ಜ.ಚ.ನಿ
”ಗಿಡ ಮಾಗಡಿ ಎಂಬ ಪುರದ ಜಂಗಮದೇವ
ಮೃಡಕಣಾ ಭಿಕ್ಷವ ಬೇಡ್ಯಾನು !
ಪೊಡವಿಗೆ ಬಾಗಿ ನೀಡಲು ದೃಢದಿಂದ
ನೀಡಿಸಿಕೊಂಡಾನು |
ಮಲಾಪೂರ ತೀರದಿ ವಿರಕ್ತ ಜಂಗಮನೊಬ್ಬ
ನಲವಿಂದ ಹುಚ್ಚನೆನಿಸ್ಯಾನು !
ಲೋಲ ಜನಗಳು ಹೆಸರನೇ ಇಟ್ಟಾರು ಆ
ಸ್ಥಳದಲ್ಲಿಯೆ ಹೂಳಿಸಿಕೊಂಡಾನು”
– ಹಳ್ಳೂರು ಕಾಲಜ್ಞಾನ
(ಕುಮಾರ ಯೋಗಿಯ ಶ್ರೀ ಶಿವಯೋಗ ಮಂದಿರ ಸ್ಥಾಪನೆಯ ಮಣಿಹವನ್ನು ಬಿತ್ತರಿಸುವ ಪುರಾತನ ಕಾಲಜ್ಞಾನವಿದು. ಇದರಿಂದ ಕುಮಾರಯೋಗಿಯ ಕಾರಣಿಕತನವು ಕಣ್ಮನಗಳಿಗೆ ಗೋಚರವಾಗುತ್ತದೆ.)
ಒಂದು ದಿನ ಬೆಳಗಿನ ಒಂಬತ್ತು ಗಂಟೆ, ಕುಮಾರ ಸ್ವಾಮಿಗಳವರು ಬೆಳಗಿನ ಪೂಜೆಯನ್ನು ಪೂರೈಸಿಕೊಂಡು ಹಾನಗಲ್ಲ ಮಠದ ತೂಗುಮಣೆಯ ಮೇಲೆ ಮಂಡಿಸಿದ್ದಾರೆ. ಪುರಾತನ ತಾಳೆಗರಿಯೊಂದನ್ನು ಹಸ್ತದಲ್ಲಿ ಹಿಡಿದು ಓದುತ್ತಿದ್ದಾರೆ. ಒಮ್ಮೊಮ್ಮೆ ತಟ್ಟನೆ ಸಂಸ್ಥೆಯ ಸ್ಥಾಪನೆಯ ವಿಷಯ ನೆನಪಿಗೆ ಬಂದು ಹಾಗೆಯೆ ಯೋಚನಾಮಗ್ನರಾಗುತ್ತಿದ್ದಾರೆ. ಅವರು ತೂಗುಯ್ಯಾಲೆಯಲ್ಲಿ ಕುಳಿತಿದ್ದರು. ಅದರ ಸೊಗದಲ್ಲಿ ತೂಗಿ ತೊನೆದಿದ್ದಿಲ್ಲ. ತೂಗುಯ್ಯಾಲೆಯಂತೆ ಅವರ ಮನಸ್ಸು, ಒಮ್ಮೆ ಪುರಾತನ ಗ್ರಂಥಪರಿಶೋಧನೆಯತ್ತ ಇನ್ನೊಮ್ಮೆ ಭಾವೀ ಶಿವಯೋಗಮಂದಿರ ಸಂಸ್ಥೆಯ ನಿರ್ಮಾಣಯೋಚನೆಯತ್ತ ತೂಗಾಡುತ್ತಿತ್ತು; ತೂಕಹಾಕುತ್ತಿತ್ತು.
ಅಷ್ಟರಲ್ಲಿ ಒಬ್ಬ ಮಹಾವ್ಯಕ್ತಿಯು ಅಲ್ಲಿಗೆ ಹಟಾತ್ತಾಗಿ ಬಂದು ಕಂಡು ಕಾಣದವರಂತೆ ಈ ಮಠದ ಸ್ವಾಮಿಗಳೆಲ್ಲಿ ಎಂದು ಗಟ್ಟಿಯಾಗಿ ಕೇಳಲು ಅಲ್ಲಿಯ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಊಳಿಗದವನು ಭಯಭಕ್ತಿಯುತನಾಗಿ ಕೈಸನ್ನೆಯಿಂದ ತೂಗುಮಣೆಯತ್ತ ತೋರಿಸಿ ಅವರೇ ಸ್ವಾಮಿಗಳೆಂದು ಸೂಚಿಸಿದನು. ಮಹಾವ್ಯಕ್ತಿಯು ತೂಗುಯ್ಯಾಲೆಯ ಬಳಿಗೆ ಬಂದು ನಮಿಸದೆ ಈ ಮಠದ ಸ್ವಾಮಿಗಳು ತಾವೇ ಏನು ? “ಅನ್ನುವರು. ಯಾರು ? ‘ಜನರು.’ ಅನ್ನುವವರು ಮೂರ್ಖರು, ಅವರಿಗೆ ಬುದ್ಧಿಯಿಲ್ಲ, ಕಾವಿ ಧರಿಸಿ ಕೋಲು ಹಿಡಿದರೆ ಸ್ವಾಮಿಯಲ್ಲ, ಹಾವುಗೆ ಹಾಕಿ ಹಾಸುಮಂಚದ ಮೇಲೆ ತೂಗಿದರೆ ಸ್ವಾಮಿಯಲ್ಲ. ಎಲ್ಲ ಭೋಗಭಾಗ್ಯಗಳನ್ನು ತೊರೆದು ಬಾಹ್ಯ ಚಿನ್ನಗಳ ಹುಚ್ಚು ಹರಿದು ನೆಲ ಹಾಸಿಕೆಯಾಗಿ ಮುಗಿಲು ಹೊದಿಕೆಯಾಗಿ ಶಮೆದಮೆಗಳೆಂಬ ಸುಗಂಧ ಪುಷ್ಪಗಳನ್ನು ಅಘ್ರಾಣಿಸಿ ಪ್ರಾತಿಭಾಸಿಕವಾದ ಪ್ರಪಂಚವನ್ನು ಪರಹಿತ ಸಾಧನೆಯ ಮಾರ್ಗದಲ್ಲಿ ಸತ್ಯವೆಂದು ಪರಿಭಾವಿಸಿ ಸೇವೆಗೈಯುವ ಸತ್ಯವಿರತಿಯ ಮಾರ್ಗವೆತ್ತ? ಭೋಗಭಾಗ್ಯದ ಸೆಳೆತಕ್ಕೆ ಸಿಕ್ಕಿ ನಾನು ಮಠಾಧಿಕಾರಿ; ನಾನು ಮಹಾಸ್ವಾಮಿ ಎಂಬ ಅಹಮಿಕೆಯಿಂದ ಸೊಕ್ಕಿ ಭೂತಲಕ್ಕೆ ಪಾದವನ್ನು ಸೋಂಕಿಸದೆ ಅಹಂಕಾರ ಮಮಕಾರ ಸರಪಣಿಗಳಿಂದ ಬಿರನೆ ಬಿಗಿದ ಈ ತೂಗುಮಂಚದ ಸಂಕೋಲೆಯ ಸುಖವೆತ್ತ? ಎಂದು ಮುಂತಾಗಿ ಯಾವ ಅಂಕು ಅಳಕು ಇಲ್ಲದೆ ಅಖಂಡಧೈರ್ಯದಿಂದ ಅರ್ಥಪೂರ್ಣವಾಗಿ ಆತ್ಮಾವೇಶದಿಂದ ಆರೋಪಿಸುತ್ತಿರುವ ಆ ಮಹಾವ್ಯಕ್ತಿಯನ್ನು ಕಂಡು ಸ್ವಾಮಿಗಳವರು ಎಷ್ಟು ಮಾತ್ರಕ್ಕು ಮುನಿಸು ತಾಳಲಿಲ್ಲ. ತಾವು ಆ ಕಟುವಾದ ಆರೋಪಣೆಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರಲ್ಲವೆ ಕೋಪಾವೇಶಗಳ ಆರ್ಭಟ? ಆ ಮಾತುಗಳಿಗೂ ಮನಸ್ಸಿಗೂ ತಾಕಲಾಟ? ಶುದ್ಧಮಾರ್ಗಗಾಮಿಗಳಿಗೆ ಸತ್ಯವಾಕ್ ಪ್ರೇಮಿಗಳಿಗೆ ಆ ನುಡಿಗಳು ಕುಸುಮಗಳಾಗಿಯೆ ಪರಿಣಮಿಸಬಲ್ಲವು. ಸ್ವಾಮಿಗಳವರಿಗೆ ಹಾಗೆಯೆ ಪರಿಣಮಿಸಿವೆ. ನಿಮಿತ್ತ ಮಾತ್ರ ತೂಗುಯ್ಯಾಲೆಯಲ್ಲಿ ಕುಳಿತ ಅವರಿಗೆ ಆ ಮಾತುಗಳಲ್ಲಿ ಕೋಪವೆಲ್ಲಿಯದು? ತಾಪವೆಲ್ಲಿಯದು? ಪ್ರತಿಯಾಗಿ ಇಂತಹ ಅಪೂರ್ವ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಇದ್ದಾರಲ್ಲ ಎಂದು ಹೃದಯಾರೆ ಹರುಷಿಸಿ ನೀವಾರು? ಎಲ್ಲಿಂದ ಬಂದುದು? ಏನು ಸಂಗತಿ ? ಸ್ನಾನ ಶಿವಪೂಜೆ ಮಾಡಿಕೊಳ್ಳಿರಿ ಎಂದು ಮೊದಲಾಗಿ ಕುಶಲಪ್ರಶ್ನೆಗಳ ಕೇಳಿದಾರೆ.
ಅವರ ಉತ್ತರದಿಂದ ಅವರು ಪ್ರಸಿದ್ಧರಾಗಿದ್ದ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರೆಂದು ಮನವರಿಕೆಯಾಗುತ್ತದೆ. ಆಮೇಲೆ ಇಬ್ಬರು ಸೇರಿ ಸ್ನಾನ ಶಿವಪೂಜಾದಿ ಕ್ರಿಯೆಗಳನ್ನು ತೀರಿಸಿಕೊಳ್ಳುತ್ತಾರೆ. ತೀರದ ತೃಪ್ತಿಯಿಂದ ಮತ್ತೆ ಮಲ್ಲಣಾರ್ಯರು ಮಾತಿಗೆ ಮೊದಲು ಮಾಡುತ್ತಾರೆ; ಮನನೀಯವಾಗಿ ಮಾತನಾಡುತ್ತಾರೆ.
ಧಮ್ಮೋನ್ನತಿಗೆ ಬ್ರಹ್ಮಬಲ-ಕ್ಷಾತ್ರಬಲ ಎರಡು ಕಾರಣಗಳೇನು ನಿಜ. ವಿಶ್ವದ ಇತಿಹಾಸವನ್ನು ನೋಡಿದರೆ ಕ್ಷಾತ್ರಬಲದಿಂದ ಬೆಳೆದ ಧರ್ಮಕ್ಕೆ ಒಮ್ಮಿಲ್ಲೊಮ್ಮೆ ಬೀಳುಂಟೆಂದು ತಿಳಿದು ಬರುತ್ತದೆ. ಬೆಳಗಿನ ಬೆನ್ನ ಮೇಲೆ ಕತ್ತಲೆಯು ಕಾದಿರುವಂತೆ ಕ್ಷಾತ್ರಬಲದ ಮೇಲೆ ಮತ್ತೊಂದು ಕ್ಷಾತ್ರಬಲ ಕತ್ತಿಯನ್ನೆತ್ತಿ ತನ್ನ ಧರ್ಮಧ್ವಜವನ್ನು ಎತ್ತರದಲ್ಲಿ ಹಾರಿಸುತ್ತದೆ. ಈ ಏರಿಳಿತಗಳ ಸೋಂಕಿಲ್ಲದೆ ಏಕರೀತಿಯಲ್ಲಿ ಎಲ್ಲ ಕಾಲದಲ್ಲಿ ವೈಷಮ್ಯ ವೈಕಲ್ಯಗಳಿಲ್ಲದೆ ಧರ್ಮವು ಮುನ್ನಡೆಯಬೇಕಾದರೆ ಆತ್ಮಬಲದಿಂದ ಮತ್ತು ಅಹಿಂಸೆ ಸತ್ಯ ವಿರತಿ ವಿಶಾಲಮತಿ ಇವುಗಳ ಬೆಂಬಲದಿಂದ ಸ್ಥಾಪಿತವಾದ ಧರ್ಮವೆ ಚಿರಕಾಲ ಉಳಿಯಬಲ್ಲದು.
