ಶಾಖಾ ಶಿವಯೋಗಮಂದಿರಗಳು

: ಸೌಜನ್ಯ “ಬೆಳಗು”

ಶಿವಯೋಗಮಂದಿರದ ಶಾಖೆಗಳನ್ನು ಅಲ್ಲಲ್ಲಿ ಸ್ಥಾಪಿಸಿ ಅವುಗಳ ಮೂಲಕ ಶಿವಾನುಭವದ ಬೋಧೆಯಾಗುವಂತೆ ಮಾಡುವದು ಸಂಸ್ಥೆಯ ಉದ್ದೇಶಗಳಲ್ಲಿ ಒಂದು. ಅದರ ಸಾಧನೆಗಾಗಿ ಶ್ರೀಗಳವರು ನಾಡಿನ ಮೂಲೆ ಮೂಲೆಯಲ್ಲೆಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಮಂದಿರದ ಶಾಖಾ ಸಂಸ್ಥೆಗಳನ್ನು ಸ್ಥಾಪಿಸಿದರು. ಶಿವಮೊಗ್ಗ, ಧಾರವಾಡ, ರಾಯಚೂರು ಮೊದಲಾದ ದೂರದ ಜಿಲ್ಲೆಗಳಲ್ಲಿಯೂ ಜನತೆಯು ಶಿವಯೋಗ ಮಂದಿರದ ಪ್ರಭಾವಕ್ಕೆ ಒಳಗಾಗಿ ತಮ್ಮ ಬಾಳನ್ನು  ಹಸನಗೊಳಿಸಿಕೊಳ್ಳಲೆಂಬ ಶ್ರೀಗಳವರ ಲೋಕಹಿತ ಭಾವನೆ ಕಪನಳ್ಳಿ, ನಿಡಗು೦ದಿ-ಕೊಪ್ಪ, ರಾಮಗಡ್ಡಿ, ಹಿರೇಹಾಳ ಮತ್ತು ಬದಾಮಿ ಗ್ರಾಮಗಳಲ್ಲಿ ರೂಪುಗೊಂಡಿತು. ಅಲ್ಲಿ ಶಾಖಾ ಶಿವಯೋಗಮಂದಿರಗಳ ಸ್ಥಾಪನೆಯಾಯಿತು.

