ಒಂದು ನಿರಾಧಾರ ಆರೋಪದ ಕುರಿತು

( ಇತ್ತೀಚಿಗೆ ಮಾನ್ಯ ಶ್ರೀಡಾ. ವಡ್ಡಗೆರೆ ನಾಗರಾಜಯ್ಯನವರು ಈ ಕೆಳಗಿನಂತೆ ಒಂದು ಸುಳ್ಳು ಸುದ್ದಿಯನ್ನು ಪರಮಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳನ್ನು ಕೇಂದ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದರು. ಅವರಿಗೆ ಬರೆದ ಪತ್ರವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

ಈ ಲೇಖನ ಮಾನ್ಯ ಶ್ರೀಡಾ. ವಡ್ಡಗೆರೆ ನಾಗರಾಜಯ್ಯನವರು ತಪ್ಪು ಸಂದೇಶವನ್ನು ಸಾರ್ವಜನಿಕರಲ್ಲಿ ಪ್ರಸಾರ ಮಾಡಿದ್ದರಿಂದ ಈ ಸ್ಪಷ್ಟೀಕರಣವಿರುತ್ತದೆ.

 ಅವಸರದಲ್ಲಿ ಮಾಡುವ ನಿರಾಧಾರ ಆರೋಪಗಳು (hasty and unfounded accusations) ಒಂದು ಗಂಭೀರ ವಿಷಯವಾಗಿದೆ. ಇಂತಹ ಆರೋಪಗಳನ್ನು ಮಾಡುವಾಗ ಅಥವಾ ಅವುಗಳನ್ನು ಪರಿಗಣಿಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.

 ತಕ್ಷಣದ ಪ್ರಭಾವ: ಯಾರಾದರೂ ಮಾಡುವ ನಿರಾಧಾರ ಆರೋಪಗಳು ಅನೇಕ ಸಂದರ್ಭಗಳಲ್ಲಿ ತಕ್ಷಣದ ಪ್ರಭಾವವನ್ನು ಉಂಟುಮಾಡುತ್ತವೆ.

ಖಚಿತ ಮಾಹಿತಿಯಿಲ್ಲದಿರುವುದು: ಅರ್ಜೆಂಟ್ ಪರಿಸ್ಥಿತಿಯಲ್ಲಿಯೇ ಆರೋಪಗಳನ್ನು ಮಾಡುವುದು, ಸಾಕ್ಷ್ಯಗಳ ಅಥವಾ ಪರಿಶೀಲಿತ ಮಾಹಿತಿಯ ಕೊರತೆಯ ಕಾರಣದಿಂದಾದರೂ ಆಗಬಹುದು.

 ಕಾನೂನು ಸಮಸ್ಯೆಗಳು: ನಿರಾಧಾರ ಆರೋಪಗಳು ಕಾನೂನು ಹಕ್ಕುಗಳನ್ನು ಉಲ್ಲಂಘಿಸಬಹುದಾಗಿದೆ. ತಪ್ಪು ಆರೋಪಗಳು ಮಾನನಷ್ಟ ಮೊಕದ್ದಮೆಗಳಿಗೆ ಕಾರಣವಾಗಬಹುದು.

 ವ್ಯಕ್ತಿಗತ ಮತ್ತು ವೃತ್ತಿಪರ ಪ್ರಭಾವ: ನಿರಾಧಾರ ಆರೋಪಗಳು ವ್ಯಕ್ತಿಗಳ ಖ್ಯಾತಿಗೆ ತೀವ್ರ ಹಾನಿ ಉಂಟುಮಾಡಬಹುದು. ಇದರಿಂದ ಅವರ ವೃತ್ತಿಪರ ಜೀವನದ ಮೇಲೆ ದೊಡ್ಡ ಪರಿಣಾಮ ಬೀಳಬಹುದು.