ಈಗ ಕಂದಿ ಕುಂದಿದ ಶಿವಯೋಗ ಧರ್ಮಕ್ಕೆ ಈ ಮಾರ್ಗದಿಂದ ಮೆರಗು ಕೊಡಬೇಕಾಗಿದೆ. ಇದಕ್ಕಾಗಿ ಸರ್ವಸಮನ್ವಯದ ಒಂದು ದೊಡ್ಡ ಯೋಗ ಸಂಸ್ಥೆಯ ಅವಶ್ಯಕತೆ ಅನಿವಾರ್ಯವಾಗಿದೆ. ಅದು ನಿಮ್ಮಿಂದ ನೆರವೇರಬೇಕಾಗಿದೆ; ನೆಲೆ ನಿಲ್ಲಬೇಕಾಗಿದೆ. ಏನು ಹೇಳುವಿರಿ?
ತಾವು ಮೊದಲೆ ಯೋಚಿಸುತ್ತ ಇದ್ದುದನ್ನೆ ಮಲ್ಲಣಾರ್ಯರು ಸೂಚಿಸಿದುದನ್ನು ಕೇಳಿ ಒಳಗೊಳಗೆ ತುಂಬಾ ಸಂತೋಷಭರಿತರಾದರು. ಮೇಲೆ ಇದಕ್ಕೆ ಅವರ ಬೆಂಬಲವಿದೆ ಇಲ್ಲವೊ ತಿಳಿಯಲು ಈ ಪ್ರಶ್ನೆಯನ್ನು ಹಾಕುತ್ತಾರೆ. ಸಂಸ್ಥೆಯನ್ನು ಸ್ಥಾಪಿಸಬೇಕಾದುದೇನೊ ಸರಿ, ಆದರೆ ಅದು ಅಪಾರ ದ್ರವ್ಯ ಬಲವಿಲ್ಲದೆ ಸಾಧ್ಯವಾಗದು. ಅಷ್ಟೊಂದು ದ್ರವ್ಯ ಈಗ ನಮ್ಮಲ್ಲಿಲ್ಲ. ಏನು ಮಾಡುವುದು?
ಈ ಮಾತಿಗೆ ಮಲ್ಲಣಾರ್ಯರು ಕಾಲು ತಾಗಿದ ಹಾವಿನಂತೆ ಮುನಿದೆದ್ದು ಮಹಾಸ್ವಾಮಿ, ತಮ್ಮಂತಹ ನಿರಾಭಾರಿ ವಿರಕ್ತರು ನಿರಂಜನ ಮೂರ್ತಿಗಳು ಮಠಮಾನ್ಯಗಳ ಮೋಹವನ್ನು ಕಳಚಿ ಮೇಲುಪ್ಪರಿಗೆಯ ತೂಗುಯ್ಯಾಲೆಯ ಸುಖಕ್ಕೆ ನೀರೆರಚಿ ಶಾಂತಿ ವಿಶ್ರಾಂತಿಗಳ ಹವ್ಯಾಸವನ್ನು ನುಣಚಿ ಡಾಂಭಿಕ ಭಕ್ತರ ಪರಡಿ ಪಾಯಸಗಳ ಸವಿಯೂಟವ ಹಿಳಿದು ಹಿಮ್ಮೆಟ್ಟಿ ಮೇಣೆ ಪಲ್ಲಕ್ಕಿಗಳ ವೈಭವವನ್ನು ಕನಸು ಮನಸಿನಲ್ಲಿ ನೆನೆಯದೆ ಸಮಾಜಸೇವೆಯ ಸತ್ಯಸಂಕಲ್ಪದ ಪ್ರತಿಜ್ಞೆ ಮಾಡಿ ಧಾರ್ಮಿಕ ಸಾಧನಗಳಾದ ಜೋಳಿಗೆ ಬೆತ್ತಗಳನ್ನು ಹಿಡಿದು ಆಚಾರನಿಷ್ಠೆಯೆಂಬ ಕುದರೆಯನೇರಿ ಪಯಣ ಬೆಳೆಸಿದರೆ ಲಕ್ಷಾಂತರ ರೂಪಾಯಿಗಳ ರಾಶಿ ‘ನಾ ನೀ’ ಅನ್ನುವದರೊಳಗಾಗಿ ಕೂಡಬೀಳುವುದು. ಇದಕ್ಕೆ ನಿಮ್ಮ ಮನೋಧೈವಿಲ್ಲದಿದ್ದರೆ ನಿಮ್ಮ ಆ ಜೋಳಿಗೆ ಬೆತ್ತಗಳನ್ನು ನನ್ನ ಕೈಗೆ ಕೊಡಿರಿ. ನಾನು ಮುಂದೆ ಮುಂದೆ ಪ್ರಯಾಣ ಮಾಡಿದಂತೆ ತಾವು ನನ್ನ ಹಿಂದೆಯಾದರು ದಯಮಾಡಿರಿ. ಆಮೇಲೆ ಆ ಯೋಗ ಸಂಸ್ಥೆಯು ಹೇಗೆ ಆಗುವುದಿಲ್ಲವೊ ನೋಡೋಣ! ಹಣ ಹೇಗೆ ಒದಗುವದಿಲ್ಲವೊ ನಿರೀಕ್ಷಿಸೋಣ! ಎಂದು ಕೆರಳಿ ನುಡಿದರು. ಕೆಲಸಕ್ಕೆ ಕೆರಳುವಂತೆ, ಕೆಚ್ಚೆದೆಯಿಂದ ತೆರಳುವಂತೆ ಮಾಡಿದರು.
ಆ ಭಾವಾವೇಶದ ಭಾಷಣವನ್ನು ಕೇಳಿಯೇ ಸ್ವಾಮಿಗಳವರು ಆ ಕಾರ್ಯಕ್ಕೆ ಮುಂದುವರೆಯುವ ಸನ್ನಿವೇಶ ಇರಲಿಲ್ಲ. ಅವರು ಮೊತ್ತಮೊದಲೆ ಕಾರ್ಯಾಲೋಚನೆಯಲ್ಲಿದ್ದರು. ಆದರೆ ಅವರ ಭಾಷಣದಿಂದ ಇಷ್ಟು ಮಾತ್ರ ಪ್ರಯೋಜನವಾಯಿತು; ಸ್ವಾಮಿಗಳವರು ಮುಂಗೋರುತ್ತಿದ್ದಂತೆ ಸಹಕರಿಸುವ ಒಬ್ಬ ಸಹೋದ್ಯೋಗಿಗಳು ಸಿಕ್ಕಿಂದತಾಯಿತು. ಯೋಚನೆ ಹೋಗಿ ಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟಿತು. ಇಬ್ಬರು ಸೇರಿ ಅರ್ಥವನ್ನು ಅರ್ಜಿಸಿ ಯೋಗಸಂಸ್ಥೆಯೊಂದನ್ನು ಸ್ಥಾಪಿಸುವ ದೃಢಸಂಕಲ್ಪ ಮಾಡಿದರು; ಧುರೀಣರಾಗಿ ನಿಂತರು.
ಸೇರಿ ಸಂಕಲ್ಪ ಮಾಡಿದ್ದು ಮಾತ್ರವೆ ! ಸ್ವಲ್ಪ ದಿನಗಳಲ್ಲಿಯೆ ಮಲ್ಲಣಾರ್ಯರು ದೀರ್ಘಕಾಹಿಲೆ ಮಲಗಿ ವಾಸಿಯಾಗದೆ ಉಲ್ಬಣವಾಗಿ ಅದರಲ್ಲಿಯೆ ಲಿಂಗೈಕ್ಯರಾದರು ಅವರಲ್ಲಿದ್ದ ನಿರೀಕ್ಷಣೆ ನೀರಾಯಿತು; ಆಶೆ ನಿರಾಶೆಯಾಯಿತು. ಸ್ವಾಮಿಗಳವರು ಮರಳಿ ಒಬ್ಬಂಟಿಗರಾದರು. ವರ್ಷಾಕಾಲದಲ್ಲಿ ಮಿಂಚು ಮಿಂಚಿದಂತಾಯಿತು. ಮರುಕ್ಷಣದ ಮತ್ತಿಷ್ಟು ಕಗ್ಗತ್ತಲೆ ಕವಿದಂತಾಯಿತು; ಕಣ್ಣು ಕಾಣದಂತಾಯಿತು.
ಏನಾದರೇನು ? ಕುಮಾರಸ್ವಾಮಿಗಳವರು ಅಷ್ಟೇನು ಅಳ್ಳೆದೆಯವರಾಗಿರಲಿಲ್ಲ ಸಹಾಯಕರಿರಲಿ ಇಲ್ಲದಿರಲಿ, ಸಿರಿಬರಲಿ ಉರಿಬರಲಿ ಮುನ್ನುಗ್ಗಿದ ಮೇಲೆ ಹಿಂದಡಿಯಿಡುತ್ತಿರಲಿಲ್ಲ. ಹೇಡಿಗಳಂತೆ ಹಿಮ್ಮುಖರಾಗುತ್ತಿರಲಿಲ್ಲ. ಮಾಡಿದ ಸಂಕಲ್ಪವನ್ನು ಕೈ ಬಿಡದೆ ಇನ್ನೂ ಇಮ್ಮಡಿ ಉತ್ಸಾಹದಿಂದ ಕೆಲಸ ಮಾಡಲಾರಂಭಿಸಿದರು. ಮಲ್ಲಣಾರ್ಯರ ಉತ್ಸಾಹ ಶಕ್ತಿ ಬಂದು ಸ್ವಾಮಿಗಳವರಲ್ಲಿ ಸಂಪರ್ಕವಾಯಿತು. ಎರಡಳಿದು ಒ೦ದಾದಂತಾಯಿತು.
ಕುಮಾರ ಸ್ವಾಮಿಗಳವರು ಕಂಡ ಕಂಡ ಕಡೆಗೆ ಸುತ್ತಿದರು. ತಮ್ಮ ಮತಿವಂತಿಕೆಯಿಂದ ಧೃತಿವಂತಿಕೆಯಿಂದ ಅನತಿಕಾಲದಲ್ಲಿಯೆ ಹದಿನಾಲ್ಕು ಸಾವಿರಕ್ಕೆ ಕಡಿಮೆಯಿಲ್ಲದಷ್ಟು ಹಣವನ್ನು ಸಂಗ್ರಹಿಸಿದರು. ಅಷ್ಟು ಜಾಗ್ರತೆ ಅಷ್ಟೊಂದು ಅರ್ಥಸಂಗ್ರಹವಾದುದು ಅನೇಕರಿಗೆ ಅಚ್ಚರಿಯೆನಿಸಿರುವಂತೆ ಸ್ವಾಮಿಗಳವರು ವಿಸ್ಮಯಗೊಂಡರು. ನಿಸ್ವಾರ್ಥಿಗಳಿಗೆ ನಿತ್ಯ ಲಕ್ಷ್ಮಿಯು ತಾನೆ ತಾನಾಗಿರುವಳೆಂಬ ಮಾತು ನಿಜವಾಗಿಯು ಸ್ವಾಮಿಗಳವರಲ್ಲಿ ಸಾರ್ಥಕವಾಗಿತ್ತು; ಸಂಪ್ರೋಕ್ತವಾಗಿತ್ತು.