ಶಾಖಾ ಶಿವಯೋಗಮಂದಿರ, ನಿಡಗುಂದಿಕೊಪ್ಪ

ಶಿವಯೋಗಮಂದಿರದ ಭಿಕ್ಷೆಗಾಗಿ ೧೯೧೪ ನೆಯ ಇಸ್ವಿಯಲ್ಲಿ ನಿಡಗುಂದಿ (ತಾ. ರೋಣ, ಜಿ. ಧಾರವಾಡ) ಗ್ರಾಮಕ್ಕೆ ಲಿಂ. ಪರಮಪೂಜ್ಯ ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರು ದಯಮಾಡಿಸಿದ್ದರು. ಹಾವೇರಿ ಶ್ರೀ ನಿ. ಪ್ರ. ಶಿವಬಸವ ಮಹಾಸ್ವಾಮಿಗಳವರ ಪೂಜೆಗೆ ಏರ್ಪಾಟು ಮಾಡಿದ ಮನೆಯ ಕಿಡಕಿ ಮತ್ತು ಬಾಗಿಲುಗಳಲ್ಲಿ ಜನ ಶ್ರೀಗಳವರ ಲೀಲಾಮಯ ಪೂಜೆಯನ್ನು ನೋಡುವ ಕುತೂಹಲದಿಂದ ಇಣಿಕಿ ನೋಡಹತ್ತಿದರು. ಈ ಜನ ಜಂಗುಳಿಯನ್ನು ಕಂಡು ಹಾವೇರಿ ಶ್ರೀಗಳವರು ಬಹಳ ಬೇಸರಗೊಂಡರು. ಪೂಜೆ ಅರ್ಪಣ ಮುಗಿದ ಮೇಲೆ ಅವರು ಲೀಲಾಮಯವಾಗಿ ಹಾನಗಲ್ಲ ಶ್ರೀಗಳವರನ್ನು ಕುರಿತು ʼʼತಾವು ಈ ಮರುಳ ಜನರನ್ನು ಬೇಡಿ ಶಿವಯೋಗ ಮಂದಿರವನ್ನು ಬೆಳೆಸಲು ಯತ್ನಿಸುವಿರಲ್ಲವೆ ? ಅದರ ಪರಿಣಾಮವಿದು; ಇಂದು ನಮ್ಮ ಶಿವಪೂಜೆಗೆ ಕೊರತೆಯನ್ನುಂಟು ಮಾಡಿತು. ಇನ್ನು ಜನವನ್ನು ಬೇಡುವದಾದರೆ ತಮ್ಮ ಶಿವಯೋಗಮಂದಿರ ತಮಗೆ ಇರಲಿ, ಶಿವನನ್ನೆ ಬೇಡಿ ಶಿವಮಂದಿರವನ್ನು ಕಟ್ಟುವೆ.” ಎಂದು ಅಪ್ಪಣೆ ಕೊಡಿಸಿ ಅಂದೇ ಕೊಪ್ಪದ ನೆರೆಯ ಹಳ್ಳದ ಪ್ರಶಾಂತ ಸ್ಥಳದಲ್ಲಿ ಬಿಲ್ವವೃಕ್ಷದ ಅಡಿಯಲ್ಲಿ ಜೋಪಡಿಯನ್ನು ಹಾಕಿಸಿಕೊಂಡು ಅನುಷ್ಠಾನಕ್ಕೆ ಕುಳಿತರು. ಮೂರು   ತಿಂಗಳವರೆಗೆ ಲಿಂಗಾನಂದದಲ್ಲಿ ತನ್ಮಯರಾಗಿದ್ದರು. ಈ ಸ್ಥಾನ ಶ್ರೀಗಳವರ ಮನಕ್ಕೆ ನೆಮ್ಮದಿಯನ್ನು ತಂದುಕೊಟ್ಟಿತು. ಮುಂದೆ ಮಳೆಗಾಲ ಬಂದಿತು ಭಕ್ತರ ಆಗ್ರಹದ ಮೇರೆಗೆ ಶ್ರೀಗಳವರು ಹಾನಗಲ್ಲ, ಹಾಲಕೆರೆ ಮತ್ತು ರೋಣದ ಶ್ರೀಗಳವರನ್ನು ಕರೆಯಿಸಿಕೊಂಡು ಆ ಸ್ಥಾನದಲ್ಲಿಯೇ ಶಾಖಾ ಶಿವಯೋಗಮಂದಿರವನ್ನು ಸ್ಥಾಪಿಸುವ ನಿರ್ಧಾರವನ್ನು ಸೂಚಿಸಿದರು. ಹಾನಗಲ್ಲ ಶ್ರೀಗಳವರಿಗೆ ಹಾವೇರಿ ಶ್ರೀಗಳವರ ತಪಃಪ್ರಭಾವವನ್ನು ಕಂಡು ಹಿಡಿಸಲಾರದಷ್ಟು ಆನಂದವಾಯಿತು. ಅವರೇ ಅನುಷ್ಠಾನದ ಆರಾಧನೆ ಮಾಡಿಸಿ ೧೯೧೪ ನೆಯ ಇಸ್ವಿಯ ಬಸವಜಯಂತಿಯ ಶುಭ ದಿನದಲ್ಲಿ ಶಾಖಾಮಂದಿರದ ಅಡಿಗಲ್ಲನ್ನು ಇಡಿಸಿದರು. ಅಂದೇ ಸಂಗೀತ ಶಾಲೆಯ ಪ್ರಾರಂಭೋತ್ಸವವೂ ವಿಜೃಂಭಣೆಯಿಂದ, ಉತ್ಸಾಹದಿಂದ ಜರುಗಿತು. ಶ್ರೀ ಪಂಚಾಕ್ಷರ ಗವಾಯಿಗಳ ಆನಂದಕ್ಕೆ ಅಂದು ಮೇರೆ ಇಲ್ಲವಾಗಿತ್ತು .