 ಆತ್ಮವಿಶ್ವಾಸ ಮತ್ತು ಸಂಬಂಧಗಳು: ಇಂತಹ ಆರೋಪಗಳು ಆತ್ಮವಿಶ್ವಾಸವನ್ನು ಹಾಳುಮಾಡಬಹುದು ಮತ್ತು ವ್ಯಕ್ತಿಗಳ ನಡುವಿನ ನಂಬಿಕೆಯನ್ನು ಕುಸಿತಗೊಳಿಸಬಹುದು.

 ಸಮಯವಿಲ್ಲದ ಪರಿಶೀಲನೆ: ಅವಸರದ ಆರೋಪಗಳು ಸತ್ಯಾಸತ್ಯತೆಗಳನ್ನು ನಿಖರವಾಗಿ ಪರಿಶೀಲಿಸಲು ಸಮಯವಿಲ್ಲದ ಕಾರಣದಿಂದ ಉಂಟಾಗಬಹುದು.

ನಿರಾಧಾರ ಆರೋಪಗಳನ್ನು ತಪ್ಪಿಸಲು ಸೂಕ್ತ ಮಾಹಿತಿಯನ್ನು ಸಂಗ್ರಹಿಸಿ, ಸಾಕ್ಷ್ಯಾಧಾರವನ್ನು ಪರಿಶೀಲಿಸಿ, ಮತ್ತು ಆ ನಂತರವೇ ಆರೋಪಗಳನ್ನು ಮಾಡುವುದು ಉತ್ತಮ. ಇವುಗಳನ್ನು ಕೈಗೊಳ್ಳುವುದರಿಂದ ತಪ್ಪು ಆರೋಪಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಮತ್ತು ಎಲ್ಲರೂ ನ್ಯಾಯವನ್ನು ಅನುಭವಿಸಬಹುದು. )

  

ದಿ.೨ ಜೂನ ೨೦೨೪

 ಗೆ, ಮಾನ್ಯಶ್ರೀ ಡಾ.ವಡ್ಡಗೆರೆ ನಾಗರಾಜಯ್ಯ

ಬೆಂಗಳೂರು

ಮೊಬೈಲ ಸಂಖ್ಯೆ :  8722724174

ಮಾನ್ಯರೆ,

ವಿಷಯ: ತಾವು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಶ್ರದ್ಧೆಯ ಗುರುಗಳಾದ ಪರಮಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಕುರಿತು ಸುಳ್ಳು ಸಂಗತಿಗಳನ್ನು ಅಪಪ್ರಚಾರ ಮಾಡುತ್ತಿರುವದರ ಕುರಿತು,

 ತಾವು ದಿ. ೩೧-೦೫-೨೦೨೪ ವಾಟ್ಸ್ಯಾಪ ಜಾಲತಾಣಗಳಲ್ಲಿ ಹರಿಬಿಟ್ಟ ವಿಷಯ

 “ಕೊಲ್ಹಾಪುರದ ಶಾಹು ಮಹಾರಾಜರು ಲಿಂಗಾಯತ ಧರ್ಮದ ದೀಕ್ಷೆ ಸ್ವೀಕರಿಸಲು ಒಲವು ತೋರಿಸಿದಾಗ ಲಿಂಗಾಯತ ದೀಕ್ಷೆ ನೀಡುವುದು ಬೇಡವೆಂದು ಪ್ರತಿರೋಧ ಒಡ್ಡಿದವರೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು. ಅಂದು ಶಾಹು ಮಹಾರಾಜರು ಲಿಂಗಾಯತ ಧರ್ಮದ ದೀಕ್ಷೆಯನ್ನು ಸ್ವೀಕಾರ ಮಾಡಿದ್ದಿದ್ದರೆ ಇಂದು  ಮಹಾರಾಷ್ಟ್ರ ರಾಜ್ಯದಲ್ಲಿ ವೀರಶೈವ ಜಂಗಮರೆಂದು ಗುರುತಿಸಿಕೊಂಡಿರುವ ಸಿಂಹಪಾಲು ಜನ ಲಿಂಗಾಯತರಾಗಿ ಉಳಿದಿರುತ್ತಿದ್ದರು. ಅಂತಹ ಸಾಧ್ಯತೆಯನ್ನು ತಪ್ಪಿಸಿದ್ದು ಇದೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು.” 