ಕ್ರಿ.ಶ. ಸಾವಿರದಾ ಒಂಬೈನೂರು ಎಂಟನೆಯ ಸಾಲು, ಬಾಗಲಕೋಟೆಯಲ್ಲಿ ಆ ಸಲ ವೀರಶೈವ ಮಹಾಸಭೆಯು ಜರುಗಬೇಕೆಂದು ನಿರ್ಧಾರವಾಗಿತ್ತು. ಆಗಳೆ ಅದರ ಪ್ರಕಟಣೆಗು ಆರಂಭವಾಗಿತ್ತು. ಸ್ವಾಮಿಗಳವರು ಅದೇ ಪ್ರಕಟನೆಯಲ್ಲಿಯೆ ಶಿವಯೋಗಮಂದಿರ ಸಂಸ್ಥೆಯ ಸ್ಥಾಪನೆಯ ವಿಷಯವನ್ನು ಪ್ರಕಟಿಸಿದರು. ನಿಯಮಿತ ಕಾಲಕ್ಕೆ ಸಭೆ ಜರುಗಿತು. ಸಭೆಯ ಕಾರ್ಯಕಾರಿ ಸಮಿತಿಯಲ್ಲಿ ಶ್ರೀ ಮ.ನಿ.ಪ್ರ. ಇಳಕಲ್ಲ ಮಹಾಂತಸ್ವಾಮಿಗಳವರು ತೋರಿಸಿದಲ್ಲಿ ಮಂದಿರವನ್ನು ಸ್ಥಾಪಿಸುವಂತೆ ತೀರ್ಮಾನವಾಯಿತು.
ಆಲೋಚಿಸಿದ ಕಾರ್ಯವನ್ನು ಅಲ್ಲಿಗೆ ಕೈ ಬಿಡುವುದು ಕುಮಾರಸ್ವಾಮಿಗಳವರ ಸ್ವಭಾವವಾಗಿರಲಿಲ್ಲ. ಅದು ಬೇಗ ಕಾರ್ಯರೂಪಕ್ಕೆ ಬಾರದ ಅವರಿಗೆ ತೃಪ್ತಿಯಾಗುತ್ತಿರಲಿಲ್ಲ. ಅದರಿಂದಾಗಿ ಸ್ವಾಮಿಗಳವರು ಆ ಕ್ಷಣದಲ್ಲಿಯೆ ಇಳಕಲ್ಲಿಗೆ ಹೋಗಿ ಆ ಶ್ರೀಗಳವರಿಗೆ ಆದ್ಯಂತವನ್ನೆಲ್ಲ ಅರಿಕೆ ಮಾಡಿ ಸ್ಥಳವನ್ನು ತೋರಿಸಲು ಆಗಳೆ ಹೊರಡಿಸಿದರು. ಜೊತೆಗೆ ಜಿಲ್ಲಾಧಿಕಾರಿಗಳಾಗಿದ್ದ ಕಿತ್ತೂರ ರೇವಣಸಿದ್ದಪ್ಪನವರು ಮತ್ತು ಧಾರವಾಡ, ಹುಬ್ಬಳ್ಳಿ, ಗದಗ, ಬಾಗಲಕೋಟ ಮುಂತಾದ ನಗರಗಳ ೨೦-೩೦ ಜನ ಪ್ರಮುಖರು ಸಹ ಹೊರಡುವರು. ಹುನಗುಂದ ಮಾರ್ಗವಾಗಿ ಹೊರಟು ಐತಿಹಾಸಿಕ ಪ್ರಸಿದ್ಧವಾದ ಐಹೊಳೆಯ ಕ್ಷೇತ್ರಕ್ಕೆ ಬಂದರು. ಅಲ್ಲಿನ ಪುರಾತನ ದೇವ ಮಂದಿರಗಳನ್ನು ನೋಡಿ ಕೆಲವರು ಅಲ್ಲಿಯೆ ಸ್ಥಾಪಿಸಲು ಇಷ್ಟಪಟ್ಟರು. ಅದಕ್ಕೆ ಇಳಕಲ್ಲ ಶ್ರೀಗಳವರ ಒಪ್ಪಿಗೆಯಾಗಲಿಲ್ಲ. ಇದು ಏಕಾಂತತೆಗೆ ಭಂಗವೆಂದು ಅವರ ಹೇಳಿಕೆ. ಅಲ್ಲಿಂದ ಮತ್ತೊಂದು ಐತಿಹಾಸಿಕ ಪ್ರಸಿದ್ಧವಾದ ಪಟ್ಟದಕಲ್ಲಿಗೆ ಆಗಮಿಸಿದರು. ಅಲ್ಲಿ ಕೆಲವರು ತಮ್ಮ ಬಯಕೆಯನ್ನು ಬಿಚ್ಚಿ ಬಿನ್ನಿಸಿದರು. ಅದಕ್ಕೆ ಶ್ರೀಗಳವರು ಅಲ್ಲಿಯ ಪಕ್ಕದಲ್ಲಿದ್ದ ನಾಗರಹಾವನ್ನು ತೋರಿಸಿ ಇಲ್ಲಿ ಬೇಡ ಎಂದು ಸಮಾಧಾನ ಹೇಳಿದರು. ಎಲ್ಲರನ್ನು ಶಿವಪೂಜೆಗಾಗಿ ಅಲ್ಲಿಯೆ ಬಳಿಯಲ್ಲಿರುವ ಪುರಾಣಪ್ರಸಿದ್ದವು ಪವಿತ್ರವು ಆದ ಮಾಕೂಟಕ್ಕೆ ಕಳುಹಿಸಿ ತಾವು ಸ್ವಲ್ಪ ಹೊತ್ತು ಪಟ್ಟದಕಲ್ಲಿನಲ್ಲಿಯೆ ವಿಶ್ರಮಿಸಿ ಬಳಿಕ ಮಲಾಪಹಾರಿಣಿ ನದಿಯ ತೀರವನ್ನು ಹಿಡಿದು ಹೊರಟು ಈಗಿರುವ ಶಿವಯೋಗ ಮಂದಿರ ಸ್ಥಳದ ಹತ್ತಿರಕ್ಕೆ ಬರುವರು. ಎತ್ತ ನೋಡಿದರು ಹೆಗ್ಗಾಡು, ಕಗ್ಗಾಡು, ಹೆಜ್ಜೆಯಿಡಲು ಸಾಧ್ಯವಿಲ್ಲದಂತೆ ಮುಳ್ಳು ಗಳ್ಳಿ (ಪಾಪಾಸುಕಳ್ಳಿ) ಬೆಳೆದು ನಿಂತಿದೆ. ಏನೂ ಸರಿಯಾಗಿ ಕಾಣುವಂತಿಲ್ಲ. ಮತ್ತೊಂದೆಡೆಗೆ ಶ್ರೀಗಳು ನೋಡುತ್ತಾರೆ. ಹೊಲದಲ್ಲಿ ಒಬ್ಬ ರೈತನು ಕಾಣಿಸಿಕೊಂಡನು. ಅವನ ಬಳಿಗೆ ಬಂದು ಸ್ಥಳ ಪರಿಚಯವನ್ನು ಕೇಳಿದರು. ಇಲ್ಲಿ ಎಲ್ಲಿಯಾದರು ನದಿಗೆ ಸಮೀಪದಲ್ಲಿ ಬಿಲ್ವಪತ್ರೆಯ ವನವಿರುವ ಸ್ಥಳವನ್ನು ತೋರಿಸು ಎಂದೆನ್ನುವರು. ರೈತನು ಇದೋ ಈ ದಬದಭೆಯ (ದಿಡಗಿನ) ದಂಡೆಯ ಸಮೀಪದಲ್ಲಿ ಬೇಕಾದಷ್ಟು ಪತ್ರೆಯ ಗಿಡಗಳಿವೆ ಎಂದು ತೋರಿಸಿದನು. ಶ್ರೀಗಳವರು ಮೇಲಿನಿಂದ ಕೆಳಕ್ಕೆ ಧೋ ಎಂದು ಶಬ್ದಮಾಡುತ್ತ ಬೀಳುವ ಹೊಳೆಯ ರಮ್ಯತೆಯನ್ನು ನೋಡಿ ಸಂತೋಷಿಸಿದರು. ಇಲ್ಲಿ ಇನ್ನೇನಿದೆ ತೋರಿಸೆಂದು ಕೇಳಿದಕ್ಕೆ ರೈತನು ಅದೇ ನಿಬಿಡವಾಗಿ ಬೆಳೆದ ಮುಳ್ಳಗಳ್ಳಿಯ ಪೊದೆಗಳಲ್ಲಿ ದೂರಿ ಸ್ವಾಮಿಗಳವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುವನು. ಅಲ್ಲಿ ಬಿಲ್ವವನ, ಅದರ ಬಳಿಯಲ್ಲಿ ಒಂದು ಮುರಿದ ಬಿದ್ದ ಸಣ್ಣ ಗುಡಿ, ಅದರಲ್ಲಿ ದೇವರೆ ಇರಲಿಲ್ಲ. ಸ್ವಾಮಿ, ಇದು ಕೊಟ್ಟೂರು ಬಸವೇಶ್ವರ ದೇವಸ್ಥಾನ,
ನಾವೆಲ್ಲ ಶ್ರಾವಣ ಸೋಮವಾರಗಳಲ್ಲಿ ಬಂದು ಇದಕ್ಕೆ ಎಡೆ ಕಾಯಿ ಕಪ್ಪುರಗಳನ್ನು ಸಮರ್ಪಿಸುತ್ತೇವೆ; ಎಂದು ಹೇಳಿದನು.
ಶ್ರೀಗಳವರು ಆ ಮಾತಿಗೆ ಓಹೋ ! ಇದು ಕೊಟ್ಟರು ಬಸವ; ಕೊಡದಿದ್ದರು ಬಸವ ಎಂದು ನುಡಿದು ಅಲ್ಲಿಯೆ ಕುದುರೆಯಿಂದಿಳಿದು ಕುಳಿತುಕೊಳ್ಳುವರು. ಅದೇ ರೈತನನ್ನು ಕಳುಹಿಸಿ ಮಾಕೂಟದಲ್ಲಿರುವವರನ್ನೆಲ್ಲ ಕರೆಯಿಸುವರು. ಇದೋ ಇದೆ ಶಿವಯೋಗ ಮಂದಿರವನ್ನು ಕಟ್ಟಲು ತಕ್ಕ ಸ್ಥಳ. ಇಲ್ಲಿಗೆ ನದಿಯು ತೀರ ಹತ್ತಿರದಲ್ಲಿದೆ. ಬೇಕಾದಷ್ಟು ಬಿಲ್ವವೃಕ್ಷಗಳಿವೆ. ಸೊಂಪಾದ ಲತಾ ಮಂಟಪಗಳಿವೆ. ಇಲ್ಲಿಯೆ ಸಂಸ್ಥೆಯನ್ನು ನಿರ್ಮಿಸಲು ಉಚಿತವಾಗಿದೆ ಎಂದು ಅಪ್ಪಣೆ ಮಾಡಿದರು. ಇದಕ್ಕೆ ಅನೇಕರ ಒಪ್ಪಿಗೆಯಿಲ್ಲದಿದ್ದರು ವಿಧಿಯಿಲ್ಲದೆ ಕೊನೆಗೆ ಎಲ್ಲರೂ ಒಪ್ಪಿದರು. ಆ ಕ್ಷಣದಲ್ಲಿಯೇ ಅದೇ ಕೊಟ್ಟೂರು ಬಸವೇಶ್ವರನ ಗದ್ದುಗೆಯ ಮುಂದೆ ಕಪ್ಪುರ ಹಚ್ಚಿ ಕಾಯಿ ಒಡೆದು ಮಂಗಳಾರತಿ ಮಾಡಿದರು. ಆಗ ಸುಮಾರು ಮಧ್ಯಾಹ್ನ ನಾಲ್ಕು ಗಂಟೆಯ ಹೊತ್ತು. ಶ್ರೀಗಳು ಈಗ ನಾವು ಊರಿಗೆ ಹೋಗಿ ಏಳೆಂಟು ದಿನಗಳಲ್ಲಿ ಒದಗುವ ರಥಸಪ್ತಮಿಗೆ ಲಿಂಗಮುದ್ರೆಯನ್ನು ಸ್ಥಾಪಿಸಲು ಬರುತ್ತೇವೆ. ಅಲ್ಲಿಯವರೆವಿಗು ನೀವೆಲ್ಲರು ಇಲ್ಲಿಯ ಇದ್ದು, ಈ ಸ್ಥಳವನ್ನು ವಿಕ್ರಯಕ್ಕೆ ಪಡೆದು ಸ್ವಚ್ಛಮಾಡಿರಬೇಕೆಂದು ಹೇಳಿ ಕುದುರೆಯೇರಿ ಅದೇ ಹೊರಟು ಹೋದರು. ಹಳ್ಳಿಯ ರೈತನು ಹಳ್ಳಿಗೆ ಹೊರಟು ಹೋಗುವನು. ಹೊತ್ತು ಮುಳುಗುವುದು.