ಆಲೂರ ಸದ್ಭಕ್ತರು ಮಂದಿರದ ಅನುಕೂಲತೆಗೆ ಯೋಗ್ಯ ಕ್ಷೇತ್ರವನ್ನು ಒದಗಿಸಿಕೊಟ್ಟರು. ಶಾಖಾ ಮಂದಿರವು ನಿರಾತಂಕವಾಗಿ ನಡೆಯಲೆಂಬ ಘನವಾದ ಉದ್ದೇಶದಿಂದ ಕೊಪ್ಪ ಮತ್ತು ಹಾಲಕೆರೆ ಗ್ರಾಮಗಳ ಸದ್ಭಕ್ತರು ೬೦ ಎಕರೆ ಜಮೀನುಗಳನ್ನು  ದಾನವಾಗಿ ಕೊಟ್ಟರು. ೩-೪ ವರ್ಷಗಳಲ್ಲಿಯೇ ಶ್ರೀಗಳವರ ಅನುಷ್ಠಾನದ ಪ್ರಭಾವದಿಂದ ಆ ಭೂಮಿ ಪುಣ್ಯ ಕ್ಷೇತ್ರವಾಗಿ ಕಂಗೊಳಿಸಿತು. ಕಲ್ಯಾಣದ ದೇಶಿಕರಿಗೆ ಇಲ್ಲಿಯೇ ನಿರಾಭಾರಿ  ಚರಪಟ್ಟಾಧಿಕಾರವನ್ನು ನೆರವೇರಿಸಲಾಯಿತು. ಅವರು ಮೂರು ವರ್ಷ ಇಲ್ಲಿಯೇ ಅನುಷ್ಠಾನ ಮಾಡಿದರು. ನಂತರ ಇಲ್ಲಿಯೇ ಶ್ರೀ ಮಹಾದೇವ ಸ್ವಾಮಿಗಳು, ಶ್ರೀ ನಿರಂಜನ ಸ್ವಾಮಿಗಳು ಮೊದಲಾದವರು ಕೆಲವು ಕಾಲ ಶಿವಯೋಗಾನುಷ್ಠಾನ ಮಾಡಿ ಸಿದ್ಧಿಪಡೆದರು. ಆ ಮೇಲೆ ಕ್ರಿ.ಶ. ೧೯೨೪ರಲ್ಲಿ ಹಾನಗಲ್ಲ ಮಹಾ ಸ್ವಾಮಿಗಳವರು ಮ೦ದಿರದ ಸಾಧಕರಾದ ಶ್ರೀ ಗೋಕಾಕ ದೇಶಿಕರವರನ್ನು ಇಲ್ಲಿಗೆ ಕರೆತಂದರು. “ಹಾವೇರಿಯ ಶ್ರೀ ಶಿವಬಸವ ಸ್ವಾಮಿಗಳು ಶಿವನನ್ನು ಬೇಡಿ ಈ ಶಿವಯೋಗಾಶ್ರಮವನ್ನು ಕಟ್ಟಿದ್ದಾರೆ. ಇಲ್ಲಿ ನೀವು ೧೨ ವರ್ಷ ಬಿಡದೆ ಶಿವಯೋಗ ತಪಸ್ಸನ್ನು ಆಚರಿಸಬೇಕು; ಆಗ ಈ ಆಶ್ರಮ ಜಾಗ್ರತ ಕ್ಷೇತ್ರವಾಗುತ್ತದೆ. ಅದರಿಂದ ನಿಮ್ಮ ಉದ್ಧಾರ ಮತ್ತು ಸಮಾಜದ ಉದ್ಧಾರವೂ ಆಗುವದು.” ಎಂದು ಅಪ್ಪಣೆ ಕೊಡಿಸಿ ಅವರ ಅನುಷ್ಠಾನಕ್ಕೆ ಪ್ರೇರಣೆಯನ್ನಿತ್ತರು. ಅಂತೆಯೆ ಗೋಕಾಕ ದೇಶಿಕರು ಶಿವಯೋಗದಲ್ಲಿ ಸಿದ್ಧಿ ಪಡೆದರು; ಶ್ರೀಗಳವರ ಧೈಯವನ್ನು ಬಿಡದೆ ಸಾಧಿಸಿದರು. ಅವರೇ ಮುಂದೆ ಆ ಆಶ್ರಮದ   ಅಧಿಕಾರಿಗಳಾಗಿ ಭಕ್ತರ ಭಕ್ತಿಯನ್ನು ಕೈಕೊಂಡು ಅದರ ಸರ್ವಾಂಗಸುಂದರ ಅಭಿವೃದ್ಧಿಯನ್ನು ಮಾಡಿರುವರು. ಅವರ ಪೂಜೆಯ ಪ್ರಭಾವದಿಂದ ಈ ಕ್ಷೇತ್ರ ಪ್ರತಿದಿನವೂ ನೂರಾರು ಭಕ್ತರನ್ನು ಆಕರ್ಷಿಸುತ್ತಿದೆ.

ಪ್ರಾರಂಭದಲ್ಲಿ ಈ ಮಂದಿರಕ್ಕೆ ಕೊಪ್ಪ ಮತ್ತು ಹಾಲಕೆರೆಯ ಸದ್ಭಕ್ತರು ಬಹುಮುಖವಾಗಿ ಸಹಾಯ ಸಲ್ಲಿಸಿದ್ದರು. ಕೊಪ್ಪ ಗ್ರಾಮದ ಭಕ್ತರು ೨೮೦೦ ರೂಪಾಯಿಗಳ ನಿಧಿಯನ್ನು ಅರ್ಪಿಸಿ ಶಾಖಾ ಮಂದಿರದ ಆರ್ಥಿಕ ಕೊರತೆಯನ್ನು ನೀಗಿಸಿದರು; ೧೬ ಜನ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಪ್ರಸಾದ ವಿನಿಯೋಗದ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿದ್ದರು. ಕೆಲವು ನಿಷ್ಠಾವಂತ ಭಕ್ತರು ಶಿವಯೋಗಮಂದಿರದ ಹೆಸರಿನಿಂದ ಗೋದಿ ಬಿತ್ತಿ ಅದರಿಂದ ಬಂದ ಬೆಳೆಯನ್ನು ಶಿವಾರ್ಪಣ ಬುದ್ಧಿಯಿಂದ ಈ ಮಂದಿರಕ್ಕೆ ಅರ್ಪಿಸಿದ್ದರು. ಹಾಲಕೆರೆಯ ಶ್ರೀ ಬಸವನಗೌಡ ಪಾಟೀಲ ಅವರು ಈ ಶಾಖಾ ಮಂದಿರದ ಮೇಲ್ವಿಚಾರಣೆಯನ್ನು ನೋಡಿ ಕೊಳ್ಳುತ್ತಿದ್ದರು.