ಎಂದು ಬರೆದು ನಂತರ ಅದನ್ನು ಫೇಸಬುಕ್ ಜಾಲತಾಣಗಳ ಮೂಲಕ ಪ್ರಚಾರ ಮಾಡಿರುವಿರಿ.

 

ವಿಷಯ ತಿಳಿದು ನಾನು ತಮಗೆ ಅಂದೇ ೩೧-೦೫-೨೦೨೪ ರಂದು ತಮ್ಮ ಮೊಬೈಲ ಸಂಖ್ಯೆ :  8722724174 ಗೆ ಫೋನ ಮಾಡಿ ತಾವು ಪ್ರಚಾರ ಮಾಡುತ್ತಿರುವ ವಿಷಯಕ್ಕೆ ಸಾಕ್ಷಿ ಮತ್ತು ಪುರಾವೆಗಳನ್ನು  ಕೇಳಿದೆ.

ಅದಕ್ಕೆ ಪ್ರತಿಯಾಗಿ ತಾವು ಯಾರದೋ ಬಾಯಿಯಿಂದ ಕೇಳಿದ ವಿಷಯವನ್ನು ಬರೆದಿರುವೆ ಎಂದು ತಿಳಿಸಿರುವಿರಿ.

ಒಬ್ಬ ಸಂಶೋಧಕ,ಕವಿ, ಸಾಹಿತಿ ಮತ್ತು ವಿಶ್ವವಿದ್ಯಾಲಯದಿಂದ ಡಾಕ್ಟರೇಟ ಪಡೆದುಕೊಂಡಿರುವ ತಮ್ಮ ವ್ಯಕ್ತಿತ್ವಕ್ಕೆ ಈ ರೀತಿಯ ಸ್ಪಷ್ಠೀಕರಣಗಳು ಶೋಭೆ ತರುವದಿಲ್ಲ.

 

ಯಾರೋ ಹೇಳಿದರು ಎಂದ ಮಾತ್ರಕ್ಕೆ ಹಿಂದೆ ಮುಂದೆ ನೋಡದೇ  ಜಾಲತಾಣಗಳಲ್ಲಿ ಹರಿಬಿಡಲು ಇದು ಕಾಗಕ್ಕ ಗುಬ್ಬಕ್ಕನ ಕಥೆಯಲ್ಲ.

 

 ತಾವು ಬರೆದಿದ್ದು ನಮ್ಮ ಆರಾಧ್ಯ ಗುರುಗಳಾದ ಪರಮಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ  ಛತ್ರಪತಿ ಶಾಹು ಮಹಾರಾಜರ ಕುರಿತು ಎಂಬುದನ್ನು ತಾವು ಅಷ್ಠೋಂದು ಲಘುವಾಗಿ ಪರಿಗಣಿಸಬಾರದಾಗಿತ್ತು.

ನಿಮಗೆ ನಿಮ್ಮ ಆರಾಧ್ಯರು ಹೇಗೆ ಶ್ರೇಷ್ಠರೋ ಹಾಗೆ ನಮಗೂ ನಮ್ಮ ಗುರುಗಳು ಶ್ರೇಷ್ಠರು ಎಂದು ತಾವು ಯಾವ ಕ್ಷಣದಲ್ಲೂ ಅಥವ ಯಾರ ಬೆಂಬಲದ ಕೃಪಾ ಛತ್ರದಲ್ಲಿದ್ದಾಗಲೂ ಮರೆಯಬಾರದು.

