ಆಕರ ಗ್ರಂಥ : ಶಿವಯೋಗಮಂದಿರ ಶತ ಸಂವತ್ಸರ ಸಂಪಾದಕರು ಡಾ. ಮೃತ್ಯುಂಜಯ ರುಮಾಲೆ
ಶಿವಯೋಗ ಶಾಖಾಮಂದಿರದಲ್ಲಿ ೧೯೧೪ರಲ್ಲಿ ಸ್ಥಾಪನೆಯಾದ ಸಂಗೀತಶಾಲೆಯು ಶಿವಯೋಗಮಂದಿರದ ಉದ್ದೇಶವನ್ನು ಮತ್ತು ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಆಶಯವನ್ನು ಪರಿಣಾಮಕಾರಿಯಾಗಿ ಪೂರೈಸಿದ ಅಂಗಸಂಸ್ಥೆಯಾಗಿದೆ. ಸಂಗೀತದಂಥ ಪ್ರಭಾವಪೂರಿತ ಅಂಶಗಳನ್ನುತನ್ನೊಂದಿಗಿರಿಸಿಕೊಂಡಿದ್ದ ಈ ಸಂಸ್ಥೆಯು ಲೋಕವಿಖ್ಯಾತವಾಗಿದ್ದು ಇದರ ಬಹುಮುಖ್ಯಶಕ್ತಿಯಾದರೆ ನಿಡಗುಂದಿಕೊಪ್ಪ ಶಾಖಾಮಠದಲ್ಲಿ ಸ್ಥಾಪನೆಯಾಗಿ, ಅಲ್ಲಿಯೇ ಸ್ಥಾಯಿಯಾಗಿ ಉಳಿಯದೇ ಸಂಚಾರಿಯಾಗಲು ಒಂದು ನೇತ್ಯಾತ್ಮಕ ಕಾರಣವೂ ಇದೆ. ಶಿವಯೋಗ, ಆಧ್ಯಾತ್ಮಸಾಧನೆ, ವಿರಕ್ತಿ, ತುಂಬು ವಿರ್ನಿಪ್ತತೆ, ಸಾಮುದಾಯಕ ತೊಡಗಿಸಿಕೊಳ್ಳುವಿಕೆಯಲ್ಲಿ ತೋರಿಸುವ ಸಮತೋಲನ- ‘ಇಂಥ ಅಂತರಂಗ ಸಾಧನೆಯ ಶಿವಯೋಗಮಂದಿರ ಕೇಂದ್ರದಲ್ಲಿ ವಿಲಾಸಿಗಳಿಗೆ ಪ್ರಿಯವಾದ ಸಂಗೀತದಂಥ ಅಭಿರುಚಿಯು ಎಂಬ ಅಭಿಪ್ರಾಯ ಮೂಡಿ ಬಂದಾಗ ಸಂಗೀತಶಾಲೆಯು ಸ್ಥಾಯಿಸಮಿತಿಯೊಂದನ್ನು ರಚಿಸಿಕೊಂಡು ಸಂಚಾರಿ ಸಂಗೀತಶಾಲೆಯನ್ನು ಪುನರ್ಸ್ಥಾಪಿಸಿಕೊಂಡಿತು.

ಗದಿಗೆಯ್ಯನು ತನ್ನ ಗುರುಗಳಾದ ಎಮ್ಮಿಗನೂರಮಠದ ಗದಿಗೆಯ್ಯನವರಿಂದ ಸಂಗೀತವನ್ನು ಕಲಿತು ಪಂಚಾಕ್ಷರಿ’ ನಾಮಕರಣಗೊಂಡು, ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ‘ಜೋಳಿಗೆ’ ಅಭಿವೃದ್ಧಿ ಕಂಡು ೧೯೦೮ ಬಾಗಲಕೋಟೆಯ ನಾಲ್ಕನೆಯ ಶ್ರೀ ಮದ್ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಪಾಲ್ಗೊಂಡು ‘ಗವಾಯಿ’ ಎಂಬ ಅಭಿಧಾನವನ್ನು ಹೊಂದಿ ಸಂಗೀತದ ಹೊಸಅಲೆಯನ್ನೇ ಹರಿಸಿದ ಕೀರ್ತಿ “ಪಂಚಾಕ್ಷರಿಗವಾಯಿ’ಗಳಿಗೆ ಸಲ್ಲುತ್ತದೆ. ೧೯೨೯ರಲ್ಲಿ ವಿಜಾಪುರ ಸಿದ್ದೇಶ್ವರ ಸಂಸ್ಥೆ ನೀಡಿದ ‘ಗಾನಕಲಾನಿಧಿ’, ೧೯೩೫ರಲ್ಲಿ ಬಾಳೇಹಳ್ಳಿಯ ರಂಭಾಪುರಿ ವೀರಸಿಂಹಾಸನ ಸಂಸ್ಥಾನದ ಜಗದ್ಗುರು ಶ್ರೀ ಶಿವಾನಂದ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ನೀಡಿದ ‘ಸಂಗೀತಸಾಗರ’, ೧೯೩೮ರಲ್ಲಿ ಎಸ್. ಎಸ್. ಬಸವನಾಳರ ಅಧ್ಯಕ್ಷತೆಯಲ್ಲಿ ನಡೆದ ಅಖಿಲಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಅವರಿಗೆ ಸಿಕ್ಕ ಗಾಯನಾಚಾರ್ಯ’, ಈ ಗೌರವ ಪುರಸ್ಕಾರಗಳು ಪಂಚಾಕ್ಷರಿ ಗವಾಯಿಗಳಿಗೆ ಲಭಿಸಿದ ಗೌರವಗಳಷ್ಟೇ ಅಲ್ಲ ; ಅವು ಕರ್ನಾಟಕ ಸಂಗೀತ ಚರಿತ್ರೆ ಹರಿದು ಬಂದ ಚಾರಿತ್ರಿಕ ಕಾಲಘಟ್ಟದ ಅಭಿಜ್ಞೆಗಳು ! ೧೯೪೪ರ ಜೂನ್ ೧೧ರಂದು ಲಿಂಗೈಕ್ಯರಾದ ಗವಾಯಿಗಳು ಜಾತ್ಯತೀತರಾಗಿ ಸಂಗೀತಜ್ಞಾನವುಂಟು ಮಾಡಿದ್ದು ಶಿವಯೋಗಮಂದಿರದ ಶ್ರೇಷ್ಠ ಉತ್ಪಾದನೆಗಳಲ್ಲಿ ಒಂದು ಎಂಬುದಕ್ಕೆ ನಿದರ್ಶನವಾಗಿದೆ.

ಸಂಗೀತಶಾಲೆಯ ಶಿಷ್ಯ ಬಳಗವೂ ಶ್ರೇಷ್ಟ ಮಟ್ಟದ್ದೇ ! ಪಂಚಾಕ್ಷರಿ ಗವಾಯಿಗಳ ಆಪ್ತ ಮತ್ತು ಪಟ್ಟದ ಶಿಷ್ಯರಲ್ಲಿ ಒಬ್ಬರಾದ ಪುಟ್ಟರಾಜ ಗವಾಯಿಗಳು ; ಅವರ ಸಂಗೀತ ಪರಂಪರೆಯನ್ನು ಗೌರವಾನ್ವಿತವಾಗಿಮುಂದುವರೆಸಿದವರು. ೩ ನೇ ಮಾಚ್ ೧೯೧೪ರಂದು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ದೇವಗಿರಿಯಲ್ಲಿ ಜನ್ಮ ತಾಳಿದ ಇವರು ಜನ್ಮಾಂಧರು. ತಮ್ಮ ಹತ್ತನೆಯ ವರ್ಷ ವಯಸ್ಸಿನಲ್ಲಿ ಶಿವಯೋಗಮಂದಿರ ಸಂಗೀತಶಾಲೆಯಲ್ಲಿ ಪ್ರವೇಶ ಪಡೆದು ತಮ್ಮ ಗುರುಗಳ ಕೃಪಾಪೋಷಣೆಯಲ್ಲಿ ಉತ್ತರಾದಿ, ದಕ್ಷಿಣಾದಿ ಸಂಗೀತ ವಿದ್ಯೆಗಳಲ್ಲಿ ನಿಷ್ಣಾತರಾದರು. ಪಂ. ರೇವಣಸಿದ್ದ ಶಾಸ್ತ್ರಿಗಳವರಿಂದ ಸಂಸ್ಕೃತ ಕಲಿತು ಸಾಹಿತ್ಯದಲ್ಲಿ ಪೂರ್ಣಪ್ರಮಾಣದಲ್ಲಿ ಆಸಕ್ತಿ ಹೊಂದಿದರು. ಪಂಚಕಾವ್ಯಗಳು, ಶಾಕುಂತಲಾದಿ ನಾಟಕಗಳು, ಮೊದಲಾದ ಸಾಹಿತ್ಯಕೃತಿಗಳು ಕಂಠಸ್ಥವಾಗಿದ್ದವು. ರಾಜಶೇಖರವಿಳಾಸ ಮೊದಲಾದ ಕಾವ್ಯಗಳನ್ನು ಓದಿಸಿ, ಕೇಳಿ ಮನನ ಮಾಡಿಕೊಂಡಿದ್ದರು. ಅವರ ಧಾರಣಶಕ್ತಿ ಅದ್ಭುತವಾದುದು. ಸಂಗೀತ ಸಾಹಿತ್ಯಗಳಲ್ಲದೆ ಕವಿತ್ವವನ್ನು ಹೊಂದಿದ್ದ ಇವರು ಪಂಚಾಕ್ಷರಿ ಗವಾಯಿಗಳ ನಿಜವಾರಸುದಾರರು.