ಪುಷ್ಯಮಾಸದ ಅಮಾವಾಸ್ಯೆ ಕತ್ತಲೆಯ ಪಾಳೆಯವಾಗಿತ್ತು. ಸುತ್ತಲು ಮುಳ್ಳುಪೊದೆಗಳು ವಿಶೇಷವಾಗಿ ಬೆಳೆದು ನಿಂತಿವೆ. ಕಾಡುಮೃಗಗಳ ಕಳ್ಳಕಾಕರ ಭಯ ಎಲ್ಲರನ್ನು ಬಾಧಿಸತೊಡಗಿತು. ಅಂತಹದರಲ್ಲಿ ಹಾನಗಲ್ಲ ಸ್ವಾಮಿಗಳವರು ತಮ್ಮೊಡನೆ ಬಂದವರಿಗೆಲ್ಲ ಧೈಯ್ಯಹೇಳುತ್ತ ಧೀರೋದಾತ್ತರಾಗಿ ಧುರಂಧರರಾಗಿ ಧರ್ಮನಿಷ್ಠರಾಗಿ ನಿಂತಿದ್ದಾರೆ. ಅಷ್ಟರಲ್ಲಿ ಹಕ್ಕಿಗಳು ಹಾಡಿದವು, ಚುಕ್ಕಿಗಳು ಮೂಡಿದವು. ನದಿಯು ನಿರ್ಮಲೋದಕವ ನೀಡಿತು. ವನದೇವತೆ ವನ್ಯಮೃಗಗಳಿಗೆ ಅಹಿಂಸೆಯಿಂದಿರಲು ಶಾಸಿಸಿತು. ಅದರಿಂದಾಗಿ ಕಾಡ ಹಂದಿಗಳು ಚಿರ್ಚುಗಳು ತಮ್ಮ ಗೂಡ ಸೇರಿದವು. ವನಪಶುಗಳು ಸಹ ಕುಮಾರಸ್ವಾಮಿಗಳವರ ಧಮ್ಮಕಾರ್ಯಕ್ಕೆ ನೆರವಾದವು. ನಿಸರ್ಗವು ಸಹ ಸ್ವಾಮಿಗಳ ದರ್ಮೋದ್ಯಮದ ಮೂರ್ತಿರೂಪವನ್ನು ತಾಳಿದಂತಿತ್ತು. ಯಾವುದರಿಂದ ಯಾವ ಭಯವು ಯಾರಿಗಾಗಲಿಲ್ಲ. ಎಲ್ಲರು ಮರದ ಬುಡದಲ್ಲಿ ಶಿವಪೂಜೆಯನ್ನು ಮಿತಾಹಾರವನ್ನು ನೆರವೇರಿಸಿ ವನ್ಯಭೂಮಿಯ ಮೇಲೆ ಮಲಗಿದರು.
ಪುಷ್ಯದ ಮಸುಗು ಹರಿಯಿತು. ಮಾಘದ ಬೆಳಗು ಮೂಡಿತು. ಮುಂದಿನ ಮಹಾಕಾರ್ಯಕ್ಕೆ ಪ್ರಕೃತಿ ದೇವಿ ಚೆಂಬಣ್ಣದ ಚಿಗುರುಡಿಗೆಯನುಟ್ಟು ರವಿತಿಲಕವನಿಟ್ಟು ಕಿರಣಭಸಿತವ ಧರಿಸುವಳು. ನೀಲಾಕಾಶದ ತಳಿಗೆಯಲ್ಲಿ ಜಗಜ್ಯೋತಿಯನ್ನಿಟ್ಟು ಮಂಗಳಾರತಿಯ ಮಾಡುವಳು. ಹಕ್ಕಿಗಳು ಮಂಜುಳ ಘೋಷವ ಮಾಡುವವು. ಲತಾಕುಂಜಗಳು ಮಗ್ಗುಮಂಜರಿಗಳ ಮಾಲೆಯ ಹಾಕಲು ಸಜ್ಜಾಗಿರುವವು. ಸೂರ್ಯೋದಯದೊಡನೆ ಶುಭೋದಯವಾಯಿತು.
ಎಲ್ಲರು ಎದ್ದರು. ಮೊಗದೊಳೆದರು. ಮುಂಜಾವಿನ ಆ ನಿಸರ್ಗಮನೋಹರ ದೃಶ್ಯವನ್ನು ಕಣ್ಣುಂಬ ನೋಡಿ ನಲಿದರು. ನಗರಗಳಲ್ಲಿ ಈ ನಿರ್ಮಲ ನಿಸರ್ಗದೃಶ್ಯ ಎಲ್ಲಿಂದ ಬರಬೇಕು ? ಎಷ್ಟು ಕೊಟ್ಟರೆ ದೊರೆಯಬೇಕು ಎಂದು ಮನವಾರೆ ಕೊಂಡಾಡಿದರು. ಮುಂದಿನ ಕಾರ್ಯಕ್ಕೆ ಅಣಿಯಾದರು.
ಕುಮಾರಮಹಾಸ್ವಾಮಿಗಳವರು ಕಿತ್ತೂರ ರೇವಣಸಿದ್ಧಪ್ಪನವರನ್ನು ಗುಳೇದಗುಡ್ಡ ಜಿರ್ಲಿ ಮುರಘಪ್ಪನವರನ್ನು ಕೂಡಿಕೊಂಡು ಪಕ್ಕದಲ್ಲಿರುವ ‘ಮಂಗಳೂರು’ ಎಂಬ ಹಳ್ಳಿಗೆ ಹೋಗುವರು. ಹಲವರನ್ನು ವಿಚಾರಿಸಿ ಆ ಹೊಲದ ಒಡೆಯನನ್ನು ಗುರುತಿಸುವರು. ಅವನು ತೀರ ಬಡವನಾಗಿದ್ದನು. ವಿಶೇಷವಾಗಿ ಮುಳ್ಳುಗಳ್ಳಿ ಬೆಳೆದ ಭೂಮಿಯಲ್ಲಿ ಬೆಳೆಯಿಡಲು ಅವನಿಗೆ ಸಾಧ್ಯವಾಗದೆ ಹೋಗಿತ್ತು. ಅದರಿಂದಾಗಿ ಪ್ರತಿವರ್ಷವು ಕೈಯಿಂದ ಕಂದಾಯ ಕಟ್ಟಿ ಬೇಸತ್ತಿದ್ದನು. ಬೇರೆ ಯಾರು ಅದನ್ನು ತೆಗೆದುಕೊಳ್ಳುವರಿರಲಿಲ್ಲ. ಹೀಗಾಗಿ ಯಾರಾದರು ಗಿರಾಕಿ ಬಂದರೆ ಸಾಕಾಗಿತ್ತು. ತಕ್ಷಣವೆ ಕ್ರಯಕ್ಕೆ ಕೊಡಲೊಪ್ಪಿದನು. ಬೆಲೆ ಇನ್ನೂರು ರೂಪಾಯಿಗಳೆಂದು ನಿರ್ಧಾರವಾಯಿತು. ಹಣವನ್ನು ಆತನಿಗೆ ಕೊಟ್ಟು ಕ್ರಯಪತ್ರ ಬರೆಯಿಸಿಯಾಯಿತು. ಬಂದೊಡನೆ ಬಂದ ಕಾರ್ಯವಾದುದಕ್ಕೆ ಸ್ವಾಮಿಗಳವರಿಗೆ ಸಂತೋಷವಾಯಿತು. ಮುಳ್ಳುಗಳ್ಳಿ ಕಡಿದು ಹಾಕಲು ಮೂವತ್ತು ನಾಲ್ವತ್ತು ಜನ ಆಳುಗಳನ್ನು ಕರೆತಂದು ಕೆಲಸಕ್ಕೆ ಪ್ರಾರಂಭಿಸಿದರು. ನಾಲೈದು ದಿನ ಅದೇ ಒಂದು ದೃಶ್ಯವಾಗಿತ್ತು. ಅದೇ ಒಂದು ಕಾಲಕ್ಷೇಪವಾಗಿತ್ತು.