 ಸಮಾಜದ ಪ್ರಶಾಂತ ವಾತಾವರಣದಲ್ಲಿ ದುರ್ಗಂಧವನ್ನೆಬ್ಬಿಸಿದ ವಿವಾದದ ವಿಷಯ ಕುರಿತು ದಾಖಲೆ ಸಮೇತ ಬರೆಯದೇ, ಬರೆಯುವ ತೆವಲಿಗೆ ಬರೆದು ಜಾಲತಾಣಗಳಲ್ಲಿ ಹರಿಬಿಡುವುದು  ಅಕ್ಷಮ್ಯ ಅಪರಾಧ.ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೆನಿಸುವದಿಲ್ಲ ಅದು ಅನೈತಿಕ ಬೌದ್ಧಿಕತೆ ಎಂದೆನಿಸುತ್ತದೆ

 ೩೧-೦೫-೨೦೨೪ ರಂದು ತಮ್ಮ ಜೊತೆ ಮಾತನಾಡಿದಾಗ ಸಂಬಂದಿಸಿದ ಮಾಹಿತಿ ಕೊಡಿ ಎಂದು ನನಗೆ ತಾವು ಹೇಳಿದುದರಿಂದ  ನಾನು ಸಂಬಂಧಿಸಿದ ಮಾಹಿತಿಗಳನ್ನು ತಮಗೆ ಒದಗಿಸುತ್ತಿರುವೆ.

ಛತ್ರಪತಿ ಶಾಹು ಮಹಾರಾಜ ಕೊಲ್ಲಾಪುರ

 ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರು ಜನ್ಮ ತಾಳಿದ್ದು  ೨೪.೬.೧೮೭೪ ಮತ್ತು ಮರಣ ಹೊಂದಿದ್ದು  -೬.೫, ೧೯೨೨ (ಜೀವಿತಾವಧಿ ೪೭ ವರ್ಷಗಳು).

ಪರಮಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಜನ್ಮ ತಾಳಿದ್ದು ೧೧-೦೯-೧೮೬೭ ಮತ್ತು ಲಿಂಗೈಕ್ಯರಾದುದು ೧೯-೦೨-೧೯೩೦.(ಜೀವಿತಾವಧಿ ೬೩ ವರ್ಷಗಳು)

ಇವರೀರ್ವ ಮಹಾತ್ಮರ  ಜೀವಿತಾವಧಿಯ  ಸಮಯದಲ್ಲಿ  ಪರಮಪೂಜ್ಯ ಹಾನಗಲ್ಲ ಶ್ರೀಗಳು  ಮಹಾರಾಷ್ಟ್ರರಾಜ್ಯಕ್ಕೆ ಪ್ರಯಾಣ ಬೆಳಿಸಿದ್ದು ಮೂರುಬಾರಿಯಾದರೂ ಒಮ್ಮೆಯೂ ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರನ್ನು ಭೇಟಿಯಾಗಿಲ್ಲ

  1. ೧೯೦೭ ಸೊಲ್ಲಾಪುರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಮೂರನೆ ಯ ಅಧಿವೇಷನ ಕ್ಕೆ ಹೋಗಿದ್ದು
  2. ೧೯೦೯ ಗಡಹಿಂಗ್ಲಜಗೆ ಇಂಗ್ಲೀಷ ವಿದ್ವಾಂಸರಾದ ಶ್ರೀ ವೀರಭದ್ರ ಶ್ರೇಷ್ಠೀ ಯವರನ್ನು ಕರ್ನಾಟಕದಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ವ್ಯವಸ್ಥೆಮಾಡಲು .
  3. ೧೯೨೦ ಸೊಲ್ಲಾಪುರಕ್ಕೆ ಪೂಜ್ಯ ನಾಲತ್ವಾಡ ವೀರೇಶ್ವರ ಶರಣರ ಅಂತ್ಯಕ್ರಿಯೆಗೆ ಹೋಗಿದ್ದು.