ಗದಿಗೆಪ್ಪ ಗವಾಯಿಗಳ (ಕಮತಗಿ) – ಪಂಚಾಕ್ಷರ ಗವಾಯಿಗಳ ಪ್ರೀತಿಯ ಶಿಷ್ಯರು, ದಕ್ಷಿಣಾದಿ -ಉತ್ತರಾದಿ ಸಂಗೀತಗಳೆರಡನ್ನು ಸಾಧಿಸಿದವರು. ಸ್ಥಾನಿಕ ಸಂಗೀತ ಶಾಲೆಯಲ್ಲಿದ್ದು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ತಮ್ಮ ಗುರುಗಳ ಕೃಪಾಶ್ರಯದಲ್ಲಿದ್ದು ಸಂಗೀತಕಲೆಯ ಪ್ರಸಾರಕ್ಕಾಗಿ ನಿರಪೇಕ್ಷರಾಗಿ ದುಡಿದ ಆದರ್ಶಸಂಗೀತಶಿಕ್ಷಕರು.
ಬಂಕಾಪುರದ ಶಂಕರರಾವ್ ದೀಕ್ಷಿತ – ತಮ್ಮ ಗುರುಗಳಿಂದ ದಕ್ಷಿಣಾದಿ ಉತ್ತರಾದಿ ಸಂಗೀತ ಶಿಕ್ಷಣ ಪಡೆದು ಆಕಾಶವಾಣಿ ಕಲಾವಿದರಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿ, ಸಂಗೀತ ಕಲಾರಾಧನೆಯನ್ನು ಮಾಡಿ ಗುರುವಿಗೂ ಮಂದಿರಕ್ಕೂ ಕೀರ್ತಿ ತಂದವರು.
ಹಾಲಗಿ ಮರುಳ ಸದಾಶಿವಯ್ಯ – ಪಿಟೀಲು ವಾದಕರೂ ಕವಿಗಳೂ ಆಗಿದ್ದ ಇವರು ‘ಶಿವಯೋಗ ಮಂದಿರ’ ಕುರಿತು ‘ವರಮಠಾಧೀಶ’ ಮುದ್ರಿಕೆಯಲ್ಲಿ ಭಜನೆ ಪದಗಳನ್ನು ರಚಿಸಿದ್ದರು.ಹಾವೇರಿಯ ಹುಕ್ಕೇರಿ ಮಠದಲ್ಲಿ ಸಂಗೀತ ಶಿಕ್ಷಕರಾಗಿದ್ದರು.
ಲಕಮಾಪುರದ ಜಯದೇವ ಗವಾಯಿಗಳು ಹಿರೇಮಠ ಒಂಭತ್ತು ವರ್ಷಗಳವರೆಗೆ (೧೯೧೫-೧೯೨೪) ಶಿವಯೋಗಮಂದಿರ ಸಂಗೀತಶಾಲೆಯಲ್ಲಿ ತಮ್ಮ ಗುರುಗಳಿಂದ ದಕ್ಷಿಣಾದಿ ಸಂಗೀತದಲ್ಲಿ ನೈಪುಣ್ಯಹೊಂದಿದ್ದರು. ವೀಣೆ, ಸಿತಾರ, ಪಿಟೀಲು, ಜಲತರಂಗ ಮೊದಲಾದ ವಾದ್ಯಗಳಲ್ಲಿಪರಿಣಿತರಾಗಿದ್ದ ಇವರು ಕೆಲವು ವರ್ಷ ಬ್ಯಾಡಗಿಯಲ್ಲಿಯೂ ನಂತರ ಹಾವೇರಿಯಲ್ಲಿಯೂ ಸಂಗೀತ ಶಿಕ್ಷಕರಾಗಿ ನೂರಾರು ಜನ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿದ್ದರು. ಇವರ ಶಿಷ್ಯರಾಗಿದ್ದ ಗುರುಶಾಂತಯ್ಯ ಗವಾಯಿಗಳು ಮೈಸೂರಿನಲ್ಲಿ ಆಸ್ಥಾನ ಸಂಗೀತ ಕಛೇರಿ ನಡೆಸಿ ಬಹುಮಾನಿತರಾಗಿದ್ದರು. ೧೯೩೬ ರಿಂದ ೧೯೫೬ರ ವರೆಗೆ ದಾವಣಗೆರೆಯಲ್ಲಿ ಶಾರದಾ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಸಂಗೀತ ವಿದ್ಯಾದಾನವನ್ನು ಮುಂದುವರೆಸಿದರು.

ಮರೋಳ ಹಿರೇಮಠದ ಸದಾಶಿವಾಚಾರ್ಯ ಗವಾಯಿಗಳು – ಪಂಚಾಕ್ಷರಿ ಗವಾಯಿಗಳವರಲ್ಲಿಹತ್ತು ವರ್ಷ ಸಂಗೀತಾಭ್ಯಾಸ ಕೈಗೊಂಡು ಸಂಗೀತಕಲೆಯನ್ನು ಸಾಧಿಸಿದವರು. ತಮ್ಮ ಗುರುಗಳಿಂದ ‘ಗಾಯನಕುಶಲ’ ರೆಂಬ ಪ್ರಶಸ್ತಿಗೆ ಪಾತ್ರರಾಗಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಅಖಿಲಭಾರತ ವೀರಶೈವ ಮಹಾಸಭೆಯಲ್ಲಿ ಮನ್ನಣೆ, ಎಡೆಹಳ್ಳಿಯ ಮಲ್ಲಪ್ಪ ದೇಸಾಯ ಮತ್ತು ಸೊನ್ನದ ದೇಸಾಯಿಯವರ ಮನೆಗಳಲ್ಲಿ ಸಂಗೀತ ಗೋಷ್ಠಿ ನಡೆಸಿದ್ದು ಪ್ರಮುಖ ಘಟನೆಗಳು, ಶಿರಿಯಾಳಕೊಪ್ಪದಲ್ಲಿ ಸಂಗೀತಶಾಲೆ ಸಂಗೀತ ಶಾಲೆಯ ಬಳಗ ಸ್ಥಾಪಿಸಿ, ಉತ್ತರಾದಿ-ದಕ್ಷಿಣಾದಿ ಸಂಗೀತ ಶಾಸ್ತ್ರಿಗಳನ್ನು ಶೋಧಿಸಿ ವಿಷ್ಣು ನಾರಾಯಣ, ಭಾತಖಂಡೆ ಮತ್ತು ನಾರದಮುನಿ ‘ಸ್ವರಪ್ರಸ್ತಾರಸಾಗರ’ ಮುಂತಾದ ಗ್ರಂಥಗಳ ಸಾರವನ್ನು ಕುರಿತ ಕನ್ನಡದಲ್ಲಿ ಸಂಗ್ರಹ ಕೃತಿರಚಿಸಿದ್ದರು.
ಆನ್ನದಾನಯ್ಯಸ್ವಾಮಿ ಹಿರೇಮಠ – ತಮ್ಮ ಗುರುಗಳಿಂದ ಕರ್ನಾಟಕೀ ಸಂಗೀತವನ್ನು ಕಲಿತವರು ಸಾಹಿತ್ಯ ಮತ್ತು ಕೀರ್ತನೆಗಳಲ್ಲಿ ನೈಪುಣ್ಯ ಪಡೆದಿದ್ದ ಇವರು ಗದಗಿನ ‘ವೀರಶೈವ ಪುಣ್ಯಾಶ್ರಮ ಸಂಗೀತ ವಿದ್ಯಾಲಯ’ದ ವ್ಯವಸ್ಥಾಪಕರಾಗಿ ಪುಟ್ಟರಾಜಗವಾಯಿಗಳವರಿಗೆ ನೆರವಾಗಿದ್ದರು. ಗವಾಯಿಗಳ ನಾಟಕ ಮಂಡಳಿಯನ್ನು ದಕ್ಷತೆಯಿಂದ ನಡೆಯಿಸಿಕೊಂಡು ಬಂದಿದ್ದರು.