ರಾಮಗಡ್ಡಿಯ ಶಾಖಾಮಂದಿರ

ರಾಮಗಡ್ಡಿ (ಜಿ. ರಾಯಚೂರು) ಯಲ್ಲಿ ಶಾ. ಶ. ೧೮೩೬ (ಕ್ರಿ.ಶ.೧೯೧೪)  ನೆಯ ಆನಂದನಾಮ ಸಂವತ್ಸರದ ಮಾಘ ಶು. ೧೪ ರಂದು ಶ್ರೀ ಸಿದ್ಧಲಿಂಗಸ್ವಾಮಿಗಳು ಉರ್ಫ ಚೋಳೇಂದ್ರಸ್ವಾಮಿಗಳು ಅವರಿಂದ ಒಂದು ಶಿವಯೋಗಾಶ್ರಮವು ಸ್ಥಾಪಿತವಾಯಿತು. ಈ ಸ್ಥಾನ ನದಿಯ ನಡುಗಡ್ಡೆಯಲ್ಲಿ ರಮ್ಯವಾದ ಫಲವತ್ತಾದ ಪ್ರದೇಶದಲ್ಲಿದೆ. ಈಗ ನೀರಡಗುಂಭದ ಪಶ್ಚಿಮಾದ್ರಿಮಠದ ಅಧಿಪತಿಗಳಾದ ಶ್ರೀ ನಿ.ಪ್ರ. ಸಿದ್ದಲಿಂಗಸ್ವಾಮಿಗಳು ಆ ಆಶ್ರಮದ ಅಧಿಕಾರವನ್ನು ವಹಿಸಿಕೊಂಡಿರುವರು. ಪ್ರಾರಂಭದಲ್ಲಿ ಇಲ್ಲಿ ಐದು ಜನ ಸಾಧಕರು ಮತ್ತು ೧೫ ಜನ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳು ಇದ್ದರು. ಇಲ್ಲಿಂದ ಇದುವರೆಗೆ ೯ ಜನ  ಮೂರ್ತಿಗಳು ಯೋಗ ಧರ್ಮಗಳ ಶಿಕ್ಷಣ ಪಡೆದು ಆಯಾ ಪ್ರಾಂತಗಳಲ್ಲಿ ಸಂಚರಿಸಿ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಗಳಾಗಿದ್ದಾರೆ. ೭- ೮ ಜನ ಶಾಸ್ತ್ರಿಗಳು ಇಲ್ಲಿಂದಲೇ ವೈದಿಕಾದಿ ಶಿಕ್ಷಣ ಪಡೆದು ಅಲ್ಲಲ್ಲಿ ಅಧ್ಯಾಪಕರಾಗಿದ್ದಾರೆ.” ಈಗ ಇಲ್ಲಿ ಮಂದಿರದಿಂದಲೇ ಶಿಕ್ಷಣ ಪಡೆದ ಶ್ರೀ ಶಿವಪುತ್ರ ದೇವರು ನೀರಡಗುಂಭ ಶ್ರೀಗಳವರ ಮಾರ್ಗದರ್ಶನದಲ್ಲಿ ಅಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಶಿವಯೋಗಾಶ್ರಮ ಕಪನಳ್ಳಿ

ಹಾನಗಲ್ಲ ಶ್ರೀಗಳವರು ಮಲೆನಾಡಿಗೆ ದಯಮಾಡಿದ್ದರು. ಅನಂತಪುರದ ಮುರಘಾಮಠದಲ್ಲಿ ಬಿಡಾರವಾಗಿತ್ತು, ಆಗ ಗುತ್ತಲದ ಶ್ರೀಗಳವರು ಮತ್ತು ಕೆಳದಿಯ ಶ್ರೀ ರೇವಣಸಿದ್ಧ ಪಟ್ಟಾಧ್ಯಕ್ಷರು ದಯ ಮಾಡಿಸಿದ್ದರು. ಈ ತ್ರಿಮೂರ್ತಿಗಳು ಹಾನಗಲ್ಲ ಶ್ರೀಗಳವರಲ್ಲಿ ತಾವು ಶಿವಯೋಗಮಂದಿರವನ್ನು ಸ್ಥಾಪಿಸಿ ಇದುವರೆಗೆ ಬಯಲು ಸೀಮೆಯಲ್ಲಿ ಸಾಕಷ್ಟು ಜನಜಾಗ್ರತಿಯನ್ನುಂಟು ಮಾಡಿದಿರಿ. ಇನ್ನು ಮಲೆನಾಡಿನಲ್ಲಿಯ ಜನಗಳ ಸುಧಾರಣೆಗಾಗಿ ಒಂದು ಶಾಖಾ ಶಿವಯೋಗಮಂದಿರವನ್ನು ಸ್ಥಾಪಿಸುವುದು ಅವಶ್ಯಕವಾಗಿದೆ ಎಂದು ಪ್ರಸ್ತಾಪಿಸಿದರು. ಅದಕ್ಕೆ ಹಾನಗಲ್ಲ ಶ್ರೀಗಳವರು ಒಪ್ಪಿ ಅಲ್ಲಿಯ ಭಕ್ತರ ಅಪೇಕ್ಷೆಯಂತೆ ಅನಿಮಿಷ ದೇವರ ತಪೋಭೂಮಿಯಾದ ಕಪನಳ್ಳಿ(ಜಿ, ಶಿವಮೊಗ್ಗ ತಾ. ಶಿಕಾರಿಪುರ)ಯ ನೆರೆಯಲ್ಲಿ ದಿನಾಂಕ ೧೦-೩-೧೯೧೭ ರಲ್ಲಿ ‘ಶಿವಯೋಗಾಶ್ರಮ’ವನ್ನು ಸ್ಥಾಪಿಸಿದರು. ಅನಂತಪುರದ ಜ. ಲಿಂಗಮಹಾಸ್ವಾಮಿಗಳು, ಗುತ್ತಲದ ಶ್ರೀರುದ್ರ ಸ್ವಾಮಿಗಳು, ಕೆಳದಿ, ಸಾಲೂರು, ತ್ಯಾವಣಗಿ ಮೊದಲಾದ ಊರುಗಳ ಪಟ್ಟ ಚರಮೂರ್ತಿಗಳು, ಶಿಕಾರಿಪುರ ಮೊದಲಾದ ಗ್ರಾಮಗಳ ಸದಭಕ್ತರೂ ಸೇರಿ ಹಾವೇರಿ ಶ್ರೀಗಳವರ ನೇತೃತ್ವದಲ್ಲಿ ಶಿವಯೋಗಾಶ್ರಮದ ಆರಂಭೋತ್ಸವವನ್ನು ವೈಭವದಿಂದ ಸಾಂಗಗೊಳಿಸಿದರು. ಸಾವಿರಾರು ಜನ ಸೇರಿತ್ತು, ನಿತ್ಯ ದಾಸೋಹ ನಡೆಯಿತು. ಅದರೊಂದಿಗೆ ಜ್ಞಾನದಾಸೋಹವೂ ಅಖಂಡವಾಗಿ ಸಾಗಿತು. ಮಲೆನಾಡಿನ ಜನರಲ್ಲಿ ಎಂದಿಲ್ಲದ ಭಕ್ತಿ ವಿಶ್ವಾಸಗಳು ಮೈದಾಳಿದ್ದವು.