ಶಾಹುಮಹಾರಾಜರು ಕರ್ನಾಟಕಕ್ಕೆ ಎಂದೂ  ಭೇಟಿ ನೀಡಿಲ್ಲ ೧೯೧೯-೨೦ರಲ್ಲಿ ನಡೆದ ದಸರಾ ಉತ್ಸವದ ಸಂದರ್ಭದಲ್ಲಿ ಅಖಿಲ ಭಾರತ ಕಾಸ್ಟ್ ಕಾನ್ಫರೆನ್ಸ್ ನಡೆದಿತ್ತು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಶಾಹು ಮಹಾರಾಜರಿಗೆ ಆಮಂತ್ರಣ ನೀಡಿ, ಈ ಅಧಿವೇಶನದಲ್ಲಿ ಪಾಲ್ಗೊಳ್ಳ ಬೇಕೆಂದು ಕೋರಿದರು. ಆದರೆ ಶಾಹು ಮಹಾರಾಜರು ಅದರಲ್ಲಿ ತಾವು ಭಾಗವಹಿಸದ ಕಾರಣದಿಂದ ಶ್ರೀ ವಿ.ಆರ್.ಶಿಂದೆ ಎಂಬ ಸತ್ಯಶೋಧಕ ಸಮಾಜದ ಮುಖಂಡರನ್ನು ಮೈಸೂರಿಗೆ ಕಳುಹಿಸಿದ್ದರು.

ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದೊಂದಿಗೆ ಆರಂಭವಾದ ಕಟು ಬ್ರಾಹ್ಮಣವಾದದಿಂದ ಸಂತ್ರಸ್ತವಾದ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆಯ ಬಿರುಗಾಳಿ ಎಬ್ಬಿಸಿದವರಲ್ಲಿ ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರು  ಚರಿತ್ರೆಯಲ್ಲಿ ಎದ್ದು ಕಾಣುವ ಹೆಸರು.

೧೮೯೪ ರಲ್ಲಿ ಜರುಗಿದ ಅವರ ಪಟ್ಟಾಭಿಷೇಕದ ಧಾರ್ಮಿಕ ಸಮಾರಂಭದಲ್ಲಿ ರಾಜಮನೆತನದ ಬ್ರಾಹ್ಮಣ ಪುರೋಹಿತ ನಾರಾಯಣ ಭಟ್ ಅವರು ಶಾಹು ಶೂದ್ರ ವರ್ಣಕ್ಕೆ ಸೇರಿದವರು ಎಂದು ನಿರ್ದಿಷ್ಟ ವೇದೋಕ್ತ ವಿಧಿಗಳನ್ನು ಮಾಡಲು ನಿರಾಕರಿಸಿದರು.ಇದು ಶಾಹು ಮಹಾರಾಜರ ಸ್ವಾಭಿಮಾನಕ್ಕೆ ತೀವೃ ಆಘಾತವನ್ನುಂಟುಮಾಡಿತು. ಇದನ್ನು ವೇದೋಕ್ತ ವಿವಾದ ಎಂದು ಕರೆಯಲಾಯಿತು.

ಇದು ಶಾಹು ಮಹಾರಾಜರು  ಆರ್ಯ ಸಮಾಜ ಮತ್ತು ಸತ್ಯಶೋಧಕ್ ಸಮಾಜವನ್ನು ಬೆಂಬಲಿಸಲು ಮತ್ತು ಮರಾಠ ಸಮುದಾಯದ ಹಕ್ಕುಗಳಿಗಾಗಿ ಪ್ರಚಾರ ಮಾಡಲು ಕಾರಣವಾಯಿತೇ ಹೊರತು ವೀರಶೈವ-ಲಿಂಗಾಯತ ಧರ್ಮವನ್ನಲ್ಲ . ಅವರು ಪುರೋಹಿತರನ್ನು ತೆಗೆದುಹಾಕುವ ಮತ್ತು ಕ್ಷತ್ರ ಜಗದ್ಗುರು (ಕ್ಷತ್ರಿಯರ ವಿಶ್ವ ಗುರು) ಎಂಬ ಬಿರುದು ಹೊಂದಿರುವ ಬ್ರಾಹ್ಮಣೇತರರ ಧಾರ್ಮಿಕ ಶಿಕ್ಷಕರಾಗಿ ಯುವಕ ಮರಾಠರನ್ನು ನೇಮಿಸುವ ಧೈರ್ಯದ ಹೆಜ್ಜೆಯನ್ನು ತೆಗೆದುಕೊಂಡರು.