ಹುಬ್ಬಳ್ಳಿಯ ಶಿವಲಿಂಗಯ್ಯ ಗವಾಯಿಗಳು – ಪಂಚಾಕ್ಷರಿ ಗವಾಯಿಗಳಲ್ಲಿ ದಕ್ಷಿಣಾದಿ ಸಂಗೀತವನ್ನುಅಭ್ಯಾಸ ಮಾಡಿದ್ದು, ಇವರು ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರಮಠದ ಸಂಗೀತವಿದ್ಯಾಲಯದಲ್ಲಿಕೆಲವು ವರ್ಷ ಸಂಗೀತ ಅಧ್ಯಾಪಕರಾಗಿದ್ದರು. ಶಿವಶರಣರ ವಚನಗಳಿಗೆ ರಾಗ ಪ್ರಸ್ತಾರ ಹಾಕಿ ಸುಕುಮಾರ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.
ರುದ್ರಪ್ಪ ಗವಾಯಿ ಕುರ್ತುಕೋಟಿ ಪಂಚಾಕ್ಷರಿ ಗವಾಯಿಗಳಿಂದ ಕರ್ನಾಟಕ ಸಂಗೀತಾಭ್ಯಾಸ ಮಾಡಿ ನಿಪುಣರಾಗಿದ್ದರು. ಶಿವಯೋಗಮಂದಿರಕ್ಕೆ ಸಂಬಂಧಿಸಿದಂತೆ ಭಜನೆ, ಲಾವಣಿಗಳನ್ನು ರಚಿಸಿ,ಮಂದಿರದ ಜಾತ್ರೆಯಲ್ಲಿ ಕ್ರಿಯಾಶೀಲರಾಗಿರುತ್ತಿದ್ದರು.
ಬಸವರಾಜ ರಾಜಗುರು ಪಂಚಾಕ್ಷರ ಗವಾಯಿಗಳ ಮತ್ತೊಬ್ಬ ಪರಮಾಪ್ತ ಶಿಷ್ಯ.ಆನುವಂಶಿಕವಾಗಿದ್ದ ಸಂಗೀತಕಲೆಯನ್ನು ವಿಕಾಸಗೊಳಿಸಲೆಂದು ಎಳೆಯ ವಯಸ್ಸಿನಲ್ಲಿಯೇ ತಂದೆಯ ಪ್ರೇರಣೆಯಂತೆ ಶಿವಯೋಗಮಂದಿರದ ಸಂಗೀತಶಾಲೆಯಲ್ಲಿ ಪ್ರವೇಶ ಪಡೆದು ಪಂಚಾಕ್ಷರ ಗವಾಯಿಗಳ ನೆಚ್ಚಿನ ಶಿಷ್ಯರಾದರು. ಹನ್ನೆರಡು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿ ಮೊದಲು ದಕ್ಷಿಣಾದಿಯಲ್ಲಿಆನಂತರ ಉತ್ತರಾದಿಯಲ್ಲಿ ಅಧಿಕಾರ ಪಡೆದರು. ‘ಗಾಯನಕೋಕಿಲ’, ‘ಸಂಗೀತಸುಧಾರಕ’, ‘ಸಂಗೀತ ರತ್ನ’ ಇವರಿಗೆ ಲಭಿಸಿದ ಪ್ರಮುಖ ಪುರಸ್ಕಾರಗಳು.
ಹಾವೇರಿಯ ಮೃತ್ಯುಂಜಯ ಪುರಾಣಿಕಮಠ- ಗುರುಗಳಲ್ಲಿ ಹನ್ನೆರಡು ವರ್ಷಗಳ ಕಾಲ ಉತ್ತರಾದಿ ಸಂಗೀತಶಿಕ್ಷಣ ಪಡೆದು ನಿಷ್ಣಾತರಾದರು. ಹಾವೇರಿಯಲ್ಲಿ ಸಂಗೀತಶಾಲೆ ಆರಂಭಿಸಿ, ಶರಣರ ವಚನಗಳನ್ನುಸಂಗೀತಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದರು.
ಬಸವರಾಜ ಪುರಾಣಿಕ – ಗುರುಗಳಲ್ಲಿ ಹತ್ತು ವರ್ಷಗಳ ಸಂಗೀತಾಭ್ಯಾಸ, ಗುರುಬಸವಾರ್ಯಹಿರೇಮಠ – ೧೯೨೦ ರಿಂದ ೧೯೩೦ ರ ವರೆಗೆ ಪಂಚಾಕ್ಷರ ಗವಾಯಿಗಳಲ್ಲಿ ಉತ್ತರಾದಿ ಸಂಗೀತಾಭ್ಯಾಸ.ಗ್ವಾಲಿಯರ್ ಫರಾಣೆಯ ನೀಲಕಂಠ ಬುವಾ ಅವರಲ್ಲಿ ಶಿಕ್ಷಣ ಪಡೆದು ಭಾರತದ ಪ್ರಮುಖ ಪಟ್ಟಣಗಳಲ್ಲಿಸಂಗೀತ ಕಛೇರಿಗಳನ್ನು ನಡೆಸಿ ‘ಸಂಗೀತ ರತ್ನ’, ‘ಸಂಗೀತ ವಿಶಾರದ’ ಪುರಸ್ಕಾರ ಪಡೆದರು. ಇವರೂ ಶರಣರ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದೂ ಅಲ್ಲದೇ ಉತ್ತರಾದಿ ಸಂಗೀತದಲ್ಲಿ ಜನಪ್ರಿಯ ಅನೇಕ ರಾಗಗಳನ್ನು ಸಂಗೀತ ವಿದ್ಯೆ’ ಕೃತಿ ರಚಿಸಿ ನಿರೂಪಿಸಿದ್ದಾರೆ.
ಸಿದ್ದರಾಮ ಜಂಬಲದಿನ್ನಿ ಪಂಚಾಕ್ಷರ ಗವಾಯಿಗಳಲ್ಲಿ ಎಂಟು ವರ್ಷ ಸಂಗೀತಾಭ್ಯಾಸ ಮಾಡಿದವರು. ಹಲವು ವರ್ಷ ಅಲ್ಲಿಯೇ ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದವರು. ತಬಲಾ ಹಾರ್ಮೋನಿಯಂ ವಾದ್ಯಗಳಲ್ಲಿ ನಿಪುಣರಾಗಿದ್ದ ಇವರು ನಿಜಗುಣಶಿವಯೋಗಿಗಳ, ಶರೀಫರ ತತ್ತ್ವಪದಗಳನ್ನು ವಚನಗಳನ್ನು ಗಾಯನ ಮಾಡುವುದರಲ್ಲಿ ನಿಷ್ಣಾತರಾಗಿದ್ದರು. ಚಿತ್ತರಗಿ ಗಂಗಾಧರ ಶಾಸ್ತ್ರಿಗಳು – “ಕೀರ್ತನಾಚಾರ್ಯ’ ವಿಶೇಷಣದಲ್ಲಿಯೇ ಗುರುತಿಸಲ್ಪಡುತ್ತಿದ್ದ ಕನ್ನಡಭಾಷೆಗಳಲ್ಲಿ ಅಭ್ಯಾಸ ಮಾಡಿ, ಪಂಚಾಕ್ಷರಿ ಗವಾಯಿಗಳವರಲ್ಲಿ ಶಿಷ್ಯತ್ವ ಪಡೆದು ಉತ್ತರಾದಿ ಸಂಗೀತವನ್ನು ಸಾಹಿತ್ಯವನ್ನು ಪಡೆದ ಕೀರ್ತನ-ಪುರಾಣ- ಪ್ರವಚನಗಳಲ್ಲಿ ನೈಪುಣ್ಯ ಸಂಪಾದಿಸಿದರು.
ಚಿತ್ತರಗಿಯ ಮುಪ್ಪಯ್ಯಸ್ವಾಮಿ-ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರವೇ ಪಂಚಾಕ್ಷರ ಗವಾಯಿಗಳಲ್ಲಿ ಉತ್ತರಾದಿ ಸಂಗೀತಾಭ್ಯಾಸಕ್ಕೆ ಸೇರಿಕೊಂಡ ಕಲಾವಂತರು. ‘ಶ್ರೀ ಕುಮಾರ ವಿಜಯ ನಾಟ್ಯ ಸಂಘ’ ದಲ್ಲಿ ಬಲಗೈಯಂತೇ ಇದ್ದವರು.