ಈ ಆಶ್ರಮವು ಸುರಕ್ಷಿತವಾಗಿ ಸಾಗಲೆಂದು ಶಿಕಾರಿಪುರದ ಶ್ರೀ ಹೊನ್ನಪ್ಪ ಶೆಟ್ಟರ ಚನ್ನಪ್ಪನವರು ೧೦ ಸಾವಿರ ರೂಪಾಯಿಗಳ ಮೂಲ ನಿಧಿಯನ್ನು ಅರ್ಪಿಸಿ ಅದರ ಬಡ್ಡಿಯಿಂದ ಆಶ್ರಮದ ದೈನಿಕ ವೆಚ್ಚವು ಸಾಗುವಂತೆ ಏರ್ಪಡಿಸಿದ್ದರು.

 ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ಶ್ರೀ ಮಹಾದೇವ ದೇಶಿಕರು ಮಂದಿರದ ೫-೬ ಜನ ಸಾಧಕರೊಂದಿಗೆ ಆಶ್ರಮದಲ್ಲಿ ಅನುಷ್ಠಾನ ಮಾಡುತ್ತಿದ್ದರು. ಹುಬ್ಬಳ್ಳಿ ಶ್ರೀ ಶಿವಮೂರ್ತಿ ಸ್ವಾಮಿಗಳು, ಇಲಕಲ್ಲ ಶ್ರೀ ಮಹಾಂತ ದೇಶಿಕರು, ಬಾಗಿಲುಕೋಟೆಯ ಶ್ರೀ ಶಿವಮೂರ್ತಿ ಸ್ವಾಮಿಗಳು ಮೊದಲಾದ ಶಿವಯೋಗಿಗಳೊಡನೆ ಶ್ರೀ ಮಹಾದೇವ ದೇಶಿಕರು (ಈಗ ಕುರವತ್ತಿ ಶ್ರೀಗಳು) ಲಿಂಗಾಣತಿಯಿಂದ ಬಂದುದನ್ನು ಸ್ವೀಕರಿಸುತ್ತ ಸಂಕಲ್ಪ ಪೂರ್ವಕವಾಗಿ ಒಂದು ಕೋಟಿ ಮಹಾಮಂತ್ರ ಜಪವನ್ನು ಮಾಡಿ ಶ್ರೀ ಗಳವರ ಆಶೆಯನ್ನು ಸಫಲಗೊಳಿಸಿದರು.

 ಹಳೇ ಪಟ್ಟಣದ ಹಾಲಪ್ಪ ಶೆಟ್ಟರು ಮುಂತಾದ ಸದ್ಭಕ್ತರು ಆಶ್ರಮಕ್ಕೆ ಹತ್ತು ಉತ್ತಮ ಹಸುಗಳನ್ನು ಕೊಟ್ಟರು. ಉಳಿದ ಭಕ್ತರೂ ಗೋದಾನ ಮಾಡಿದರು. ಕೆಲವು ದಿನಗಳಲ್ಲಿ ಆಶ್ರಮದ ಗೋಸಂತತಿಯು ಎರಡು ನೂರಕ್ಕೆ ಮಿಕ್ಕಿತು. ಒಳ್ಳೆಯ ತಳಿಯ ಆಕಳುಗಳ ಪೀಳಿಗೆ ಹೆಚ್ಚಿತು. ಈಗಲೂ ಆಶ್ರಮದಲ್ಲಿ ಗೋರಕ್ಷಣೆಯ ಕಾರ್ಯ ನಿರಾಬಾಧವಾಗಿ ನಡೆದಿದೆ.