ಆರನೆಯ ದಿನ ಐದಾರು ಪರ್ಣಕುಟೀರ ತೃಣಕುಟೀರಗಳನ್ನು ಅಂದವಾಗಿ ನಿರ್ಮಿಸಿದರು. ಬೆಳಗಾದರೆ ರಥಸಪ್ತಮಿ, ಶಿವಯೋಗ ಮಂದಿರ ಸ್ಥಾಪನೆಯ ದಿನ. ಇಳಕಲ್ಲಿನಿಂದ ಶ್ರೀ ಮಹಾಂತಸ್ವಾಮಿಗಳವರು ಬರುವ ನಿರೀಕ್ಷಣೆ, ಸುತ್ತು ಮುತ್ತಣ್ಣ ಹಳ್ಳಿಗಳ ಜನರಿಗೆಲ್ಲ ಒಂದು ಅಭೂತಪೂರ್ವವಾದ ಉತ್ಸಾಹ. ಗಿಡಗಂಟಿಗಳನ್ನು ಕಡಿದು ಹಸನಮಾಡಿದರು. ಪರ್ಣಕುಟೀರಗಳ ಮುಂದೆ ಮಾಂದಳಿರ ತೋರಣ ಕಟ್ಟಿ ಸಿಂಗರಿಸಿದ್ದರು. ಕಲ್ಲುಗಳ ಮೇಲೆ ಲಿಂಗಮುದ್ರೆಗಳನ್ನು ಕೆತ್ತಿಸಿ ಒಂದೆಡೆಗೆ ಇರಿಸಿದ್ದರು. ಆ ವೇಳೆಗೆ ಇಳಕಲ್ಲಿನಿಂದ ಶ್ರೀಗಳವರು ತಮ್ಮ ಪ್ರೀತಿಯ ಹಸುವಿನೊಂದಿಗೆ ಬರುವರು. ಆ ಸಂಭ್ರಮಕ್ಕೆ ವನದೇವತೆಯು ಬನಶಂಕರಿಯ ರೂಪದಲ್ಲಿ ಬಂದಿದ್ದಳು. ಐಹೊಳೆಯ ಭಕ್ತರು ಐತಂದು ಹೊಳೆ ನೀರಿನಿಂದ ಚಳಕಹೊಡೆದರು. ಪಟ್ಟದಕಲ್ಲಿನವರು ಲಿಂಗಮುದ್ರೆಯ ಕಲ್ಲುಗಳನ್ನು ಸಂಸ್ಥೆಯ ಪಟ್ಟಕ್ಕಾಗಿ ತಯಾರಿಸಿದ್ದರು. ಮಂಗಳೂರಿನವರ ಮಂಗಳವಾದ್ಯದೊಡನೆ ಶಿವಯೋಗ ಮಂದಿರ ಶುಭಸಂಸ್ಥೆಯು ಸ್ಥಾಪಿತವಾಯಿತು. ಬಾದಾಮಿಯವರು ಬಾದಾಮು ತೂರಿದರು. ನಿಲುವಿಗೆಯವರು ನೆಲೆಯಾಗಿ ನಿಲ್ಲುವಂತೆ ನೆರವಿತ್ತರು, ಈ ಎಲ್ಲ ಗ್ರಾಮದವರು ಸೇರಿದ್ದರಿಂದ ಅದೇ ಒಂದು ಮಹಾಕೂಟವಾಯಿತು. ಮಹಾವೈಭವದಿಂದ ನಡೆಯಿತು. ಸುತ್ತಣ ಈ ಗ್ರಾಮನಾಮಗಳಲ್ಲಿ ಮಂಗಲೋತ್ಕರ್ಷಗಳು ತುಂಬಿ ತುಳುಕುತ್ತಿವೆ. ಎಷ್ಟು ಅರ್ಥಪೂರ್ಣವಾದ ಉತ್ಕರ್ಷಪೂರ್ಣವಾದ ಮಂಗಳಪೂರ್ಣವಾದ ಹೆಸರುಗಳಿವು. ಅಂತಹ ಗ್ರಾಮಗಳ ಮಧ್ಯದಲ್ಲಿ ಶಿವಯೋಗ ಮಂದಿರ ಮಹಾಸಂಸ್ಥೆಯು ಸ್ಥಾಪಿತವಾದುದು ಮತ್ತೂ ಹೆಚ್ಚಿನ ಮಾಂಗಲ್ಯೋದಯವಾಯಿತು. ಪುಣ್ಯೋದಯವಾಯಿತು. ಅಯಾಗ್ರಾಮಗಳ ಹೆಸರುಗಳು ಅಂದಿನಿಂದ ಸಾರ್ಥಕವಾದವು, ಅವುಗಳಂತೆ ಶಿವಯೋಗ ಮಂದಿರ ಎಂಬುದು ಅರ್ಥಪೂರ್ಣವಾದ ಅನ್ವರ್ಥನಾಮ. ಭವರೋಗವನ್ನು ಕಳೆದು ಶಿವಯೋಗವನ್ನು ಉಂಟುಮಾಡುವ ಆಶ್ರಮ. ಹಿಂದಿನ ಕ್ಷಣದಲ್ಲಿ ಕ್ರೂರ ಮೃಗಗಳ ವಾಸದಿಂದ ಕಳ್ಳಕಾಕರ ತ್ರಾಸಿನಿಂದ ಭೀಕರವಾದ ಅರಣ್ಯವು ಮರುಕ್ಷಣದಲ್ಲಿಯ ಆಶ್ರಮವಾಗಿ ಸತ್ಪುರುಷರಿಗೆ ಆಶ್ರಯವಾಯಿತು. ನೆರೆದ ಭಕ್ತವೃಂದವು ನೋಡಿ ಸಂತೋಷಪಟ್ಟಿತು. ಸಂತೋಷವಲ್ಲಿ ಶ್ರೀ ಶಿವಯೋಗಮಂದಿರಕ್ಕೆ ಜಯವಾಗಲಿ, ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರಿಗೆ ಜಯವಾಗಲಿ, ಶ್ರೀ ಇಳಕಲ್ಲ ವಿಜಯಮಹಾಂತ ಶ್ರೀಗಳವರಿಗೆ ವಿಜಯವಾಗಲಿ ಎಂದು ಒಕ್ಕೊರಲಿನಿಂದ ಜಯನಿನಾದ ಮಾಡಿದರು. ಆ ನಿನಾದವು ನಾಲ್ದೆಸೆಗು ಇರುವ ಕಾನನಗಳಲ್ಲಿ ಪ್ರತಿಧ್ವನಿಸಿ ಮುಗಿಲ ಮುಟ್ಟಿತು.
ಆಶ್ರಮದ ನಿಸರ್ಗಶೋಭೆ ಆಗಂತುಕರ ಆಯಾಸವನ್ನು ಪರಿಹರಿಸುವಂತಹದು. ಪಕ್ಕದಲ್ಲಿಯೆ ತಿಳಿಯಾಗಿ ಹರಿಯುವ ಮಲಾಪಹಾರಿಣಿ ನದಿಯು, ಅದು ಕಲ್ಲು ಬಂಡೆಗಳ ಮೇಲಿಂದ ದಭ ದಭ ಎಂದು ಉಲಿಯುತ್ತ ಉರುಳುತ್ತದೆ. ಅದರಿಂದ ಅದಕ್ಕೆ ‘ದಭದಭ ಎಂದರೆ ಜಲಪಾತವೆಂದು ಹೆಸರು ಬಂದಿದೆ. ತೊರೆಯ ತೀರದಲ್ಲಿ ಹಚ್ಚಗೆ ಹಸುರು ಮುಡಿದದರ್ಭೆಯ ಹುಲ್ಲು, ಹೂತು ಕಾತು ಕಂಗೊಳಿಸುವ ತರುಲತೆಗಳು. ಹೂಗಂಪನು ಹೊತ್ತು ಹಗುರಾಗಿ ತೀಡುವ ತಂಗಾಳಿ, ಇವು ಪಾಂಥರ ಪರಿಶ್ರಮವನ್ನು ಪರಿಹರಿಸುತ್ತವೆ. ಕುಕಿಲ್ವ ಕೋಕಿಲೆಗಳು ನರ್ತಿಸುವ ನವಿಲುಗಳು, ಹರಿದಾಡುವ ಹರಿಣಗಳು, ಹಾರಾಡುವ ಹಕ್ಕಿಗಳು, ಓಡಾಡುವ ಮೊಲ ಅಳುಲೆಗಳು ನೋಡುವವರ ನೋಟ ತಣಿಸುತ್ತವೆ. ತೊರೆಯ ತೀರದಲ್ಲಿ ಅನುಷ್ಠಾನಕ್ಕೆಂದು ಕಟ್ಟಿಸಿದ ಹುಲ್ಲುಗುಡಿಸಲುಗಳು, ಕಲ್ಲುಗವಿಗಳು ತಾವಾಗಿ ಹಬ್ಬಿ ಹಣೆದು ನಿಂತ ಕುಂಜ ನಿಕುಂಜಗಳು ದಟ್ಟವಾಗಿ ಬೆಳೆದು ಹಣ್ಣು ಗೊಂಚಲುಗಳಿಂದ ರಾಜಿಸುವ ನೇರಲ ವೃಕ್ಷಗಳು ಪ್ರತಿಯೊಬ್ಬರ ಚಿತ್ತವೃತ್ತಿಗಳನ್ನು ಸೆಳೆದು ಶಾಂತಿಗೊಳಿಸುವವು. ಅದರಲ್ಲಿಯು ಚೈತ್ರ ಮಾಸದ ಹುಣ್ಣಿಮೆಯ ತಿಂಗಳ ಬೆಳದಿಂಗಳಿನಲ್ಲಿ ನಿಂತು ಸುತ್ತುಮುತ್ತಣ ಆ ನೈಸರ್ಗಿಕ ವನಸೌಂದರ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬನ ಹೃದಯದಲ್ಲಿ.
“ಅಳಿಸಂಕುಲವೆ ಮಾಮರವೆ ಬೆಳದಿಂಗಳೆ ಕೋಗಿಲೆಯೆ
ನಿಮ್ಮ ನಿಮ್ಮನೆಲ್ಲರನು ಒಂದು ಬೇಡುವೆನು.
ಎನ್ನ ಚನ್ನಮಲ್ಲಿಕಾರ್ಜುನನು ಇದ್ದರೆ ಕರೆದು ತೋರಿರೆ.”
ಎಂಬ ವಚನವನ್ನು ಅಕ್ಕಮಹಾದೇವಿಯು ಇಲ್ಲಿಯೇ ನಿಂತು ಹಾಡಿರಬಹುದೆ ಹಂಬಲಿಸಿರಬಹುದೆ ಎಂದು ಭಾಸವಾಗುತ್ತದೆ; ವಾಣಿಯಿಂದ ಅದೇ ವಚನವನ್ನು ಹಾಡಿಸುತ್ತದೆ. ನೋಡುವವರ ಕಣ್ಮನಗಳು ಆ ಕಾಡ ಚಲುವಿನಲ್ಲಿ ತಲ್ಲೀನವಾಗಿ ಬಿಡುತ್ತವೆ.
ಕುಮಾರ ಸ್ವಾಮಿಗಳವರ ಪರಿಶ್ರಮದ ಫಲವಾಗಿ ಅಲ್ಲಿ ಹತ್ತು ಹನ್ನೆರಡು ಭವ್ಯ ಕಟ್ಟಡಗಳಾಗಿವೆ. ಯೋಗ ಸಾಧನೆಗಾಗಿ ನೆಲದಲ್ಲಿ ಗವಿಗಳಾಗಿವೆ. ಅಲ್ಲದೆ ಸಂಸ್ಥೆಯ ಸ್ಥಿರಜೀವಿತಕ್ಕೆ ಸ್ವಾಮಿಗಳವರು ನಾಲೈದು ಲಕ್ಷರೂಪಾಯಿಗಳನ್ನು ಕೂಡಿಸಿದರು. ಸುಮಾರು ನಾಲೈದು ಮೈಲಿ ಭೂಮಿ ಸೀಮೆಗಳ ಸ್ವಾಮಿತ್ವವನ್ನು ಸಂಪಾದಿಸಿದರು. ನೂರಿನ್ನೂರು ಗೋವುಗಳನ್ನು ರಕ್ಷಿಸಿದರು. ಅವುಗಳ ಸಲುವಾಗಿ ಐವತ್ತು ಎಕರೆ ಗುಡ್ಡವನ್ನು ಸರಕಾರದಿಂದ ಇನಾಮನ್ನಾಗಿ ಪಡೆದರು. ಬೇರೆಬೇರೆ ಗ್ರಾಮಗಳಲ್ಲಿ ಸದ್ಭಕ್ತರು ನೂರಾರು ಕೂರಿಗೆ ಭೂಮಿಯನ್ನು ಸಂಸ್ಥೆಗೆಂದು ಭಕ್ತಿಯಿಂದ ಸಮರ್ಪಿಸಿದ್ದಾರೆ. ಜೀನಿಂಗ ಮತ್ತು ಪ್ರೆಸಿಂಗ ಫ್ಯಾಕ್ಟರಿಯೊಂದನ್ನು ಬಾಗಲಕೋಟೆಯಲ್ಲಿ ಸ್ಥಾಪಿಸಿದ್ದಾರೆ. ಶಿವಯೋಗ ಮಂದಿರದಲ್ಲಿಯೆ ಒಂದು ದೊಡ್ಡ ಪುಸ್ತಕಾಲಯವನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್ ಗ್ರಂಥಗಳನ್ನು ಸುಮಾರು ನಾಲೈದು ಸಾವಿರಕ್ಕೆ ಮೇಲ್ಪಟ್ಟು ಶೇಖರಿಸಿದ್ದಾರೆ. ಇದಲ್ಲದೆ ಪುರಾತನ ತಾಳೆಗರಿಗಳನ್ನು ಕೈಬರಹದ ಕಡತಗಳನ್ನು ಏಳೆಂಟುನೂರು ಕಲೆಹಾಕಿದ್ದಾರೆ. ಪರಿಶುದ್ಧವಾದ ಭಸ್ಮ ಪಂಚಸೂತ್ರದ ಪವಿತ್ರಶಿಲೆಯ ಲಿಂಗಗಳನ್ನು ಮಾಡುವ ಏರ್ಪಾಡನ್ನು ಮಾಡಿದ್ದಾರೆ. ವೈದ್ಯದ ಸಂಶೋಧವನ್ನು ಮಾಡಿದ್ದಾರೆ. ಹಲವು ದಿವ್ಯೌಷಧಿಗಳನ್ನು ತಯಾರಿಸಿದ್ದಾರೆ. ಬಿಳುಪನ್ನು ಕಳೆಯುವ ‘ಧೃತಿ’ ಎಂಬ ಸಿದ್ಧೌಷಧಿಯು ಅಲ್ಲಿ ಈಗಲು ಸಿಕ್ಕುತ್ತದೆ. ಅದರಿಂದ ಎಷ್ಟೋ ಜನರು ಗುಣಹೊಂದಿ ಕಳೆದುಕೊಂಡ ಧೃತಿಯನ್ನು ಪಡೆದುಕೊಂಡು ಹೋಗಿದ್ದಾರೆ. ಶಿವರಾತ್ರಿಯಲ್ಲಿ ಸಾಗುವ ಜಾತ್ರೆಯಲ್ಲಿ ಹಲವು ಬಗೆಯ ಧಾರ್ಮಿಕ ಸಾಮಾಜಿಕ ಸಭೆಗಳು ನಡೆವಂತೆ ವ್ಯವಸ್ಥೆ ಮಾಡಿದ್ದಾರೆ.