ಹಾವೇರಿಯ ಚಂದ್ರಶೇಖರಸ್ವಾಮಿ ಪುರಾಣಿಕಮಠ – ಎಂಟು ವರ್ಷ ಶಿವಯೋಗಮಂದಿರದ ಸಂಗೀತಶಾಲೆಯಲ್ಲಿ ಅಭ್ಯಾಸ ಮಾಡಿದ್ದ ಇವರು, ಇಂಪಾದ ಕಂಠಕ್ಕೆ ಅನುರೂಪವಾದ ಶಾಸ್ತ್ರಾಭ್ಯಾಸ ಮಾಡಿದವರು.ಭೈರಾಪುರದ ರುದ್ರಮುನಿ ಸಾಲಿಮಠ ಮಂದಿರದ ಪಾಠಶಾಲೆಯಲ್ಲಿ ಉತ್ತರಾದಿ ಶಾಸ್ತ್ರೀಯ ಸಂಗೀತವನ್ನು ಕಲಿತವರು. ಹಾರ್ಮೋನಿಯಂ, ಪಿಟೀಲು ವಾದ್ಯಗಳಲ್ಲಿ ನೈಪುಣ್ಯ ಪಡೆದವರು. ಗಮಕ ಕಲೆಯಲ್ಲಿ ನಿಷ್ಣಾತರಾಗಿದ್ದ ಇವರು, ವಚನಗಳಲ್ಲಿ ಭಾವಗೀತೆಗಳ ಧಾಟಿಯಲ್ಲಿ ಪ್ರಯೋಗಾತ್ಮಕವಾಗಿ ಹಾಡಿ ಹೆಸರು ಮಾಡಿದ್ದರು.
ಜಾಲಿಬೆಂಚಿಯ ದೊಡ್ಡಬಸವಾರ್ಯ ೧೯೩೮ ರಿಂದ ೧೯೪೮ ವರೆಗೆ ಪಂಚಾಕ್ಷರ ಗವಾಯಿಗಳವರಲ್ಲಿ ಶಾಸ್ತ್ರೀಯ ಹಿಂದೂಸ್ಥಾನಿ ಸಂಗೀತ ಶಿಕ್ಷಣ ಪಡೆದವರು. ಮಧುರ ಕಂಠದ ಇವರು ಪ್ರಸಿದ್ಧ ಪಿಟೀಲು ವಾದಕರು ; ವಚನಗಾಯನದಲ್ಲಿ ಹೆಸರು ಮಾಡಿದ್ದ ಇವರು, ಬಾಗಲಕೋಟೆಯ ‘ಶಾರದಾ ಸಂಗೀತವಿದ್ಯಾಲಯ ಸಂಚಾಲಕರು ಗಂಗಾಧರ ಸ್ವಾಮಿಗವಾಯಿ ಜುಕ್ತಿಮಠ ಪಂಚಾಕ್ಷರ ಗವಾಯಿಗಳಿಂದ ಉತ್ತರಾದಿಸಂಗೀತವನ್ನು ಅಭ್ಯಾಸ ಮಾಡಿ, ವಿಜಾಪುರದ ಬಾಲಕಿಯರ ಸರಕಾರಿ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು. ಉತ್ಸಾಹಿ ಕಾರ್ಯಕರ್ತರು ಆಗಿದ್ದ ಇವರು ‘ಕರ್ನಾಟಕ ಪ್ರಾದೇಶಿಕ ಸಂಗೀತ ಸೇವಾಸಮಿತಿ’ ಸಂಸ್ಥೆಯ ಸಂಚಾಲಕರಾಗಿ ಕೆಲವು ಯೋಜನಾಬದ್ಧ ಕಾರ್ಯಗಳನ್ನು ಮಾಡಿದರು.
ದೇವಗಿರಿಯ ಶಿವಮೂರ್ತಿ ಶಾಸ್ತ್ರಿಗಳು ಪಂಚಾಕ್ಷರ ಗವಾಯಿಗಳಿಂದ ಉತ್ತರಾದಿ ಗಾಯನ ಸಂಗೀತ ಮತ್ತು ಹಾರ್ಮೋನಿಯಂ ವಾದನ ಸಂಗೀತದಲ್ಲಿ ಸಾಧನೆ ಮಾಡಿದರು. ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಘ’ ದಲ್ಲಿ ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.
ಮುರುಡಯ್ಯಸ್ವಾಮಿ ಗವಾಯಿ ಹಿರೇಮಠ ಗಾಯನ, ಹಾರ್ಮೋನಿಯಂ, ನಾಟ್ಯಕಲೆಯಲ್ಲಿಯೂ, ಬಸವಲಿಂಗಪ್ಪ ಗವಾಯಿ ಹೂಗಾರ – ಸಂಗೀತ ವಾದ್ಯಗಳಲ್ಲಿ ನೈಪುಣ್ಯ ಪಡೆದಿದ್ದರು.
ಆರ್. ವಿ. ಶೇಷಾದ್ರಿ ಗವಾಯಿಗಳು – ೧೯೪೦ ರಿಂದ ಪಂಚಾಕ್ಷರ ಗವಾಯಿಗಳ ಶಿಷ್ಯರಾಗಿದ್ದಇವರು, ಹಾರ್ಮೊನಿಯಂ, ತಬಲಾ, ಗಾಯನ ಕಲೆಗಳಲ್ಲಿ ಹೆಸರು ಮಾಡಿದ್ದರು. ಮೈಸೂರು, ಬೆಂಗಳೂರು ಭಾಗಗಳಲ್ಲಿ ವಚನ ಗಾಯನ ಕಲೆಗಳಲ್ಲಿ ಹೆಸರು ಮಾಡಿದ್ದರು. ಮೈಸೂರು, ಬೆಂಗಳೂರು ಭಾಗಗಳಲ್ಲಿ ವಚನ ಗಾಯನ ಪ್ರಚಾರಮಾಡಿದ್ದರು. ಬೆಂಗಳೂರು ನಗರದಲ್ಲಿ ತಮ್ಮ ಗುರುಗಳಾದ ‘ಪಂಚಾಕ್ಷರ ಗವಾಯಿಗಳವರ ಕೃಪಾಪೋಷಿತ ಶ್ರೀ ಅರವಿಂದ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿ ಸಂಗೀತ ವಿದ್ಯೆಯ ಪ್ರಚಾರವನ್ನು ಕೈಗೊಂಡರು. ‘ಗಾಯನಗಂಗಾ’ ಎಂಬ ದ್ವೈ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿ ಅದರ ಮುಖಾಂತರ ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ವಿದ್ಯೆಯ ಬಗ್ಗೆ ಅಭಿರುಚಿಯುಂಟಾಗುವಂತೆ ಮಾಡಿದ್ದರು.
ರಂಗಪ್ಪ ಮಾಸ್ತರ ಗುಡೂರು ಪಂಚಾಕ್ಷರ ಗವಾಯಿಗಳಲ್ಲಿ ಒಂಭತ್ತು ವರ್ಷಗಳವರೆಗೆ (೧೯೩೫-೧೯೪೪) ಶಿಕ್ಷಣ ಪಡೆದು ಶಹನಾಯಿ, ಕೊಳಲು, ಸುಂದರಿ, ಕ್ಲಾರೋನೆಟ್, ಹಾರ್ಮೋನಿಯಂ ಮತ್ತು ತಬಲಾ ವಾದ್ಯಗಳಲ್ಲಿ ನಿಪುಣತೆಯನ್ನು ಸಂಪಾದಿಸಿದರು. ಅವರ ಶಿಷ್ಯರಾದ ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ನಾಡಿನಾದ್ಯಂತ ಸಂಚರಿಸಿ ಅನೇಕ ಕಲಾಪ್ರೇಮಿಗಳಿಂದ ಪ್ರಶಸ್ತಿಸಂಪಾದಿಸಿದರು. ಗುಡೂರಿನಲ್ಲಿ (ಹುನಗುಂದ ತಾಲೂಕು) ಸಂಗೀತಶಾಲೆಯನ್ನು ಸ್ಥಾಪಿಸಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಉದ್ದೇಶವನ್ನು ಮುಂದುವರೆಸಿದರು.
ಮಲ್ಕಾಪುರದ ದೊಡ್ಡಬಸವಾರ್ಯಗವಾಯಿಗಳು ಪಂಚಾಕ್ಷರ ಗವಾಯಿಗಳಲ್ಲಿ ಒಂಭತ್ತುವರ್ಷಗಳವರೆಗೆ ಸಂಗೀತ ಶಿಕ್ಷಣ ಪಡೆದ ಇವರು ಪುಟ್ಟರಾಜ ಗವಾಯಿಗಳಿಂದ ಹಾರ್ಮೋನಿಯಂ ಮತ್ತು ತಬಲಾ ವಾದ್ಯಗಳ ಅಭ್ಯಾಸ ಮಾಡಿದರು. ಆದವಾನಿ ಪ್ರಾಂತದಲ್ಲಿ ಸಂಗೀತ ಪ್ರಚಾರ ಮಾಡಿದರು.