ಈ ಆಶ್ರಮವನ್ನು ಸ್ಥಾಪಿಸುವ ಮುಂಚೆ ಈ ಪ್ರಾಂತದ ಜನತೆಯಲ್ಲಿ ಮೌಡ್ಯವು ಮನೆ  ಮಾಡಿಕೊಂಡಿತ್ತು. ಜನತೆಯು ವೀರಶೈವರ ನಿಜಾಚರಣೆಯನ್ನು ಮರೆದಿತ್ತು ಇದನ್ನು ಕಂಡು ಜನರಿಗೆ ವೀರಶೈವಾಚಾರ ಮಾರ್ಗದ ಬೋಧೆ ಮಾಡಲು ಪೂಜ್ಯರಾದ ಹಾವೇರಿ ಮತ್ತು ಹಾನಗಲ್ಲ ಶ್ರೀಗಳವರು ಅವಿಶ್ರಾಂತ ಶ್ರಮವಹಿಸಿ ಅನಂತಪುರದ ಶ್ರೀಗಳು ಮತ್ತು ಕೆಳದಿ ಪಟ್ಟಾಧ್ಯಕ್ಷರರೊಡನೆ ಆಲೋಚಿಸಿ ಸಾಗರ, ಶಿರಿಯಾಳಕೊಪ್ಪ ಸಿದ್ದಾಪುರ ಮತ್ತು ಬಂಕಾಪುರ ಗ್ರಾಮಗಳಲ್ಲಿ ಧರ್ಮೋತ್ತೇಜಕ ಸಭೆಗಳನ್ನು ನಡೆಯಿಸಿದರು; ಪುರಾಣ ಕೀರ್ತನಗಳಿಂದ ಜನರು ಸದಾಚರಣೆಯಲ್ಲಿ ನಡೆಯುವಂತೆ ಮಾಡಿದರು.

  ಶಿರಿಯಾಳ ಕೊಪ್ಪದಲ್ಲಿ ಹಾನಗಲ್ಲ ಶ್ರೀಗಳವರು ಮೂರು ತಿಂಗಳುಗಳ ವರೆಗೆ ಶ್ರೀ ನಿಜಗುಣಾರ್ಯರ ಗ್ರಂಥಗಳ ಪ್ರವಚನಗಳನ್ನು ನಡೆಯಿಸಿ ಬೋಧವಿತ್ತು ಜನರ ನಡೆ ನುಡಿಗಳನ್ನು ತಿದ್ದಿದರು; ಸಾವಿರಾರು ಮಾಹೇಶ್ವರ ಭಕ್ತ ವಟುಗಳಿಗೆ ವೀರಶೈವದೀಕ್ಷೆಯ ಸಂಸ್ಕಾರವನ್ನು ಮಾಡಿಸಿ ಶಿವಪೂಜಾ ವಿಧಾನವನ್ನು ಬೋಧಿಸಿದರು. ತೊಗರಸಿಯ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ದೊಡ್ಡ ಸಭೆಯನ್ನು ಸೇರಿಸಿ ವೀರಶೈವ ಮತತತ್ವಗಳ ಪ್ರಸಾರವನ್ನು ಮಾಡಿ ಜನರಲ್ಲಿ ಅರಿವಿನ ಬೆಳಗು ಮೂಡುವಂತೆ ಮಾಡಿದರು. ಶಿರಿಯಾಳಕೊಪ್ಪದ ಹತ್ತಿರ ಬಿಳುವಾಣಿ ಮರಡಿಮಠದಲ್ಲಿ ಮೂರು ತಿಂಗಳು ವಾಸ್ತವ್ಯ ಮಾಡಿ ಶ್ರೀಗಳವರು ಈ ಪ್ರಾಂತದ ಭಕ್ತ ಮಾಹೇಶ್ವರರನ್ನು ಕೂಡಿಕೊಂಡು ‘ಶಿವಾನುಭವ’ ಶಾಸ್ತ್ರವನ್ನು ಶ್ರೀ ಕಬ್ಬೂರ ಶರಣರಿಂದ ಜನರಿಗೆ ಬೋಧೆ ಮಾಡಿಸಿದರು. ಅನೇಕರು ದೀಕ್ಷೆ-ಅನುಗ್ರಹಗಳನ್ನು ಪಡೆದರು. ಹೀಗೆ ಶಿವಯೋಗಾಶ್ರಮವು ಸ್ಥಾಪಿತವಾದಂದಿನಿಂದ ಮಲೆನಾಡಿನಲ್ಲಿ ಅನೇಕ ರೀತಿಯಿಂದ ಧರ್ಮಜಾಗೃತಿಯ ಕಾರ್ಯಗಳು ನಡೆದು ಜನತೆಯಲ್ಲಿ ಆಸ್ತಿಕಭಾವನೆ ಒಡಮೂಡುವಂತಾಯಿತು. ಶ್ರೀ ಹಾಲಪ್ಪಶೆಟ್ಟರು ಒಡಕುಹೊಳೆಯಲ್ಲಿ ಸವದತ್ತಿಯ ಶ್ರೀಗಳವರಲ್ಲಿದ್ದು ಅನುಷ್ಠಾನದ ಕ್ರಮ ತಿಳಿದುಕೊಂಡು ಬಂದು ಕಪನಳ್ಳಿಯಲ್ಲಿ ಅನುಷ್ಠಾನ ಮಾಡುತ್ತ  ಆಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.