ಆ ಸಂಸ್ಥೆಯಲ್ಲಿ ಅಂದಿನಿಂದ ಇಂದಿನವರೆವಿಗೆ ಸುಮಾರು ಸಾವಿರಾರು ಜನ ಸಾಧಕರು ಅಧ್ಯಯನ ಮಾಡಿದ್ದಾರೆ. ಕನ್ನಡ ಸಂಸ್ಕೃತ ಸಂಗೀತಗಳಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದಾರೆ. ಅಷ್ಟಾಂಗಯೋಗವನ್ನು ಇಷ್ಟಲಿಂಗದ ವಿಚಾರವನ್ನು ಅರಿತುಕೊಂಡಿದ್ದಾರೆ. ಪ್ರಾಣಾಯಾಮದ ವಿಧಾನವನ್ನು ಪ್ರಾಣಲಿಂಗದ ನೆಲೆಕಲೆಗಳನ್ನು ಗುರುತಿಸಿಕೊಂಡಿದ್ದಾರೆ. ಷಟ್ಕರ್ಮಗಳ ಸಿದ್ಧಿಯನ್ನು ಷಟ್‌ಸ್ಥಲಗಳ ಶುದ್ಧಿಯನ್ನು ಸಂಪಾದಿಸಿಕೊಂಡಿದ್ದಾರೆ. ಒಟ್ಟಾಗಿ ಒಂದೇ ಮಾತಿನಲ್ಲಿ ಹೇಳುವದಾದರೆ ಆ ಸಂಸ್ಥೆಯಿಂದ ಉತ್ತಮ ಭಾಷಣಕಾರರು ಕೀರ್ತನಕಾರರು ಪೌರಾಣಿಕರು ಲೇಖಕರು ಯೋಗಿಗಳು ಅನುಭವಿಗಳು ಸ್ವಾಮಿಗಳು ಸಂಗೀತಜ್ಞರು ಮುಂತಾಗಿ ಅನೇಕರು ಅನೇಕ ಕಲೆಗಳಲ್ಲಿ ತಯಾರಾಗಿದ್ದಾರೆ. ಕೀರ್ತಿಗಳಿಸಿದ್ದಾರೆ. ಕನ್ನಡ ನಾಡಿನ ಬಹುಭಾಗದಲ್ಲಿ ಅನೇಕರು ಮಠಾಧಿಪತ್ಯವನ್ನು ವಹಿಸಿದ್ದಾರೆ; ವಿರಾಜಮಾನರಾಗಿದ್ದಾರೆ. ಸಮಾಜ ಸಾಹಿತ್ಯಾದಿಗಳ ಸೇವೆ ಸಲ್ಲಿಸುತ್ತಿದ್ದಾರೆ.
ಈ ಸಂಸ್ಥೆಗೆ ಸಂಬಂಧಪಟ್ಟ ಶಾಖಾಮಂದಿರಗಳನ್ನು ಕಪ್ಪನಹಳ್ಳಿ ಕೋಡಿಕೊಪ್ಪ ಬಾದಾಮಿ ಮುಂತಾದ ಗ್ರಾಮಗಳಲ್ಲಿ ಸ್ಥಾಪಿಸಿದ್ದಾರೆ. ಸಂಸ್ಥೆಯಿಂದ ತಯಾರಾಗಿ ಹೋದ ಹಲವರು ಅಲ್ಲಲ್ಲಿ ಪಾಠಶಾಲೆ ಭೋಜನಶಾಲೆ (ಬೋರ್ಡಿಂಗ್ ಹೋಂ)ಗಳನ್ನು ಸ್ಥಾಪಿಸಿದ್ದಾರೆ. ಇದರಿಂದಾಗಿ ಸಮಾಜಕ್ಕೂ ಸಾಹಿತ್ಯ ಸಂಸ್ಕೃತಿಗೂ ಈ ಸಂಸ್ಥೆಯಿಂದ ಅಪಾರವಾದ ಸೇವೆ ಸಲ್ಲಿದೆ. ಅನೇಕ ಉದ್ದಾಮ ಸಾಹಿತಿಗಳು ಇಲ್ಲಿಗೆ ಬಂದು ಗ್ರಂಥಭಂಡಾರದ ಪ್ರಯೋಜನ ಪಡೆದಿದ್ದಾರೆ. ಗ್ರಂಥ ಪ್ರಕಾಶಕರು ಈ ಸಂಸ್ಥೆಯ ಗ್ರಂಥಾಲಯದಿಂದ ಪ್ರಾಚೀನ ಗ್ರಂಥ ಪ್ರತಿಗಳನ್ನು ಪಡೆದು ಉಪಕೃತರಾಗಿದ್ದಾರೆ.
ಈ ಎಲ್ಲ ದೃಷ್ಟಿಗಳಿಂದ ಈ ಸಂಸ್ಥೆಯು ಸಮಾಜಕ್ಕೆ ಆರ್ಯ ಸಮಾಜದ ‘ಕಾಂಗಡಿ ಗುರುಕುಲ ವಿದ್ದಂತೆಯು, ಶಾಂತಿಸಾಧಕರಿಗೆ ರವೀಂದ್ರನಾಥ ಠಾಕೂರವರ ‘ಶಾಂತಿನಿಕೇತನ’ ವಿದ್ದಂತೆಯು, ಅನುಭವ ವಿಚಾರಕ್ಕೆ ೧೨ನೆಯ ಶತಮಾನದ ‘ಅನುಭವ ಮಂಟಪ’ ವಿದ್ದಂತೆಯು ಇದೆಯೆಂದು ಹೇಳಿದಲ್ಲಿ ಯಾವ ತಪ್ಪಾಗಲಿಕ್ಕಿಲ್ಲ. ಆ ಅನುಭವ ಮಂಟಪವನ್ನು ಸ್ಥಾಪಿಸಿ ಬಸವಣ್ಣನು ದ್ವಿತೀಯ ಶಂಭುವೆನಿಸಿದಂತೆ ಈ ಶಿವಯೋಗಮಂದಿರವನ್ನು ಸ್ಥಾಪಿಸಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ದ್ವಿತೀಯ ಬಸವಣ್ಣನೆನಿಸಿದರು; ಕಾರಣಿಕ ಪುರುಷರಾದರು.
೧೯೨೫ ನೆಯ ಸಾಲಿಗೆ ಶಿವಯೋಗ ಮಂದಿರವು ಹದಿನಾರನೆಯ ವರುಷದಲ್ಲಿ ಹೆಜ್ಜೆಯನ್ನಿಕ್ಕಿತ್ತು. ಏರುಂಜವ್ವನದ ಆರಂಭ ವಯಸ್ಸು, ಎಂಥವರನ್ನು ಬೆರಗುಗೊಳಿಸುವ ವರ್ಚಸ್ಸು. ಆಗ ಶಿವಯೋಗ ಮಂದಿರದಲ್ಲಿ ೩೦-೪೦ ಜನ ಚಿಕ್ಕ ಚಿಕ್ಕ ವಯಸ್ಸಿನ ವಟುಗಳು. ೭೦-೮೦ ಜನ ೧೨ ವರುಷಕ್ಕೆ ಮೀರಿದ ೨೫ ವರ್ಷಕ್ಕೆ ಮಿಂಚದ ಸಾಧಕ ಸಮುದಾಯವು. ಗುರುವಿರಕ್ತರೆಂಬ ಭೇದಭಾವವಿಲ್ಲದೆ ಸಮರಸವಾಗಿದ್ದರು. ಮೇಲು ಕೀಳೆಂಬ ವೈಷಮ್ಯವಿಲ್ಲದೆ ವಾತ್ಸಲ್ಯದಿಂದಿದ್ದರು. ಚಿಕ್ಕ ವಟುಗಳು ಧರಿಸುವುದು ಬಿಳಿಯ ಕಪನಿಗಳು, ಸಾಧಕರು ಧರಿಸುವುದು ಕಾವಿಯ ಕಪನಿಗಳು, ನಿಲುವಂಗಿಗೆ ಕಪನಿಯೆಂದು ಅಲ್ಲಿ ಹೇಳುವ ವಾಡಿಕೆ. ಎಲ್ಲರು ಕೌಪೀನಧಾರಿಗಳು. ವಟುಗಳಿಗೆ ಕಿವಿಟೊಪ್ಪಿಗೆಗಳು. ಸಾಧಕರಿಗೆ ಮಸ್ತಕಪಾವುಡಗಳು. ಚೌಕ ವಸ್ತ್ರಗಳಿಗೆ ಮಸ್ತಕಪಾವುಡಗಳೆಂದು ಹೇಳಿಕೆ. ಇಷ್ಟು ಅಲ್ಲಿನವರ ಉಡುಪುಗಳು. ಕನ್ನಡ ಸಂಸ್ಕೃತ ಇಂಗ್ಲೀಷ್ ಭಾಷೆಗಳಲ್ಲಿ ಅಧ್ಯಯನ ಸಾಗಿತ್ತು. ಇಬ್ಬರು ಸಂಸ್ಕೃತ ಶಿಕ್ಷಣ ಕೊಡುವ ಶಾಸ್ತ್ರಿಗಳು. ಇಬ್ಬರು ಇಂಗ್ಲೀಷ್ ಓದಿಸುವ ಶಿಕ್ಷಕರು. ಒಬ್ಬರು ಕನ್ನಡಾಧ್ಯಾಪಕರು. ಹೀಗೆ ಒಟ್ಟು ಐದು ಮಂದಿ ಶಿಕ್ಷಕರಿದ್ದರು. ಅಭ್ಯಾಸ ಅತ್ಯಂತ ಭರದಿಂದ ಸಾಗಿತ್ತು. ದಿನಾಚರಣೆ ಕ್ರಮವಿಡಿದು ನಡೆದಿತ್ತು.