ಪಂಚಾಕ್ಷರಸ್ವಾಮಿ ಪಂಚಾಕ್ಷರ ಮಠ ಮತ್ತಿಗಟ್ಟಿ – ಸಂಗೀತ ವಾತಾರಣದಲ್ಲಿಯೇ ಹುಟ್ಟಿ ಬೆಳೆದ ಇವರು ತಂದೆ ಮತ್ತು ಚಿಕ್ಕಪ್ಪಂದಿರ ಪ್ರೇರಣೆಯಿಂದ ೧೯೩೮ ರಿಂದ ಪಂಚಾಕ್ಷರ ಗವಾಯಿಗಳವರ ಆಶ್ರಯ ಪಡೆದರು. ಏಕನಿಷ್ಠೆ ಸತತ ಪರಿಶ್ರಮಗಳಿಗೆ ಹೆಸರು ಮಾಡಿದ್ದ ಇವರು ಪುಟ್ಟರಾಜ ಗವಾಯಿಗಳಲ್ಲಿಯೂ ಏಳು ವರ್ಷಗಳವರೆಗೆ ಉತ್ತರಾದಿ ಸಂಗೀತ ಅಭ್ಯಾಸ ಮಾಡಿ, ಗುರುಗಳ ಅಪ್ಪಣೆಯಂತೆ ಸಂಗೀತ ಶಾಲೆಯ ಶಿಕ್ಷಕರಾಗಿದ್ದರು.
ಪ್ರಭಯ್ಯ ಅಡಿವೆಯ್ಯ ಸಾಲಿಮಠ, ದಾಟನಾಳ ೧೯೩೮ ರಿಂದ ಪಂಚಾಕ್ಷರ ಗವಾಯಿಗಳಲ್ಲಿ ಉತ್ತರಾದಿ ಸಂಗೀತವನ್ನು ಅಭ್ಯಾಸಿಸಿದ ಇವರು, ಪುಣೆಯ ‘ಅಖಿಲಭಾರತ ಗಾಂಧರ್ವ ಮಹಾಮಂಡಲದ “ಸಂಗೀತ ವಿಶಾರದ’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.
ಕರಿಯಪ್ಪ ಶಿವಪ್ಪ ಮಲ್ಲಾಪುರ ಇವರು ತಮ್ಮ ಹದಿನೇಳನೆಯ ವಯಸ್ಸಿನಲ್ಲಿಯೇ ಪಂಚಾಕ್ಷರ ಗವಾಯಿಗಳ ಶಿಷ್ಯತ್ವವನ್ನು ಪಡೆದು ತಮ್ಮ ತಾತನ ಚರ್ಮವಾದ್ಯದ ಪರಿಣತಿಯಲ್ಲಿ ನಿಪುಣರಾದರು. ಅನುವಂಶಿಕ ಸಂಸ್ಕಾರದ ಜೊತೆಗೆ ಗವಾಯಿಗಳ ಶಿಕ್ಷಣವೂ ಗಟ್ಟಿಗೊಳಿಸಿದ್ದರ ಪರಿಣಾಮವಾಗಿ ಕಾಶಿಯಲ್ಲಿ ಭಾರತದ ಸುಪ್ರಸಿದ್ಧ ತಬಲಾವಾದಕರಾಗಿದ್ದ ಅನೋಖಿಲಾಲ್ ಅವರಲ್ಲಿ ನಾಲ್ಕು ವರ್ಷ ವಾದನಕಲೆಯನ್ನು ಸುಧಾರಿಸಿಕೊಂಡರು.
ಕೊಟ್ಟೂರುಸ್ವಾಮಿ ಗವಾಯಿಗಳು, ಚಿಗಟೇರಿ-ಗವಾಯಿಗಳಲ್ಲಿ ಹತ್ತುವರ್ಷ ಗಾಯನ, ವಾದ್ಯ,ಜ್ಯೋತಿಷ್ಯವನ್ನು ಕುರಿತು, ‘ಪಂಚಾಕ್ಷರ ಸಂಗೀತ ವಿದ್ಯಾಲಯ ಸ್ಥಾಪನೆ ಬಳ್ಳಾರಿ ಭಾಗದಲ್ಲಿ ಸಂಗೀತದ ಅಭಿರುಚಿಯನ್ನುಂಟು ಮಾಡಿದರು.
ಸಿದ್ದೇಶಕುಮಾರ ತೆಲಗಿ-ಪಂಚಾಕ್ಷರ ಗವಾಯಿಗಳ ಪ್ರತಿಭಾವಂತ ಶಿಷ್ಯರಲ್ಲಿ ಒಬ್ಬರಾದ ಇವರು ತಮ್ಮ ಗುರುಗಳಲ್ಲಿ ಹತ್ತುವರ್ಷಗಳ ನಿರಂತರ ಈ ವಿದ್ಯೆಯ ಸಾಧನೆ ಮಾಡಿದ್ದರು. ಬಿ. ಮರಿಯಪ್ಪ,ರೋಣ-ಪ್ರಸಿದ್ಧ ಭಜಂತ್ರಿ ಮನೆತನದ ಇವರು, ತಮ್ಮ ಆನುವಂಶಿಕಕಲೆಯನ್ನು ಅಳವಡಿಸಿಕೊಂಡಿದ್ದರು. ಗವಾಯಿಗಳಲ್ಲಿ ಶಹನಾಯಿ, ಕೊಳಲು ವಾದ್ಯಗಳಲ್ಲಿ ಪರಿಣತಿಯಿತ್ತು ಪಂಚಾಕ್ಷರ ಗವಾಯಿಗಳ ನಿತ್ಯದ ಬೆಳಗಿನ ಶಿವಪೂಜೆಯ ವೇಳೆಯಲ್ಲಿ ಶಹನಾಯಿ, ಕೊಳಲುಗಳನ್ನು ಇಂಪಾಗಿಯೇ ನುಡಿಸುತ್ತಿದ್ದರು. ಗುರುವಿನ ಅನುಗ್ರಹವಾಗಿ ಸಾಕಷ್ಟು ಪಾಂಡಿತ್ಯ ಮತ್ತು ಕಲೆಯನ್ನು ಸಂಪಾದಿಸಿದ್ದರು. ಕೆಲವು ವರ್ಷಗಳ ಕಾಲ ಗುರುಗಳ ಸಂಗೀತ ವಿದ್ಯಾಲಯದಲ್ಲಿಯೆ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.
ಸಿದ್ದರಾಮಸ್ವಾಮಿ ಕೊರವಾರ-ಪಂಚಾಕ್ಷರ ಗವಾಯಿಗಳ ಕೃಪೆಯಲ್ಲಿಯೇ ಬೆಳೆದವರು ತಮ್ಮದೈವದತ್ತವಾದ ಪ್ರತಿಭೆಯನ್ನು ಪುಟ್ಟರಾಜ ಗವಾಯಿಗಳ ತಾರುಣ್ಯದಲ್ಲಿ ಮತ್ತಷ್ಟ ಸುಧಾರಿಸಿಕೊಂಡರು.ಎಲ್ಲಪ್ಪ ಅಮರಗೋಳ-ಕರ್ನಾಟಕದ ಪ್ರಸಿದ್ಧ ಶಹನಾಯಿ ವಾದನ ಪಟುಗಳಾಗಿ ಹೆಸರು ಮಾಡಿದ ಇವರು ಪಂಚಾಕ್ಷರಿ ಗವಾಯಿಗಳ ಮತ್ತು ಪುಟ್ಟರಾಜ ಗವಾಯಿಗಳಲ್ಲಿ ವಾದನಕಲೆಯಲ್ಲಿ ಪರಿಣಿತ ಪಡೆದರು. ಆನಂತರ ಕಾಶಿಗೆ ಹೋಗಿ ಭಾರತದ ಪ್ರಸಿದ್ಧ ಶಹನಾಯಿವಾದಕರಾಗಿದ್ದ ಉಸ್ತಾದ ಬಿಸ್ಮಿಲ್ಲಾಖಾನ್ ಅವರಲ್ಲಿಶಹನಾಯಿವಾದನ ಕಲೆಯನ್ನು ವಿಶೇಷವಾಗಿ ಅಭ್ಯಾಸ ಮಾಡಿದ್ದರು.
ಅರ್ಜುನಸಾ ವೆಂಕೋಸಾ ನಾಕೋಡ-೧೯೪೧ ರಿಂದ ೧೯೪೭ ರವರೆಗೆ ಪಂಚಾಕ್ಷರ ಗವಾಯಿಗಳಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ ಕಿರಾಣಾ ಘರಾಣೆಯ ಶೈಲಿಯಲ್ಲಿ ಒಳ್ಳೆಯ ಸಂಗೀತಗಾರರೆಂದು ಹೆಸರು ಮಾಡಿದರು.
ಬಸವರಾಜ ತಾಳಕೇರಿ-ಚಿಕ್ಕಂದಿನಲ್ಲಿಯೇ ತನ್ನ ಸಂಗೀತದ ಆಸಕ್ತಿ-ಪ್ರತಿಭೆಯನ್ನು ತೋರಿಸಿದ್ದ ಇವರು ಮೃತ್ಯುಂಜಯಸ್ವಾಮಿ ಪುರಾಣಿಕಮಠ ಇವರ ನೆರವಿನಿಂದ ೧೯೪೧ರಲ್ಲಿ ಮಂದಿರದ ಸಂಗೀತ ಶಾಲೆಗೆ ಸೇರಿದರು.
