಾಯಿಗಳು ತಮಗಿರುವ ಅನಾರೋಗ್ಯದಿಂದ ಹೊರಬರುವುದು ಸಾಧ್ಯವಿಲ್ಲವೆಂದು ನಿರ್ಧರಿಸಿದ್ದರು. ಡಾ.ಮುನ್ಶಿಯವರು ಶಸ್ತ್ರ ಚಿಕಿತ್ಸೆಯಾದರೆ ಗವಾಯಿಗಳು ಬದುಕುವರೆಂದರು. ಆದರೆ ಗವಾಯಿಗಳು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ತಮ್ಮ ಅವತಾರವನ್ನು ಸಮಾಪ್ತಿ ಮಾಡುವ ಸಂಕಲ್ಪ ಮಾಡಿಯಾಗಿತ್ತು. 1944, ಜೂನ್ 14ನೆಯ ದಿನ, ಪಂಚಾಕ್ಷರಿ ಗವಾಯಿಗಳು ಕುಮಾರೇಶ್ವರನಲ್ಲಿ ಲೀನವಾದರು.ಅವರ ಗಂಧರ್ವಗಾನ ಈಗಲೂ ವೀರೇಶ್ವರ ಪುಣ್ಯಾಶ್ರಮದಲ್ಲಿ ಕೇಳಿ ಬರುತ್ತಲೇ ಇದೆ!