ಈಗ ಶಿವಯೋಗಾಶ್ರಮದಲ್ಲಿ ಶ್ರೀ ನಿ.ಪ್ರ. ರುದ್ರಮುನಿಸ್ವಾಮಿಗಳು ಪೂಜ್ಯರ ಉದ್ದೇಶಗಳಂತೆ ಗೋರಕ್ಷಣೆ, ಒಕ್ಕಲುತನ ಮೊದಲಾದ ಕಾಯಕಗಳಿಗೆ ಉತ್ತೇಜನ ಕೊಟ್ಟು ಅನುಷ್ಠಾನ ಮಾಡುತ್ತ ಜನರಲ್ಲಿ ನೀತಿ ಸದಾಚಾರಗಳು ನೆಲೆಗೊಳ್ಳುವಂತೆ ಪ್ರಯತ್ನಿಸುತ್ತಿದ್ದಾರೆ. ಇದುವರೆಗೂ ಆಶ್ರಮಕ್ಕೆ ಸ್ಥಿರವಾದ ಕಟ್ಟಡಗಳಿರಲಿಲ್ಲ. ಶ್ರೀಗಳವರು ಅಂದವಾದ ನೂತನ ಮಠವನ್ನು ಕಟ್ಟಿಸಿ ಆಶ್ರಮದ ಶೋಭೆಯನ್ನು ಹೆಚ್ಚಿಸಿದ್ದಾರೆ.

ಹಿರೇಹಾಳದಲ್ಲಿ ಮಂದಿರ

ಹಿರೇಹಾಳು (ತಾ. ರೋಣ ಜಿ. ಧಾರವಾಡ) ಗ್ರಾಮ ಶಿವಯೋಗಮಂದಿರಕ್ಕೆ ಬಹಳ ದೂರದಲ್ಲಿಲ್ಲ. ಅಲ್ಲಿಯ ಭಕ್ತರ ಆಗ್ರಹದಂತೆ ಶ್ರೀಗಳವರು ಅಲ್ಲಿ ಅನುಷ್ಠಾನ ಮಾಡಲು ಒಬ್ಬ ಸಾಧಕರನ್ನು ಕಳಿಸಿದರು.  ಶ್ರೀ ನಿರಂಜನ ಸಿದ್ಧಲಿಂಗಸ್ವಾಮಿಗಳ ಅನುಷ್ಠಾನದ ಪ್ರಭಾವದಿಂದ ಹಿರೇಹಾಳದಲ್ಲಿ ಶಾಖಾಶಿವಯೋಗ ಮಂದಿರದ ಸ್ಥಾಪನೆಯಾಯಿತು. ಅಲ್ಲಿ ಯಾವಾಗಲೂ ಒಬ್ಬ ಸಾಧಕರು ಇದ್ದು ಶಿವಯೋಗದೊಂದಿಗೆ ಜನರಲ್ಲಿ ಪ್ರವಚನಾದಿಗಳಿಂದ ಧರ್ಮಪ್ರಸಾರವನ್ನು ಮಾಡಲು ಅನುಕೂಲತೆಗಳನ್ನು ಅಲ್ಲಿಯ ಭಕ್ತರು ಕಲ್ಪಿಸಿಕೊಟ್ಟಿದ್ದರು.*