ಸಂಗಮೇಶ್ವರ ಪಾಟೀಲ ಗೂಡೂರು-ಪಂಚಾಕ್ಷರ ಗವಾಯಿಗಳಲ್ಲಿ ಹತ್ತು ವರ್ಷ ಸಂಗೀತ, ವಾದ್ಯಶಿಕ್ಷಣ ಅಭ್ಯಾಸ ಮಾಡಿ ಆನಂತರ ಹೈದರಾಬಾದಿನ ‘ವಿವೇಕ ವರ್ಧಿನಿ ಸಂಗೀತಶಾಲೆ’ಯಲ್ಲಿ ಸಿತಾರ ಶಿಕ್ಷಕರಾಗಿದ್ದರು. ಚನ್ನಬಸವಯ್ಯ ಜೇಕಿನಕಟ್ಟೆ, ಬೊಮ್ಮನ ಹಳ್ಳಿ-ಪಂಚಾಕ್ಷರ ಗವಾಯಿಗಳ ನೆಚ್ಚಿನ ತಬಲಾ ವಾದನದ ಶಿಷ್ಯರಲ್ಲಿ ಇವರೂ ಒಬ್ಬರು. ತಮ್ಮ ಗುರುಗಳ ಸೇವೆಯನ್ನು ಮಾಡುತ್ತಲೇ ತಬಲ ವಾದನ ಕಲೆಯನ್ನು ಸತತ ಹನ್ನೆರಡು ವರ್ಷಗಳವರೆಗೆ ಸಾಧಿಸಿದರು. ಪ್ರತಿವರ್ಷದ ಶಿವರಾತ್ರಿಯ ಕಾಲಕ್ಕೆ ಮಂದಿರದ ಸಂಗೀತ ಕಾರ್ಯಕ್ರಮಗಳಲ್ಲಿ ತಪ್ಪದೇ ಸೇವೆ ಸಲ್ಲಿಸುತ್ತಿದ್ದ ಇವರು ಒಬ್ಬ ಸಾತ್ವಿಕ ಕಲಾವಂತರು.
ಪಂಪಾಪತಿಸ್ವಾಮಿ ಗವಾಯಿ ಒಡೆಯರ ಗೋವಿಂದವಾಡ-ಪಂಚಾಕ್ಷರ ಗವಾಯಿಗಳಲ್ಲಿ ಹಿಂದೂಸ್ಥಾನಿ ಸಂಗೀತಾಭ್ಯಾಸ ಮಾಡಿ ತಮ್ಮ ಶಿಷ್ಯವೃತ್ತಿಯನ್ನು ಪುಟ್ಟರಾಜಗಳವರಲ್ಲಿಯೂ ಮುಂದುವರೆಸಿದರು.
ನಂಜುಂಡಯ್ಯ ಗಿರಿಯಾಪುರ-ಪಂಚಾಕ್ಷರ ಗವಾಯಿಗಳಲ್ಲಿ ತಬಲವಾದನ ಕುರಿತು ಚಿಕ್ಕಮಂಗಳೂರಿನಲ್ಲಿದ್ದುಕೊಂಡು ಮಲೆನಾಡು ಪರಿಸರದಲ್ಲಿ ಸಂಗೀತಕಲೆಯನ್ನು ಬೆಳೆಸಿದರು. ಬಸವಲಿಂಗ ಭೀಮರಾವ್ ಪೂಜಾರಿ-ಗವಾಯಿಗಳ ಸನ್ನಿಧಿಯಲ್ಲಿದ್ದು ತಮ್ಮ ಕಲಾಭಿರುಚಿಯಂತೆ ಹಿಂದೂಸ್ಥಾನೀ-ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ, ತಮ್ಮ ಗುರುಗಳ ಅಪ್ಪಣೆಯಂತೆ ನಾಡಿನಾದ್ಯಂತ ಸಂಚರಿಸಿ ಸಂಗೀತ ಪ್ರಸಾರ ಕಾರ್ಯವನ್ನು ಕೈಗೊಂಡರು. ಆಲಮೋಲದಲ್ಲಿ ಬಸವೇಶ್ವರ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿ ಮುಂದಿನ ಜನಾಂಗಕ್ಕೆ ಸಂಗೀತಾಭಿರುಚಿಯನ್ನು ಬೆಳೆಸಿದರು.
ವೆಂಕಪ್ಪ ರೋಣ-ಪಂಚಾಕ್ಷರ ಗವಾಯಿಗಳ ಬದುಕಿನ ಕೊನೆಯ ಘಟ್ಟದಲ್ಲಿ ಸಂಗೀತನಾಟ್ಯಕಲೆಗಳ ಅಧ್ಯಯನ ಮಾಡಿದವರು. ೧೯೪೩ ರಲ್ಲಿ ಕೊಪ್ಪಳದಲ್ಲಿ ಗರೂಡ ಸದಾಶಿವರಾಯರೊಂದಿಗೆ ‘ಸತ್ಯಸಂಕಲ್ಪ’ ನಾಟಕದಲ್ಲಿ ಹಿರಣ್ಯಗರ್ಭಾಚಾರ್ಯರ ಪಾತ್ರವನ್ನು ಅಭಿನಯಿಸದಾಗ ಇವರ ಹಾಸ್ಯಾಭಿನಯವನ್ನು ಬಹುವಾಗಿ ಮೆಚ್ಚಿದ ಗರೂಡರು ‘ನಟಶ್ರೇಷ್ಠ’ ಎಂದು ಉದ್ಗಾರ ತೆಗೆದು ಪ್ರೋತ್ಸಾಹಿಸಿದ್ದರು. ಪಂಚಾಕ್ಷರ ಗವಾಯಿಗಳ ಸಮ್ಮುಖದಲ್ಲಿಯೇ ಆದ ಈ ಅನುಭವ ಗುರು-ಶಿಷ್ಯರಿಬ್ಬರಿಗೂ ಆನಂದ ಅತಿರೇಕವನ್ನುಂಟು ಮಾಡಿತ್ತು
ವೀರಭದ್ರಯ್ಯ ರಾಜಶೇಖರಯ್ಯ ಶಾಸ್ತ್ರಿ ಹಿರೇಮಠ-ತಮ್ಮ ಗುರುಗಳಿಂದ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದು ನಿಪುಣರಾಗಿದ್ದರು.
ಚನ್ನಬಸರಾಯನ ಬಸವಾರ್ಯ ಚಿಕ್ಕಮಠ, ಕಿರೇಸೂರು-೧೯೩೯–೧೯೪೪ ರವರೆಗೆ ಪಂಚಾಕ್ಷರ ಗವಾಯಿಗಳಲ್ಲಿ ತಬಲಾವಾದನ ಕುರಿತು ನಾಡಿನ ಶ್ರೇಷ್ಠ ತಬಲಾವಾದಕರೆಂದು ಹೆಸರು ಮಾಡಿದ್ದರು.
ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಸಂಗೀತಕ್ಕೆ ಮಹತ್ವ ಕೊಟ್ಟಿದ್ದರ ಹಿನ್ನೆಲೆಯಲ್ಲಿ ಧರ್ಮಪ್ರಸಾರಕ್ಕೆ ಇದು ಒಂದು ಪ್ರಮುಖ ಅಂಗವಾಗುತ್ತದೆ ಎಂಬುದರಲ್ಲಿದೆ. ಶಿವಯೋಗಮಂದಿರ ಸ್ಥಾಪನೆಯಾದ ಕೆಲವೇ ತಿಂಗಳುಗಳಲ್ಲಿ ಸಂಗೀತ ಮತ್ತು ಶಿವಕೀರ್ತನೆಕಾರರು ಮಂದಿರದ ಒಂದು ಯೋಜನಾಬದ್ಧಕಾರ್ಯಕ್ರಮಗಳಲ್ಲಿ ಒಂದಾಗಬೇಕೆಂದು ಯೋಚಿಸಿದ್ದರು. ವಚನ, ಶಾಸ್ತ್ರ, ಆಗಮ, ಉಪನಿಷತ್ತು ಭಾಷ್ಯ,ಸಾಹಿತ್ಯ-ನೀತಿಶಾಸ್ತ್ರಿಗಳು ಸಂಗೀತದ ಮೂಲಕ ಸಮ್ಮಿಳಿತವಾದರೆ ಧರ್ಮಪ್ರಸಾರದ ಬಹುಮುಖ್ಯ ಕಾರ್ಯವಾಗುತ್ತದೆ ಎಂಬ ವಿಚಾರ ಮಾಡಿದ್ದು ಸಹಜವಾಗಿದೆ. ಆದ್ದರಿಂದ ಶಿವಯೋಗಮಂದಿರದಲ್ಲಿ ಶಿವಕೀರ್ತನಕಾರರನ್ನು ತರಬೇತಿಗೊಳಿಸಿ ಅವರಿಂದ ನಾಡಿನ ಮೂಲೆ ಮೂಲೆಗಳಲ್ಲಿಯೂ ಧಾರ್ಮಿಕ ಪ್ರಸಾರವಾಗಿ ಭಕ್ತಜನರ ಬದುಕನ್ನು ಹಸನುಮಾಡುವಂತೆ ಅಣಿಗೊಳಿಸುವುದು. ಶಿವಯೋಗಮಂದಿರದಲ್ಲಿಪ್ರಮುಖವಾಗಿ ತರಬೇತಿ ಪಡೆದ ಶಿವಕೀರ್ತನಕಾರರೆಂದರೆ, ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳು,ಮಲ್ಲಿಕಾರ್ಜುನ ಶಾಸ್ತ್ರಿಗಳು, ಶಿವಣಗಿ; ಬಸವಲಿಂಗ ಶಾಸ್ತ್ರಿಗಳು, ಮತ್ತಿಕಟ್ಟೆ; ಇಂದುಧರ ಶಾಸ್ತ್ರಿಗಳು;ಶ್ರೀಕಂಠಶಾಸ್ತ್ರಿಗಳು, ನಲವಡಿ; ಸದಾಶಿವಶಾಸ್ತ್ರಿಗಳು, ಹುಕ್ಕೇರಿ; ಮಹಾಲಿಂಗಪ್ಪನವರು, ದಾವಣಗೆರೆ;ವೀರಯ್ಯ ಶಾಸ್ತ್ರಿಗಳು-ಹಿರೇಹಾಳ-ಪ್ರತಿವರ್ಷದ ಶಿವರಾತ್ರಿ ಉತ್ಸವಕಾಲಕ್ಕೆ ಶಿವಯೋಗಮಂದಿರಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದರು.
ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳ ಹೆಸರು-ಶಿವಯೋಗಮಂದಿರದ ಸಂಗೀತ ಶಾಲೆ, ಕೀರ್ತನೆಗೆ ಸಂಬಂಧಿಸಿದಂತೆ ಮರೆಯಲಾಗದ ಹೆಸರು. ಅವರು ಸೊನ್ನದ ದೇಸಾಯಿಯವರಲ್ಲಿ ಪುರಾಣಿಕರಾಗಿದ್ದವರು.ಭಾವುಕ ರಸಿಕರು; ಸಂಗೀತದಲ್ಲಿ ನಿಷ್ಣಾತರು, ಮಧುರ ಕಂಠದ ಅವರು ಹಾನಗಲ್ಲ ಕುಮಾರಸ್ವಾಮಿಗಳ ಸನ್ನಿಧಿಯಲ್ಲಿದ್ದುಕೊಂಡು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಅನೇಕ ಅಂಶಗಳನ್ನು ಸಂಗ್ರಹಿಸಿ ತಿಳಿದುಕೊಂಡಿದ್ದರು. ಅವರು ಅಪ್ಪಣೆಯಂತೆ ಕೀರ್ತನ ರೂಪವಾಗಿ ಶಿವಧರ್ಮ ತತ್ವಗಳನ್ನು ಸಮಸ್ತ ಸಮಾಜಕ್ಕೆ ಮನವರಿಕೆಯಾಗುವಂತೆ ಬೋಧಿಸುತ್ತಿದ್ದರು. ಮೈಸೂರು, ಬೆಂಗಳೂರು, ಬಳ್ಳಾರಿ ಮೊದಲಾದ ಕಡೆಗಳಲ್ಲಿ ಸಂಚರಿಸಿ ಧರ್ಮಬೋಧೆ ಮಾಡಿದ್ದರು. (ಕೀರ್ತನವಿಶಾರದ’ರೆಂದು ಪ್ರಸಿದ್ದಿ ಪಡೆದರು. ೧೯೧೯ ರಲ್ಲಿ ಗದುಗಿನ ಧರ್ಮಭಿಮಾನಿಗಳ ಅಪೇಕ್ಷೆಯ ಮೇರೆಗೆ ರಾಚೋಟಿ ದೇವಸ್ಥಾನದಲ್ಲಿ ಶ್ರಾವಣಮಾಸದ ಶಿವಕೀರ್ತನಗಳನ್ನು ಮಾಡಿದರು. ಅವರ ಕೀರ್ತನಗಳನ್ನು ಕೇಳಲು ಜನಸಮೂಹವೇ ಬರುತ್ತಿತ್ತುಉತ್ತಮಸಂಗೀತ, ತಿಳಿಹಾಸ್ಯ ಮತ್ತು ತತ್ವಿವೇಚನೆಗಳಿಂದ ಅವರ ಕೀರ್ತನೆಗಳು ಮನಕ್ಕೆ ಆಕರ್ಷಕವೆನಿಸುತ್ತಿದ್ದವು. ಬ್ಯಾಡಗಿ, ಕೊಲ್ಲಾಪುರ ಗಡಹಿಂಗ್ಲಜ, ಸಂಕೇಶ್ವರ, ಸೋಲಾಪುರ ಮೊದಲಾದ ಗಡಿನಾಡಿನಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ದಿವ್ಯಸಾನಿಧ್ಯದಲ್ಲಿದ್ದು ಶಿವಕೀರ್ತನರೂಪದಿಂದ ಧರ್ಮಬೋಧೆ ಮಾಡುತ್ತಿದ್ದರು.
೧೯೨೮ ರಲ್ಲಿ ಶಿವಯೋಗಮಂದಿರದಲ್ಲಿ ಶಿವನ ಧ್ಯಾನವನ್ನು ಮಾಡುತ್ತ ‘ಬೇರೊಂದು ಪದವಿಯನೊಲ್ಲೆ…’ ಎಂಬ ನಿಜಗುಣರ ಆಧ್ಯಾತ್ಮಪದವನ್ನು ವಟುಗಳಿಂದ ಹಾಡಿಸಿ ಕೇಳುತ್ತಲೇ ಲಿಂಗೈಕ್ಯರಾದರು. ಶರಣರಂತೆ ಬದುಕಿದ್ದ ಬಸವಲಿಂಗಶಾಸ್ತ್ರಿಗಳ ಬದುಕು ಒಂದು ನಿದರ್ಶನ.
ವೀರಯ್ಯ ಶಾಸ್ತ್ರಿಗಳು ಹಿರೇಹಾಳ-ಇಲಕಲ್ಲಿನ ಚಿತ್ತರಗಿ ಸಂಸ್ಥಾನಮಠದ ವಿಜಯಮಹಾಂತ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಮಠದ ವ್ಯವಸ್ಥೆಗಾಗಿ ಇಲಕಲ್ಲಿಗೆ ಆಗಮಿಸಿದ್ದರು. ಅಮರಾವತಿಯ ದೇಸಾಯಿಯವರ ಮನೆಯಲ್ಲಿ ವೀರಯ್ಯಶಾಸ್ತ್ರಿಗಳ ಮೊದಲ ಭೇಟಿಯಾದ ನಂತರ ಅವರ ಅಪ್ಪಣೆಯಂತೆ ಶಿಕ್ಷಕರಾಗಿದ್ದು ಶಾಸ್ತ್ರಿಗಳು ಆ ವೃತ್ತಿಯನ್ನು ಬಿಟ್ಟುಶಿವಕೀರ್ತನಕಾರರಾದರು. ಹಾನಗಲ್ಲ ಕುಮಾರ ಸ್ವಾಮಿಗಳೊಂದಿಗಿದ್ದಾಗ ಸಾಕಷ್ಟು ಮಾಹಿತಿ, ಧಾರ್ಮಿಕ ಜ್ಞಾನವನ್ನು ಸಂಪಾದಿಸಿ ಉತ್ತಮ ಶಿವಕೀರ್ತನಕಾರರಾದರು. ಬಿಡುವಿದ್ದಾಗ ಶಿವಯೋಗಮಂದಿರದಲ್ಲಿ ಅವರ ಸನ್ನಿಧಿಯಲ್ಲಿಯೇ ವೀರಶೈವಧರ್ಮ, ಸರ್ವಧರ್ಮ ಸಮನ್ವಯ ದೃಷ್ಟಿ, ಕನ್ನಡ ಸಂಸ್ಕೃತ ಗ್ರಂಥಗಳ ಅಭ್ಯಾಸ, ಇತ್ಯಾದಿಗಳಿಂದ ತಮ್ಮ ವಚನಶಕ್ತಿಯನ್ನು ಹೆಚ್ಚಿಸಿಕೊಂಡಿದ್ದರು. ತಮ್ಮ ಕೀರ್ತನಗಳಲ್ಲಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಬೋಧಿಸಿದ್ದ ವೀರಶೈವ ಅಧ್ಯಾತ್ಮ ವಿದ್ಯೆಯನ್ನು ಸಾಮಾನ್ಯ ಜನಮನಸ್ಸಿಗೆ ಹಿಡಿಸುವಂತೆ ತಿಳಿಹಾಸ್ಯದಲ್ಲಿ ವಿವೇಚಿಸುತ್ತಿದ್ದರು. ಅವರು ದ್ಯಾವಾಪುರದ ಮಹಾಲಿಂಗಯ್ಯ, ದ್ಯಾವಾಪುರದ ಬಸವಲಿಂಗಶಾಸ್ತ್ರಿ, ದ್ಯಾಂಪುರದ ಚೆನ್ನಕವಿ, ಪಂಚಾಕ್ಷರ ಗವಾಯಿಗಳು- ಇವರ ಸತ್ಸಂಗದಲ್ಲಿರುತ್ತಿದ್ದರು.