 ಮಾನ್ಯಶ್ರೀ ಡಾ.ವಡ್ಡಗೆರೆ ನಾಗರಾಜಯ್ಯನವರೆ , ದಯವಿಟ್ಟು ಇಲ್ಲಿ ಗಮನಿಸಿ ಆ ಸಂಧರ್ಭದಲ್ಲಿ ವೀರಶೈವ-ಲಿಂಗಾಯತವೂ ಮಹಾರಾಷ್ಟ್ರದಲ್ಲಿ ಶೂದ್ರರ ಸ್ಥಾನದಲ್ಲಿಯೇ ಇತ್ತು ( ಪರಳಿ ವೈದ್ಯನಾಥ ದೇವಾಲಯದಲ್ಲಿ ವೀರಶೈವ-ಲಿಂಗಾಯತರ ಪ್ರವೇಶ ನಿರಾಕರಣೆ ೧೯೧೫-೧೯೨೯) ಹೈದರಾಬಾದ ನಿಜಾಂ ಕೋರ್ಟ-ವಾದ ವಿವಾದ ಮತ್ತು  ೧೯೦೯ ರಲ್ಲಿ ಸೊಲ್ಲಾಪುರದ ವಾರದ ಮಲ್ಲಪ್ಪನವರಿಂದ ವೀರಶೈವ-ಲಿಂಗಾಯತರನ್ನು ಶೂದ್ರ ಸ್ಥಾನದಿಂದ ಮೇಲೆತ್ತಲು “ಲಿಂಗಿ ಬಾಹ್ಮಣ” ರೆಂದು ಮಾಡಿದ ಪ್ರಯತ್ನಗಳು).

ಶಾಹು ಮಹಾರಾಜರು ಬ್ರಾಹ್ಮಣ ಗುಂಪುಗಳ ಅಪಪ್ರಚಾರವನ್ನೆದುರಿಸಲು ಬ್ರಾಹ್ಮಣೇತರರಿಗೆ ಪತ್ರಿಕೆಗಳನ್ನು ಶುರು ಮಾಡಲು ನೆರವು ನೀಡಿದರು. ಆದರೆ ಅವರೆಂದಿಗೂ ಜಾತಿವಾದವನ್ನು ಬೆಂಬಲಿಸಲಿಲ್ಲ.

ಶಾಹು ಮಹಾರಾಜರ  ಅವರ ಈ ಸಾಮಾಜಿಕ ಕ್ರಾಂತಿಯ ಆಂದೋಲನದ ಹಿಂದೆ ಇದ್ದುದು

  1. ಆರ್ಯ ಸಮಾಜ,
  2. ಅನಿಬೆಸಂಟರ ಥಿಯೋಸಾಫಿಕಲ್ ಸೊಸೈಟಿ,
  3. ಮಹಾತ್ಮ ಫುಲೆ ಅವರ ಸತ್ಯಶೋಧಕ ಸಮಾಜ ಮತ್ತು
  4. ಅಮೆರಿಕನ್ ಕ್ರಿಶ್ಚಿಯನ್ ಮಿಷನರಿಯೊಂದರ ಸ್ಪೂರ್ತಿ.

ಹೊರತು ವೀರಶೈವ-ಲಿಂಗಾಯತ ಧರ್ಮ ವಲ್ಲ ( ಉಲ್ಲೇಖ : ರಾಜರ್ಷಿ ಶಾಹು ಛತ್ರಪತಿ.ಲೇಖಕ ಪ್ರೋ.ಹನುಮಂತ.Pages 898. 400.00.Year of Publication: 2018.Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ .Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು 560174 ).