ಬದಾಮಿಯ ಶಾಖಾಮಂದಿರ

ಮಂದಿರಕ್ಕೆ ಅನೇಕ ಮುಖವಾಗಿ ಸಹಾಯ ಸಲ್ಲಿಸಿದ ಅಧಿಕಾರಿಗಳಲ್ಲಿ  ರಾ. ಬ. ಕಿತ್ತೂರ ರೇವಣಸಿದ್ಧಪ್ಪಯ್ಯನವರೂ (Retired D.D.C.) ಒಬ್ಬರು. ಅವರ ಧರ್ಮಪ್ರೇಮ ಸಮಾಜಾಭಿಮಾನಿಗಳ ಗುರುತೆಂದು ಶಿವಯೋಗಮಂದಿರದ ಅಭಿಮಾನಿಗಳು ಹಿತಚಿಂತಕರೂ ಧರ್ಮ ಕಾರ್ಯಕ್ಕೆಂದು ಬದಾಮಿಯಲ್ಲಿ ಶಾಖಾ ಶಿವಯೋಗಮಂದಿರವನ್ನು ಶಾ.ಶ. ೧೮೪೮ (ಕ್ರಿ.ಶ. ೧೯೨೬) ರಲ್ಲಿ ಸ್ಥಾಪಿಸಿದರು. ಈ ಕಾರ್ಯದಲ್ಲಿ ಇಲಕಲ್ಲ ಶ್ರೀ ಮಹಾಂತಸ್ವಾಮಿಗಳು, ಶ್ರೀ ಜಡೇಸಿದ್ದಲಿಂಗಸ್ವಾಮಿಗಳು ಮತ್ತು ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಅಲ್ಲಲ್ಲಿ ಸಂಚರಿಸಿ ನಿಧಿಸಂಗ್ರಹ ಮಾಡಿದರು. ಅಂದವಾದ ಶಿವಾನುಭವ ಮಂಟಪವನ್ನು ಕಟ್ಟಿಸಿದರು. ಈ ಕಾರ್ಯದಲ್ಲಿ ಶ್ರೀ ಕಿತ್ತೂರ ಸಾಹೇಬರಲ್ಲಿ ವಿಶ್ವಾಸವುಳ್ಳ ಅನೇಕ ಜನರು ಸಹಾಯಸಲ್ಲಿಸಿದರು.   ಹುಬ್ಬಳ್ಳಿಯ ಶ್ರೀ ಬಸವಶೆಟ್ಟೆಪ್ಪ ನೀಲಿ ಅವರು ಒಂದು ಉತ್ತಮ ಭಾವಿಯನ್ನು ಕಟ್ಟಿಸಿದರು.  ಇಲ್ಲಿ ಪ್ರವಾಸಿ ಭಕ್ತರ ಮಾಹೇಶ್ವರ ಶಿವಪೂಜೆಗೆ ಪ್ರಸಾದಕ್ಕೆ ಅನುಕೂಲತೆಗಳನ್ನು ಊರ ಪ್ರಮುಖರು ಒದಗಿಸಿಕೊಟ್ಟರು.

 ಈ ಶಾಖಾಮಂದಿರದ ಸ್ಥಾಪನೆಯಿಂದ ಬದಾಮಿಯ ಭಕ್ತರಿಗೆ ಬಹಳ ಅನುಕೂಲವಾಯಿತು. ಆಗಾಗ ಇಲ್ಲಿ ನಡೆಯುತ್ತಿದ್ದ ಪುರಾಣ ಪ್ರವಚನಗಳಿಂದ ಜ್ಞಾನ ಪ್ರಸಾರವು ಜನತೆಯಲ್ಲಿ ಜಾಗ್ರತಿಯನ್ನು ತಂದಿತು ಇಲ್ಲಿ ಭಾವಿಯ ನೀರಿನ ಉಪಯೋಗಪಡೆದು ಒಂದು ಹಣ್ಣಿನ ತೋಟವನ್ನು ಬೆಳೆಸಿದ್ದರು. ಬಿಲ್ವಪತ್ರಿಯ ಬನವೂ ಇದೆ. ಕೆಲವು ವರ್ಷ ಇಲ್ಲಿ ಇಂಗ್ಲೀಷ ಶಾಲೆಯೂ ನಡೆಯಿತು. ಬದಾಮಿಯ ಶಾಲಾಮಂದಿರದಲ್ಲಿ ಮಂದಿರದ ಶ್ರೀಗಳವರು ಮತ್ತು ಪ್ರವಾಸಿ ಜನರು ತಂಗುವದಕ್ಕೆ ಅನುಕೂಲತೆಯನ್ನು ಕಲ್ಪಿಸಲಾಗಿದೆ.

 ಈ  ಶಾಖಾಶಿವಯೋಗಮಂದಿರಗಳೆಲ್ಲ ಶ್ರೀಗಳವರ ಕರ್ತೃತ್ವ ಶಕ್ತಿಯ ಜೀವಂತ ಪ್ರಮಾಣಗಳಾಗಿವೆ. ಶ್ರೀಗಳವರು ಮಂದಿರದ ಸಾಧಕರಿಗೆ ಕೇವಲ ಅನುಕೂಲ ಮಠಗಳಿಗೆ ಅಧಿಕಾರಿಗಳಾಗಲು ಪ್ರೇರಣೆಯನ್ನು ಕೊಡದೆ ಅವರು ತಮ್ಮ ತಪೋಬಲದಿಂದ ಹೊಸ ಮಂದಿರಗಳನ್ನೇ ಅಶ್ರಮಗಳನ್ನೇ ಸ್ಥಾಪಿಸಿ ತ್ಯಾಗಮಯ ಜೀವನವನ್ನು ಸಾಗಿಸುವಂತೆ ಬೋಧಿಸುತ್ತಿದ್ದರು. ಈ ಆಶ್ರಮಗಳೆಲ್ಲ ಮಂದಿರದ ಶಿವಯೋಗಿ ಸಾಧಕರ ಅನುಷ್ಠಾನ ಪ್ರಭಾವದ ಪರಿಣಾಮವಾಗಿಯೇ ಮೈದಾಳಿ ಬಂದಿವೆ, ಬರುತ್ತಿವೆ. ಅವುಗಳ ಮುಖಾಂತರ ಅನೇಕ ಬಗೆಯಾಗಿ ಜನತಾ ಜಾಗ್ರತಿಯ ಮಹಾಕಾರ್ಯಗಳು ಯಶಸ್ವಿಯಾಗಿ ಕೈಗೂಡಿವೆ.

Related Posts