ಜಿ. ವೀರಾರ್ಯ ಶಾಸ್ತ್ರಿ ಹಿರೇಮಠ, ಸುರಕೋಡ– ಕನ್ನಡವ್ಯಾಸಂಗವನ್ನು ಪೂರೈಸಿ, ಗದಗಿನ ತೋಂಟದಾರ್ಯಮಠದ ಸಂಸ್ಕೃತಪಾಠಶಾಲೆಯಲ್ಲಿ ಸಂಸ್ಕೃತನಾಟಕ, ಶ್ರಾವ್ಯಗಳ ಅಭ್ಯಾಸ ಮಾಡಿ, ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತವನ್ನು ಮತ್ತು ದ್ಯಾವಾಪುರದ ಬಸವಲಿಂಗಶಾಸ್ತ್ರಿಗಳಲ್ಲಿ ಕೀರ್ತನ ಕಲೆಯನ್ನು, ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳವರಿಂದ ಕೃಪಾಬಲದ ಉತ್ತಮ ಕೀರ್ತನ-ಸಂಗೀತಶಕ್ತಿಯನ್ನು ಪಡೆದ ಇವರು ಶಿವಯೋಗಮಂದಿರದಲ್ಲಿ ಶ್ರೇಷ್ಟಕೀರ್ತನಕಾರರಾಗಿ ಗುರುತಿಸಿಕೊಂಡಿದ್ದರು.
ಕಲ್ಲಿನಾಥ ನಾಥಶಾಸ್ತ್ರಿ ಹಿರೇಮಠ- ಪಂಚಾಕ್ಷರಗವಾಯಿಗಳಿಂದ ಸಂಗೀತವನ್ನು, ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳಿಂದ ಪ್ರೇರಣೆಯನ್ನು ಪಡೆದು ಶಿವಕೀರ್ತನಕಾರರೆನಿಸಿಕೊಂಡವರು. ಗುರುಲಿಂಗಶಾಸ್ತ್ರಿಗಳು,ಸಾಲಿಮಠ- ಪಂಚಾಕ್ಷರ ಗವಾಯಿಗಳಿಂದ ಮೂರುವರ್ಷಗಳ ಕಾಲ ಕೀರ್ತನ ಪುರಾಣ ಪ್ರವಚನ ಶಿಕ್ಷಣವನ್ನು ಪಡೆದು ನರಗುಂದ, ಹಾನಗಲ್ಲ ನೀಲಗುಂದ, ನಿಡಗುಂದಿಕೊಪ್ಪ, ಬಿದರಿ, ಬಾಗಲಕೋಟೆ, ಕೊತಬಾಳ, ಕೊಪ್ಪಳ, ಸೂಡಿ ಮೊದಲಾದ ಗ್ರಾಮಗಳಲ್ಲಿ ಕೀರ್ತನಕಾರರೆಂದು ಮನ್ನಣೆ, ಗೌರವ ಪಡೆದಿದ್ದರು. ಮಹಾದೇವಶಾಸ್ತ್ರಿಗಳು ಹಿರೇಮಠ, ಕೃಷ್ಣಪುರ-ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಪಂಚಾಕ್ಷರ ಗವಾಯಿಗಳವರಲ್ಲಿ ಪ್ರವೇಶ ಪಡೆದು ಹತ್ತುವರ್ಷಗಳ ಕಾಲ ಸಂಗೀತ-ಕೀರ್ತನಕಲೆಯನ್ನು ಕಲಿತು ‘ಕೀರ್ತನರತ್ನ’ ಎಂದು ಖ್ಯಾತಿ ಹೊಂದಿದ್ದರು.
ಸಿರಿಗೆರೆಯ ಶ್ರೀವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳು-ಆರಂಭದಲ್ಲಿ ಕಂಪ್ಲಿಯ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತ- ಕನ್ನಡ ಅಭ್ಯಾಸ ಮಾಡಿ, ಕೆಲವು ವರ್ಷಗಳ ಕಾಲ ಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ಪ್ರೇರಣೆಯಂತೆ, ಪಂಚಾಕ್ಷರ ಗವಾಯಿಗಳ ಸಂಗೀತಶಾಲೆಯಲ್ಲಿ ಸಂಗೀತ-ಕೀರ್ತನ ಕಲೆಗಳನ್ನು ಕುರಿತು ಶಿವಕೀರ್ತನಕಾರರೆಂದೂ ಹೆಸರು ಮಾಡಿದರು. ಅವರ ಪೂಜಾನಿಷ್ಠೆ, ಸಾತ್ವಿಕ ಸ್ವಭಾವ, ಪುರಾಣ ಪ್ರವಚನದಿಂದ ಪ್ರಭಾವ ಶಾಲಿಗಳಾಗಿದ್ದರು.
ಶ್ರೀಪವಾಡಬಸವೇಶ್ವರ ಪಟ್ಯಾಧ್ಯಕ್ಷರು, ನಾಗಠಾಣ-೧೯೧೪ರಿಂದಲೇ ಸಂಗೀತ ಸಾಹಿತ್ಯಗಳೊಂದಿಗೆ ಪಂಚಾಕ್ಷರ ಗವಾಯಿಗಳಲ್ಲಿಗೆ ಸೇರಿಕೊಂಡವರು. ಶಿವಪೂಜಾನಿಧ್ಯರು ಸರಳ ವೃತ್ತಿಯ ಪ್ರಭಾವಿ ಕೀರ್ತನಕಾರರು, ಪಂಚಾಕ್ಷರ ಗವಾಯಿಗಳು ಇವರನ್ನು ತಮ್ಮ ಕ್ರಿಯಾಮೂರ್ತಿಗಳು’ ಎಂದು ಮಾನಿಸುತ್ತಿದ್ದರು. ಪಂಚಾಕ್ಷರ ಗವಾಯಿಗಳು ಗದಗಿನಲ್ಲಿ ಲಿಂಗೈಕ್ಯರಾದಾಗ ಇವರು ಹಾಲಕೆರೆಯ ಶ್ರೀ ಅನ್ನದಾನಿ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಗವಾಯಿಗಳ ಕ್ರಿಯಾಸಮಾಧಿಯನ್ನು ವಿಧಿಪ್ರಕಾರವಾಗಿ ನೆರವೇರಿಸಿದರು.

ಶಿವಯೋಗಮಂದಿರದಲ್ಲಿ ಸಂಗೀತದಂಥ ತನ್ಮಯತೆ ಹಾಗೂ ಭಾವುಕತೆಗೊಳಗಾಗುವ ಕಲೆಯ ಚಟುವಟಿಕೆಗಳನ್ನು ಪಂಚಾಕ್ಷರ ಗವಾಯಿಗಳು ಮತ್ತು ಅವರ ಬಳಗದ ಮೂಲಕ ಶಿವಧರ್ಮಪ್ರಸಾರಕ್ಕೆ ಬಳಸಿಕೊಂಡು ಕನ್ನಡನಾಡಿನಚರಿತ್ರೆಯಲ್ಲಿ ಒಂದು ಅಧ್ಯಾಯಕ್ಕೆ ಕಾರಣರಾದರು; ಪೂಜ್ಯ ಹಾನಗಲ್ಲಕುಮಾರಸ್ವಾಮಿಗಳು.ಧರ್ಮಪ್ರಸಾರವನ್ನು ಶಿವಕೀರ್ತನೆಯ ಮೂಲಕ ಸಮಸ್ತಸಮಾಜಕ್ಕೆ ಪ್ರಭಾವಶಾಲಿಯಾಗಿ ಮುಟ್ಟಿಸಿದ್ದು ಒಂದು ಪ್ರಯೋಗವಾಗಿದ್ದರೆ, ವೀರಶೈವಧರ್ಮದ ಶ್ರೇಷ್ಠತೆಯನ್ನು ಈ ಶತಮಾನದಲ್ಲಿಮತ್ತೊಂದು ವಿಭಿನ್ನ ಪರಿಣಾಮಕಾರಿ ಪ್ರಯೋಗ ಮೂಲಕ ಸಂವಹನಗೊಳಿಸಿದ್ದು ಇನ್ನೊಂದು ಕಾರ್ಯವಾಗಿದೆ.