ಪ್ರತಿದಿನ ಬೆಳಗಿನ ನಾಲ್ಕುವರೆ ಗಂಟೆಗೆ ಜಾಗಟೆಯ ಝಣಝಣಲ್ ಶಬ್ದವಾಗುತ್ತಿತ್ತು. ಸುಪ್ರಭಾತ ಸಮಯ ಸುಪ್ರಸನ್ನ ವಾತಾವರಣ. ಆಗ ಎಲ್ಲರು ಶಿವನಾಮಸ್ಮರಣೆಯಿಂದ ಏಳುವುದು. ಎದ್ದೊಡನೆ ಒಂದೆಡೆಗೆ ಸೇರಿ ಹಾರ್ಮೊನಿಯಂ ಬಾಜಿಸುತ್ತ ಸುಶ್ರಾವ್ಯವಾಗಿ ಪ್ರಾರ್ಥನೆಯನೆಸಗುವುದು. ಬೆಳಗಾಗುವವರೆವಿಗು ಅವರವರ ಪಾಠಪ್ರವಚನಗಳನ್ನು ಪ್ರಶಾಂತ ಚಿತ್ತದಿಂದ ಓದುವುದು. ಅನಂತರ ಪ್ರಾತಃಶೌಚ ತೀರಿಸುವುದು. ಏಳು ಗಂಟೆಗೆ ಸರಿಯಾಗಿ ಮರಳಿ ಜಾಗಟೆ ಶಬ್ದವಾಗುತ್ತಿತ್ತು. ಎಲ್ಲರು ಸೇರಿ ಎಂಟು ಗಂಟೆಯವರೆವಿಗು ಆಸನಗಳನ್ನು ಹಾಕುವುದು. ಆಸನ ಹಾಕುವಲ್ಲಿ ಒಂದು ವಿಶಿಷ್ಟ ಪದ್ಧತಿಯಿತ್ತು; ಸಕ್ರಮವಿತ್ತು. ಮಾತಿಗೆ ಅವಕಾಶವಿಲ್ಲ. ಮನದೃಷ್ಟಿಗಳ ಹರಿದಾಟವಿಲ್ಲ. ಸಂದರ್ಭೋಚಿತವಾಗಿ ಊರ್ಧ್ವ, ಪೌರ್ಣಿಮ, ನಾಸಿಕಾಗ್ರ, ಅಮಾವಾಸ್ಯ ದೃಷ್ಟಿಗಳನ್ನಿಡಬೇಕು. ಧ್ಯಾನ ಅವ್ಯಾಹತವಾಗಿ ನಡೆದಿರಬೇಕು. ಅಂಗವೆಲ್ಲ ಆಸನಗಳಲ್ಲಿ ಅನುಷಂಗವಾಗಿರಬೇಕು. ಅಂತರಂಗ ಆತ್ಮಸಂಗವಾಗಿರಬೇಕು.
ಎಂಟು ಹತ್ತು ನಿಮಿಷಕ್ಕೆ ಪಾಠ ಪ್ರವಚನಗಳು ಪ್ರಾರಂಭವಾಗಿ ಹತ್ತು ಹತ್ತುವವರೆಗೆ ಪೂರೈಸುವುದು. ಮುಂದೆ ಹನ್ನೆರಡು ಗಂಟೆಯವರೆವಿಗು ತೊರೆಯ ತಿಳಿ ನೀರಿನಲ್ಲಿ ಎಲ್ಲರು ಮೀಯುವುದು. ಮಡಿಯುಟ್ಟು ಮನವಿಟ್ಟು ಶಿವಪೂಜೆ ಪಾದಪೂಜೆಗಳ ಮಾಡುವುದು. ಪಾದೋದಕ ಪ್ರಸಾದಗಳ ಕೊಂಬುವುದು. ಮಧ್ಯಾಹ್ನ ಒಂದು ಗಂಟೆ ವಿಶ್ರಾಂತಿ, ಒಂದು ಗಂಟೆ ಶಿವಾನುಭವ. ಎರಡುಗಂಟೆಯಿಂದ ನಾಲ್ಕುವರೆವರೆವಿಗು ಪಾಠಗಳು. ಐದರವರೆವಿಗು ಸಾಯಂಶೌಚ. ಆರರವರೆವಿಗು ಪುರಾಣಶ್ರವಣ; ಭಜನೆ, ರಾತ್ರಿ ಎಂಟುವರೆವರೆವಿಗು ಮರಳಿ ಸ್ನಾನ ಶಿವಪೂಜಾದಿಗಳು. ಆಮೇಲೆ ಓದಿಕೊಂಡು ಹತ್ತುಗಂಟೆಗೆ ದೇವ ಪ್ರಾರ್ಥನೆ ಮಾಡಿ ಮಲಗುವುದು ಇದು ಅಲ್ಲಿನ ಕಾರ್ಯಕ್ರಮ.
ಪ್ರಾರ್ಥನೆ ಪುರಾಣ ಶಿವಾನುಭವ ಮುಂತಾದ ಸನ್ನಿವೇಶಗಳಲ್ಲಿ ಒಂದೆಡೆಯಲ್ಲಿ ಸೇರಿ ಸಾಲುಸಾಲಾಗಿ ಕುಳಿತುಕೊಳ್ಳುವ ಆ ದೃಶ್ಯವನ್ನು ನೋಡಿದರೆ ಸಾಕ್ಷಾತ್ ಕೈಲಾಸವನ್ನು ಕಂಡಂತಾಗುತ್ತಿತ್ತು. ಒಂದೇ ಬಣ್ಣದ ಒಂದೇ ಬಗೆಯ ಉಡುಗೆಯ ಆ ನೋಟ ಚಿತ್ತಾಕರ್ಷಕವಾಗಿರುತ್ತಿತ್ತು. ಎಲ್ಲರದು ಒಂದೇ ಸತ್ಕರ್ಮ ಒಂದೇ ಸದ್ಧರ್ಮ; ಯಾವಾಗಲು ಎಲ್ಲರಿಗು ಒಂದೇ ಧ್ಯಯ; ಒಂದೇ ಶೇಯ ಎಲ್ಲರು ಮನೆ ಮಾರು ಊರು ಕೇರಿ ಬಂಧುಬಳಗಗಳನ್ನು ಬಿಟ್ಟು ಸನ್ಯಾಸಕ್ಕೆ ಮೀಸಲಾದವರು. ಪೂರ್ವಾಶ್ರಮದ ಹಂಗನ್ನು ಹಳಚಿದವರು. ಜನ್ಮದಾತರಾದ ಜನನಿ ಜನಕರನ್ನು ನೋಡುವುದು ಒಂದೆಡೆಗಿರಲಿ ಹೆಸರುಗಳನ್ನು ಯಾರೂ ಹೇಳುವಂತಿಲ್ಲ. ಅರಿಯದವರು ಯಾರಾದರು ಕೇಳಿದರೆ ತಾಯಿ ಚಿಚ್ಛಕ್ತಿಯೆಂತಲು ತಂದೆ ಕುಮಾರ ಸ್ವಾಮಿಗಳೆಂತಲು ವಟುಗಳು ಹೇಳುವ ರೂಢಿಯಾಗಿತ್ತು. ಹಣ ತರಿಸುವಂತಿಲ್ಲ; ಬಳಸುವಂತಿಲ್ಲ, ಪೂರ್ವಾಶ್ರಮ ನಿರಸನದೊಡನೆ ಪೂರ್ವಾಶ್ರಮ ನಿರಸನವು ಜಾರಿಯಲ್ಲಿ ಬರಬೇಕೆಂಬ ಬಯಕೆ. ಅದರಂತೆ ಅಲ್ಲಿಯ ನಡೆವಳಿಕೆ.
ಉಪ್ಪು ಹುಳಿ ಖಾರ-ಎಣ್ಣೆಗಳಿಲ್ಲದ ಸಪ್ಪೆ ಆಹಾರ. ಅವರೆ ಹುರುಳಿ, ಕುಂಬಳಕಾಯಿ, ಮುಳ್ಳುಗಾಯಿ, ಜೋಳ, ರಾಗಿ ಮುಂತಾದ ತಾಮಸಾಹಾರಗಳಿಗೆ ಅಲ್ಲಿ ಎಡೆಯಿಲ್ಲ. ಅಕ್ಕಿ, ತೊಗರಿ, ಹೆಸರು, ಗೋಧಿ, ಹಾಲು, ತುಪ್ಪ ಮುಂತಾದ ಸಾತ್ವಿಕಾಹಾರದ ಕಟ್ಟಿಗೆ ಎಲ್ಲರು ಒಳಪಟ್ಟಿರಬೇಕು. ಕೆಲವರು ಪೂರ್ವಾಶ್ರಮದ ಹೆಸರುಗಳು ಚೆನ್ನಾಗಿ ಇಲ್ಲದಿದ್ದರೆ ಅವನ್ನು ಬಿಟ್ಟು ಬೇರೆ ಹೆಸರುಗಳನ್ನು ಇಡುತ್ತಾರೆ. ಹೆಸರಿನ ಮುಂದೆ ಆರ್ಯ, ಆಚಾರ್ಯ, ದೇವ, ದೇಶಿಕ ಎಂಬ ಶ್ರೇಷ್ಠ ಸೂಚಕ ಶಬ್ದಗಳನ್ನು ಜೋಡಿಸುತ್ತಾರೆ. ಆಸನ, ಅಭ್ಯಾಸ, ಅನುಷ್ಠಾನ, ಅನುಭವ ಇವು ಅಲ್ಲಿ ಕಲಿಯತಕ್ಕ ಮುಖ್ಯ ವಿಷಯಗಳು ಇವನ್ನು ಎಲ್ಲರು ಅಭ್ಯಾಸಿಸಲು ಮನಃಪೂರ್ತಿಯಾಗಿ ಪ್ರಯತ್ನಿಸಬೇಕು. ಫಲಾಫಲ ಅವರ ಕರ್ತವ್ಯ ಕೋಟಿಗೆ ಸೇರಿದ್ದು. ಈ ರೀತಿ ಅಲ್ಲಿನ ಅಭ್ಯಾಸಗಳನ್ನು ಆಗುಮಾಡಿಕೊಂಡವರು ಮಠಾಧಿಪತ್ಯವನ್ನು ವಹಿಸಿ ಧರ್ಮ, ವಿದ್ಯೆ ಆಚಾರ, ವಿಚಾರ, ಪ್ರಚಾರ ಮಾಡುವುದು ಅವರ ಕರ್ತವ್ಯ ಸಂಸ್ಥೆಯ ನೇಮ ನೀತಿಗಳಂತೆ ಇರುವುದೇ ಅವರಿಗೆ ವಾಸ್ತವ್ಯ.
ಇನ್ನೊಂದೆಡೆಯಲ್ಲಿ ಶ್ರೀ ವಿಜಯಮಹಾಂತೇಶ್ವರ ಪುಸ್ತಕ ಭಂಡಾರ. ಅಲ್ಲಿ ಪುರಾತನ ಪುಸ್ತಕಗಳ ಸಂಗ್ರಹ ಸಂಶೋಧನೆ ಅವಿಶ್ರಾಂತವಾಗಿ ಸಾಗುತ್ತಿತ್ತು. ಅದಕ್ಕಾಗಿ ತಜ್ಞರಾದ ಒಬ್ಬಿಬ್ಬರು ಪಂಡಿತರಿದ್ದರು. ಸಂಶೋಧನೆಯಲ್ಲಿ ಸ್ವಾಮಿಗಳು ಸ್ವತಃ ಭಾಗವಹಿಸುತ್ತಿದ್ದರು. ಲೋಪದೋಷಗಳನ್ನು ಸರಿಪಡಿಸುತ್ತಿದ್ದರು. ಸ್ವಾಮಿಗಳವರಿಂದ ಪರಿಷ್ಕೃತವಾದ ಗ್ರಂಥಗಳೆಲ್ಲ ಪ್ರಕಟವಾಗದಿರುವುದೊಂದು ದೊಡ್ಡ ಕೊರತೆ ! ಈ ಕೊರತೆಯನ್ನು ತುಂಬಿ ತರುವ ಕೆಲಸ ಆಗಬೇಕಾಗಿದೆ.