 ವಸ್ತುಸ್ತಿತಿ ಹೀಗಿದ್ದಾಗ ಮತ್ತು ಶಾಹು ಮಹಾರಾಜರ ಜೀವಿತಾವಧಿಯಲ್ಲೇ ವೀರಶೈವ-ಲಿಂಗಾಯತ ಧರ್ಮೀಯರು ಶೂದ್ರರಾಗಿಯೇ ಇದ್ದ ಸಂಧರ್ಭದಲ್ಲಿ ಅವರು ಹೇಗೆ  ಲಿಂಗಾಯತ ಧರ್ಮದ ದೀಕ್ಷೆ ಸ್ವೀಕರಿಸಲು ಒಲವು ತೋರಿಸಲು ಸಾಧ್ಯ ?.

 ಕಾಮಾಲೆಯ ಕಣ್ಣುಗಳನ್ನು ಹೊಂದಿದವರಿಗೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳು ಮಸಕಾಗಿಯೇ ಕಾಣುತ್ತವೆ.   ಅವರ ಧರ್ಮ ಜಾಗೃತಿಗೆ ಒಂದು ಚಿಕ್ಕ ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು.

೧೯೧೦ ರಲ್ಲಿ ಬೀಳಗಿ ತಾಲೂಕಿನ ಹಲಗಲಿ ಗ್ರಾಮಕ್ಕೆ ಶ್ರೀ ಕುಮಾರ ಸ್ವಾಮಿಗಳು ಶಿವಯೋಗ ಮಂದಿರದ ಭಿಕ್ಷೆಗೆಂದು ಹೋಗಿದ್ದರು. ಈ ಊರಿನ ವಿವಿಧ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶಿವಸಿದ್ಧ ಸರನಾಯಕ ಎಂಬ ಈ ಊರ ಪ್ರಮುಖರು ಮೂರುಸಾವಿರ ರೂಪಾಯಿಗಳನ್ನು ಕೂಡಿಸಿ ತಮ್ಮೆಲ್ಲರ ಕಾಣಿಕೆಯಾಗಿ ನೀಡಲು ಬಂದರು. ಪೂಜ್ಯರಿಗೆ ಅಲ್ಲಿ ಆಚಾರ ವಿಚಾರಗಳು ಭಿನ್ನವೆನಿಸಿದವು.ಅವರು ಆ ಕಾಣಿಕೆ ಸ್ವೀಕರಿಸಲಿಲ್ಲ.

ಕಾಣಿಕೆ ತೆಗೆದುಕೊಳ್ಳಲೂ ನಿಯಮಗಳಿರುತ್ತವೆ ಎನ್ನುವುದನ್ನು ಶ್ರೀ ಕುಮಾರ ಸ್ವಾಮಿಗಳು ಸ್ಪಷ್ಟಪಡಿಸಿದ್ದರು. ಶ್ರೀ ಕುಮಾರ ಸ್ವಾಮಿಗಳ ಈ ನಿಲವು ಕಾಣಿಕೆ ನೀಡಲು ಬಂದವರನ್ನು ಬಿಕ್ಕಟ್ಟಿನಲ್ಲಿ ಮುಳುಗಿಸಿತ್ತು. ತಮ್ಮ ಜನಾಂಗದೊಳಗಿನ ಸದ್ಯದ ಸ್ಥಿತಿಯನ್ನು ಅವರು ನೋವಿನಿಂದಲೇ ಶ್ರೀ ಕುಮಾರ ಸ್ವಾಮಿಗಳಲ್ಲಿ ಬಿನ್ನವಿಸಿಕೊಂಡಿದ್ದರು. `ನಮ್ಮ ಜನಾಂಗದವರು ಹೆಚ್ಚು ಸಂಖ್ಯೆಯಲ್ಲಿಲ್ಲ ಬುದ್ದಿ. ನಮ್ಮಲ್ಲಿ ಲಿಂಗದೀಕ್ಷೆ ಪಡೆಯಬೇಕು ಅನ್ನೋ ಮನೋಭಾವ ಎಲ್ಲರಲ್ಲೂ ಇಲ್ಲ”