ವೈದ್ಯ ಸಂಶೋಧನವು ಇನ್ನೊಂದೆಡೆಯಲ್ಲಿ ನಡೆದಿತ್ತು. ಕೆಲವು ಮಂದಿ ಸಾಧಕರಿಗೆ ಆಯುರ್ವೇದದ ಜ್ಞಾನವನ್ನು ಸ್ವಾಮಿಗಳವರು ಮಾಡಿಕೊಟ್ಟರು. ಸ್ವಾಮಿಗಳವರು ಸಾಯಂಕಾಲ ಗಾಳಿಗೆ ದಯಮಾಡಿಸಿದರೆ ಸುಮ್ಮನೆ ಅದೆಂದಿಗು ಹೋಗುತ್ತಿರಲಿಲ್ಲ. ಬೆಟ್ಟದ ದಾರಿಗಳಲ್ಲಿ ದಯಮಾಡಿಸುತ್ತಿರುವಾಗ ಅಕ್ಕಪಕ್ಕದಲ್ಲಿರುವ ಗಿಡಮರಗಳನ್ನು ಗೆಡ್ಡೆಗೆಣಸುಗಳನ್ನು, ಬಳ್ಳಿ ಬೇರುಗಳನ್ನು ಶೋಧಿಸುತ್ತ ಹೋಗುತ್ತಿದ್ದರು. ಯಾವುದಾದರೊಂದು ವಿಶೇಷ ವನಸ್ಪತಿಯನ್ನು ತಾರದೆ ಮಠಕ್ಕೆ ಮರಳುತ್ತಿರಲಿಲ್ಲ. ಹೀಗಾಗಿ ವನೌಷಧಿಗಳ ಸಂಶೋಧನವು ದಿನದಿನಕ್ಕೆ ಹೆಚ್ಚುತ್ತಿತ್ತು. ವೈದ್ಯ ವಿದ್ವಾಂಸರಿಗು ಸಹ ಅಸಾಧ್ಯವಾದ ಕೆಲವು ರೋಗಗಳನ್ನು ಸ್ವಾಮಿಗಳವರು ತಮ್ಮ ಔಷಧಿಗಳಿಂದ ವಾಸಿಮಾಡುತ್ತಿದ್ದರು. ಪಾಶ್ಚಾತ್ಯ ಡಾಕ್ಟರುಗಳಿಂದಲು ಸಾಧ್ಯವಾಗದ ಬಿಳಪು (ತೊನ್ನು) ಕಳೆವ ‘ಧೃತಿ’ಯೊಂದನ್ನು ಕಂಡು ಹಿಡಿದು ಅನೇಕ ರೋಗಿಗಳಿಗೆ ಪ್ರಯೋಗಿಸಿ ಫಲಿತಾಂಶ ಪಡೆದರು. ಅನೇಕ ವಿದ್ಯಾರ್ಥಿಗಳಿಗೆ ಸ್ವತಃ ವೇತನವನ್ನು ಕೊಟ್ಟು ಸಾತಾರೆಯ ಆರ್ಯಾಂಗ್ಲ ವಿದ್ಯಾಲಯದಲ್ಲಿ ವೈದ್ಯವಿದ್ಯಾಭ್ಯಾಸವನ್ನು ಮಾಡಿಸಿದರು. ಹೀಗೆ ವೈದ್ಯಭಾಗದ ಸೇವೆಯು ಸಂಸ್ಥೆಯಿಂದ ಸಾಕಷ್ಟು ಸಲ್ಲಿದೆ.
ಮತ್ತೊಂದೆಡೆಯಲ್ಲಿ ಭಸ್ಮ ಲಿಂಗಗಳ ಕಾರ್ಮಿಕಾಗಾರ. ಇದಕ್ಕಾಗಿಯೆ ಒಂದು ಮಾಹೇಶ್ವರ ಕುಟುಂಬವರ್ಗವನ್ನು ಅಲ್ಲಿಯೆ ತಂದಿರಿಸಿದ್ದರು. ಈ ವಿಷಯದಲ್ಲಿ ಸ್ವಾಮಿಗಳವರಿಗೆ ತುಂಬಾ ಕುತೂಹಲವಿತ್ತು. ಶುದ್ಧ ಭಸ್ಮಗಳ ಅಭಾವ ಹೆಚ್ಚಿಹೋಗಿತ್ತು. ಸಮಾಜದಲ್ಲಿ ಎಲ್ಲಿಯೂ ಮಾಡುತ್ತಿದ್ದಿಲ್ಲ. ಹಸುಗಳ ಸಗಣಿಯನ್ನು ಮಾತ್ರ ಉಪಯೋಗಿಸುತ್ತಿರಲಿಲ್ಲ. ಮಂತ್ರಶುದ್ಧಿ ಇದ್ದದ್ದು ಇಲ್ಲ. ಹೀಗಾಗಿ ಸ್ವಾಮಿಗಳು ಈ ವಿಷಯದಲ್ಲಿ ಹೆಚ್ಚು ಗಮನವಿತ್ತರು. ಸ್ವತಃ ಹೋಗಿ ಕ್ರಮವನ್ನು ಹೇಳಿ ಮಾಡಿಸುತ್ತಿದ್ದರು. ಅನೇಕ ದಿನಗಳ ಪರಿಶ್ರಮದ ಫಲವಾಗಿ ಶುದ್ಧವು ಶುಭ್ರವು ಆದ ಭಸ್ಮದಗಟ್ಟಿಗಳು ತಯಾರಾದವು. ಸ್ವಾಮಿಗಳವರು ಮೀರಿದ ಸಂತೋಷಪಟ್ಟರು.
ಎರಡನೆಯದಾಗಿ ಲಿಂಗಗಳ ವಿಷಯ. ಎಲ್ಲಿಯೂ ಪಂಚಸೂತ್ರಕ್ಕೆ ಸರಿಯಾಗಿ ಮಾಡುತ್ತಿರಲಿಲ್ಲ. ಮಟ್ಟಗಲ್ಲಿನ ಲಿಂಗಗಳ ಹೊರತು ಶುದ್ಧಶಿಲೆಯ ಲಿಂಗಗಳೇ ಇರಲಿಲ್ಲ. ಇತ್ತ ಪೀಠದವರು ಯಾರು ಗಮನಿಸಿರಲಿಲ್ಲ. ಇದು ಸಮಾಜಕ್ಕೆ ತೀರ ಅಗತ್ಯದ ಕೆಲಸವಾಗಿತ್ತು. ಇದನ್ನು ಕಂಡು ಸ್ವಾಮಿಗಳವರು ಸೂಕ್ತವಾದ ಶುದ್ಧವಾದ ಕಲ್ಲು ತರಿಸಿ ಪಂಚಸೂತ್ರಕ್ಕೆ ಸರಿಯಾಗಿ ಶಾಸ್ರೋಕ್ತವಾಗಿ ನಿರ್ಮಾಣಮಾಡಿಸಿದರು. ಲಿಂಗ ಕಲೆಯನ್ನು ನೆಲೆನಿಲ್ಲಿಸಿದರು. ಈಗಲು ಅನೇಕ ಕಡೆ ತಿಳಿಯದೆ ಸಿಕ್ಕ ಪೀಠಗಳನ್ನು ಧರಿಸುತ್ತಿದ್ದಾರೆ. ಇದು ಹೋದಷ್ಟು ಕ್ಷೇಮ. ಈ ರೀತಿಯಾಗಿ ಸ್ವಾಮಿಗಳವರು ಸಮಾಜಕ್ಕೆ ಅತ್ಯಗತ್ಯವಾದ ಶುದ್ಧ ಭಸ್ಮ, ಲಿಂಗಗಳ ನಿರ್ಮಾಣ ಮಾಡಿ ಗುರುಲಿಂಗ ಜಂಗಮ ಭಸ್ಮಗಳ ಸುಧಾರಣೆಯ ಮೂಲಕರ್ತರಾದರು; ಮಹಾಪುಣ್ಯಶಾಲಿಗಳಾದರು.
ಬೇರೊಂದು ಕಡೆ ಕೃಷಿ ಕರ್ಮ. ಇದಕ್ಕಾಗಿ ಎಂಟು ಹತ್ತು ಎತ್ತುಗಳನ್ನು ಅಷ್ಟೆ ಮನುಷ್ಯರನ್ನು ಇರಿಸಿದ್ದರು. ಹಳೆ ಮಾಕೂಟದ ಬಳಿ ಒಂದು ಬಾಳೆಯ ಬನವನ್ನು ಹಾಕಿಸಿದ್ದರು. ಲಿಂಬೆ, ಮಾವು, ಈರಳೆ ಮೊದಲಾದ ಹಣ್ಣಿನ ಗಿಡಗಳನ್ನು ಬೆಳೆಯಿಸಿದ್ದರು. ಇದಕ್ಕೆ ತಕ್ಕ ವ್ಯವಸ್ಥೆಯನ್ನಿರಿಸಿದ್ದರು. ದಿನ್ನೆಯ ಭೂಮಿಯಲ್ಲಿ ಸಾಕಷ್ಟು ಬೆಳೆಯನ್ನು ತೆಗೆಯಿಸುತ್ತಿದ್ದರು. ಭೂಮಿಗೆ ನೀರುಣಿಸಿ ಹೆಚ್ಚು ಬೆಳೆಯಲು ನೀರಾವರಿ ಯೋಜನೆಗಳನ್ನು ಅನೇಕ ಸಲ ಮಾಡಿದರು. ಹೀಗೆ ಶಿವಯೋಗ ಮಂದಿರದಲ್ಲಿ ಅನೇಕ ಕಾರ್ಯಕಲಾಪಗಳು ನಡೆದವು.
ಇವನ್ನೆಲ್ಲ ನೋಡಿಕೊಳ್ಳಲು ಒಬ್ಬ ಮೇಲಾಧಿಕಾರಿಗಳು, ೩-೪ ಮಂದಿ ಬರವಣಿಗೆದಾರರು, ಅದಕ್ಕೆ ತಕ್ಕ ಲೆಕ್ಕ ಪತ್ರಗಳು. ಒಂದು ಅಂಚೆ ಮನೆಯ (ಪೋಷ್ಟಾಫೀಸ)ನ್ನು ಸಂಸ್ಥೆಗಾಗಿಯೆ ಗವರಮೆಂಟಿನಿಂದ ಪಡೆದಿದ್ದಾರೆ. ಶ್ರೀ ರಾಮಕೃಷ್ಣ ಪರಮಹಂಸರ ತತ್ವಗಳನ್ನು ಪ್ರಚಾರ ಮಾಡಲು ವಿವೇಕಾನಂದರು ‘ರಾಮಕೃಷ್ಣಾಶ್ರಮ’ವನ್ನು ಸ್ಥಾಪಿಸಿದಂತೆ ಕುಮಾರ ಸ್ವಾಮಿಗಳವರು ಮೇಲೆ ಕಂಡ ರೂಪುರೇಖೆಯ ಶಿವಯೋಗ ಮಂದಿರವನ್ನು ಸ್ಥಾಪಿಸಿ ಅಲ್ಲಿ ಅನೇಕ ದಿನಗಳಿದ್ದು ಯೋಗ ವಿದ್ಯೆ, ಆಚಾರ-ವಿಚಾರ, ಪುರಾಣ-ಪ್ರವಚನಗಳನ್ನು ಪ್ರಾರಂಭಿಸಿ ಅಭ್ಯಾಸಿಗಳಿಗೆ ತಕ್ಕ ಏರ್ಪಾಟುಗಳನ್ನು ಮಾಡಿ ಮುಂದಿನ ಆ ಸಂಸ್ಥೆಯ ಅಭಿವೃದ್ಧಿಗಾಗಿಯು ಸಾಮಾಜಿಕರಿಗೆ ಧರ್ಮ ನೀತಿ ಮಿತವ್ಯಯ ಮೈತ್ರಿಭಾವ ಮುಂತಾದವುಗಳನ್ನು ಬೋಧಿಸುವದಕ್ಕಾಗಿಯು ನಾಡಿನಲ್ಲಿ ಸಂಚರಿಸುತ್ತಿದ್ದರು. ಅವರ ಜೀವನ ಬಹುಭಾಗ ಪ್ರಯಾಣಮಯವಾಗಿತ್ತು. ಒಂದೆಡೆಗಿದ್ದು ವಿಶ್ರಾಂತಿ ಪಡೆದ ದಿನಗಳು ತೀರ ಕಡಿಮೆ. ಇಲ್ಲವೆಂದರು ಅಲ್ಲಗಳೆಯುವಂತಿಲ್ಲ. ಅವರಿರಬೇಕೆಂದರು ಅವರ ಮನಸ್ಸಿರದು. ಅವರು ಹಮ್ಮಿಕೊಂಡ ಕಾರ್ಯಬಾಹುಲ್ಯವು ಅವರನ್ನು ಇರಲೀಸದು.
“