ಮೂರು ಸಾವಿರ ರೂಪಾಯಿಗಳಿಗೆ ಧಾರ್ಮಿಕತೆ ಮಾರಿಕೊಂಡ ನಡತೆ ತಮ್ಮದಲ್ಲವೆಂಬ ಶ್ರೀ ಕುಮಾರ ಸ್ವಾಮಿಗಳ ನಿಷ್ಠುರತೆ ಗೆ ಬೆಚ್ಚಿದ ಹಲಗಲಿ ಗ್ರಾಮದ ಭಕ್ತರು ಸಾಮೂಹಿಕ ಲಿಂಗದೀಕ್ಷೆ ಪಡೆದು  ಗುರುಗಳಿಗೆ ಕಾಣಿಕೆ ಸಲ್ಲಿಸಿದ್ದು ಇತಿಹಾಸ. ಅವರು ಎಂದೂ ನಂಬಿ ಬಂದ ಭಕ್ತರನ್ನು ನಡು ನೀರಿನಲ್ಲಿ ಕೈಬಿಟ್ಟವರಲ್ಲ. ಮನಸ್ಸನ್ನು ಪರಿವರ್ತನೆ ಮಾಡಿ ಭಕ್ತರಿಗೆ ಧಾರ್ಮಿಕ ದೀಕ್ಷೆ ಕೊಟ್ಟವರು

 ತಾವು ತಮ್ಮ  ಸುಳ್ಳು ಸುದ್ದಿ ಹರಡಿದರ ಪರಿಣಾಮ ನಮಗಾದ ನೋವು ತಮಗೆ ಅರ್ಥವಾಗಲಿಕ್ಕಿಲ್ಲ. ಬಹುಷಃ ತಮಗೆ ತಮಾಷೆಯ ವಸ್ತುವಾಗಿರಬಹುದು.

ಕೆಲವರಿಗೆ ಕುಡಿಯುವ ನೀರಿನಲ್ಲಿ ಮೂತ್ರ ಮಾಡಿ ದೂರದಲ್ಲಿ ನಿಂತು ಆ ನೀರನ್ನು ಕುಡಿಯುವವರನ್ನು ಕಂಡು ಸಂತೋಷ ಪಡುವ ಚಾಳಿಯಿರುತ್ತದೆ ತಾವು ಆ ಗುಂಪಿಗೆ ಸೇರಬಾರದು ಎಂಬ ನನ್ನ ಅಭಿಮಾನಪೂರ್ವಕ ಹಕ್ಕೋತ್ತಾಯ.

ತಾವು ಈ ನಾಡು ಕಂಡ ಅಪರೂಪದ ಕವಿ, ಸಂಶೋಧಕ, ಸಂಸ್ಕೃತಿ ಚಿಂತಕ, ಹೋರಾಟಗಾರರು, ಬರೆಯಿರಿ ಆದರೆ ದಾಖಲೆಗಳಿಲ್ಲದೆ ಮತ್ತು ಸಾಕ್ಷಿಗಳಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಬೇಡಿ ಎಂದು ನನ್ನ ಕಳಕಳಿಯ ಮನವಿ.

ಇತಿ ನಮಸ್ಕಾರಗಳೊಂದಿಗೆ,

ಶ್ರೀಕಂಠ.ಚೌಕೀಮಠ

ಅಧ್ಯಕ್ಷ :ಅಖಿಲ ಭಾರತ ವೀರಶೈವ ಮಹಾಸಭಾ .ದೆಹಲಿ ರಾಜ್ಯ ಘಟಕ

ಸೇವಕ:ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ.

Related Posts